ಶನಿವಾರ, ಸೆಪ್ಟೆಂಬರ್ 19, 2020
21 °C

ರೈತರ ಪಾಲಿನ ರತ್ನ ಪ್ರಾಧ್ಯಾಪಕ ಜೈಪಾಲ್

ಅಮರ ಇಂಗಳೆ Updated:

ಅಕ್ಷರ ಗಾತ್ರ : | |

Prajavani

ತೇರದಾಳ: ಎಂಎಸ್ಸಿ ಬಿಎಡ್ ಖಾಸಗಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇಲ್ಲಿನ ಗೋಲಭಾವಿ ರಸ್ತೆಯ ನಿವಾಸಿ ಜೈಪಾಲ್ ಧರೆಪ್ಪ ಶ್ರೀಗೊಂಡ ಅವರಿಗೆ, ಸರ್ಕಾರಿ ನೌಕರಿ ಗಗನ ಕುಸುಮವಾಗಿ ಪರಿಣಮಿಸಿತು. ಅದಕ್ಕೆ ಬೇಸರ ಮಾಡಿಕೊಳ್ಳದೆ ಕೃಷಿಯತ್ತ ಗಮನ ಹರಿಸಿದರು. ಅದರ ಮೂಲಕ ಇಂದು ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಸಂಪಾದಿಸುತ್ತಿದ್ದಾರೆ. 

ವಿದ್ಯೆ ಪಡೆದವರಿಗೆಲ್ಲ ನೌಕರಿ ಸಿಗಲು ಸಾಧ್ಯವಿಲ್ಲ ಎಂದ ಸತ್ಯವನ್ನು ಅರಿತು ಜಮಖಂಡಿ, ರಾಂಪೂರ, ಸಂಕೇಶ್ವರ, ಕುಡಚಿ, ರಾಯಬಾಗ ಹೀಗೆ ನಾನಾ ಕಡೆ ಜೀವಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಅದರಿಂದ ಹೊರಬಂದು ತಮ್ಮದೇ ಆದ ‘ರತ್ನತ್ರಯ’ ಹೆಸರಿನ ನರ್ಸರಿಯನ್ನು ಆರಂಭಿಸಿ ಈಗ ಕೈತುಂಬ ದುಡಿಯುವುದರ ಜೊತೆಗೆ 5 ಜನ ಮಹಿಳೆಯರಿಗೆ ಕೆಲಸ ನೀಡಿದ್ದಾರೆ.

ಕೇವಲ ₹ 250 ಬಂಡವಾಳ ಹೂಡುವ ಮೂಲಕ ವಿವಿಧ ಹೂವು– ಹಣ್ಣುಗಳ ಸಸಿಗಳನ್ನು ಬೆಳೆಸಿದ ನರ್ಸರಿಯಿಂದ ಇಂದು ವರ್ಷಕ್ಕೆ ₹ 3 ಲಕ್ಷದಿಂದ ₹ 4 ಲಕ್ಷ ಆದಾಯ ಪಡೆಯುವ ಜೊತೆಗೆ ರೈತರಿಗೆ ಉತ್ತಮ ಗುಣಮಟ್ಟದ ಸಸಿಗಳನ್ನು ನೀಡುವ ಮೂಲಕ ರೈತರ ನಂಬಿಕೆಯನ್ನು ಗಳಿಸಿದ್ದಾರೆ. 

ಈ ನರ್ಸರಿಯಲ್ಲಿ ಆ್ಯಪಲ್ ಬೇರ್, ಪೇರಲ (ವಿ.ಎನ್.ಆರ್.ಥೈ-7, ಲಖನೌ ಜಾತಿ), ದಾಳಿಂಬೆ, ಸೀತಾಫಲ, ಮಾವಿನ ಸಸಿಗಳು, ಸಪೋಟ (ಚಿಕ್ಕು), ಡ್ರ್ಯಾಗನ್, ಲಿಂಬು (ಬಾಲಾಜಿ ಹಾಗೂ ಬೀಜರಹಿತ ಲಿಂಬು), ಜಿ-9 ಬಾಳೆ, ಕಬ್ಬಿನ ಸಸಿ, ತೆಂಗು, ಅಲಂಕಾರಿಕ ಸಸ್ಯಗಳು, ಶ್ರೀಗಂಧ, ರಕ್ತಚಂದನ, 12 ಬಗೆಯ ಗುಲಾಬಿ, ದಾಸವಾಳ, ಚೆಂಡು ಹೂ, ಮೆಣಸಿನ ಸಸಿ, ಮಹಾಗನಿ, ಹೆಬ್ಬೇವು ಹೀಗೆ ವಿವಿಧ ಸಸಿಗಳು ಇಲ್ಲಿ ದೊರೆಯುತ್ತವೆ.

‘ಹಣ ಮಾಡುವ ಉದ್ದೇಶದಿಂದ ನರ್ಸರಿಯನ್ನು ಪ್ರಾರಂಭಿಸಿಲ್ಲ. ಆದರೆ, ಈ ಹಿಂದೆ ಪ್ರಾಧ್ಯಾಪಕನಾಗಿ ಎಷ್ಟು ದುಡಿಯುತ್ತಿದ್ದದ್ದಕ್ಕಿಂತ ಅದಕ್ಕಿಂತ ಹೆಚ್ಚು ಆದಾಯ ಪಡೆಯುತ್ತಿದ್ದೇನೆ. ಬೇರೆ ಪ್ರದೇಶದಿಂದ ಆಮದು ಮಾಡಿಕೊಂಡ ಸಸಿಗಳನ್ನು ಅಲ್ಪ ಮಟ್ಟಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದು, ನಮ್ಮಲ್ಲಿ ತಯಾರಿಸಿದ ಸಸಿಗಳನ್ನು ಅತಿ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ’ ಎನ್ನುತ್ತಾರೆ ಜೈಪಾಲ್ ಧರೆಪ್ಪ ಶ್ರೀಗೊಂಡ.

‘ಸಸಿಗಳ ಜೊತೆಗೆ ಕುರಿ ಹಾಗೂ ಮೇಕೆಗಳಿಗೆ ನೀಡುವ ಉತ್ತಮ ಗುಣಮಟ್ಟದ ಮೇವಿನ ಬೀಜಗಳು ನಮ್ಮಲ್ಲಿ ದೊರೆಯುತ್ತವೆ’ ಎನ್ನುತ್ತಾರೆ ಜೈಪಾಲ ಅವರ ಪುತ್ರ ಪ್ರವೀಣ.

ಜೈಪಾಲ ಶ್ರೀಗೊಂಡ ಸಂಪರ್ಕಕ್ಕೆ: 90086 58858

ಕುಟಂಬಸ್ಥರ ಸಾಥ್

ಜೈಪಾಲ ಅವರು ಯಶಸ್ವಿಯಾಗಿ ನರ್ಸರಿ ನಡೆಸುವುದರ ಹಿಂದೆ ಅವರ ಕುಟುಂಬಸ್ಥರ ಸಹಕಾರ ಮತ್ತು ಪ್ರೋತ್ಸಾಸ  ಸಾಕಷ್ಟಿದೆ. ಜೈಪಾಲ ಅವರ ಹಿರಿಯ ಪುತ್ರ ಡಿಪ್ಲೋಮಾ ಮುಗಿಸಿದ್ದರು ಸಹ ತಂದೆಗೆ ಸಹಾಯ ಮಾಡುತ್ತ ನರ್ಸರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕಿರಿಯ ಪುತ್ರ ಸಮ್ಮೇದ ಶಾಲಾವಧಿ ನಂತರ ತಂದೆಗೆ ನೆರವಾಗುತ್ತಾನೆ. ಮಡದಿ ಸುನಂದಾ ಇಲ್ಲಿ ತಯಾರಿಸುವ ಎಲ್ಲ ಸಸಿಗಳ ಆರೈಕೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು