ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು: ಆಂತರಿಕ ಅಂಕಗಳ ಲೋಪ ತಂದ ಆತಂಕ

ತಪ್ಪು ತಿದ್ದುಪಡಿಗೆ ಇಲ್ಲ ಅವಕಾಶ, ಮಂಡಳಿ, ನಿರ್ದೇಶನಾಲಯಕ್ಕೆ ವಿದ್ಯಾರ್ಥಿಗಳ ಅಲೆದಾಟ
Published 26 ಏಪ್ರಿಲ್ 2024, 21:00 IST
Last Updated 26 ಏಪ್ರಿಲ್ 2024, 21:00 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ 2023–24ನೇ ಸಾಲಿನಲ್ಲಿ ದಾಖಲೆಯ ಫಲಿತಾಂಶ ಬಂದಿದ್ದರೂ, ಇದೇ ಮೊದಲ ಬಾರಿ ಪರಿಚಯಿಸಿದ ಆಂತರಿಕ ಅಂಕಗಳನ್ನು ಹಲವು ಕಾಲೇಜುಗಳು ತಪ್ಪಾಗಿ ನಮೂದಿಸಿದ್ದರಿಂದ ವಿದ್ಯಾರ್ಥಿಗಳು ಗಳಿಸಿದ ಶೇಕಡವಾರು ಅಂಕಗಳಲ್ಲಿ ಗಣನೀಯ ವ್ಯತ್ಯಾಸವಾಗಿದೆ.

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಅಂಕಗಳು ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇರುತ್ತಿದ್ದವು. ಇದರಿಂದ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪಡೆಯುವಲ್ಲಿ ತೊಡಕಾಗುತ್ತಿತ್ತು. ಇಂತಹ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪರೀಕ್ಷಾ ಫಲಿತಾಂಶ ವೃದ್ಧಿಸಲು 2022–2023ರಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಪರಿಚಯಿಸಿತ್ತು. ಪ್ರಸಕ್ತ ವರ್ಷ ಎಲ್ಲ ವಿಷಯಗಳಿಗೂ ಆಂತರಿಕ ಮೌಲ್ಯಮಾಪನ ನಿಗದಿ ಮಾಡಿತ್ತು.

ಪ್ರತಿ ವಿಷಯಕ್ಕೂ ಗರಿಷ್ಠ 20 ಆಂತರಿಕ ಅಂಕಗಳನ್ನು ನಿಗದಿ ಮಾಡಲಾಗಿದೆ. ಕಾಲೇಜು ಹಂತದಲ್ಲೇ ಆಂತರಿಕ ಹಾಗೂ ಪ್ರಯೋಗ ಪರೀಕ್ಷೆಯ ಮೂಲಕ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಉಳಿದ 80 ಅಂಕಗಳಿಗೆ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುತ್ತದೆ.

ವಿದ್ಯಾರ್ಥಿಗಳಿಗೆ ನೀಡಿದ ಆಂತರಿಕ ಅಂಕಗಳನ್ನು ಆಯಾ ಕಾಲೇಜುಗಳು ಎಸ್‌ಎಟಿಎಸ್‌ ತಂತ್ರಾಂಶದ (ವಿದ್ಯಾರ್ಥಿ ಸಾಮರ್ಥ್ಯ ಪತ್ತೆ ವ್ಯವಸ್ಥೆ) ಮೂಲಕ ಅಪ್‌ಲೋಡ್‌ ಮಾಡಿ ದ್ವಿತೀಯ ಪಿಯು ಫಲಿತಾಂಶಕ್ಕೂ ಮೊದಲೇ ಪಿಯು ನಿರ್ದೇಶನಾಲಯಕ್ಕೆ ಕಳುಹಿಸುತ್ತವೆ. ಪಿಯು ನಿರ್ದೇಶನಾಲಯ ನೀಡಿದ ಪಟ್ಟಿಯನ್ನು ಮುಖ್ಯ ಪರೀಕ್ಷೆಯ ಅಂಕಗಳ ಜತೆ ಸಂಯೋಜಿಸಿ ಅಂತಿಮ ಅಂಕಪಟ್ಟಿ ಸಿದ್ಧಪಡಿಸಲಾಗುತ್ತದೆ. 

ಕಲಾ, ವಾಣಿಜ್ಯ, ವಿಜ್ಞಾನ ಸೇರಿದಂತೆ ಎಲ್ಲ ವಿಷಯಗಳಿಗೂ ಆಂತರಿಕ ಅಂಕಗಳನ್ನು ಪರಿಚಯಿಸಲಾಗಿದ್ದು, ಅನುಭವದ ಕೊರತೆಯ ಕಾರಣ ಅವುಗಳನ್ನು ಎಸ್‌ಎಟಿಎಸ್‌ ತಂತ್ರಾಂಶಕ್ಕೆ ಅಳವಡಿಸುವಲ್ಲಿ ಬಹುತೇಕ ಕಾಲೇಜುಗಳ ಸಿಬ್ಬಂದಿ ಲೋಪಗಳನ್ನು ಎಸಗಿದ್ದಾರೆ. ಲಿಖಿತ ಪರೀಕ್ಷೆಯಲ್ಲಿ 80ಕ್ಕೆ 78, 79 ಅಂಕ ಪಡೆದ ಬಹಳಷ್ಟು ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳು ಒಂದು, ಎರಡು ಎಂದು ನಮೂದಿಸಲಾಗಿದೆ. ಇದರಿಂದ ಶೇಕಡವಾರು ಫಲಿತಾಂಶ ಗಣನೀಯವಾಗಿ ಕುಸಿದಿದೆ.

ತಿದ್ದುಪಡಿಗೆ ಇಲ್ಲ ಅವಕಾಶ: ಸರ್ಕಾರದ ನಿಯಮದಂತೆ ಆಯಾ ಕಾಲೇಜುಗಳು ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಎಸ್‌ಎಟಿಎಸ್‌ ತಂತ್ರಾಂಶಕ್ಕೆ ಅಳವಡಿಸಿ, ಪಿಯು ನಿರ್ದೇಶನಾಲಯಕ್ಕೆ ಕಳುಹಿಸಿದ ನಂತರ ತಿದ್ದುಪಡಿ ಮಾಡಲು ಅವಕಾಶವಿಲ್ಲ. ಲಿಖಿತ ಪರೀಕ್ಷೆಯ ಅಂಕಗಳು ಕಡಿಮೆ ಬಂದರೆ, ಫಲಿತಾಂಶ ತೃಪ್ತಿಕರವಾಗಿರದಿದ್ದರೆ ಮತ್ತೆ ಎರಡು ಪರೀಕ್ಷೆ ತೆಗೆದುಕೊಳ್ಳಬಹುದು. ಹೆಚ್ಚು ಅಂಕಗಳು ಬಂದ ಫಲಿತಾಂಶದ ಅಂಕಪಟ್ಟಿಯನ್ನೇ ಪಡೆಯಬಹುದು. ಆದರೆ, ಒಮ್ಮೆ ದಾಖಲಾದ ಆಂತರಿಕ ಅಂಕಗಳು ಮಾತ್ರ ಸ್ಥಿರವಾಗಿರುತ್ತವೆ.

‘ಸಿಬಿಎಸ್‌ಇ 10ನೇ ತರಗತಿಯಲ್ಲಿ ಕಡಿಮೆ ಅಂಕ ನಮೂದಿಸಿರುವ ಕುರಿತು ಕೆಲ ವಿದ್ಯಾರ್ಥಿಗಳು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಒಮ್ಮೆ ಪೋರ್ಟಲ್‌ನಲ್ಲಿ ನಮೂದಿಸಿದ ಆಂತರಿಕ ಅಂಕಗಳ ತಿದ್ದುಪಡಿಗೆ ಅವಕಾಶ ನೀಡಿದರೆ ಅವ್ಯವಸ್ಥೆಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಇಂತಹ ವಿಷಯಗಳಲ್ಲಿ ಶಾಲೆಗಳು ಹೊಣೆಗಾರಿಕೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್‌ ತೀರ್ಪು ನೀಡಿದೆ. ಹಾಗಾಗಿ, ತಿದ್ದುಪಡಿಗೆ ಸಮ್ಮತಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಪಿಯು ನಿರ್ದೇಶನಾಲಯದ ಅಧಿಕಾರಿಗಳು.

ನನ್ನ ಮಗ ದಾವಣಗೆರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿ. ಗಣಿತ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿವೆ. ಆಂತರಿಕ ಅಂಕ 1 ಎಂದು ಅಂಕ ಪಟ್ಟಿಯಲ್ಲಿದೆ. ಇದು ನಮೂದಿಸುವಾಗ ಆದ ಲೋಪ. ತಿದ್ದುಪಡಿಗೆ ಅವಕಾಶ ಇಲ್ಲದ ಕಾರಣ ಅವನಿಗೆ ಅನ್ಯಾಯವಾಗಿದೆ.
–ಬಸವರಾಜ್‌, ಪೋಷಕ
ಆಂತರಿಕ ಅಂಕಗಳ ಲೋಪಕ್ಕೆ ಕಾಲೇಜುಗಳೇ ಹೊಣೆ. ಇದರಲ್ಲಿ ಪಿಯು ನಿರ್ದೇಶನಾಲಯದ ಪಾತ್ರವಿಲ್ಲ. ಆಂತರಿಕ ಅಂಕಗಳನ್ನು ನಮೂದಿಸುವ ಕುರಿತು 3 ಬಾರಿ ತರಬೇತಿ ನೀಡಲಾಗಿತ್ತು.
ಸಿಂಧು ರೂಪೇಶ್, ನಿರ್ದೇಶಕಿ, ಪಿಯು ನಿರ್ದೇಶನಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT