ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ 2ನೇ ಹಂತ: ಮತ ಉತ್ಸಾಹ ತಗ್ಗಿಸಿದ ಬಿರುಬಿಸಿಲು

ಚುನಾವಣೆ ಬಹುತೇಕ ಶಾಂತಿಯುತ l ಶೇ 63 ಮತದಾನ l ಶತಾಯುಷಿಗಳಿಂದ ಮತದಾನ
Published 26 ಏಪ್ರಿಲ್ 2024, 22:03 IST
Last Updated 26 ಏಪ್ರಿಲ್ 2024, 22:03 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಗೆ ಎರಡನೇ ಹಂತದಲ್ಲಿ ಶುಕ್ರವಾರ ಕರ್ನಾಟಕದ 14 ಕ್ಷೇತ್ರಗಳು ಒಳಗೊಂಡು 13 ರಾಜ್ಯಗಳಲ್ಲಿನ 88 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಶೇ 63.50ರಷ್ಟು ಮತದಾನವಾಗಿದೆ. ಮತದಾನವು ಬಹುತೇಕ ಶಾಂತಿಯುತವಾಗಿತ್ತು.

ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಕಂಡುಬಂದು ಮತದಾನ ತುಸು ವಿಳಂಬವಾಗಿ ಆರಂಭವಾಯಿತು. ನಕಲಿ ಮತದಾನದ ಆರೋಪಗಳು ಅಲ್ಲಲ್ಲಿ ಕೇಳಿಬಂದಿವೆ.

2ನೇ ಹಂತದಲ್ಲಿ ಮತದಾನ ನಡೆದ ಬಹುತೇಕ ರಾಜ್ಯಗಳಲ್ಲಿ ತೀವ್ರ ಬಿಸಿಲು, ಮತದಾನದ ಉತ್ಸಾಹವನ್ನು ತುಸು ಕುಗ್ಗಿಸಿತು. ಬೆಳಿಗ್ಗೆ ಮತ್ತು ಸಂಜೆ ಮತದಾನ ಬಿರುಸಾಗಿದ್ದರೆ, ಬಿಸಿಲಿನಿಂದಾಗಿ ಮಧ್ಯಾಹ್ನದ ಹೊತ್ತು ಮಂದಗತಿಯಲ್ಲಿ ಸಾಗಿತು.

ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ತ್ರಿಪುರಾದಲ್ಲಿ ಗರಿಷ್ಠ ಅಂದರೆ ಶೇ 79.46ರಷ್ಟು ಮತದಾನವಾಗಿದ್ದರೆ, ಉತ್ತರಪ್ರದೇಶದಲ್ಲಿ ಕನಿಷ್ಠ ಶೇ 54.85ರಷ್ಟು ಮತದಾನವಾಗಿದೆ. ಒಟ್ಟಾರೆ ಸರಾಸರಿ ಶೇ 63.50ರಷ್ಟು ಮತದಾನವಾಗಿದೆ. 

2ನೇ ಹಂತದಲ್ಲಿ ಮತದಾನ ನಡೆದ ಕ್ಷೇತ್ರಗಳಲ್ಲಿ ಕಣದಲ್ಲಿದ್ದ ಪ್ರಮುಖರಲ್ಲಿ ಬಿಜೆಪಿಯ ಹೇಮಾಮಾಲಿನಿ, ಓಂ ಬಿರ್ಲಾ, ಗಜೇಂದ್ರ ಸಿಂಗ್ ಶೆಖಾವತ್‌ ಸೇರಿದ್ದಾರೆ. ಉಳಿದಂತೆ ಕಾಂಗ್ರೆಸ್‌ನ ಶಶಿ ತರೂರ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ನಟ ಅರುಣ್‌ ಗೋವಿಲ್ ಕಣದಲ್ಲಿದ್ದ ಇತರ ಪ್ರಮುಖರು.

ಬಹುತೇಕ ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಉತ್ತರ ಪ್ರದೇಶದ ಮಥುರಾ, ರಾಜಸ್ಥಾನದ ಬನ್ಸ್ವಾರಾ, ಮಹಾರಾಷ್ಟ್ರದ ಪರ್ಭಾನಿಯಲ್ಲಿ ಆರಂಭದಲ್ಲಿ ಮತದಾನ ಬಹಿಷ್ಕರಿ ಸಲಾಗಿತ್ತು. ಅಧಿಕಾರಿಗಳ ಮನವೊಲಿಕೆಯ ಬಳಿಕ ಹಕ್ಕು ಚಲಾಯಿಸಿದ್ದಾರೆ.

ಯೋಧ ಆತ್ಮಹತ್ಯೆ: ಮಧ್ಯಪ್ರದೇಶದಲ್ಲಿ ಚುನಾವಣಾ ಸೇವೆಗೆ ನಿಯೋಜಿಸಿದ್ದ ವಿಶೇಷ ಶಸ್ತ್ರಾಸ್ತ್ರ ಪಡೆ ಯೋಧರೊಬ್ಬರು ಸರ್ವೀಸ್‌ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟರು. ಇವರನ್ನು ಗಾಜಿಯಾಬಾದ್‌ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ನಿಯೋಜಿಸಲಾಗಿತ್ತು.

ರಾಜಸ್ಥಾನದ ಬರ್ಮೆರ್–ಜೈಸಲ್ಮೇರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದ್ದು, ಗೊಂದಲ ಮೂಡಿತ್ತು. ಅವರ ಬೆಂಬಲಿಗರು ಪರಸ್ಪರರ ವಿರುದ್ಧ ದೂರು ನೀಡಿದ್ದಾರೆ.

ಎರಡನೇ ಹಂತದ ಬಳಿಕ ಕೇರಳ, ರಾಜಸ್ಥಾನ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಮತದಾನದ ಪ್ರಕ್ರಿಯೆ ಪೂರ್ಣ ಮುಗಿದಂತಾಗಿದೆ. ಏಪ್ರಿಲ್ 19ರಂದು ಮೊದಲ ಹಂತದಲ್ಲಿ ತಮಿಳುನಾಡಿನ ಎಲ್ಲ 39 ಕ್ಷೇತ್ರಗಳು, ಉತ್ತರಾಖಂಡ (5), ಅರುಣಾಚಲ ಪ್ರದೇಶ, ಮೇಘಾಲಯ (ತಲಾ 2), ಅಂಡಮಾನ್‌ –ನಿಕೋಬಾರ್ ದ್ವೀಪ, ಮಿಜೋರಾಂ, ನಾಗಾಲ್ಯಾಂಡ್‌, ಪುದುಚೇರಿ, ಸಿಕ್ಕಿಂ, ಲಕ್ಷದ್ವೀಪದಲ್ಲಿ (ತಲಾ 1) ಮತದಾನ ನಡೆದಿತ್ತು.

ಮುಂದೆ ಮೇ 7ರಂದು ಮೂರನೇ ಹಂತದ ಚುನಾವಣೆ ನಡೆಯಲಿದ್ದು, ಅಂದು ಕರ್ನಾಟಕದ 14 ಕ್ಷೇತ್ರಗಳು ಒಳಗೊಂಡಂತೆ 12 ರಾಜ್ಯಗಳಲ್ಲಿ ಒಟ್ಟು 94 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತ ಎಣಿಕೆಯು ಜೂನ್‌ 4ರಂದು ನಡೆಯಲಿದೆ.

ಉತ್ತಮ ಸ್ಪಂದನೆ: ಪ್ರಧಾನಿ ಮೋದಿ

ನವದೆಹಲಿ: ‘2ನೇ ಹಂತದ ಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಗೆ ಜನರ ಬೆಂಬಲ ಸ್ಥಿರವಾಗಿದೆ ಎಂಬುದನ್ನು ಬಿಂಬಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಎಕ್ಸ್ ಜಾಲತಾಣದಲ್ಲಿ ಈ ಬಗ್ಗೆ ಅನಿಸಿಕೆ ಹಂಚಿಕೊಂಡ ಅವರು, ಜನರ ಸ್ಪಂದನೆ ನೋಡಿದರೆ ಎನ್‌ಡಿಎಯು ವಿರೋಧಪಕ್ಷಗಳಿಗೆ ಹೆಚ್ಚಿನ ನಿರಾಸೆ ಉಂಟು ಮಾಡುವಂತಿದೆ. ಯುವಜನರು ಮತ್ತು ಮಹಿಳೆಯರು ಹೆಚ್ಚಿನದಾಗಿ ಎನ್‌ಡಿಎಗೆ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT