ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಸೀರೆ ಉಟ್ಟು ಬೇಸರ ಬಂದಾಗ...

Last Updated 17 ನವೆಂಬರ್ 2020, 8:30 IST
ಅಕ್ಷರ ಗಾತ್ರ

ಬಾಲಿವುಡ್ ನಟ ರಿತೇಶ್ ದೇಶಮುಖ್ ಈ ಬಾರಿ ಹಬ್ಬಕ್ಕೆ ಅವರಮ್ಮನ ಸೀರೆಯೊಂದನ್ನು ಕಟ್ ಮಾಡಿಸಿ ಕುರ್ತಾ ಹೊಲಿಸಿಕೊಂಡ ಸಂಗತಿ ಬಹಳ ಪ್ರಚಾರ ಪಡೆಯಿತು. ತಿಳಿನೀಲಿ ಬಣ್ಣದ ಸೀರೆಯಿಂದ ತಮಗೆ ಹಾಗೂ ಇಬ್ಬರು ಮಕ್ಕಳಿಗೆ ಕುರ್ತಾ ಹೊಲಿಸಿ, ಅದನ್ನು ಧರಿಸಿ ಫೋಟೊ ತೆಗೆಯಿಸಿಕೊಂಡ ನಟ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇ ಹಾಕಿದ್ದು. ನಟ- ನಟಿಯರು, ಫ್ಯಾಷನ್‌ಪ್ರಿಯರು ತಮ್ಮ ಮನೆಯಲ್ಲಿರುವ ಸೀರೆ ಭಂಡಾರದತ್ತ ಒಮ್ಮೆ ಹಣಕಿ ನೋಡಲು ಇದು ಪ್ರೇರಣೆ.

ಸೀರೆಯ ಬಟ್ಟೆಯಲ್ಲಿ ಹೊಲಿದ ಪುರುಷರ ದಿರಿಸುಗಳು ಇನ್ನು ಫ್ಯಾಷನ್‌ ಟ್ರೆಂಡ್‌ ಆಗುವ ದಿನಗಳು ದೂರವಿಲ್ಲ.

ಸೀರೆಗಳ ವೈವಿಧ್ಯಕ್ಕಂತೂ ಎಲ್ಲೆ ಎನ್ನುವುದು ಇಲ್ಲ. ಹೀಗಾಗಿ ಫ್ಯಾಷನ್ ಪ್ರಿಯರಿಗೆ ಹೊಸ ವಿನ್ಯಾಸ ಮಾಡಲು ಸೀರೆಗಳಲ್ಲಿ ಬೇಕಾದಷ್ಟು ಅವಕಾಶಗಳು ಇವೆ. ಸೀರೆಯ ಕಚ್ಚಾ ವಸ್ತು, ಅದರ ಮೇಲಿರುವ ಪ್ರಿಂಟ್, ಬಾರ್ಡರ್‌, ಸೆರಗು ಹೀಗೆ ವಿವಿಧ ಭಾಗಗಳನ್ನು ಆಧಾರವಾಗಿಟ್ಟುಕೊಂಡು ನಾನಾ ವಸ್ತ್ರ ವಿನ್ಯಾಸ ಮಾಡುವ ಅವಕಾಶಗಳು ತೆರೆದುಕೊಳ್ಳುತ್ತವೆ.

ಸೀರೆಗಳಲ್ಲಿ ಉಡುಪುಗಳನ್ನು ಹೊಲಿಯುವುದು ಹೊಸ ಆವಿಷ್ಕಾರವಂತೂ ಅಲ್ಲ. ಆದರೆ, ವರ್ಷವರ್ಷಕ್ಕೂ ಇದರಲ್ಲಿ ಹೊಸ ವಿನ್ಯಾಸಗಳು ಹುಟ್ಟಿಕೊಳ್ಳುತ್ತಿವೆ. ಆಗಾಗ ಹೊಸ ಬಗೆಗಳು ಟ್ರೆಂಡ್‌ ಆಗುತ್ತಲೇ ಇರುತ್ತವೆ.

ರೇಷ್ಮೆಯಂಥ ದುಬಾರಿ ವಸ್ತ್ರದ ಸೀರೆಗಳಲ್ಲಿ ಲಂಗ ಹೊಲಿಸುವ ಪರಂಪರೆ ಬಹು ಹಿಂದಿನಿಂದಲೇ ಇದೆ. ಈಚೆಗೆ ಇಂಥ ಲಂಗಗಳಲ್ಲೇ ವಿವಿಧ ವಿನ್ಯಾಸಗಳನ್ನು ಮಾಡತೊಡಗಿದ್ದಾರೆ ವಸ್ತ್ರ ವಿನ್ಯಾಸಕರು. ಮಾಡರ್ನ್ ಲುಕ್‌ ನೀಡುವ ಲೆಹೆಂಗಾ ಹೊಲಿಸುವ ಟ್ರೆಂಡ್ ಕಾಣಿಸುತ್ತಿದೆ. ಕಸೂತಿ ಇರುವ ಸೀರೆಯನ್ನು ಲೆಹೆಂಗಾ ಹೊಲಿದು, ಅದಕ್ಕೆ ಪ್ಲೇನ್ ಆಗಿರುವ ಬ್ಲೌಸ್ ಹೊಲಿಸಿಕೊಂಡರೆ ಹೊಂದಿಕೆಯಾಗುತ್ತದೆ.

ಸೀರೆಯಲ್ಲಿರುವ ಸುಂದರ ಚಿತ್ತಾರವನ್ನೇ ಮೆಲ್ಮೈ ಬರುವಂತೆ ಮಾಡಿ ಸಲ್ವಾರ್ ಹೊಲಿಸಿಕೊಳ್ಳಬಹುದು. ವಿನ್ಯಾಸಗಳು ಬೆನ್ನಿನ ಭಾಗಕ್ಕೆ ಬರುವಂತೆ ಮಾಡಿ ಸೀರೆ ಬ್ಲೌಸ್ ಹೊಲಿಸಿಕೊಳ್ಳಬಹುದು. ತೆಳ್ಳನೆಯ ಸೀರೆ ಇದ್ದರೆ, ಅದಕ್ಕೆ ಲೈನಿಂಗ್ ಹಾಕಿಸಿ ಸಲ್ವಾರ್ ಹೊಲಿಸಬಹುದು. ಈಚೆಗೆ ಸಲ್ವಾರ್ ಸೂಟ್ ಹೊಲಿಯುವುದು ಸಹ ಫ್ಯಾಷನ್ ಆಗಿದೆ. ಲಾಂಗ್ ಫ್ರಾಕ್ ಹೊಲಿಯಲು ಸಹ ಸೀರೆಗಳು ಹೊಂದಿಕೊಳ್ಳುತ್ತವೆ. ಹೊಲಿಗೆ ಕಲಿಯುವವರು ಹಳೆಯ ಸೀರೆಗಳನ್ನು ಬಳಸಿ ಪ್ರಯೋಗ ಮಾಡುವುದು ಉತ್ತಮ.

ಕೆಲವರಿಗೆ ಹಳೆಯ ಕೆಲವು ಸೀರೆಗಳು ತುಂಬಾ ಅಚ್ಚುಮೆಚ್ಚಿನವಾಗಿರುತ್ತವೆ. ಅಂಥ ಸೀರೆಗಳನ್ನು ಡ್ರೆಸ್ ಹೊಲಿಸಿ ಮಕ್ಕಳಿಗೆ ಹಾಕಿಕೊಳ್ಳಲು ನೀಡುತ್ತಾರೆ. ಸೀರೆಗಳಲ್ಲಿ ಲಂಗ-ದಾವಣಿಯಂಥ ಸಾಂಪ್ರದಾಯಿಕ ಉಡುಗೆಯಷ್ಟೇ ಅಲ್ಲದೇ ಮಾಡರ್ನ್ ವೇರ್‌ಗಳನ್ನೂ ಸಿದ್ಧಪಡಿಸಬಹುದು ಎಂದು ವಸ್ತ್ರ ವಿನ್ಯಾಸಕರು ಸಾಧಿಸಿ ತೋರಿಸಿದ್ದಾರೆ.

ನಿಮ್ಮ ವಾರ್ಡ್‌ರೋಬ್‌ಗಳಲ್ಲಿ ಸೀರೆ ಸಂಗ್ರಹ ತುಂಬಿ ತುಳುಕಿದರೆ, ಕೆಲವನ್ನು ಆಯ್ದು ಉಡುಗೆ ಹೊಲಿದುಕೊಳ್ಳುವುದೋ, ಟೇಲರ್‌ಗಳಿಗೆ ಕೊಟ್ಟು ಹೊಲಿಸುವುದೋ ಮಾಡಬಹುದು. ಕೆಲವರಿಗೆ ಒಂದರೆರಡು ಬಾರಿ ಉಟ್ಟ ಸೀರೆ ಮತ್ತೆ ಉಡುವ ಅಭ್ಯಾಸವೇ ಇರುವುದಿಲ್ಲ. ಅಂಥವನ್ನು ತೆಗೆದು ಸಲ್ವಾರ್, ಸಲ್ವಾರ್ ಸ್ಯೂಟ್, ಲೆಹೆಂಗಾ, ಲಂಗ, ಲಾಂಗ್ ಫ್ರಾಕ್ ಸಿದ್ಧಪಡಿಸಿಕೊಳ್ಳಬಹುದು. ಸದಾ ಹೊಸ ಉಡುಗೆಗಳಲ್ಲೇ ಮಿಂಚಬೇಕೆಂದು ಬಯಸುವವರಿಗೆ ಸೀರೆಗಳು ಹೊಸ ವಿನ್ಯಾಸಗಳ ದೊಡ್ಡ ಅವಕಾಶವನ್ನೇ ತೆರೆದಿಟ್ಟಿವೆ.

ಝರಿ ಸೀರೆಗಳು ಹಾಳಾಗಿದ್ದರೆ, ಅವುಗಳ ಉತ್ತಮ ಭಾಗಗಳನ್ನು ಕಟ್ ಮಾಡಿ ಇಟ್ಟುಕೊಂಡು ದುಪಟ್ಟಾ ಆಗಿ ಬಳಸಿದರೆ ಗ್ರ್ಯಾಂಡ್ ಲುಕ್ ನೀಡುತ್ತದೆ. ಝರಿಮಿಶ್ರಿತ ಅವುಗಳ ಬಾರ್ಡ್‌ರ್‌ಗಳನ್ನು ಬೇರೆ ಉಡುಗೆಗಳಿಗೆ ಮ್ಯಾಚಿಂಗ್‌ ಮಾಡಿ ಹೊಲಿದರೆ ಉತ್ತಮ ಡಿಸೈನ್‌ ಸಹ ಸಿದ್ಧವಾಗುತ್ತದೆ.

ಈಚೆಗೆ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಷ್ಟಪಡುವ ಉಡುಗೆ ಅನಾರ್ಕಲಿ. ಸೀರೆಯಿಂದ ಉತ್ತಮ ವಿನ್ಯಾಸದ ಅನಾರ್ಕಲಿ ಹೊಲಿಯಬಹುದು.

ಅಜ್ಜಿಯ ಸೀರೆ, ಧಾರೆಯ ಸೀರೆ, ಸೀಮಂತದ ಸೀರೆ, ಅಣ್ಣ ಕೊಟ್ಟ ಸೀರೆ, ತಮ್ಮ ಕೊಟ್ಟ ಸೀರೆ... ಹೀಗೆ ಹಲವು ನೆನಪುಗಳನ್ನು ಹೊತ್ತ ಸೀರೆಗಳು ಪ್ರತಿ ಮಹಿಳೆಯ ಬಳಿಯೂ ಇದ್ದೇ ಇರುತ್ತವೆ. ಇಂಥ ಸೀರೆಗಳು ಡ್ಯಾಮೇಜ್ ಆದಾಗ ಅವುಗಳನ್ನು ಮೂಲೆಗುಂಪು ಮಾಡುವುದಕ್ಕಿಂತ ಹೊಸ ಮಾದರಿಯ ಉಡುಗೆ ಹೊಲಿಸಿ ಬಳಸುವುದೇ ಸೂಕ್ತ.

ಬರೀ ಉಡುಗೆಯಷ್ಟೇ ಅಲ್ಲ ಸೀರೆ ಇದ್ದರೆ ನೂರು, ಹಾಳಾದರೆ ಸಾವಿರ ಎಂಬಂತೆ ಹಾಳಾದರೆ ಹಲವು ವಸ್ತುಗಳನ್ನು ಸಿದ್ಧಪಡಿಸಬಹುದು. ದುಪ್ಪಡಿ, ಕಾಲು ಒರೆಸುವ ಮ್ಯಾಟ್, ಚಿಕ್ಕ ವಸ್ತುಗಳನ್ನು ಇಡುವ ವಸ್ತ್ರದ ತೂಗು ಶೆಲ್ಫ್, ಪರ್ಸ್, ಕೈಚೀಲ, ಮಕ್ಕಳು ಮಲಗುವ ಹಾಸಿಗೆ, ಚಿಕ್ಕಮಕ್ಕಳಿಗೆ ಉಡುಪುಗಳು... ಇನ್ನೂ ಏನೇನೋ.

ಹಳೆ ಸೀರೆಗಳನ್ನು ಹೊಸೆದು ಹಗ್ಗ ಮಾಡುವುದು, ಹಳೆ ಸೀರೆಗಳನ್ನು ಸಂಗ್ರಹಿಸಿ ಅವುಗಳನ್ನು ಕೌದಿಯನ್ನಾಗಿ ಮಾಡಿ ಮಾರಾಟ ಮಾಡುವ ಕೆಲವು ಉಪಕಸುಬುಗಳು ಹಲವರಿಗೆ ಬದುಕಿನ ದಾರಿಯಾಗಿವೆ. ಹೀಗಾಗಿ ನಿಮ್ಮ ಸೀರೆ ಭಂಡಾರದಲ್ಲಿ ಸೀರೆ ಹಾಳಾಗುತ್ತಿದ್ದರೆ, ಹಾಗೆಯೇ ಬಿಡದಿರಿ. ಅವುಗಳನ್ನು ಹೊರತೆಗೆಯಿರಿ, ಮರುಜೀವ ನೀಡಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT