ಭಾನುವಾರ, ಫೆಬ್ರವರಿ 23, 2020
19 °C
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಲಾಭ ಕೃಷಿಕರಿಗೆ

ರೋಗ ನಿರೋಧಕ ಟೊಮೆಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್‌ಆರ್) ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ಬುಧವಾರ ಆರಂಭವಾಗಿದ್ದು, ನಾಲ್ಕು ಬಗೆಯ ರೋಗ ನಿರೋಧಕ ಶಕ್ತಿ ಇರುವ ಟೊಮೆಟೊ ಪ್ರಮುಖ ಆಕರ್ಷಣೆಯಾಗಿದೆ.

‘ಅರ್ಕಾ ಅಭೇದ್’ ಹಸರಿನ ಈ ಟೊಮೆಟೊ ಮೊದಲ ಅಂಗಮಾರಿ ರೋಗ, ಕೊನೆಯ ಅಂಗಮಾರಿ ರೋಗ, ಎಲೆ ಮುರುಟು ರೋಗ ಮತ್ತು ಸೊರಗುರೋಗಗಳನ್ನು ನಿಗ್ರಹಿಸುವ ಶಕ್ತಿ ಹೊಂದಿದೆ. ಎಕರೆಗೆ 25ರಿಂದ 30 ಟನ್‌ನಷ್ಟು ಬೆಳೆ ತೆಗೆಯುವುದು ಸಾಧ್ಯ’ ಎಂದು ವಿಜ್ಞಾನಿ ಡಾ.ಎಚ್‌.ಸಿ.ಪ್ರಸನ್ನ ತಿಳಿಸಿದರು.

‘ಪ್ಲಾಸ್ಟಿಕ್‌ ಮಲ್ಚ್‌ ಹಾಕುವುದು, ಹನಿ ನೀರಾವರಿ, ಕಾಲಕಾಲಕ್ಕೆ ಗೊಬ್ಬರ ನೀಡುವಿಕೆ, ಐಐಎಚ್‌ಆರ್‌ ಅಭಿವೃದ್ಧಿಪಡಿಸಿದ ಪೋಲಿಯಾರ್ ಪೋಷಕಾಂಶ ಸಿಂಪಡಣೆ, ಬೇರುಗಳ ರಚನೆಗೆ ಸೂಕ್ಮಾಣು ಗೊಬ್ಬರ ನೀಡುತ್ತಿದ್ದರೆ ಈ ಇಳುವರಿ ನಿಶ್ಚಿತ. ಇದು ಹುಳಿಮಿಶ್ರಿತ ದುಂಡಗಿನ (ನಾಟಿ) ಟೊಮೆಟೊ ಆಗಿದ್ದು, ಡಾ.ಟಿ.ಟಿ.ಸದಾಶಿವ ಕಂಡುಹಿಡಿದಿದ್ದಾರೆ. ದೇಶದಲ್ಲಿ ಜೈವಿಕ ಸಂಶೋಧನೆಗೆ ಪೇಟೆಂಟ್‌ ನೀಡುವ ವ್ಯವಸ್ಥೆ ಇಲ್ಲದ ಕಾರಣ ಇದಕ್ಕೆ ಪೇಟೆಂಟ್‌ ಪಡೆಯಲು ಸಾಧ್ಯವಾಗಿಲ್ಲ’ ಎಂದು ಅವರು ವಿವರಿಸಿದರು.

ಐಐಎಚ್‌ಆರ್‌ ಇರುವುದು ಅರ್ಕಾವತಿ ನದಿಯ ದಂಡೆಯಲ್ಲಿ. ಹೀಗಾಗಿ ಇಲ್ಲಿ ಅಭಿವೃದ್ಧಿಪಡಿಸಲಾದ ತಳಿಗಳಿಗೆ ‘ಅರ್ಕಾ’ ಎಂಬ ಹೆಸರನ್ನು ಮೊದಲಿಗೆ ಸೇರಿಸಲಾಗುತ್ತಿದೆ. ಈ ವರ್ಷ 30ಕ್ಕೂ ಅಧಿಕ ಹಣ್ಣು, ಹೂ, ತರಕಾರಿ ಬೆಳೆಗಳಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಇಲ್ಲಿಂದ ತಳಿ ಕೊಂಡೊಯ್ದ ರೈತರು ತಾವೇ ಉದ್ಯಮಿಗಳಾಗಬೇಕು ಎಂಬ ಆಶಯ ನಮ್ಮದು. ಅದಕ್ಕಾಗಿ ಉತ್ತೇಜಿಸುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರದ ಕ್ಷೇತ್ರಾಧಿಕಾರಿ ಡಾ.ಜಗದೀಶ್ ಹೇಳಿದರು.

ಮೇಳದಲ್ಲಿ ಡ್ರ್ಯಾಗನ್‌ ಹಣ್ಣು, ಸೀಬೆ, ಅಲಂಕಾರಿಕ ಗ್ಲಾಡಿಯೋಲಸ್‌ ಮತ್ತು ಜರ್ಬೇರಾ ಹೂವು ತಳಿಗಳು ರೈತರ ಆಕರ್ಷಣೆಯ ಕೇಂದ್ರಗಳಾಗಿದ್ದವು. ಸೆಲ್ಫಿ ಪಾಯಿಂಟ್‌ಗಳು, ತಾರಸಿ ತೋಟ ಪ್ರಾತ್ಯಕ್ಷಿಕೆಗಳಲ್ಲೂ ಜನ ಹೆಚ್ಚಾಗಿ ಸೇರಿದ್ದರು.

‘ಅರ್ಕಾ ವಿಶೇಷ’: ಐಐಎಚ್‌ಆರ್ ಸಂಶೋಧಿಸಿದ ಇನ್ನೊಂದು ಸಂಕೀರ್ಣ ಟೊಮೆಟೊ ತಳಿ ‘ಅರ್ಕಾ ವಿಶೇಷ’. ಟೊಮೆಟೊ ಒಂದೇ ರೀತಿಯಲ್ಲಿ ಹಣ್ಣಾಗುವುದು, ಕೆಂಪಗೆ ಇರುವುದು ಇದರ ವಿಶೇಷ. ಗಿಡವನ್ನು ಅಲ್ಲಾಡಿಸಿದರೆ ಹಣ್ಣುಗಳು ಒಮ್ಮೆಗೇ ಉದುರುವುದರಿಂದ ಹಾಗೂ ಹಣ್ಣು ಗಟ್ಟಿಯಾಗಿರುವುದರಿಂದ ಕಟಾವು, ಸಾಗಣೆಗೆ ಅನುಕೂಲ.

***

ತೋಟಗಾರಿಕೆಯ ಸಂಶೋಧನೆ ರೈತರಿಗೆ ತಲುಪಿದರಷ್ಟೇ ಅದಕ್ಕೊಂದು ಸಾರ್ಥಕತೆ, ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ

- ಡಾ.ತ್ರಿಲೋಚನ ಮಹಾಪಾತ್ರ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು