ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ: ಕೃಷಿಕರ ಆತಂಕ

Last Updated 20 ಆಗಸ್ಟ್ 2021, 3:09 IST
ಅಕ್ಷರ ಗಾತ್ರ

ಧರ್ಮಪುರ: ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ಹೋಬಳಿಯಲ್ಲಿ ಜೂನ್ ತಿಂಗಳ ಮೊದಲನೇ ವಾರದಲ್ಲಿ ಮಳೆ ಬಿದ್ದಾಗ ಸುಮಾರು 10 ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯಾಗಿದೆ. ಉಳಿದಂತೆ ಜುಲೈ ಮೊದಲ ವಾರದಲ್ಲಿ ಸುಮಾರು 12 ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯಾಗಿದೆ. ಹೋಬಳಿಯಲ್ಲಿ ಒಟ್ಟು 22 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಈ ವರ್ಷ ಉತ್ತಮ ಇಳುವರಿ ಬರಬಹುದು ಎಂದು ರೈತರು ನಿರೀಕ್ಷೆ ಮಾಡಿದ್ದರು. ಆದರೆ ಖಂಡೇನಹಳ್ಳಿ, ಹಲಗಲದ್ದಿ, ಶ್ರವಣಗೆರೆ, ಧರ್ಮಪುರ, ಮದ್ದಿಹಳ್ಳಿ, ಬೆ.ಕೆ. ಹಟ್ಟಿ, ಹೊಸಕೆರೆ, ಬೇತೂರು, ಕಣಜನಹಳ್ಳಿ, ಹರಿಯಬ್ಬೆ, ವೇಣುಕಲ್ಲುಗುಡ್ಡ, ಕೋಡಿಹಳ್ಳಿ, ಸೂಗೂರು ಗ್ರಾಮಗಳ ರೈತರ ಶೇಂಗಾ ಬೆಳೆಗೆ ಕರಿಜೋನಿ, ಬೆಂಕಿಸೀಡೆ ರೋಗ ಕಾಣಿಸಿಕೊಂಡಿದೆ. ಶೇಂಗಾ ಗಿಡದ ಎಲೆಗಳು ಒಣಗಿ ಉದುರುತ್ತಿವೆ. ಇದರಿಂದ ಬೆಳೆ ಉತ್ಕೃಷ್ಟವಾಗಿ ಸಿಗುವುದಿಲ್ಲ. ಮೇವು ನಾಶವಾಗುತ್ತದೆ. ಇನ್ನೂ ಶೇಂಗಾ ನೆಲದಲ್ಲಿಯೇ ಕೊಳೆಯುತ್ತದೆ. ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಶ್ರವಣಗೆರೆ ರೈತ ಎಂ. ಮಲ್ಲಯ್ಯ ಅಳಲು ತೋಡಿಕೊಂಡಿದ್ದಾರೆ.

ಬಾರದ ಬೆಳೆ ವಿಮೆ: 2019-20ರಲ್ಲಿ ಶೇಂಗಾ ಬೆಳೆಗೆ ಬೆಳೆ ವಿಮೆ
ಕಟ್ಟಲಾಗಿತ್ತು. ಮಳೆ ಬಾರದೇ ಶೇಂಗಾ ಸಂಪೂರ್ಣ ನೆಲ ಕಚ್ಚಿ ಮೇವು ಸಿಗದಂಥ ಪರಿಸ್ಥಿತಿ ತಲೆದೋರಿತ್ತು. ಆದರೆ, ಶೇಂಗಾ ಬೆಳೆಗೆ ಕಟ್ಟಿದ ವಿಮೆ ಹಣ ಬಾರದೇ ತಾಲ್ಲೂಕಿನ ರೈತರು ಕಂಗಾಲಾದರು. ಬರಸ್ಥಿತಿ ಬಂದರೂ ನಮಗೆ ವಿಮೆ ಹಣ ಸಿಗಲಿಲ್ಲ. ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು ಎಂದು ಖಂಡೇನಹಳ್ಳಿ ರೈತ ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

ಕಳೆದ ವರ್ಷ ಮಳೆ ಬಾರದೇ ರೈತರಿಗೆ ಶೇಂಗಾ ಬೆಳೆ ನಷ್ಟವಾಗಿ ಬಿತ್ತನೆ ಬೀಜವೂ ಇಲ್ಲದಂಥ ಪರಿಸ್ಥಿತಿ ಉಂಟಾಯಿತು. ಪ್ರಸಕ್ತ ವರ್ಷದಲ್ಲಿ ಶೇಂಗಾ ಬಿತ್ತನೆ ಬೀಜ ಕೊಳ್ಳಲು ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಮುಗಿಬಿದ್ದು ಕೊಂಡು ಕೊಂಡರು. ಆದರೆ, ಸರ್ಕಾರ ಬಿತ್ತನೆ ಬೀಜದ ದರ ನಿಗದಿ ಮಾಡುವಲ್ಲಿ ಎಡವಟ್ಟು ಮಾಡಿತು. ಆರಂಭದಲ್ಲಿ 1 ಕ್ವಿಂಟಲ್‌ಗೆ ₹ 6,700 ಬೆಲೆ ನಿಗದಿ ಮಾಡಿತ್ತು. ಈ ಮದ್ಯೆ ರೈತರು ಪ್ರತಿಭಟನೆ ಮಾಡಿದ್ದರಿಂದ ನಂತರ ₹ 5,500ಕ್ಕೆ ದರ ಇಳಿಸಲಾಗಿದೆ. ಇದರಿಂದ ಮುಂಚೆ ತೆಗೆದುಕೊಂಡ ನಮಗೆ ₹ 1,200 ನಷ್ಟವಾಗಿದೆ. ನಮಗೆ ಅನ್ಯಾಯವಾಗಿದೆ. ಕೃಷಿ ಸಚಿವರು ಇದರ ಬಗ್ಗೆ ಗಮನ ಹರಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ರೈತ ಮದ್ದಿಹಳ್ಳಿ ದೊಡ್ಡಯ್ಯ ಆಗ್ರಹಿಸಿದ್ದಾರೆ.

ಅಕ್ಕಡಿ ಬೆಳೆ ಬೆಳೆಯುವುದು ಅಗತ್ಯ

ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೀಟತಜ್ಞರಾದ ಡಾ.ರುದ್ರಮುನಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಏಕ ಬೆಳೆ ಪದ್ಧತಿಯಿಂದ ಇಂತಹ ರೋಗದ ಲಕ್ಷಣಗಳು ಹರಡುತ್ತವೆ. ಇದರ ಬದಲಾಗಿ ರೈತರು ಅಕ್ಕಡಿ ಬೆಳೆಗಳಾದ ಸಜ್ಜೆ, ನವಣೆ, ಹೆಸರು, ತೊಗರಿ, ಅಲಸಂದೆ ಬೆಳೆಗಳನ್ನು ಬಿತ್ತನೆ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT