ಶುಕ್ರವಾರ, ಜೂಲೈ 10, 2020
24 °C

ದಿಲ್ಲಿ ಮಾರುಕಟ್ಟೆಗೆ ಬಾಗೇವಾಡಿ ಬಾಳೆ

ಚಂದ್ರಹಾಸ ಚಾರ್ಮಾಡಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಚಿಕ್ಕಅಸಂಗಿಯ ಬಿ.ಎಚ್.ಯಂಕಣ್ಣ ಅವರದ್ದು ಒಟ್ಟು ಮೂರು ಎಕರೆ ಜಮೀನು. ಎರಡು ಎಕರೆಯಲ್ಲಿ ಐದುನೂರು ಮಹಾಗನಿ ಮತ್ತು ಐನೂರು ಶ್ರೀಗಂಧದ ಗಿಡಗಳನ್ನು ನಾಟಿ ಮಾಡಿದ್ದಾರೆ. ಅವುಗಳ ನಡುವೆ ಅಂತರ ಬೆಳೆಯಾಗಿ ರೇಷ್ಮೆ ಗಿಡಗಳಿವೆ. ಉಳಿದ ಒಂದು ಎಕರೆಯಲ್ಲಿ ವೀಳ್ಯೆದೆಲೆ ಕೃಷಿ ಇದೆ.

ವೀಳ್ಯೆದೆಲೆ ಪೂರ್ವದಿಂದಲೂ ಬೆಳೆಯುತ್ತಿರುವ ಬೆಳೆ. ಇದಕ್ಕೆ ಉತ್ತಮ ಮಾರುಕಟ್ಟೆ ಇದೆ. ಆದರೆ, ಉಳಿದ ಜಮೀನಿನಲ್ಲಿರುವ ಬೆಳೆಯಿಂದ ಸರಿಯಾದ ಆರ್ಥಿಕ ಆದಾಯವಿಲ್ಲ. ನಾಲ್ಕು ವರ್ಷಗಳಿಂದ ಮಳೆಯಿಲ್ಲದ ಕಾರಣ, ಕೊಳವೆಬಾವಿ, ತೆರೆದಬಾವಿ ನೀರಿನಲ್ಲೇ ಈ ಎಲ್ಲ ಬೆಳೆ ಬೆಳೆಯುತ್ತಿದ್ದಾರೆ. ಜಮೀನಿನ ಕೊರತೆಯ ಕಾರಣ, ಪಕ್ಕದ ನಾಲ್ಕು ಎಕರೆ ಜಮೀನನ್ನು ಗುತ್ತಿಗೆ ಪಡೆದು, ಅದರಲ್ಲಿ ಈ ಬಾರಿ ಎರಡು ಎಕರೆಯಲ್ಲಿ ಬಾಳೆ, ಎರಡು ಎಕರೆಯಲ್ಲಿ ಕಲ್ಲಂಗಡಿ, ಜತೆಗೆ ಅಂತರ ಬೆಳೆಯಾಗಿ ಈರುಳ್ಳಿ, ಗೋವಿನ ಜೋಳ, ನುಗ್ಗೆಯೂ ಇದೆ.

ಯಂಕಣ್ಣ ಅವರ ಬಾಳೆ ಕೃಷಿ ವಿಶಿಷ್ಟವಾಗಿದೆ. ಮಾತ್ರವಲ್ಲ, ಅವರ ಅದನ್ನು ಮಾರುಕಟ್ಟೆ ಮಾಡುವುದೂ ಅಷ್ಟೇ ವಿಶಿಷ್ಟವಾಗಿದೆ. ಅವರು ಎರಡು ಎಕರೆಯಲ್ಲಿ ಜಿ9 ತಳಿ ಬಾಳೆ ನಾಟಿ ಮಾಡಿದ್ದರು. ಎರಡು ವರ್ಷಗಳ ಹಿಂದಿನವರೆಗೂ ರಾಸಾಯನಿಕ ಕೃಷಿ ಪದ್ಧತಿಯಲ್ಲೇ ಬಾಳೆ ಬೆಳೆಯುತ್ತಿದ್ದರು. ರಸಗೊಬ್ಬರ ಬಳಕೆಯಿಂದಾಗಿ ಮಣ್ಣಿನ ಸತ್ವ ಕ್ಷೀಣಿಸಿತು. ನಿರೀಕ್ಷಿಸಿದಷ್ಟು ಬಾಳೆ ಗೊನೆ ಇಳುವರಿ ನೀಡಲಿಲ್ಲ. ಅತ್ತ ಕಲ್ಲಂಗಡಿಯೂ ಕೈ ಕೊಟ್ಟಿತು. ನಷ್ಟ ಅನುಭವಿಸಿದರು. ಇದೇ ವೇಳೆ ರಸಗೊಬ್ಬರ ಬಿಟ್ಟು, ಸಾವಯವ ಗೊಬ್ಬರ ಬಳಸಿ ಬಾಳೆ ಬೆಳೆಯುವ ಕುರಿತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತರಬೇತಿ ಪಡೆದರು.  ಸಾವಯವ ಗೊಬ್ಬರಕ್ಕಾಗಿಯೇ, ಹಸುಗಳು, ಮೇಕೆ ಸಾಕಾಣೆ ಆರಂಭಿಸಿದರು.

ಸಾವಯವ ಪದ್ಧತಿಯಲ್ಲಿ ಜಿ9 ಬಾಳೆ

ಸಾವಯವ ಕೃಷಿ ಪದ್ಧತಿಯಲ್ಲಿ ಬಾಳೆ ಸಸಿ ನಾಟಿ ಮಾಡಲು ಗುಂಡಿ ತೆಗೆಸಿ, ಪ್ರತಿ ಗುಂಡಿಗೆ ಅರ್ಧ ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕಿಸಿದರು. ಒಂದು ಸಸಿಗೆ ₹16.50 ರಂತೆ 2750 ಸಸಿಗಳನ್ನು ತರಿಸಿ ನಾಟಿ ಮಾಡಿಸಿದರು. ಜೂನ್ ತಿಂಗಳಲ್ಲಿ ನಾಟಿ ಮಾಡಿ, ಪ್ರತಿ ಸಸಿಯ ಬುಡಕ್ಕೆ ಅರ್ಧ ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕಿಸಿದರು. ಮುಂದೆ ಮೂರು ತಿಂಗಳಿಗೊಂದು ಬಾರಿಯಂತೆ ಬುಡಕ್ಕೆ ಒಂದು ಬುಟ್ಟಿ ಮೇಲ್ಗೊಬ್ಬರ ಪೂರೈಸಿದರು. ಮೂರು ದಿನಕ್ಕೊಂದು ಬಾರಿಯಂತೆ ಆರು ಗಂಟೆಗಳ ಕಾಲ ಹನಿ ನೀರಾವರಿ ಮೂಲಕ ಪ್ರತಿ ಗಿಡಕ್ಕೆ ನೀರು ಕೊಟ್ಟರು.

ಸಸಿ ನಾಟಿ ಮಾಡಿ 13 ತಿಂಗಳ ನಂತರ ಗೊನೆ ಕಟಾವಿಗೆ ಬಂತು. ಎರಡು ಎಕರೆಯಲ್ಲಿ ನಾಟಿ ಮಾಡಿದ್ದ 2750 ಸಸಿಗಳಲ್ಲಿ 2500 ಗಿಡಗಳು ಉತ್ತಮ ಗೊನೆ ಬಿಟ್ಟವು. ಒಂದೊಂದು ಗೊನೆ 36 ಕೆಜಿಯಷ್ಟು ತೂಗಿತು. ಅವುಗಳನ್ನು ಮಾರುಕಟ್ಟೆಗೆ ಕಳಿಸಿದರು. ಉಳಿದ ಬಾಳೆ ಗಿಡಗಳಲ್ಲೂ ಗೊನೆ ಬಿಟ್ಟಿದ್ದರೂ ಗಾತ್ರದಲ್ಲಿ ತುಸು ಸಣ್ಣದಾಗಿದ್ದವು.

ಖರ್ಚು – ವೆಚ್ಚ

‘ಆರಂಭದಲ್ಲಿ ಹನಿ ನೀರಾವರಿ, ಸಸಿ ಖರೀದಿ.. ಹೀಗೆ ಎಲ್ಲಾ ಸೇರಿ ಎರಡು ಎಕರೆಗೆ ₹4 ಲಕ್ಷದಿಂದ ₹5ಲಕ್ಷ ಖರ್ಚಾಯಿತು. ಆದರೆ ಮೊದಲ ಬೆಳೆಯಲ್ಲೇ ₹3.50 ಲಕ್ಷ ಆದಾಯ ಪಡೆದಿದ್ದರಿಂದ, ಹೆಚ್ಚು ನಷ್ಟ ಎನ್ನಿಸಲಿಲ್ಲ’ ಎಂಬುದು ಅವರ ಅಭಿಪ್ರಾಯ. ಸಾವಯವ ಕೃಷಿ ಪದ್ಧತಿಯಲ್ಲಿ ಬಾಳೆ ಬೆಳೆದಿದ್ದರಿಂದ ಗಿಡಗಳಿಗೆ ಆಧಾರ ನೀಡದಿದ್ದರೂ, ಗೊನೆಗಳು ಮುರಿದು ಬೀಳಲಿಲ್ಲ. ನಿರೀಕ್ಷೆಗಿಂತಲೂ ಹೆಚ್ಚು ಇಳುವರಿ ಬಂತು. ಬಾಳೆಯ ರೆಂಬೆಗಳನ್ನು ಕತ್ತರಿಸಬಾರದು. ಕತ್ತರಿಸಿದರೆ ಇಳುವರಿ ಕಡಿಮೆಯಾಗುತ್ತದೆಯಂತೆ. ಗೊನೆ ಬಿಟ್ಟ ನಂತರ ಹೊಂಬಾಳೆ
ಯನ್ನು ಕತ್ತರಿಸಿ ತೆಗೆಯಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಉತ್ತಮ ಮಾರುಕಟ್ಟೆ

ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಬಾಳೆಗೆ ₹7.50ಯಂತೆ ಖರೀದಿಸುತ್ತಾರೆ. ಅದಕ್ಕಾಗಿಯೇ ಯಂಕಣ್ಣ ಅವರು ಸ್ಥಳೀಯ ಮಾರುಕಟ್ಟೆ ಅವಲಂಬಿಸುವುದು ತೀರಾ ಕಡಿಮೆ. ಏಕೆಂದರೆ, ದೆಹಲಿಯ ಮಾರಾಟಗಾರರು ಇವರ ತೋಟಕ್ಕೇ ಬಂದು ಬಾಳೆ ಗೊನೆಗಳನ್ನು ಖರೀದಿಸುತ್ತಾರಂತೆ. ಇವರು ತೋಟದ ಬಾಳೆ ಹಣ್ಣುಗಳು ಸಾವಯವದಲ್ಲೇ ಬೆಳೆದಿದ್ದು ಎಂಬುದರ ಬಗ್ಗೆ ಪರೀಕ್ಷೆ ಮಾಡಿಸಿ, ದೃಢೀಕೃತ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಇತ್ತೀಚೆಗೆ ದೆಹಲಿ ಮಾರುಕಟ್ಟೆಯವರು ಕ್ವಿಂಟಾಲ್‍ಗೆ ₹ 1,070 ಬೆಲೆ ನಿಗದಿ ಮಾಡಿ, ಬಾಳೆ ಖರೀದಿಸಿದ್ದಾರೆ. ಈಗಾಗಲೇ ಮೊದಲ ಬೆಳೆ ಮಾರಾಟವಾಗಿದೆ. ಎರಡನೇ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ಕಾರ್ಮಿಕ ಅವಲಂಬನೆ ಕಡಿಮೆ

ತೋಟದ ಹೆಚ್ಚಿನ ಕೆಲಸಗಳಿಗೆ ಆಳಿನ ಅವಲಂಬನೆ ಕಡಿಮೆ. ಗೊನೆ ಕಟಾವು ಶ್ರಮ ಬಯಸುವ ಕೆಲಸ. ಆದರೆ ಆ ಕೆಲಸವನ್ನು ಖರೀದಿದಾರರೇ ಮಾಡುತ್ತಾರೆ. ಆ ತಲೆನೋವು ಇವರಿಗಿಲ್ಲ. ಒಮ್ಮೆ ಸಸಿ ನೆಟ್ಟರೆ, ಅದರಿಂದ ಎರಡು ಬೆಳೆ ಪಡೆಯುತ್ತಾರೆ. ‘ಬಾಳೆಗೆ ಬಿಸಿಲು ಅಗತ್ಯ. ನೀರಾವರಿಯೂ ಇರಬೇಕು. ಸಾವಯವ ವಿಧಾನದಲ್ಲಿ ಬೆಳೆಯುವುದರಿಂದ ರೋಗಗಳು ಕಡಿಮೆ. ಮೂರನೇ ಬೆಳೆಗೆ ಸಸಿ ನೆಡುವಾಗ ಜಾಗ ಬದಲಾಯಿಸಬೇಕು’ ಎನ್ನುತ್ತಾರೆ ಯಂಕಣ್ಣ.

ಯಂಕಣ್ಣನವರ ತಂದೆ ಭೀಮಪ್ಪ ಅವರಿಗೆ 94 ವರ್ಷ. ಅವರು ಈಗಲೂ ಮಗನಿಗೆ ತೋಟದ ಕೆಲಸದಲ್ಲಿ ಸಾಥ್ ನೀಡುತ್ತಿದ್ದಾರೆ. ಹೈನುಗಾರಿಕೆ ಮತ್ತು ಮೇಕೆ ಸಾಕಾಣೆ ಜವಾಬ್ದಾರಿ, ಯಂಕಣ್ಣನವರ ಪತ್ನಿ ವಾಣಿಶ್ರೀಯವರದ್ದು. ಹೀಗೆ ಇಡೀ ಕುಟುಂಬವೇ ತೋಟದ ಕೆಲಸಕ್ಕೆ ನಿಂತ ಕಾರಣದಿಂದಲೇ, ಬಾಳೆ ಕೃಷಿ ಯಶಸ್ವಿಯಾಗಲು ಸಾಧ್ಯವಾಗಿದೆ.  ಬಾಳೆ ಕೃಷಿ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ : 9110890840.

**
ಗಂಜಲ, ಗೊಬ್ಬರ, ಘಟಕಗಳು

ಬಾಳೆ ಕೃಷಿಗೆ ಸಾವಯವ ಗೊಬ್ಬರ ಪೂರೈಸಲು ಯಂಕಣ್ಣನವರು ವಿವಿಧ ಘಟಕಗಳನ್ನು ಮಾಡಿದ್ದಾರೆ. ಅದರಲ್ಲಿ ‘ಗಂಜಲ ಘಟಕ’ವೂ ಒಂದು. ಘಟಕದ ವಿವರ ಹೀಗಿದೆ; 24 ಅಡಿ ಉದ್ದ, 10 ಅಡಿ ಅಗಲ, 10 ಅಡಿ ಆಳದ ಗಂಜಲ ಗುಂಡಿ. ತಳಭಾಗಕ್ಕೆ 1.5 ಅಡಿ ಕೆರೆಮಣ್ಣು ಅದರ ಮೇಲೆ 1.5 ಅಡಿ ಸೆಗಣಿ ಹರಡಿದ್ದಾರೆ. ದನದ ಕೊಟ್ಟಿಗೆಯಿಂದ ಪೈಪ್ ಮೂಲಕ ಗಂಜಲ ನೇರವಾಗಿ ಈ ಗುಂಡಿಯನ್ನು ಸೇರುವಂತೆ ಕೊಳವೆ ಜೋಡಿಸಿದ್ದಾರೆ. ‘ಹೀಗೆ ಗಂಜಲವನ್ನು ಹೀಗೆ ಸಂಗ್ರಹಿಸಿದರೆ ಎರಡು ವರ್ಷಗಳವರೆಗೆ ಸಂರಕ್ಷಿಸಬಹುದು. ಘಟಕದಿಂದ ನೇರವಾಗಿ ಗಂಜಲ ಪೈಪ್ ಅನ್ನು ಬಾಳೆ ತೋಟಕ್ಕೆ ಜೋಡಿಸಿದ್ದೇನೆ. ಹೀಗಾಗಿ ಕೊಟ್ಟಿಗೆಯಿಂದಲೇ ಬಾಳೆಗೆ ಗಂಜಲ ಪೂರೈಕೆಯಾಗುತ್ತದೆ’ ಎನ್ನುತ್ತಾರೆ ಯಂಕಣ್ಣ.

ಜೀವಾಮೃತ: ಒಂದು ಪಾತ್ರೆಗೆ 400 ಲೀಟರ್ ಗಂಜಲ ಹಾಕಿ ಅದಕ್ಕೆ ಐದು ಕೆ.ಜಿ ಬೆಲ್ಲ, ಐದು ಕೆ.ಜಿ ಕಡ್ಲೆಹಿಟ್ಟು, ಮೂರು ಕೆ.ಜಿ ಹೆಸರು ಹಿಟ್ಟನ್ನು ಹಾಕಿ ಹತ್ತು ದಿನಗಳವರೆಗೆ ದಿನಕ್ಕೆ ಅರ್ಧ ತಾಸಿನಂತೆ ಚೆನ್ನಾಗಿ ಕಲಸಿ ಜೀವಾಮೃತ ತಯಾರಿಸುತ್ತಾರೆ. ‘ಇದನ್ನು ಬಾಳೆಗಿಡಗಳ ಬುಡಕ್ಕೆ ನಿಯಮಿತವಾಗಿ ಪೂರೈಸುವುದರಿಂದ ಬಾಳೆಗಿಡದ ಜತೆಗೆ, ಕಾಯಿಯ ಗಾತ್ರವು ಉತ್ತಮವಾಗಿರುತ್ತದೆ’ ಎಂಬುದು ಅವರ ಅನುಭವದ ಮಾತು.‌

ನೈಸರ್ಗಿಕ ಡಿಎಪಿ: ರಸ ಗೊಬ್ಬರದಷ್ಟೇ ಸತ್ವ ನೀಡಬಲ್ಲ ಸಾವಯವ ಡಿಎಪಿ ತಯಾರಿಸುತ್ತಾರೆ ಯಂಕಣ್ಣ. ಮೂರು, ಮೂರು ಅಡಿ ಸುತ್ತಳತೆ. ಎರಡೂವರೆ ಅಡಿ ಆಳವಾಗಿ ಗುಂಡಿ ತೋಡಿ ಅದಕ್ಕೆ ಒಂದುವರೆ ಕ್ವಿಂಟಲ್‍ನಷ್ಟು ಫಲವತ್ತಾದ ಕೆರೆ ಮಣ್ಣನ್ನು ಸುರಿಯಬೇಕು. 5 ಕೆ.ಜಿ ರಾಕ್‍ಪಾಸ್ಫೇಟ್ ಅನ್ನು 80 ಲೀಟರ್ ಗಂಜಲದೊಂದಿಗೆ ಮಿಶ್ರಣ ಮಾಡಿ ನೀಡಬೇಕು. ನಂತರ ಗುಂಡಿಗೆ ಗಾಳಿಯಾಡದಂತೆ ಮುಚ್ಚಬೇಕು. ಅರವತ್ತು ದಿನಗಳ ನಂತರ ಡಿಎಪಿ ಸಿದ್ಧಗೊಳ್ಳುತ್ತದೆ. ಈ ಅಳತೆಯ ಗುಂಡಿಯಲ್ಲಿ 2. 30 ಕ್ವಿಂಟಲ್‌ನಷ್ಟು ಡಿಎಪಿ ತಯಾರಾಗುತ್ತದೆ. ಪ್ರತಿ ಬಾಳೆ ಗಿಡದ ಬುಡಕ್ಕೆ 300 ಗ್ರಾಂ ಕೊಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು