ಭಾನುವಾರ, ಸೆಪ್ಟೆಂಬರ್ 20, 2020
21 °C
‘ಕೃಷಿ ಕಣಜ’

ಬೆಂಗಳೂರು ಜಿಕೆವಿಕೆಯಲ್ಲಿ ಅ.24ರಿಂದ ಕೃಷಿ ಮೇಳ|‘ನಿಖರ ಕೃಷಿ–ಸುಸ್ಥಿರ ಅಭಿವೃದ್ಧಿ’

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯವು (ಜಿಕೆವಿಕೆ) ಇದೇ 24ರಿಂದ 27ರವರೆಗೆ ಕೃಷಿ ಮೇಳವನ್ನು ಆಯೋಜಿಸಿದೆ. ‘ನಿಖರ ಕೃಷಿ ಮತ್ತು ಸುಸ್ಥಿರ ಅಭಿವೃದ್ಧಿ’ – ಈ ವರ್ಷದ ಘೋಷವಾಕ್ಯ. ನೆರೆ ಮತ್ತು ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿರುವ ರೈತ ಸಮುದಾಯಕ್ಕೆ ಪರ್ಯಾಯ ಮಾರ್ಗಗಳನ್ನು ಪರಿಚಯಿಸುವುದು ಮೇಳದ ಉದ್ದೇಶ. ಜಿಕೆವಿಕೆ ವ್ಯಾಪ್ತಿ ಹತ್ತು ಜಿಲ್ಲೆಗಳಿಗೆ ಸೀಮಿತವಾಗಿದ್ದರೂ, ರಾಜ್ಯದಾದ್ಯಂತ ರೈತರು ಮತ್ತು ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸವಾಲುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೇಳದ ಕಾರ್ಯಕ್ರಮ ರೂಪಿಸಲಾಗಿದೆ. ಈ ಕುರಿತು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್‌ ‘ಕೃಷಿ ಕಣಜ’ ಜೊತೆ ಮಾತನಾಡಿದ್ದಾರೆ.

* ‘ನಿಖರ ಕೃಷಿ’ಯ ಪರಿಕಲ್ಪನೆ ವಿವರಿಸಿ. ಅದು ಬರಗಾಲಕ್ಕೆ ಎಷ್ಟು ಸಹಕಾರಿ ? 

ಬರಪೀಡಿತ ಪ್ರದೇಶಗಳಲ್ಲಿ ಲಭ್ಯವಾಗುವಷ್ಟು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವಿಧಾನಕ್ಕೆ ‘ನಿಖರ ಕೃಷಿ’ ಎನ್ನುತ್ತೇವೆ. ಬೆಳೆಗೆ ಅಗತ್ಯವಿರುವಷ್ಟೇ ನೀರು ಮತ್ತು ಗೊಬ್ಬರವನ್ನು ಪೂರೈಸುವುದು (ನೀರು ಮತ್ತು ಗೊಬ್ಬರವನ್ನು ಬೆರೆಸಿ, ದ್ರವ ರೂಪದಲ್ಲಿ ಬೆಳೆಗೆ ಪೂರೈಸುವುದು). ಕಡಿಮೆ ನೀರಿನಲ್ಲಿ ಕೃಷಿ ಮಾಡುವುದು ಕೂಡ ನಿಖರ ಕೃಷಿ ಪರಿಕಲ್ಪನೆಯ ಭಾಗವಾಗಿದೆ. ಇಂಥ ಚಟುವಟಿಕೆಗಳ ಬಗ್ಗೆ ಮೇಳದಲ್ಲಿ ಪ್ರಾತ್ಯಕ್ಷಿಕೆಗಳಿರುತ್ತವೆ.

* ರಾಜ್ಯದಲ್ಲಿ ಅತಿ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿದ್ದಾರೆ. ಅವರಿಗೆ ಈ ಮೇಳ ಯಾವ ರೀತಿ ಸಹಕಾರಿಯಾಗಲಿದೆ?

ಪ್ರಸ್ತುತ ಸಣ್ಣ ಹಿಡುವಳಿದಾರರ ಪ್ರಮುಖ ಸಮಸ್ಯೆ ಎಂದರೆ, ಕೂಲಿ ಕಾರ್ಮಿಕರದ್ದು. ಅದಕ್ಕೆ ಪರಿಹಾರವಾಗಿ ಅವರಿಗೆ ಯಂತ್ರಗಳ ಅವಶ್ಯಕತೆ ಇದೆ. ಆದರೆ, ದೊಡ್ಡ ಯಂತ್ರಗಳನ್ನು ಖರೀದಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಸಣ್ಣ ಯಂತ್ರಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿಡುತ್ತೇವೆ. ಜತೆಗೆ, ಪ್ರಾತ್ಯಕ್ಷಿಕೆಯೂ ಇರುತ್ತದೆ. ಸಮಗ್ರ ವ್ಯವಸಾಯ ಪದ್ಧತಿ ಅಳವಡಿಸಲು ಅವರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಬೆಳೆ ಜತೆಗೆ ಉಪಕಸುಬಾಗಿ ಕುರಿ, ಕೋಳಿ ಮತ್ತು ಮೀನು ಸಾಕಣೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಬೆಳೆ ಕೈಕೊಟ್ಟರೂ, ಈ ಉಪಕಸುಬುಗಳು ರೈತರನ್ನು ಆರ್ಥಿಕವಾಗಿ ಕೈಹಿಡಿಯುತ್ತವೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರದಂತಹ ಬರ ಪೀಡಿತ ಪ್ರದೇಶಗಳಲ್ಲಿ ಈ ಬಗ್ಗೆ ಸುಮಾರು 18 ಸಾವಿರ ರೈತರಿಗೆ ಅರಿವು ಮೂಡಿಸಲಾಗಿದೆ. ರೈತರಿಗಷ್ಟೇ ಅಲ್ಲದೇ ಒಂದು ಲಕ್ಷಕ್ಕೂ ಹೆಚ್ಚು ಸಾರ್ವಜನಿಕರಿಗೂ ಮಾಹಿತಿ ನೀಡಿದ್ದೇವೆ. ಈ ವಿಧಾನವನ್ನು ಅಳವಡಿಸಿಕೊಂಡವರು ಉತ್ತಮ ಆದಾಯಗಳಿಸುತ್ತಿದ್ದಾರೆ.

* ಇದನ್ನೂ ಓದಿ: ಕೃಷಿಮೇಳದಲ್ಲಿ ವಿಶೇಷ ಪ್ರಾತ್ಯಕ್ಷಿಕೆಗಳು

* ಸಹಕಾರ ಕೃಷಿಗಿಂತ ಒಪ್ಪಂದ ಕೃಷಿ (ಕಾಂಟ್ರಾಕ್ಟ್‌ ಫಾರ್ಮಿಂಗ್‌) ಹೆಚ್ಚು ಪ್ರಚಲಿತವಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ? 

ಒಪ್ಪಂದ ಕೃಷಿಯಲ್ಲಿ ಹೆಚ್ಚು ಲಾಭವಿದೆ. ಹೀಗಾಗಿ ಸಹಜವಾಗಿ ರೈತರು ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಬೀಜ, ಗೊಬ್ಬರ ಮತ್ತು ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ, ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಉತ್ಪನ್ನಗಳನ್ನು ಖರೀದಿಸುವ ಕುರಿತು ಕಂಪನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಇದರಿಂದ ಇಬ್ಬರಿಗೂ ಲಾಭ. ರೈತರಿಗೆ ಒಪ್ಪಂದ ಕೃಷಿಯ ಸಾಧಕ–ಬಾಧಕಗಳ ಕುರಿತ ಮಾಹಿತಿಯನ್ನು ನೀಡಲಾಗುವುದು.  

* ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಆನ್‌ಲೈನ್‌ ಪಾವತಿ ವ್ಯವಸ್ಥೆಯೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬ ಆಕ್ಷೇಪಗಳಿವೆ. ಈ ಕುರಿತು ಕೃಷಿ ವಿಶ್ವವಿದ್ಯಾಲಯದ ಏನು ಹೇಳುತ್ತದೆ? 

ಆನ್‌ಲೈನ್‌ ಮೂಲಕವೇ ರೈತರ ಉತ್ಪನ್ನಗಳ ಖರೀದಿ ಮತ್ತು ಪಾವತಿ ವ್ಯವಸ್ಥೆ ಜಾರಿಗೆ ಬಂದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಡೈರೆಕ್ಟ್‌ ಬೆನಫಿಟ್‌ ಟ್ರಾನ್ಸ್‌ಫರ್‌ ವ್ಯವಸ್ಥೆ ರೂಢಿಸಿಕೊಳ್ಳಲು ವಿಶ್ವವಿದ್ಯಾಲಯ ಸಲಹೆ ನೀಡಲಿದೆ. ಈ ವ್ಯವಸ್ಥೆ ಬಂದರೆ ಯಾವ ಉದ್ದೇಶಕ್ಕೆ ಹಣ ನೀಡಲಾಗಿದೆಯೋ, ಆ ಉದ್ದೇಶಕ್ಕೆ ಮಾತ್ರ ಆ ಹಣ ಬಳಕೆಯಾಗುತ್ತದೆ.

* ಸಾವಯವ ಉತ್ಪನ್ನ ಗುರುತಿಸುವುದು ಹೇಗೆ? ಈ ಬಗ್ಗೆ ಸಮರ್ಪಕವಾಗಿ ಮಾಹಿತಿ ಇಲ್ಲ. ಈ ಉತ್ಪನ್ನಗಳನ್ನು ಸಾವಯವ ಎಂದು ದೃಢೀಕರಿಸುವ, ಪ್ರಮಾಣೀರಕಸುವ ವ್ಯವಸ್ಥೆ ಅಗತ್ಯವಿದೆ ಅಲ್ಲವೇ? 

ಈಗಾಗಲೇ ಸಾವಯವ ಕೃಷಿ ಉತ್ಪನ್ನಗಳ ದೃಢೀಕರಣ ಮತ್ತು ಪ್ರಮಾಣೀಕರಣದ ಕಾರ್ಯ ನಡೆಯುತ್ತಿದೆ. ಈ ಕೆಲಸವನ್ನು ಕೆಲವು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಲಾಗಿದೆ. ಆದರೂ, ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ ಇದನ್ನು ಮಾಡುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಶ್ವವಿದ್ಯಾಲಯ ಶಿಫಾರಸು ಮಾಡಿದೆ. 

* ಆಹಾರ ಸಂಸ್ಕರಣೆ ಕುರಿತು ವಿಶ್ವವಿದ್ಯಾಲಯ ಏನೆಲ್ಲ ಕ್ರಮಗಳನ್ನು ಕೈಗೊಂಡಿದೆ? 

ಆಹಾರ ಸಂಸ್ಕರಣೆ ಆದ್ಯತೆಯ ವಿಷಯವಾಗಿದೆ. ಈ ಕುರಿತು ರೈತರೇ ಒಕ್ಕೂಟ ರಚಿಸಿಕೊಂಡು, ಆಹಾರ ಸಂಸ್ಕರಣೆಗೆ ಮುಂದಾಗಬೇಕು. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ (ಕೆವಿಕೆ) ಆಹಾರ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ. ಮಾತ್ರವಲ್ಲ, ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕದಂತಹ ಸಿರಿಧಾನ್ಯಗಳನ್ನು ಸಂಸ್ಕರಿಸಿ ಕೊಡುವ ಪ್ರಕ್ರಿಯೆಯೂ ನಡೆಯುತ್ತಿದೆ.

* ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ನಡೆಯುವ ಸಂಶೋಧನೆಗಳು ರೈತರ ಹೊಲ ತಲುಪುತ್ತಿಲ್ಲ (ಲ್ಯಾಬ್‌ ಟು ಲ್ಯಾಂಡ್‌) ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು?

ಈ ಮಾತು ಒಪ್ಪುವಂತಹದಲ್ಲ. ವಿಶ್ವ ವಿದ್ಯಾಲಯದಲ್ಲಿ ನಡೆಯುವ ಎಲ್ಲ ಸಂಶೋಧನೆಗಳನ್ನು ಕೃಷಿ ಮೇಳ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ. ಮಾತ್ರವಲ್ಲ, ರೇಡಿಯೊ, ದೂರದರ್ಶನದ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಯಾವುದೇ ಹೊಸ ತಂತ್ರಜ್ಞಾನವಿದ್ದರೂ ಮೊಬೈಲ್‌ ಆ್ಯಪ್‌ ಮೂಲಕ ಕೆವಿಕೆಯಿಂದ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಕೆವಿಕೆಗಳಲ್ಲಿನ ಸಿಬ್ಬಂದಿ ಪ್ರತಿ ಹಳ್ಳಿಗೆ ಕೃಷಿ ವಿವಿಯ ಹೊಸ ಸಂಶೋಧನೆಗಳು ಮತ್ತು ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

ಸೆನ್ಸರ್‌– ಜಲ ಸಂರಕ್ಷಣೆಯ ಸಾಧನ

ಕೃಷಿ ಕ್ಷೇತ್ರದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಪ್ರಮುಖವಾದ ಚಟುವಟಿಕೆ. ಇವೆರಡರ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. 

‘ಒಂದು ಬೆಳೆಗೆ ಎಷ್ಟು ಲೀಟರ್‌ ನೀರು ಬೇಕು ಎಂಬುದನ್ನು ತಿಳಿಸುವ ಸೆನ್ಸರ್‌ಗಳನ್ನು ಆಧರಿಸಿದ ಕೃಷಿ ಪದ್ಧತಿಯನ್ನು ರೂಪಿಸಲಾಗಿದೆ. ಒಂದು ಬೆಳೆಗೆ ಅಗತ್ಯವೆಂದು ನಿಗದಿ ಮಾಡಲಾದ ನೀರು ಹರಿಸಿದ ನಂತರ ಮೋಟರ್‌ಗಳು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಸಮಯ ಮತ್ತು ಪ್ರಮಾಣ ಆಧರಿಸಿ ಈ ಸೆನ್ಸರ್‌ಗಳು ಕೆಲಸ ಮಾಡುತ್ತವೆ. ಮನೆಯಲ್ಲಿ ಕುಳಿತುಕೊಂಡೇ ಹೊಲಕ್ಕೆ ನೀರು ಹರಿಸುವ ವ್ಯವಸ್ಥೆ ಇದಾಗಿದೆ’ ಎಂದು ರಾಜೇಂದ್ರ ಪ್ರಸಾದ್‌ ಹೇಳಿದರು. 

‘ಒಂದು ಹೆಕ್ಟರ್‌ ಪ್ರದೇಶಕ್ಕೆ ಈ ವ್ಯವಸ್ಥೆ ಅಳವಡಿಸಲು ₹1.20ಲಕ್ಷ ವೆಚ್ಚವಾಗುತ್ತದೆ. ಈ ಕುರಿತು ಮೇಳದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು