ಬುಧವಾರ, ಮೇ 18, 2022
25 °C
ರೈತರನ್ನು ಆಕರ್ಷಿಸುತ್ತಿದೆ ಪ್ರಾತ್ಯಕ್ಷಿಕೆ

ಕೃಷಿ ಮೇಳ: ಮೇವಿಗೂ ಬಂತು ಮಣ್ಣುರಹಿತ ಕೃಷಿ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಣ್ಣು ರಹಿತ ಕೃಷಿ’ ಅಥವಾ ‘ಜಲಕೃಷಿ’ (ಹೈಡ್ರೊಫೋನಿಕ್ಸ್‌) ವಿಧಾನ ಬಳಸಿ ತೋಟ ಹಾಗೂ ಮನೆಯ ತಾರಸಿಯಲ್ಲೇ ಮಣ್ಣನ್ನು ಬಳಸದೆಯೇ ವಿವಿಧ ರೀತಿಯ ಸಸಿಗಳನ್ನು ಈಗಾಗಲೇ ಬೆಳೆಸಲಾಗುತ್ತಿದೆ. ಆದರೆ, ಜಾನುವಾರುಗಳಿಗೆ ನೀಡುವ ಮೇವನ್ನೂ ಈ ವಿಧಾನದಲ್ಲೇ ಕಡಿಮೆ ಸ್ಥಳದಲ್ಲಿ ಬೆಳೆಸಬಹುದಾದ ಪ್ರಾತ್ಯಕ್ಷಿಕೆ ‘ಕೃಷಿ ಮೇಳ’ದಲ್ಲಿ ರೈತರ ಗಮನ ಸೆಳೆಯುತ್ತಿದೆ.

ಜಾನುವಾರುಗಳ ಮೇವನ್ನು ಜಮೀನಿನ ಬಯಲಿನ ಬದಲಿಗೆ ಕಡಿಮೆ ಜಾಗದಲ್ಲಿ ಸುಲಭವಾಗಿ ಬೆಳೆಸುವ ವಿಧಾನವನ್ನು ಬೆಂಗಳೂರಿನ ಬಯೋಗ್ರೀನ್ ಅಗ್ರಿ ಲಿಂಕ್ಸ್‌ ಎಂಬ ಸಂಸ್ಥೆ ರೈತರಿಗೆ ಪರಿಚಯಿಸಿದೆ. ಕೃಷಿ ಮೇಳದಲ್ಲಿ ಈ ಸಂಸ್ಥೆಯ ಮಳಿಗೆಯಲ್ಲಿ ಮಣ್ಣು ರಹಿತವಾಗಿ ಮೇವು ಬೆಳೆಸುವ ವಿಧಾನವನ್ನು ಪ್ರದರ್ಶಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ರೈತರು ಮುಗಿಬಿದ್ದರು.

‘ಜಾನುವಾರುಗಳಿಗೆ ಬೇಕಾದ ಮೇವನ್ನು ಜಮೀನಿನಲ್ಲಿ ಬೆಳೆಯುತ್ತಾರೆ. ಆದರೆ, ಕಡಿಮೆ ಸ್ಥಳದಲ್ಲೇ ಸುಲಭವಾಗಿ  ಮೇವನ್ನು ಬೆಳೆಯಬಹುದು. ಸಾಮಾನ್ಯ ಮೇವಿಗೆ ಹೋಲಿಸಿದರೆ, ಜಲಕೃಷಿ ವಿಧಾನದ ಮೇವು ಹೆಚ್ಚು ಪ್ರೊಟೀನ್‌ ಅಂಶಗಳನ್ನು ಹೊಂದಿರುತ್ತದೆ’ ಎಂದು ಬಯೋಗ್ರೀನ್ ಅಗ್ರಿ ಲಿಂಕ್ಸ್‌ ಸಂಸ್ಥೆಯ ಮಾಲೀಕ ಪಿ.ದಿಲೀಪ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಡಿಮೆ ಸ್ಥಳದಲ್ಲಿ ಮೇವು ಬೆಳೆಯಲು 32 ಪ್ಲಾಸ್ಟಿಕ್ ಟ್ರೇಗಳನ್ನು ಇಡಬಹುದಾದ ಸ್ಟ್ಯಾಂಡ್ ತಯಾರಿಸಿದ್ದೇವೆ. ಪ್ರತಿ ಟ್ರೇನಲ್ಲೂ ಒಂದು ಕೆ.ಜಿಯಷ್ಟು ಜೋಳದ ಮೇವನ್ನು ಬೆಳೆಸಿದ್ದೇವೆ. ಬಯಲಿನಲ್ಲಿ ಬೆಳೆದರೆ ಎರಡು ಅಥವಾ ಮೂರು ತಿಂಗಳಿಗೆ ಮೇವು ಸಿಗುತ್ತದೆ. ಈ ಟ್ರೇಗಳಲ್ಲಿ 10 ದಿನಗಳಿಗೇ ಮೇವು ಸಿದ್ಧಗೊಳ್ಳುತ್ತದೆ’ ಎಂದು ವಿವರಿಸಿದರು.

‘32 ಟ್ರೇಗಳ ಮಾದರಿಯಲ್ಲಿ ರೈತನೊಬ್ಬ ನಾಲ್ಕು ಹಸುಗಳಿಗೆ ಬೇಕಾದ ಮೇವನ್ನು ಕಡಿಮೆ ಜಾಗದಲ್ಲಿ ಬೆಳೆದುಕೊಳ್ಳಬಹುದು. ತಲಾ ನಾಲ್ಕು ಟ್ರೇಗಳಲ್ಲಿ ಹಂತ ಹಂತವಾಗಿ ಮೇವು ಬೆಳೆಯಬೇಕು. ಇದನ್ನೇ ಪುನರಾವರ್ತನೆ ಮಾಡಿಕೊಂಡರೆ, ದಿನಕ್ಕೆ ನಾಲ್ಕು ಹಸುವಿಗೆ ಬೇಕಾದ ಮೇವು ಸಿದ್ಧವಾಗುತ್ತದೆ’ ಎಂದರು.

‘ಮೇವು ಬೆಳೆಯಲು ಹನಿ ನೀರಾವರಿ ಮೂಲಕ ಎಲ್ಲ ಟ್ರೇಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸಬಹುದು. ಇದರ ರಕ್ಷಣೆಗೆ ಸ್ಟ್ಯಾಂಡ್‌ ಸುತ್ತಲೂ ಪರದೆಯನ್ನು ಅಳವಡಿಸುವುದು ಸೂಕ್ತ. ಆಗ ಕೀಟಗಳ ಕಾಟ ಇರುವುದಿಲ್ಲ’ ಎಂದು ಮಾಹಿತಿ ನೀಡಿದರು.

‘ಈ ಮೇವಿನಿಂದ ಹೆಚ್ಚು ಹಾಲು ಉತ್ಪಾದನೆ’

‘ಜಲಕೃಷಿ ವಿಧಾನದ ಮೇವು ತಿನ್ನುವ ಹಸು ಸಾಮಾನ್ಯ ಮೇವು ತಿನ್ನುವ ಹಸುವಿಗಿಂತ 1.5 ಲೀಟರ್‌ಗಳಷ್ಟು ಹೆಚ್ಚುವರಿ ಹಾಲು ನೀಡುತ್ತದೆ . ಇದರಲ್ಲಿನ ಪ್ರೊಟೀನ್‌ ಅಂಶವೂ ಶೇ 18ರಷ್ಟು ಅಧಿಕವಾಗಿರುತ್ತದೆ. ಜೋಳದ ಮೇವು ಮಾತ್ರವಲ್ಲದೇ, ಗೋಧಿ, ರಾಗಿ, ಹುರುಳಿ ಸೇರಿದಂತೆ ವಿವಿಧ ರೀತಿಯ ಮೇವುಗಳನ್ನು ಈ ವಿಧಾನದಲ್ಲಿ ಬೆಳೆಯಬಹುದು’ ಎಂದು ದಿಲೀಪ್‌ ಕುಮಾರ್ ವಿವರಿಸಿದರು.

‘ರೈತರ ಅನುಕೂಲಕ್ಕಾಗಿ 36 ಟ್ರೇಗಳ ಮಾದರಿಯನ್ನು ಸಂಸ್ಥೆಯೇ ಸಿದ್ಧಪಡಿಸಿ ಕೊಡುತ್ತದೆ. ಇದಕ್ಕೆ ₹26 ಸಾವಿರ ವೆಚ್ಚ ಆಗಲಿದೆ. ಇನ್ನೂ ಕಡಿಮೆ ಸಾಮರ್ಥ್ಯಕ್ಕೆ ಬೇಕಾದಂತೆಯೂ ಸ್ಟ್ಯಾಂಡ್ ಸಿದ್ಧಪಡಿಸಿಕೊಡಲಾಗುವುದು. ಆಸಕ್ತರು ಸಂಸ್ಥೆಯ ದೂರವಾಣಿ 9901769546 ಅಥವಾ ಇಮೇಲ್–biogreendv@gmail.com ಅನ್ನು ಸಂಪ‍ರ್ಕಿಸಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು