ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಗಿರಣಿಗೆ ಸೂರ್ಯನೇ ಶಕ್ತಿ!

Last Updated 8 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಕಪ್ಪಕ್ಕಿಗೆ ಬಂಗಾರದ ಬೆಲೆ ಇದೆ ಎಂಬ ಖುಷಿಯಲ್ಲಿ ಮದ್ದೂರಿನ ಗೂಳೂರುದೊಡ್ಡಿ ಗ್ರಾಮದ ಸಿ.ಪಿ.ಕೃಷ್ಣ ಬರ್ಮಾ ಬ್ಲಾಕ್ ಭತ್ತ ಬೆಳೆದರು. ಉತ್ತಮ ಇಳುವರಿ ಬಂತು. ಅದೇ ಖುಷಿಯಲ್ಲಿ ಸಮೀಪದ ಗಿರಣಿಗೆ ಹೋಗಿ, ಭತ್ತವನ್ನು ಅಕ್ಕಿ ಮಾಡಿಸಿ ನೋಡುತ್ತಾರೆ, ಕಪ್ಪು ಅಕ್ಕಿಯ ನಡುವೆ ನಾಮ ಇಟ್ಟಂತೆ ಬಿಳಿ ಅಕ್ಕಿಗಳು!.

‘ಸಾವಯವದಲ್ಲಿ ಬೆಳೆದ ಅಕ್ಕಿ ಎಂದು ಆರ್ಗಾನಿಕ್ ಮಳಿಗೆಗಳಿಗೆ ಮಾರಾಟ ಮಾಡಲು ಹೋದಾಗ, ಇದು ಕಲಬರೆಕೆ ಇದೆ ಎಂದು ಕಡಿಮೆ ಬೆಲೆಗೆ ಖರೀದಿಸಿದರು’– ಕೃಷ್ಣ ಮಾತಿನಲ್ಲಿಬೇಸರ ಮನೆಮಾಡಿತ್ತು.

ಇದು ಕೃಷ್ಣ ಅವರೊಬ್ಬರ ಕಥೆಯಲ್ಲ. ಸಾವಯವ ವಿಧಾನದಲ್ಲಿ ದೇಸಿ ಅಕ್ಕಿ ತಳಿ ಬೆಳೆಯುವ ಎಲ್ಲರ ಕಥೆಯೂ ಹೀಗೆ. ‘ನಾವು ಕಷ್ಟಪಟ್ಟು ಸಾವಯವದಲ್ಲಿ ಬೆಳೆದ ಭತ್ತ ಮಿಲ್ ಮಾಡಿಸುವಾಗ, ಗುಣಮಟ್ಟ ಅಷ್ಟೇ ಅಲ್ಲ, ಈ ಮೊದಲೇ ಮಿಲ್ ಮಾಡಿಸಿದ ರಾಸಾಯನಿಕ ಭತ್ತದ ಉಳಿಕೆಯೂ ನಮ್ಮ ಅಕ್ಕಿ ಜೊತೆ ಸೇರಿ, ನಮ್ಮ ಶ್ರಮ ಎಲ್ಲ ಮಣ್ಣು ಪಾಲು ಮಾಡುತ್ತದೆ’- ಶಿಕಾರಿಪುರ ತಾಲ್ಲೂಕಿನ ಚುರ್ಚಿಗುಂಡಿಯ ಸಾವಯವ ರೈತ ನಂದೀಶ್ ಅವಲತ್ತುಕೊಳ್ಳುತ್ತಾರೆ. ಸಾವಯವ ಕೃಷಿಯ ಭತ್ತಕ್ಕೆ ಪ್ರತ್ಯೇಕವಾದ ಅಕ್ಕಿ ಗಿರಣಿ ಇಲ್ಲ ಎಂಬದೂರು ಇವರೆಲ್ಲರದು.

ದೇಸಿ ಭತ್ತ ವೈವಿಧ್ಯ ಮತ್ತು ಸಂಸ್ಕೃತಿಯನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ‘ಭತ್ತ ಉಳಿಸಿ ಆಂದೋಲನ’ವು ರೈತರ ಮಟ್ಟದಲ್ಲಿ ಅಕ್ಕಿ ಸಂಸ್ಕರಣೆ ಮಾಡುವಂಥ ಸಣ್ಣ ಗಿರಣಿಗಳಿಗಾಗಿ ಸಾಕಷ್ಟು ತಲಾಶ್ ಮಾಡಿತು. ಸರಿಯಾದ ಮಿಲ್ ಸಿಗಲಿಲ್ಲ. ಸಿಎಫ್‌ಟಿಆರ್‌ಐ ನಂಥ ಸಂಶೋಧನಾ ಕೇಂದ್ರಗಳೂ ಸಾವಯವ ಭತ್ತ ಬೆಳೆಗಾರರ ನೆರವಿಗೆ ಬರಲಿಲ್ಲ. ದೊಡ್ಡ ಗಿರಣಿ ಮಾಲೀಕರ ಜೇಬು ತುಂಬುವ ಸಂಶೋಧನೆಗಳತ್ತಲೇ ಇವರೆಲ್ಲರ ಚಿತ್ತ.

ಸೂರ್ಯನ ಶಕ್ತಿಗೆ ಕನ್ನ

ಮೈಸೂರಿನ ಎಂ.ಕೆ. ಕೈಲಾಸಮೂರ್ತಿಸಹಜ ಕೃಷಿಕರಾಗಿ ಪ್ರಸಿದ್ಧರು. ಬ್ಯಾಂಕ್ ಕೆಲಸದಲ್ಲಿದ್ದುಕೊಂಡೇ, ಕೊಳ್ಳೇಗಾಲದ ದೊಡ್ಡ ಇಂದುವಾಡಿಯ ತಮ್ಮ ತೋಟದಲ್ಲಿ ಸಹಜ ಕೃಷಿ ಕಲ್ಪನೆಯನ್ನು ನೆಲಕ್ಕಿಳಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ತೋಟ ಕಟ್ಟಿದರು. 2011ರಲ್ಲಿ ಬ್ಯಾಂಕ್ ನೌಕರಿಯಿಂದ ನಿವೃತ್ತರಾದ ಮೇಲೆ ಕೃಷಿಯನ್ನೇ ಪೂರ್ಣಾವಧಿಯಾಗಿಸಿಕೊಂಡರು. ಹೊಸ ಹೊಸ ಕೃಷಿ ಸಂಶೋಧನೆಗೆ ತಮ್ಮನ್ನು ತೊಡಗಿಸಿಕೊಂಡರು.

‘ನಮ್ಮಲ್ಲಿ ಸೂರ್ಯನ ಬೆಳಕು ಧಾರಾಳವಾಗಿ ಸಿಗುತ್ತದೆ. ಪುಕ್ಕಟೆ ಸಿಗುವ ಸೂರ್ಯನ ಬೆಳಕು ಮತ್ತು ಮಳೆ ನೀರು ಬಳಸಿ ಭತ್ತವನ್ನು ಲಾಭದಾಯಕವಾಗಿ ಬೆಳೆಯಬಹುದು’ ಎಂದು ಯೋಚಿಸಿದ ಕೈಲಾಸಮೂರ್ತಿ, ನೈಸರ್ಗಿಕ ಪದ್ಧತಿಯಲ್ಲಿ ಭತ್ತ ಬೆಳೆದು ಯಶಸ್ವಿಯಾದರು. ಈ ಪದ್ಧತಿಯಲ್ಲಿ ಕಾಳನ್ನಷ್ಟೇ ಪಡೆದು, ಉಳಿದ ಹುಲ್ಲನ್ನುಮರಳಿ ಗದ್ದೆಗೆ ಸೇರಿಸುವ ವಿಧಾನ ಅನುಸರಿಸಿದರು. ವರ್ಷಕ್ಕೆ 30 ಟನ್ ಸೇಲಂ ಸಣ್ಣ, ಸೋನಾ ಮಸೂರಿ ತಳಿಗಳ ಭತ್ತ ಉತ್ಪಾದನೆ ಮಾಡಿ ಗೋದಾಮು ತುಂಬಿಸಿದರು.

ಸಮಸ್ಯೆ ಶುರುವಾಗಿದ್ದೇ ಇಲ್ಲಿ!

ತಮ್ಮ ತೋಟದ ಉತ್ಪನ್ನಗಳನ್ನು ನೇರ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೈಸೂರಿನ ಕುಕ್ಕರಳ್ಳಿ ಕೆರೆ ಬಳಿ ಮಾರಾಟ ಆರಂಭಿಸಿ, ಸಾಕಷ್ಟು ಸಂಖ್ಯೆಯ ಅಭಿಮಾನಿ ಗ್ರಾಹಕರನ್ನು ಸಂಪಾದಿಸಿದ್ದರು. ಮೂರು ತಿಂಗಳಿಗೊಮ್ಮೆ ಭತ್ತವನ್ನು ದೊಡ್ಡ ಮಿಲ್‌ಗೆ ಒಯ್ದು ಪಾಲಿಶ್ ರಹಿತ ಅಕ್ಕಿ ಮಾಡಿಸುತ್ತಿದ್ದರು. ಆ ಅಕ್ಕಿಗೆ ಬೇಗ ಹುಳು ಬೀಳುತ್ತಿತ್ತು. ಗ್ರಾಹಕರು ಬೇಸರದಿಂದ ಮುಖ ತಿರುಗಿಸುತ್ತಿದ್ದರು. ಇದರಿಂದ ಬೇಸತ್ತ ಕೈಲಾಸಮೂರ್ತಿ ತಾವೇ ಮಿಲ್ ಸ್ಥಾಪಿಸುವ ತೀರ್ಮಾನಕ್ಕೆ ಬಂದರು.

‘ಕೃಷಿಯಲ್ಲಿ ದ್ಯುತಿ ಸಂಶ್ಲೇಷಣೆ ಬಳಸಿಕೊಂಡು ಆಹಾರ ಉತ್ಪಾದಿಸುವುದಾರೆ, ಸಂಸ್ಕರಣೆಗೆ ಸೂರ್ಯನ ಶಾಖ ಸಾಕಾಗದೇ’ ಎಂಬ ಆಲೋಚನೆಯಿಂದ ಸೌರಶಕ್ತಿ ಚಾಲಿತ ಅಕ್ಕಿ ಗಿರಣಿ ಸ್ಥಾಪನೆಗೆ ಮುಂದಾದರು. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ, ವಿಜ್ಞಾನಿ ಮತ್ತು ಎಂಜಿನಿಯರುಗಳೊಂದಿಗೆ ಚರ್ಚೆ, ಮಿಲ್ ತಯಾರಕ ಕಂಪನಿಗಳ ಭೇಟಿ ಎಲ್ಲವೂ ನಡೆಯಿತು. ಎಲ್ಲರದೂ ಒಂದೇ ಮಾತು ‘ಅಯ್ಯೋ! ಅದು ಆಗದ ಮಾತು. ಸುಮ್ಮನೆ ಕರೆಂಟ್ ತಗೊಂಡು ಮಿಲ್ ಹಾಕಿ!’. ಬ್ಯಾಂಕುಗಳಿಗೂ ಇದು ಮುಳುಗುವ ಯೋಜನೆಯಾಗಿ ಕಂಡಿತೇನೋ! ಯಾರೂ ಹಣ ಹೂಡಲು ಮುಂದೆ ಬರಲಿಲ್ಲ. ‘ಆಗ ಇವರ ಒದ್ದಾಟ ನೋಡಲಾಗಲಿಲ್ಲ. ಒಳ್ಳೆ ಏರಿಯಾದಲ್ಲಿ ಸೈಟು ಇತ್ತು. ಅದನ್ನು ಮಾರಿಬಿಟ್ಟು ಮಿಲ್ ಹಾಕಿ ಅಂತ ಹೇಳ್ದೆ’ ಕೈಲಾಸಮೂರ್ತಿಯವರ ಮಡದಿ ಭ್ರಮರಾಂಭ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಸೈಟ್ ಮಾರಿ ಬಂದ ಹಣದಲ್ಲಿ, ಮೈಸೂರಿನ ಹೊರವಲಯದ ಟಿ.ನರಸೀಪುರ ರಸ್ತೆಯ ಚಿಕ್ಕಳ್ಳಿ ಸಮೀಪ ‘ಕೈಲಾಷ್ ನ್ಯಾಚುರಲ್ಸ್‌’ ತಲೆ ಎತ್ತಿತು. ಘಟಕದ ತಾರಸಿಯ ಮೇಲೆ ಸೌರಫಲಕಗಳನ್ನು ಅಳವಡಿಸಿದ 30 ಕೆವಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಈ ಘಟಕ, ಅಕ್ಕಿ ಗಿರಣಿಗೆ ಬೇಕಾದ ವಿದ್ಯುತ್ ಒದಗಿಸುತ್ತದೆ. ಗಿರಣಿ ಕೆಲಸವಿಲ್ಲದಾಗ ಸಂಗ್ರಹವಾಗುವ ಸೌರ ವಿದ್ಯುತ್ ಅನ್ನು ಕೆಇಬಿಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ಪ್ರತಿ ತಿಂಗಳು ₹30 ಸಾವಿರ ಆದಾಯ. ಮಳೆಗಾಲದ ದಿನಗಳಲ್ಲಿ ಮಾತ್ರ ಚೆಸ್ಕಾಂ ವಿದ್ಯುತ್ ಬಳಸುವ ವ್ಯವಸ್ಥೆ ಇದೆ. ಈ ಸೌರ ಘಟಕ ಸ್ಥಾಪನೆಗೆ ₹22ಲಕ್ಷ ಖರ್ಚಾಗಿದೆ.

₹7.5 ಲಕ್ಷದ ಗಿರಣಿ

ಸೌರ ವಿದ್ಯುತ್ ಬಳಸಿ ನಡೆಯಬಲ್ಲ ಮಧ್ಯಮ ಗಾತ್ರದ ಅಕ್ಕಿಗಿರಣಿಯ ತಯಾರಕರು ಚೆನೈನ ಮಿಲ್ ಮೋರ್ (Mill More) ಕಂಪನಿ. 23 ಅಶ್ವಶಕ್ತಿಯ ಈ ಗಿರಣಿ ಪ್ರತಿ ತಾಸಿಗೆ ಅರ್ಧ ಟನ್ (5 ಕ್ವಿಂಟಲ್) ಅಕ್ಕಿ ಸಂಸ್ಕರಿಸುತ್ತದೆ. ವಿವಿಧ ಗಾತ್ರದ ಭತ್ತಗಳನ್ನು ನುಚ್ಚಿಲ್ಲದೆ, ಪಾಲಿಶ್ ಸಹಿತ ಅಥವಾ ಪಾಲಿಶ್ ರಹಿತ ಅಕ್ಕಿಯಾಗಿ ಮಾಡುವ ಸಾಮರ್ಥ್ಯದ ಈ ಗಿರಣಿಯ ಬೆಲೆ ₹7.5 ಲಕ್ಷ.

ಭತ್ತದಲ್ಲಿರುವ ಜಳ್ಳು ಮತ್ತು ಕಲ್ಲುಗಳನ್ನು ಬೇರ್ಪಡಿಸುವುದು ಮೊದಲ ಹಂತ.ಶುದ್ಧೀಕರಣಗೊಂಡ ಭತ್ತವನ್ನು ರಬ್ಬರ್ ಶೆಲ್ಲರ್‌ನಲ್ಲಿ ಸಿಪ್ಪೆ ಬಿಡಿಸುವುದು ಎರಡನೆಯ ಹಂತ. ಅಗತ್ಯಕ್ಕೆ ತಕ್ಕಂತೆ ಪಾಲಿಶ್ ಮಾಡುವುದು ಮೂರನೇ ಹಂತ. ‘ಸಾವಯವಗ್ರಾಹಕರು ಪಾಲಿಶ್ ರಹಿತ ಅಕ್ಕಿ ಕೇಳುತ್ತಾರೆ. ಆಗ ಮೂರನೆಯ ಹಂತದ ಸಂಸ್ಕರಣೆ ಬೇಕಿಲ್ಲ. ಹಲ್ಲರ್‌ನಿಂದ ಬಂದ ಪಾಲಿಶ್ ರಹಿತ ಅಕ್ಕಿಯಲ್ಲಿ ಐದು ಪರ್ಸೆಂಟ್ ಭತ್ತ ಇರುತ್ತದೆ. ಅದನ್ನುಕೇರಿ ಕ್ಲೀನ್ ಮಾಡುತ್ತೇವೆ’ ಎಂದು ಮಿಲ್ ಉಸ್ತುವಾರಿ ನೋಡುತ್ತಿರುವ ಕೈಲಾಸಮೂರ್ತಿಯವರ ಮಗ ಶಿವ ಕೀರ್ತಿ ವಿವರಿಸುತ್ತಾರೆ.

‘ಅಕ್ಕಿಯನ್ನು ಪಾಲಿಶ್ ಮಾಡುವುದೇ ತಪ್ಪು. ಅಕ್ಕಿಯಲ್ಲಿನ ಎಲ್ಲ ಸತ್ವ ತೆಗೆದು, ಅದನ್ನು ದನ, ಕೋಳಿಗಳಿಗೆ ತಿನ್ನಿಸಿ, ಆ ಸತ್ವರಹಿತ ಅಕ್ಕಿಯನ್ನು ನಾವು ತಿನ್ನುತ್ತೇವಲ್ಲ? ನಮ್ಮ ಬುದ್ದಿಗೆ ಏನು ಹೇಳೋಣ!’ ಹೀಗೆಂದು ಪ್ರಶ್ನೆಯನ್ನು ನಮ್ಮತ್ತ ಒಗೆದು ಕೈಲಾಸಮೂರ್ತಿ ನಗು ಬೀರುತ್ತಾರೆ, ‘ಪ್ರತಿ ವಾರ ಬೇಕಾದಷ್ಟೇ ಮಿಲ್ ಮಾಡ್ತಿವಿ. ತಾಜಾ ಅಕ್ಕಿ ಗ್ರಾಹಕರಿಗೆ ಸಿಗುವುದರಿಂದ. ಹುಳು ಬೀಳುವ ರಗಳೆ ಇಲ್ಲ’- ಶಿವಕೀರ್ತಿ ದನಿಗೂಡಿಸುತ್ತಾರೆ.

ಇದು ಅಪ್ಪಟ ಸಾವಯವ ಗಿರಣಿಯಾಗಿದ್ದು, ರಾಸಾಯನಿಕ ಭತ್ತವನ್ನು ಇಲ್ಲಿ ಸಂಸ್ಕರಣೆ ಮಾಡುವುದಿಲ್ಲ. ಹೀಗಾಗಿ ಗ್ರಾಹಕರಿಗೆ ಶುದ್ದ ಸಾವಯವ ಅಕ್ಕಿ ಸಿಗುವ ಖಾತ್ರಿ ಸಿಗುತ್ತದೆ.

ಸೋಲಾರ್‌ ರೈಸ್‌ ಮಿಲ್‌ ಕುರಿತ ಹೆಚ್ಚಿನ ಮಾಹಿತಿಗಾಗಿ ಕೈಲಾಸ ಮೂರ್ತಿ- 9880185757 ತಾಂತ್ರಿಕ ಮಾಹಿತಿಗೆ ಶರವಣ- 9880453105

(ಚಿತ್ರಗಳು: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT