ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೈಸರ್ಗಿಕ ಕೃಷಿ ಪದ್ಧತಿಯೇ ಭವಿಷ್ಯ’

ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ಆರಂಭ l ಶ್ರೀಶ್ರೀ ರವಿಶಂಕರ್ ಗುರೂಜಿ ಅಭಿಮತ
Last Updated 8 ಫೆಬ್ರುವರಿ 2021, 20:35 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶವು ಮತ್ತೆ ಹಿಂದಿನ ಕೃಷಿ ಪದ್ಧತಿಗೇ ಮರಳುವ ಅಗತ್ಯವಿದೆ. ಸದೃಢ ಭಾರತ ನಿರ್ಮಾಣಕ್ಕೆ ನೈಸರ್ಗಿಕ ಕೃಷಿಯೇ ಭವಿಷ್ಯವಾಗಿದ್ದು, ಈ ಪದ್ಧತಿ ಅಳವಡಿಸಿಕೊಳ್ಳುವುದಕ್ಕೆ ಎಲ್ಲರೂ ಸಂಕಲ್ಪ ತೊಡಬೇಕು’ ಎಂದು ಆರ್ಟ್‌ ಆಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀಶ್ರೀ ರವಿಶಂಕರ್ ಗುರೂಜಿ ಸಲಹೆ ನೀಡಿದರು.

ಹೆಸರಘಟ್ವದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಆವರಣದಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದಲ್ಲಿ ಕೆಲವರು ಇಂದಿಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ಹಣ್ಣುಗಳನ್ನು ಬೆಳೆಯುವ ಕೆಲಸವಾಗಬೇಕು. ಆಗ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜೊತೆಗೆ, ಹಣ್ಣುಗಳ ಸೇವನೆಯಿಂದ ಜನರಲ್ಲಿ ಪೌಷ್ಟಿಕಾಂಶವೂ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಮ್ಮಲ್ಲಿ ಅಗ್ಗದ ದರದಲ್ಲಿ ದೊರೆಯುವ ನುಗ್ಗೆಸೊಪ್ಪಿನಲ್ಲಿ ಸಾಕಷ್ಟು ಪೌಷ್ಟಿಕಾಂಶ ಇದೆ. ಆದರೆ, ನಾವು ಅದನ್ನು ಸೇವಿಸುವುದು ಕಡಿಮೆ. ಆದರೆ, ಅಮೆರಿಕದಲ್ಲಿ ನಮ್ಮ ದೇಶದ ನುಗ್ಗೆಸೊಪ್ಪುನ್ನು ಪುಡಿ ಮಾಡಿ ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಕಾರ್ಯ ನಮ್ಮಲ್ಲಿ ಆಗಬೇಕಾಗಿದೆ’ ಎಂದರು.

‘ಕೃಷಿ ವಲಯ ಚೆನ್ನಾಗಿದ್ದರೆ ರೈತರೂ ಖುಷಿ ಆಗಿರುತ್ತಾರೆ. ರೈತರ ಸಮಸೈಗಳಿಗೆ ಸ್ಪಂದಿಸುವ ಕೆಲಸವನ್ನು ಕೃಷಿ, ತೋಟಗಾರಿಕಾ ಇಲಾಖೆಗಳು, ಸಂಶೋಧನಾ ಕೇಂದ್ರಗಳು ಮಾಡುತ್ತಿವೆ’ ಎಂದು ಅವರು ಹೇಳಿದರು.

ಆಹಾರ ಪದ್ಧತಿಯಿಂದಲೂ ಕೊರೊನಾ ನಿಯಂತ್ರಣ: ‘ಭಾರತೀಯರು ಔಷಧೀಯ ಗುಣವುಳ್ಳ ಆಹಾರ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸುವುದರಿಂದ ಕೊರೊನಾ ನಮ್ಮ ಹತ್ತಿರಕ್ಕೂ ಸರಿಯುವುದಿಲ್ಲ. ನಮ್ಮ ಸಾವಯವ ಆಹಾರ ಪದ್ಧತಿಯಿಂದಲೇ ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿವೆ’ ಎಂದು ಗುರೂಜಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT