ಭಾನುವಾರ, ಜುಲೈ 25, 2021
25 °C
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಕೊಡುಗೆ

ಹಣ್ಣು–ತರಕಾರಿ ತೊಳೆಯಲು ಗಿಡಮೂಲಿಕೆಯ ಪುಡಿ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

Prajavani

ಅಂಗಡಿಯಿಂದ ತಂದ ಹಣ್ಣು – ತರಕಾರಿಯನ್ನು ಹರಿಯುವ ನೀರಿನಲ್ಲೋ, ಉಪ್ಪು ಅಥವಾ ಅಡುಗೆ ಸೋಡ ಬೆರೆಸಿದ ಬಿಸಿನೀರಿನಲ್ಲೋ ಜಾಲಾಡುತ್ತೇವೆ. ಅದರ ಮೇಲಿರುವ ದೂಳು, ಕೊಳೆಯ ಜತೆಗೆ ಸಿಪ್ಪೆ ಮೇಲೆ ಅಂಟಿಕೊಂಡಿರುವ ರಾಸಾಯನಿಕ ಕೀಟನಾಶಕ ಉಳಿಕೆಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಈ ವಿಧಾನ ಅನುಸರಿಸುತ್ತೇವೆ.

ಈಗ ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ತರಕಾರಿ–ಹಣ್ಣಿನ ಮೇಲಿರುವ ಕ್ರಿಮಿಕೀಟಗಳ ಜತೆಗೆ, ರಾಸಾಯನಿಕ ಕೀಟನಾಶಕ ಉಳಿಕೆಯನ್ನು ನಿರ್ಮೂಲನೆ ಮಾಡುವಂತಹ ಪುಡಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಪುಡಿಯ ವಿಶೇಷವೆಂದರೆ, ಇದನ್ನು ಅಭಿವೃದ್ಧಿಪಡಿಸಿರುವುದು ಗಿಡಮೂಲಿಕೆಗಳಿಂದ. ಹಾಗಾಗಿ ಇದು ಸಸ್ಯ ಜನ್ಯ ಪುಡಿ. ಇದಕ್ಕೆ ಅವರು ‘ಅರ್ಕಾ ಹರ್ಬಿ ವಾಶ್‘ ಎಂದು ಹೆಸರಿಟ್ಟಿದ್ದಾರೆ.

ಹರ್ಬಿವಾಷ್‌ ಪುಡಿಯನ್ನು ನೀರಿನಲ್ಲಿ ಬೆರೆಸಿ, ಆ ಮಿಶ್ರಣದಿಂದ ಹಣ್ಣು ಮತ್ತು ತರಕಾರಿಗಳನ್ನು ತೊಳೆಯಬೇಕು. ಹೀಗೆ ಮಾಡುವುದ ರಿಂದ ತರಕಾರಿಗಳ ಮೇಲಿರುವ ಕೀಟನಾಶಕದ ಪ್ರಮಾಣವನ್ನು ಶೇ 80 ರಿಂದ 90ರಷ್ಟು ನಿರ್ಮೂಲನೆ ಮಾಡಬಹುದು.

ಗಿಡಮೂಲಿಕೆಗಳಿಂದ ಅಭಿವೃದ್ಧಿ

ಎರಡು ಗಿಡಮೂಲಿಕೆಗಳನ್ನು ಪುಡಿರೂಪಕ್ಕೆ ಬದಲಿಸಿ, ನಿಗದಿತ ಪ್ರಮಾಣದಲ್ಲಿ ಮಿಶ್ರಮಾಡಿ, ಹರ್ಬಿ ವಾಷ್‌ ಪುಡಿಯನ್ನು ತಯಾರಿಸಲಾಗಿದೆ. ಇದಕ್ಕೆ ಯಾವುದೇ ರಾಸಾಯನಿಕ ಪದಾರ್ಥಗಳನ್ನಾಗಲಿ, ಪ್ರಿಸರ್ವೇಟಿವ್‌ಗಳನ್ನಾಗಲಿ ಬಳಸಿಲ್ಲ. ಒಮ್ಮೆ ಪುಡಿ ತಯಾರಿಸಿಕೊಂಡರೆ ಸುಮಾರು ಎರಡು ವರ್ಷಗಳ ಕಾಲ ಕೆಡದಂತೆ ಕಾಪಿಟ್ಟು ಬಳಸಬಹುದು. 

ಒಂದು ಲೀಟರ್‌ ನೀರಿಗೆ, ಎರಡು ಗ್ರಾಂ (ಒಂದೆರಡು ಚಿಟಿಕೆಯಷ್ಟು) ಪುಡಿಯನ್ನು ಹಾಕಿ, ಮಿಶ್ರಮಾಡಿದರೆ, ಒಂದು ಕೆ.ಜಿ ತರಕಾರಿ ಅಥವಾ ಹಣ್ಣುಗಳನ್ನು ತೊಳೆಯಬಹುದು. ಹರ್ಬಿ ವಾಶ್‌‌ನಿಂದ ತೊಳೆದ ತರಕಾರಿಗಳನ್ನು ಪುನಃ ಶುದ್ಧ ನೀರಿನಿಂದ ತೊಳೆದು ಬಳಸಬೇಕು. ‘ಈ ಪುಡಿಯನ್ನು ಬಳಸುವುದರಿಂದ, ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ‘ ಎನ್ನುತ್ತಾರೆ ಈ ಪುಡಿಯನ್ನು ಅಭಿವೃದ್ಧಿಪಡಿಸಿರುವ ವಿಜ್ಞಾನಿ ಡಾ. ದೇಬಿ ಶರ್ಮ.

ಕಡಿಮೆ ವೆಚ್ಚದಲ್ಲಿ ತಯಾರಿ

ಇತ್ತೀಚೆಗೆ  ಐಐಎಚ್‌ಆರ್ ಆವರಣದಲ್ಲಿ ‘ಹರ್ಬಿವಾಶ್ ಪುಡಿ‘ಯನ್ನು ಬಿಡುಗಡೆ ಮಾಡಲಾಗಿದೆ. ಬಹಳ ಕಡಿಮೆ ವೆಚ್ಚದಲ್ಲಿ ಈ ಪುಡಿಯನ್ನು ತಯಾರಿಸಿಕೊಳ್ಳಬಹುದಾಗಿದೆ. ಇದಕ್ಕೆ ದೊಡ್ಡ ಬಂಡವಾಳ ಬೇಕಾಗಿಲ್ಲ. ಆಧುನಿಕ ಯಂತ್ರೋಪಕರಣಗಳ ಅಗತ್ಯವೂ ಇಲ್ಲ. ಸರಳ ಉಪಕರಣಗಳ ಮೂಲಕ ಈ ಪುಡಿಯನ್ನು ತಯಾರಿಸಬಹುದು.

‘ಹರ್ಬಲ್‌ ವಾಶ್‌‘ ಪೌಡರ್ ತಯಾರಿಸಿ, ಮಾರುಕಟ್ಟೆ ಮಾಡಲು ಆಸಕ್ತಿ ಹೊಂದಿರುವ ಮಧ್ಯಮ, ಸಣ್ಣ ಉದ್ಯಮಿಗಳು ಹಾಗೂ ನವೋದ್ಯಮಿಗಳಿಗೆ, ಐಐಎಚ್‌ಆರ್‌ನಿಂದ ತಂತ್ರಜ್ಞಾನದ ನೆರವು ನೀಡಲಾಗುತ್ತದೆ‘ ಎಂದು ಐಐಎಚ್‌ಆರ್ ನಿರ್ದೇಶಕ ಎಂ.ಆರ್‌.ದಿನೇಶ್ ತಿಳಿಸಿದ್ದಾರೆ.  

ಆಸಕ್ತರು ಮೇಲ್ಕಂಡ ತಂತ್ರಜ್ಞಾನದ ಹೆಚ್ಚಿನ ವಿವರಣೆಗಾಗಿ, ತಯಾರಿಕೆಯ ತರಬೇತಿ ಹಾಗೂ ಪರವಾನಿಗೆಗಾಗಿ,  ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ. ದೂರವಾಣಿ: 080-23086100 (ext480) ಮತ್ತು ಮಿಂಚಂಚೆ director.iihr@icar.gov.in ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು