ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏರು ಮಡಿ’ಯಲ್ಲಿ ಸಾವಯವ ತರಕಾರಿ

Last Updated 8 ಜುಲೈ 2019, 19:30 IST
ಅಕ್ಷರ ಗಾತ್ರ

ಸಾವಯವ ಹಾಲು ಉತ್ಪಾದನೆಯಲ್ಲಿ ಮುಂಚೂಣಿ ಯಲ್ಲಿರುವ ತುಮಕೂರು ಜಿಲ್ಲೆ ತಿಪಟೂರಿನ ಅಕ್ಷಯ ಕಲ್ಪ ಸಂಸ್ಥೆ, ಈಗ ಸಾವಯವ ತರಕಾರಿ ಬೆಳೆದು-ಗ್ರಾಹಕರಿಗೆ ತಲುಪಿಸುವ ‘ಮಾದರಿ’ಯೊಂದನ್ನು ರೂಪಿಸಿದೆ. ಒಂದು ಎಕರೆಯಲ್ಲಿ ‘ಏರು ಮಡಿ ಪದ್ಧತಿ’ಯಲ್ಲಿ ತರಕಾರಿ ಬೆಳೆದು, ಗ್ರಾಹಕರಿಗೆ ತಲುಪಿಸುತ್ತಿದೆ. ಮುಂದೆ ಈ ವಿಧಾನವನ್ನು ರೈತರು ಅಳವಡಿಸಿಕೊಂಡು ಸಾವಯವ ತರಕಾರಿ ಬೇಡಿಕೆಯನ್ನು ಪೂರೈಸುವಂತಾಗಲಿ ಎಂಬುದು ಸಂಸ್ಥೆಯ ಆಶಯ.

ಒಂದು ಸಂಜೆ. ದಸರಿಘಟ್ಟದ ಅಕ್ಷಯಕಲ್ಪ ಸಂಸ್ಥೆಯ ಕಾರ್ಯಕ್ಷೇತ್ರಕ್ಕೆ ಹೋಗಿದ್ದೆ. ಆಗ, ಅಲ್ಲಿ ಒಬ್ಬರು ತರಕಾರಿ ಗ್ರೇಡಿಂಗ್ ಮಾಡುತ್ತಿದ್ದರು. ಇನ್ನೊಬ್ಬರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತರಕಾರಿಯ ಪ್ಯಾಕಿಂಗ್ ಮಾಡುತ್ತಿದ್ದರು. ದೂರದಲ್ಲಿ ಎತ್ತರಿಸಿದ ಮಡಿಯಲ್ಲಿ ನಾಳೆ ಕೊಯ್ಲಿಗೆ ಬರುವ ತರಕಾರಿಗಳು ಚಿಗುರೊಡೆಯುತ್ತಿದ್ದವು.

‘ಇದು ಏರುಮಡಿ ಪದ್ಧತಿಯಲ್ಲಿ ಸಾವಯವ ಕೃಷಿ ವಿಧಾನದಲ್ಲಿ ತರಕಾರಿ ಬೆಳೆಸುವ ಪರಿ’ ಎಂದರು ಅಲ್ಲಿದ್ದ ಫಾರ್ಮ್‌ ಮ್ಯಾನೇಜರ್‌. ಅವರ ಮಾತನ್ನು ಸಾಕ್ಷ್ಯೀಕರಿಸುವಂತೆ ಒಂದು ಎಕರೆಯಲ್ಲಿ ಕಡಪ ಕಲ್ಲಿನ ರಕ್ಷಣೆಯಲ್ಲಿದ್ದ ಎತ್ತರಿಸಿದ ತಾಕುಗಳಲ್ಲಿ ವೈವಿಧ್ಯಮಯ ತರಕಾರಿಗಳು ಬೆಳೆದು ನಿಂತಿರುವುದು ಕಾಣುತ್ತಿದ್ದವು. ‘ಈ ಪದ್ಧತಿ ಅನುಸರಿಸುವುದರಿಂದ ವರ್ಷಪೂರ್ತಿ ನಿರಂತರವಾಗಿ ತರಕಾರಿಗಳನ್ನು ಬೆಳೆಯಬಹುದು’ ಎಂಬುದು ಅವರ ಮುಂದಿನ ವಿವರಣೆಯಾಗಿತ್ತು. ಈ ಸಂಸ್ಥೆ, ಆರಂಭಿಕ ಪ್ರಯತ್ನವಾಗಿ ಒಂದು ವರ್ಷದಿಂದ ತಮ್ಮ ಕಾರ್ಯಕ್ಷೇತ್ರದಲ್ಲೇ ತಮ್ಮ ಸಿಬ್ಬಂದಿ ನಿಯೋಜನೆಯೊಂದಿಗೆ ಈ ವಿಧಾನದಲ್ಲಿ ರಾಸಾಯನಿಕ ರಹಿತವಾಗಿ ತರಕಾರಿ ಬೆಳೆದು, ಗ್ರಾಹಕರಿಗೆ ಪೂರೈಸುತ್ತಿದೆ.

ಬೆಳೆಯುವ ವಿಧಾನ ಹೀಗಿದೆ

ಒಂದು ಎಕರೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಸುತ್ತಲೂ ಅಂಚಿನಲ್ಲಿ ಮಳೆನೀರು ಇಂಗಿಸಲು ಸಹಾಯವಾಗುವಂತೆ ಸಣ್ಣ ಕಾಲುವೆ ತೆಗೆದು ಅದರಲ್ಲಿ ಕರಿಬೇವು, ನುಗ್ಗೆ, ಪಪ್ಪಾಯಿ, ಬಾಳೆಯಂತಹ ತುಸು ಎತ್ತರ ಬೆಳೆಯುವ ಗಿಡಗಳನ್ನು ನಾಟಿ ಮಾಡಿದ್ದಾರೆ. ಅವು ಎತ್ತರಕ್ಕೆ ಬೆಳೆದು ನಿಂತಿವೆ. ಬೇಲಿಗಳಿಗೆ ಗೊಬ್ಬರದ ಗಿಡಗಳನ್ನು ಬೆಳೆಸಿದ್ದಾರೆ. ಅವುಗಳ ಮಧ್ಯೆ ಬಳ್ಳಿ ತರಕಾರಿಗಳಿಗೆ ಆದ್ಯತೆ. ಜಮೀನಿನ ಮತ್ತೊಂದು ಮೂಲೆ ನೆಡೆಫ಼್ ಮಾದರಿಯ ಗೊಬ್ಬರ (ತಟಿಕೆ ಗೊಬ್ಬರ ತಯಾರಿಕೆ ತರಹದ ವಿಧಾನ)ತಯಾರಿಗೆ ಮೀಸಲು. ಉಳಿದ ಜಾಗದ ಹತ್ತು ಗುಂಟೆಯಷ್ಟರಲ್ಲಿ ನಲವತ್ತೊಂದು ಏರುಮಡಿಗಳಿವೆ. ಪ್ರತಿಯೊಂದು ಮಡಿಯ ಅಳತೆ ನಾಲ್ಕು ಅಡಿ ಅಗಲ, ಎಪ್ಪತ್ತು ಅಡಿ ಉದ್ದ. ಕೆಂಪುಮಣ್ಣು, ಕೆರೆಗೋಡು, ಇದ್ದಿಲು, ಕಾಂಪೋಸ್ಟ್ ಗೊಬ್ಬರವನ್ನು ಮಿಶ್ರ ಮಾಡಿ ಪ್ರತಿ ಏರುಮಡಿ ಮಾಡಿದ್ದಾರೆ. ಮಡಿಗಳಲ್ಲಿ ತರಕಾರಿಗಳನ್ನು ಬೆಳೆಸಿ, ಅದನ್ನು ಕೊಯ್ಯಲು, ನಿರ್ವಹಣೆ ಮಾಡುವುದಕ್ಕಾಗಿ ಮಡಿಗಳ ನಡುವೆ ಜಾಗ ಬಿಟ್ಟಿದ್ದಾರೆ.

ಹನಿ ಹನಿ ನೀರ ಹನಿ

ತರಕಾರಿ ಕೃಷಿ ಸಂಪೂರ್ಣ ಟ್ಯಾಂಕರ್ ನೀರಿನ ಆಧಾರಿತ. ಆದರೆ, ಪ್ರತಿ ಮಡಿಗೂ ಅಡಿಗೆ ಒಂದರಂತೆ ಮೂರು ಡ್ರಿಪ್ ಪೈಪ್ ಅಳವಡಿಸಿದ್ದಾರೆ. ಡ್ರಾಪರ್‌ನಿಂದ ನೀರುಣಿಸುತ್ತಾರೆ. ವಿಶೇಷವೆಂದರೆ, ಪ್ರತಿ ಮಡಿಯಲ್ಲೂ ಬೆಳೆ ವೈವಿಧ್ಯವಿದೆ. ಮೂರು ತಿಂಗಳಿಗೊಮ್ಮೆ ಬೆಳೆ ಪರಿವರ್ತನೆ ಮಾಡುತ್ತಾರೆ. ಬೀಜ ಬಿತ್ತುವಾಗ ಅಡ್ಡಡ್ಡ ಸಾಲಿನಂತೆ, ಸಾಲಿನಿಂದ ಸಾಲಿಗೆ ಸ್ವಲ್ಪ ಅಂತರ ಬಿಟ್ಟು ಬಿತ್ತುತ್ತಾರೆ. ಹದಿನೈದು ದಿನಗಳ ನಂತರ ಖಾಲಿ ಬಿಟ್ಟ ಸಾಲಲ್ಲಿ ಬಿತ್ತನೆ. ಮುಂದೆ ನಿರಂತರವಾಗಿ ತರಕಾರಿ ಕೊಯ್ಲಿಗೆ ಬರುತ್ತದೆ. ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ವೆರೈಟಿಯ ತರಕಾರಿಗಳನ್ನು ಇಲ್ಲಿ ಬೆಳೆಯುತ್ತಾರೆ.

ನಿರ್ವಹಣೆ ವಿಧಾನ

ಕೀಟ ನಿರ್ವಹಣೆಗೆ ಮೂವತ್ತು ಪ್ಲೈಟ್ರ್ಯಾಪ್‌ಗಳನ್ನು ಅಳವಡಿಸಿದ್ದಾರೆ. ಅದಕ್ಕೂ ಕೀಟಗಳು ಬಗ್ಗದಿದ್ದರೆ ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಕಷಾಯ ಸಿಂಪಡಣೆ. ಮಡಿಯಿಂದ ಎಷ್ಟು ಪ್ರಮಾಣದ ತರಕಾರಿ ಕೊಯ್ಯುತ್ತಾರೋ, ಅಷ್ಟೇ ಪ್ರಮಾಣದ ಸಾವಯವ ಗೊಬ್ಬರವನ್ನು ಆ ಮಡಿಗೆ ಸೇರಿಸುತ್ತಾರೆ. ಯಾವ ಕಾರಣಕ್ಕೂ ಹೊರಗಿನಿಂದ ಗೊಬ್ಬರ ಖರೀದಿಸುವುದಿಲ್ಲ. ತರಕಾರಿ ಮಡಿಯಲ್ಲಿ ಉತ್ಪತ್ತಿಯಾಗುವ ಕೃಷಿ ತ್ಯಾಜ್ಯದಿಂದಲೇ ಗೊಬ್ಬರ ತಯಾರಿ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸಂಸ್ಥೆ ಸಿಬ್ಬಂದಿಯನ್ನು ನೇಮಿಸಿದ್ದಾರೆ. ಒಬ್ಬರದ್ದು ನಿರ್ವಹಣೆಯಾದರೆ, ಮತ್ತೊಬ್ಬರದ್ದು ಮೇಲ್ವಿಚಾರಣೆ ಜವಾಬ್ದಾರಿ.

ಏರು ಮಡಿ ವಿಧಾನದಲ್ಲಿ ತರಕಾರಿ ಬೆಳೆಯುವುದು ಒಂದು ವಿಶೇಷವಾದರೆ, ನಾಟಿ ತರಕಾರಿಗಳಿಗೇ ಆದ್ಯತೆ ನೀಡಿರುವುದು ಮತ್ತೊಂದು ವಿಶೇಷ. ಈ ತಳಿಗಳ ತರಕಾರಿ ಬೆಳೆಯುವುದು ಮಾತ್ರವಲ್ಲ, ಅವುಗಳ ಬೀಜೋತ್ಪಾದನೆಯನ್ನೂ ಮಾಡುತ್ತಿದ್ದಾರೆ.

‘ಪ್ರತಿದಿನ 10ರಿಂದ 15 ಕೆಜಿಯಷ್ಟು ತರಕಾರಿಯನ್ನು ನಮ್ಮ ‘ಅಕ್ಷಯಕಲ್ಪ’ದ ಅಡುಗೆಮನೆಗೆ ತರಕಾರಿ ಕೊಡುತ್ತೇವೆ. ಇಲ್ಲಿನ ಸಿಬ್ಬಂದಿಯೂ ಖರೀದಿಸುತ್ತಾರೆ. ನಾವು ಗುಣಮಟ್ಟಕ್ಕೆ ಆದ್ಯತೆ ನೀಡುವುದರಿಂದ ಗ್ರೇಡಿಂಗ್ ಮಾಡುತ್ತೇವೆ. ಅದರಿಂದ ಸ್ವಲ್ಪ ನಷ್ಟವಾಗುತ್ತಿದೆ. ಬೇಸಿಗೆಯಲ್ಲಿ ತರಕಾರಿ ಸ್ವಲ್ಪ ಉತ್ಪಾದನೆ ಕ್ಷೀಣಿಸಿದ್ದರೂ ಮಳೆಗಾಲದಲ್ಲಿ ಸಮೃದ್ಧವಾಗಿ ಬರುತ್ತೆ. ಹೆಚ್ಚಾದ ತರಕಾರಿಯನ್ನು ಬೀಜಕ್ಕಾಗಿ ಬಳಸುತ್ತೇವೆ. ಅದಕ್ಕೂ ಹೆಚ್ಚಾದದ್ದನ್ನು ಈ ಮೊದಲು ಕಾಂಪೋಸ್ಟ್ ಗುಂಡಿಗೆ ಹಾಕ್ತಿದ್ವಿ. ಈಗ ಆ ತರಕಾರಿಯನ್ನು ಒಣಗಿಸುವ (ನಿರ್ಜಲೀಕರಣ) ಪ್ರಯತ್ನ ಮಾಡುತ್ತಿದ್ದೇವೆ. ಅದಿನ್ನೂ ಪೂರ್ತಿ ಯಶಸ್ಸು ಕಂಡಿಲ್ಲ’ ಎನ್ನುತ್ತಾರೆ ಫಾರಂ ಮೇಲ್ವಿಚಾರಕ ಶಿವಪ್ರಸಾದ್.

ಮಾರುಕಟ್ಟೆಗೆ ತಂತ್ರಜ್ಞಾನದ ಮೊರೆ

ಸಾವಯವ ಹಾಲು ಖರೀದಿಸುವ ಗ್ರಾಹಕರಿಗಾಗಿ ‘ಅಕ್ಷಯಕಲ್ಪ ಆರ್ಗ್ಯಾನಿಕ್ ಗ್ರೂಪ್’ ಎಂದು ವಾಟ್ಸ್‌ಆ್ಯಪ್‌ ಗುಂಪು ಮಾಡಿಕೊಂಡಿ ದ್ದಾರೆ. ಆ ಗುಂಪಿನಲ್ಲಿ ಸಾವಯವ ಹಾಲಿನ ರುಚಿಯುಂಡ ಇದರ ಬಹುತೇಕ ಸದಸ್ಯರು ತಿಪಟೂರಿನವರು. ಇವರೆಲ್ಲ ತರಕಾರಿಗೂ ಕಾಯಂ ಗ್ರಾಹಕರು. ಲಭ್ಯವಾಗುವ ತರಕಾರಿ ಪಟ್ಟಿಯನ್ನು ಗುಂಪಿಗೆ ಹಾಕುತ್ತಾರೆ. ಗ್ರಾಹಕರಿಂದ ಬರುವ ಬೇಡಿಕೆ ಆಧರಿಸಿ ಪೂರೈಕೆ ಶುರು ಮಾಡುತ್ತಾರೆ. ಮೊದಲು ಕೊಯ್ಲು. ನಂತರ ಅಚ್ಚುಕಟ್ಟಾಗಿ ಗ್ರೇಡಿಂಗ್ ಮಾಡಿ, ಪೇಪರ್ ಕವರಲ್ಲಿ ಪ್ಯಾಕ್ ಮಾಡಿ, ಸಂಜೆ ಹೊತ್ತಿಗೆ ಡೋರ್ ಡೆಲಿವರಿ ಮಾಡುತ್ತಾರೆ. ಗ್ರಾಹಕರಿಗೆ ಮಾರುಕಟ್ಟೆ ದರಗಳ ಏರಿಳಿತದ ಭೀತಿ ಇಲ್ಲ. ಪ್ರತಿ ತರಕಾರಿ ದರವೂ ಇಂತಿಷ್ಟೆ ಎಂದು ನಿಗದಿ ಮಾಡಿರುತ್ತಾರೆ.

‘ಮಾರುಕಟ್ಟೆಯಿಂದ ತರಕಾರಿ ತರುವಾಗ, ಅವುಗಳನ್ನು ಹುಣಸೆರಸದಲ್ಲಿ ತೊಳೆದು ಓಜೋನೈಸರ್‌ಗೆ ಹಾಕ್ತಿದ್ವಿ. ಈಗ ಈ ಸಂಸ್ಥೆಯಿಂದ ಕೊಳ್ಳುವ ತರಕಾರಿಯನ್ನು ಬರೀ ನೀರಲ್ಲಿ ತೊಳೆದು ಉಪಯೋಗಿಸುತ್ತೇವೆ. ಮಾರ್ಕೆಟ್ ತರಕಾರಿ ಏನೋ ಒಂಥರ ವಾಸನೆ ಇದ್ರೆ, ಈ ತರಕಾರಿಯಲ್ಲಿ ತಾಜಾ ಅಂಶವಿರುತ್ತದೆ. ತಾಳಿಕೆ ಗುಣವೂ ಹೆಚ್ಚು. ಇಲ್ಲಿ ತರಕಾರಿ ಸಿಗದಿದ್ದಾಗ ಮಾತ್ರ ಮಾರ್ಕೆಟ್‌ನಲ್ಲಿ ತರಕಾರಿ ಕೊಳ್ಳುವುದು ಅನಿವಾರ್ಯ’ ಎನ್ನುತ್ತಾರೆ ತಿಪಟೂರಿನ ಕಾಯಂ ಗ್ರಾಹಕಿ ಸೌಮ್ಯ ಕಿರಣ್.

ರೈತರಿಂದಲೂ ಬೆಳೆಸುವ ಯತ್ನ

ಪ್ರಸ್ತುತ ಸಾವಯವ ತರಕಾರಿಗೆ ತುಂಬಾ ಬೇಡಿಕೆ ಇದೆ. ಆದರೆ, ಎಲ್ಲಿಂದ ಪೂರೈಕೆ ಮಾಡುವುದು. ಈ ಪ್ರಶ್ನೆಗೆ ಉತ್ತರವಾಗಿಯೇ ಅಕ್ಷಯಕಲ್ಪ ತನ್ನ ರೈತರನ್ನೇ ಸಾವಯವ ತರಕಾರಿ ಬೆಳೆಸಲು ಉತ್ತೇಜಿ ಸುತ್ತಿದೆ. ಇದು ಮೊದಲ ಹೆಜ್ಜೆ. ವರ್ಷದಿಂದ ನಡೆಯುತ್ತಿರುವ ಈ ಪ್ರಯೋಗದಲ್ಲಿ ಸದ್ಯಕ್ಕೆ ಲಾಭ ಕಂಡಿಲ್ಲ. ಈ ಪ್ರಯೋಗ ಪ್ರಕ್ರಿಯೆಯಲ್ಲಿ ಬಿತ್ತನೆ, ಕಳೆ,ಕೀಟ ನಿರ್ವಹಣೆ, ಗೊಬ್ಬರದ ಪ್ರಮಾಣ ಹೀಗೆ ಎಲ್ಲವನ್ನೂ ದಾಖಲಿಸಲಾಗುತ್ತಿದೆ. ಅನುಭವದ ಕೊರತೆ ನೀಗಿ ಲಾಭದ ಹಂತ ತಲುಪಿದ ಮೇಲೆ ರೈತರಿಗೂ ಈ ವಿಧಾನದ ಭರವಸೆ ಮೂಡುತ್ತದೆ.

‘ಸಣ್ಣ ಜಾಗದಲ್ಲಿ ಹೆಚ್ಚು ವೆರೈಟಿಯ ತರಕಾರಿ ಬೆಳೆಯುವ ಪ್ರಯತ್ನ ಒಂದು ಮಾದರಿಯಷ್ಟೇ. ರೈತರು ಇಷ್ಟೇ ಜಾಗದಲ್ಲಿ ಬೆಳೆಯಬೇಕೆಂದಿಲ್ಲ. ಈ ಪ್ರಯೋಗವನ್ನು ನೋಡಿದವರು ಅವರವರ ಅನುಕೂಲಕ್ಕೆ ತಕ್ಕಂತೆ ಜಮೀನಿನಲ್ಲಿ ಮಾರ್ಪಾಡು ಮಾಡಿಕೊಂಡು ಬೆಳೆಯಬಹುದು. ಒಟ್ಟಾರೆ ಸಾವಯವ ವಿಧಾನದಲ್ಲಿ ತರಕಾರಿ ಕೃಷಿ ಸಾಧ್ಯವೇ ಎಂಬ ಅನುಮಾನಗಳಿಗೆ ಈ ಪ್ರಯೋಗ ಉತ್ತರವಾಗಲಿದೆ ಎನ್ನೋದೆ ಸಂಸ್ಥೆಯ ಸದಾಶಯ’ ಎನ್ನುತ್ತಾರೆ ವಿಸ್ತರಣಾಧಿಕಾರಿ ಪ್ರಕಾಶ್.

ಗೊಬ್ಬರ ತಯಾರಿ ವಿಧಾನ

ನಾಲ್ಕು ಅಡಿ ಅಗಲ ಉದ್ದ ಇರುವಂತೆ ಕಲ್ಲು ಕಂಬ ನಿಲ್ಲಿಸಿದ್ದಾರೆ. ಅದರೊಳಗೆ ಬಯೋಮಾಸ್ ಒಂದು ಪದರ. ಮೇಲೆ ಸ್ಲರಿ. ಅದರ ಮೇಲೆ ಕೆರೆಗೋಡು ಮಣ್ಣು ಹರಡಿದ್ದಾರೆ. ಪುನಃ ಬಯೋಮಾಸ್‌ನಿಂದ ಪ್ರಾರಂಭ. ನಾಲ್ಕು ಅಡಿ ಎತ್ತರವಾಗುವವರೆಗೆ ಇದೇ ಪುನರಾವರ್ತನೆ. ತೇವಾಂಶ ಕಾಪಾಡಬೇಕು. ಗಾಳಿಯಾಡುವಂತೆ ಸುತ್ತಲು ಸಂದಿ ಬಿಟ್ಟು ಮುಚ್ಚಬೇಕು. ಮೇಲ್ಗಡೆ ಬಳ್ಳಿ ತರಕಾರಿ ನೆಟ್ಟರೆ ತೇವಾಂಶ ಕಾಪಾಡುವಲ್ಲಿ ಸಹಕಾರಿ. ಒಮ್ಮೆ ಭರ್ತಿಯಾದ ನಂತರ ಮೂರರಿಂದ ನಾಲ್ಕು ತಿಂಗಳಲ್ಲಿ ಉತ್ಕೃಷ್ಟ ಗೊಬ್ಬರ ತಯಾರಾಗುತ್ತದೆ.

ಹೆಚ್ಚಿನ ಮಾಹಿತಿ ಸಂಪರ್ಕಕ್ಕೆ: ಪ್ರಕಾಶ್ -9008629944, ಶಿವಪ್ರಸಾದ್-9686093535

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT