ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾ ರವಿವರ್ಮನ ಕಲೆಗೆ ನೇಯ್ಗೆಯ ಬಲೆ

Last Updated 2 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ದೇವರು ಮತ್ತು ಪೌರಾಣಿಕ ಪಾತ್ರಗಳ ಕಲಾಕೃತಿಗಳ ಮೂಲಕ ಮನೆ ಮಾತಾದ ಅಸಾಮಾನ್ಯ ಚಿತ್ರಕಲಾವಿದ ರಾಜಾ ರವಿವರ್ಮ. ಸೌಂದರ್ಯಪ್ರಜ್ಞೆ, ಆಭರಣಗಳ ಕುಸುರಿಯ ವಿವರಗಳು, ಉಡುಗೆ ತೊಡುಗೆಗಳು, ದೇವತೆಯರ ಮತ್ತು ಸ್ತ್ರೀಯರ ಚಿತ್ರಗಳಲ್ಲಿನ ಗ್ಲಾಮರ್‌ ಆ ಚಿತ್ರಗಳು ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಿವೆ. ಕೆಲವು ಪೌರಾಣಿಕ ಪ್ರಸಂಗಗಳ ಸ್ತ್ರೀ ಪಾತ್ರಗಳಿಗೆ ರವಿವರ್ಮ ತೊಡಿಸಿದ ಸೀರೆಗಳ ಅಂಚು, ಸೆರಗು ಮತ್ತು ಮೈ ಬಣ್ಣದ ವರ್ಣ ಸಂಯೋಜನೆ ಮರೆಯಲು ಸಾಧ್ಯವೇ ಇಲ್ಲ. ಸುಣ್ಣದ ಕಲ್ಲಿನಲ್ಲಿ ಅಚ್ಚುಹಾಕಿ ಅವುಗಳಿಗೆ ನೈಸರ್ಗಿಕ ಬಣ್ಣಗಳಿಂದ ಜೀವ ತುಂಬುತ್ತಿದ್ದರು ರವಿವರ್ಮ. ಅವರ ಕಲಾಕೃತಿಗಳ ಮರುಮುದ್ರಿತ ಪ್ರತಿಗಳಲ್ಲೂ ಅದೇ ತೇಜಸ್ಸು ಕಾಣುವುದು ಅದೇ ಕಾರಣಕ್ಕೆ.

ರವಿವರ್ಮ ಅವರ ಆಯ್ದ ಕಲಾಕೃತಿಗಳನ್ನು ಗಾಂಧಿ ಮೆಚ್ಚಿದ ಖಾದಿ ಮತ್ತು ಜಾಮ್ದಾನಿ ಎಂಬ ಸಾಂಪ್ರದಾಯಿಕ ನೇಯ್ಗೆಯಲ್ಲಿ ಪಡಿಯಚ್ಚು ಮೂಡಿಸಿ ಸೀರೆಗಳಾಗಿಸುವ ಅಪರೂಪದ ಕೆಲಸವೊಂದು ಸದ್ದಿಲ್ಲದೆ ಆರಂಭವಾಗಿದೆ. ರಾಜಾ ರವಿವರ್ಮ ಹೆರಿಟೇಜ್‌ ಫೌಂಡೇಶನ್‌ ಮತ್ತು ಅಭಿರಾಜ್‌ ಫೌಂಡೇಶನ್‌ನ ಕಲ್ಪನೆಯ ಈ ಪ್ರಾಜೆಕ್ಟ್‌ಗೆ ‘ಖಾದಿ–ಎ– ಕ್ಯಾನ್ವಾಸ್‌’ ಎಂದು ಹೆಸರಿಡಲಾಗಿದೆ.ಗಾಂಧಿ ಜಯಂತಿಯ ದಿನ ಈ ಕಾರ್ಯಕ್ಕೆ ಮುನ್ನುಡಿ ಹಾಡಿದೆ. ರಾಜಾ ರವಿವರ್ಮ ಅವರ ಆಯ್ದ 30 ಕಲಾಕೃತಿಗಳು ಈ ಯೋಜನೆಯಡಿ ಸೀರೆಯಲ್ಲಿ ಪಡಿಮೂಡಲಿವೆ. ಈಗಾಗಲೇ ಮೂರು ಸೀರೆಗಳು ಸಿದ್ಧವಾಗಿವೆ.

ಲ್ಯಾವೆಲೆ ರಸ್ತೆಯ ಗ್ಯಾಲರಿ ಜಿಯಲ್ಲಿ ಮಂಗಳವಾರ ನಡೆದ ಈ ಸೀರೆಗಳ ಪ್ರದರ್ಶನವು ‘ಖಾದಿ– ಎ ಕ್ಯಾನ್ವಾಸ್‌’ನ ತಯಾರಿ ಬಗ್ಗೆ ಗೌರಂಗ್‌ ಮಾತು, ರವಿವರ್ಮ ಅವರ ವಂಶಸ್ಥ ಜಯ್‌ ವರ್ಮ ಭಾಷಣಕ್ಕೂ ವೇದಿಕೆಯಾಯಿತು. ಇದೇ ವೇಳೆ ಗೌರಂಗ್‌ ಷಾ ‘ಮೆಟ್ರೊ’ ಜೊತೆ ಅನುಭವ ಹಂಚಿಕೊಂಡರು.

‘ನನ್ನ ಸಾಮರ್ಥ್ಯಕ್ಕೇ ಸವಾಲು’: 2000ನೇ ಇಸವಿಯಿಂದ ನಾನು ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ಸಕ್ರಿಯನಾಗಿದ್ದೇನೆ. ನನ್ನ ವಿನ್ಯಾಸಗಳಿಗೆ ಇದುವರೆಗೂ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಸಂದಿವೆ. ಗೌರಂಗ್‌ ಷಾ ಅಂದರೆ ಸಾಂಪ್ರದಾಯಿಕ ಶೈಲಿಯಜಾಮ್ದಾನಿ ನೇಯ್ಗೆ ಮತ್ತು ಖಾದಿ ಸೀರೆ ವಿನ್ಯಾಸ ಎಂದು ವಸ್ತ್ರ ವಿನ್ಯಾಸ ಕ್ಷೇತ್ರ ಗುರುತಿಸುತ್ತದೆ. ಆದರೆ ರವಿವರ್ಮ ಕಲಾಕೃತಿಗಳನ್ನು ಜಾಮ್ದಾನಿ ಮತ್ತು ಖಾದಿಯ ಕಾಂಬಿನೇಷನ್‌ನಲ್ಲಿ ಮೂಡಿಸುವ ಈ ಯೋಜನೆ ಮಾತ್ರ ನನ್ನ ಸಾಮರ್ಥ್ಯಕ್ಕೇ ಸವಾಲು ಹಾಕಿದೆ.

150 ಮಂದಿಯ ಸಾಂಪ್ರದಾಯಿಕ ತಂಡದೊಂದಿಗೆ...: ದೇಶದ ವಿವಿಧ ಭಾಗಗಳಒಟ್ಟು 150 ಮಂದಿಯ ತಂಡ ಈ ಸೀರೆಗಳ ತಯಾರಿಗೆ ಶ್ರಮಿಸಲಿದೆ. ಇವರೆಲ್ಲರೂ ಸಾಂಪ್ರದಾಯಿಕ ನೇಯ್ಗೆ, ಕೈಮಗ್ಗ, ಬಣ್ಣ ಹಾಕುವುದರಲ್ಲಿ ನುರಿತರಾದವರು. ಈಗಾಗಲೇ ನೂಲು ಸಿದ್ಧವಾಗಿದೆ. ರವಿವರ್ಮ ಅವರ ಕಲಾಕೃತಿಗಳಲ್ಲಿ ಆಯ್ದ ತೈಲವರ್ಣಗಳನ್ನಷ್ಟೇ ಬಳಸಲಾಗಿದೆ. ಹಾಗಾಗಿ ನಮಗೂ ಅಷ್ಟೇ ಅವಕಾಶವಿರುವುದು. ಬಹಳ ಪ್ರಮುಖವಾದ ಅಂಶವೆಂದರೆ, ಕೇವಲ ನೈಸರ್ಗಿಕ ಬಣ್ಣಗಳನ್ನು ನಾವು ಬಳಸಬೇಕಿದೆ. ಶುದ್ಧ ಜರಿ ಮತ್ತು ನಿಗದಿತ ಬಣ್ಣಗಳ ನೂಲುಗಳನ್ನಷ್ಟೇಜಾಮ್ದಾನಿ ನೇಯ್ಗೆಗೆ ಬಳಸಬೇಕಿದೆ.

ನೈಸರ್ಗಿಕ ಬಣ್ಣಗಳಿಗೆ ಆಯಸ್ಸು ಕಮ್ಮಿ: ಈಗಾಗಲೇ ಮೂರು ಸೀರೆಗಳನ್ನು ಸಿದ್ಧಪಡಿಸಿದ್ದೇವೆ. ಕಾಸಿನ ಮಾಲೆ, ಜುಮುಕಿ ಧರಿಸಿದ, ಮುಡಿಗೆ ಹೂವು ಮುಡಿದಿರುವ ತಾರಾ ಎಂಬ ದಕ್ಷಿಣ ಭಾರತದ ಹೆಣ್ಣುಮಗಳ ತೈಲವರ್ಣ ಚಿತ್ರ, ರವಿವರ್ಮ ಅವರ ಮೆಚ್ಚಿನ ರಾಮಾಯಣದ ಪಾತ್ರ ಸೀತೆ ಅಶೋಕವನದಲ್ಲಿ ಕುಳಿತಿರುವ ಚಿತ್ರ ಹಾಗೂ ದಮಯಂತಿಯ ಚಿತ್ರವನ್ನು ಒಳಗೊಂಡಿವೆ.

ನೈಸರ್ಗಿಕ ಬಣ್ಣಗಳ ತಯಾರಿ ಮತ್ತು ಬಳಕೆ ಅತ್ಯಂತ ಕಠಿಣ ಸವಾಲಿನ ಪ್ರಕ್ರಿಯೆ. ನುರಿತ ಕೈಗಳಿಂದ ಮಾತ್ರ ನಿರೀಕ್ಷಿತ ಫಲಿತಾಂಶ ನಿರೀಕ್ಷಿಸಬಹುದು. ಈ ಬಣ್ಣಗಳು ಬಹಳ ಬೇಗನೆ ಕೆಡುತ್ತವೆ. ನಾನು ಈಗಾಗಲೇ ಸಿದ್ಧಪಡಿಸಿಟ್ಟುಕೊಂಡಿರುವ ನೈಸರ್ಗಿಕ ಬಣ್ಣಗಳು ಈಗಾಗಲೇ ಮಂಕಾಗತೊಡಗಿವೆ. ಜಾಮ್ದಾನಿ ನೇಯ್ಗೆ ತುಂಬಾ ಸಂಕೀರ್ಣವಾದುದು. ಬೆರಳುಗಳನ್ನು ಜೋಡಿಸಿ ಇಂಟರ್‌ಲಾಕ್‌ ಮಾಡ್ತೀವಲ್ಲ ಅದೇ ರೀತಿ ಒಂದೊಂದು ನೇಯ್ಗೆಯೂ ಬರಬೇಕು. ಕೈಯಿಂದಲೇ ಮಾಡುವ ಈ ನೇಯ್ಗೆಯಲ್ಲಿ ಒಂದೊಂದು ವಿನ್ಯಾಸಕ್ಕೂ ವಾರಗಟ್ಟಲೆ ತೆಗೆದುಕೊಳ್ಳುವುದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT