ಹಸಿರಪ್ರೀತಿಯಲ್ಲಿ ಅರಳಿದತಾರಸಿ ತೋಟ

ಮಂಗಳವಾರ, ಜೂನ್ 25, 2019
29 °C

ಹಸಿರಪ್ರೀತಿಯಲ್ಲಿ ಅರಳಿದತಾರಸಿ ತೋಟ

Published:
Updated:
Prajavani

ಇರುವುದು ಒಂಬೈನೂರು ಚದರ ಅಡಿ ವಿಸ್ತೀರ್ಣದ ತಾರಸಿ. ಆ ತಾರಸಿ ತುಂಬಾ ರಂಗೋಲಿಯ ಚುಕ್ಕಿಗಳನ್ನು ಜೋಡಿಸಿಟ್ಟಂತೆ ಕಾಣುವ ಕೆಂಪು ಕುಂಡಗಳು. ಪ್ರತಿ ಕುಂಡದಲ್ಲೂ ತರಹೇವಾರಿ ತರಕಾರಿ. ವೈವಿಧ್ಯಮಯ ಬಣ್ಣದ ಹೂವು ಹಾಗೂ ಹಣ್ಣಿನ ಗಿಡಗಳು..

ಬೆಂಗಳೂರಿನ ಹಲಸೂರು ಬಡಾವಣೆಯಲ್ಲಿರುವ ದಯಾಕೇಶ್ವರಿಯವರು ತಮ್ಮ ಮನೆಯ ಮೇಲಿನ ತಾರಸಿ ತೋಟವನ್ನು ಹೀಗೆ ಅಂದವಾಗಿ ಜೋಡಿಸಿದ್ದಾರೆ. ಕುಂಡಗಳ ಜತೆಗೆ, ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಬ್ಯಾಂಕ್ ಕೆಲಸದಲ್ಲಿದ್ದಾಗ ಅಲ್ಲಿನ ಹೊಲ, ಗದ್ದೆ, ತರಕಾರಿ, ಹಣ್ಣಿನ ತೋಟಗಳನ್ನು ಕಂಡ ದಯಾಕೇಶ್ವರಿ ಅವರಿಗೆ ಕೃಷಿ – ತೋಟಗಾರಿಕೆಯಲ್ಲಿ ಆಸಕ್ತಿ ಮೂಡಿತ್ತು. ಕನಿಷ್ಠ ಹೊಲ ಮಾಡಲಾಗದಿದ್ದರೂ, ಮನೆಯಲ್ಲೊಂದು ಕೈತೋಟ ಮಾಡಬೇಕೆಂದು ತೀರ್ಮಾನಿಸಿದರು. ಅದರ ಫಲವೇ ಈ ತಾರಸಿ ತೋಟ.

ತಾರಸಿಗೆ ಕಾಲಿಟ್ಟರೆ ವಿವಿಧ ಬಣ್ಣಗಳ ಗುಲಾಬಿ, ದಾಸವಾಳ, ಸೇವಂತಿಗೆ, ದುಂಡುಮಲ್ಲಿಗೆ, ಸಂಪಿಗೆ ಗಿಡಗಳು ಸ್ವಾಗತಿಸುತ್ತವೆ. ಪುಟ್ಟ ಗಿಡಗಳ ತುಂಬ ಕಚ್ಚಿಕೊಂಡ ಚಿಕ್ಕು, ಪೇರಳೆ, ಬಲಿತು ಹಣ್ಣಾದ ಅನಾನಸ್, ಮೋಸಂಬಿ, ಸ್ಟ್ರಾಬೆರಿ, ದಾಳಿಂಬೆ, ಪಪ್ಪಾಯಿಯಂತಹ ಹಣ್ಣಿನ ಗಿಡಗಳು ಬೆರಗು ಮೂಡಿಸುತ್ತವೆ. ತೊನೆದಾಡುವ ಹುರುಳಿಕಾಯಿ, ಬಟಾಣಿ, ಬದನೆ, ತೊಗರಿ, ಹೀರೆಕಾಯಿ, ಅರಳಿನಿಂತ ಹೂಕೋಸು, ಎಲೆಕೋಸು ಮೂಲೆಯಲ್ಲಿ ಆಳೆತ್ತರ ಬೆಳೆದು ನಿಂತ ಕರಿಬೇವಿನ ಗಿಡ, ಕುಂಡದ ತುಂಬ ಪುಷ್ಟಿಯಾಗಿ ಬೆಳೆದ ಪುದಿನ, ಮೆಂತೆ, ಕೊತ್ತಂಬರಿ ಸೊಪ್ಪು – ತರಕಾರಿ ಮಾರುಕಟ್ಟೆ ನೋಡಿದಂತಹ ಅನುಭವ ನೀಡುತ್ತವೆ.

ಕಾಫಿ ಜತೆ ತೋಟ ಸುತ್ತಾಟ

ಬ್ಯಾಂಕ್ ಅಧಿಕಾರಿಯಾಗಿರುವ ದಯಾಕೇಶ್ವರಿ ಅವರು, ದೈನಂದಿನ ಕೆಲಸಗಳ ಜತೆಗೆ, ತಾರಸಿ ತೋಟದ ನಿರ್ವಹಣೆ ಮಾಡುತ್ತಾರೆ. ‘ತೋಟದ ನಿರ್ವಹಣೆ ಒತ್ತಡ ನಿವಾರಿಸುತ್ತದೆ’ ಎಂಬುದು ಅವರ ಅಭಿಪ್ರಾಯ. ಬೆಳಿಗ್ಗೆ ಬಿಸಿ ಬಿಸಿ ಕಾಫಿಯೊಟ್ಟಿಗೆ ತಾರಸಿಗೆ ಬಂದು, ಗಿಡಗಳಿಗೆ ನೀರು ಗೊಬ್ಬರ ಉಣಿಸುತ್ತಾರೆ. ರೋಗ–ರುಜಿನ ಬಂದಿರುವ ಗಿಡಗಳನ್ನು ಮೈದಡವಿ ಮಾತನಾಡಿಸಿ, ಔಷಧೋಪಚಾರ ಮಾಡುತ್ತಾರೆ. ಇವರಿಗೆ ಗಿಡಗಳ ಒಡನಾಟವೇ ಬೆಳಗಿನ ವಾಕಿಂಗ್, ವ್ಯಾಯಾಮ, ಯೋಗ, ಧ್ಯಾನ ಎಲ್ಲ.

ನಿತ್ಯ ಒಂದು ಗಂಟೆ ತಾರಸಿ ತೋಟದ ಗಿಡಗಳ ಜತೆ ಒಡನಾಟ. ರಜೆ ದಿನಗಳಲ್ಲಿ ಹೆಚ್ಚು ಸಮಯ ಕೊಡುತ್ತಾರೆ. ಗೊಬ್ಬರ ಹಾಕುವುದು, ಗಿಡಗಳ ಬುಡಕ್ಕೆ ಮಣ್ಣು ಹಾಕುವುದು, ಕಳೆ ತೆಗೆಯುವುದು ಎಲ್ಲವನ್ನೂ ತಾವೇ ಮಾಡುತ್ತಾರೆ. ನೀರಿನ ವಿಚಾರದಲ್ಲಿ ಎಚ್ಚರ ವಹಿಸುತ್ತಾರೆ. ‘ಮಳೆಗಾಲದಲ್ಲಿ ಅಗತ್ಯ ನೋಡಿಕೊಂಡು ಗಿಡಗಳಿಗೆ ನೀರು ಕೊಡುತ್ತೇನೆ. ಬೇಸಿಗೆಯಲ್ಲಿ ಮನೆಯಲ್ಲಿ ಸೊಪ್ಪು, ಅಕ್ಕಿ ತೊಳೆದ ನೀರನ್ನು ಗಿಡಗಳಿಗೇ ಪೂರೈಸುತ್ತೇನೆ. ದಿನಬಳಕೆಗೆ ತಾರಸಿ ತೋಟದಿಂದಲೇ ತರಕಾರಿ, ಸೊಪ್ಪು, ಹಣ್ಣು, ಹೂವು ಬಳಸುವುದು. ನಮ್ಮ ಕಣ್ಣೆದುರು ಬೆಳೆದ ತರಕಾರಿ, ಹಣ್ಣು ಬಳಸುವಾಗ ಇರುವ ಸಂತೃಪ್ತಿಯೇ ಬೇರೆ’ ಎನ್ನುವುದು ಅವರ ಅನುಭವದ ಮಾತು.

ಮನೆಯಲ್ಲೇ ಗೊಬ್ಬರ ತಯಾರಿಕೆ

ತೋಟಕ್ಕೆ ಬೇಕಾಗುವ ಕುಂಡಗಳು, ಕೆಂಪುಮಣ್ಣು, ಬೀಜ, ಗಿಡಗಳನ್ನು ಲಾಲ್‌ಬಾಗ್‍ನಿಂದ ಖರೀದಿಸುತ್ತಾರೆ. ಆದರೆ, ಗೊಬ್ಬರ ತಯಾರಿಕೆ ಮಾತ್ರ ಮನೆಯಲ್ಲೇ ಮಾಡಿಕೊಳ್ಳುತ್ತಾರೆ. ಮನೆಯ ಹಸಿ ತ್ಯಾಜ್ಯಕ್ಕೆ ಒಂದಿಷ್ಟು ಕೋಕೋಪಿಟ್ ಸೇರಿಸಿ ಗೊಬ್ಬರ ತಯಾರಿಸುತ್ತಾರೆ. ಗಿಡಗಳಿಗೆ ರಸಗೊಬ್ಬರ ಬಳಸುವುದಿಲ್ಲ. ಕೀಟನಾಶಕವನ್ನೂ ಸೋಕಿಸುವುದಿಲ್ಲ. ರೋಗ–ಕೀಟ ಬಾಧೆ ಕಾಣಿಸಿಕೊಂಡರೆ ಹಸಿಮೆಣಸಿನಕಾಯಿ ಅರೆದು ನೀರು ಸೇರಿಸಿ, ಆ ದ್ರಾವಣವನ್ನು ಗಿಡಗಳಿಗೆ ಸಿಂಪಡಿಸುತ್ತಾರೆ. ಕುಂಡಗಳಿಗೆ ಬೀಜ ಹಾಕುವುದರಿಂದ ಹಿಡಿದು ಫಲ ಕೊಡುವವರೆಗೆ ಗಿಡಗಳನ್ನು ಮಕ್ಕಳಂತೆ ಪೋಷಿಸುತ್ತಾರೆ. ‘ಗಿಡ ಬೆಳೆಯುವ ಪ್ರತಿ ಹಂತದ ಬೆಳವಣಿಗೆ ನಮ್ಮಲ್ಲಿ ಚೈತನ್ಯವನ್ನು ತುಂಬುತ್ತದೆ’ ಎನ್ನುವುದು ಅವರ ಅನುಭವದ ಮಾತು.

ಚಿಟ್ಟೆ, ಹಕ್ಕಿಗಳ ತಾಣ

ತರಕಾರಿ, ಹೂವು, ಹಣ್ಣಿನ ಗಿಡಗಳಿಂದಾಗಿ ತಾರಸಿಯ ಮೇಲೆ ದುಂಬಿಗಳು ಹಾರಾಡುತ್ತಿವೆ. ಬಣ್ಣಬಣ್ಣದ ಚಿಟ್ಟೆಗಳು ಬರುತ್ತವೆ. ಹೂವಿನ ಮಕರಂದ ಹೀರುತ್ತವೆ. ಹಕ್ಕಿಗಳು ತೋಟದ ಗಿಡಗಳಲ್ಲಿನ ಕೀಟಗಳನ್ನು ಹಿಡಿದು ತಿನ್ನುತ್ತವೆ. ಅಳಿಲುಗಳು ಕೂಡ ತಾರಸಿಯ ಹಸಿರಿನೊಂದಿಗೆ ಗೆಳೆತನ ಬೆಳೆಸಿವೆ. ‘ತಾರಸಿ ತೋಟ ಜೀವ ಜಾಲವನ್ನೇ ನಮಗೆಲ್ಲ ಪರಿಚಯಿಸುತ್ತಿದೆ’ ಎನ್ನುತ್ತಾರೆ ದಯಾಕೇಶ್ವರಿ.

‌ಒಂದಷ್ಟು ಶ್ರಮ, ಮತ್ತೊಂದಷ್ಟು ಹಸಿರ ಮೇಲಿನ ಪ್ರೀತಿಯಿಂದ ತಾರಸಿ ತೋಟ ಬೆಳೆಯುತ್ತಿದೆ. ಇದು ಮನೆಯ ಮಕ್ಕಳಿಗೆ ತೋಟದ ಪಾಠ ಹೇಳುತ್ತಿದೆ. ಪರಿಸರ ಸ್ವಚ್ಛತೆ, ಹಸಿರ ಪ್ರೀತಿಯನ್ನು ಕಲಿಸುತ್ತಿದೆ. ಸುತ್ತಲಿನ ವಾತಾವರಣವನ್ನು ಅಹ್ಲಾದಕರವಾಗಿಸುತ್ತಿದೆ. ಮನೆಯ ತ್ಯಾಜ್ಯಕ್ಕೆ ಮುಕ್ತಿ ನೀಡುತ್ತಿದೆ.

‘ಬೆಂಗಳೂರಿನ ಪ್ರತಿ ಮನೆಯಲ್ಲೂ ಇಂಥದ್ದೊಂದು ಕೈತೋಟವಿದ್ದರೆ, ಮನೆಯೊಳಗಿನ ತ್ಯಾಜ್ಯವನ್ನು ತೋಟದಲ್ಲೇ ಕರಗಿಸಿ, ಕಸಕ್ಕೆ ಮುಕ್ತಿ ನೀಡಬಹುದು‘ ಎನ್ನುವುದು ದಯಾಕೇಶ್ವರಿ ಅವರ ಅನುಭವದ ಮಾತು.

ಚಿತ್ರಗಳು: ಲೇಖಕರವು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !