ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀನ್ಸ್‌ಗೆ ಬೆಂಕಿರೋಗ

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಬೀನ್ಸ್ (ಹುರುಳಿಕಾಯಿ) ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯುವ ತರಕಾರಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕ ರೈತರು ಬೆಳೆದ ಬೀನ್ಸ್ ಬೆಳೆಗೆ ಬೆಂಕಿ ರೋಗ ಬಂದಿದೆ. ಅದರಿಂದಾಗಿ ಇಳುವರಿ ಕಡಿಮೆಯಾಗಿದೆ. ಬೀನ್ಸ್ ಬೆಳೆಯಲು ಹಾಕಿದ್ದ ಬಂಡವಾಳ ಹಿಂದಕ್ಕೆ ಬರುವ ಸಾಧ್ಯತೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

ಹಲವಾರು ವರ್ಷಗಳಿಂದ ಬೀನ್ಸ್ ಬೆಳೆಯುತ್ತಿರುವ ಆನೇಕಲ್‌ನ ರೈತ ಪಿ.ಮುನಿರಾಜು ಅವರು ಹೇಳುವಂತೆ ಬೀನ್ಸ್ ಬೆಳೆಯಲು ಹೆಚ್ಚು ಬಂಡವಾಳ ಬೇಕಿಲ್ಲ. ಬೆಳೆಯುವುದೂ ಸುಲಭ. ಈ ವರ್ಷ ಅತಿ ಹೆಚ್ಚು ಚಳಿ ಹಾಗೂ ಮಧ್ಯಾಹ್ನದ ವೇಳೆ ಹೆಚ್ಚಿನ ಬಿಸಿಲು ಇರುವುದರಿಂದ ಬೀನ್ಸ್ ಬೆಳೆಗೆ ಬೆಂಕಿ ರೋಗ ಬಂದಿದೆ. ಬರಿ ಕಣ್ಣಿಗೆ ಕಾಣಿಸದ ಚಿಕ್ಕ ನುಸಿ ಹುಳುಗಳು ಗಿಡಗಳಿಗೆ ಅಮರಿಕೊಂಡಿವೆ.

ನಾನು ಎಕರೆಗೆ ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದೇನೆ ಎನ್ನುವ ಮುನಿರಾಜು ಎನ್‌ಜೆಡ್ ತಳಿಯ ಬೀನ್ಸ್ ನಾಟಿ ಮಾಡಿದ್ದರು. ಸಂಕ್ರಾಂತಿ ಹೊತ್ತಿಗೆ ಉತ್ತಮ ಫಸಲು ನಿರೀಕ್ಷಿಸಿದ್ದರು. ಆದರೆ ಇಡೀ ಬೆಳೆಗೆ ನುಸಿ ಹುಳುಗಳು ಬಿದ್ದಿರುವುದು ಅವರ ಗಮನಕ್ಕೆ ಬಂತು. ಕೂಡಲೇ ಔಷಧಿ ಸಿಂಪಡಿಸಿದರು. ಹುಳುಗಳ ಹಾವಳಿ ತಕ್ಷಣ ಹತೋಟಿಗೆ ಬಂತು.

ಆದರೆ 10-15 ದಿನಗಳು ಕಳೆಯುವಷ್ಟರಲ್ಲಿ ಬೀನ್ಸ್ ಬಳ್ಳಿಗಳ ಎಲೆಗಳು ಕಂದು ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗಿದವು. ನಂತರದ ಕೆಲವೇ ದಿನಗಳಲ್ಲಿ ಇಡೀ ಹೊಲದ ಗಿಡಗಳು ಬಾಡಲು ಆರಂಭಿ ಸಿದವು. ಕಾಯಿ ಬಿಡುವ ಮುನ್ನವೇ ಬಳ್ಳಿಗಳು ಸುಟ್ಟಂತಾದವು ಎನ್ನುತ್ತಾರೆ ಮುನಿರಾಜು.

ಬೀನ್ಸ್ ಬೆಳೆಯಲು ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಎರಡನ್ನೂ ಹಾಕಿದ್ದರು. ಬಳ್ಳಿ ಹಬ್ಬಿಸಲು ಎಕರೆಗೆ ನಾಲ್ಕು ಟನ್‌ನಷು ಮರದ ರೆಂಬೆಗಳನ್ನು ಖರೀದಿಸಿ ಬಳ್ಳಿಗಳ ಬುಡದಲ್ಲಿ ನೆಟ್ಟಿದರು. ಅವರ ಪ್ರಯತ್ನವೆಲ್ಲ ವ್ಯರ್ಥವಾಗಿದೆ.

ಬೆಂಗಳೂರು ಗ್ರಾಮಾಂತರ ಪ್ರದೇಶದ ಅನೇಕ ಹಳ್ಳಿಗಳ ರೈತರು ಸಂಕ್ರಾಂತಿಯ ಹೊತ್ತಿಗೆ ಬೀನ್ಸ್ ಬೆಳೆದು ಸಾಕಷ್ಟು ಆದಾಯ ಗಳಿಸುತ್ತಾರೆ. ಈ ವರ್ಷ ಅತಿಯಾದ ಚಳಿ ಮತ್ತು ಬಿಸಿಲಿನಿಂದಾಗಿ ಬೆಳೆ ಹಾಳಾಗಿದೆ. ಇದರಿಂದ ಮಾರುಟ್ಟೆಗೆ ಬರುವ ಸ್ಥಳೀಯ ಬೀನ್ಸ್ ಆವಕದಲ್ಲಿ ಗಣನಿಯ ಇಳಿಮುಖವಾಗಿದೆ. ಈಗ ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆ ಮಧ್ಯಮ ವರ್ಗದವರಿಗೆ ಎಟುಕದಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT