ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಸರ ಕಾಳಜಿಯ ಶಿಲಾ ಮಾಂತ್ರಿಕ

Last Updated 25 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಮಲೆನಾಡಿನಲ್ಲಿ ಬೇರು ಹೊಂದಿರುವ ಈ ಕಲಾವಿದ ತಮ್ಮ ಕಲಾಕೃತಿಗಳ ಮೂಲಕ ಜಗದೆಲ್ಲೆಡೆ ಟೊಂಗೆ ಬಿಟ್ಟವರು. ಇವರ ಕಲಾಯಾತ್ರೆಯತ್ತ ಒಂದು ನೋಟ.

**

ದೆಹಲಿ ಕನ್ನಡಿಗ ಅರುಣಕುಮಾರ್ ಎಚ್.ಜಿ. ಅಂತರರಾಷ್ಟ್ರೀಯ ಖ್ಯಾತಿಯ ಶಿಲ್ಪ ಕಲಾವಿದ. ಮಲೆನಾಡ ಮಣ್ಣಿನ ನಂಟು ಮತ್ತು ಬೇರಿನ ಸತ್ವವನ್ನು ಅವರು ಬಿಟ್ಟುಕೊಟ್ಟಿಲ್ಲ. ಒಂದು ಮರದಂತೆ ಬೆಳೆದಿರುವ ಅವರ ಕಲಾ ಜಗತ್ತಿನ ಟೊಂಗೆಗಳು ಭಾರತ ಮಾತ್ರವಲ್ಲದೆ ಜಪಾನ್, ಆಸ್ಟ್ರೇಲಿಯಾ, ಅಮೆರಿಕ ಮುಂತಾದ ದೇಶಗಳಲ್ಲಿ ಹರಡಿರಬಹುದು. ಆದರೆ, ಕನ್ನಡದ ಮಲೆನಾಡಿನ ಮಣ್ಣಲ್ಲೇ ಬೇರುಗಳಿವೆ ಎಂಬುದನ್ನು ಅವರು ಸದಾ ನೆನಪಿನಲ್ಲಿಟ್ಟಿದ್ದಾರೆ. ಅದನ್ನು ತ್ಯಜಿಸದೇ ಪ್ರಾಕೃತಿಕ ಸಂತುಲನದ ಧ್ಯೇಯ, ಧಾರೆಯ ನಿಷ್ಠೆ ಕಾಪಿಟ್ಟುಕೊಂಡಿದ್ದಾರೆ.

‘CON-struction’ ಎಚ್ಚರದ ಸೃಜನಶೀಲ ಧಾರೆಯ ಅರುಣಕುಮಾರ್ ತ್ಯಾಜ್ಯ ವಸ್ತುಗಳನ್ನು ಆಯ್ದು ಶಿಲ್ಪ ಕಲಾಕೃತಿ ಮತ್ತು ಪ್ರತಿಷ್ಠಾಪನ ಕೃತಿಗಳನ್ನು ಪ್ರಪಂಚದಾದ್ಯಂತ ತಮ್ಮ ಪರಿಕಲ್ಪನೆಯಲ್ಲೇ ರಚಿಸಿ ಹೆಸರುವಾಸಿದವರು. ಕಸದತೊಟ್ಟಿ ಸೇರಿದ ಮರದ ತುಂಡು, ಘನತ್ಯಾಜ್ಯ, ರಸ್ತೆ ಬದಿ ಚೆಲ್ಲಿದ ಕಸ ಹಾಗೂ ಕಟ್ಟಡದ ತ್ಯಾಜ್ಯದಿಂದ ಅವರ ಕೈಯಲ್ಲಿ ಕಲಾಕೃತಿಗಳು ಜೀವ ಪಡೆಯುತ್ತವೆ.

ಅರುಣಕುಮಾರ್ ಅವರ ‘ಕಾನ್-ಸ್ಟ್ರಕ್ಷನ್’ ಸರಣಿ ಪರಿಕಲ್ಪನೆಯ ಶಿಲ್ಪಗಳು ಪರಿಸರೀಯ ಅಸಂಗತತೆಯ ಕುರುಡು ಚುಕ್ಕೆಗಳು. ತಮ್ಮ ಸ್ವಭಾವಕ್ಕೆ ಎರಕ ಹೊಯ್ದು ದೃಗ್ಗೋಚರ ರೂಪದಲ್ಲಿ ಅನ್ವೇಷಣೆಗೊಳ್ಳುತ್ತವೆ. ಅರಣ್ಯ, ಜೀವಜಗತ್ತು, ಮಣ್ಣು, ನೀರು ಇವೆಲ್ಲದರ ನಾಶ ಮಾನವ ಕುಲಕ್ಕೆ ಮಾರಕ ಎಂಬುದನ್ನು ಮಲೆನಾಡಿನವರೇ ಆದ ಅರುಣಕುಮಾರ್ ಅವರು ಆಳವಾಗಿ ಬಲ್ಲವರು. ಅದು ಅವರ ಕಾಳಜಿಯೂ ಹೌದು. ಅವರು ತಮ್ಮ ಶಿಲ್ಪಗಳ ಮೂಲಕ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಾರೆ.

ಪ್ರಪಂಚವು ವಾಸ್ತವವಾಗಿ ಬದುಕಿನ ಶೈಲಿಯನ್ನು ಬದಲಿಸಿದೆ. ‘ಹೈ ಕಾಸ್ಟ್’ ಬದುಕು! ಅರುಣಕುಮಾರ್‌ ಅವರ ವಿಷ್ಯುವಲ್ ತಂತ್ರಗಳು ಪರೋಕ್ಷವಾಗಿ ನಗರದ ವಿಸ್ತರಣೆ, ಏರುತ್ತಿರುವ ಜಾಗತಿಕ ತಾಪಮಾನ ಮುಂತಾದ ಪ್ರಶ್ನೆಗಳಿಗೆ ಒಳನೋಟಗಳಿಂದ ಉತ್ತರ ಕಂಡುಕೊಳ್ಳುವ ಯತ್ನ ಮಾಡುತ್ತವೆ.

ಅರುಣಕುಮಾರ್ (ಜನನ; 1968) ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ದೊಂಬೆಕೊಪ್ಪ. ಅವರು ದಾವಣಗೆರೆಯ ಕಲಾಶಾಲೆ ಸೇರಿದರು. ಅಲ್ಲಿ ದ್ವಿತೀಯ ವರ್ಷದಲ್ಲಿ ಶಿಕ್ಷಣ ಪಡೆಯುತ್ತಿರುವಾಗಲೇ ದಾವಣಗೆರೆ ತ್ಯಜಿಸಿ ವಡೋದರ ರೈಲು ಹತ್ತಿದರು. ವಡೋದರದ ‘ಫ್ಯಾಕಲ್ಟಿ ಆಫ್ ಫೈನ್ ಆರ್ಟ್‌’ ಸೇರಿದಾಗ ಅವರಿಗೆ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳು ಬರುತ್ತಿರಲಿಲ್ಲ. ಕಲಾಶಿಕ್ಷಣದ ಹಸಿವು ಎಲ್ಲವನ್ನೂ ಕಲಿಸಿತು. ಇಂದು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲರು.

ವಡೋದರದ ಕಲಾಶಾಲೆಯು ಅರುಣಕುಮಾರ್ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಬದುಕಿನ ನಿಜಾರ್ಥದ ದಾರಿ ತೋರುವ ಗುರುಗಳು ಸಿಕ್ಕರು. ಅವರೇ ಕೃಷ್ಣಾ ಛತ್ತಪುರ. ಅವರ ಮೊದಲ ಪಾಠವೇ- ‘ಮೊದಲು ನೀ ಮನುಷ್ಯನಾಗು!’ ಎಂಬುದು. ‘ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದ ಹೊರತು ಯಾರೂ ಕಲಾವಿದನಾಗಲು ಸಾಧ್ಯವಿಲ್ಲ. ಖರೆ ಅರ್ಥದ ಕಲೆ ಎಂದರೇನು? ಬರೇ ಚಿತ್ರ ಬಿಡಿಸುವುದೇ? ಶಿಲ್ಪ ರಚನೆಯೇ? ಕಲೆಯೇ ಜೀವನದ ಒಂದು ಭಾಗವಾಗಲೂ ಎಲ್ಲಾ ರೀತಿಯಿಂದಲೂ ಮಾನವನಾಗುವ ಮನೋಧೋರಣೆ ಅಗತ್ಯ’ ಎಂದು ಕೃಷ್ಣಾ ಛತ್ತಪುರರ ನುಡಿಯನ್ನು ಅರುಣಕುಮಾರ್ ಮೆಲುಕು ಹಾಕುತ್ತಾರೆ. ಆ ಜೀವದ್ರವ್ಯವು ಅವರ ಎಲ್ಲ ರಚನೆಯಲ್ಲೂ ದೊರೆಯುವುದನ್ನು ಗಮನಿಸಬಹುದು.

ಬಿ.ವಿ.ಕಾರಂತರು ತಮ್ಮ ರಂಗ ಶಿಷ್ಯರಿಗೆ ಸಮಾಜದ ಸರ್ವ ಮಾನವ ಸ್ವಭಾವಗಳು ಮತ್ತು ಅವನಿಂದ ಜರುಗುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲು ಹೇಳುತ್ತಿದ್ದರು. ಹಾಗೆಯೇ ಛತ್ತರಪುರ ಗುರುಗಳು ಸಹ ನಮಗೆ ಶೋಧ ನಡೆಸಲು, ರೂಪ ಕಲ್ಪನೆಗಳು ಹೇಗೆ ತೆರೆದುಕೊಳ್ಳುವುವು ಎಂಬುದನ್ನು ಅರಿಯಲು ಹೇಳಿಕೊಟ್ಟರೆಂದು ಅರುಣಕುಮಾರ್ ನೆನೆಯುವರು. ಆ ಹುಡುಕಾಟಗಳಲ್ಲಿ ಸೃಜನಗೊಳ್ಳುವ ಶಿಲ್ಪಗಳು ಗಹನ ಆಲೋಚನೆಗೆ ಕೊಂಡೊಯ್ಯುತ್ತವೆ.

ನಿಸರ್ಗದ ವಿರುದ್ಧ ಪ್ರಜ್ಞಾಶೂನ್ಯತೆಯಿಂದ ವಸ್ತುಗಳನ್ನು ನಿರ್ಮಿಸುವ ಕಾಲಘಟ್ಟದಲ್ಲಿ ಅರುಣಕುಮಾರ್‌ ಒಲವು ಇದ್ದುದು ಅದೇ ತ್ಯಾಜ್ಯ ವಸ್ತುಗಳ ಬಳಕೆಯ ಕಲಾಸೃಷ್ಟಿಯಲ್ಲಿ. ಕಾಗದದ ತಿರುಳು, ಪ್ಯಾಕೇಜಿನಲ್ಲಿ ನಾಶಗೊಂಡ ಕಟ್ಟಿಗೆಯ ತುಣುಕುಗಳು, ಸಿಮೆಂಟ್ ಅಂಟಿನಿಂದ ಇವರ ಕೃತಿಗಳು ರೂಪ ಪಡೆಯುವವು. ಪ್ರಕೃತಿ ವಿನಾಶಕ್ಕೆ ಧಕ್ಕೆ ತರುವ, ನೈಸರ್ಗಿಕ ಅಸಮತೋಲನಕ್ಕೆ ಕಾರಣವೆನಿಸುವುದು ಸರ್ವತ್ರ ಜರುಗುತ್ತಿದೆ. ಅದನ್ನು ಒಂದು ಚಳವಳಿಯಂತೆ ವಿರೋಧಿಸುವ ಚಿಂತನೆಯ ಶಿಲ್ಪ ಕೃತಿಗಳನ್ನು ಇವರು ರಚಿಸಿದ್ದಾರೆ.

ಭಾರತದ ಸಾಂಸ್ಕೃತಿಕ, ನೈಸರ್ಗಿಕ ಪರಿಪೇಕ್ಷದಲ್ಲಿ ಇವರ ಪ್ರಾಣಿ ಸಂಗ್ರಹಾಲಯ ರಚನಾಲೋಕ ಮಹತ್ವದ್ದು. ಮಾನವ ದೇಹಗಳ ಒಳನೋಟಗಳ ಬಳಿಕ ಖಡ್ಗಮೃಗ, ಹುಲಿ, ಆನೆ, ಪಕ್ಷಿಗಳನ್ನು ದೃಶ್ಯ ಪ್ರಬಂಧದ ರೂಪದಲ್ಲಿ ರಚಿಸಿದ್ದಾರೆ. ಪ್ರಾಚ್ಯ ವಾಸ್ತು ಶಿಲ್ಪಗಳಲ್ಲಿಯ ಮ್ಯೂರಲ್ ರೂಪದ ಭಂಗಿಗಳಾಚೆಯ ಆನೆಯ ಶಿಲ್ಪಗಳು. ಪಂಚತಂತ್ರದ ಕತೆಗಳ ಮಾನವರೂಪಿ ಸಾಮರ್ಥ್ಯವನ್ನು ಪಡೆದ ಪ್ರಾಣಿಗಳ ರೂಪಕಗಳು ಮಧುರವಾಗಿ ಧ್ವನಿಸುತ್ತವೆ. ಈ ಉದ್ಧರಣೆಗಳು ಮನುಷ್ಯನಷ್ಟೇ ನೈಸರ್ಗಿಕ ಸಮತೋಲನಕ್ಕೆ ಪ್ರಾಣಿಗಳ ಸಂಬಂಧವೂ ಪ್ರಧಾನ. ಅದನ್ನು ನಿರಾಕರಿಸಲಾಗದೆಂಬುದನ್ನು ಸಾರುತ್ತದೆ. ಇದು ಮಾನವತ್ವದ ಕಾಣ್ಕೆಯೂ ಹೌದು.

ಅರುಣಕುಮಾರ್ ಅವರ ಕೃತಿಗಳು ಜಗತ್ತಿನಾದ್ಯಂತ ಪ್ರತಿಷ್ಠಾಪಿತಗೊಂಡಿವೆ. ಭಾರತದ ಪ್ರಮುಖ ನಗರಗಳು ಸೇರಿದಂತೆ ನ್ಯೂಯಾರ್ಕ್‌ ಅಮೆರಿಕ, ಡೆನ್ಮಾರ್ಕ್‌, ಜರ್ಮನಿ, ಚೀನಾ, ಬೆಲ್ಜಿಯಂ, ಶ್ರೀಲಂಕಾ, ನಾರ್ವೆ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಪ್ರದರ್ಶನಗೊಂಡಿವೆ. ಆಸ್ಟ್ರೇಲಿಯಾದ ಅಡಿಲೇಡ್, ಶ್ರೀಲಂಕಾದ ಕೊಲಂಬೊ, ನಾರ್ವೆಯ ಬರ್ಗನ್, ಜಪಾನ್‌ ಮೋರಿಯಾದಲ್ಲಿ ಹಲವಾರು ತಿಂಗಳುಗಳ ಕಾಲಾವಧಿಗೆ ಕಾರ್ಯಾಗಾರಗಳನ್ನು ನಡೆಸಿದ್ದಾರೆ.

ಸಾರ: ‘ಸಾರ’ ಎಂಬುದು ಮಣ್ಣಿನ ಸತ್ವ ಹೇಳುವ ರೈತಾಪಿ ಅಚ್ಚಗನ್ನಡದ ದೇಸಿ ಪದ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಹೆಸರಿದ್ದರೂ ಮಲೆನಾಡಿನ ಜನುಮ ತಾಣವನ್ನು ಅವರು ಮರೆತಿಲ್ಲ. ಶಿವಮೊಗ್ಗ ಜಿಲ್ಲೆಯ ದೊಂಬೆಕೊಪ್ಪದಲ್ಲಿ ‘ಸಾರ’ ಕೇಂದ್ರ ತೆರೆದರು (Sustainable Alternatives for Rural Accord- ‘SARA’). ಇದೊಂದು ವಿಚಾರ ವಿನಿಮಯಗಳ ವೇದಿಕೆ. ಕಲಾವಿದರು, ಬುದ್ಧಿಜೀವಿಗಳು, ರಂಗಕರ್ಮಿಗಳು, ಪರಿಸರವಾದಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಇಲ್ಲಿ ನಡೆಯುತ್ತಿರುತ್ತದೆ. ಜನರಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವುದು, ಪರಿಸರ ಕಾಳಜಿಯನ್ನು ಬಿತ್ತುವುದು, ಸುಸ್ಥಿರ ಜೀವನ ಅಭ್ಯಾಸದ ಕುರಿತು ಜಾಗೃತಿ ಮೂಡಿಸುವುದು, ಪಶ್ಚಿಮಘಟ್ಟದ ರೈತ ಮತ್ತು ಕೂಲಿಗಳ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರ ಕಂಡುಕೊಳ್ಳುವುದು ಅದರ ಧ್ಯೇಯೋದ್ದೇಶಗಳು.

ಕಲಾಪ್ರದರ್ಶನ, ಕಲಾ ಚಟುವಟಿಕೆಗಳು, ಪ್ರಾಯೋಗಿಕ ಕಲಿಕೆಗಳ ಘಟಕಗಳ ಅಗತ್ಯವನ್ನು ಪೂರೈಸಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ- ನೀರಿನ ಸದ್ಬಳಕೆ, ಸುಸ್ಥಿರ ಜೀವನ ಮತ್ತು ಪರಿಸರದ ಅರಿವು ಮೂಡಿಸುವ ಕಾರ್ಯದಲ್ಲೂ ಈ ಸಂಸ್ಥೆ ನಿರತವಾಗಿದೆ. ‘ಸಾರ’ದ ಈ ಕಾಯಕವನ್ನು ನಿರಂತರ ನಡೆಸಿಕೊಂಡು ಒಂದು ಸಂವೇದನಶೀಲ ಸಮಾಜದ ನಿರ್ಮಿತಿಗೆ ಅರುಣಕುಮಾರ್ ಕಾರಣಕರ್ತರಾಗಿರುವರು.

ಅರುಣಕುಮಾರ್
ಅರುಣಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT