ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪಾಕಶಾಲಾ ‘ವಾರ್ಡನ್‌’ಗಳ ಕಿಚನ್ ಗಾರ್ಡನ್!

Last Updated 28 ನವೆಂಬರ್ 2020, 7:34 IST
ಅಕ್ಷರ ಗಾತ್ರ
ADVERTISEMENT
""
""

ಆಹಾರ ಸಂಸ್ಕೃತಿಯ ಭಾಗವಾಗೇ ರೂಪುಗೊಳ್ಳುವ ಕಿಚನ್‌ ಗಾರ್ಡನಿಂಗ್‌ ಮಹಿಳೆಯರ ಸ್ವಾವಲಂಬನೆಯ ಸೂಚಕವೂ ಹೌದು. ಇರುವ ಒಂದಷ್ಟು ಜಾಗದಲ್ಲಿ, ಜಾಗವಿಲ್ಲದಿದ್ದರೆ ಪಾಟ್‌ಗಳಲ್ಲೇ ಅಡುಗೆಗೆ ಬೇಕಾಗಿರುವ ತರಕಾರಿ, ಸೊಪ್ಪು, ಔಷಧೀಯ ಸಸ್ಯಗಳನ್ನು ಬೆಳೆಯುವುದು ಬಹುತೇಕ ಗೃಹಿಣಿಯರ ಧ್ಯಾನವಾಗಿಬಿಟ್ಟಿದೆ. ಕೊರೊನಾ ಸೋಂಕಿನ ಕಾರಣ ಬಹುತೇಕರಲ್ಲಿ ಮೂಡಿದ ಆರೋಗ್ಯ, ಆಹಾರದ ಬಗೆಗಿನ ಕಾಳಜಿಗೆ ಕಿಚನ್‌ ಗಾರ್ಡನಿಂಗ್‌ ಒತ್ತಾಸೆಯಾಗಿ ನಿಂತಿದೆ.

***

ಇದೇ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಅನುಭವ್‌ ಸಿನ್ಹಾ ನಿರ್ದೇಶನದ ‘ಥಪ್ಪಡ್‌’ ಸಿನಿಮಾ ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಸದ್ದು ಮಾಡಿತು. ಸ್ವಾಭಿಮಾನದ ಸಂಕೇತದಂತಿರುವ ಚಿತ್ರ ಮಹಿಳೆಯರ ಮನಸಿನಾಳಕ್ಕೆ ಬಹುಬೇಗ ಇಳಿಯಿತು. ಚಿತ್ರದ ನಾಯಕಿ ಅಮೃತಾ (ತಾಪ್ಸಿ ಪನ್ನು) ಪ್ರತಿ ದಿನ ಮುಂಜಾನೆ ಅಡುಗೆ ಮನೆಯ ಕಿಟಕಿಯಲ್ಲಿ ಕೈ ಹಾಕಿದರೆ ಸಿಗುವ ಗಿಡವೊಂದರ ಎಲೆಗಳನ್ನು ಕತ್ತರಿಸಿ ಪಾತ್ರೆಗೆ ಹಾಕಿ ಟೀ ತಯಾರಿಸುತ್ತಾಳೆ. ಅದನ್ನು ಮನೆಯವರೆಲ್ಲರಿಗೂ ಕೊಡುವಳು. ಈ ದೃಶ್ಯ ಚಿತ್ರದ ಉದ್ದಕ್ಕೂ ಏಳೆಂಟು ಬಾರಿ ಕಾಣಿಸಿಕೊಳ್ಳುತ್ತದೆ. ಅಡುಗೆಗೆ ಅಗತ್ಯವಿರುವ ತರಕಾರಿ ಸೊಪ್ಪುಗಳನ್ನು ಮನೆಯ ಪಾಟ್‌ಗಳಲ್ಲೇ ಅಮೃತಾ ಬೆಳೆಸಿರುತ್ತಾಳೆ. ಸ್ವಾಭಿಮಾನದ ಪ್ರತೀಕದಂತೆ ಬಿಂಬಿತವಾಗಿರುವ ಅಮೃತಾ ಕಿಚನ್‌ ಗಾರ್ಡನಿಂಗ್‌ ಮೂಲಕ ಆಹಾರದ ವಿಷಯದಲ್ಲೂ ಸ್ವಾವಲಂಬನೆ ಸಾಧಿಸಿದ್ದ ಸೂಕ್ಷ್ಮ ಒಳನೋಟವನ್ನು ನಿರ್ದೇಶಕರು ಆ ಪಾತ್ರದ ಮೂಲಕ ಬಿಂಬಿಸಿದ್ದಾರೆ.

ಆಹಾರ ಸಂಸ್ಕೃತಿಯ ಭಾಗವಾಗೇ ರೂಪುಗೊಳ್ಳುವ ಕಿಚನ್‌ ಗಾರ್ಡನಿಂಗ್‌ ಮಹಿಳೆಯರ ಸ್ವಾವಲಂಬನೆಯ ಸೂಚಕವೂ ಹೌದು. ಇರುವ ಒಂದಷ್ಟು ಜಾಗದಲ್ಲಿ, ಜಾಗವಿಲ್ಲದಿದ್ದರೆ ಪಾಟ್‌ಗಳಲ್ಲೇ ಅಡುಗೆಗೆ ಬೇಕಾಗಿರುವ ತರಕಾರಿ, ಸೊಪ್ಪು, ಔಷಧೀಯ ಸಸ್ಯಗಳನ್ನು ಬೆಳೆಯುವುದು ಬಹುತೇಕ ಗೃಹಿಣಿಯರ ಧ್ಯಾನವಾಗಿಬಿಟ್ಟಿದೆ. ಕೊರೊನಾ ಸೋಂಕಿನ ಕಾರಣ ಬಹುತೇಕರಲ್ಲಿ ಮೂಡಿದ ಆರೋಗ್ಯ, ಆಹಾರದ ಬಗೆಗಿನ ಕಾಳಜಿಗೆ ಕಿಚನ್‌ ಗಾರ್ಡನಿಂಗ್‌ ಒತ್ತಾಸೆಯಾಗಿ ನಿಂತಿದೆ. ಬಹುತೇಕ ಗೃಹಿಣಿಯರು ಲಾಕ್‌ಡೌನ್‌ ಸಮಯವನ್ನು ಕಿಚನ್‌ ಗಾರ್ಡನಿಂಗ್‌ಗೆ ಮೀಸಲಿಟ್ಟಿರುವುದೂ ಆರೋಗ್ಯಕರ ಬೆಳವಣಿಗೆಯೇ ಸರಿ.

ತಾಜಾ ಆಹಾರ, ಪೌಷ್ಟಿಕಾಂಶಯುಕ್ತ ಆಹಾರವನ್ನೇ ಹೊಟ್ಟೆಗೆ ಇಳಿಸಬೇಕು ಎನ್ನುವುದು ಕೊರೊನ ಕಲಿಸಿದ ದೊಡ್ಡ ಪಾಠ. ಉಣ್ಣುವ ತಟ್ಟೆಯಲ್ಲಿ ಬಣ್ಣ ಬಣ್ಣದ ತರಕಾರಿ, ಹಸಿರು ಸೊಪ್ಪು ಇದ್ದರೆ ಆ ದಿನ ದೇಹಕ್ಕೆ ಬೇಕಾಗುವ ಪೋಷಕಾಂಶವನ್ನು ಧಾರಾಳವಾಗಿ ಪೂರೈಸಬಹುದು. ಕೊರೊನಾ ಕಾರಣ ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪು ಕೊಂಡುಕೊಳ್ಳಲು ಭಯ. ತಂದರೂ ಅವುಗಳನ್ನು ಶುಚಿಗೊಳಿಸಿ, ಕೆಡದಂತೆ ಸಂಗ್ರಹಿಸಿಡುವುದು ಗೃಹಿಣಿಯರಿಗೆ ಸವಾಲು. ನಗರ ಪ್ರದೇಶಗಳಲ್ಲಿ ವಾಸಿಸುವ ಬಹುತೇಕರು ಇರುವಷ್ಟು ಜಾಗದಲ್ಲೇ ಗಾರ್ಡನಿಂಗ್‌ ಮಾಡಿಕೊಂಡು, ತಾಜಾ ತರಕಾರಿ, ಸೊಪ್ಪು, ಹಣ್ಣು ಬೆಳೆಯಲು ಒಲವು ತೋರುತ್ತಿದ್ದಾರೆ. ಕುಟುಂಬದವರೆಲ್ಲರಿಗೂ ತಾಜಾ ಪೌಷ್ಟಿಕಾಂಶವನ್ನು ಉಣಬಡಿಸಿ ಬೀಗುತ್ತಿದ್ದಾರೆ.

ಈಗ ಔಷಧೀಯ ಸಸ್ಯಗಳಿಗೂ ಇನ್ನಿಲ್ಲದ ಬೇಡಿಕೆ. ಅಮೃತಬಳ್ಳಿ, ತುಳಸಿ, ನೆಲ ನೆಲ್ಲಿ, ಒಂದೆಲಗ, ಪುದಿನ, ದೊಡ್ಡ ಪತ್ರೆ ಹೀಗೆ ಹಲವು ಔಷಧೀಯ ಸಸ್ಯಗಳು ಬಹುತೇಕರ ಮನೆಯ ಪಾಟ್‌ಗಳಲ್ಲಿ ಹುಟ್ಟಿಕೊಂಡಿವೆ. ಶ್ರೀಮಂತ, ಮೇಲ್ಮಧ್ಯಮ ಹಾಗೂ ಮಧ್ಯಮ ವರ್ಗಗಳ ಕುಟುಂಬಗಳಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚುತ್ತಿದೆ. ಈ ಕಾಳಜಿಯ ಭಾಗವಾಗಿಯೂ ಕಿಚನ್‌ ಗಾರ್ಡನಿಂಗ್‌ ರೂಪುತಳೆಯುತ್ತಿದೆ. ಮನೆಗಳನ್ನು ಕಟ್ಟಿಕೊಸಿಕೊಳ್ಳುವಾಗಲೇ ಕಿಚನ್‌ ಗಾರ್ಡನಿಂಗ್‌ಗೆಂದು ಜಾಗ ಮೀಸಲಿರುಸುವ ಪ್ರವೃತ್ತಿ ಬೆಳೆಯುತ್ತಿದೆ. ಜಾಗ ಇಲ್ಲದವರು ತಾರಸಿಯಲ್ಲಿ, ಪಾಟ್‌ಗಳಲ್ಲಿ, ನೀರಿನ ಟ್ಯಾಂಕ್‌ ಕೆಳಭಾಗದ ಖಾಲಿ ಜಾಗಗಳಲ್ಲಿ ಗಿಡಗಳನ್ನು ಬೆಳೆಯುತ್ತಾರೆ.

‘ಮನುಷ್ಯನ ಸಮತೋಲನ ಆಹಾರಕ್ಕೊಂದು ಮಾರ್ಗ ಕೈತೋಟ. ಪ್ರತಿದಿನ ಒಬ್ಬ ವ್ಯಕ್ತಿಗೆ 300 ಗ್ರಾಂ ತರಕಾರಿ, 90 ಗ್ರಾಂ ಹಣ್ಣು ಅಗತ್ಯವಾಗಿ ಬೇಕು. ಅವು ತಾಜಾ ಆಗಿದ್ದರೆ ಉತ್ತಮ. ಕೈತೋಟದಿಂದ ಮಾತ್ರ ತಾಜಾ ತರಕಾರಿ ಸವಿಯಲು ಸಾಧ್ಯ. ಅತ್ಯಂತ ಕಡಿಮೆ ವೆಚ್ಚ, ಕಡಿಮೆ ಶ್ರಮದಿಂದ ಹೆಚ್ಚು ಪ್ರತಿಫಲ ಕೊಡುವ ಪುಟ್ಟ ಕ್ಷೇತ್ರವೆಂದರೆ ಕೈತೋಟ. ಅಲ್ಲಿ ವಿನಿಯೋಗಿಸುವ ಕಾಲ ಮತ್ತು ಶ್ರಮ ಉತ್ತಮ ಆರೋಗ್ಯವನ್ನೇ ನೀಡುತ್ತವೆ. ಹವ್ಯಾಸ ಮತ್ತು ಆರೋಗ್ಯದ ಕಾಳಜಿಯ ಭಾಗವಾಗೇ ಕೈತೋಟಗಳು ರೂಪುತಳಿಯುತ್ತಿವೆ’ ಎನ್ನುವರು ದಾವಣಗೆರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವಿನ್‌.

‘ಕೆಲ ಗಿಡಗಳಿಗೆ ಸೂರ್ಯನ ನೇರ ಬಿಸಿಲಿನ ಅವಶ್ಯಕತೆ ಇಲ್ಲ. ಸೂರ್ಯನ ಬೆಳಕು ಸಾಕಾಗುತ್ತದೆ. ಹಾಗೆಯೇ ಕೆಲ ಸಸ್ಯಗಳಿಗೆ ಸೂರ್ಯನ ನೇರ ಬಿಸಿಲೇ ಬೇಕು. ಇಲ್ಲದಿದ್ದರೆ ಗಿಡಗಳು ಸೋಂಪಾಗಿ, ಹಸಿರಾಗಿ ಬೆಳೆಯುವುದಿಲ್ಲ. ಇದು ಪ್ರಾದೇಶಿಕ ವಾತಾವರಣವನ್ನೂ ಅವಲಂಬಿಸಿರುತ್ತದೆ. ದಿನ ಬಳಕೆಯ ಸೊಪ್ಪು ಸಸಿಗಳಿಗೆ ಅಧಿಕ ಬಿಸಿಲು ಅಗತ್ಯ ಇರುವುದಿಲ್ಲ. ಸೂರ್ಯನ ಬೆಳಕು ಸಾಕು. ಆದರೆ ಕೆಲ ತರಕಾರಿ ಗಿಡಗಳಿಗೆ ನೇರ ಬಿಸಿಲು ಅಗತ್ಯ ಇರುತ್ತದೆ. ಕೈತೋಟ ಮಾಡಿ ಸೂಕ್ಷ್ಮವಾಗಿ ಅವಲೋಕಿಸಿದರೆ ಯಾವ ಗಿಡಗಳಿಗೆ ಎಷ್ಟು ಪ್ರಮಾಣದ ಬಿಸಿಲು, ಬೆಳಕು ಬೇಕಾಗುತ್ತದೆ ಎಂಬುದು ಅರಿವಿಗೆ ಬರುತ್ತದೆ’ ಎನ್ನುವರು ರೇಷ್ಮಾ ಪರ್ವಿನ್‌.

ಡಾ.ಎಸ್.ಶಿಶುಪಾಲ

‘ಕಿಚನ್‌ ಗಾರ್ಡನಿಂಗ್‌ ಸುಮ್ಮನೆ ಮಾಡಲು ಆದೀತೆ. ಒಂದಷ್ಟು ತಯಾರಿ, ಸಮಯ, ಆಸಕ್ತಿ ಬೇಕು. ಸೂಕ್ತ ಬೆಳಕು ಇರುವ ಜಾಗದಲ್ಲಿ ಕಿಚನ್‌ ಗಾರ್ಡನಿಂಗ್‌ ಹವ್ಯಾಸವಾಗಿ ರೂಢಿಸಿಕೊಂಡರೆ ಆರೋಗ್ಯಪೂರ್ಣ ಜೀವನ ಸಾಗಿಸಬಹುದು’ ಎನ್ನುವರು ದಾವಣಗೆರೆಯ ಪರಿಸರ ಪ್ರೇಮಿ ಶಿಶುಪಾಲ.

ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಶಿಶುಪಾಲ ಅವರು ಮನೆಯನ್ನೇ ಕೈತೋಟವಾಗಿ ರೂಪಾಂತರಿಸಿದ್ದಾರೆ. ಹೂ ಗಿಡಗಳು ಇವರ ಕೈತೋಟದಲ್ಲಿ ಪಾರುಪತ್ಯ ಪಡೆದಿವೆ. ಆರೋಗ್ಯಕ್ಕಾಗಿ ಕಿಚನ್‌ ಗಾರ್ಡನಿಂಗ್‌ಗೂ ಒತ್ತು ಕೊಟ್ಟಿದ್ದಾರೆ. ಮೆಣಸಿಕಾಯಿ, ಬದನೆಕಾಯಿ, ತೊಂಡೆಕಾಯಿ, ಟೊಮೆಟೊ, ಪುದಿನ, ಒಂದೆಲಗ, ಮೆಂತ್ಯ, ಕೊತ್ತಂಬರಿ ಸೊಪ್ಪು ಹೀಗೆ ತರಹೇವಾರಿ ಗಿಡಗಳು ಅವರ ಕೈತೋಟದಲ್ಲಿ ಸ್ಥಾನ ಪಡೆದಿವೆ. ಮೂರುವರ್ಷದ ಹಿಂದೆ ನೆಟ್ಟಿದ್ದ ನಿಂಬೆ ಗಿಡ ಫಲಕೊಡಲು ಶುರುಮಾಡಿದ್ದು ಇದುವರೆಗೂ 450ಕ್ಕೂ ಹೆಚ್ಚು ನಿಂಬೆ ಹಣ್ಣುಗಳನ್ನು ಕಿತ್ತಿದ್ದಾರೆ.

ಅಡುಗೆಮನೆಯಲ್ಲಿ ಸೃಷ್ಟಿಯಾಗುವ ಹಸಿ ತ್ಯಾಜ್ಯವನ್ನೇ ಗೊಬ್ಬರವಾಗಿಸಿ ಬಳಸುತ್ತಾರೆ. ಇವರ ಕೈತೋಟದಲ್ಲಿ 730ಕ್ಕೂ ಹೆಚ್ಚು ಗಿಡಗಳಿದ್ದು, ಮನೆಯಲ್ಲಿ ತಯಾರಿಸುವ ಗೊಬ್ಬರ ಸಾಕಾಗುವುದಿಲ್ಲ. ಹಾಗಾಗಿ, ಎರೆಹುಳು ಗೊಬ್ಬರ, ಸಗಣಿ ಗೊಬ್ಬರ ಕೊಂಡು ಗಿಡಗಳಿಗೆ ಪೂರೈಸುತ್ತಾರೆ.

ಮನೆಯಲ್ಲೇ ಬೀಜ ತಯಾರಿಸಿ

ಬಹುತೇಕ ತರಕಾರಿ, ಸೊಪ್ಪುಗಳ ಬೀಜಗಳನ್ನು ಮನೆಗಳಲ್ಲೇ ತಯಾರಿಸಿಕೊಳ್ಳಬಹುದು. ಮಾರುಕಟ್ಟೆಯಿಂದ ತಂದು ಹಣ ವ್ಯಯ ಮಾಡುವ ಬದಲು ತರಕಾರಿಗಳಿಂದಲೇ ಬೀಜ ಮಾಡಿಕೊಳ್ಳಬಹುದು.

* ಮಾರುಕಟ್ಟೆಯಿಂದ ತಂದಿದ್ದ ಟೊಮೆಟೊ ಕೊಳೆತಿದ್ದರೆ ಅದನ್ನು ಬಿಸಾಡುವ ಬದಲು ಬೀಜಗಳನ್ನು ತೆಗೆದು ತೊಳೆದು ಬಿಸಿಲಲ್ಲಿ ಒಣಗಿಸಿ ಪಾಟ್‌ಗೆ ಹಾಕಬಹುದು.

* ನಿಂಬೆಹಣ್ಣು, ಎಳ್ಳಿಕಾಯಿ ಬೀಜಗಳನ್ನು ತೆಗೆದು ಬಿಸಿಲಲ್ಲಿ ಒಣಗಿಸಿ ಸಂಗ್ರಹಿಸಿಟ್ಟುಕೊಂಡರೆ ಬೇಕೆಂದಾಗ ಮಣ್ಣಿನಲ್ಲಿ ಹಾಕಿ ಸಸಿ ಮಾಡಿಕೊಳ್ಳಬಹುದು.

* ಒಣಗಿದ ಮೆಣಸಿನ ಕಾಯಿಯಲ್ಲಿರುವ ಬೀಜಗಳನ್ನು ಸಂಗ್ರಹಿಸಿ ಸಸಿ ಮಾಡಬಹುದು.

* ಪುದಿನ, ಕೊತ್ತಂಬರಿ ಸೊಪ್ಪಿನ ಬೇರುಗಳನ್ನು ಮಣ್ಣಿನಲ್ಲಿ ನೆಟ್ಟರೆ ಮತ್ತೆ ಸೊಪ್ಪನ್ನು ಪಡೆಯಬಹುದು.

ಬೀಜಗಳಿಂದ ಸಸಿ ಹೀಗೆ ಮಾಡಿ

* ಸಣ್ಣ ಸಣ್ಣ ಬೀಜಗಳನ್ನು ದೊಡ್ಡ ಪಾಟ್‌ಗೆ ಹಾಕಿಬೇಡಿ. ನೀರುಣಿಸಿದಾಗ ಬೀಜ ತೇಲಿಕೊಂಡು ಹೊರಗೆ ಬೀಳುವ ಸಾಧ್ಯತೆ ಹೆಚ್ಚು.

* ಮಾರುಕಟ್ಟೆಯಲ್ಲಿ ಸೀಡ್‌ ಟ್ರೇ ಸಿಗುತ್ತದೆ. ಅದರಲ್ಲಿ ಕೊಕೊ ಪೀಟ್‌ (ತೆಂಗಿನ ನಾರಿನ ಪುಡಿ) ಹಾಕಿ ಬೀಜ ಹಾಕಬೇಕು.

* ಬೀಜ ಮೊಳಕೆಯೊಡೆದು ಸಸಿಯಾದ ಬಳಿಕ ದೊಡ್ಡ ಪಾಟ್‌ಗಳಿಗೆ ಸಸಿಗಳನ್ನು ವರ್ಗಾಯಿಸಿಕೊಳ್ಳಬೇಕು.

* ಸೀಡ್‌ ಟ್ರೇನಲ್ಲಿ ಬೀಜ ಹಾಕುವುದರಿಂದ ಬೀಜ ವ್ಯರ್ಥವಾಗುವುದಿಲ್ಲ.

* ಸೀಡ್‌ ಟ್ರೇ ಇಲ್ಲದಿದ್ದರೆ ಬಳಸಿ ಬಿಸಾಡಬಹುದಾದ ಸಣ್ಣ ಪೇಪರ್‌ ಟೀ ಕಪ್‌, ಮೊಟ್ಟೆ ಇಡುವ ಪೇಪರ್‌ ಟ್ರೇಗಳಲ್ಲೇ ಬೀಜಗಳನ್ನು ಹಾಕಬಹುದು.

ಅಡುಗೆ ಮನೆ ತ್ಯಾಜ್ಯ ಗೊಬ್ಬರ ತಯಾರಿಗೆ ಬಳಕೆ

ಗಿಡಗಳಿಗೆ ಮಣ್ಣು

* ಮರಳು, ಮಣ್ಣು, ಎರೆಗೊಬ್ಬರ ಮೂರನ್ನೂ ಸಮಪ್ರಮಾಣದಲ್ಲಿ ಮಿಕ್ಸ್‌ ಮಾಡಿ ಪಾಟ್‌ಗೆ ತುಂಬಬೇಕು.

* ಟೆರೆಸ್‌ ಮೇಲೆ ಮರಳು ಕೊಂಡೊಯ್ಯಲು ಭಾರ ಎನಿಸಿದರೆ ಮರಳಿನ ಬದಲು ಕೊಕೊಪೀಟ್‌ ಬಳಸಬಹುದು.

* ಎರೆಗೊಬ್ಬರದಲ್ಲಿ ಗಿಡಗಳಿಗೆ ಆರಂಭಿಕ ಹಂತದಲ್ಲಿ ಬೇಕಾಗುವ ಪ್ರೊಟೀನ್‌ಗಳು ಲಭ್ಯ ಇರುತ್ತವೆ. ಹಾಗಾಗಿ ಎರೆಗೊಬ್ಬರ ಗಿಡಗಳಿಗೆ ಅಗತ್ಯವಾಗಿ ಬೇಕು.

* ಮೂರನ್ನೂ ಸಮಪ್ರಮಾಣದಲ್ಲಿ ಹಾಕಿ ಗಿಡ ನೆಟ್ಟರೆ ಮೊದಲ ಒಂದು ತಿಂಗಳು ಹೆಚ್ಚುವರಿ ಪೋಂಷಕಾಂಶದ ಅಗತ್ಯ ಇರುವುದಿಲ್ಲ.

* ತಿಂಗಳ ಬಳಿಕ ಸಗಣಿ ನೀರು ಅಥವಾ ಕೊಟ್ಟಿಗೆ ಗೊಬ್ಬರ ಹಾಕಬಹುದು.

* ಕೊಕೊ ಪೀಟ್‌ ನೀರು ಸಂಗ್ರಹಿಸಿಟ್ಟುಕೊಳ್ಳುವ ಕಾರಣ ಮೂರ್ನಾಲ್ಕು ದಿನಕ್ಕೆ ಒಮ್ಮೆ ನೀರು ಹಾಕಿದರೆ ಸಾಕಾಗುತ್ತದೆ.

ನೀರು ಪೋಷಣೆ

* ಗಿಡಗಳಿಗೆ ನೀರುಣಿಸುವಲ್ಲೂ ಸೂಕ್ಷ್ಮತೆ ಬೇಕು.

* ಹೆಚ್ಚು ನೀರುಣಿಸಿದರೆ ಗಿಡಗಳ ಬೇರು ಕೊಳೆಯುವ ಸಂಭವ ಇರುತ್ತದೆ.

* ಕಡಿಮೆ ನೀರುಣಿಸಿದರೆ ಗಿಡ ಒಣಗುವ ಅಪಾಯ ಇರುತ್ತದೆ.

* ನೀರುಣಿಸುವಾಗ ಪಾಟ್‌ನಲ್ಲಿನ ಮಣ್ಣನ್ನು ಕೈಯಿಂದ ಮುಟ್ಟಿ ನೋಡಬೇಕು. ಮೇಲ್ಭಾಗದ ಮಣ್ಣು ಹಸಿಯಾಗಿದ್ದರೆ ನೀರು ಹಾಕುವುದು ಬೇಡ. ಮಣ್ಣು ಒಣಗಿದ್ದರೆ ಮಾತ್ರ ನೀರುಣಿಸಬೇಕು.

* ಕೆಲವು ಗಿಡಗಳು ಕಡಿಮೆ ನೀರು ಬಯಸುತ್ತವೆ. ಇನ್ನು ಕೆಲವು ಗಿಡಗಳು ಹೆಚ್ಚು ನೀರು ಬಯಸುತ್ತವೆ. ಪ್ರತಿ ದಿನ ನೀರುಣಿಸುವಾಗ ಇದನ್ನು ಗಮನಿಸಿದರೆ ಯಾವ ಗಿಡಕ್ಕೆ ಎಷ್ಟು ನೀರು ಬೇಕಾಗುತ್ತದೆ ಎಂಬುದು ಅರಿವಿಗೆ ಬರುತ್ತದೆ.

* ಕಡಿಮೆ ನೀರು ಬಯಸುವ ಗಿಡಗಳನ್ನು ಒಂದೆಡೆ, ಹೆಚ್ಚು ನೀರು ಬೇಡುವ ಗಿಡಗಳನ್ನು ಇನ್ನೊಂದೆಡೆ ಜೋಡಿಸಿಕೊಂಡರೆ ನೀರುಣಿಸಲು ಸುಲಭವಾಗುತ್ತದೆ.

* ಪೈಪ್‌ನಿಂದ ಪಾಟ್‌ಗಳಿಗೆ ನೀರು ಬಿಡುವುದಾದರೆ ನೀರಿನ ಹರಿಯುವಿಕೆ ಪ್ರಮಾಣ ಕಡಿಮೆ ಇರಬೇಕು. ಫೋರ್ಸ್‌ ಆಗಿ ನೀರು ಬಿಟ್ಟರೆ ಪಾಟ್‌ನ ಮೇಲ್ಭಾಗದ ಮಣ್ಣು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇರುತ್ತದೆ.

* ಮಾರುಕಟ್ಟೆಯಲ್ಲಿ ಸಿಗುವ ಸ್ಪ್ರಿಂಕ್ಲರ್‌ ಅಡಾಪ್ಟರ್‌ ಅನ್ನು ಬಳಸಿದರೆ ಒಳಿತು.

ಕಿಚನ್‌ ಗಾರ್ಡನ್‌ನಿಂದ ಆಗುವ ಲಾಭಗಳು

* ಸಾವಯವ ಪದ್ದತಿಯಲ್ಲಿ ತರಕಾರಿ ಬೆಳೆಯಬಹುದು.

* ತರಕಾರಿ, ಸೊಪ್ಪು, ಹಣ್ಣಿಗೆ ಔಷಧ ಸಿಂಪಡಣೆಯಾಗಿರುತ್ತದೆ ಎನ್ನುವ ಆತಂಕ ಇರುವುದಿಲ್ಲ.

* ಬೇಕೆಂದಾಗ ಬೇಕಾದ ತರಕಾರಿ ಕಿತ್ತು ಅಡುಗೆಗೆ ಬಳಸಬಹುದು.

* ಕೆಲವೊಮ್ಮೆ ಫ್ರಿಜ್‌ನಲ್ಲಿ ಇಟ್ಟ ತರಕಾರಿ ವಾರವಾದರೂ ಬಳಸಲು ಆಗುವುದಿಲ್ಲ. ಆಗ ಪ್ರೋಟೀನ್‌ ಅಂಶ ಕಡಿಮೆ ಆಗುವ ಸಂಭವ ಹೆಚ್ಚು. ಮನೆಯಲ್ಲೇ ಬೆಳೆದರೆ ಬೇಕೆಂದಾಗ ತರಕಾರಿ ಕೀಳಬಹುದು.

* ನಾವೇ ಬೆಳೆದ ತರಕಾರಿ ತಿಂದ ತೃಪ್ತಿ, ಸಮಾಧಾನ ಸಿಗುತ್ತದೆ.

* ಮನೆಯ ವಾತಾವರಣ ಹಸಿರಾಗಿದ್ದಷ್ಟೂ ಮನಸ್ಸು ಆಹ್ಲಾದಗೊಳ್ಳುತ್ತದೆ.

* ಪ್ರಕೃತಿಯೊಂದಿಗೆ ಕೈಗೊಳ್ಳುವ ಯಾವುದೇ ಚಟುವಟಿಕೆ ಮನಸಿಗೆ ಖುಷಿ ಕೊಡುತ್ತದೆ.

* ಬಿಡುವಿನ ವೇಳೆಯಲ್ಲಿ ಕೈತೋಟದ ಕೆಲಸಗಳಲ್ಲಿ ತೊಡಗಿಕೊಂಡರೆ ದೇಹಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ.

* ಸ್ವಲ್ಪ ಮಟ್ಟಿನ ಹಣದ ಉಳಿತಾಯ ಆಗುತ್ತದೆ.

ಮನೆಯಲ್ಲೇ ಗೊಬ್ಬರ ಹೀಗೆ ತಯಾರಿಸಿ

ಅಡುಗೆ ಮನೆಯ ತ್ಯಾಜ್ಯ ಬಳಸಿ ಗಿಡಗಳಿಗೆ ಬೇಕಾಗುವ ಗೊಬ್ಬರ ತಯಾರಿಸಿಕೊಳ್ಳಬಹುದು. ಒಂದು ಪ್ಲಾಸ್ಟಿಕ್‌ ಬಕೆಟ್‌ ಅಥವಾ ಬಾಕ್ಸ್‌ ತೆಗೆದುಕೊಂಡು ತಳಭಾಗದಲ್ಲಿ ಸಣ್ಣ ತೂತುಗಳನ್ನು ಮಾಡಿಕೊಳ್ಳಿ. ಕೆಳಗಡೆ ಸ್ವಲ್ಪ ಮಣ್ಣು ಹಾಗೂ ತೆಂಗಿನ ನಾರಿನ ಪುಡಿ ಅಥವಾ ಶೇಂಗಾ ಸಿಪ್ಪೆ, ಮರದ ಒಣಗಿದ ಎಲೆಗಳನ್ನು ಹಾಕಿಕೊಳ್ಳಬೇಕು. ಬಳಿಕ ಅಡುಗೆ ಮನೆಯ ಹಸಿ ತ್ಯಾಜ್ಯ ಹಾಕಬೇಕು. ಪ್ರತಿ ದಿನ ಸೃಷ್ಟಿಯಾಗುವ ಹಸಿ ತ್ಯಾಜ್ಯವನ್ನು ಬಕೆಟ್‌ಗೆ ಹಾಕುತ್ತಾ ಹೋಗಬೇಕು. ವಾರದ ಬಳಿಕ ಮತ್ತಷ್ಟು ಮಣ್ಣನ್ನು ಹಾಕಿ ಮತ್ತೆ ಅದರ ಮೇಲೆ ತ್ಯಾಜ್ಯ ಹಾಕುತ್ತ ಹೋಗಬೇಕು. ಬಕೆಟ್‌ ತುಂಬಿದ ಬಳಿಕ ಮೇಲೆ ಮತ್ತೊಂದಿಷ್ಟು ಮಣ್ಣು ಹಾಕಿ ಬಾಯಿ ಮುಚ್ಚಿ ಒಂದು ತಿಂಗಳು ಹಾಗೇ ಬಿಡಬೇಕು. ಬಕೆಟ್‌ನಲ್ಲಿ ತರಕಾರಿ ತ್ಯಾಜ್ಯ ಕೊಳೆತು ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಈ ರೀತಿ ಎರಡು ಬಕೆಟ್‌ಗಳನ್ನು ಮಾಡಿಕೊಂಡರೆ ತ್ಯಾಜ್ಯವನ್ನು ಹೊರಗೆ ಸುರಿದು ಪರಿಸರ ಹಾಳು ಮಾಡುವುದನ್ನು ತಪ್ಪಿಸಬಹುದು. ಮನೆಯಲ್ಲೇ ಗಿಡಗಳಿಗೆ ಅಗತ್ಯವಿರುವ ಗೊಬ್ಬರ ತಯಾರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT