ಸೋಮವಾರ, ಜನವರಿ 20, 2020
19 °C

ಬೇಸಿಗೆ ಭತ್ತ ಬಿತ್ತನೆಗೆ ಮುನ್ನ ಗಮನಿಸಿ

ಆರ್‌.ಜಿ.ಗೊಲ್ಲರ್‌ Updated:

ಅಕ್ಷರ ಗಾತ್ರ : | |

ಮುಂಗಾರು ಭತ್ತದ ಕೊಯ್ಲು ಮುಗಿದಿದೆ. ಬೇಸಿಗೆಯಲ್ಲಿ ಭತ್ತದ ಕೃಷಿಗೆ ರೈತರು ಸಿದ್ಧರಾಗುತ್ತಿದ್ದಾರೆ. ಕೆಲವರು ಬಿತ್ತನೆ ಬೀಜಗಳನ್ನು ಸಂಗ್ರಹಿಸಿ, ಬೀಜೋಪಾಚರ ಮಾಡಿರಬಹುದು. ಇನ್ನೂ ಕೆಲವರು ಸಸಿ ಮಡಿ ತಯಾರಿಕೆಗೂ ಸಿದ್ಧತೆ ಮಾಡಿಕೊಂಡಿರಬಹುದು. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಭತ್ತ ಬೆಳೆದು, ಉತ್ತಮ ಇಳುವರಿ ಮತ್ತು ಆರೋಗ್ಯ ಪೂರ್ಣ ಫಸಲು ಪಡೆಯುವುದಕ್ಕಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ಕೊಡಲಾಗಿದೆ. ಬೇಸಿಗೆ ಭತ್ತ ಮಾಡುವವರು ಈ ಅಂಶಗಳನ್ನು ಒಮ್ಮೆ ಗಮನಿಸಬಹುದು.

ಅಧಿಸೂಚಿತ, ಅನುಮೋದಿತ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯುವುದು ಸೂಕ್ತ.

ನಾಲೆ ನೀರು ಆಶ್ರಿತವಾಗಿರುವ, ನಾಲೆಯ ಕೊನೆ ಭಾಗದಲ್ಲಿರುವ ಜಮೀನಿರುವ ರೈತರು, ನೀರಿನ ಲಭ್ಯತೆ ನೋಡಿಕೊಂಡು, ಭತ್ತ ಬಿತ್ತನೆ ಮಾಡುವುದು ಸೂಕ್ತ.

ಚಳಿ ಇರುವುದರಿಂದ ಸಸಿ ಮಡಿಯಲ್ಲಿ ಭತ್ತದ ರೋಗಗಳ ಹತೋಟಿ ಕುರಿತು ಟ್ರೈಕೋಡರ್ಮಾ ಬೆರೆಸಿದ ಕಾಂಪೋಸ್ಟ್ ಬಳಕೆ ಅತ್ಯಗತ್ಯ.

ಮುಂಗಾರು ಭತ್ತ ಬೆಳೆದಲ್ಲಿಯೇ, ಬೇಸಿಗೆ ಪೈರು ಇಡುವುದಾದರೆ, ಬೆರಕೆ ಭತ್ತದ ಸಮಸ್ಯೆ ಬರುತ್ತದೆ. ಅದನ್ನು ತಡೆಯಲು ಸಸಿ ಮಡಿ ಮತ್ತು ಮುಖ್ಯ ಗದ್ದೆಗಳಲ್ಲಿ ಸಾಕಷ್ಟು ಅವಧಿಗೆ ನೀರು ನಿಲ್ಲಿಸಿ, ಕೆಸರು ಗದ್ದೆ ಕಾರ್ಯ ಸರಿಯಾಗಿ ಮಾಡಿದಲ್ಲಿ, ಕಳೆಗಳೊಂದಿಗೆ ಕಾರು (ಉದುರಿದ ) ಭತ್ತದ ಬೀಜಗಳನ್ನು ನಿಯಂತ್ರಿಸಬಹುದು.

ಬೇಸಿಗೆ ಭತ್ತದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಡಿಸೆಂಬರ್ ಮೂರನೇ ವಾರದೊಳಗೆ ಸಸಿ ಮಡಿಯಲ್ಲಿ ಬಿತ್ತನೆ ಅಗತ್ಯ. ತಡವಾದಂತೆ ಇಳುವರಿ ಕಡಿಮೆಯಾಗುವುದು.

ಅತಿ ಮುಂಚಿತ, ಅತಿ ವಿಳಂಬವಾಗಿ ನಾಟಿ / ಬಿತ್ತನೆ ಮಾಡಿದರೆ, ಬೆಳೆಗಳಿಗೆ ಕಾಂಡಕೊರಕ ಬಾಧೆ ಬರುವ ಸಂಭವ ಇರುತ್ತದೆ. ಹಾಗಾಗಿ ಅಗತ್ಯ ಹತೋಟಿ ಕ್ರಮ ಕೈಗೊಳ್ಳಬೇಕು.

ಸವುಳು, ಚೌಳು ಭೂಮಿ / ನೀರು ಇದ್ದಲ್ಲಿ ಬಿಪಿಟಿ 5204 ತರಹದ ತಳಿಗಳನ್ನು ಬಳಸಬೇಕು. ಸವುಳು ನಿರೋಧಕವಲ್ಲದ ತಳಿ ಬಳಕೆ ಬೇಡ.

ಕೆಲ ಪಾರಂಪರಿಕ ಭತ್ತದ ಪ್ರದೇಶಗಳಲ್ಲಿ ಜಂತು ಹುಳು (Nematode) ಬಾಧೆ ಇದ್ದು ಅಂತಹ ಪ್ರದೇಶದ ಬೆಳೆಯ ಬೀಜ ಬಳಸಬಾರದು.

ಅನಧಿಕೃತ ಮೂಲಗಳಿಂದ ಬೀಜ ಖರೀದಿ ಮಾಡಬಾರದು.

ಚಳಿ ಅತಿಯಾದಾಗ, ಸಸಿ ಮಡಿಗಳಿಗೆ ತೆಂಗಿನ ಗರಿ, ಗೊಬ್ಬರ ಚೀಲ ಬಳಸಿ ರಾತ್ರಿ ಹೊತ್ತು ಚಪ್ಪರ ಹಾಕಿಸುವುದು ಸೂಕ್ತ.

ಟ್ರೈಕೋಡರ್ಮಾ ಬೆರೆಸಿದ ತಾಜಾ ಸಗಣಿರಾಡಿಯನ್ನು ಬೆರೆಸಿದ ನೀರನ್ನು ಪ್ರತಿ ಗದ್ದೆಗೆ ಪ್ರತ್ಯೇಕವಾಗಿ ಹಾಯಿಸುವುದರಿಂದ ರೋಗ ಬಾಧೆ ತಡೆಯಬಹುದು.

ಕೂರಿಗೆ ಬಿತ್ತನೆ, ಯಂತ್ರಗಳಿಂದ ನಾಟಿ ಮಾಡುವವರು ಕೈ ನಾಟಿಗಿಂತ ಮುಂಚಿತವಾಗಿ ಬಿತ್ತನೆ / ನಾಟಿ ಕಾರ್ಯ ಪೂರೈಸಬೇಕು.

ಬೆಳೆಯ ಆರೋಗ್ಯ ಕುರಿತು ಸಂದೇಹ ಬಂದ ತಕ್ಷಣ ಸಂಪನ್ಮೂಲ ತಜ್ಞರನ್ನು ತಕ್ಷಣ ಸಂಪರ್ಕಿಸಬೇಕು.

(ಲೇಖಕರು ನಿವೃತ್ತ ಜಂಟಿ ಕೃಷಿ ನಿರ್ದೇಶಕರು)

ಪ್ರತಿಕ್ರಿಯಿಸಿ (+)