ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳ ಸಲಹೆಯಿಂದ ಹೆಚ್ಚಿನ ಲಾಭ

ಸೇವಂತಿಗೆ ಸಮಗ್ರ ಬೆಳೆ ನಿರ್ವಹಣೆ ಕ್ಷೇತ್ರೋತ್ಸವ
Last Updated 27 ಜನವರಿ 2020, 13:43 IST
ಅಕ್ಷರ ಗಾತ್ರ

ಮಾಗಡಿ: ಸೇವಂತಿಗೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಬಗ್ಗೆ ವಿಜ್ಞಾನಿಗಳ ಸಲಹೆ ಪಡೆದು ಹೂವು ಬೆಳೆದರೆ ಅಧಿಕ ಲಾಭ ಗಳಿಸಬಹುದು ಎಂದು ವಿಜ್ಞಾನಿ ಪ್ರೀತು.ಡಿ.ಸಿ. ತಿಳಿಸಿದರು.

ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸೋಮವಾರ ಕಾಳಾಗಿ ಗ್ರಾಮದಲ್ಲಿ ಏರ್ಪಡಿಸಿದ್ದ ಸೇವಂತಿಗೆ ಸಮಗ್ರ ಬೆಳೆ ನಿರ್ವಹಣೆ ಕ್ಷೇತ್ರೋತ್ಸವದ ಅವರು ಮಾತನಾಡಿದರು.

ರೈತರಿಗೆ ಸುಧಾರಿತ ತಂತ್ರಜ್ಞಾನ ಪರಿಚಯ ಮಾಡಿಕೊಡುವ ಸಲುವಾಗಿ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹೂವು ಬೆಳೆಗಾರ ರೈತರು ಭಾಗವಹಿಸಿ, ಕ್ಷೇತ್ರೋತ್ಸವದಲ್ಲಿ ದೊರೆಯುವ ಮಾಹಿತಿ ತಿಳಿದುಕೊಳ್ಳಬೇಕು. ರೈತರು ಹೆಚ್ಚಾಗಿ ಪೂರ್ಣಿಮ, ಚಂದ್ರಿಕ ಸೇವಂತಿಗೆ ತಳಿಗಳನ್ನು ಬೆಳೆಯುತ್ತಿದ್ದಾರೆ. ಚಳಿಗಾಲದಲ್ಲಿ ಹೊರತುಪಡಿಸಿ ವರ್ಷದ ಯಾವ ಕಾಲದಲ್ಲಾದರೂ ನಾಟಿ ಮಾಡಬಹುದು ಎಂದು ವಿರಿಸಿದರು.

ಸೇವಂತಿಗೆ ಬೆಳೆಯಲು ರೈತರು ನರ್ಸರಿಯಿಂದ ಅಥವಾ ಜಮೀನಿನಲ್ಲಿ ಸಿಗುವ ಮೃದು ಕಾಂಡದ ತುಂಡುಗಳು ಹಾಗೂ ಕಂದುಗಳನ್ನು ನಾಟಿಗೆ ಉಪಯೋಗಿಸುತ್ತಾರೆ. ಆದರೆ, ನಾಟಿಗೆ ಮುನ್ನ ಕಾಂಡದ ತುಂಡುಗಳ ಬುಡವನ್ನು 0.2% ಮಿಥಾಕ್ಸಿ ಈಥೈಲ್ ಕ್ಲೋರೈಡ್ (ಸೆರಸಾನ್) ದ್ರಾವಣದಲ್ಲಿ ಅದ್ದಬೇಕು. ನಾಟಿ ಮಾಡಿದ ಮೂರೂವರೆ ತಿಂಗಳಲ್ಲಿ ಹೂವು ಬಿಡಲು ಪ್ರಾರಂಬಿಸಿ 45 ದಿನಗಳವರೆಗೆ ಮುಂದುವರೆಯುತ್ತದೆ ಎಂದರು.

ಪ್ರತಿ ಎಕರೆಗೆ 4 ರಿಂದ 6 ಟನ್ ಹೂವು ಇಳುವರಿಯನ್ನು ನಿರೀಕ್ಷಿಸಬಹುದು. ಪ್ರತಿ ಎಕರೆಗೆ 24 ಸಾವಿರ ಕಂದುಗಳು ಬೇಕಾಗುತ್ತದೆ. 250 ಕೆ.ಜಿ. ಬೇವಿನ ಹಿಂಡಿ ಮತ್ತು 8 ಟನ್ ಕೊಟ್ಟಿಗೆ ಗೊಬ್ಬರದ ಜೊತೆಗೆ ಐ.ಐ.ಹೆಚ್.ಆರ್ ಅಥವಾ ಜಿ.ಕೆ.ವಿ.ಕೆ.ಯಲ್ಲಿ ಲಭ್ಯವಿರುವ ಮೈಕ್ರೋಬಯಲ್ ಕನ್ಸಾರ್ಶಿಯಂ ಅನ್ನು (1 ಟನ್ ಕೊಟ್ಟಿಗೆ ಗೊಬ್ಬರಕ್ಕೆ 1 ಕೆ.ಜಿ.ಯಂತೆ) ಬಳಸಿದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಜೊತೆಗೆ ಗಿಡದ ಬೆಳವಣಿಗೆಗೆ ಮತ್ತು ರೋಗ ನಿಯಂತ್ರಕಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.

ಪ್ರತಿ ಎಕರೆಗೆ 40:60:40 ಸಾರಜನಕ: ರಂಜಕ: ಪೊಟ್ಯಾಷ್‌ ಗೊಬ್ಬರವನ್ನು ಶೇ 20 ರಷ್ಟು ಮೂಲ ಗೊಬ್ಬರವಾಗಿ ಮತ್ತು ಶೇ 80 ರಷ್ಟು ಗೊಬ್ಬರವನ್ನು ಹಂತ ಹಂತವಾಗಿ ಹನಿನೀರಾವರಿ ಮೂಲಕ ನೀಡಬೇಕು. ಇದರಿಂದ ಗೊಬ್ಬರದ ಬಳಕೆ ಸಾಮರ್ಥ್ಯ ಹೆಚ್ಚಿಸುವುದಲ್ಲದೆ ಹೆಚ್ಚು ಆದಾಯ ಮತ್ತು ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.

ಹಳದಿ ಅಂಟಿನ ಬಲೆ ಬಳಸುವುದರಿಂದ ರಸಹೀರುವ ಕೀಟಗಳ ನಿಯಂತ್ರಣ ಮಾಡಬಹುದು. ಪ್ಲಾಂಟ್ ಗ್ರೋತ್ ರೆಗ್ಯುಲೇಟರ್ ಗಿಬ್ಬರ್ಲಿಕ್ ಆಸಿಡ್ ಮತ್ತು ಲಘು ಪೋಷಕಾಂಶಗಳ ಎಲೆ ಸಿಂಪರಣೆ ಬಗ್ಗೆ ಮಾಹಿತಿ ನೀಡಿದರು.

ಗಿಡ ನೆಟ್ಟ 35-40 ದಿನಗಳಲ್ಲಿ ಯಂತ್ರದಿಂದ ಕುಡಿ ಚಿವುಟುವುದರಿಂದ ಹೆಚ್ಚಿನ ಟೊಂಗೆ ಬೆಳೆದು ಅಧಿಕ ಹೂ ಬಿಡಲು ಸಹಾಯವಾಗುತ್ತದೆ ಎಂದರು.

ಐ.ಆರ್.ಡಿ.ಎಸ್.ನ ಗೋವಿಂದರಾಜು, ಕಾಳಾರಿಯ ಜೈಪ್ರಕಾಶ್, ರಾಜಣ್ಣ, ರಂಗಸ್ವಾಮಯ್ಯ, ಪಾಲಾಕ್ಷ, ಕೃಷ್ಣಪ್ಪ ಹಾಗೂ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT