ಅಮ್ಮನಘಟ್ಟದಲ್ಲಿ ‘ಕಟ್ಲೆ ಗೌರಮ್ಮ’ಗೆ ವಿಶೇಷ ಪೂಜೆ

ಗುಬ್ಬಿ: ತಾಲ್ಲೂಕಿನ ಅಮ್ಮನಘಟ್ಟದಲ್ಲಿ ಬುಧವಾರ ಗೌರಿಹಬ್ಬದ ಪ್ರಯುಕ್ತ ‘ಕಟ್ಲೆ ಗೌರಮ್ಮ’ಗೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಆರಂಭಿಸಲಾಯಿತು. 

ಈ ಗ್ರಾಮದಲ್ಲಿ ಪಾರಂಪರಿಕವಾಗಿ ನಡೆದು ಬಂದಿರುವ ಗೌರಿಹಬ್ಬ ಆಚರಣೆ ಎಲ್ಲೆಡೆಗಿಂತ ವಿಶಿಷ್ಟವಾಗಿದೆ. ಡೋಲು, ಛತ್ರಿ, ಚಾಮರ, ಕಳಸ ಹೊತ್ತು ಕೆರೆಯ ಅಂಗಳಕ್ಕೆ ಗ್ರಾಮಸ್ಥರು ತೆರಳುತ್ತಾರೆ. ಊರಿನ ಹಿರಿಯರಿಂದ ಕೆರೆಯೊಳಗಿನ ಗುಂಡಿಗಳಲ್ಲಿ ನಿಂತ ನೀರಿಗೆ ಪೂಜೆ ಸಲ್ಲಿಸಿ, ನೀರಲ್ಲಿ ಮುಳುಗಿ ಶುಭ್ರ ಬಿಳಿ ವಸ್ತ್ರದಲ್ಲಿ ತೆಳು ಮಣ್ಣನ್ನು ಸಂಗ್ರಹಿಸುತ್ತಾರೆ. ಈ ಮಣ್ಣು ಊರಿನ ವೀರಭದ್ರಸ್ವಾಮಿ ಗುಡಿಯಲ್ಲಿ ಇಟ್ಟು ‘ಗೌರಮ್ಮ’ ಎಂಬ ಹೆಸರಲ್ಲಿ ನಿತ್ಯ ಪೂಜಿಸುತ್ತಾರೆ. ನಂತರ ಊರಿನ ಮಹಿಳೆಯರು ತೆರಳಿ ಬಾಗಿನ ಅರ್ಪಿಸಿ ಭಕ್ತಿ ಮೆರೆಯುತ್ತಾರೆ.

ಈ ವರ್ಷವೂ ಕೆರೆಯಲ್ಲಿ ನೀರಿಲ್ಲ. ಕೆರೆಯೊಳಗೆ ಗುಂಡಿ ತೋಡಿ, ಟ್ಯಾಂಕರ್‌ನಲ್ಲಿ ತಂದ ನೀರನ್ನು ತುಂಬಿಸಿ ಈ ಆಚರಣೆ ಮಾಡಿದರು. ಮೂರು ವರ್ಷದಿಂದ ಕೆರೆ ತುಂಬದ ಕಾರಣ ಗೌರಮ್ಮನ ಜಾತ್ರೆ ಮಾಡಿಲ್ಲ. ಕೆರೆ ತುಂಬುವ ಮುನ್ಸೂಚನೆ ಅರಿತು ಹಿರಿಯರು ಗೌರಮ್ಮನ ಜಾತ್ರೆ ಮಾಡಬೇಕೆ? ಬೇಡವೇ? ಎಂದು ಊರಿನ ಮುಖಂಡರು ತೀರ್ಮಾನಿಸುತ್ತಾರೆ.

ಜಾತ್ರೆ ನಡೆಸಲು ಹಿರಿಯಲು ತೀರ್ಮಾನಿಸಿದರೆ, ಈಗಾಗಲೇ ವೀರಭದ್ರಸ್ವಾಮಿ ಗುಡಿಯಲ್ಲಿ ಗೌರಮ್ಮ ಎಂದು ಪೂಜಿಸಿದ ಮಣ್ಣಿನೊಟ್ಟಿಗೆ ಇನ್ನಷ್ಟು ಜೇಡಿ ಮಣ್ಣು ತಂದು ಗೌರಮ್ಮನ ಮೂರ್ತಿ ತಿದ್ದಿ ಜಾತ್ರೆಗೆ ಸಿದ್ಧತೆ ನಡೆಸುತ್ತಾರೆ. ಹಬ್ಬದ ದಿನ ತಂದ ಮಣ್ಣನ್ನು ಗೌರಮ್ಮನ ಮೂರ್ತಿ ಮಾಡುವಾಗ ಹೊಟ್ಟೆಗೆ ಸೇರಿಸಿ ಮೂರ್ತಿ ತಿದ್ದುವರು. ಕಡ್ಲೆಹಿಟ್ಟನ್ನು ಬಳಸಿ ಗೌರಮ್ಮನ ಸೌಂದರ್ಯ ಹೆಚ್ಚಿಸುತ್ತಾರೆ. ನಂತರ ಜಾತ್ರೆಯ ದಿನ ಬಾಳೆದಿಂಡಿನ ತೆಪ್ಪ ಮಾಡಿ, ಅಮ್ಮನಘಟ್ಟ ಕೆರೆಯಲ್ಲಿ ತೆಪ್ಪೋತ್ಸವ ನಡೆಸಿ ಗೌರಿಯನ್ನು ವಿಸರ್ಜಿಸುವ ಪದ್ಧತಿ ಇದೆ.

ಛೇರ್ಮನ್ ಸಿದ್ದರಾಮಯ್ಯ, ಪಟೇಲ್ ಶಿವರಾಜು, ಮಹದೇವಯ್ಯ, ರೇಣುಕಯ್ಯ, ರಮೇಶ್ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿಗಳು