ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತೋಟಕ್ಕೆ ರೆಕ್ಕೆ ಅವರೆ

Last Updated 24 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ರೆಕ್ಕೆ ಅವರೆ (ವಿಂಗ್ಡ್ ಬೀನ್), ಅತಿ ಹೆಚ್ಚು ಪ್ರೋಟಿನ್ ಅಂಶವಿರುವ ತರಕಾರಿ. ಇಂಥ ಪೌಷ್ಟಿಕಾಂಶಯುಕ್ತ ಬೆಳೆಯನ್ನು ಸಮರ್ಪಕವಾಗಿ ಬಳಸಲಾಗದೇ, ಜನರಿಂದ ದೂರವಾಗಿದೆ. ಒಂದೇ ಒಂದು ಬಳ್ಳಿಯಿಂದ ನಾಲ್ಕೈದು ಸದಸ್ಯರಿರುವ ಒಂದು ಕುಟುಂಬಕ್ಕೆ ಪೌಷ್ಟಿಕ ಆಹಾರ ಪೂರೈಸುವ ಈ ತರಕಾರಿಗೆ ಮನೆಯಂಗಳದ ಕೈತೋಟದಲ್ಲೂ ಸರಿಯಾಗಿ ಜಾಗ ಸಿಕ್ಕಿಲ್ಲ.

ಈ ಬಳ್ಳಿಯ ಹೂವು, ಮೊಗ್ಗು, ಕಾಯಿ, ಬೀಜ ಎಲ್ಲವನ್ನೂ ಆಹಾರವಾಗಿ ಬಳಸಬಹುದು. ಇದನ್ನು ಗಮನಿಸಿದ ಬೆಂಗಳೂರಿನ ಪೈಪಲ್‌ ಟ್ರೀ ಸಂಸ್ಥ ‘ಹವಾಮಾನ ಬದಲಾವಣೆ’ ಯೋಜನೆಯ ಭಾಗವಾಗಿ ರೆಕ್ಕೆ ಅವರೆಯನ್ನು ಜನರ ಬಳಿಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ. ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ಭಾಗದ ರೈತರಿಗೆ ಕೈತೋಟದಲ್ಲಿ ಈ ಬಳ್ಳಿ ತರಕಾರಿ ಬೆಳೆಸಲು ಉತ್ತೇಜಿಸಿದೆ. ರೈತರಿಗೆ ಇದರ ಬೀಜ ಕೊಟ್ಟು, ಅವರ ಕೈತೋಟದಲ್ಲೇ ಬೀಜ ಸಂವರ್ಧನೆ ಮಾಡಿಸಿ, ಬಂದಂತಹ ಬೀಜವನ್ನು ಉಳಿದ ರೈತರಿಗೂ ಹಂಚಿಕೆ ಮಾಡುತ್ತಿದೆ. ಇದಕ್ಕಾಗಿ ಕೈತೋಟಗಳಲ್ಲಿ ತರಕಾರಿ ಬೆಳೆಸುವ ಪ್ರಾತ್ಯಕ್ಷಿಕೆ ನೀಡುತ್ತಿದೆ.

‘ಕಳೆದ ವರ್ಷ ಮನೆಯ ಹಿತ್ತಲಿನಲ್ಲಿ ರೆಕ್ಕೆ ಅವರೆಯ ನಾಲ್ಕೈದು ಬಳ್ಳಿಗಳನ್ನು ಬೆಳಸಿದ್ದೆ, ಈ ವರ್ಷ ಮುಂಗಾರಿನ ಮಳೆಗೆ ಮಣ್ಣಿನಲ್ಲಿದ್ದ ಗೆಡ್ಡೆಗಳು ಚಿಗುರಿ ಬೇಗ ಕಾಯಿಗಳನ್ನು ಬಿಟ್ಟಿವೆ. ಈ ವರ್ಷ ನಿರಂತವಾಗಿ ಮಳೆ ಸುರಿದಿದ್ದರಿಂದ ಹಿತ್ತಲಿನಲ್ಲಿದ್ದ ಬೇರೆ ಬಳ್ಳಿ ತರಕಾರಿಗಳ ಸರಿಯಾಗಿ ಬೆಳೆಯಲಿಲ್ಲ. ಆದರೆ ರೆಕ್ಕೆ ಅವರೆ ಮಾತ್ರ ಸೋಲದೇ, ಭರ್ತಿ ಕಾಯಿ ಬಿಟ್ಟಿದೆ. ವಾರದಲ್ಲಿ ಎರಡು ಮೂರು ಬಾರಿ ಇದನ್ನು ತರಕಾರಿಯಾಗಿ ಅಡುಗೆಗೆ ಬಳಸುತ್ತೇನೆ’ ಎನ್ನುತ್ತಾರೆ ಹೆಗ್ಗಡದೇವನ ಕೋಟೆ ತಾಲ್ಲೂಕು ಹುಣಸೆಕೊಪ್ಪದ ರತ್ನಮ್ಮ.

ಗೆಣ್ಣು ಗೆಣ್ಣಿಗೂ ಹೊಸ ಬಳ್ಳಿ: ಬಳ್ಳಿ ಜಾತಿಯ ರೆಕ್ಕೆ ಅವರೆ ಬಿತ್ತಿದ ಒಂದೆರೆಡು ತಿಂಗಳಲ್ಲೇ ಗೆಣ್ಣು –ಗೆಣ್ಣಿಗೂ ಹೊಸ ಹೊಸ ಬಳ್ಳಿಗಳು ಚಿಗುರಿ ಮೂರರಿಂದ ನಾಲ್ಕು ಮೀಟರ್ ಎತ್ತರಕ್ಕೆ ಬೆಳದು ಹರಡಿಕೊಳ್ಳುತ್ತದೆ. ಎಲೆ ಮತ್ತು ಕಾಯಿಗಳು ಗಾಢ ಹಸಿರು ಬಣ್ಣದಲ್ಲಿರುತ್ತವೆ. ಬಿತ್ತನೆ ಮಾಡಿದ ನಾಲ್ಕು ತಿಂಗಳಿಗೆ ಫಸಲು ಪ್ರಾರಂಭವಾಗುತ್ತದೆ. ಎರಡೂವರೆ ತಿಂಗಳವರೆಗೂ ಗೊಂಚಲು ಗೊಂಚಲು ಕಾಯಿಗಳನ್ನು ಬಿಡುತ್ತಿರುತ್ತಿದೆ.

ಬೇಲಿ ಮೇಲೆ ರೆಕ್ಕೆ ಅವರೆ
ಬೇಲಿ ಮೇಲೆ ರೆಕ್ಕೆ ಅವರೆ

ರೆಕ್ಕೆ ಅವರೆಯ ಎಳೆಯ ಕಾಯಿಗಳಷ್ಟೇ ಉತ್ತಮ ತರಕಾರಿ. ಕಾಯಿಯ ಎರಡು ಕಡೆ ಹಿಡಿದು ಮುರಿದಾಗ ನಾರಿಲ್ಲದೆ ಸರಾಗವಾಗಿ ಎರಡು ಭಾಗವಾಗಬೇಕು. ಬಲಿತು ನಾರು ಆಗಿಬಿಟ್ಟರೆ ಪ್ರಯೋಜನವಿಲ್ಲ. ಆದ್ದರಿಂದ ಎಳೆಯದರಲ್ಲೇ (ಪೀಚಾದ 10 ದಿನಗಳ ಒಳಗೆ) ಎಳೆಯ ಕಾಯಿಗಳನ್ನು ಅಡುಗೆಗೆ ಬಳಸುವುದು ಉತ್ತಮ. ಕಾಯಿಗಳು ಮಾತ್ರವಲ್ಲ, ಬಳ್ಳಿಯ ಕುಡಿ (ಚಿಗುರೆಲೆ), ಹೂವು, ಮೊಗ್ಗುಗಳನ್ನು ಕೂಡ ಸೊಪ್ಪು ತರಕಾರಿಯಾಗಿ ಬಳಸಬಹುದು. ಕಾಯಿ ಬಲಿತು ಒಣಗಿದ ಮೇಲೆ ಕಾಳುಗಳನ್ನು ಶೇಖರಿಸಿಟ್ಟುಕೊಂಡರೆ, ಅದನ್ನು ಹುರಿದು ಅಥವಾ ಬೇಯಿಸಿ ತಿನ್ನಬಹುದು. ‘ಒಣಕಾಳುಗಳಲ್ಲಿ ‘ಎ’ ಜೀವಸತ್ವ ಅಧಿಕವಾಗಿದೆ ಎನ್ನುತ್ತಾರೆ ಆಹಾರ ತಜ್ಞ ಕೆ.ಸಿ.ರಘು.

ರೆಕ್ಕೆ ಅವರೆ ಬೇರು ಸಮೂಹ ದೊಡ್ಡದಿದ್ದು ಗೆಡ್ಡೆಗಳಾಗಿ ರೂಪಾಂತರಗೊಳ್ಳುತ್ತವೆ. ಈ ಗೆಡ್ಡಗಳನ್ನೂ ಬೇಯಿಸಿ ತಿನ್ನಬಹುದು. ಆಲೂಗೆಡ್ಡೆಯಲ್ಲಿ ಮಾಡುವಂತೆ ಚಿಪ್ಸ್ ಕೂಡ ಮಾಡಬಹುದು. ‘ಎಳೆ ಕಾಯಿಯಿಂದ ಬೇರೆ ಬೇರೆ ತರಕಾರಿಗಳ ಜತೆ ಸೇರಿಸಿ ಕೂಟು ಮಾಡಬಹುದು. ಪಲ್ಯ ತಯಾರಿಸಬಹುದು. ಒಣಗಿದ ಕಾಳನ್ನು ನೆನೆಸಿಟ್ಟು, ಒಣಗಿಸಿದರೆ ಬಹಳ ದಿನ ಕಾಪಿಟ್ಟು ಬಳಸಬಹುದು’ ಎನ್ನುತ್ತಾರೆ ತಾರಸಿ ತೋಟ ಪರಿಣತೆ ಬೆಂಗಳೂರಿನ ಅನುಸೂಯಾ ಶರ್ಮಾ.

ರೆಕ್ಕೆ ಅವರೆ ಬೇರು ಸಮೂಹ ಜಾಲದಂತಿದ್ದು ಬೇರು ಗಟ್ಟುಗಳು ಹೆಚ್ಚಾಗಿರುತ್ತವೆ. ದ್ವಿದಳ ಗುಂಪಿಗೆ ಸೇರಿದ ಸಸ್ಯವಾದ್ದರಿಂದ ಬೇರು ಗಟ್ಟುಗಳಲ್ಲಿರುವ ರೈಜೋಬಿಯಂ ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಂಡು ಮಣ್ಣಿಗೆ ಸೇರಿಸುವುದರಿಂದ ಮಣ್ಣು ಫಲವತ್ತಾಗುತ್ತದೆ. ಇದನ್ನು ಉತ್ತಮ ಹಸಿರೆಲೆ ಗೊಬ್ಬರ, ಹೊದಿಕೆ ಬೆಳೆ, ಮೇವಿನ ಬೆಳೆಯಾಗಿ ಕೂಡ ಬೆಳೆಯಬಹುದು.

ಬೆಳಸುವ ವಿಧಾನ: ಈ ಬಳ್ಳಿಯನ್ನು ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ನಾಟಿ ಮಾಡಬಹುದು. ಗಿಡದಿಂದ ಗಿಡಕ್ಕೆ 4 ರಿಂದ 5 ಅಡಿ ಅಂತರ ಬಿಟ್ಟು ನಾಟಿ ಮಾಡಬೇಕು. ಅದಕ್ಕೂ ಮುನ್ನ 1 ಅಡಿ ಸುತ್ತಳತೆ ಹಾಗೂ 1 ಅಡಿ ಅಳದ ಗುಂಡಿ ತೆಗೆದು 4 ರಿಂದ 5 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ನಾಟಿ ಮಾಡುವ ಗುಣಿಗೆ 2 ರಿಂದ 3 ಬೀಜಗಳನ್ನು ಊರಬೇಕು.

ಬೀಜಗಳು ಮೊಳೆತು ಬಳ್ಳಿ ಹಬ್ಬಲು ಆರಂಭವಾಗುತ್ತದೆ. ಆಗ ಚಪ್ಪರ, ಮರ, ಗಿಡ ಅಥವಾ ಮುಳ್ಳಿನ ಬೇಲಿಯ ಆಸರೆ ಕೊಡಬೇಕು. ಮಣ್ಣಿನಲ್ಲಿನ ತೇವಾಂಶ ನೋಡಿಕೊಂಡು ಪ್ರತಿ 15 ದಿವಸಗಳಿಗೊಮ್ಮೆ ನೀರು ಕೊಡಬೇಕು. ಬಿತ್ತಿದ ನಂತರ 7 ಹಾಗೂ 8 ತಿಂಗಳುಗಳಲ್ಲಿ ಬೇರು ಗೆಡ್ಡೆಗಳಾಗಿ ರೂಪಗೊಳ್ಳುತ್ತವೆ. ಬೇಸಿಗೆ ಕಾಲದಲ್ಲಿ ಮಣ್ಣಿನೊಳಗಿರುವ ತೇವದಲ್ಲೇ ಗೆಡ್ಡೆಗಳು ಜೀವಂತವಾಗಿದ್ದು, ಮುಂಗಾರು ಮಳೆಯ ಮಳೆ ಹನಿಗಳು ಭೂಮಿಗೆ ಮುತ್ತಿಕ್ಕುತ್ತಿದ್ದಂತೆ, ಚಿಗುರಲಾರಂಭಿಸುತ್ತವೆ.

ರೆಕ್ಕೆ ಅವರೆ ಕೈ ತೋಟಕ್ಕೆ ಸೂಕ್ತವಾದ ತರಕಾರಿ ಬೆಳೆ. ಬೇಲಿ ಅಥವಾ ತೋಟದ ಅಂಚಿನಲ್ಲಿ ಬೆಳೆಸಬಹುದು. ಈ ತರಕಾರಿ ಬೀಜದಲ್ಲಿ ಗೇಣುದ್ದ ಮತ್ತು ಮೊಳದುದ್ದದ ಎರಡು ತಳಿಗಳಿವೆ. ಅವೆರಡನ್ನೂ ಆರಂಭದಲ್ಲಿ ರೈತರಿಗೆ ವಿತರಿಸಲಾಗಿತ್ತು. ಆ ತಳಿಗಳನ್ನು ಕೈ ತೋಟಗಳಲ್ಲಿ ಬೆಳೆಸಿ ಬೀಜ ಸಂವರ್ಧನೆ ಮಾಡಿ, ಈಗ ಬೇರೆ ಬೇರೆ ರೈತರಿಗೂ ವಿತರಿಸಲಾಗುತ್ತಿದೆ. ರೆಕ್ಕೆ ಅವರೆಯ ತಳಿ ಬೆಳಸಲು ಆಸಕ್ತಿ ಇರುವವರು ಬೀಜಗಳಿಗೆ ಮೊಬೈಲ್ 9945219836 ಸಂಪರ್ಕಸಿಬಹುದು.

ಬೀಜದ ಆಯ್ಕೆ

ರೆಕ್ಕೆ ಅವರೆ ಕಾಯಿಗಳನ್ನು ಗಿಡದಲ್ಲೇ ಒಣಗಲು ಬಿಟ್ಟು ನಂತರ ಗಿಡದಿಂದ ಸಂಗ್ರಹಿಸಿ, ಬಿಸಿಲಿನಲ್ಲಿ ತಳ್ಳಾಗುವಂತೆ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಮೇ, ಜೂನ್ ಜುಲೈ ತಿಂಗಳುಗಳಲ್ಲಿ ಬಿತ್ತನೆಗೆ ಮುನ್ನು ಕಾಯಿಗಳಿಂದ ಬೀಜಗಳನ್ನ ಬೇರ್ಪಡಿಸಿ, ಒಣಗಿಸಿ, ಬಿತ್ತನೆ ಮಾಡಬೇಕು.

ವಿಂಗಡ್ ಬೀನ್‌ಗೆ ವಿವಿಧ ಹೆಸರು :

ರೆಕ್ಕ ಅವರೆ ದ್ವಿದಳ ಧಾನ್ಯ ಲೆಗ್ಯುಮಿನೇಸಿ ಕುಟುಂಬದ ಪಾಪಿಲಿಯೋನೇಸಿ ಉಪ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಸೋಪೋಕಾರ್ಪಸ್ ಟೆಟ್ರಾಗೋನಾ. ಕನ್ನಡದಲ್ಲಿ ರೆಕ್ಕೆ ಅವರೆ, ಚತುರ್ಬುಜ ಅವರೆ, ಗರಗಸದ ಅವರೆ, ಮತ್ತಿ ಅವರೆ, ಗೋವಾ ಅವರೆ, ಎಂಬ ಹೆಸರುಗಳಿವೆ. ಇಂಗ್ಲಿಷ್‌ನಲ್ಲಿ ಮನಿಲ್ಲಾಬೀನ್, ಪ್ರಿನ್ನೆಸ್‍ಪೀ, ವಿಂಗಡ್‍ಬೀನ್ ಎಂದೆಲ್ಲಾ ಕರೆಯುತ್ತಾರೆ. ವಿಂಗಡ್‍ಬೀನ್ ಎನ್ನುವುದು ಬಳಕೆಯಲ್ಲಿರುವ ಹೆಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT