ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆ ಕರುಗಳಲ್ಲಿ ಸಾವು ಕಾರಣ–ಪರಿಹಾರ

Last Updated 3 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಜಂತು ಹುಳದ ಬಾಧೆಯಿಂದ ಈ ಹಿಂದೆ ಹಲವಾರು ಎಮ್ಮೆ ಕರುಗಳು ಮರಣ ಹೊಂದುತ್ತಿದ್ದವು. ಆದರೆ ಈಗ ಲಭ್ಯವಿರುವ ಉತ್ತಮ ಗುಣಮಟ್ಟದ ಜಂತುನಾಶಕಗಳಿಂದ ಮರಣದ ಪ್ರಮಾಣ ಶೇ 90ರಿಂದ ಶೇ 10ಕ್ಕೆ ಇಳಿದಿದೆ. ಜಂತು ಹುಳಗಳ ಬಾಧೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಾದರೆ ಅವುಗಳ ಜೀವನ ಚಕ್ರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

ಸಾಮಾನ್ಯವಾಗಿ ಜಂತುಹುಳಗಳ ಜೀವನಚಕ್ರದ ಒಂದು ಹಂತವಾದ ಲಾರ್ವ, ತಾಯಿ ಎಮ್ಮೆಯ ಹೊಕ್ಕಳು ಬಳ್ಳಿಯಿಂದ ಕರು ಗರ್ಭದಲ್ಲಿರಬೇಕಾದರೆ ಕರುವಿನ ಯಕೃತ್ತನ್ನು ಸೇರುತ್ತವೆ. ನಂತರ ಅದನ್ನು ಭೇದಿಸಿ ಶ್ವಾಸಕೋಶವನ್ನು ತಲುಪುತ್ತವೆ. ಅಲ್ಲಿ ಅವು ತತ್ತಿಯ ಸ್ವರೂಪವನ್ನು ಪಡೆಯುತ್ತವೆ.

ಈ ಹಂತವನ್ನು ದಾಟುವಾಗ ಅವು ಕರುವಿನ ಶ್ವಾಸಕೋಶ ಮತ್ತು ಯಕೃತ್ತನ್ನು ಹಾಳುಗೆಡವುತ್ತವೆ. ಕರು ಕೆಮ್ಮಿದಾಗ ಜಂತುಹುಳದ ತತ್ತಿಗಳು ಕರುವಿನ ಕರುಳನ್ನು ಸೇರಿ ದೊಡ್ಡ ಜಂತು ಹುಳಗಳಾಗಿ ಮಾರ್ಪಡುತ್ತವೆ. ಆವು ಕರುವಿನ ಎಲ್ಲ ಪೋಷಕಾಂಶಗಳನ್ನು ತಿಂದು ಕರುವಿನ ಬೆಳವಣಿಗೆಯನ್ನು ತಡೆಗಟ್ಟುತ್ತವೆ.

ಕಾರಣ, ಎಮ್ಮೆ– ಕರುಗಳಲ್ಲಿ ಜಂತು ನಾಶಕವನ್ನು ಹಾಕುವಾಗ ಈ ಎಲ್ಲ ಅಂಶಗಳನ್ನು ಗಮನಿಸುವುದು ಅತೀ ಸೂಕ್ತ. ಎಮ್ಮೆ– ಕರುಗಳಿಗೆ ಹೆಚ್ಚಾಗಿ ನೀಡಲಾಗುವ ಪೈಪರೆಜನ್ ಔಷಧಿ ದೊಡ್ಡ ಜಂತು ಹುಳದ ಮೇಲೆ ಮಾತ್ರ ಕೆಲಸ ಮಾಡುತ್ತದೆ. ಆದ್ದರಿಂದ ಇದನ್ನು ಪದೇ ಪದೇ ನೀಡಬೇಕಾಗುತ್ತದೆ. ಏಕೆಂದರೆ ಇದು ತತ್ತಿ ಮತ್ತು ಲಾರ್ವದ ಮೇಲೆ ಪರಿಣಾಮಕಾರಿಯಲ್ಲ. 

ಈಗ ಆಧುನಿಕ ಜಂತುನಾಶಕಗಳು ಲಭ್ಯವಿದ್ದು ಇವುಗಳಿಂದ ಪರಿಣಾಮಕಾರಿಯಾಗಿ ಜಂತುಬಾಧೆ ತಡೆಗಟ್ಟಲು ಸಾಧ್ಯ. ಉದಾಹರಣೆಗೆ ಅಲ್ಬೆಂಡಜೋಲ್, ಮೆಬೆಂಡಜೋಲ್, ಫೆನ್ಬೆಂಡಜೋಲ್ ಇತ್ಯಾದಿ ಜಂತುನಾಶಕಗಳು ಲಭ್ಯವಿದ್ದು ಇವುಗಳ ಸೂಕ್ತ ಬಳಕೆಯಿಂದ ಜಂತುಹುಳು ಬಾಧೆಯನ್ನು ತಡೆಗಟ್ಟಬಹುದಾಗಿದೆ. 

ಕರುಗಳಿಗೆ ಆರು ತಿಂಗಳಾಗುವವರೆಗೂ ಪ್ರತಿ ತಿಂಗಳಿಗೊಮ್ಮೆ ಹಾಕಿ ನಂತರ ಪ್ರತಿ ಎರಡು ತಿಂಗಳಿಗೊಮ್ಮೆ ಹಾಕುತ್ತಿದ್ದರೆ ಜಂತುಗಳ ಬಾಧೆಯನ್ನು ತಡೆಗಟ್ಟಬಹುದು. ಗರ್ಭಧರಿಸಿದ ಜಾನುವಾರುಗಳಿಗೆ 8 ಮತ್ತು 9 ತಿಂಗಳ ಅವಧಿಯಲ್ಲಿ ಸೂಕ್ತ ಜಂತು ನಾಶಕ ಹಾಕಿದಲ್ಲಿ ಕರುಗಳಲ್ಲಿ ಜಂತುಗಳ ಬಾಧೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಆಕಳು ಕರುಗಳಲ್ಲೂ ಜಂತು ಬಾಧೆ ಇರುತ್ತಿದ್ದು, ಇವುಗಳಲ್ಲೂ ನಿಗದಿತವಾಗಿ ಜಂತು ನಾಶಕವನ್ನು ಹಾಕುತ್ತಿರಬೇಕು.

*
ಭೇದಿ

ಇದು ಕರುಗಳಲ್ಲಿ ಮಾರಣಾಂತಿಕವಾದ ಕಾಯಿಲೆ. ಇದು ಇ.ಕೊಲೈ, ಸಾಲ್ಮೊನೆಲ್ಲಾ, ರಿಯೋ ವೈರಾಣು ಇತ್ಯಾದಿಗಳಿಂದ ಬರುತ್ತದೆ. ಇವುಗಳಲ್ಲಿ ಕರುಗಳಿಗೆ ಬರುವ ಬಿಳಿ ಭೇದಿ ಬಹಳ ಮುಖ್ಯ. ಇದನ್ನು ಕಾಲ್ಫ್ ಸ್ಕೌರ್ ಅಥವಾ ಕೋಲಿ ಬ್ಯಾಸಿಲ್ಲೋಸಿಸ್ ಎಂದೂ ಕರೆಯುತ್ತಾರೆ.

ಇದು ಇ.ಕೊಲೈ ಬಾಕ್ಟೀರಿಯಾದಿಂದ ಬರುತ್ತದೆ. ಕರುಗಳಲ್ಲಿ ಹುಟ್ಟಿದ ದಿನದಿಂದ ಮೂರು ವಾರದ ಅವಧಿಯಲ್ಲಿ ಬರಬಹುದು. ಇದರಲ್ಲಿ ತೀವ್ರತರ ಬಿಳಿ ಭೇದಿ ಇರುತ್ತಿದ್ದು, ವಾಸನಾಯುಕ್ತವಾಗಿರುತ್ತದೆ. ಪದೇ ಪದೇ ಭೇದಿಯಾಗುತ್ತಾ ಇರುತ್ತದೆ. ಹಿಂಭಾಗ ಮತ್ತು ಬಾಲಕ್ಕೆ ಅಂಟಿಕೊಂಡಂತೆ ಇದ್ದು, ಇಡೀ ಮೈ ವಾಸನಾಯುಕ್ತವಾಗುತ್ತದೆ.

ದೇಹದ ನೀರಿನ ಪ್ರಮಾಣ ಕಡಿಮೆಯಾಗಿ ಚರ್ಮವು ಒರಟಾಗಿ ಕಣ್ಣುಗುಡ್ಡೆಗಳು ಒಳಗೆ ಹುದುಗಿಕೊಳ್ಳುತ್ತವೆ. ಆರಂಭದಲ್ಲಿ ತೀವ್ರವಾದ ಜ್ವರವೂ ಇರುತ್ತಿದ್ದು ನಂತರ ಶರೀರದ ತಾಪಮಾನವು ಕಡಿಮೆಯಾಗುತ್ತಾ ಬರುತ್ತದೆ ಮತ್ತು ಕರುಗಳು ನಿಸ್ತೇಜಗೊಂಡು ಮಲಗಿಬಿಡುತ್ತವೆ. ಈ ರೀತಿಯ ಎಲ್ಲ ರೋಗ ಲಕ್ಷಣಗಳು ಇ.ಕೊಲೈ ಈ ಕ್ರಿಮಿ ಬಿಡುಗಡೆ ಮಾಡುವ ವಿಷದಿಂದ ಬರುತ್ತವೆ. ಕರುಗಳಿಗೆ ಕೂಡಲೇ ಸೂಕ್ತವಾದ ಚಿಕಿತ್ಸೆ ದೊರೆಯದಿದ್ದಲ್ಲಿ ಅವು ಮರಣವನ್ನಪ್ಪುತ್ತವೆ.

ಬಹಳಷ್ಟು ಜನ ರೈತರು ಈ ರೀತಿಯ ಬಿಳಿಭೇದಿ ಕಾಯಿಲೆ ಕರು ಹಾಲನ್ನು ಹೆಚ್ಚಾಗಿ ಕುಡಿದು ಅದರಿಂದ ಅಜೀರ್ಣವಾಗಿ ಬರುತ್ತದೆ ಎಂದು ಊಹಿಸಿ ಅದಕ್ಕೆ ಹಾಲು ಕೊಡುವುದನ್ನು ಸಹ ಕಡಿಮೆ ಮಾಡಿ ತಮಗೆ ಅರಿತ ಚಿಕಿತ್ಸೆ ಮಾಡಿಕೊಂಡು ಕರುಗಳನ್ನು ಕಳೆದುಕೊಳ್ಳುತ್ತಾರೆ. ಆದರೆ ಇದಕ್ಕೆ ಸೂಕ್ತ ಜೀವ ನಿರೋಧಕ ಮತ್ತು ಇತರ ಪರಿಣಾಮಕಾರಿ ಚಿಕಿತ್ಸೆಗಳಿದ್ದು ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಮಾಡಿಸಿದಲ್ಲಿ ಕರುಗಳನ್ನು ಉಳಿಸಿಕೊಳ್ಳಬಹುದು.

*
ಹೊಕ್ಕಳು ಬಾವು

ಈ ಕಾಯಿಲೆಯಲ್ಲಿ ಹೊಕ್ಕಳು ಬಳ್ಳಿಯಲ್ಲಿ ವಿವಿಧ ರೀತಿಯ ವಿಷಕ್ರಿಮಿಗಳು ಸೇರಿಕೊಂಡು ಹೊಕ್ಕಳಿನ ಬಾವನ್ನು ಉಂಟು ಮಾಡುತ್ತವೆ. ಈ ಕಾಯಿಲೆಯಲ್ಲಿ ಕರುಗಳಲ್ಲಿ ಹಾಲು ಕುಡಿಯದಿರುವಿಕೆ, ಜ್ವರ, ಭೇದಿ, ಹೊಕ್ಕಳಿನ ಸುತ್ತಮುತ್ತ ಊತ ಮತ್ತು ನೋವು ಇತ್ಯಾದಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ನಂತರ ಬಾವಿನಲ್ಲಿ ದುರ್ವಾಸನಾಯುಕ್ತ ಕೀವು ತುಂಬಿಕೊಳ್ಳುತ್ತದೆ. ಕೆಲವು ಸಲ ವಿಷವಸ್ತುವಿನ ಬಾಧೆಯಿಂದ ಕರು ಸಾವನ್ನಪ್ಪಬಹುದು. ಹಲವು ಸಲ ಹೊಕ್ಕಳಿನ ದ್ವಾರದಿಂದ ಕರುಳು ಹೊರಬಂದು ಹರ್ನಿಯಾ ಸಹ ಆಗುವ ಸಂಭವವಿರುತ್ತದೆ. ಬಾವಿನಲ್ಲಿ ಕೀವು ತುಂಬಿ ಹಣ್ಣಾದಾಗ  ತಜ್ಞ ಪಶುವೈದ್ಯರಿಂದ ಈ ಕೀವನ್ನು ತೆಗೆಸಿ ಸೂಕ್ತ ಚಿಕಿತ್ಸೆ ಕೊಡಿಸಿದಲ್ಲಿ ಕರು ಗುಣಮುಖವಾಗುತ್ತದೆ.

ಈ ಕಾಯಿಲೆಯನ್ನು ತಡೆಗಟ್ಟಬೇಕಾದರೆ,ಕರು ಹುಟ್ಟಿದ ಕೂಡಲೇ ಸ್ವಚ್ಛವಾದ ಬ್ಲೇಡಿನಿಂದ ಹೊಕ್ಕಳು ಬಳ್ಳಿಯನ್ನು ಕತ್ತರಿಸಿ, ಟಿಂಕ್ಚರ್ ಆಯೋಡಿನ್ ಸವರಿ ದಾರದಿಂದ ಕಟ್ಟಬೇಕು. ಹೊಕ್ಕಳು ಬಳ್ಳಿಗೆ ಮಣ್ಣು ಹಾಗೂ ಸೆಗಣಿ ತಗುಲದಂತೆ ಎಚ್ಚರ ವಹಿಸಬೇಕು.

*
ಕಾಲುಗಂಟು ಕಾಯಿಲೆ

ಈ ಕಾಯಿಲೆ ಕರುಗಳಲ್ಲಿ  2 ರಿಂದ 8 ವಾರ ವಯಸ್ಸಿನಲ್ಲಿ ಬರುತ್ತದೆ. ಒಂದು ಅಥವಾ ಎರಡೂ ಕಾಲುಗಂಟುಗಳು ದಪ್ಪವಾಗಿ ನೋವಿನಿಂದ ಕೂಡಿರುತ್ತವೆ. ಈ ಕಾಯಿಲೆಯೂ ವಿವಿಧ ರೀತಿಯ ವಿಷಕ್ರಿಮಿಗಳು ಬಿಡುಗಡೆ ಮಾಡುವ ವಿಷವಸ್ತುವಿನಿಂದ ಬರುತ್ತದೆ.

ಈ ಕಾಯಿಲೆಯಲ್ಲೂ  ಕರುಗಳಲ್ಲಿ ಹಾಲು ಕುಡಿಯದಿರುವಿಕೆ, ಜ್ವರ, ಭೇದಿ, ಸಪ್ಪಗಿರುವಿಕೆ ಇತ್ಯಾದಿ ರೋಗ ಲಕ್ಷಣಗಳಿರುತ್ತವೆ. ನೋವಿನಿಂದ ಕೂಡಿರುವ ಬಾವು ನಂತರ ಕೀವು ತುಂಬಿಕೊಂಡು ಒಡೆಯಬಹುದು.

ಈ ಗಾಯಕ್ಕೆ ಸೋಂಕು ತಗಲಿದಲ್ಲಿ ಕಾಲುಗಂಟು ಕಾಯಂ ಆಗಿ ಹಾಳಾಗಬಹುದು. ಇದಕ್ಕೂ ಸೂಕ್ತ ಚಿಕಿತ್ಸೆ ಇದೆ. ಎಳೆಕರುವನ್ನು ಸಿಮೆಂಟ್ ನೆಲದ ಮೇಲೆ ಕಟ್ಟುವ ಬದಲಾಗಿ ಮಣ್ಣಿನ ನೆಲ ಅಥವಾ ಗೋಣಿ ಚೀಲ ಹಾಸಿ ಕಟ್ಟಿದಲ್ಲಿ ಕಾಲು ಗಂಟಿನ ಕಾಯಿಲೆ ಬರುವ ಸಾಧ್ಯತೆ ಕಡಿಮೆ.

*
ಕರುಗಳಲ್ಲಿ ಕುರುಡುತನ - ಸ್ನಾಯು ಸೆಳೆತ

ಹಲವಾರು ಮಿಶ್ರ ತಳಿಯ ಎಳೆಯ ಕರುಗಳು ಹಾಗೂ ಎಳೆಯ ಎಮ್ಮೆ ಕರುಗಳಲ್ಲಿ ಇತ್ತೀಚೆಗೆ ಅತಿ ಸಾಮಾನ್ಯವಾದ ಕಾಯಿಲೆಯಾಗಿರುತ್ತದೆ. ಇದರಲ್ಲಿ ಕರುಗಳು ಹುಟ್ಟುತ್ತಲೇ ಎರಡೂ ಕಣ್ಣುಗಳನ್ನು ಕುರುಡಾಗಿ ಹೊಂದಿ ಹುಟ್ಟುತ್ತವೆ ಅಥವಾ ದೃಷ್ಟಿಮಾಂದ್ಯವಿರುತ್ತದೆ.

ಕೆಲವು ಕರುಗಳು ಸ್ನಾಯುಗಳ ಸೆಳೆತ, ಬೆಚ್ಚಿಬೀಳುವುದು, ಪ್ರಜ್ಞೆ ಇಲ್ಲದೇ ಒದ್ದಾಡುವುದು ದುರ್ವಾಸನಾಯುಕ್ತ ಮೈ ವಾಸನೆ ಹೊಂದಿರುವುದು ಇತ್ಯಾದಿಗಳನ್ನು ಹೊಂದಿರುವುದು ಇತ್ಯಾದಿ ಲಕ್ಷಣಗಳನ್ನು ಹೊಂದಿರುತ್ತವೆ.

ಇವುಗಳ ಚೇತರಿಕೆ ಕಷ್ಠ. ಇ.ಕೋಲಿ ಎಂಬ ರೋಗಾಣುವಿನಿಂದ ಈ ಕಾಯಿಲೆ ಬರುವುದೆಂಬ ಶಂಕೆ ಇರುತ್ತಿದ್ದರೂ ಇದು ಈ ಕಾಯಿಲೆಯ ನಿಖರ ಕಾರಣವಲ್ಲ ಎಂಬುದು ಸಂಶೋಧನೆಯ ನಂತರ ತಿಳಿದ ವಿಷಯ. ಈ ನಿಗೂಢ ಕಾಯಿಲೆಗೂ ನಿಖರ ಕಾರಣ ಪತ್ತೆ ಮಾಡಿ ಚಿಕಿತ್ಸೆ ಕಂಡು ಹಿಡಿಯ ಬೇಕಾಗಿದೆ.
ಹೆಚ್ಚಿನ ಮಾಹಿತಿಗೆ ಲೇಖಕರ ಸಂಖ್ಯೆ: 080 23411483.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT