ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಮರಕ್ಕೆ ಸಿಂಪರಣೆ ಈಗ ಮತ್ತಷ್ಟು ಸರಳ

Last Updated 22 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಡಿಕೆ ಸುಲಿಯಲು ಯಂತ್ರ ಕಂಡುಕೊಂಡಿರುವ ಬೆಳೆಗಾರರಿಗೆ 60-70 ಅಡಿ ಎತ್ತರದ ಮರಗಳಿಗೆ ಶಿಲೀಂಧ್ರ ನಿವಾರಕ ಸಿಂಪರಣೆ ಹಾಗೂ ಅಡಿಕೆಗೊನೆ ಕೊಯ್ಲು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನುರಿತ ಕಾರ್ಮಿಕರ ಕೊರತೆಯಿಂದ ಬಹಳಷ್ಟು ಅಡಿಕೆ ಬೆಳೆಗಾರರು ಬೆಳೆದ ಬೆಳೆಯನ್ನು ರಕ್ಷಿಸಲು ಹಾಗೂ ಕೊಯ್ಲು ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ.

 ಕೊಪ್ಪ ತಾಲ್ಲೂಕು ತುಳುವಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದ ಸಣ್ಣ ಅಡಿಕೆ ಬೆಳೆಗಾರ ಶ್ರೀನಿವಾಸಮೂರ್ತಿ ಅಡಿಕೆ ಕೊಯ್ಲು ಹಾಗೂ ಬೋರ್ಡೋ ದ್ರಾವಣ ಸಿಂಪರಣೆಯನ್ನು ಮರವೇರದೆ ಮಾಡಬಹುದಾದ ಸರಳ ಸಾಧನವೊಂದನ್ನು ಆವಿಷ್ಕರಿಸಿದ್ದಾರೆ.

ತಮ್ಮ ಎರಡು ಎಕರೆ ಅಡಿಕೆ ತೋಟದ ಕೊಳೆ ನಿವಾರಣೆಗೆ ಬೋರ್ಡೋ ದ್ರಾವಣ ಸಿಂಪರಣೆಗೆ ಸಿಂಪರಣಾಕಾರರು ದೊರೆಯದೆ ಸತತ ಮೂರು ವರ್ಷ ಅಡಿಕೆ ಫಸಲು ಕಳೆದುಕೊಂಡು ನಷ್ಟ ಅನುಭವಿಸಿದರು. ಕಾರ್ಮಿಕರಿಲ್ಲದೆ ಸ್ವತಃ ಅಡಿಕೆ ಮರಗಳಿಗೆ ಮರವೇರದೆ ಔಷಧ ಸಿಂಪರಣೆ ಮಾಡುವ ಸಾಧನ ಸಿದ್ಧಪಡಿಸಲು ಸಂಕಲ್ಪ ಮಾಡಿ ಪ್ರಯೋಗಶೀಲರಾದರು. ಸತತ ಮೂರು ವರ್ಷದ ಪರಿಶ್ರಮದ ಫಲವಾಗಿ ಕ್ರಮುಖ್ ರಕ್ಷಕ್ ಹೈಟ್ ಸ್ಪ್ರೇಯರ್ ಸಿದ್ಧಪಡಿಸಲು ಅವರಿಗೆ ಸಾಧ್ಯವಾಗಿದೆ. ಈ ವರ್ಷ ತಾವು ತಯಾರಿಸಿದ ಸಾಧನದಿಂದಲೆ ತಮ್ಮ ತೋಟಕ್ಕೆ ಬೋರ್ಡೋ ಸಿಂಪರಣೇ ಮಾಡಿರುವುದಲ್ಲದೆ ಕೊನೆ ತೆಗೆಯಲು ಸಫಲರಾಗಿದ್ದಾರೆ.

ಸಲಕರಣೆ ಮಾಡುವ ವಿಧಾನ
ಸ್ಟೇನ್‌ಲೆಸ್ ಸ್ಟೀಲ್, 2.2.ಗ್ರೇಟ್‌ನ 11 ಅಡಿ ಉದ್ದದ 5 ಪೈಪ್‌ಗಳನ್ನು ನೈಲನ್‌ದಾರ ಕೇಬಲ್ ತಂತಿಯಿಂದ ಮಾಲೆಯಂತೆ ಜೋಡಿಸಬೇಕು. ಪೈಪಿನ ಒಳಗೆ ಸಿಂಪರಣಾ ಔಷಧ ಹರಿಯುವಂತೆ ನಾಳವನ್ನು ಅಳವಡಿಸಬೇಕು. ತುದಿಭಾಗದಲ್ಲಿ ಎಲ್ಲಾ ದಿಕ್ಕು ಕೋನಗಳಲ್ಲಿ ಚಲಿಸಬಲ್ಲ ಡಿಸ್ಕ್ ಅಳವಡಿಸಿ ಅದಕ್ಕೆ ಸಿಂಪರಣಾ ನಳಿಕೆಯನ್ನು ಜೋಡಿಸಬೇಕು.

ಮರದ ಬುಡದಿಂದಲೆ ಸಿಂಪರಣೆ ಮಾಡಲು ಅನುಕೂಲವಾಗುವಂತಹ ನಿಯಂತ್ರಕ ಅಳವಡಿಸಿರುವ ಈ ಸಾಧನ ಕೇವಲ 16 ಕೆ.ಜಿ. ತೂಗುತ್ತಿದ್ದು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಇದೇ ಸಾಧನಕ್ಕೆ ಸಿಂಪರಣೆ ನಳಿಕೆ ಬದಲು ಸ್ಟೇನ್‌ಲೆಸ್ ಕತ್ತಿ, ಕೊನೆ ತುಂಬುವ ಸಿಕ್ಕಾ ಹಾಗೂ ರಾಟೆ ಅಳವಡಿಸಿದ ಪೈಪ್ ಅಳವಡಿಸಿದರೆ ಕೊಯ್ಲು ಮಾಡಲು ಅವಕಾಶ ಕಲ್ಪಿಸಲಾಗಿದೆ.

 ಪ್ರತಿ ಸ್ಟೇನ್‌ಲೆಸ್ ಪೈಪ್‌ಗಳು ಮರಕ್ಕಂಟಿ ಭದ್ರವಾಗಿ ಹಿಡಿದುಕೊಳ್ಳುವಂತೆ ಕೇಬಲ್ ತಂತಿ ಅಳವಡಿಸಲಾಗಿದೆ. ಇದರಿಂದ ಸುರಕ್ಷಿತವಾಗಿ ಸಿಂಪರಣೆ ಹಾಗೂ ಕೊಯ್ಲು ಮಾಡಬಹುದಾಗಿದೆ. ದಿನಕ್ಕೆ 200 ಕೊನೆ ತೆಗೆಯುವ ಎರಡು ದಿನದಲ್ಲಿ 1ಎಕರೆ ಪ್ರದೇಶದ ಸಿಂಪರಣೆ  ಈ ಸಾಧನದಿಂದ ಸಾಧ್ಯ ಎನ್ನುತ್ತಾರೆ ಶ್ರೀನಿವಾಸ್‌ಮೂರ್ತಿ. ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 8277180695.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT