ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡದಲ್ಲಿ ಕಾಟ್ಲಾ, ರಾಹೂ ಮೀನು ಸಾಕಾಣಿಕೆ

Last Updated 9 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾಗುತ್ತಿದೆ. ಬೆಳೆದ ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಆರ್ಥಿಕ ನಷ್ಟ ಸರಿದೂಗಿಸಲು ಕೆಲವು ಕೃಷಿಕರು ಉಪ ಕಸುಬುಗಳತ್ತ ಹೆಜ್ಜೆ ಹಾಕಿದ್ದಾರೆ.

ಅಂಥವರಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಅಂಕಲಿ ಸಮೀಪದ ಸಿದ್ದಾಪುರವಾಡಿಯ ಯುವಕ ಅಮಿತ್ ಸಿಂಹ ಶಿತೋಳೆ ಕೂಡ ಒಬ್ಬರು. ಅವರು ಬೆಳೆಗಳಿಗೆ ನೀರುಣಿಸಲು ತೆಗೆಸಿದ್ದ ಬೃಹತ್‌ ಕೃಷಿ ಹೊಂಡದಲ್ಲೇ ಉಪ ಕಸುಬಾಗಿ ಮೀನಿನ ಕೃಷಿ ಮಾಡುತ್ತಿದ್ದಾರೆ. ಮೂರು ವರ್ಷಗಳಿಂದ ಕೈಗೊಳ್ಳುತ್ತಿರುವ ಈ ಮತ್ಸ ಕೃಷಿಯಲ್ಲಿ ಉತ್ತಮ ಇಳುವರಿ ಸಿಗುತ್ತಿದೆ. ಅವರ ಹೊಂಡದಲ್ಲಿರುವ ಮೀನುಗಳ ಗಾತ್ರ ನೋಡುತ್ತಿದ್ದರೆ, ಕರಾವಳಿಯ ಮೀನಿನ ಕೃಷಿ ನೆನಪಿಗೆ ಬರುತ್ತದೆ.

ಸಿದ್ದಾಪುರವಾಡಿ, ಕೃಷ್ಣಾ ನದಿ ತಟದಲ್ಲಿದೆ. ಕೃಷಿ ಪದವೀಧರ ಅಮಿತ್ ಅವರಿಗೆ 18 ಎಕರೆ ಜಮೀನಿದೆ. ಕಬ್ಬು, ಬಾಳೆ ಪ್ರಮುಖ ಬೆಳೆ. ಜತೆಗೆ, ಸೀಸನ್‌ಗೆ ತಕ್ಕಂತೆ ವಿವಿಧ ತರಕಾರಿ ಬೆಳೆಯುತ್ತಾರೆ. ಜಮೀನಿನ ಬದುಗಳನ್ನೂ ವ್ಯರ್ಥವಾಗಿ ಬಿಡದೇ ವಿವಿಧ ಹಣ್ಣಿನ ಮತ್ತು ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಒಂಬತ್ತು ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.

ಇಷ್ಟೂ ಎಕರೆಗೆ ನೀರು ಪೂರೈಸುವುದಕ್ಕಾಗಿ ಮೂರು ವರ್ಷಗಳ ಹಿಂದೆ ಮಿನಿ ಕೆರೆ ಗಾತ್ರದ (125 ಅಡಿ ಅಗಲ X 125 ಅಡಿ ಉದ್ದ X 25 ಅಡಿ ಆಳ ವಿಸ್ತಿರ್ಣದ) ಕೃಷಿ ಹೊಂಡ ತೆಗೆಸಿದ್ದರು. ಹೊಂಡದ ತಳಕ್ಕೆ ಪ್ಲಾಸ್ಟಿಕ್ ಹೊದಿಸಿ, ನದಿ ನೀರು ಅಥವಾ ಕೊಳವೆಬಾವಿ ಇಲ್ಲವೇ, ತೆರೆದ ಬಾವಿಯಿಂದ ನೀರು ತುಂಬಿಸುತ್ತಿದ್ದರು. ಇದೇ ಹೊಂಡದ ನೀರನ್ನು ಎಲ್ಲ ಬೆಳೆಗಳಿಗೂ ಪೂರೈಸುತ್ತಿದ್ದಾರೆ. ಇದಕ್ಕಾಗಿ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಹೀಗಾಗಿ ಸುಮಾರು ಒಂದು ಕೋಟಿ ಲೀಟರ್‌ ನೀರು ಹಿಡಿಯುವ ಈ ಹೊಂಡದಲ್ಲಿ ವರ್ಷ ಪೂರ್ತಿ ನೀರು ಇರುತ್ತದೆ.

ಸಾಮಾನ್ಯವಾಗಿ ಬರ, ಮಳೆ, ನೆರೆಯಂತಹ ಪ್ರಕೃತಿ ವಿಕೋಪಗಳಿಂದ ಕಬ್ಬಿನ ಕೃಷಿಯಲ್ಲಿ ನಷ್ಟವಾಗುತ್ತಲೇ ಇತ್ತು. ಇದನ್ನು ಸರಿದೂಗಿಸಲು ಮೂರು ವರ್ಷಗಳ ಹಿಂದೆ ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಆರಂಭಿಸಿದರು ಅಮಿತ್.

ಆರಂಭದಲ್ಲಿ ಹೊಂಡಕ್ಕೆ ಹತ್ತು ಸಾವಿರ ಕಾಟ್ಲಾ ಮತ್ತು ರಾಹೂ ತಳಿಯ ಮೀನಿನ ಮರಿಗಳನ್ನು ಬಿಟ್ಟರು. ಹೆಚ್ಚು ಮರಿಗಳನ್ನು ಬಿಟ್ಟ ಕಾರಣದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಅವುಗಳ ಬೆಳವಣಿಗೆ ಆಗಲಿಲ್ಲ. ಸಾವಿರಾರು ಮೀನು ಮರಿಗಳು ಸಾವಿಗೀಡಾದವು. ಹಾಕಿದ ಬಂಡವಾಳವೆಲ್ಲ ನಷ್ಟವಾಯಿತು. ಮೊದಲ ಪ್ರಯತ್ನದಲ್ಲಿ ಅವರು ಕೈ ಸುಟ್ಟುಕೊಂಡರು.

ಸೋಲಿನಿಂದ ಪಾಠ ಕಲಿತ ಅವರು ಎರಡನೇ ಬಾರಿಗೆ ಹೊಸ ಪ್ರಯೋಗಕ್ಕೆ ಕೈ ಹಾಕಿದರು. ಅದೇನೆಂದರೆ, ಒಂದು ಚದರ ಮೀಟರ್‌ಗೆ ಒಂದರಂತೆ ಲೆಕ್ಕ ಹಾಕಿ, ಕಡಿಮೆ ಸಂಖ್ಯೆಯ ಮೀನಿನ ಮರಿಗಳನ್ನು ಹೊಂಡಕ್ಕೆ ಬಿಟ್ಟರು.

ಈ ಬಾರಿ ಹಕ್ಕಿಗಳು ಮೀನನ್ನು ತಿನ್ನದಂತೆ ಮಾಡಲು ಹೊಂಡದ ಮೇಲೆ ಬಲೆ ಹಾಕಿಸಿದರು. ಇದರಿಂದ ಹಕ್ಕಿಗಳ ಹಾವಳಿ ನಿಯಂತ್ರಣವಾಯಿತು. ಕೃಷಿ ಹೊಂಡದಲ್ಲಿ ಶೇಖರಣೆಯಾಗುವ ಪಾಚಿಯನ್ನೂ ಸ್ವಚ್ಛಗೊಳಿಸಲಿಲ್ಲ. ಇದರಿಂದ ಮೀನುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ದೊರೆಯುತ್ತದಂತೆ. ಇದರ ಜತೆಗೆ, ಗೋವಿನ ಜೋಳವನ್ನು ಕುದಿಸಿ, ಮೀನುಗಳಿಗೆ ಆಹಾರವಾಗಿ ನೀಡಿದರು. ದನಕರುಗಳ ಸೆಗಣಿಯನ್ನೂ ಹೊಂಡಕ್ಕೆ ಹಾಕಿದರು.

ಈ ಎಲ್ಲ ಪ್ರಯೋಗದಿಂದ ಮೂರನೇ ವರ್ಷದಲ್ಲಿ ಮೀನಿನ ಇಳುವರಿ ಹೆಚ್ಚಾಯಿತು. 200 ಮೀನುಗಳು ಬಲೆಗೆ ಬಿದ್ದವು. ಪ್ರತಿ ಮೀನು 3 ಕೆಜಿ ರಿಂದ 5 ಕೆ.ಜಿಯಷ್ಟು ತೂಗುತ್ತಿದ್ದವು. ಮೀನಿನ ಗುಣಮಟ್ಟ ಕಂಡು ಬೆರಗಾದ ಸ್ಥಳೀಯ ಮೀನುಗಾರರೇ, ಇವರ ಜಮೀನಿಗೆ ಬಂದು ಕೆ.ಜಿಗೆ ₹100 ರಂತೆ ಖರೀದಿಸಿದರು.

‘ಒಂದು ಮೀನು 4 ಕೆ.ಜಿ ತೂಕದಂತೆ ಲೆಕ್ಕ ಹಾಕಿದರೂ ಈ ವರ್ಷ 200 ಮೀನುಗಳಿಂದ ಸರಾಸರಿ ₹ 80 ಸಾವಿರ ಆದಾಯ ಬಂತು. ₹10 ಸಾವಿರ ಖರ್ಚು ಕಳೆದರೂ, ₹ 70 ಸಾವಿರ ಉಳಿಯಿತು’ ಎಂದು ಲೆಕ್ಕ ಕೊಡುತ್ತಾರೆ ಅಮಿತ್.

ಈ ಪ್ರಯೋಗದ ಗೆಲುವು ಅವರಲ್ಲಿ ಹೊಸ ಉತ್ಸಾಹ ತಂದಿದೆ. ಈಗ ಮೀನು ಮರಿ ಸಂಖ್ಯೆಯನ್ನು ಹೆಚ್ಚಿಸಲು ಯೋಚನೆ ಮಾಡುತ್ತಿದ್ದಾರೆ. ‌ಸದ್ಯ ಒಂದು ಕೃಷಿ ಹೊಂಡವಿದೆ. ಮುಂದೆ ಇನ್ನೊಂದು ಕೃಷಿ ಹೊಂಡ ಮಾಡಿಸಿ, ಅದರಲ್ಲಿ ಸುಮಾರು ಒಂದು ಸಾವಿರದಷ್ಟು ಮೀನಿನ ಮರಿಗಳನ್ನು ಬೆಳೆಸಿ, ಮತ್ಸ್ಯಕೃಷಿ ವಿಸ್ತರಿಸುವ ಗುರಿ ಹೊಂದಿದ್ದಾರೆ.

‘ಹೀಗೆ ಮಾಡುವುದರಿಂದ ಮೀನು ಮರಿಗಳ ಸಾವಿನ ಪ್ರಮಾಣ ಕಡಿಮೆಯಾಗಲಿದೆ. ಯೋಜನಾಬದ್ಧವಾಗಿ ಮತ್ಸ ಕೃಷಿ ಕೈಗೊಂಡರೆ ಕೃಷಿಕರಿಗೆ ಹೆಚ್ಚಿನ ಆದಾಯ ದೊರಕಲಿದೆ’ ಎನ್ನುತ್ತಾರೆ ಅಮಿತ್‍ಸಿಂಹ ಶಿತೋಳೆ.

ಕೃಷಿ ಹೊಂಡದಲ್ಲಿ ಮೀನು ಸಾಕುವ ಕುರಿತು ಮಾಹಿತಿಗಾಗಿ ಸಂಪರ್ಕಿಸಬೇಕಾದ
ಸಂಖ್ಯೆ: 9986908083.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT