ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೂ ಬಂತು ಡ್ರೋನ್‌: ಇಲ್ಲಿವೆ ರೈತರಿಗೆ ನೆರವಾಗುವ ಉಪಕರಣಗಳ ವಿವರ

Last Updated 8 ಸೆಪ್ಟೆಂಬರ್ 2021, 10:11 IST
ಅಕ್ಷರ ಗಾತ್ರ

ಕೃಷಿ ಚಟುವಟಿಕೆಗಳು ಈಗ ತಂತ್ರಜ್ಞಾನವನ್ನು ಆಶ್ರಯಿಸುತ್ತಿವೆ. ಇವು ಶ್ರಮವನ್ನೂ ಕಡಿಮೆ ಮಾಡುತ್ತಿವೆ; ಕೃಷಿಕಾರ್ಮಿಕರ ಕೊರತೆಯನ್ನೂ ನೀಗಿಸುತ್ತಿವೆ. ರೋಬೊಟಿಕ್‌ ತಂತ್ರಜ್ಞಾನ ಕೃಷಿಕರಿಗೆ ಹೆಚ್ಚೆಚ್ಚು ಆಪ್ತವಾಗುತ್ತಿವೆ. ಕೃಷಿ ಚಟುವಟಿಕೆಗಳ ನೆರವಿಗೆ ಬರುತ್ತಿರುವ ಕೆಲವೊಂದು ಉಪಕರಣಗಳ ಪರಿಚಯ ಇಲ್ಲಿದೆ...

ವೊಲೊ ಡ್ರೋನ್‌

ಹೆಚ್ಚು ವಿಸ್ತಾರದ ಪ್ರದೇಶಗಳಲ್ಲಿ ಕೃಷಿ ಮಾಡುವ ಕೃಷಿಕರಿಗೆ ಹಾಗೂ ಸಂಚಾರಕ್ಕೆ ಯೋಗ್ಯವಲ್ಲದ ಗುಡ್ಡಗಾಡು ಪ್ರದೇಶಗಳಲ್ಲಿ ಈ ಡ್ರೋನ್‌ ಹಲವು ರೀತಿಯಲ್ಲಿ ನೆರವಾಗುತ್ತದೆ. ಹೆಚ್ಚು ಭಾರವನ್ನು ಹೆಚ್ಚು ದೂರದ ವರೆಗೆ ಸಾಗಿಸಬಲ್ಲ ಸಾಮರ್ಥ್ಯ ಹೊಂದಿರುವುದು ಇದರ ವಿಶೇಷ. ವೊಲೊಕಾಪ್ಟರ್‌ ಕಂಪನಿ ಈ ಉಪಕರಣವನ್ನು ತಯಾರಿಸಿದೆ. ವಿದ್ಯುತ್‌ನ ನೆರವಿನಿಂದ ಕಾರ್ಯನಿರ್ವಹಿಸುವ ಈ ಡ್ರೋನ್‌ ಒಮ್ಮೆಗೆ ಗರಿಷ್ಠ 200 ಕೆ.ಜಿ. ತೂಕದ ವಸ್ತುಗಳನ್ನು ಸುಮಾರು 40 ಕಿ.ಮೀ. ದೂರದ ವರೆಗೆ ಸಾಗಿಸುತ್ತದೆ. ಔಷಧ, ರಾಸಾಯನಿಕಗಳ ಸಿಂಪಡಣೆಗೆ ಇದು ನೆರವಾಗುತ್ತದೆ. ಕೃಷಿಗಷ್ಟೇ ಅಲ್ಲದೆ ಕೈಗಾರಿಕೆಗಳು, ಕಟ್ಟಡ ನಿರ್ಮಾಣದಲ್ಲೂ ಬಳಸಿಕೊಳ್ಳಬಹುದು.

ನೆಟ್ರೊ ಸ್ಮಾರ್ಟ್‌ ಸ್ಪ್ರಿಂಕ್ಲರ್‌

ಉತ್ತಮ ಬೆಳೆಗಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಕಾಲಕಾಲಕ್ಕೆ ನೀರನ್ನು ಪೂರೈಸಬೇಕು. ನೀರನ್ನು ಪೋಲು ಮಾಡದೆ ಬಳಸುವುದು ಕೂಡ ಅನಿವಾರ್ಯ.ನೆಟ್ರೊ ಸ್ಮಾರ್ಟ್‌ ಸ್ಪ್ರಿಂಕ್ಲರ್‌ ಈ ಸಮಸ್ಯೆಗೆ ಪರಿಹಾರವಾಗಿ ಒದಗಬಹುದು. ಸೌರಶಕ್ತಿಯ ನೆರವಿನಿಂದ ಕಾರ್ಯನಿರ್ವಹಿಸುವ ಈ ಉಪಕರಣವನ್ನು ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಿಸಬಹುದು. ಇದರಲ್ಲಿನ ವಿಶೇಷ ಸೆನ್ಸರ್‌ಗಳು ಮಣ್ಣಿನಲ್ಲಿನ ತೇವಾಂಶ, ಗಿಡಗಳಲ್ಲಿನ ತೇವಾಂಶ, ವಾತಾವಾರಣ – ಹೀಗೆ ಹಲವು ಮಾಹಿತಿಗಳನ್ನು ಕಾಲಕಾಲಕ್ಕೆ ಕಲೆಹಾಕುತ್ತ, ಅದಕ್ಕೆ ತಕ್ಕ ರೀತಿಯಲ್ಲಿ ನೀರನ್ನು ಪೂರೈಸುತ್ತದೆ. ಅಗತ್ಯ ಪ್ರದೇಶಗಳಲ್ಲಿ ಇವನ್ನು ಅಳವಡಿಸಿ ನೀರಿನ ಸಂಪರ್ಕ ಒದಗಿಸಿದರೆ ಸಾಕು, ಉಳಿದ ಕೆಲಸವನ್ನು ತಾನಾಗಿಯೇ ನಿರ್ವಹಿಸಿಕೊಳ್ಳುತ್ತದೆ. ಮುಖ್ಯವಾಗಿ ನೀರಿನ ಉಳಿತಾಯಕ್ಕೆ ಈ ಉಪಕರಣ ನೆರವಾಗುತ್ತದೆ.

ಈಡೆನ್‌ ಗಾರ್ಡೆನ್‌ ಸೆನ್ಸರ್‌

ಹೊಲ ಅಥವಾ ತೋಟದಲ್ಲಿನ ವಾತಾವಾರಣ, ಮಣ್ಣಿನಲ್ಲಿ ಆಗುತ್ತಿರುವ ಬದಲಾವಣೆಗಳು, ವಾತಾವರಣದಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳು… ಈ ಎಲ್ಲ ಅಂಶಗಳನ್ನು ಕಾಲಕಾಲಕ್ಕೆ ತಿಳಿದುಕೊಂಡು ಕೃಷಿ ಮಾಡಿದರೆ ಉತ್ತಮ ಬೆಳೆ ಸಿಗುತ್ತದೆ. ಆದರೆ ಇದು ಸುಲಭದ ಕೆಲಸವಲ್ಲ. ಇದಕ್ಕಾಗಿಯೇ ಈಡೆನ್‌ ಗಾರ್ಡೆನ್‌ ಸೆನ್ಸರ್‌ ತಯಾರಿಸಲಾಗಿದೆ. ಸೌರಶಕ್ತಿ ನೆರವಿನಿಂದ ಕಾರ್ಯನಿರ್ವಹಿಸುವ ಈ ಉಪಕರಣವನ್ನು ಹೊಲ ಅಥವಾ ತೋಟದಲ್ಲಿ ಅಳವಡಿಸಿದರೆ ಸಾಕು ಈ ಮಾಹಿತಿಯನ್ನು ಇದಕ್ಕಾಗಿಯೇ ತಯಾರಿಸಲಾಗಿರುವಆ್ಯಪ್ಮೂಲಕ ನಮ್ಮ ಸ್ಮಾರ್ಟ್‌ಫೋನ್‌ಗೆ ವಿಶ್ಲೇಷಣೆ ರೂಪದಲ್ಲಿ ಸಿಗುತ್ತದೆ. ಇದರಿಂದ ಅಗತ್ಯ ಸಂದರ್ಭಗಳಲ್ಲಿ ಮಾತ್ರ ನೀರು, ಗೊಬ್ಬರ ಪೂರೈಸಿ ಉತ್ತಮವಾಗಿ ಗಿಡಗಳ ಆರೈಕೆ ಮಾಡಬಹುದು. ಇದರಿಂದ ಹೊರಹೊಮ್ಮುವ ಎಲೆಕ್ಟ್ರಿಕ್‌ ಸಿಗ್ನಲ್‌ಗಳಿಂದ ಗಿಡಗಳಿಗೆ ಯಾವುದೇ ಹಾನಿಯಾಗುವುದಿಲ್ಲ.

ಕಳೆಯನ್ನು ಕತ್ತರಿಸಲು ಸ್ಥಿಲ್

ಬೆಳೆಗೆ ಮಾರಕವಾಗುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕಾದ್ದು ಕೃಷಿಯ ಮುಖ್ಯ ಚಟುವಟಿಕೆ. ಕಳೆಯ ಸಸಿ–ಗಿಡಗಳನ್ನು ಕತ್ತರಿಸಲೆಂದೆ ಪುಟ್ಟ ಗರಗಸದಂಥ ‘ಸ್ಥಿಲ್‌’ ಎಂಬ ಉಪಕರಣವೊಂದು ಆವಿಷ್ಕಾರಗೊಂಡಿದೆ. ಇದರ ನೆರವಿನಿಂದ ಕಳೆಗಿಡಗಳನ್ನು ಸುಲಭವಾಗಿ ಕತ್ತರಿಸಬಹುದು. ಪೊದೆಯಂತಿರುವ ಕಳೆಯ ಕಟಾವಿಗೆ ಈ ಉಪಕರಣ ಹೆಚ್ಚು ಉಪಯುಕ್ತ. ವಿದ್ಯುತ್‌ನ ನೆರವಿನಿಂದ ಕಾರ್ಯನಿರ್ವಹಿಸುವ ಈ ಉಪಕರಣವನ್ನು ಚಾರ್ಜ್‌ ಮಾಡಿ, ಬಳಸಿಕೊಳ್ಳಬಹುದು. ಲೀಥಿಯಂ ಐಯಾನ್‌ ಬ್ಯಾಟರಿಯನ್ನು ಅಳವಡಿಸಲಾಗಿದೆ. ಸುಮಾರು 1.4 ಕೆ.ಜಿ. ತೂಕವಿರುವ ಈ ಉಪಕರಣವನ್ನು ಕಿಸೆಗೆ ಸಿಕ್ಕಿಸಿಕೊಂಡು ತೋಟಗಳಲ್ಲಿ ಅಡ್ಡಾಡುತ್ತ, ಬೇಕಾದಾಗ ಬಳಸಿಕೊಳ್ಳಬಹುದು.

ನೈಟ್ರೊಜೆನ್‌ ಸೆನ್ಸರ್‌

ಉತ್ತಮ ಇಳುವರಿಗಾಗಿ ಬೆಳೆಗೆ ರಸಗೊಬ್ಬರಗಳನ್ನು ಬಳಸುತ್ತೇವೆ. ಈ ರಸಗೊಬ್ಬರಗಳಲ್ಲಿನ ಸಾರಜನಕ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾದರೆ ಬೆಳೆಗೆ ಹಾನಿ ತಪ್ಪಿದ್ದಲ್ಲ. ಗೊಬ್ಬರದಲ್ಲಿನ ಸಾರಜನಕ ಪೈರು–ಸಸಿಗಳಿಗೆ ಪೂರೈಕೆಯಾದ ನಂತರ ಉಳಿದದ್ದು ಗಾಳಿಗೆ ಸೇರಿಕೊಂಡರೆ ಯಾವ ಹಾನಿಯೂ ಇರುವುದಿಲ್ಲ ಆದರೆ ಅಂತರ್ಜಲಕ್ಕೆ ಸೇರಿದರೆ ಅಪಾಯ ಖಂಡಿತ. ಹೀಗಾಗಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿಗೂ ಬೆಳೆಗೂ ಸಾರಜನಕ ಪೂರೈಕೆಯಾಗುವುದನ್ನು ತಪ್ಪಿಸಬೇಕು. ಇಂಥ ನಿಯಂತ್ರಣದಲ್ಲಿ ನೆರವಾಗುತ್ತದೆ ‘ಗ್ರೀನ್‌ ಸೀಕರ್‌’. ಸುಲಭವಾಗಿ ಕೈಯಲ್ಲಿ ಹಿಡಿದುಕೊಳ್ಳಬಹುದಾದ ಈ ಉಪಕರಣದ ಮೂಲಕ ಇನ್‌ಫ್ರಾರೆಡ್‌ ಕಿರಣಗಳನ್ನು ಸಸಿಗಳ ಮೇಲೆ ಹಾಯಿಸುವ ಮೂಲಕ ಗಿಡದ ನಮ್ಮೆ ಬೆಳೆಯ ಆರೋಗ್ಯವನ್ನು ಸುಲಭವಾಗಿ ಪರೀಕ್ಷಿಸಬಹುದು; ಅಗತ್ಯ ಇರುವಷ್ಟೆ ಗೊಬ್ಬರವನ್ನೂ ಪೂರೈಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT