ಪ್ರಥಮ ದರ್ಜೆ ಕ್ರಿಕೆಟ್‌ಗೆ ಮಿಲ್ಲರ್‌ ವಿದಾಯ

ಕೇಪ್‌ ಟೌನ್‌: ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಡೆವಿಡ್‌ ಮಿಲ್ಲರ್‌ ಅವರು ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 

‘ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ಐಸಿಸಿ ವಿಶ್ವಕಪ್‌ ನಡೆಯಲಿದೆ. ಹೀಗಾಗಿ, ಏಕದಿನ ಪಂದ್ಯಗಳ ಮೇಲೆ ಹೆಚ್ಚು ಗಮನಹರಿಸಬೇಕಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು 29 ವರ್ಷದ ಡೆವಿಡ್‌ ಹೇಳಿದ್ದಾರೆ. 

‘ವಿಶ್ವಕಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಅಭ್ಯಾಸ ನಡೆಸಬೇಕು’ ಎಂದೂ ಅವರು ಹೇಳಿದ್ದಾರೆ. 

‘ಈ ಋತುವಿನ ದೇಶಿ ಕ್ರಿಕೆಟ್‌ ಟೂರ್ನಿಗಳಲ್ಲಿ ಡಾಲ್ಫಿನ್ಸ್‌ ತಂಡದ ಪರವಾಗಿ ಆಡುತ್ತೇನೆ. ತಂಡ ಟ್ರೋಫಿಗಳನ್ನು ಗೆಲ್ಲಲು ನೆರವಾಗುತ್ತೇನೆ’ ಎಂದು ಅವರು ತಿಳಿಸಿದ್ದಾರೆ. 

63 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮಿಲ್ಲರ್‌ 3,342 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳು ಹಾಗೂ 19 ಅರ್ಧಶತಕಗಳು ಸೇರಿವೆ. 

ಮಿಲ್ಲರ್‌, ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ 35 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ವೇಗದ ಶತಕ ದಾಖಲಿಸಿದವರ ಪಟ್ಟಿಯಲ್ಲಿ ಅವರು ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪ್ರಮುಖ ಸುದ್ದಿಗಳು