ಸೋಮವಾರ, ಜುಲೈ 4, 2022
23 °C
ಕಾರ್ಮಿಕರ ಅನಿಶ್ಚತತೆ; ಭತ್ತದಿಂದ ಹತ್ತಿ, ಮೆಕ್ಕೆಜೋಳದತ್ತ ರೈತರು

ಕೊರೊನಾ ಎಫೆಕ್ಟ್: ಪಂಜಾಬ್‌, ಹರಿಯಾಣದಲ್ಲಿ ಬೆಳೆ ಪಲ್ಲಟ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ವೈರಸ್‌ ಸೋಂಕು ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಅನಿಶ್ಚತತೆ ಮತ್ತು ಭತ್ತ ನಾಟಿಗೆ ಬೇಕಾದ ತಾಂತ್ರಿಕ ಸೌಲಭ್ಯದ ಕೊರತೆಯ ಹಿನ್ನೆಲೆಯಲ್ಲಿ ನೈರುತ್ಯ ಪಂಜಾಬ್‌ ಮತ್ತು ಹರಿಯಾಣ ಭಾಗದ ಕೃಷಿಕರು ಈ ಬಾರಿ ಭತ್ತ ಬೆಳೆಯುವುದನ್ನು ಬಿಟ್ಟು, ಕಡಿಮೆ ನೀರು ಕೇಳುವ ಹತ್ತಿ ಮತ್ತು ಮೆಕ್ಕೆಜೋಳ ಬೆಳೆಯುವತ್ತ ಹೆಜ್ಜೆ ಹಾಕಿದ್ದಾರೆ.

ಇಂಥದ್ದೊಂದು ನಿರ್ಧಾರದ ಹಿಂದೆ ಹಲವು ಕಾರಣಗಳಿವೆ; ಮೊದಲನೆಯದಾಗಿ, ಪಂಜಾಬ್‌ – ಹರಿಯಾಣ ಭತ್ತ ನಾಟಿ ಕಾರ್ಯಕ್ಕಾಗಿ ಉತ್ತರ ಪ್ರದೇಶ ಮತ್ತು ಬಿಹಾರದ ಕಾರ್ಮಿಕರ ಮೇಲೆ ಅವಲಂಬಿತರಾಗಿದ್ದಾರೆ. ಸ್ಥಳೀಯ ಕಾರ್ಮಿಕರು ಹೆಚ್ಚು ಕೂಲಿ ಕೇಳುವ ಕಾರಣಕ್ಕಾಗಿ, ಆ ರಾಜ್ಯದ ರೈತರನ್ನು ನಂಬಿದ್ದಾರೆ. ಈಗ ರೈಲು ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಆ ಎರಡು ರಾಜ್ಯಗಳ ಸುಮಾರು  10 ಲಕ್ಷ ಕಾರ್ಮಿಕರು ಭತ್ತದ ನಾಟಿ ಕಾರ್ಯಕ್ಕೆ ಬರುವುದು ಅನುಮಾನ.

ಎರಡನೆಯದಾಗಿ; ಹತ್ತಿ ಬೆಳೆಗೆ ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಮತ್ತು ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಿದೆ. ಮೂರನೇ ಅಂಶ; ಈಗ ಭತ್ತ ಬೆಳೆಯುತ್ತಿರುವ ಸೌತ್‌ವೆಸ್ಟ್ ಪಂಜಾಬ್‌ನಲ್ಲಿ ಒಂದು ಕಾಲದಲ್ಲಿ ಹತ್ತಿ ಬೆಳೆಯುತ್ತಿದ್ದರು. ಈ ಬದಲಾವಣೆಯಿಂದ ಪುನಃ ಅವರ ಮೂಲ ಬೆಳೆಗೆ ಮರಳಿದಂತಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ನೈರುತ್ಯ ಪಂಜಾಬ್‌ನ ಜಿಲ್ಲೆಗಳಾದ ಮಾನಸ, ಬತ್ತಿಂಡ, ಮುಕ್ತಸರ್‌ ಮತ್ತು ಫಝಿಲ್ಕಾ ಜಿಲ್ಲೆಗಳ ಹಾಗೂ ಪೂರ್ವ ಹರಿಯಾಣದ ಸಿರ್ಸಾ, ಫತೇಹಾಬಾದ್, ಜಿಂದ್, ಹಿಸಾರ್ ಮತ್ತು ಭಿವಾನಿ ಜಿಲ್ಲೆಯ ರೈತರು ಈ ಬಾರಿ ಹತ್ತಿ ಮತ್ತು ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದಾರೆ. ಕೆಲವು ರೈತರು ಹತ್ತಿಯ ನಡುವೆ ಕಡಿಮೆ ಎಕರೆಯಲ್ಲಾದರೂ ಭತ್ತ ಬೆಳೆಯುವುದನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಗೋಧಿ ಕೊಯ್ಲು ಮುಗಿಸಿರುವ ರೈತರು, ಸಟ್ಲೆಜ್ ನದಿಯಿಂದ ಕಾಲುವೆಗಳ ಮೂಲಕ ನೀರು ಹರಿಯುವುದಕ್ಕಾಗಿ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ 30ರ ನಂತರ ಕಾಲುವೆಗಳಲ್ಲಿ ನೀರು ಹರಿಸುತ್ತಾರೆ. ನಂತರ ಹತ್ತಿ ಮತ್ತು ಮೆಕ್ಕೆಜೋಳ ನಾಟಿ ಮಾಡಲಿದ್ದಾರೆ.

ಕಾರ್ಮಿಕರ ಹೊರೆಯೇ ಕಾರಣ

ಒಂದು ಎಕರೆ ಭತ್ತ ನಾಟಿ ಮಾಡಲು ಸ್ಥಳೀಯ ಕಾರ್ಮಿಕರು ₹4,500 ರಿಂದ ₹5,000 ಕೂಲಿ ಕೇಳುತ್ತಾರೆ. ಆದರೆ, ಉ.ಪ್ರ, ಬಿಹಾರದಿಂದ ಬರುವ ವಲಸೆ ಕಾರ್ಮಿಕರು  ₹2,500ಕ್ಕೆ ಕೆಲಸ ಮಾಡಿಕೊಡುತ್ತಾರೆ.

ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರೊಬ್ಬರ ಪ್ರಕಾರ, ಹತ್ತಿ ಕೃಷಿಗೆ ಹೋಲಿಸಿದರೆ, ಭತ್ತದ ಕೃಷಿಗೆ ಮೂರು ಪಟ್ಟು ಹೆಚ್ಚು ಕಾರ್ಮಿಕರು ಬೇಕಾಗುತ್ತಾರೆ. ಕಡಿಮೆ ಕಾರ್ಮಿಕರೊಂದಿಗೆ ಜೂನ್‌–ಜುಲೈ ಅವಧಿಯಲ್ಲಿ ಕೆಸರು ಗದ್ದೆಯಲ್ಲಿ ಬೇಗ ಬೇಗ ಸಸಿ ನಾಟಿ ಮಾಡುವುದು ಸವಾಲಿನ ಕೆಲಸ. ಇದೂ ಕೂಡ ರೈತರು ಹತ್ತಿ ಮತ್ತು ಮೆಕ್ಕೆಜೋಳ ಕೃಷಿಗೆ ಬದಲಾಗುತ್ತಿರುವುದರ ಹಿಂದಿನ ಕಾರಣ ಎನ್ನುತ್ತಾರೆ.

ಪಂಜಾಬ್‌ ಮತ್ತು ಹರಿಯಾಣದಲ್ಲಿ ಅಂದಾಜು 43 ಲಕ್ಷ ಹೆಕ್ಟೇರ್‌ನಷ್ಟು ಭತ್ತ ಬೆಳೆಯುತ್ತಾರೆ. ಇಷ್ಟು ಭತ್ತ ಬೆಳೆಯಲು ಕನಿಷ್ಠ 10 ರಿಂದ 11 ಲಕ್ಷದಷ್ಟು ಕಾರ್ಮಿಕರು ಬೇಕಾಗುತ್ತಾರೆ. ಈ ಕಾರ್ಮಿಕರಲ್ಲಿ ಶೇ 90 ರಷ್ಟು ಬಿಹಾರ ಮತ್ತು ಉತ್ತರ ಪ್ರದೇಶದಿಂದ ವಲಸೆ ಕಾರ್ಮಿಕರು. ಈಗ ಕೊರೊನಾ ಕಾಟ, ಜತೆಗೆ ಲಾಕ್‌ಡೌನ್ ಅವಧಿಯಲ್ಲಿ, ಸಾರಿಗೆ ವ್ಯವಸ್ಥೆಯೇ ಇಲ್ಲದಿರುವಾಗ ಇಷ್ಟು ಕಾರ್ಮಿಕರು ನಿಜವಾಗಿಯೂ ಸಮಯಕ್ಕೆ ಸರಿಯಾಗಿ ಭತ್ತ ನಾಟಿಗೆ ಬರುತ್ತಾರೆಯೇ ? ಇಂಥದ್ದೊಂದು ಅನುಮಾನ ಕಾಡುತ್ತಿರುವುದರಿಂದಲೇ ರೈತರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ತಾಂತ್ರಿಕತೆಯ ಕೊರತೆ

ತಾಂತ್ರಿಕವಾಗಿ ಭತ್ತದ ಸಸಿಗಳನ್ನು ನಾಟಿ ಮಾಡಲು ಸಾಧ್ಯವಿದೆ. ಆದರೆ, ಭತ್ತದ ಸಸಿಗಳನ್ನು ಬೆಳೆಸಲು ವಿಶೇಷ ಮ್ಯಾಟ್‌ (ಟ್ರೇ)ಗಳಿರುವ ನರ್ಸರಿ ಬೇಕಾಗುತ್ತದೆ. ಜತೆಗೆ ಭತ್ತ ನಾಟಿಗೆ ಬಳಸುವ ಯಂತ್ರಗಳೆಲ್ಲ ಹೈಟೆಕ್‌ ಆಗಿವೆ. ಈಗಾಗಲೇ ವಲಸೆ ಕಾರ್ಮಿಕರ ಮೇಲೆ ಅವಲಂಬಿತರಾಗಿರುವ ರೈತರು, ಈ ಯಂತ್ರಗಳ ಬಳಕೆ ಕಲಿಯುವುದು ಕಷ್ಟ. ಭತ್ತದ ಕೊಯ್ಲಿಗೆ ಯಂತ್ರಗಳನ್ನು ಅವಲಂಬಿಸಿದ್ದಾರೆ. ಆ ಯಂತ್ರಗಳು ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ರೂಪುಗೊಂಡಿರುವುದರಿಂದ, ಅವುಗಳ ಬಳಕೆ ಇಲ್ಲಿನ ರೈತರಿಗೆ ಕಷ್ಟವಾಗದು ಎಂದು ತಂತ್ರಜ್ಞರು ಅಭಿಪ್ರಾಯಪಡುತ್ತಾರೆ.

ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗಬೇಕು. ಭತ್ತದ ಹುಲ್ಲನ್ನು ಸುಡುವುದು ಕಡಿಮೆಯಾಗಿ ಮಾಲಿನ್ಯವಾಗುವುದನ್ನು ತಡೆಗಟ್ಟಬೇಕೆಂಬ ಸರ್ಕಾರದ ಪ್ರಯತ್ನಿಸುತ್ತಿತ್ತು. ಈಗ ರೈತರೇ ಕಾರ್ಮಿಕರ ಕೊರತೆಯಿಂದ ಹತ್ತಿ, ಮೆಕ್ಕೆಜೋಳ ಬೆಳೆಯುವತ್ತ ಹೆಜ್ಜೆ ಹಾಕಿರುವುದು ಸರ್ಕಾರದ ಪ್ರಯತ್ನಕ್ಕೆ ಪೂರಕವಾದಂತಾಗಿದೆ.

ಪಂಜಾಬ್ ಮತ್ತು ಹರ್ಯಾಣ ರೈತರ ನಿರ್ಧಾರವು ದೇಶದ ಒಟ್ಟಾರೆ ಕೃಷಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಅಕ್ಕಿದ ದರ ಹೆಚ್ಚಾಗಬಹುದು, ದಕ್ಷಿಣದ ರಾಜ್ಯದಲ್ಲಿ ಬೆಳೆಯುವ ಭತ್ತಕ್ಕೆ ಉತ್ತಮ ಧಾರಣೆ ಸಿಗಬಹುದು ಎಂಬ ಲೆಕ್ಕಾಚಾರಗಳೂ ಚಾಲ್ತಿಯಲ್ಲಿವೆ.

ಕೊರೊನಾ ಸೋಂಕಿನ ಭೀತಿ ಕೃಷಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತರುತ್ತಿದೆ. ಅದರಲ್ಲಿ ಇದೂ ಒಂದು.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ಗಾಣಧಾಳು ಶ್ರೀಕಂಠ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು