ADVERTISEMENT

ಭೂಕಬಳಿಕೆ, ಹಲ್ಲೆ ಆರೋಪ: ದೂರುದಾರರಿಗೆ ಸಚಿವ ಡಿ.ಸುಧಾಕರ್‌ ಬೆದರಿಕೆ?

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊ: ಸಚಿವರಿಂದ ಸ್ಪಷ್ಟೀಕರಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 16:25 IST
Last Updated 12 ಸೆಪ್ಟೆಂಬರ್ 2023, 16:25 IST
ಡಿ.ಸುಧಾಕರ್‌
ಡಿ.ಸುಧಾಕರ್‌   

ಬೆಂಗಳೂರು: ತಮ್ಮ ವಿರುದ್ಧ ಭೂಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆಯ ದೂರು ದಾಖಲಿಸಿದ ದೂರದಾರರಿಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಅವರು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡಿದೆ.

ಈ ಬೆಳವಣಿಗೆ ಬೆನ್ನಲ್ಲೇ, ಸುಧಾಕರ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಜೆಡಿಎಸ್ ನಾಯಕರು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ರಾಜೀನಾಮೆ ನೀಡದೇ ಇದ್ದರೆ ಸಂಪುಟದಿಂದ ವಜಾ ಮಾಡಬೇಕು ಎಂದೂ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಇದೊಂದು ಸುಳ್ಳು ಪ್ರಕರಣ ಎಂದಿದ್ದಾರೆ. 

ADVERTISEMENT

ಸೆವೆನ್‌ ಹಿಲ್ಸ್‌ ಡೆವಲಪರ್ಸ್‌ ಅಂಡ್ ಟ್ರೇಡರ್ಸ್‌ನ ಪಾಲುದಾರ ಸುಧಾಕರ್ ಸೇರಿದಂತೆ ಮೂವರು ಮೋಸದಿಂದ ಜಮೀನು ಕಬಳಿಸಿದ್ದಾರೆ ಎಂದು ಸುಬ್ಬಮ್ಮ ಅವರು ಯಲಹಂಕ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ, ಸುಧಾಕರ್ ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ, ಸುಧಾಕರ್ ಬೆದರಿಕೆ ಹಾಕಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ‘ಆ ವಿಡಿಯೊ ನನ್ನದು ಅಲ್ಲ’ ಎಂದು ಸಚಿವರು ಸ್ಪಷ್ಟನೆ ನೀಡಿದ್ಧಾರೆ.

‘ಯಲಹಂಕ ನನಗೆ ಹೊಸದಲ್ಲ. ಕರ್ನಾಟಕ, ಆಂಧ್ರಪ್ರದೇಶದಲ್ಲಿ ಮಚ್ಚು, ಕೊಡ್ಲಿ ಇಟ್ಟುಕೊಂಡು ಓಡಾಟ ನಡೆಸಿದ್ದೇವೆ. ಈ ಕುಚೇಷ್ಟೆಗಳು ನಡೆಯಲ್ಲ. ನಾನು ಎಲ್ಲಿಗೆ ಹೋಗಬೇಕು ಅಲ್ಲಿಗೆ ಹೋಗ್ತೀನಿ.... ನನ್ನ ಹತ್ತಿರ ಯಾರ ಗಾಂಚಾಲಿಯೂ ನಡೆಯೋದಿಲ್ಲ. ದುಡ್ಡು ಹಾಕಲು ದಡ್ಡ ಅಲ್ಲ’ ಎಂದು ಸುಧಾಕರ್‌ ಹೇಳಿದ್ದಾರೆ ಎಂಬುದು ವಿಡಿಯೊದಲ್ಲಿದೆ.

ದಾಖಲೆ ಸಲ್ಲಿಸಲು ಸೂಚನೆ: ಸಚಿವರ ಮೇಲೆ ದೂರು ದಾಖಲಿಸಿರುವ ಯಲಹಂಕದ ಸುಬ್ಬಮ್ಮ ಅವರಿಗೆ ಸರ್ವೆ ನಂಬರ್‌ 108/1ರ ಜಮೀನಿನ ದಾಖಲೆ ಸಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.

‘ದೂರುದಾರರು ದಾಖಲೆ ಸಲ್ಲಿಸಿದ ಮೇಲೆ, ಅದನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಯಲಾಗುವುದು’ ಎಂದು ಮೂಲಗಳು ಹೇಳಿವೆ.

‘ಯಾರಿಗೂ ಬೆದರಿಕೆ ಹಾಕಿಲ್ಲ’

ಸೆವೆನ್‌ ಹಿಲ್ಸ್‌ ಡೆವೆಲಪರ್ಸ್‌ ಅಂಡ್ ಟ್ರೇಡರ್ಸ್‌ನಲ್ಲಿ ನಾನೂ ಒಬ್ಬ ನಿರ್ದೇಶಕ. ಇದು ರಾಜಕೀಯಪ್ರೇರಿತ ದೂರು. ನನ್ನ ತೇಜೋವಧೆ ಮಾಡಲು ದೂರು ನೀಡಲಾಗಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. 10 ವರ್ಷಗಳ ಹಿಂದಿನ ಪ್ರಕರಣ ಇದಾಗಿದ್ದು ನಾನು ಸಚಿವನಾದ ಮೇಲೆ ಪ್ರಕರಣ ಮುನ್ನೆಲೆಗೆ ಬರುತ್ತಿದೆ. ಯಾರಿಗೂ ಬೆದರಿಕೆ ಹಾಕಿಲ್ಲ. ಜಾತಿ ನಿಂದನೆ ಮಾಡಿಲ್ಲ. ಕಾನೂನು ಪ್ರಕಾರವೇ ಜಮೀನು ಖರೀದಿಸಿದ್ದೇವೆ. ಭೂಕಬಳಿಕೆಯ ಪ್ರಶ್ನೆಯೇ ಇಲ್ಲ. ದಾಖಲೆಗಳು ಇವೆ.

–ಡಿ.ಸುಧಾಕರ್‌ ಸಚಿವ

ಸುಳ್ಳು ದೂರು: ಡಿ.ಕೆ. ಶಿವಕುಮಾರ್‌

‘ಸಚಿವ ಡಿ. ಸುಧಾಕರ್‌ ವಿರುದ್ಧ ದಾಖಲಾಗಿರುವುದು ಸುಳ್ಳು ದೂರು. ಹೀಗಾಗಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಸುಧಾಕರ್‌ ವಿರುದ್ಧ ದಾಖಲಾಗಿರುವುದು ಸಿವಿಲ್‌ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣ. ಧಮಕಿ ಪ್ರಕರಣಕ್ಕೂ ಖಾಸಗಿ ದೂರಿಗೂ ಬಹಳ ವ್ಯತ್ಯಾಸವಿದೆ. ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ’ ಎಂದರು.

‘ಸುಧಾಕರ್‌ ಅವರು ಒಪ್ಪಿಗೆ ಮೇರೆಗೆ ಖಾಸಗಿ ಜಮೀನು ಖರೀದಿಸಿದ್ದಾರೆ. ಚುನಾವಣೆ ಸಮಯದಲ್ಲಿ ಬೇರೆಯವರು ಕಾಂಪೌಂಡ್‌ ನಿರ್ಮಿಸಿದ್ದರು. ನಂತರ ಜಮೀನು ಸ್ವಾಧೀನಕ್ಕೆ ಪಡೆಯಲು ಸಚಿವರ ಕಡೆಯವರು ಮುಂದಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯವರು ದೂರು ಸಲ್ಲಿಸಿದ್ದು, ಖಾಸಗಿ ದೂರು ದಾಖಲಾಗಿದೆ’ ಎಂದು ಹೇಳಿದರು. ‘ದೂರು ನೀಡುವ ವೇಳೆ ಸುಧಾಕರ್‌ ಚಿತ್ರದುರ್ಗದಲ್ಲಿದ್ದರು. ಹೀಗಾಗಿ ಇದು ಸುಳ್ಳು ದೂರು ಎಂಬುದು ಗೊತ್ತಾಗುತ್ತದೆ. ಸುಧಾಕರ್‌ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿಯವರು ಕನಸು ಕಾಣುವುದು ಬೇಡ. ಕಾನೂನಿನ ಮುಂದೆ ಯಾರೂ ದೊಡ್ಡವರಿಲ್ಲ. ಎಲ್ಲರೂ ಕಾನೂನಿಗೆ ಗೌರವ ನೀಡಲೇಬೇಕು’ ಎಂದರು.

ಸಚಿವ ಡಿ. ಸುಧಾಕರ್ ರಾಜೀನಾಮೆ ನೀಡಲಿ: ಬೊಮ್ಮಾಯಿ

‘ಸಚಿವ ಡಿ.‌ ಸುಧಾಕರ್ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಾಗಿರುವುದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

‘ಬೇರೆಯವರ ವಿಚಾರಣೆ ಹೇಗೆ ನಡೆಯುತ್ತದೆಯೋ ಅದೇ ರೀತಿ ಈ ಪ್ರಕರಣದಲ್ಲಿಯೂ ನಡೆಯಲಿ. ಈ ಪ್ರಕರಣದಲ್ಲಿ ಗೃಹ ಸಚಿವ ಪರಮೇಶ್ವರ ಅವರು ಮಧ್ಯಪ್ರವೇಶಿಸುತ್ತಿದ್ದಾರೆ. ಪೊಲಿಸರಿಗೆ ತನಿಖೆ ನಡೆಸಲು ಮುಕ್ತ ಅವಕಾಶ ಕಲ್ಪಿಸಬೇಕು. ತಾವೇ ತನಿಖೆಗೆ ಮುಂದಾಗಬಾರದು. ಯಾವುದೇ ತನಿಖೆ ಮಾಡಲು ಗೃಹ ಸಚಿವರಿಗೆ ಅವಕಾಶ ಇಲ್ಲ. ಸಚಿವರ ವಿರುದ್ಧದ ಪ್ರಕರಣದ ವರದಿ ಪಡೆಯುವುದಾಗಿ ಹೇಳುತ್ತಾರೆ. ಈಗಾಗಲೇ ಎಫ್ಐಆರ್ ದಾಖಲಾಗಿದೆ. ಆದ್ದರಿಂದ ವರದಿ ಪಡೆಯಲು ಅವಕಾಶ ಇಲ್ಲ’ ಎಂದರು.

‘ಸುಧಾಕರ್ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡಾಫೆಯಿಂದ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂವಿಧಾನದ ಮೇಲೆ ವಿಶ್ವಾಸ ಇದ್ದರೆ ಸಚಿವ ಸುಧಾಕರ್ ಅವರ ರಾಜೀನಾಮೆ ಪಡೆಯಲಿ’ ಎಂದು ಆಗ್ರಹಿಸಿದರು.

‘ಸಂಪುಟದಿಂದ ಕೈಬಿಡಿ’

ಬೆಂಗಳೂರು: ‘ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್‌ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.

ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ‘ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುತ್ತೇನೆ. ರಾಜ್ಯದ ಮಂತ್ರಿಯಾಗಿ ಆತ್ಮಸಾಕ್ಷಿಯಂತೆ ನಿರ್ವಹಿಸುತ್ತೇನೆ ಎಂದು ಸುಧಾಕರ್‌ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು. ಸಂವಿಧಾನ ಮತ್ತು ಕಾನೂನಿನ ಪ್ರಕಾರ ಎಲ್ಲ ನಾಗರಿಕರನ್ನು ಸಮಾನವಾಗಿ ನೋಡುತ್ತೇನೆ, ಯಾವುದೇ ದ್ವೇಷವಿಲ್ಲದೆ ಕಾರ್ಯನಿರ್ವಹಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು.

ಈ ರೀತಿ ಕೆಲವು ಸಮುದಾಯದ ಮೇಲೆ ದ್ವೇಷ ಹೊಂದಿರುವ ವ್ಯಕ್ತಿಗಳು ಸಂಪುಟದಲ್ಲಿ ಮುಂದುವರಿಯಲು ಅರ್ಹರಲ್ಲ’ ಎಂದು ಹೇಳಿದ್ದಾರೆ.

‘ಸಚಿವರ ಈ ರೀತಿಯ ಬೇಜವಾಬ್ದಾರಿ ವರ್ತನೆ ಹಾಗೂ ಬ್ರಾಹ್ಮಣ ಜನಾಂಗದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬ್ರಾಹ್ಮಣ ಮಹಾಸಭಾ ಖಂಡಿಸುತ್ತದೆ. ಈ ರೀತಿ ಜಾತಿ ನಿಂದನೆ ಮಾಡಿರುವ ಸುಧಾಕರ್‌ ಅವರನ್ನು ಕೂಡಲೆ ಸಂಪುಟದಿಂದ ಕೈಬಿಡಬೇಕು’ ಎಂದು ಆಗ್ರಹಿಸಿದ್ದಾರೆ.

ಈ ವಿಷಯವಾಗಿ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನೋಡಿದ್ದೇನೆ. ಸುಧಾಕರ್ ಅವರನ್ನು ಕರೆದು ಮಾತನಾಡುತ್ತೇನೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಂವಿಧಾನ ವಿರೋಧಿ ನಡವಳಿಕೆ ತೋರಿರುವ ಸಚಿವ ಡಿ.ಸುಧಾಕರ ರಾಜೀನಾಮೆ ನೀಡಬೇಕು. ದಲಿತರ ಬಗ್ಗೆ ಗೌರವವಿದ್ದರೆ, ಅವರನ್ನು ಸಂಪುಟದಿಂದ ವಜಾಗೊಳಿಸಲು ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಬೇಕು
–ಬಸನಗೌಡ ಪಾಟೀಲ ಯತ್ನಾಳ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.