ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗದ ಮೇಲೆ ವಿಜ್ಞಾನ ಅನಾವರಣ

ಕೆ.ನರಸಿಂಹಮೂರ್ತಿ
Published 30 ಜೂನ್ 2024, 0:03 IST
Last Updated 30 ಜೂನ್ 2024, 0:03 IST
ಅಕ್ಷರ ಗಾತ್ರ

‘ಯಾರು ಏನೇ ಹೇಳಲಿ, ಭೂಮಿ ಸೂರ್ಯನ ಸುತ್ತ ಸುತ್ತೋದನ್ನು ತಪ್ಪಿಸಲು ಆಗಲ್ಲ....’

–ಚರ್ಚಿನ ಮುಖ್ಯಸ್ಥರ ಮುಂದೆ ಮೊಣಕಾಲೂರಿ ಕುಳಿತು, ತನ್ನ ಸಂಶೋಧನೆಯನ್ನು ತಾನೇ ಅಲ್ಲಗಳೆದ ಬಳಿಕ ಗೆಲಿಲಿಯೋ ಗೆಲಿಲಿ, ತನ್ನಷ್ಟಕ್ಕೆ ತಾನು ಈ ಮಾತನ್ನು ಹೇಳಿ ತುಂಟ ಕಿರುನಗೆ ನಕ್ಕ ಕೂಡಲೇ ಪ್ರೇಕ್ಷಕ ವಲಯದಲ್ಲೊಂದು ಅಚ್ಚರಿ, ಮೆಚ್ಚುಗೆಯ ಭಾವ.

ಇದು, ಸಮಾಜದಲ್ಲಿ ಧರ್ಮ ಮತ್ತು ವಿಜ್ಞಾನ ಒಟ್ಟಿಗೇ ಹೋಗುವ ಸಾಧ್ಯ–ಅಸಾಧ್ಯತೆಯ ಕುರಿತ ಖಚಿತ ನಿಲುವು. ಸೋಲೊಪ್ಪಿದ ಬಳಿಕವೂ ಗೆದ್ದೆನೆನ್ನುವ ಖುಷಿ. ಇದು, ಸೋತು ಗೆಲ್ಲುವ ಪರಿ. ವಿಜ್ಞಾನವು ನಾಟಕದಲ್ಲಿ ಬರುವುದೇ ಹೀಗೆ. ಇದು ಪ್ರೊ.ಎಸ್‌.ಆರ್‌.ರಮೇಶ್‌ ಅವರ ಇಂಗ್ಲಿಷ್‌ ನಾಟಕ ‘ಗೆಲಿಲಿಯೋಸ್ ಡಾಟರ್‌’ನ ಕೊನೆಗೆ ಬರುವ ಪ್ರಮುಖ ದೃಶ್ಯಗಳಲ್ಲೊಂದು.

ಭಿನ್ನ ಕಾಲಘಟ್ಟಗಳು ಮತ್ತು ವೈಜ್ಞಾನಿಕ ಸಂಶೋಧನೆಗಳ ಕುರಿತ ಕಥನಗಳನ್ನು ನಾಟಕಗಳನ್ನಾಗಿಸಿ ಮಂಡಿಸುವ ಪ್ರಯತ್ನದಲ್ಲಿ ನಿರಂತರತೆಯನ್ನು ಕಾಪಾಡಿಕೊಂಡು ಬಂದಿರುವ ಮೈಸೂರು ವಿಜ್ಞಾನ ನಾಟಕೋತ್ಸವ–2024 ರಲ್ಲಿ ಈ ನಾಟಕ ತನ್ನ ಪರಿಣಾಮದ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಗಾಯಿತು.

ಮೈಸೂರಿನ ರಮಾಬಾಯಿ ಗೋವಿಂದ ರಂಗಮಂದಿರದಲ್ಲಿ ನಡೆದ 7ನೇ ವರ್ಷದ ನಾಟಕೋತ್ಸವದ ನಾಲ್ಕೂ ದಿನ ಅಪರೂಪದ ವಿಜ್ಞಾನಿಗಳು, ಅವರ ಸಂಶೋಧನೆಗಳು ಮತ್ತು ಜೀವನಚರಿತ್ರೆಯ ಹೊಳೆವ ತುಣುಕುಗಳು ಪ್ರೇಕ್ಷಕರ ಎದುರು ಹಾದುಹೋದವು.

‘ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ’ ಎಂದು 16ನೇ ಶತಮಾನದಲ್ಲೇ ಪ್ರತಿಪಾದಿಸಿ, ಚರ್ಚ್‌ನ ವಿರೋಧ ಕಟ್ಟಿಕೊಂಡು, ಶಿಕ್ಷೆಗೆ ಗುರಿಯಾಗಿ, ಒತ್ತಡದ ಕಾರಣಕ್ಕೆ ತನ್ನ ಸಂಶೋಧನೆಯನ್ನು ತಾನೇ ಅಲ್ಲಗೆಳೆದ ಆಧುನಿಕ ವಿಜ್ಞಾನದ ಪಿತಾಮಹ ಇಟಲಿಯ ಗೆಲಿಲಿಯೋ ಗೆಲಿಲಿಯ ಸಂಶೋಧನೆ ಮತ್ತು ಕೌಟುಂಬಿಕ ಜೀವನವೆರಡೂ ಅಲ್ಲಿ ಮುಖಾಮುಖಿಯಾಗಿತ್ತು.

ಗೆಲಿಲಿಯೋ ತನ್ನ ಸಂಶೋಧನೆಯ ಕಾರಣಕ್ಕೆ ಜೀವನದುದ್ದಕ್ಕೂ ಎದುರಿಸಿದ ಸಂಘರ್ಷ, ಇಬ್ಬರು ಹೆಣ್ಣು ಮಕ್ಕಳಾದ ವರ್ಜಿನಿಯಾ ಮತ್ತು ಮಾರಿಯಾ ಜೊತೆಗಿನ ಪತ್ರ ವ್ಯವಹಾರಗಳಲ್ಲಿ ವ್ಯಕ್ತಪಡಿಸಿದ ಸಂಕಟ, ವೇದನೆ, ಸಂಭ್ರಮಗಳು ಅತ್ಯಂತ ಅಚ್ಚುಕಟ್ಟಾಗಿ ಮೂಡಿ ಬಂದವು.

ಇತ್ತೀಚೆಗೆ ಅಗಲಿದ ಮೈಸೂರಿನ ರಂಗಕರ್ಮಿ ನ.ರತ್ನ ಅವರಿಗೆ ಈ ನಾಟಕವನ್ನು ಅರ್ಪಿಸಿದ್ದು ವಿಶೇಷ. ಗೆಲಿಲಿಯೋ ಕುರಿತು ಬಂದಿರುವ ಕೃತಿಗಳನ್ನು ಆಧರಿಸಿ ಪ್ರೊ.ಎಸ್‌.ಆರ್‌.ರಮೇಶ್‌ ಅವರು ರಚಿಸಿ, ನಿರ್ದೇಶಿಸಿದ ನಾಟಕ, ಅತಿರೇಕಗಳಿಲ್ಲದೆ ಗೆಲಿಲಿಯೋ ಸಂಶೋಧನೆ–ಕೌಟುಂಬಿಕ ಬದುಕನ್ನು ದಾಟಿಸುವ ಪ್ರಯತ್ನ. ಇಂಗ್ಲಿಷ್ ನಾಟಕಗಳು ಮೈಸೂರಿಗೆ ಅಪರೂಪ. ಹೀಗಾಗಿ ಇದನ್ನು ಉತ್ಸವದ ವಿಶೇಷ ಎನ್ನಲೇಬೇಕು.

ಎಸಿ ಮತ್ತು ಡಿಸಿ ವಿದ್ಯುತ್‌ ಪ್ರವರ್ತಕ ಉದ್ಯಮಗಳ ನಡುವಿನ ಸ್ಪರ್ಧೆಯ ತೀವ್ರತೆಯು ‘DC vs AC: ಹೀಗೊಂದು ಕದನ ಕಥೆ’ಯಲ್ಲೂ ಅನಾವರಣಗೊಂಡಿತು. ವಿದ್ಯುತ್‌ ದೀಪಗಳ ಬಳಕೆ ಆರಂಭವಾದ ಕಾಲಘಟ್ಟದ ಸಂಶೋಧನೆಯನ್ನೇ ಆಧರಿಸಿ ನಾಟಕ ವಿದ್ಯುತ್‌ ಶಕ್ತಿಯಂತೆಯೇ, ಪ್ರೇಕಕರಿಗೆ ಸವಾಲೊಡ್ಡುವ ಶಕ್ತಿಯುಳ್ಳ ನಾಟಕ.

ವಿದ್ಯಾರ್ಥಿಗಳಿಗೂ ಅವಕಾಶ

ಈ ಬಾರಿಯ ಉತ್ಸವ ವಿದ್ಯಾರ್ಥಿಗಳಿಗೂ ಅವಕಾಶ ನೀಡಿದ್ದು ವಿಶೇಷ. ಸರಗೂರಿನ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅಭಿನಯಿಸಿದ ‘ವಿಜ್ಞಾನ–ವಿಕಾಸವಾದ’ ನಾಟಕ ತನ್ನ ಗಾಂಭೀರ್ಯದಿಂದಲೇ ಗಮನ ಸೆಳೆಯಿತು. ವಿಕಾಸವಾದದ ರೂವಾರಿಗಳು ಎದುರಿಸಿದ ಆಂತರಿಕ ಸಂಘರ್ಷ ಮತ್ತು ತಳೆದ ನಿಲುವುಗಳ ಹಿನ್ನೋಟ, ವಿಶ್ಲೇಷಣೆ, ಈ ಕಿರುನಾಟಕದಲ್ಲಿ ಗಮನ ಸೆಳೆದಿತ್ತು. ವಿದ್ಯಾರ್ಥಿಗಳ ನಡುವೆ ವಿಜ್ಞಾನಿಗಳೇ ಬಂದು ತಮ್ಮ ಸಂಶೋಧನೆಗಳ ಹಿನ್ನೋಟ ಮೂಡಿಸುವ ಕಲ್ಪನೆಯು ವಿಷಯ ಮಂಡನೆಯನ್ನು ಸಲೀಸುಗೊಳಿಸಿತ್ತು.

ಧಾರವಾಡದ ‘ಅಭಿಯನ ಭಾರತಿ’, ‘ಪರಿವರ್ತನ ರಂಗಸಮಾಜ ಮೈಸೂರು’, ‘ಕಲಾಸುರುಚಿ ಮೈಸೂರು’, ‘ಕುತೂಹಲಿ’ ಹಾಗೂ ‘ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್’ ಸಹಯೋಗದಲ್ಲಿ ನಡೆದ ನಾಟಕೋತ್ಸವಕ್ಕೆ ಪ್ರೇಕ್ಷಕರ ಕೊರತೆ ಎಳ್ಳಷ್ಟೂ ಇರಲಿಲ್ಲ. ವಿಜ್ಞಾನ ಸಾಹಿತ್ಯದಲ್ಲಿ ಆಸಕ್ತರಾದ ಲೇಖಕರು, ಓದುಗರು, ಪೋಷಕರು, ಶಾಲೆ–ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜಾಗ ಸಾಕಾಗದೆ ಹಲವರು ನೆಲದ ಮೇಲೆ ಕುಳಿತು ನಾಟಕ ನೋಡಿದರು. ವಿಜ್ಞಾನವನ್ನು ನಾಟಕದಲ್ಲಿ ತರುವ ಪ್ರಯತ್ನಗಳಿಗೆ ಸದಾ ತಮ್ಮ ಬೆಂಬಲವಿದೆ ಎಂಬುದನ್ನೂ ನಿರೂಪಿಸಿದರು.

ಈ ಬೆಂಬಲದ ಕಾರಣಕ್ಕೆ ಇಷ್ಟು ವರ್ಷಗಳಿಂದ ನಡೆದಿರುವ ಉತ್ಸವವೇ 21 ಹೊಸ ನಾಟಕಗಳಿಗೆ ಪ್ರೇರಣೆ ನೀಡಿದೆ ಎಂಬುದು ಬಹಳ ಮಂದಿಗೆ ತಿಳಿದಿಲ್ಲ. ನಾಟಕ ರಚನೆಯ ಗಂಧಗಾಳಿಯೂ ಇಲ್ಲದವರೇ ವಿಶೇಷ ನಾಟಕ ರಚನೆಯ ಪ್ರಯೋಗಕ್ಕೂ ತಮ್ಮನ್ನೂ ಒಡ್ಡಿಕೊಂಡರು.

ಉತ್ಸವದ ನಾಲ್ಕೂ ದಿನವೂ ನಾಟಕ ಪ್ರದರ್ಶನಕ್ಕೆ ಮುನ್ನ ಆಯೋಜಿಸಿದ್ದ ವಿಜ್ಞಾನ ಗೀತೆಗಳ ಗಾಯನ, ಕನ್ನಡ, ಇಂಗ್ಲಿಷ್‌ ವಿಜ್ಞಾನ ನಾಟಕಗಳ ಆಯ್ದಭಾಗಗಳ ಓದು–ಇವು ಉತ್ಸವದ ಆಯೋಜಕರ ವಿಜ್ಞಾನ ಬದ್ಧತೆಯನ್ನು ತೋರಿದವು.

‘ಹಸಿರೇ ಹೊನ್ನು’ ನಾಟಕ
‘ಹಸಿರೇ ಹೊನ್ನು’ ನಾಟಕ
‘ಗೆಲಿಲಿಯೋಸ್ ಡಾಟರ್’ ನಾಟಕ
ಚಿತ್ರಗಳು: ಹಂ.ಪ.ನಾಗರಾಜ್
‘ಗೆಲಿಲಿಯೋಸ್ ಡಾಟರ್’ ನಾಟಕ ಚಿತ್ರಗಳು: ಹಂ.ಪ.ನಾಗರಾಜ್
‘ಗೆಲಿಲಿಯೋಸ್‌ ಡಾಟರ್’ ನಾಟಕ
‘ಗೆಲಿಲಿಯೋಸ್‌ ಡಾಟರ್’ ನಾಟಕ
ಹಾಸ್ಯ ನುಂಗಿದ ‘ಹಸಿರೇ ಹೊನ್ನು’
ಸಸ್ಯಶಾಸ್ತ್ರ ಸಂಶೋಧನೆಯಲ್ಲಿ ಕರ್ನಾಟಕಕ್ಕೆ ಜಾಗತಿಕವಾಗಿ ಪ್ರಖ್ಯಾತಿ ತಂದುಕೊಟ್ಟ ಪ್ರೊ.ಬಿಜಿಎಲ್‌ ಸ್ವಾಮಿ ಅವರ ಜೀವನಾಧಾರಿತ ‘ಹಸಿರೇ ಹೊನ್ನು’ ನಾಟಕವು ಕನ್ನಡದ ಮಟ್ಟಿಗೆ ಹೊಸ ಪ್ರಯೋಗ. 2023ರ ಉತ್ಸವದ ಹೊತ್ತಿಗೆ ಮೊಳಕೆಯೊಡೆದಿದ್ದ ಪರಿಕಲ್ಪನೆ ಈ ಬಾರಿ ರಂಗಕ್ಕೆ ಬಂದಿದೆ. ಆಗ ‘ಸಲೀಂ ಆಲಿ’ ಜೀವನಚರಿತ್ರೆ ಆಧರಿಸಿ ನಾಟಕ ಬರೆದಿದ್ದ ಡಾ.ಸಿ.ಮನೋಹರ್‌ ಅವರೇ ಇದನ್ನೂ ರಚಿಸಿದ್ದಾರೆ. ಮೈಸೂರಿನ ಅರಿವು ರಂಗ ಪ್ರಸ್ತುತಪಡಿಸಿದ ಈ ನಾಟಕದಲ್ಲಿ ಸ್ವಾಮಿಯವರಲ್ಲಿದ್ದ ಹಾಸ್ಯ ಪ್ರವೃತ್ತಿಗೇ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಅವರ ಸಂಶೋಧಕ ಮತ್ತು ವಿಜ್ಞಾನ ಲೇಖಕ ಪ್ರತಿಭೆಯ ಮೇಲೆ ಹಾಸ್ಯದ ದಪ್ಪ ಪರದೆ ಹೊದಿಸಿದಂತಾಗಿತ್ತು. ವಿಜ್ಞಾನದ ಅಂಶಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಹಾಸ್ಯ ಇರಲೇಬೇಕು ಎಂಬ ಸರಳ ನಿಲುವೂ ಇದಕ್ಕೆ ಕಾರಣವಿರಬಹುದು. ಸ್ವಾಮಿಯವರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರೊ.ಎ.ಆರ್‌.ಕೃಷ್ಣಶಾಸ್ತ್ರಿ ಎಂ.ಜಿ.ಆರ್‌ ನಾಡಿಗ ಕೃಷ್ಣಮೂರ್ತಿಯವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟ ಬಗೆಯಲ್ಲೂ ಹಾಸ್ಯವೇ ಪ್ರಧಾನವಾಗಿತ್ತು. ಉತ್ಸವದಲ್ಲಿ ಪ್ರದರ್ಶನಗೊಂಡ ‘ಗೆಲಿಲಿಯೋಸ್‌ ಡಾಟರ್’ ನಾಟಕದುದ್ದಕ್ಕೂ ಹಾಸ್ಯವಿತ್ತು. ಆದರೆ ಗೆಲಿಲಿಯೋನ ಸಂಶೋಧನೆಗಳು ಅವುಗಳನ್ನು ಕಂಡುಕೊಂಡ ಮಂಡಿಸುತ್ತಿದ್ದ ಬಗೆ ವಿಜ್ಞಾನದ ಮೇಲೆ ಧರ್ಮ ಗೆಲುವು ಸಾಧಿಸುವ ಅಂಶಗಳಿಗೂ ಹೆಚ್ಚಿನ ಒತ್ತು ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT