ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಹಿಡಿದ ತರಕಾರಿ ಕೃಷಿ; ರೈತನಲ್ಲಿ ಖುಷಿ..! ರೈತ ಸಂಗನಗೌಡ ಪಾಟೀಲ ಯಶೋಗಾಥೆ

ನಾಗರದಿನ್ನಿ ಗ್ರಾಮದ ರೈತ
Last Updated 20 ಮೇ 2019, 19:31 IST
ಅಕ್ಷರ ಗಾತ್ರ

ಕೊಲ್ಹಾರ:ಹಚ್ಚ ಹಸಿರಿನ ತಳಿರು ತೋರಣದಂತೆ ಕಂಗೊಳಿಸುವ ಹಾಗಲಕಾಯಿ ಬಳ್ಳಿಗಳು. ರಸ್ತೆಯಲ್ಲಿ ಹಾದು ಹೋಗುವವರ ಗಮನವನ್ನು ತನ್ನೆಡೆಗೆ ಸೆಳೆಯುವ ಹೀರೆಕಾಯಿ ಹಾಗೂ ಬದನೆಕಾಯಿ ಗಿಡಗಳು...

ಇದು ಕೊಲ್ಹಾರದಿಂದ ಬಸವನಬಾಗೇವಾಡಿಗೆ ಹೋಗುವ ಮುಖ್ಯರಸ್ತೆಯ ನಾಗರದಿನ್ನಿ ಕ್ರಾಸ್ ನಂತರ, ಬಲ ಭಾಗದಲ್ಲಿ ಕಾಣುವ ತರಕಾರಿ ತೋಟದ ಮನಮೋಹಕ ದೃಶ್ಯ.

ನಾಗರದಿನ್ನಿ ಗ್ರಾಮದ ರೈತ ಸಂಗನಗೌಡ ಪಾಟೀಲ ತಮ್ಮ ಎಂಟು ಎಕರೆ ಜಮೀನಿನಲ್ಲಿ, ಮೂರುವರೆ ಎಕರೆ ಕಬ್ಬು ಬೆಳೆದು, ಇನ್ನುಳಿದ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಹಾಗಲಕಾಯಿ, ಹೀರೆಕಾಯಿ, ಬದನೆಕಾಯಿ ಜತೆಗೆ ಅಲ್ಲಲ್ಲೇ ದಪ್ಪ ಮೆಣಸಿನಕಾಯಿ ತರಕಾರಿ ಬೆಳೆದು, ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಪಡೆಯುವ ಮೂಲಕ ಯಶಸ್ಸು ಕಂಡಿದ್ದಾರೆ.

ಆರಂಭದಲ್ಲಿ ಎಂಟು ಎಕರೆ ಜಮೀನಿನಲ್ಲಿ ಏಳು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದು, ಒಂದು ಎಕರೆ ಕಲ್ಲಂಗಡಿ ಹಣ್ಣು ಬೆಳೆದಿದ್ದರು. 20 ಟನ್ ಕಲ್ಲಂಗಡಿ ಫಸಲು ಬಂದರೂ; ಮಾರುಕಟ್ಟೆಯಲ್ಲಿ ಕಲ್ಲಂಗಡಿ ದರ ಕಡಿಮೆಯಾದ ಕಾರಣ ನಿರೀಕ್ಷಿತ ಲಾಭ ಸಿಗಲಿಲ್ಲ. ಕಬ್ಬು ಬೆಳೆಗಾಗಿ ಒಂದು ವರ್ಷ ಕಾಯ್ದು, ಬೆಳೆ ಬಂದ ನಂತರ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಿದರೆ, ಹಣಕ್ಕಾಗಿ ಸುಮಾರು ಎರಡು ವರ್ಷ ಕಾಯಬೇಕು ಎಂದು ಯೋಚಿಸಿ, ತರಕಾರಿ ಬೆಳೆಗಳ ಕೃಷಿಗೆ ಮುಂದಾದರು ಸಂಗನಗೌಡ.

ಕಳೆದ ಎರಡ್ಮೂರು ತಿಂಗಳ ಹಿಂದೆ, ಕೃಷಿ ಮಾರ್ಗದರ್ಶಕ ಇಂಡಿ ತಾಲ್ಲೂಕಿನ ರಮೇಶ ಬಿರಾದಾರ ಮಾರ್ಗದರ್ಶನದಲ್ಲಿ ಎರಡೂವರೆ ಎಕರೆ ಪ್ರದೇಶದಲ್ಲಿ ಹಾಗಲಕಾಯಿ, ಎರಡು ಎಕರೆ ಪ್ರದೇಶದಲ್ಲಿ ಬದನೆಕಾಯಿ ಹಾಗೂ ಹೀರೆಕಾಯಿ ಬೆಳೆದಿದ್ದಾರೆ.

ಹೀರೆಕಾಯಿ ಜತೆ ಅಲ್ಲಲ್ಲಿ ದಪ್ಪ ಮೆಣಸಿನಕಾಯಿ ಬೆಳೆಯಲಾಗಿದೆ. 2 ದಿನಕ್ಕೊಮ್ಮೆ 3 ಗಂಟೆ ನೀರು ಹರಿಸುತ್ತಾರೆ. ನಾಲ್ಕು ದಿನಗಳಿಗೊಮ್ಮೆ ಡ್ರಿಪ್ ಮೂಲಕ ಗೊಬ್ಬರ ಹಾಕುತ್ತಾರೆ. ಎರಡು ದಿನಕ್ಕೊಮ್ಮೆ ಔಷಧಿ ಸಿಂಪಡಿಸುತ್ತಾರೆ. ಕಬ್ಬಿಗೆ ಹಾಗೂ ತರಕಾರಿ ಬೆಳೆಗಳಿಗೆ ಜಮೀನಿನ ಸಮೀಪದ ಕಾಲುವೆಗಳ ನೀರಿನ ಜೊತೆಗೆ, ಎರಡು ಕೊಳವೆಬಾವಿಗಳ ನೀರಿನ ಲಭ್ಯತೆ ಇದ್ದು, ನೀರಿನ ಕೊರತೆಯಿಲ್ಲ.

ಇನ್ನೂ ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರಗಳಿವೆ. ಪ್ರತಿ ಟನ್ ಹಾಗಲಕಾಯಿಗೆ ₹ 55,000ದಿಂದ ₹ 60,000 ಧಾರಣೆಯಿದೆ. ಹೀರೆಕಾಯಿ ಟನ್‌ಗೆ ₹ 40,000, ಬದನೆಕಾಯಿ ಪ್ರತಿ ಟನ್‌ಗೆ ₹ 20,000 ಧಾರಣೆಯಿದೆ.

ಪ್ರತಿ ಎರಡು ದಿನಗಳಿಗೊಮ್ಮೆ ಕಾಯಿಗಳನ್ನು ಕೊಯ್ಲು ಮಾಡಿ, ನೇರವಾಗಿ ಮಾರುಕಟ್ಟೆಯ ಸಗಟು ಮಾರಾಟಗಾರರಿಗೆ ಕಳುಹಿಸುತ್ತಾರೆ ಸಂಗನಗೌಡ. ನಿತ್ಯವೂ 30ರಿಂದ 40 ರೈತರು ಇವರ ತೋಟಕ್ಕೆ ಭೇಟಿ ನೀಡಿ, ಮಾಹಿತಿ ಪಡೆಯುತ್ತಿದ್ದಾರೆ.

ಹಾಗಲಕಾಯಿಯಿಂದ ಅಧಿಕ ಗಳಿಕೆ

ಹಾಗಲಕಾಯಿಯಲ್ಲಿ ಎರಡು ರೀತಿಯ ಕಾಯಿಗಳು ಬರುತ್ತವೆ. ಬಿಳಿಯ ಹಾಗಲಕಾಯಿ ಹಾಗೂ ಹಸಿರು ಹಾಗಲಕಾಯಿ. ಬಿಳಿಯ ಹಾಗಲಕಾಯಿಗೆ ವಿಜಯಪುರದಲ್ಲಿ ಉತ್ತಮ ಬೇಡಿಕೆ ಇದ್ದರೆ, ಹಸಿರು ಹಾಗಲಕಾಯಿಗೆ ಬೆಳಗಾವಿಯಲ್ಲಿ ಬಹಳ ಬೇಡಿಕೆ ಇದೆ.

45 ದಿನಗಳಿಗೆ ಕಟಾವೂ ಆರಂಭವಾಗಿ, 6-7 ತಿಂಗಳವರೆಗೆ ನಿರಂತರ ಫಸಲು ನೀಡುತ್ತದೆ. ಮೊದಲ ಬಾರಿಯೇ 3 ಟನ್ ಇಳುವರಿ ಬಂದಿದೆ. ಕಬ್ಬು ಹಾಗೂ ಉಳ್ಳಾಗಡ್ಡಿ ಬದಲು ಹಾಗಲಕಾಯಿ ಬೆಳೆಯುವುದು ಬಹಳ ಉತ್ತಮ ಎನ್ನುತಾರೆ ರೈತ ಸಂಗನಗೌಡ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT