ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ | ಒಂದು ಸೂರು: ಸಾಂಸ್ಕೃತಿಕ ಹಬ್ಬ ನೂರು

ಗ.ನಾ.ಭಟ್ಟ
Published 27 ಮಾರ್ಚ್ 2024, 12:44 IST
Last Updated 27 ಮಾರ್ಚ್ 2024, 12:44 IST
ಅಕ್ಷರ ಗಾತ್ರ

1960-70ರ ಮಧ್ಯೆ ಕರ್ನಾಟಕ ಅಂತರರಾಜ್ಯ ಸಾಂಸ್ಕೃತಿಕ ವಿನಿಮಯ ತಂಡ ಜಮ್ಮು, ಕಾಶ್ಮೀರ, ಅಸ್ಸಾಂ, ಮಣಿಪುರ, ಕೇರಳ, ತಮಿಳುನಾಡು ಮುಂತಾದೆಡೆ ಕಂಸಾಳೆ, ಕರಡಿಮಜಲು, ಕರಗ, ಭೂತಕೋಲ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯಕ್ಷಗಾನ ಮುಂತಾದ ವಿವಿಧ ಕಲಾಪ್ರಕಾರಗಳನ್ನು ಪ್ರದರ್ಶಿಸಲು ತೆರಳಿತ್ತು. ಆ ತಂಡದಲ್ಲಿ ಯಕ್ಷಗಾನ ಕಲಾವಿದರಾಗಿ ಹೆಚ್. ಶ್ರೀಧರ ಹಂದೆ ಮತ್ತು ಕೆರೆಮನೆ ಶಂಭು ಹೆಗಡೆ ಇದ್ದರು. ಕುರುಕ್ಷೇತ್ರದಲ್ಲಿ ಅಲ್ಲಿಯ ಜನ ‘ಕರ್ಣಾರ್ಜುನ’ ಪ್ರಸಂಗವನ್ನು ಪ್ರದರ್ಶಿಸಬೇಕೆಂದು ಕೇಳಿಕೊಂಡರು. ಪಾತ್ರ ಹಂಚುವಾಗ ಹಂದೆಯವರು ಶಂಭು ಹೆಗಡೆಯವರಿಗೆ ಕೃಷ್ಣನ ಪಾತ್ರವನ್ನು ಹಂಚಿದರು. ಆದರೆ ಶಂಭು ಹೆಗಡೆಯವರು ಆ ಪಾತ್ರವನ್ನು ಮಾಡಲು ಒಪ್ಪದೆ ತನಗೆ ವೃಷಸೇನನ್ನು ಕೊಡಿ ಎಂದು ಕೇಳಿಕೊಂಡರು. ಹಂದೆಯವರು ಅದಕ್ಕೆ ಕಾರಣವನ್ನು ಕೇಳಿದಾಗ ಶಂಭು ಹೆಗಡೆಯವರು- ‘ನೀವೆಲ್ಲ ಕುಂದಾಪುರ ಕಡೆಯ ಯಕ್ಷಗಾನ ಶೈಲಿಯ ಸಂಪ್ರದಾಯ ಪ್ರೇಮಿಗಳು. ನೆರಿಯುಡುಗೆಯ ಕೃಷ್ಣನ ವೇಷವನ್ನು ನಾನು ಖಂಡಿತ ಮಾಡಲಾರೆ. ನಮ್ಮ ಕಸೆ ಹಾಕಿದ ಕೃಷ್ಣನನ್ನು ನೀವು ಸಹಿಸುವವರಲ್ಲ. ವೃಥಾ ಗೊಂದಲವೇಕೆ? ನಮ್ಮ ನಮ್ಮ ಸಂಪ್ರದಾಯವನ್ನು ನಾವು ಉಳಿಸಿಕೊಳ್ಳೋಣ ವೃಷಸೇನನ ಪಾತ್ರವೆ ನನಗಿರಲಿ‘ ಎಂದು ಕೇಳಿಕೊಂಡರಂತೆ. ಆಗ ಶಂಭು ಹೆಗಡೆಯವರಿಗೆ ಹೆಚ್ಚೂ-ಕಡಿಮೆ 25 ವರ್ಷ. ಅಂತಹ ಚಿಕ್ಕ ವಯಸ್ಸಿನಲ್ಲೇ ಅವರಿಗೆ ಯಕ್ಷಗಾನದ ಪ್ರಾದೇಶೀಕ ಸ್ವಂತಿಕೆ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಒಂದು ಬದ್ಧತೆ, ಸೈದ್ಧಾಂತಿಕ ನಿಲುವು, ಮೌಲ್ಯಾನುಸಂಧಾನ ಮೊದಲಾದವು ಮೈಗೂಡಿಕೊಂಡಿದ್ದವು. ಇಂತಹ ಬದ್ಧತೆ- ಸಿದ್ಧಾಂತಗಳನ್ನು ತಮ್ಮ ಕೊನೆಯುಸಿರುವವರೆಗೂ ಪಾಲಿಸಿಕೊಂಡು ಬಂದ ಕೆರೆಮನೆ ಶಂಭು ಹೆಗಡೆಯವರು ನಮ್ಮನ್ನಗಲಿ 15 ವರ್ಷಗಳು ಕಳೆದಿವೆ.

ಪರಂಪರೆ-ಸಂಪ್ರದಾಯದ ಅಡಿಯಲ್ಲಿ ಯಕ್ಷಗಾನಕ್ಕೆ ಒಂದು ವಿನೂತನತೆಯನ್ನೂ, ಹೊಸ ಸ್ಪರ್ಶವನ್ನೂ, ಸೃಜನಶೀಲತೆಯನ್ನೂ, ಒಟ್ಟಂದದ ಸ್ವರೂಪವನ್ನೂ, ಕಲೆಗೂ-ಕಲಾವಿದನಿಗೂ ಒಂದು ತಾರಾಮೌಲ್ಯವನ್ನೂ, ಪ್ರದರ್ಶನಗಳಿಗೆ ಒಂದು ಔಚಿತ್ಯವನ್ನೂ, ಕ್ರಾಂತಿಕಾರಕ ಹೆಜ್ಜೆಯನ್ನೂ, ಔಚಿತ್ಯಪೂರ್ಣ ಬದಲಾವಣೆಯನ್ನೂ ತಂದುಕೊಟ್ಟ ಕೀರ್ತಿ ನಿಸಂಶಯವಾಗಿಯೂ ಕೆರೆಮನೆ ಶಂಭು ಹೆಗಡೆಯವರಿಗೆ ಸಲ್ಲಬೇಕು. ಸ್ವತಃ ಪ್ರಥಮ ದರ್ಜೆಯ ಕಲಾವಿದರೂ ಆಗಿ, ರಂಗಚಿಂತಕರೂ, ಪ್ರಖರ ವಿಮರ್ಶಕರೂ, ಅತ್ಯುತ್ತಮ ವಾಗ್ಮಿಗಳೂ, ವೈಚಾರಿಕ, ಮನಮೋಹಕ ಭಾಷಣಕಾರರೂ, ಸಂಘಟಕರೂ, ಮೇಳದ ಸಂಚಾಲಕರೂ ಆಗಿ ಅವರು ಮಾಡಿದ ಯಕ್ಷ ಕೈಂಕರ್ಯ ಅನನ್ಯವಾದುದು. ಇಂತಹ ಮೇರು ನಟ, ಚಿಂತಕ ಕೆರೆಮನೆ ಶಂಭು ಹೆಗಡೆಯವರು ಯಕ್ಷಗಾನಕ್ಕೊಂದು ಶಾಶ್ವತ ರಂಗಮಂದಿರವಾಗಬೇಕೆಂದೂ ತನ್ಮೂಲಕ ಯಕ್ಷಗಾನದ ಗೋಷ್ಠೀ, ಪ್ರಾತ್ಯಕ್ಷಿಕೆ, ಯಕ್ಷಗಾನ ಶಾಲೆ, ಯಕ್ಷಗಾನ ಪ್ರದರ್ಶನ ಮುಂತಾದ ವಿವಿಧ ರಂಗಚಟುವಟಿಕೆಗಳು ಸಂಪನ್ನಗೊಳ್ಳಬೇಕೆಂದೂ ಕನಸು ಕಂಡಿದ್ದರು. ಅದರ ಫಲವಾಗಿಯೇ 1986ರಲ್ಲಿ, ಕೆರೆಮನೆಗೆ ಅತಿ ಸಮೀಪದಲ್ಲಿಯೇ ಇರುವ ಗುಣವಂತೆಯಲ್ಲಿ ಎರಡೂವರೆ ಎಕರೆ ನಿವೇಶನವನ್ನು ಖರೀದಿಸಿ ಅದಕ್ಕೆ ‘ಯಕ್ಷಾಂಗಣ’ವೆಂದು ಹೆಸರಿಟ್ಟು ಅದರ ಒಂದು ಭಾಗದಲ್ಲಿ, ತಮ್ಮ ತಂದೆ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಒಂದು ರಂಗಮಂದಿರವನ್ನು ನಿರ್ಮಿಸಿದರು. ಹೀಗೆ ಅವರ ಕನಸು ಕೈಗೂಡುತ್ತಿರುವಾಗಲೇ 2009, ಫೆಬ್ರವರಿ 2ರಂದು ವಿಧಿವಶರಾದರು.

ಯಕ್ಷಗಾನ ನಾಟ್ಸ ಸಿರಿ ಕಲಾ ತಂಡದಿಂದ ಪ್ರದರ್ಶನ
ಯಕ್ಷಗಾನ ನಾಟ್ಸ ಸಿರಿ ಕಲಾ ತಂಡದಿಂದ ಪ್ರದರ್ಶನ

ಆದರೆ ಮುಂದೇನು ಎಂಬ ನಿರಾಶೆಗೆ, ಹತಾಶೆಗೆ ಅವಕಾಶವಿರಲಿಲ್ಲ. ಅವರ ಉತ್ತರಾಧಿಕಾರಿಯಾಗಿ, ಅವರ ಕನಸನ್ನು ನನಸುಗೊಳಿಸುವ, ಅವರಷ್ಟೇ ಕ್ರಿಯಾಶೀಲರೂ, ಅದಮ್ಯ ಉತ್ಸಾಹಿಯೂ, ಕಲಾವಿದನೂ, ಅವರಷ್ಟೇ ತೀಕ್ಷ್ಣ ಚಿಂತಕರೂ, ವಿಮರ್ಶಕರೂ ಆಗಿರುವ ಅವರ ಏಕೈಕ ಪುತ್ರ ಕೆರೆಮನೆ ಶಿವಾನಂದ ಹೆಗಡೆಯವರು ಅದರ ಕರ್ಣಧಾರಾತ್ವವನ್ನು ವಹಿಸಿಕೊಂಡರು. ಬಿ.ಎ.ಪದವಿಧರರಾದ ಶಿವಾನಂದ ಹೆಗಡೆಯವರು ತಂದೆಯಂತೆಯೇ ಕೋರಿಯೋಗ್ರಫಿಯನ್ನು ಅಧ್ಯಯನ ಮಾಡಿದವರು. ಜೊತೆಗೆ ಕಥಕ್, ಮಣಿಪುರಿ ಯುದ್ಧ ನೃತ್ಯ, ಸರೈಕಲಾ ಛಾವೂ, ಜನಪದ ನೃತ್ಯ ಮುಂತಾದುವನ್ನೂ ಅಷ್ಟೇ ಶ್ರದ್ಧೆಯಿಂದ ಅಭ್ಯಸಿಸಿದವರು. ಅವರ ಯಕ್ಷನೃತ್ಯಗಳಲ್ಲಿ ಸಂದರ್ಭೋಚಿತವಾಗಿ ಅವೆಲ್ಲವುಗಳ ಛಾಯೆಯನ್ನೂ ಕಾಣಬಹುದು. ಇಡಗುಂಜಿ ಮೇಳವನ್ನು ದೇಶ-ವಿದೇಶಗಳಿಗೆ ಕರೆದೊಯ್ದು ಅಲ್ಲೆಲ್ಲಾ ಇಡಗುಂಜಿ ಮೇಳದ ಹೆಗ್ಗಳಿಕೆಯನ್ನು ಪ್ರತಿಷ್ಠಾಪಿಸಿದ ಕೀರ್ತಿ ಅವರದು. ಪ್ರಕೃತ ಇಡಗುಂಜಿ ಮೇಳದ ನಿರ್ದೇಶಕರಾಗಿ, ಸೂತ್ರಧಾರರಾಗಿ ಅವರು ಕೈಗೊಂಡಿರುವ ಕೆಲಸ-ಕಾರ್ಯಗಳು ಸಂಸ್ತುತ್ಯವಾಗಿವೆ.

ಯಕ್ಷಗಾನದ ಪರಂಪರಾಗತ ವಿಶಿಷ್ಟ ಶೈಲಿ ಮತ್ತು ಅದರ ಸೌಂದರ್ಯದ ಸಂರಕ್ಷಕರೂ, ಪ್ರಖರ ಚಿಂತಕರೂ, ವಿಮರ್ಶಕರೂ ಆದ ಹೆಗಡೆಯವರು ತಮ್ಮ ಯಕ್ಷಾಂಗಣದಲ್ಲಿ ಮತ್ತು ಇತರ ಅನೇಕ ಊರು, ನಗರಗಳಲ್ಲಿ ಯಕ್ಷಗಾನ ಕಮ್ಮಟ, ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಲೇ ಜೊತೆ ಜೊತೆಗೆ ಬಯಲಾಟ ಪ್ರದರ್ಶನಗಳನ್ನು ನೀಡುತ್ತಲೇ ಕಳೆದ ಹದಿನಾಲ್ಕು ವರ್ಷಗಳಿಂದ ತಂದೆ ಕೆರೆಮನೆ ಶಂಭು ಹೆಗಡೆಯವರ ಹೆಸರಲ್ಲಿ “ರಾಷ್ಟ್ರೀಯ ನಾಟ್ಯೋತ್ಸವ”ವನ್ನು ಆಯೋಜಿಸುತ್ತಾ ಬಂದಿದ್ದಾರೆ. ನಾಟ್ಯಶಾಸ್ತ್ರದ ಪರಿಭಾಷೆಯಲ್ಲಿ “ಕಥಾನಾಯಕ ಮೊದಲಾದವರ ಅವಸ್ಥೆಗಳನ್ನು ಅಭಿನಯ ರೂಪದಲ್ಲಿ ಅನುಕರಣ ಮಾಡುವುದೇ ‘ನಾಟ್ಯ’ವೆನಿಸಿಕೊಳ್ಳುತ್ತದೆ. (ಅವಸ್ಥಾನುಕೃತಿರ್ನಾಟ್ಯಂ). ಆದರೆ ಇಂದಿನ ದಿನಗಳಲ್ಲಿ ನಾವು ‘ನಾಟ್ಯ’ ಎಂಬ ಶಬ್ದವನ್ನು ಸಾಮಾನ್ಯವಾಗಿ ಇಂಗ್ಲಿಷಿನ dance ಎಂಬ ಅರ್ಥದಲ್ಲಿ ಬಳಸುತ್ತೇವೆ. ಒಂದು ಗೀತವನ್ನೋ ಪದ್ಯವನ್ನೋ ಒಬ್ಬರು ಹಿನ್ನೆಲೆಯಲ್ಲಿ ಹಾಡುತ್ತಿರುವಾಗ ಅದರ ಒಂದೊಂದು ಪದದ ಅರ್ಥವನ್ನೂ ನಟ ಅಥವಾ ನಟಿ ಅಭಿನಯಿಸಿ ತೋರಿಸುತ್ತಾ ನರ್ತನ ಮಾಡುವುದಕ್ಕೆ ‘ನಾಟ್ಯ’ ಎಂಬ ಹೆಸರು ಬಂದಿದೆ. ಆ ಅರ್ಥದಲ್ಲೇ ಕೆರೆಮನೆ ಶಿವಾನಂದ ಹೆಗಡೆಯವರೂ ನಾಟ್ಯೋತ್ಸವವನ್ನು ಮಾಡುತ್ತಿದ್ದಾರೆ. ಈ ನಾಟ್ಯೋತ್ಸವದ ವಿಶೇಷವೆಂದರೆ- ಒಂದೇ ಸೂರಿನಡಿಯಲ್ಲಿ ಕಥಕ್, ಭರತನಾಟ್ಯ, ಕೇರಳನಟನಂ, ಕಂಸಾಳೆ, ಗೊಂಬೆಯಾಟ, ನಾಟಕ, ಸಂಗೀತ, ಮೋಹಿನೀ ಆಟ್ಟಂ, ಕೂಚುಪುಡಿ, ಭಾಂಗ್ರಾ, ಓಡಿಸ್ಸಿ -ಹೀಗೆ ಹಲವಾರು ನಾಟ್ಯಪ್ರಕಾರ ಮತ್ತು ಇತರ ಕಲಾಪ್ರಕಾರಗಳನ್ನು ನೋಡುವ ಅವಕಾಶ ಲಭ್ಯವಾಗಿದೆ. “ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ವಿಶೇಷತೆಯೇ ಇದು. ಶಂಭು ಹೆಗಡೆ ನಿಧನಗೊಂಡ ಮರು ವರ್ಷದಿಂದ ಅಂದರೆ 2010ರಿಂದ ಆರಂಭಗೊಂಡ ಈ ಉತ್ಸವ ಶಂಭು ಹೆಗಡೆಯವರ ನೆನಪಿನಲ್ಲಿ ವರ್ಷಕ್ಕೊಂದಾವರ್ತಿ ಸಂಪನ್ನಗೊಳ್ಳುತ್ತದೆ.

ಬಿಸು ಕಂಸಾಳೆ
ಬಿಸು ಕಂಸಾಳೆ


ಈ ಸಲದ ರಾಷ್ಟ್ರೀಯ ನಾಟ್ಯೋತ್ಸವ ಕಳೆದ ಮಾರ್ಚ್‌ 16 ರಿಂದ 20ರ ವರೆಗೆ ಒಟ್ಟು ಐದು ದಿನ ನಡೆಯಿತು. ಈ ನಾಟ್ಯೋತ್ಸವದ ಶಿಸ್ತು, ಒಟ್ಟಂದ, ಅಚ್ಚುಕುಟ್ಟುತನ, ಒಪ್ಪ, ಓರಣ ಇಡೀ ಕರ್ನಾಟಕಕ್ಕೇ ಮಾದರಿಯಾದುದು, ಅತ್ಯುತ್ಕೃಷ್ಟವಾದುದು, ಮೇಲ್ದರ್ಜೆಯದು ಎನ್ನಲು ಯಾವ ಅಡ್ಡಿಯೂ ಇಲ್ಲ. ಹಾಗೇನಾದರೂ ಕಂಡು ಬಂದರೆ ಆತ ಕಣ್ಣಿದ್ದೂ ಕುರುಡ, ಕಿವಿಯಿದ್ದೂ ಕಿವುಡ ಎನ್ನಬೇಕು. ಅಂತಹ ವ್ಯವಸ್ಥಿತ, ಶಿಸ್ತುಬದ್ಧ ಸಂಯೋಜನೆ ಅದು. ಜತೆಗೆ ಇನ್ನೂ ಒಂದು ಗಮನಾರ್ಹ ಅಂಶವೆಂದರೆ- ಯಕ್ಷಾಂಗಣದ ‘Atmosphere’ ನಿರ್ಮಾಣ. ಕೆರೆಮನೆ ಯಕ್ಷಾಂಗಣಕ್ಕೆ ಸಹಜವಾಗಿಯೇ ಒಂದು ಯಕ್ಷಗಾನ ವಾತಾವರಣವಿದೆ. ಕೆರೆಮನೆ ಮನೆತನಕ್ಕೆ ಅದು ಹುಟ್ಟಿನಿಂದ ಬಂದದ್ದು. ನಾವು ಯಕ್ಷಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ನಮ್ಮ ಎದುರಿಗೆ ವಿರಾಜಿಸುವ ಕೆರೆಮನೆ ಶಂಭು ಹೆಗಡೆಯವರ ಪ್ರತಿಮೆಯೊಂದು ನಮ್ಮನ್ನು ಸ್ವಾಗತಿಸುತ್ತದೆ. ಮುಂದುವರಿಯುತ್ತಿದ್ದಂತೆಯೇ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ, ಅದಕ್ಕೆ ತಾಗಿಕೊಂಡಂತೆ ಪ್ರತ್ಯೇಕವಾಗಿರುವ ವಸತಿಕೊಠಡಿಗಳು, ಸ್ನಾನ- ಶೌಚಗೃಹಗಳು, ಅಡಿಗೆಮನೆ, ಆಟದ ವೇಷಭೂಷಣ ಇಡುವುದಕ್ಕಾಗಿಯೇ ಇದ್ದ ಕೊಠಡಿ. ಕಾರ್ಯಾಲಯ ಮೊದಲಾದವು ನಮ್ಮನ್ನು ಒಂದು ಹೊಸ ಲೋಕಕ್ಕೇ ಒಯ್ಯುತ್ತವೆ. ರಂಗಮಂದಿರದ ಒಳಗೂ ಹೊರಗೂ, ಸುತ್ತಲೂ, ಕಣ್ಣಳತೆಗೆ ನಿಲುಕುವಂತೆ ಎಲ್ಲೆಲ್ಲೂ, ತೆಂಕು-ಬಡಗು ಎಂಬ ಭೇದವಿಲ್ಲದೆ ಹಲವು ತರಹದ, ಹಲವು ವಿನ್ಯಾಸದ ಯಕ್ಷಗಾನ ವೇಷದ ಪುತ್ಥಳಿಗಳು ನಮ್ಮ ಕಣ್ಮನವನ್ನು ಸೆಳೆಯುತ್ತವೆ. ಅದೇ ಯಕ್ಷಾಂಗಣದ ಮತ್ತೊಂದು ಪಾರ್ಶ್ವದಲ್ಲಿ ಚೌಕಿಯನ್ನೊಳಗೊಂಡ ಭವ್ಯವೂ, ವಿಶಾಲವೂ ಆದ ಕೆರೆಮನೆ ಶಂಭು ಹೆಗಡೆ ಬಯಲು ರಂಗಮಂದಿರ ನಮ್ಮನ್ನು ಕೈಬೀಸಿ ಕರೆಯುತ್ತಾ ಕಲಾತಪಸ್ವಿಯೊಬ್ಬನಿಗೆ ಸಂದ ಗೌರವವೆಂದು ತಲೆ ಬಾಗಿ ನಮಿಸುವಂತೆ ಮಾಡುತ್ತದೆ.

‘ಅಟ್ಮಾಸ್ಫಿಯರ್’ ಎಂದರೆ ನಮ್ಮ ದೇಹವನ್ನು ಹತ್ತು ದಿಕ್ಕುಗಳಿಂದಲೂ ಸುತ್ತುಗಟ್ಟಿರುವ ಹವೆ ಅಥವಾ ವಾಯುಮಂಡಲ. ನಮ್ಮ ಮನಸ್ಸಿಗೂ ಇಂತಹ ಸಂದರ್ಭ, ಪರಿಸರವುಂಟಾದರೆ ಅದೂ ಒಂದು ವಾತಾವರಣವೆಂದೇ ಕರೆಯಲ್ಪಡುತ್ತದೆ. ಮಹಾ ಮಹಾ ಕವಿಗಳು, ದೊಡ್ಡ ದೊಡ್ಡ ಕಾದಂಬರಿಕಾರರು, ಸಾಹಿತಿಗಳು ಇಂತಹ ವಾತಾವರಣವನ್ನು ನಿರ್ಮಿಸುತ್ತಾರೆ. ಇದರ ಮೊದಲ ಕೆಲಸವೆಂದರೆ ಭಾವೋದ್ದೀಪನ ಮತ್ತು ರಸೋತ್ಪತ್ತಿ. ಇಂತಹ ಭಾವೋದ್ದೀಪಕವಾದ ವಾತಾವರಣವನ್ನು ಕೆರೆಮನೆ ಶಂಭು ಹೆಗಡೆಯವರ ಆದಿಯಾಗಿ ಕೆರೆಮನೆ ಶಿವಾನಂದ ಹೆಗಡೆಯವರವರೆಗೆ ಅವರ ಕುಟುಂಬ ನಿರ್ಮಿಸಿದೆ.

ಶ್ರೀ ಶಿವರಾಮ ಹೆಗಡೆ ರಂಗಮಂದಿರದ ಮುಖ್ಯ ಬಾಗಿಲಲ್ಲಿ ಸುಮಾರು ಹತ್ತು ಅಡಿ ಅಂತರದಲ್ಲಿ ಗೋಡೆಗೆ ಆನಿಸಿದ ಪೀಠದಲ್ಲಿ ವಿರಾಜಿಸುವ ಇಡಗುಂಜಿ ಶ್ರೀ ಮಹಾಗಣಪತಿಯ ಭಾವಚಿತ್ರಕ್ಕೆ ಮತ್ತು ಯಕ್ಷಗಾನದ ಕಿರೀಟಕ್ಕೆ ಆಯಾ ದಿನದ ಅತಿಥಿಗಳೊಂದಿಗೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭಗೊಳ್ಳುವ ಸಭಾ ಕಾರ್ಯಕ್ರಮ ಪ್ರತಿದಿನವೂ ಹಾಗೆಯೇ ನಡೆಯಿತು. ಕೆರೆಮನೆ ಮೇಳದ ಪ್ರಧಾನ ಭಾಗವತ ಅನಂತ ಹೆಗಡೆ, ದಂತಳಿಗೆ ಮತ್ತು ಅವರ ಸಂಗಡಿಗರು ಅದನ್ನು ನೆರೆವೇರಿಸಿಕೊಟ್ಟರು. ಅಂತೆಯೇ ರಮಗಮಂದಿರದ ಎದುರಿಗೆ ಹೊರ ಆವರಣದಲ್ಲಿ ನಿರ್ಮಿಸಲ್ಪಟ್ಟ ಕೆರೆಮನೆ ಶಂಭು ಹೆಗಡೆಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಅದಕ್ಕೆ ಗೌರವ ಸಲ್ಲಿಸಿ, ಯಕ್ಷಗಾನದ ಹಾಡು, ವಾದ್ಯಗಳೊಂದಿಗೆ ಆಯಾ ದಿನದ ಅತಿಥಿಗಳನ್ನು ಸಭೆಗೆ ಕರೆತರಲಾಯಿತು. ಮೊದಲನೆಯ ದಿನ ಬೆಂಗಳೂರಿನ ಲಿಂಗಯ್ಯ ಮತ್ತು ಅವರ ತಂಡದವರಿಂದ ಕಂಸಾಳೆ ನೃತ್ಯದ ಮೂಲಕ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಸಭೆಯ ವೇದಿಕೆಯಲ್ಲೂ ಆ ತಂಡ ಸುಮಾರು ಹತ್ತು ನಿಮಿಷಗಳ ಕಾಲ ತನ್ನ ಕಂಸಾಳೆ ಕುಣಿತದ ವಿವಿಧ ಮಜಲುಗಳನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿತು.

ಮೋಹಿನಿ ಅಟ್ಟಂ
ಮೋಹಿನಿ ಅಟ್ಟಂ

16-03-2024...

ಅನಂತ ಹೆಗಡೆಯವರ ಗಣಪತಿ ಸ್ತುತಿಯ ಪ್ರಾರ್ಥನೆ, ಅದರೊಟ್ಟಿಗೆ ಚಂಡೆ ಮತ್ತು ಮೃದಂಗದ ನಾದದೊಂದಿಗೆ ಆರಂಭಗೊಂಡ ಅಂದಿನ (16-03-2024) ಸಭೆಯನ್ನೂ, ಪ್ರೇಕ್ಷಕರನ್ನೂ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಿ ನಾರಾಯಣ ಕಾಶಿಯವರು ಸ್ವಾಗತಿಸಿದರು. ನಿರಾಡಂಬರವಾಗಿ, ಅತ್ಯಂತ ಸರಳ ಶೈಲಿಯಲ್ಲಿ ಸುಮಾರು ಆರೇಳು ನಿಮಿಷಗಳಲ್ಲಿ ಸ್ವಾಗತವನ್ನು ಕೋರಿದ ಅವರ ಸ್ವಾಗತ ವಚನ ನಿಜಕ್ಕೂ ಇತರರಿಗೆ ಮಾದರಿಯೇ ಆಗಿತ್ತು. ಸಭೆಯ ಗಣ್ಯರಿಂದ ದೀಪ ಪ್ರಜ್ವಾಲನೆ ಮಾಡುವುದರ ಮೂಲಕ ಅಂದಿನ ಸಭೆ ವಿಧ್ಯುಕ್ತವಾಗಿ ಚಾಲನೆಗೊಂಡಿತು.

ಯಕ್ಷಗಾನ ಚಿಂತಕ, ಅಂಕಣಕಾರ ಮತ್ತು ಅರ್ಥಧಾರಿ ನಾರಾಯಣ ಯಾಜಿಯವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ ಮೇಲ್ಗಡೆ ಕಂಗೊಳಿಸುತ್ತಿರುವ ಕೆರೆಮನೆ ಶಂಭು ಹಗಡೆಯವರ ಕೃಷ್ಣನ ವೇಷದ ಭಾವಚಿತ್ರದ ಕಡೆಗೆ ಗಮನ ಸೆಳೆದರು ಮತ್ತು ಕೆಳಗಡೆ ವೇದಿಕೆಯ ಎಡ ಪಕ್ಕದಲ್ಲಿರುವ ಪಾರಿಜಾತದ ಗಿಡದ ಮೇಲೆ ಅರಳಿ ನಿಂತು, ಸುತ್ತಲೂ ಸುಗಂಧ ಬೀರುತ್ತಿರುವ ಆ ಹೂಗಳ ಪರಿಮಳದ ಆಪ್ಯಾಯಮಾನತೆಯನ್ನು ಆಸ್ವಾದಿಸುತ್ತಾ ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ನಡೆದು ಬಂದ ಹಾದಿಯನ್ನು ಕೆಲವೇ ಮಾತುಗಳಲ್ಲಿ ಕಟ್ಟಿಕೊಟ್ಟರು.

“ಯಕ್ಷಗಾನವೆಂದರೆ ಜಾನಪದವೇ, ಶಾಸ್ತ್ರೀಯವೇ ಅಥವಾ ಪಾರಂಪರಿಕ ಕಲೆಯೇ ಎಂದು ಪ್ರಶ್ನಿಸುತ್ತಾ ಆ ಕುರಿತಾದ ಚಿಂತನೆಯಲ್ಲಿ ಶಂಭು ಹೆಗಡೆಯವರು ಆಗಲೇ ಐವತ್ತು ವರ್ಷಗಳಷ್ಟು ಮುಂದಿದ್ದರು. ಶಂಭು ಹೆಗಡೆಯವರ ಕನಸಾದ ಯಕ್ಷಗಾನ ರಂಗಭೂಮಿಯನ್ನು ಸಾಕರಗೊಳಿಸುವಲ್ಲಿ ಅವರ ಮಗ ಶಿವಾನಂದ ಹೆಗಡೆಯವರ ಪಾತ್ರ ಬಹಳ ದೊಡ್ಡದಿದೆ. ಶಂಭು ಹೆಗಡೆಯವರ ಆಶಯವನ್ನು ಅವರು ನೆರವೇರಿಸುತ್ತಿದ್ದಾರೆ. ಕಳೆದ 14 ವರ್ಷಗಳಿಂದ ಅವರು ಈ ರಂಗಮಂದಿರದಲ್ಲಿ ಬೇರೆ ಬೇರೆ ನಾಟ್ಯಪ್ರಕಾರಗಳನ್ನು ಪ್ರದರ್ಶಿಸಿಸುತ್ತಾ, ಚಿಂತನ-ಮಂಥನಗಳಿಗೆ ವಿಪುಲಾವಕಾಶವನ್ನು ಕಲ್ಪಿಸುತ್ತಿದ್ದಾರೆ. ಶಂಭು ಹೆಗಡೆಯರ ನೃತ್ಯಾಭಿನಯಗಳಲ್ಲಿ ಇದ್ದ ನಾಟ್ಯರ್ಮಿಯನ್ನು ವಿಮರ್ಶಕ ವಲಯ ಗುರುತಿಸಲೇ ಇಲ್ಲ”ಎಂದು ವಿಷಾದ ವ್ಯಕ್ತಪಡಿಸಿದರು. ಶಂಭು ಹೆಗಡೆ ಒಂದು ಹೊಸ ಪ್ರೇಕ್ಷಕ ವಲಯವನ್ನು ಸೃಷ್ಟಿಸಿದರು; ಹಳೆಯದರೊಟ್ಟಿಗೆ ಹೊಸ ಪರಂಪರೆಯನ್ನು ಸೃಷ್ಟಿಸಿದ ಹೆಗ್ಗಳಿಕೆ ಅವರದು. ಅವರು ಕರುಣ ರಸಕ್ಕೆ ಕಥಕ್ಕಳಿಯ ಚಿಂತನಾಧಾರೆಯನ್ನು ಒದಗಿಸುತ್ತಿದ್ದರು ಎಂದು ಶಂಭು ಹೆಗಡೆಯವರ ಯಕ್ಷಗಾನ ಬದುಕಿನ ವಿವಿಧ ಮಗ್ಗುಲುಗಳನ್ನು ಕೆಲವೇ ಮಾತುಗಳಲ್ಲಿ ತಿಳಿಸಿಕೊಟ್ಟಿದ್ದು ಗಮನಾರ್ಹವಾಗಿತ್ತು.

ಅಂದು 2022ರ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಖ್ಯಾತ ಹಿರಿಯ ಸಾಹಿತಿ, ಚಿಂತಕ, ಪ್ರವಚನಕಾರ, ಶತಾವಧಾನಿ ಆರ್. ಗಣೇಶರ ಕುರಿತು ಅಭಿನಂದನ ಭಾಷಣ ಮಾಡಿದ ಕಲಾಚಿಂತಕ, ಅರ್ಥಧಾರಿ, ದಿವಾಕರ ಹೆಗಡೆ ಕೆರೆಹೊಂಡ ಅವರು ತಮ್ಮ ಅಭಿನಂದನ ಭಾಷಣಕ್ಕೆ ಒಂದು ಹೊಸತನದ ಸ್ಪರ್ಶವನ್ನೇ ನೀಡಿದರು.

“ಅಯೋಧ್ಯೆಯನ್ನಾಗಲೀ, ಹಸ್ತಿನಾವತಿಯನ್ನಾಗಲೀ ನೋಡದೇ ಇದ್ದರೂ ಯಕ್ಷಗಾನ ಕಲಾವಿದರು ಆ ನಗರಗಳನ್ನು ಸುಂದರವಾಗಿ ಚಿತ್ರಿಸಬಲ್ಲರು; ಅಲ್ಲಿಯ ಪಾತ್ರಗಳನ್ನು ಮನೋಜ್ಞವಾಗಿ ಕಡೆಯಬಲ್ಲರು. ಅದಕ್ಕೆಲ್ಲ ಕಾರಣ-ಯಕ್ಷಗಾನ” ಎಂದು ಹೇಳುತ್ತಾ ಯಕ್ಷಗಾನದ ಹಿರಿಮೆಯನ್ನು ಕೊಂಡಾಡಿದರು. ಮಂದುವರಿದು ಅವರು ಮೈಸೂರು ದಸರಾವನ್ನು ಮೈಸೂರು ಅರಸರು ಆರಂಭಿಸಿದರು. ಹಾಗೆಯೇ ಶಂಭು ಹೆಗಡೆಯವರ ಹೆಸರಲ್ಲಿ ರಾಷ್ಟ್ರೀಯ ನಾಟ್ಯೋತ್ಸವವನ್ನು ಆರಂಭಿಸಿದವರು ಕೆರೆಮನೆ ಶಿವಾನಂದ ಹೆಗಡೆಯವರು. ‘ಕೆರೆಮನೆ’ ಅಂದರೆ ಸಾಂಸ್ಕೃತಿಕ ಕ್ಷೇತ್ರಕ್ಕೆ ನೂತನ ಆಯಾಮ ಕೊಟ್ಟ ಒಂದು ಪ್ರಸಿದ್ಧ ಮನೆತನ. ಶಿವರಾಮ ಹೆಗಡೆಯವರು ಯಕ್ಷಗಾನಕ್ಕೆ ಒಂದು ರುಚಿ ಕೊಟ್ಟರೆ ಅವರ ಹಿರಿಯ ಮಗ ಶಂಭು ಹೆಗಡೆಯವರು ಅದಕ್ಕೆ ಒಂದು ವಿಸ್ತಾರವನ್ನೂ, ತಾತ್ವಿಕ ನೆಲೆಯನ್ನೂ, ಆಂತರಿಕ ಮೌಲ್ಯವನ್ನೂ ಕೊಟ್ಟು ಅದರ ಕೀರ್ತಿಯನ್ನು ಗಗನದೆತ್ತರಕ್ಕೆ ಹಬ್ಬಿಸಿ ಜಯದ ಪತಾಕೆಯನ್ನು ಹಾರಿಸಿದರು. ಶಂಭು ಹೆಗಡೆ ಒಂದು ಬದ್ಧತೆಗೊಳಪಟ್ಟ ಕಲಾವಿದರೂ, ಚಿಂತಕರೂ ಆಗಿದ್ದರು. ಕ್ಷೇತ್ರ ಮಹಾತ್ಮೆಯಂತಹ ಪ್ರಸಂಗಗಳನ್ನು ಆಯಾ ಕ್ಷೇತ್ರದಲ್ಲಿ ಕ್ವಚಿತ್ತಾಗಿ ಆಡುತ್ತಿದ್ದರೇ ಹೊರತು ಅದನ್ನು ಸಾರ್ವತ್ರಿಕಗೊಳಿಸಲಿಲ್ಲ. ಪೌರಾಣಿಕ ಪ್ರಸಂಗಗಳನ್ನೇ ಆಡುತ್ತಾ ಇತರರಿಗೆ ಆದರ್ಶಪ್ರಾಯರಾದರು.

ಹೀಗೆ ಸ್ವಲ್ಪ ಹೊತ್ತು ಕೆರೆಮನೆ ಮೇಳದ ಹಿರಿಮೆ, ಗರಿಮೆಯನ್ನೂ, ಅದರ ಬದ್ಧತೆಯನ್ನೂ, ಅದರ ಸಂಚಾಲಕ ಕೆರೆಮನೆ ಶಂಭು ಹೆಗಡೆಯವರ ಚಿಂತನಲೋಕ ಮತ್ತು ಅವರ ಮಗ ಶಿವಾನಂದ ಹೆಗಡೆಯವರು ಆರಂಭಿಸಿದ ನಾಟೋತ್ಸವದ ಕುರಿತು ಮಾತನಾಡಿದ ಅವರು ಆರ್. ಗಣೇಶರ ಬಗ್ಗೆ- ಅವರು ಎಂಜಿನಿಯರ್ ಪದವಿ ಮಾಡಿದ್ದರೂ ಅವರ ಆಸಕ್ತಿ ಸಂಸ್ಕೃತಿ ಚಿಂತನೆ, ಬರಹ, ಉಪನ್ಯಾಸ ಮುಂತಾದವುಗಳಾಗಿವೆ. ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ, ಐದು ಶತಾವಧಾನ ಮಾಡಿ ಆಸಕ್ತರಿಗೆ ಪ್ರೇರಕರಾಗಿದ್ದಾರೆ. ಅವರ ಕುರಿತು ‘ವ್ಯಕ್ತಿವಿಭೂತಿ’ ಎಂಬ ಕೃತಿ ಬಂದಿದೆ.

ಶತಾಧಾನಿ ಒಬ್ಬ ವಿದ್ವಲ್ಲೋಕದ ಡಾ. ಎಸ್.ಆರ್.ರಾಮಸ್ವಾಮಿ ಹೇಳಿದಂತೆ ಅವರೊಬ್ಬ ‘ಪುರುಷ ಸರಸ್ವತಿ.’ ಅಪಾರ ವಿದ್ವತ್ತಿದ್ದರೂ ಅವರೊಬ್ಬ ಸರಳ ಜೀವಿಯೆಂದು ಬಣ್ಣಿಸುತ್ತಾ ಶಿವರಾಮ ಹೆಗಡೆಯವರ ಪ್ರಸಿದ್ಧ ಪಾತ್ರಗಳಾದ ಕೌರವ ಮತ್ತು ಕೀಚಕನ ಪಾತ್ರಗಳ ಕುರಿತು ಒಂದೆರಡು ಮಾತುಗಳನ್ನಾಡಿದರು. ಬೆರಗು ಹುಟ್ಟಿಸುವ ಅವರ ಅಭಿನಯ ಯಕ್ಷಲೋಕದ ಒಂದು ಅಚ್ಚರಿಯೆಂದು ಬಣ್ಣಿಸಿದರು. “ಶಿವರಾಮ ಹೆಗಡೆಯವರು ಕೌರವನ ಪಾತ್ರ ಮಾಡಿದರು. ಉಳಿದವರು ಶಿವರಾಮ ಹೆಡೆಯವರ ಕೌರವನನ್ನು ಮಾಡಿದರು” ಎಂದು ಅವರ ಆ ಪಾತ್ರದ ಪ್ರಭಾವವನ್ನು ವರ್ಣಿಸಿದರು. ಅವರ ಕೌರವನ ಪಾತ್ರ ಅದಾವ ಪರಿ ಜನಾಕರ್ಷಣೆಯನ್ನು ಹೊಂದಿತ್ತು ಮತ್ತು ಪ್ರಸಿದ್ಧಿಯನ್ನು ಪಡೆದಿತ್ತು ಎಂದು ಹೇಳುತ್ತಾ ಶಿವರಾಮ ಹೆಗಡೆಯವರ ಕಾಲಕ್ಕೇ ನಮ್ಮನ್ನು ಒಯ್ದರು.

ಕೊನೆಯದಾಗಿ ಶತಾವಧಾನಿಯವರ ನಿರ್ದೇಶನದಲ್ಲಿ ಮಂಟಪರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನಗೊಂಡಂತೆ ತಾನೂ ಕೂಡಾ ಶತಾವಧಾನಿಯವರಿಂದ ಪ್ರೇರಿತನಾಗಿ ಏಕವ್ಯಕ್ತಿ ತಾಳಮದ್ದಳೆಗೆ ಕಾಲಿಟ್ಟೆ ಎಂದು ಶತಾವಧಾನಿಯವರ ಪ್ರೇರಕ ವ್ಯಕ್ತಿತ್ವವನ್ನೂ, ಬಹುಮುಖ ವ್ಯಕ್ತಿತ್ವವನ್ನೂ, ಪರಿಚಯಿಸಿರು.

ನಾಟಕದಲ್ಲಿ ಮುಖ್ಯಮಂತ್ರಿ ಚಂದ್ರು
ನಾಟಕದಲ್ಲಿ ಮುಖ್ಯಮಂತ್ರಿ ಚಂದ್ರು

ಅಭಿನಂದನ ಭಾಷಣದ ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಅನೇಕ ಗಣ್ಯರ ಹಾಗೂ ನೆರೆದ ಪ್ರೇಕ್ಷಕರ ಸಮ್ಮುಖದಲ್ಲಿ ಶತಾವಧಾನಿ ಆರ್. ಗಣೇಶರಿಗೆ ₹ 25 ಸಾವಿರ ಚೆಕ್‌ನೊಂದಿಗೆ, ಶಾಲು, ಹಾರ, ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಗಣೇಶ್ ಅವರು “ಕೆರೆಮನೆ ಕುಟುಂಬದವರ ಪ್ರೀತಿ, ವಿಶ್ವಾಸ, ಸ್ನೇಹವನ್ನು ಜೀರ್ಣಿಸಿಕೊಳ್ಳುವ ಶಕ್ತಿ ನನಗಿದೆಯೋ ಇಲ್ಲವೋ ಗೊತ್ತಿಲ್ಲ. ಇವರೆಲ್ಲ ನನಗೆ ದೊಡ್ಡ ಋಣದ ಭಾರವನ್ನು ಹೊರಿಸಿದ್ದಾರೆ. ಕೆರೆಮನೆ ಕುಟುಂಬವೆಂದರೆ ಕೇವಲ ಶಿವರಾಮ ಹೆಗಡೆ, ಶಂಭು ಹೆಗಡೆ, ಶಿವಾನಂದ ಹೆಗಡೆ, ಶ್ರೀಧರ ಹೆಗಡೆ ಅಷ್ಟೇ ಅಲ್ಲ. ಅವರನ್ನು ಮೆಚ್ಚುವವರು, ಪ್ರೀತಿಸುವವರು, ಅಭಿಮಾನದಿಂದ ನೋಡುವವರು, ಅವರ ಆಟವನ್ನು ನೋಡುವವರು ಎಲ್ಲರೂ ಅವರ ಕುಟುಂಬಕ್ಕೆ ಸೇರುತ್ತಾರೆ. ಕೆರೆಮನೆ ಮೇಳದ ವ್ಯಾಪ್ತಿ ಅಷ್ಟು ದೊಡ್ಡದು. ಈ ಸಂಸ್ಥೆ ಅನೇಕರಿಗೆ ಸನ್ಮಾನ ಮಾಡಿದೆ. ಮಾಯಾರಾವ್, ಪದ್ಮಾ ಸುಬ್ರಹ್ಮಣ್ಯಂ, ಭದ್ರಗಿರಿ ಅಚ್ಯುತ ದಾಸ್, ಕೆ.ಎಸ್.ನಾರಾಯಣಾಚಾರ್ಯ ಮೊದಲಾದವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಅಂತಹವರ ಪಂಕ್ತಿಯಲ್ಲಿ ನನ್ನನ್ನೂ ಕುಳ್ಳಿರಿಸಿದ್ದಾರೆ. ಕೆರೆಮನೆಯವರ ಆಟ ನನಗೆ ಅತೀವ ಸಂತೋಷ ಕೊಟ್ಟಿದೆ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಕಣ್ಣಿಮನೆ ಗಣಪತಿ ಭಟ್ಟ ಅವರಂತಹ ಅನೇಕ ಕಲಾವಿದರ ಕುಣಿತಗಳನ್ನು ನೋಡಿದ್ದೇನೆ. ಜಿ.ಎಸ್.ಭಟ್ಟ, ಸಾಗರ ಅವರ ‘ನೆನಪಿನ ಅಂಗಳ’ ಓದಿದ್ದೇನೆ. ಶಂಭು ಹೆಗಡೆಯವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನನಗೆ ಅವರೊಡನೆ ಒಡನಾಡುವ ಅವಕಾಶ ಲಭ್ಯವಾಯಿತು. ಅವರು ಯಕ್ಷಗಾನ ಕುರಿತಾಗಿ ಸರಸವಾಗಿ, ಧಾರಾಳವಾಗಿ ಮಾತನಾಡುತ್ತಿದ್ದರು. ಅವರು ಮಾತನಾಡಿದ ಒಂದೆರಡು ಚಿಂತನೆಯ ವಿಷಯಗಳು ನನಗಿನ್ನೂ ನೆನಪಿವೆ. “ಜಾನಪದದ ಅವಿವೇಕಿಗಳು ಮಾಡುವ ಅಧ್ವಾನಕ್ಕೆ ಲೆಕ್ಕವೇ ಇಲ್ಲ. ಸಂಶೋಧನೆಯಂತೂ ಮೊದಲೇ ಇಲ್ಲ. ಯಕ್ಷಗಾನದ ಸಂಶೋಧನೆಗಳು ದಿಕ್ಕಾಪಾಲಾಗಿವೆ” ಎಂದು ಹೇಳಿದ್ದು ನನ್ನನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚಿದೆ ಎಂದರು.

“ಈ ಯಕ್ಷಗಾನಕ್ಕೆ ಒಂದು ದೊಡ್ಡ ಪರಂಪರೆಯಿದೆ. ಇದರ ಹಿಂದೆ ನೆಬ್ಬೂರು ನಾರಾಯಣ ಭಾಗವತರು, ವಿದ್ವಾನ್ ಗಣಪತಿ ಭಟ್ಟರು, ಏ.ಪಿ ಪಾಠಕ್, ಕೃಷ್ಣ ಯಾಜಿ ಇಡಗುಂಜಿ, ಮಹಾಬಲ ಹೆಗಡೆ, ಕೆರೆಮನೆ ಮೊದಲಾದವರ ಕೊಡುಗೆ ಬಹಳ ದೊಡ್ಡದು. ಯಕ್ಷಗಾನ ಒಂದು ಅಸಂಘಟಿತ ಕಲೆ. ಇದನ್ನು ಒಂದು ಸಂಘಟನೆಗೆ ಒಳಪಡಿಸಿ, ಮೇಳವನ್ನು ಮಾಡಿ ಯಕ್ಷಗಾನಕ್ಕೆ ಕೀರ್ತಿ ತಂದವರು ಕೆರೆಮನೆ ಶಂಭು ಹೆಗಡೆ ಮತ್ತು ಶಿವಾನಂದ ಹೆಗಡೆ ಎಂದು ಮನದುಂಬಿ ಮೆಚ್ಚುಗೆಯ ಮಾತುಗಳನ್ನಾಡಿದರು. ಎಂತಹ ಸಂರ್ಭದಲ್ಲೂ ಶಂಭು ಹೆಗಡೆಯವರು ಯಕ್ಷಗಾನದ ಅಪಸವ್ಯಗಳಿಗೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ” ಎಂದರು.

ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದವರಲ್ಲಿ ಒಬ್ಬರು ಪ್ರಸಿದ್ಧ ಅರ್ಥಧಾರಿ ಮತ್ತು ಹಿರಿಯ ಸಾಹಿತಿ, ಡಾ. ಎಂ.ಪ್ರಭಾಕರ ಜೋಶಿ, ಇನ್ನೊಬ್ಬರು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ, ಮತ್ತೊಬ್ಬರು ಮೈಸೂರಿನ ರಾಜಶೇಖರ ಆಸ್ಪತ್ರೆಯು ಹಿರಿಯ ಸರ್ಜನ್ ಡಾ. ಸಂಜಯ ಅವರು. ಡಾ. ಜೋಶಿ ಅವರು “ತಮಗೂ ಕೆರೆಮನೆ ಮೇಳಕ್ಕೂ ಇದ್ದ ಸುಮಧುರ ಸಂಬಂಧವನ್ನು ಅಭಿವ್ಯಕ್ತಿಸುತ್ತಾ ಕೆರೆಮನೆ ಅಂದರೆ ಅದೊಂದು ಹೆಮ್ಮೆಯ ವಿಷಯ. ಅದೊಂದು ತೀರ್ಥಕ್ಷೆತ್ರ, ದಿವ್ಯ ಸಾನ್ನಿಧ್ಯ”.
“ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಅರ್. ಗಣೇಶರು ನಿಜ ಅರ್ಥದಲ್ಲೂ ಗಣೇಶರೇ. ವ್ಯಾಸರು ಗಣೇಶ ಭಾರತವನ್ನು ಅರ್ಥ ಮಾಡಿಕೊಂಡು ಬರೆದರು. ಆದರೆ ಇವರದು ಹಾಗಲ್ಲ. ಇವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಗಣೇಶರ ಕೆಲವು ಕೃತಿ ಮನುಷ್ಯಮಾತ್ರದವರಿಗೆ ಅರ್ಥವಾಗುವುದಿಲ್ಲ” ಎಂದು ವಿನೋದದ ಅಲೆಯನ್ನು ಉಕ್ಕಿಸುತ್ತಾ , ಪ್ರೇಕ್ಷಕರನ್ನೂ ನಗೆಗಡಲಲ್ಲಿ ಮುಳುಗಿಸುತ್ತಾ ಗಣೇಶರ ಸಾಹಿತ್ಯಕ ಸಾಧನೆಯನ್ನು ಪ್ರಶಂಸಿಸಿದರು.

ಮತ್ತೊಬ್ಬ ಮುಖ್ಯ ಅತಿಥಿ ಸಂಸ್ಕೃತಿ ಚಿಂತಕ ಪ್ರಮೋದ ಹೆಗಡೆಯರು ಶಿವಾನಂದ ಹೆಗಡೆಯವರ ಸಾಹಸವನ್ನು ಮೆಚ್ಚುವಂತಾದ್ದೇ. ಕೆರೆಮನೆಯ ರಂಗ ತಾಣವೆಂದರೆ-“ಅದೊಂದು ಭಾವಪ್ರಪಂಚ; ಆಪ್ಯಾಯಮಾನದ ಅಮೃತ ನಿಧಿ ಎಂದರು. ಶಿವಾನಂದ ಹೆಗಡೆಯವರು ಶಂಭು ಹೆಗಡೆ ನಾಟ್ಯೋತ್ಸವವನ್ನು ಒಂದು ತಪಸ್ಸಾಗಿ ಪರಿಗಣಿಸಿ ಎಂತಹ ಅಡ್ಡಿ ಆತಂಕಗಳು ಬಂದರೂ ಅವನ್ನು ಎದುರಿಸಿ ಮುಂದುವರಿಯುತ್ತಿದ್ದಾರೆ. ಅನೇಕ ಸವಾಲುಗಳಿಗೆ ಎದೆಯೊಡ್ಡಿದ್ದಾರೆ. “ಇವರ ಅಜ್ಜ ಶಿವರಾಮ ಹೆಗಡೆಯವರ ಪ್ರೋತ್ಸಾಹಕ ಮಾತುಗಳಿಂದ ತಾನು ಕಳೆದ 37 ವರ್ಷಗಳಿಂದ ಯಲ್ಲಾಪುರದಲ್ಲಿ ಸಂಕಲ್ಪ ಸಂಸ್ಥೆಯನ್ನು ಹುಟ್ಟು ಹಾಕಿ ಸಂಕಲ್ಪೋತ್ಸವವನ್ನು ನಡೆಸಿಕೊಂಡು ಬರುತ್ತಾ ಇದ್ದೇನೆ ಎಂದರು.

ಡಾ. ಸಂಜಯ ಅವರು ತನಗೂ, ತನ್ನ ಕುಟುಂಬಕ್ಕೂ, ಕೆರೆಮನೆ ಮೇಳಕ್ಕೂ ಇರುವ ಸುಮಧುರ ಸಂಬಂಧವನ್ನು ಮೆಲುಕು ಹಾಕುತ್ತಾ ತನಗೆ ಸಿಕ್ಕ ಅವಕಾಶಕ್ಕೆ ಕೃತಜ್ಞತೆ ಸಲ್ಲಿಸಿದರು. ಅಂದಿನ ಸಭೆಯ ಸಭಾದ್ಯಕ್ಷತೆ ವಹಿಸಿದ್ದ ಕೇರಳದ ಫೋಕ್ ಲ್ಯಾಂಡ್‌ ಅಧ್ಯಕ್ಷ ಡಾ. ಜಯರಾಜನ್ ಅವರು ರಾಷ್ಟ್ರೀಯ ನಾಟ್ಯೋತ್ಸವದ ಅಚ್ಚುಕಟ್ಟುತನವನ್ನೂ, ಶಿವಾನಂದ ಹೆಗಡೆಯವರ ಸಾಹಸವನ್ನೂ ಮೆಚ್ಚಿ, ತಮಗುಂಟಾದ ಬೆರಗನ್ನು ವ್ಯಕ್ತಪಡಿಸಿದರು. ಕಳೆದ ಹದಿನಾಲ್ಕು ವರ್ಷಗಳಿಂದ ಅನೇಕ ಕಲಾಪ್ರಕಾರಗಳು ಇಲ್ಲಿ ಬಂದು ಪ್ರದರ್ಶಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ” ಎಂದರು. ನಂತರ ಸಭಾ ಕಾರ್ಯಕ್ರಮದ ಕೊನೆಯಲ್ಲಿ ಶಂಭು ಹೆಗಡೆ ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭವನ್ನು ಉದ್ಘಾಟಿಸಬೇಕಿದ್ದ ಕರ್ನಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವರಾದ ಮಂಕಾಳು ಎಸ್ ವೈದ್ಯ ಅವರು ಕಾರ್ಯಕ್ರಮದ ಮಧ್ಯದಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದ ಕೊನೆಯಲ್ಲಿ ಶಿವಾನಂದ ಹೆಗಡೆಯುವರು ವಂದನಾರ್ಪಣೆ ಸಲ್ಲಿಸಿ ಸಾಂಸ್ಕೃತಿಕ ತಂಡಗಳಿಗೆ ವೇದಿಕೆಯನ್ನು ಬಿಟ್ಟುಕೊಟ್ಟರು.

ನಂತರ ಶ್ರೀಮತಿ ಸುಕನ್ಯಾ ರಾಂ ಗೋಪಾಲ ತಂಡದವರಿಂದ “ಸ್ತ್ರೀ ತಾಳ ಘಟ ತರಂಗ” ಕಾರ್ಯಕ್ರಮ ಜರುಗಿತು. ಐವರು ಭಾಗವಹಿಸಿದ ಈ ತಾಳ ಘಟ ತರಂಗದಲ್ಲಿ ಸುಮಾರು ಹತ್ತು ಘಟಗಳಿದ್ದವು. ವೀಣೆ, ಮೋರ್ಚಿಂಗ್, ತಬಲ ಮತ್ತು ವೀಣೆಯೊಂದಿಗೆ ಸುಮಾರು ಒಂದು ಘಂಟೆ ನಡೆಸಿಕೊಟ್ಟ ಈ ಕಾರ್ಯಕ್ರಮ ರಸಿಕರಿಗೆ ರಸದೌತಣವನ್ನೇ ಉಣ್ಣಿಸಿತು. ಕಲಾತಪಸ್ಸು ಎಂದರೆ ಏನು ಎಂಬುದಕ್ಕೆ ಇದೊಂದು ಸಾಕ್ಷಿಯಾಯಿತು. ಇದಾದ ನಂತರ ಕೇರಳದ ಫೋಕ್ ಲ್ಯಾಂಡ್ ತಂಡದವರಿಂದ “ಕೆರಳ ನಟನಂ ಮತ್ತು ಮೊಹಿನೀ ಆಟ್ಟಂ” ನೃತ್ಯಗಳು ಸಂಪನ್ನಗೊಂಡವು. ಈ ನೃತ್ಯ ಪ್ರಕಾರಕ್ಕೆ ಅವರು ಅಳವಡಿಸಿಕೊಂಡ ಕಥಾವಸ್ತು ಒಂದು ‘ವಾಲಿವಧಂ’ ಇನ್ನೊಂದು ‘ಹಿಡಿಂಬಾ’. ಕೊನೆಗೆ ಒಂಭತ್ತು ನಟಿಯರು ಒಟ್ಟು ಸೇರಿ ಕೇರಳ ನಟನಂ ಮತ್ತು ಮೋಹಿನೀ ಆಟ್ಟಂನ್ನು ಮಿಶ್ರಣ ಮಾಡಿ ನಟಿಸಿದ್ದು ಜನಮನಕ್ಕೆ ಒಂದು ರೋಚಕ ಅನುಭವವನ್ನು ನೀಡಿತು.

ನೂಪುರ ಭರತನಾಟ್ಯಂ
ನೂಪುರ ಭರತನಾಟ್ಯಂ

17-03-2024...

ಮರುದಿನ 17-03-2024ರಂದು ಗಣಪತಿ ಪ್ರಾರ್ಥನೆ ಮತ್ತು ದೀಪಪ್ರಜ್ವಾಲನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗೆ ಭಾಜನರಾದ ಖ್ಯಾತ ಯಕ್ಷಗಾನ ಕಲಾವಿದ, ಅರ್ಥಧಾರಿ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಪ್ರಾಚಾರ್ಯ ಎಂ.ಎಲ್ ಸಾಮಗರನ್ನು ಉದ್ದೇಶಿಸಿ ಪ್ರೊ. ನಾರಾಯಣ ಹೆಗಡೆಯವರು ಅಭಿನಂದನ ಭಾಷಣ ಮಾಡಿದರು. ನಾರಾಯಣ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಿಂಡ್ಮನೆಯವರು. ತಮ್ಮ ವೃತ್ತಿ ಜೀವನನ್ನು ಉಡುಪಿಯಲ್ಲಿ ಕಳೆದ ಅವರು “ಅಲ್ಲಿಯವನು ಇಲ್ಲಿಯವ ಇಲ್ಲಿಯವನು ಅಲ್ಲಿಯವ” ಎಂದು ಮಾತಿಗೆ ತೊಡಗಿ, ಎರಡು ಪ್ರತಿಷ್ಠಿತ ಮನೆತನಗಳಾದ ‘ಸಾಮಗ ಮನೆತನ’ ಮತ್ತು ‘ಕೆರೆಮನೆ ಮನೆತನ’ಕ್ಕೆ ಇರುವ ಸಾಮ್ಯ ವೈಷಮ್ಯವನ್ನು ಸಾದರಪಡಿಸುತ್ತಾ ಯಕ್ಷಗಾನಕ್ಕೆ ಈ ಮನೆತನಗಳ ಕೊಡುಗೆ ಏನು ಎಂಬುದನ್ನು ಬಣ್ಣಿಸಿದರು. ದೊಡ್ಡ ಸಾಮಗರೆಂದೇ ಹೆಸರಾದ ಶಂಕರನಾರಾಯಣ ಸಾಮಗರು ಮತ್ತು ಸಣ್ಣ ಸಾಮಗರೆಂದೇ ಖ್ಯಾತರಾದ ರಾಮದಾಸ ಸಾಮಗರು ವಾಚಿಕ ಪ್ರಕಾರಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಅದೇ ಕೆರೆಮನೆ ಬಳಗ ನೃತ್ಯ-ಕುಣಿತಗಳಿಗೆ, ತನ್ಮೂಲಕ ಯಕ್ಷಗಾನದ ಪರಂಪರೆ, ಸೌಂದರ್ಯಕ್ಕೆ ಅವರು ಕೊಟ್ಟ ಕೊಡುಗೆ ಸ್ಮರಣೀಯವಾದುದು ಎಂದರು. ಸಾಮಗ ಮನೆತನದ ಮತ್ತೊಂದು ಕುಡಿ ಹೆಸರಾಂತ ಕಲಾವಿದ ವಾಸುದೇವ ಸಾಮಗರು ನೃತ್ಯ ಮತ್ತು ಅರ್ಥಗಾರಿಕೆಯಲ್ಲಿ ಸಮದಂಡಿಯಾಗಿ ಕೆಲಸ ಮಾಡಿದ್ದರು ಎಂದು ಅವರನ್ನು ಸ್ಮರಿಸಿಕೊಂಡರು.

ಪ್ರೊ. ಎಂ.ಎಲ್.ಸಾಮಗರ ಕುರಿತು ಸಾಮಗರು ಯಕ್ಷಗಾನ ಅಷ್ಟೇ ಅಲ್ಲ ನಾಟಕ ಮತ್ತು ಸಿನಿಮಾ ಕಲಾವಿದರಾಗಿಯೂ ಹೆಸರು ಮಾಡಿದವರು. ಬಡಗು ಮತ್ತು ತೆಂಕು ಎರಡೂ ತಿಟ್ಟಿಗೂ ಸಲ್ಲುವ ಒಬ್ಬ ಶೇಷ್ಠ ಕಲಾವಿದ. ಎಂ.ಜಿ.ಎ. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ವಿಭಾಗದ ಮುಖ್ಯಸ್ಥರಾಗಿ ಕೊನೆಗೆ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಅವರು ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಗಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗಮಕ ವಾಚನದ ವ್ಯಾಖ್ಯಾನಕಾರರಾಗಿಯೂ ಗಮನ ಸೆಳೆದಿದ್ದಾರೆ. ಅನೇಕ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾರಸ್ವತ ಕೈಂಕರ್ಯವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಅವರ ಬಹುಮುಖ ಪ್ರತಿಭೆಯ ಘನ ವ್ಯಕ್ತಿತ್ವವನ್ನು ಎಳೆಎಳೆಯಾಗಿ ವಿವರಿಸಿದರು.

ಗಜಾನನ ಹೆಗಡೆ ಪ್ರಶಸ್ತಿ ಸ್ವೀಕರಿಸಿದ ಪ್ರೊ. ಎಂ.ಎಲ್.ಸಾಮಗ ಅವರು ತನಗೆ ಇದನ್ನು ಸ್ವೀಕರಿಸುವಾಗ ಒಂದೆಡೆ ಸಂತೋಷ ಮತ್ತೊಂದೆಡೆ ಸಂಕೋಚ ಎರಡೂ ಆಗುತ್ತಿದೆ. ತಾನು ಅಂತಹ ದೊಡ್ಡ ವ್ಯಕ್ತಿಯೇ?” ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾ ಸಾಮಗರು ತಮ್ಮ ತಂದೆ ಶಂಕರನಾರಾಯಣ ಸಾಮಗ ಮತ್ತು ಮೇರು ಕಲಾವಿದ ಕೆರೆಮನೆ ಶಿವರಾಮ ಹೆಗಡೆಯರೊಟ್ಟಿಗೆ ಇದ್ದ ಸಂಬಂಧವನ್ನು ಸ್ಮರಿಸಿಕೊಂಡರು. ಶಿವರಾಮ ಹೆಗಡೆಯವರ ಮೇಳಕ್ಕೆ ನಾನು (ಶಂಕರನಾರಾಯಣ ಸಾಮಗರು) ಸೇರಿಕೊಂಡೆ. ಕಾರಣ ಅವರು ನನಗೆ ಒಳ್ಳೆಯ ಸಂಬಳ ಕೊಡುತ್ತಿದ್ದರು. ಅದರಿಂದಾಗಿ ನಾನೊಂದು ಮನೆ ಕಟ್ಟುವುದಕ್ಕೆ ಸಾಧ್ಯವಾಯಿತು” ಎಂದು ತಮ್ಮ ತಂದೆ ಶಂಕರನಾರಾಯಣ ಸಾಮಗರು ಹೇಳುತ್ತಿದ್ದುದನ್ನು ಸ್ಮರಿಸಿಕೊಂಡರು. ನಾನು ಮಲ್ಪೆಯವನೆಂದರೆ “ನಿಮಗೆ ದೊಡ್ಡ ಸಾಮಗರು ಗೊತ್ತೆ?” ಎಂದು ಕೇಳುತ್ತಿದ್ದರು. “ನಾನು ಸಾಮಗ ಎಂದರೆ ನೀವು ಮಲ್ಪೆಯರಲ್ಲವೆ?” ಎಂದು ಕೇಳುತ್ತಿದ್ದರು. ಹೀಗೆ ‘ಮಲ್ಪೆ’ ಮತ್ತು ‘ಸಾಮಗ’ ಈ ಎರಡು ಪದಗಳಿಂದಲೂ ನನಗೆ ‘ಗುಡ್‌ವಿಲ್’ ಸಿಕ್ಕಿದೆ. ಆ ದೃಷ್ಟಿಯಲ್ಲಿ ನಾನು ಭಾಗ್ಯಶಾಲಿ ಅನ್ನುತ್ತಾ ತಾನು ಕೆರೆಮನೆ ಮೇಳಕ್ಕೆ ಸೇರಿಕೊಂಡ ಸಂದರ್ಭವನ್ನು ನೆನೆಸಿಕೊಂಡು ಭಾವುಕರಾದರು. ನನ್ನ ಹೆಮ್ಮೆಯ ವಿಷಯವೆಂದರೆ ಕರೆಮನೆ ಶಂಭು ಹೆಗಡೆ, ಅವರ ಮಗ ಶಿವಾನಂದ ಹೆಗಡೆ, ಶಿವಾನಂದರ ಮಗ ಶ್ರೀಧರ ಇಮೆಟ್ಟಿಗೆ-ಹೀಗೆ ಮೂರು ತಲೆಮಾರಿನೊಂದಿಗೆ ವೇಷ ಮಾಡಿದ್ದೇನೆ. ಇದು ಎಂದೂ ಮರೆಯಲಾರದ ಸಂಗತಿಯೆಂದು ಆ ಮಧುರ ಸಂಬಂಧವನ್ನು ಮೆಲುಕು ಹಾಕಿದರು.

ಶಂಕರನಾರಾಯಣ ಸಾಮಗರ ದಶರಥ, ಗಜಾನನ ಹೆಗಡೆಯವರ ಕೈಕೇಯೀ, ಮಹಾಬಲ ಹೆಗಡೆಯವರ ರಾಮ, ಶಂಭು ಹೆಗಡೆಯವರ ಭರತ ನೋಡುವವರ ಕಣ್ಣಿಗೆ ಎಂದೆಂದೂ ಮರೆಯಲಾರದ ಒಂದು ಸುಂದರ ಮಾದರಿಯಾಗಿ ನನ್ನ ಕಣ್ಣಲ್ಲಿ ಕೂತಿದೆಯೆಂದು ಎಂ.ಎಲ್.ಸಾಮಗ ಸ್ಮರಿಸಿಕೊಂಡರು.

ಇಂದು ಸನ್ಮಾನ, ಪ್ರಶಸ್ತಿ ಎಂದರೆ ಹತ್ತು ಸಲ ಯೋಚಿಸಬೇಕಾದ ಕಾಲಘಟ್ಟದಲ್ಲಿದ್ದೇವೆ. ಜೊಳ್ಳು ಯಾವುದು ಟೊಳ್ಳು ಯಾವುದು ಎಂದು ಗೊತ್ತಾಗದ ಸನ್ನಿವೇಶದಲ್ಲಿದ್ದೇವೆ. ಆದರೆ ಇಂದು ನನಗೆ ಕೊಡಮಾಡುವ ಗಜಾನನ ಹೆಗಡೆ ಪ್ರಶಸ್ತಿ ನಿಜಕ್ಕೂ ಘನತೆವೆತ್ತ ಪ್ರಶಸ್ತಿಯಾಗಿದೆ. ಒಬ್ಬ ಶ್ರೇಷ್ಠ ಕಲಾವಿದನ ಹೆಸರಲ್ಲಿ ಪ್ರದಾನ ಮಾಡುವ ಈ ಪ್ರಶಸ್ತಿ ನನಗೆ ಲಭಿಸಿದ್ದಕ್ಕೆ ನಿಜಕ್ಕೂ ನನಗೆ ಸಂತೋಷವಾಗಿದೆ ಇದನ್ನು ಕೃತಜ್ಞತೆ ಹಾಗೂ ನಮ್ರತೆಯಿಂದ ಸ್ವೀಕರಿಸಿದ್ದೇನೆ. ಇದರಿಂದ ನನಗೆ ತೃಪ್ತಿಯಿದೆ ಎಂದು ಹೇಳುತ್ತಾ, “ಕೊನೆಯದಾಗಿ ಈ ಸನ್ಮಾನದೊಟ್ಟಿಗೆ ನೀಡಿದ ಹಣವನ್ನು ನಾನು ಕೆರೆಮನೆ ಸಂಸ್ಥೆಗೇ ಹಿಂದಿರುಗಿಸುತ್ತಿದ್ದೇನೆ. ನಾನು ಯುಜಿಸಿ ಸ್ಕೇಲಿನ ಸಂಬಳ ಪಡೆದವನು. ನನಗೆ ಸರಕಾರ ಎಲ್ಲ ವಿಧದ ಸೌಕರ್ಯವನ್ನು ಒದಗಿಸಿದೆ” ಎಂದು ತಮ್ಮ ಬದುಕಿನ ಸಂತೃಪ್ತಿಯನ್ನು ಪ್ರಕಟಿಸುತ್ತಾ ಹಣದ ಮೇಲಿನ ನಿಸ್ಪೃಹತೆಯನ್ನು ಮೆರೆದರು. ಎಷ್ಟು ಸಿಕ್ಕರೂ, ಏನು ಸಿಕ್ಕರೂ ತನಗೇ ಬೇಕು ಎಂಬ ಹಪಹಪಿಕೆಯ ಈ ಕಾಲಘಟ್ಟದಲ್ಲಿ ಸಾಮಗರ ಈ ನಿರ್ಣಯ ನೂರಕ್ಕೆ ಹತ್ತು ಮಂದಿಗಾದರೂ ಆದರ್ಶವಾಗಿದೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನಕ್ಕೆ ಪಾತ್ರರಾದ ಐರೋಡಿ ಗೋವಿಂದಪ್ಪನವರು “ತಾನು ಯಕ್ಷಗಾನ ಕ್ಷೇತ್ರದಲ್ಲಿ ಅರುವತ್ತು ವರ್ಷ ದುಡಿದವನು; ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ಅಭಿನಯಿಸಿದ್ದೇನೆ. ಕೆರೆಮನೆ ಮಹಾಬಲ ಹೆಗಡೆಯವರೊಟ್ಟಿಗೆ ವೇಷ ಮಾಡಿದ್ದೇನೆ. ಅವರದ್ದು ಕರ್ಣ ನನ್ನದು ವೃಷಸೇನ ಆಗಿತ್ತು. ಇದಕ್ಕಾಗಿ ನನಗೆ ಹೆಮ್ಮ ಮತ್ತು ಸಂತೋಷವಿದೆ” ಎಂದು ಹೇಳುತ್ತಾ ಯಕ್ಷಗಾನಕ್ಕೆ ಕೆರೆಮನೆಯವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ಇನ್ನೊಬ್ಬ ಸನ್ಮಾನಿತ, ಪ್ರಸಂಗಕರ್ತ ಮತ್ತು ಲೇಖಕ ಕಂದಾವರ ರಘುರಾಮ ಶೆಟ್ಟರು ತಮ್ಮ ಅಧ್ಯಾಪಕ ವೃತ್ತಿಯ ಜೀವನವನ್ನು ಸ್ಮರಿಸಿಕೊಳ್ಳುತ್ತಾ ತನ್ನನ್ನ ಸನ್ಮಾನಿಸಿದ ಕೆರೆಮನೆ ಶಿವಾನಂದ ಹೆಗಡೆಯರಿಗೆ ಕೃತಜ್ಞತೆ ಸಲ್ಲಿಸಿದರು. ಮತ್ತೊಬ್ಬ ಸನ್ಮಾನಿತ ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲೆಯವರು “ಯಕ್ಷಗಾನದಲ್ಲಿ ತನಗೆ ಹೇಗೆ ಆಸಕ್ತಿ ಬೆಳೆಯಿತು ಎಂದು ವಿವರಿಸುತ್ತಾ ಶಂಭು ಹೆಗಡೆಯವರೊಂದಿಗೆ ಅಂಗದ ಸಂಧಾನದಲ್ಲಿ ರಾವಣನ ಪಾತ್ರ ಮಾಡಿದ್ದೇನೆ. ನಮ್ಮ ಸಂಸ್ಥೆಯಲ್ಲಿ ಯಕ್ಷಗಾನದ ವಿಚಾರ ಸಂಕಿರಣ ಏರ್ಪಡಿಸಿದ್ದೇನೆ ಮತ್ತು ತೆಂಕು ತಿಟ್ಟು ಹಿತರಕ್ಷಣಾ ವೇದಿಕೆಯನ್ನು ಹುಟ್ಟು ಹಾಕಿ ತನ್ಮೂಲಕ ಯಕ್ಷಗಾನ ಸೇವೆಮಾಡುತ್ತಾ ಇದ್ದೇನೆ” ಎಂದರು. ನಾಲ್ಕು ತಲೆಮಾರುಗಳಿಂದ ಯಕ್ಷಗಾನ ಬೆಳಸಿದ, ಉಳಿಸಿದ ಕೀರ್ತಿ ಕೆರೆಮನೆ ಕುಟುಂಬದ್ದು ಎಂದು ಕೆರೆಮನೆ ಕುಟುಂಬದ ಹೆಗ್ಗಳಿಕೆಯನ್ನು ಬಿತ್ತರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಉದ್ಯಮಿ ಮತ್ತು ಕಲಾಪೋಷಕ ಕೃಷ್ಣಮೂರ್ತಿ ಮಂಜರು ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಮತ್ತು ಶಂಭು ಹೆಗಡೆ- ಈ ಮೂವರನ್ನು ಕರೆಯಿಸಿ ಆಟ ಮಾಡಿಸಿದ್ದೇನೆ. ಕಲಾವಿದನಿಗೆ ಮುಖ್ಯವಾಗಿ ತನ್ನ ವೇಷದ ಬಗ್ಗೆ ಸರಿಯಾದ ತಿಳಿವಳಿಕೆ ಇರಬೇಕು. ಬಣ್ಣಗಾರಿಕೆ, ಪಾತ್ರೋಚಿತವಾದ ವೇಷ-ಭೂಷಣ-ಹೆಜ್ಜೆ, ಮಾತುಗಾರಿಕೆ ಇರಬೇಕು. ಈ ಎಲ್ಲವನ್ನೂ ಒಳಗೊಂಡ ಕೆರೆಮನೆ ಮೇಳ ನಾಡಿನ ಹೆಮ್ಮೆ ಎಂದರು.

ಒಡಿಸ್ಸಿ
ಒಡಿಸ್ಸಿ

ಮತ್ತೊಬ್ಬ ಅತಿಥಿ ಮೈಸೂರಿನ ಅಪೋಲೋ ಆಸ್ಪತ್ರೆಯ ಅನಸ್ತೇಷಿಯಾ ಸರ್ಜನ್ ಡಾ. ನಾರಾಯಣ ಹೆಗಡೆ “ತಾನು ವೃತ್ತಿಯಿಂದ ವೈದ್ಯ, ಪ್ರವೃತ್ತಿಯಿಂದ ಕಲಾಸಕ್ತ. ಒಂದು ಸಂಸ್ಥೆ ಬೆಳೆಯುವುದಕ್ಕೆ ಅದಕ್ಕೆ ಸರಿಯಾದ ಅಡಿಪಾಯ ಇರಬೇಕು; ಉದ್ದೇಶ ಸ್ಪಷ್ಟವಾಗಿರಬೇಕು; ಜೊತೆಗೆ ದೂರದೃಷ್ಟಿ ಇರಬೇಕು. ಇಂಥವೆಲ್ಲ ಇದ್ದಾಗ ಸಂಸ್ಥೆಯೊಂದು ಅಪೂರ್ವವಾಗಿ ಬೆಳೆಯುತ್ತದೆ. ಇವನ್ನೆಲ್ಲ ಒಳಗೊಂಡ ಇಡಗುಂಜಿ ಮೇಳ ಶಿವಾನಂದ ಹೆಗಡೆಯವರ ಸಮರ್ಥ ನಾಯಕತ್ವದಲ್ಲಿ ರಚನಾತ್ಮಕವಾಗಿ, ಸೈದ್ಧಾಂತಿಕವಾಗಿ ಬೆಳೆದು ನಿಂತಿದೆ. ಇದು ಹೆಮ್ಮೆಯ ವಿಚಾರ. ಕಲೆ ಸಮಾಜಕ್ಕೆ ಅನಿವಾರ್ಯ. ಅದರಿಂದ ಸಮಾಜಕ್ಕೆ ಒಂದು ಮೆಸೇಜ್ ಇರುತ್ತದೆ” ಎಂದು ಹೇಳುತ್ತಾ ದೂರದ ಮೈಸೂರಿನಿಂದ ತನ್ನನ್ನು ಕರೆದು ಗೌರವಿಸಿದ್ದಕ್ಕೆ ಇಡಗುಂಜಿ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ಇನ್ನೊಬ್ಬ ಮುಖ್ಯ ಅತಿಥಿ, ಉದ್ಯಮಿ, ವೆಂಕಟರಮಣ ಹೆಗಡೆ ಕವಲಕ್ಕಿ ಅವರು ಇಡಗುಂಜಿ ಮೇಳದ ಕಾರ್ಯಚಟುವಟಿಕೆಗಳನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸುತ್ತಾ ಇದಕ್ಕೆ ತನ್ನ ಬೆಂಬಲವೂ, ಪ್ರೋತ್ಸಾಹವೂ ಇದೆ ಎಂದರು. ಈ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ ಖ್ಯಾತ ಅರ್ಥಧಾರಿ, ಚಿಂತಕ, ವಿಮರ್ಶಕ, ಹಿರಿಯ ಸಾಹಿತಿ ಡಾ. ಎಂ ಪ್ರಭಾಕರ ಜೋಶಿ ಅವರು “ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಒಂದು ಅಭಿಯಾನ ರೂಪದಲ್ಲಿ ಜರುಗುತ್ತಿರುವುದು ಒಂದು ಸಂತೋಷದ ಸಂಗತಿ. ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಸಮಾರಂಭ ಈ ಎರಡರಲ್ಲೂ ನಾನು ವೇದಿಕೆಯನ್ನು ಹಂಚಿಕೊಂಡಿದ್ದೇನೆ. ಇದರಲ್ಲಂತೂ ನಾನೇ ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ಈ ಕಾರಣದಿಂದಾಗಿ ನಿಜಕ್ಕೂ ಇದು ನನಗೇ ಸಂದ ಸನ್ಮಾನ ಎಂದು ಮುಕ್ತ ಕಂಠದಿಂದ ಕೆರೆಮನೆ ಕುಟುಂಬವನ್ನು ಅಭಿನಂದಿಸುತ್ತಾ, ಅವರ ಬಗ್ಗೆ ತಮಗಿದ್ದ ದೀರ್ಘಕಾಲದ ಸಂಬಂಧ, ಒಡನಾಟ, ಸ್ನೇಹ, ಸಲುಗೆ- ಎಲ್ಲವನ್ನೂ ನೆನಪಿಸಿಕೊಳ್ಳುತ್ತಾ, ಗತಕಾಲಕ್ಕೇ ಸರಿದು ಅದಕ್ಕೆ ವರ್ತಮಾನದ ಹೊಳಪನ್ನು ನೀಡಿದ್ದು ಅವರ ಇಡೀ ಭಾಷಣಕ್ಕೇ ಒಂದು ತೂಕವನ್ನು ತಂದಿತ್ತು. ಅವರ ಅಧ್ಯಕ್ಷ ಭಾಷಣ, ಸ್ಫೂರ್ತಿಯ ಚಿಲುಮೆಯಂತೆ ಸುತ್ತೆಲ್ಲ ಹರಡುತ್ತಾ, ಪ್ರೇಕ್ಷಕ ಸಂದೋಹಕ್ಕೂ, ವೇದಿಕೆಯ ಗಣ್ಯರಿಗೂ ಉಲ್ಲಾಸದ ಬೆಳಕನ್ನು ಬೀರಿತು.

ಈ ರಾಷ್ಟೀಯ ಪ್ರಶಸ್ತಿಗಳಿಗೆ ಸೆಲೆಕ್ಟ್ ಆಗಿರುವ ಒಬ್ಬೊಬ್ಬ ವ್ಯಕ್ತಿಯೂ ‘National Asset’ ಆಗಿದ್ದಾರೆ; ಶ್ರೇಷ್ಠ ಸಾಧಕರಾಗಿದ್ದಾರೆ” ಎಂದು ಅವರ ವ್ಯಕ್ತಿತ್ವವನ್ನೂ ಎಳೆಎಳೆಯಾಗಿ ವಿವರಿಸಿದರು. ಸಾಮಗ ಮನೆತನವಿರಲಿ, ಕೆರೆಮನೆ ಮನೆತನವಿರಲಿ ಈ ಎರಡೂ ಕುಟುಂಬಗಳು ಶ್ರೇಷ್ಠ ಕಲಾ ಸಾಧಕರ ಕುಟುಂಬ ಎಂದು ಆ ಕುಟುಂಬಗಳ ಮಹತ್ತನ್ನೂ, ಹಿರಿಮೆ-ಗರಿಮೆಯನ್ನೂ ಯಾವ ಅತಿಶಯೋಕ್ತಿಯೂ ಇಲ್ಲದೆ ಕಣ್ಣಿಗೆ ಮೂರ್ತಿಮತ್ತಾಗಿಸಿದ್ದು ಗಮನಾರ್ಹವಾಗಿತ್ತು.

“ಕೆರೆಮನೆ ಕುಟುಂಬದವರು ಯಾವುದೇ ಪಾತ್ರವನ್ನು ಮಾಡಲಿ ಆ ಪಾತ್ರದ ಕ್ಯಾರೆಕ್ಟರ್ ಪರಿಕಲ್ಪನೆ ಯಾವಾಗಲೂ ಒಂದು ಎತ್ತರವನ್ನೇ ಕಾದುಕೊಳ್ಳುತ್ತದೆ ಮತ್ತು ಇತರರಿಗೆ ಮಾದರಿಯಾಗಿ ಜೀವಂತಿಕೆಯಿಂದ ಕಂಗೊಳಿಸುತ್ತದೆ. ಅದರ ಮುಂದುವರಿಕೆಯೇ ಶಿವಾನಂದ ಹೆಗಡೆ ಮತ್ತು ಅವರ ಮಗ ಶ್ರೀಧರ ಹೆಗಡೆ” ಎಂದು ಹೇಳುತ್ತಾ ಕೆರೆಮನೆ ಕುಟುಂಬದ ವೈಶಿಷ್ಟ್ಯವನ್ನೂ ಜೊತೆ ಜೊತೆಗೆ ಸಾಮಗ ಕುಟುಂಬದ ವೈಶಿಷ್ಟ್ಯವನ್ನೂ ಸಾದರ ಪಡಿಸುತ್ತಾ ಅಂದು ಅವರು ಮಾಡಿದ ಅಧ್ಯಕ್ಷ ಭಾಷಣ ಒಂದು ಉತ್ಕೃಷ್ಟತೆಯ ಮಾದರಿಗೆ ಸಾಕ್ಷಿಯಾಯಿತು. ಗಜಾನನ ಹೆಗಡೆ ಒಬ್ಬ ‘ವಂಡರ್‌ಫುಲ್’ ಕಲಾವಿದ. ಅವರ ರಾತ್ರಿ ವೇಷಕ್ಕಿಂತ ಅವರ ಹಗಲಿನ ವೇಷ ಇನ್ನೂ ಚೆಂದ. ಅವರ ಮುಗ್ಧತೆ, ಆತ್ಮೀಯತೆ ನಮ್ಮನ್ನು ಸದಾ ಸೆಳೆಯುತ್ತಿತ್ತು. ಶಂಭು ಹೆಗಡೆ ಒಬ್ಬ ಫ್ರೆಂಡ್ಲಿ ನೇಚರ್‌ನವರು; ಅವರೊಬ್ಬ ಜಂಟಲ್‌ಮ್ಯಾನ್. ಕೆರೆಮನೆ ಕುಟುಂಬದ ಒಟ್ಟು ಸೌಂದರ್ಯವನ್ನು ಕಾಣುವುದಾದರೆ ಆ ಮೇಳದ ಕೆಲವು ಪ್ರಸಂಗಗಳನ್ನಾದರೂ ನಾವು ನೋಡಿರಬೇಕು. ಅಂತಹ ಪ್ರಸಂಗಗಳಲ್ಲಿ ‘ಗದಾ ಯುದ್ಧ’ ಒಂದು. “ಶಿವರಾಮ ಹೆಗಡೆ ಕೌರವ, ಗಜಾನನ ಹೆಗಡೆ ಭೀಮ, ಮಹಾಬಲ ಹೆಗಡೆ ಅಶ್ವತ್ಥಾಮ, ಶಂಭು ಹೆಗಡೆ ಧರ್ಮರಾಜ ಇದೊಂದು ಅಪರೂಪದ ಶೈಲೀ. ಇಡೀ ಶೈಲಿಯೇ ಸೊಗಸಾದುದು. ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆಂಬ ಆಸೆ ಹುಟ್ಟಿಸುವ ಅದ್ಭುತ ಮಾದರಿಯ ಆಟ ಅದು” ಎಂದು ಅದರ ಸೊಗಸನ್ನು ಎತ್ತಿ ಹಿಡಿದರು.

ಹಾಗೆಯೇ ಪ್ರೋ. ಎಂ.ಎಲ್.ಸಾಮಗರ ಬಗ್ಗೆ “ಅವರ ಶಲ್ಯ, ಧರ್ಮರಾಜ ಹೀಗೆ ಅನೇಕ ಪಾತ್ರಗಳು ಚೆಂದ, ಅವರು ಸ್ರ್ರೀ ಪಾತ್ರಗಳನ್ನೂ ಮಾಡುತ್ತಾರೆ. ಇಂಗ್ಲಿಷ್, ಹಿಂದಿ ಭಾಷೆಗಳಲ್ಲೂ ಯಕ್ಷಗಾನವನ್ನು ಮಾಡಿದ್ದಾರೆ. ಅವರ ಪ್ರತಿಯೊಂದು ನಡೆಯಲ್ಲೂ ಪಾತ್ರಗಳಲ್ಲೂ ಒಂದು ಪರಿಪಕ್ವತೆಯಿದೆ” ಎಂದು ಹೇಳುತ್ತಾ ಇತರ ಮೂವರು ಸನ್ಮಾನಿತರ ಬಗ್ಗೆಯೂ ಮಾತನಾಡಿದರು. ನಂತರ ಬೆಂಗಳೂರಿನ ಅನುಪಮಾ ಹೊಸಕೆರೆ ತಂಡದವರಿಂದ ‘ಅಷ್ಟಾವಕ್ರ’ ಗೊಂಬೆಯಾಟ ಜರುಗಿತು. ಇದರಲ್ಲಿಯ ಪ್ರತಿಯೊಂದು ಸಂಭಾಷಣೆಯೂ ಅರ್ಥಪೂರ್ಣವಾಗಿದ್ದು, ನೃತ್ಯ, ಗೊಂಬೆಗಳ ಗತಿ ಎಲ್ಲವೂ ಪ್ರೇಕ್ಷಕರ ಮನಸೂರೆಗೊಂಡವು. ಈ ಗೊಂಬೆಯಾಟದ ನಂತರ ಬೆಂಗಳೂರಿನ ಕಲಾಗಂಗೋತ್ರಿ ತಂಡದವರಿಂದ ‘ಮುಖ್ಯಮಂತ್ರಿ’ ನಾಟಕ ಸಂಪನ್ನಗೊಂಡಿತು. ಖ್ಯಾತ ಸಿನಿಮಾ ನಟ ಮುಖ್ಯಮಂತ್ರಿ ಚಂದ್ರು ಅವರು ಈ ನಾಟಕದ ಕೇಂದ್ರಬಿಂದುವಾಗಿದ್ದು, ಅಂದು ಪ್ರೇಕ್ಷಕ ಸಂಖ್ಯೆಯೂ ಅಧಿಕವಾಗಿತ್ತು. ಅದರ ಮುಖ್ಯ ಆಕರ್ಷಣೆ ಚಂದ್ರುವೇ ಆಗಿದ್ದರು.

ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮ

18-03-2024...

18-03-2024ರ ಸಮಾರಂಭದ ಅಧ್ಯಕ್ಷತೆಯನ್ನು ಚಿಂತಕ, ವಿಮರ್ಶಕ, ವಿದ್ವಾನ್ ಗ.ನಾ.ಭಟ್ಟ, ಮೈಸೂರು ಅವರು ವಹಿಸಿದ್ದರು. ಅಂದು ಇಡಗುಂಜಿ ಮೇಳ ಸಾಹಿತಿ ಮತ್ತು ಯಕ್ಷಗಾನ ಕಲಾವಿದ ಡಾ. ರಾಮಕೃಷ್ಣ ಗುಂದಿ, ಕಾದಂಬರಿಕಾರ ಡಾ. ಗಜಾನನ ಶರ್ಮಾ ಮತ್ತು ಸಾಹಿತಿ ಹಾಗೂ ಶಿಕ್ಷಣ ತಜ್ಞ ಪ್ರೊ. ಕೆ.ಈ.ರಾಧಾಕೃಷ್ಣ ಅವರಿಗೆ ಸನ್ಮಾನವನ್ನು ಹಮ್ಮಿಕೊಂಡಿತ್ತು. ಅಂದಿನ ಸನ್ಮಾನವನ್ನು ಸ್ವೀಕರಿಸಿದ ರಾಮಕೃಷ್ಣ ಗುಂದಿಯವರು ವೃತ್ತಿ ಮತ್ತು ಜೀವನಾನುಭವವನ್ನು ವಿವರಿಸುತ್ತಾ, ಹಳ್ಳಿಯೊಂದರಲ್ಲಿ ವಿವಿಧ ಕಲಾಪ್ರಕಾರಗಳು ಸೇರುವುದೇ ಒಂದು ವಿಸ್ಮಯ, ಅಂತಹ ವಿಸ್ಮಯವನ್ನು ಸೃಷ್ಟಿಸುವುದಕ್ಕೆ ಕಾರಣರಾದವರು ಕೆರೆಮನೆ ಶಿವಾನಂದ ಹೆಗಡೆಯವರು ಅನ್ನುತ್ತಾ ಇಡಗುಂಜಿ ಮೇಳಕ್ಕೆ ಶುಭವನ್ನು ಕೋರಿದರು.

ಇನ್ನೊಬ್ಬ ಅತಿಥಿ ಪ್ರೊ. ಕೆ. ಈ. ರಾಧಾಕೃಷ್ಣ ಅವರು ಶಂಭು ಹೆಗಡೆಯವರ ಕುರಿತು ಅವರ ಹೆಸರಲ್ಲೇ ಮಂಗಳವಿದೆ. ‘ಶಂ’ ಎಂದರೆ ಮಂಗಳ, ಶುಭ ಎಂದು ಅರ್ಥ. ಹಾಗೆಯೇ ಶಿವಾನಂದ ಅವರ ಹೆಸರಲ್ಲೂ ಮಂಗಳವಿದೆ. ‘ಶಿವ’ ಎಂದರೆ ಮಂಗಳ ಅಂತಲೇ ಅರ್ಥ ಎನ್ನುತ್ತಾ ಇಡೀ ವಾತಾವರಣವನ್ನೇ ಮಂಗಳಮಯವಾಗಿ ಮಾಡಿದರು. ಕೆರೆಮನೆ ಮೇಳ ಅನ್ನುವುದು ಒಂದು ಶಂಭು ಹೆಗಡೆ ಒಬ್ಬ ನಕ್ಷತ್ರ. ಅವರ ‘ವಾಲಿ ವಧೆ’ ಆಟವನ್ನು ನೋಡಿ ನಾನು ಸಂತೋಪಟ್ಟಿದ್ದೇನೆ.

“ಮಾನ’ ಎಂದರೆ ‘Measurement’. ಒಂದು ‘ಅಳತೆಗೆ’ಯೊಳಗೆ, ಒಂದು ‘ಮಿತಿ’ಯೊಳಗೆ ಇರುವುದು ಅಂತ ಅರ್ಥ. ನಡೆ-ನುಡಿ, ಆಹಾರ-ವಿಹಾರ, ವೆಷ-ಭೂಷಣ, ಆಸಕ್ತಿ-ನಿರಾಸಕ್ತಿ ಹೀಗೆ ಹಲವು ಹತ್ತು ವಿಷಯಗಳಲ್ಲಿ ಒಂದು ‘ಮಿತಿ’ಯೊಳಗಿರುವುದೇ ‘ಮಾನ’ವೆನಿಸಿಕೊಳ್ಳುತ್ತದೆ. ಅಂತಹ ಮಾನವುಳ್ಳವರನ್ನು, ಮಾನವಂತರನ್ನು ಗುರುತಿಸಿ ಶಿವಾನಂದ ಹೆಗಡೆಯವರು ಸಮ್ಮಾನ ಮಾಡುತ್ತಿರುವುದು ಖಂಡಿತಕ್ಕೂ ಸಂತೋಷದ ವಿಚಾರ. ಅಂತಹವರಲ್ಲಿ ನನ್ನನ್ನೂ ಗುರುತಿಸಿ ಸನ್ಮಾನ ಮಾಡಿದ್ದಕ್ಕೆ ನಾನು ಆಭಾರಿಯಾಗಿಸದ್ದೇನೆ” ಎಂದರು.

ಇನ್ನೊಬ್ಬ ಅತಿಥಿ ಡಾ. ಗಜಾನನ ಶರ್ಮಾ ಅವರು ಪರಿಸರ, ಶರಾವತಿನದೀ, ಹೊನ್ನಾವರ, ಅದರ ವ್ಯುತ್ಪತ್ತಿ, ವಿದ್ಯುತ್, ವಿದ್ವತ್, ಪರಂಪರೆ, ಇತಿಹಾಸ ಮೊದಲಾದವನ್ನು ಯಕ್ಷಗಾನಕ್ಕೆ ಅನ್ವಯ ಮಾಡಿ ಭಾಷಣಕ್ಕೆ ಒಂದು ಹೊಸತನವನ್ನು ತಂದರು.

ಮುಖ್ಯ ಅಭ್ಯಾಗತರಾಗಿ ಬಂದಿದ್ದ ಪತ್ರಕರ್ತ, ಅಂಕಣಕಾರ ರಾಜು ಅಡಕಳ್ಳಿಯವರು ಕೆರೆಮನೆ ಮೇಳದ ವೈಭವವವನ್ನೂ, ತನಗೆ ಆ ಮೇಳದೊಡನೆ ಇರುವ ಆತ್ಮೀಯತೆಯ ಕೆಲವು ಅಂಶಗಳನ್ನೂ, ಶಿವಾನಂದ ಹೆಗಡೆಯವರು ಯಕ್ಷಗಾನ ಕಲೆಯ ಮೂಲಕ ನೀಡುತ್ತಿರುವ ಪರಮಾನಂದವನ್ನೂ ಪ್ರಸ್ತುತಪಡಿಸಿದರು. ಶಿವಾನಂದ ಹೆಗಡೆ ಒಬ್ಬ ಚೈತನ್ಯಶೀಲ ವ್ಯಕ್ತಿತ್ವವುಳ್ಳವರೂ, ಯಕ್ಷಗಾನದ ಗಡಿಯನ್ನು ವಿಸ್ತರಿಸಿದ ಒಬ್ಬ ಸೃಜನಶೀಲ ವ್ಯಕ್ತಿಯೆಂದೂ, ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ಪರಿಚಯಿಸಿದರು. ಯಕ್ಷಗಾನಕ್ಕೆ ಮಾಧ್ಯಮದವರ ಪ್ರೋತ್ಸಾಹ ಏನೂ ಸಾಲದು. ಅದಕ್ಕೆ ಅವರು ಮನ ಮಾಡಬೇಕಿದೆ ಎಂದರು.

ಆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಗ.ನಾ.ಭಟ್ಟ ಅವರು ಕೆರೆಮನೆ ಮೇಳದ ಬದ್ಧತೆಯನ್ನೂ, ಪೌರಾಣಿಕ ಪ್ರಸಂಗಗಳಿಗೇ ಅವರು ನೀಡುತ್ತಿದ್ದ ಆದ್ಯತೆಯನ್ನೂ, ಶಂಭು ಹೆಗಡೆಯವರು ಇಟ್ಟ ಕ್ರಾಂತಿಕಾರಕ ಹೆಜ್ಜೆಯನ್ನೂ, ಜನ ಅದನ್ನು ಸ್ವೀಕರಿಸಿದ ಬಗೆಯನ್ನೂ ಸೋದಾಹರಣವಾಗಿ ಜನರ ಮುಂದಿಟ್ಟರು. ಶಂಭು ಹೆಗಡೆಯವರ ಪಾತ್ರ ವೈವಿಧ್ಯತೆ ಅಸಾಧಾರಣವಾದುದು. ಒಂದು ಪಾತ್ರದಂತೆ ಮತ್ತೊಂದು ಪಾತ್ರ ಇರುತ್ತಿರಲಿಲ್ಲ. ವೇಷವನ್ನು ಪಾತ್ರವಾಗಿಸಿದ ಕೀರ್ತಿ ಇಡೀ ಕೆರೆಮನೆ ಮೇಳಕ್ಕೆ ಸಲ್ಲುತ್ತದೆ. “ಯಕ್ಷಗಾನ ಅನುಕರಣೀಯ ಕಲೆಯಾಗಿದ್ದರೂ ಅದರಲ್ಲಿ ಸೃಜನಶೀಲತೆ ಮೆರೆಯಬೇಕು” ಎಂದು ಹೇಳುತ್ತಿದ್ದ ಶಂಭು ಹೆಗಡೆಯವರ ಮಾತನ್ನು ಸ್ಮರಿಸಿಕೊಂಡರು.

ನಾವು ಜಗತ್ತನ್ನು ಸುತ್ತುತ್ತೇವೆ. ಆದರೆ ಜಗತ್ತೇ ಗುಣವಂತೆ ಯಕ್ಷಾಂಗಣದತ್ತ ಸುತ್ತುವಂತೆ ಮಾಡಿದ ಕೀರ್ತಿ ಶಿವಾನಂದ ಹೆಗಡೆಯವರದು. ಅವರೊಬ್ಬ ಉತ್ತಮ ಕಲಾವಿದ. ಅವರಲ್ಲೊಬ್ಬ ಸೃಜನಶೀಲ ಚಿಂತಕನಿದ್ದಾನೆ; ಒಳ್ಳೆಯ ನಿರ್ದೇಶಕನಿದ್ದಾನೆ; ಸಂಘಟಕನಿದ್ದಾನೆ ಎಂದು ಅವರ ವ್ಯಕ್ತಿತ್ವದ ಬಹು ಆಯಾಮವನ್ನು ಗುರುತಿಸಿ ಮಾತನಾಡಿದರು.

ಅಂದಿನ ಸಮಾರಂಭದ ಸ್ವಾಗತ ಮತ್ತು ವಂದನಾರ್ಪಣೆಯನ್ನು ರಾಷ್ಟ್ರೀಯ ನಾಟ್ಯೋತ್ಸವದ ರೂವಾರಿ ಕೆರೆಮನೆ ಶಿವಾನಂದ ಹೆಗಡೆಯವರು ನೆರವೇರಿಸಿಕೊಟ್ಟರು. ಅವರಿಗೆ ಸಹಾಯಕರಾಗಿ ನಿಂತ ಶ್ರೀಧರ ಹೆಗಡೆ, ರಾಜೇಶ್ವರೀ ಹೆಗಡೆ, ಯಕ್ಷಗಾನದ ಹಿರಿಯ ಕಲಾವಿದ ತಿಮ್ಮಪ್ಪ ಹೆಗಡೆ, ಭಾಗವತ ಅನಂತ ಹೆಗಡೆ, ನಿವೃತ್ತ ಹೈಸ್ಕೂಲ್ ಮುಖ್ಯೋಪಾಧ್ಯಾಯ ಶ್ರೀ ಕೆ.ಜಿ.ಹೆಗಡೆ, ಅಪ್ಸರಕೊಂಡ ಮೊದಲಾದವರು ಇಲ್ಲಿ ಸ್ಮರಣೀಯರು. ಆಮೇಲೆ ಸೂರ್ಯ ಕಂತುತ್ತಿದ್ದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗತೊಡಗಿದವು. ಮೊದಲಿಗೆ ಕಲಾಶ್ರೀ ಪಂಡಿತ್ ಮುದ್ದುಮೋಹನ್ ಮತ್ತು ಅವರ ಸಂಗಡಿಗರಿಂದ ಶಾಸ್ತ್ರೀ ಸಂಗೀತ ಸಂಪನ್ನಗೊಂಡಿತು. ತದನಂತರ ಬೆಂಗಳೂರಿನ ‘ನೂಪುರ’ ಸಂಸ್ಥೆಯವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.

ಕಾರ್ಯಕ್ರಮದಲ್ಲಿ ಸನ್ಮಾನಿತರು, ಅತಿಥಿಗಳು ಹಾಗೂ ಶಿವಾನಂದ ಹೆಗಡೆ ಅವರು ಇದ್ದಾರೆ.
ಕಾರ್ಯಕ್ರಮದಲ್ಲಿ ಸನ್ಮಾನಿತರು, ಅತಿಥಿಗಳು ಹಾಗೂ ಶಿವಾನಂದ ಹೆಗಡೆ ಅವರು ಇದ್ದಾರೆ.

19-03-2024...

19-03-2024ರ ಸಮಾರಂಭದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್.ವಾಸರೆಯವರು ವಹಿಸಿದ್ದರು. ಎಂದಿನಂತೆ ಅನಂತ ಹೆಗಡೆ, ದಂತಳಿಕೆ ಮತ್ತು ಅವರ ಸಂಗಡಿಗರಿಂದ ಗಣಪತಿಯ ಸಂಸ್ತುತಿ ಆಗುತ್ತಿದ್ದಂತೆ ಶಿವಾನಂದ ಹೆಗಡಡೆಯವರು ಬಂದ ಅತಿಥಿವರೇಣ್ಯರನ್ನು ಸ್ವಾಗತಿಸಿದರು.

ಕಲಾತಜ್ಞ ಸಾವಂತವಾಡಿ ವಿಜಯ ಪಾತ್ರಪೇಕರ್, ಶಿಲ್ಪಿಗಳಾದ ಸೂರಾಲು ವೆಂಕಟರಮಣ ಭಟ್ಟ ಮತ್ತು ಅವರ ಪತ್ನಿ ಶ್ರೀಮತಿ ರತ್ನಾ ಟಿ.ಎಸ್. ಮತ್ತು ಕೃಷಿ ಮತ್ತು ಪರಿಸರ ತಜ್ಞ ಶಿವಾನಂದ ಹೆಗಡೆ ಕಳವೆ ಅವರು ಸನ್ಮಾನಕ್ಕೆ ಭಾಜನರಾಗಿ ಅಂದು ಪಾಲ್ಗೊಂಡಿದ್ದರು. ಸನ್ಮಾನ ಸ್ವೀಕರಿಸಿದ ಶ್ರೀ ವಿಜಯ ಪಾತ್ರಪೇಕರ್ ಅವರು ತಮ್ಮ ಬಗ್ಗೆ ಒಂದಿಷ್ಟು ಹೇಳಿಕೊಂಡು ಕೆರೆಮನೆ ಶಂಭು ಹೆಗಡೆಯವರನ್ನು ಗುರುವೆಂದೂ, ಅವರು ಯಕ್ಷಗಾನ ಕಲೆಯನ್ನು ದೇವರಂತೆ ಪೂಜಿಸಿದರು ಎಂದು ಹೇಳುತ್ತಾ ಯಕ್ಷಗಾನಕ್ಕೆ ಅವರ ಕೊಡುಗೆ ಅಪಾರ ಮತ್ತು ಅವಿಸ್ಮರಣೀಯವಾದುದು ಎಂದರು. ಸಂಸ್ಕೃತಿ, ಪರಂಪರೆ ಅಂದರೆ ಏನು? ಎಂದು ಪ್ರಶ್ನಿಸುತ್ತಾ ಅವುಗಳ ಬಗ್ಗೆ ಒಂದಿಷ್ಟು ವಿವರಣೆ ನೀಡಿದರು.

ಇನ್ನೊಬ್ಬ ಸನ್ಮಾನಿತ ಸೂರಾಲು ವೆಂಕಟರಮಣ ಭಟ್ಟ ಅವರು ತಮ್ಮ ಶಿಲ್ಪಪ್ರಪಂಚದ ಅನುಭವವನ್ನು ಹೇಳಿಕೊಳ್ಳುತ್ತಾ, ಕಲಾವಿದನಿಗೆ ರೇಖಾ ಚಿತ್ರ ಗೊತ್ತಿರಬೇಕು, ಅದರಲ್ಲಿ ಅವನಿಗೆ ಶ್ರದ್ಧೆಯಿರಬೇಕು ಎಂದೆಲ್ಲಾ ಹೇಳುತ್ತಾ ತನ್ನನ್ನೂ, ತನ್ನ ಮಡದಿಯನ್ನೂ ಗುರುತಿಸಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಮತ್ತೊಬ್ಬ ಅತಿಥಿ ಕಳವೆ ಶಿವಾನಂದ ಅವರು ಪರಿಸರಕ್ಕೂ ಯಕ್ಷಗಾನಕ್ಕೂ ಇರುವ ಸಂಬಂಧವನ್ನು ಮನೋಜ್ಞವಾಗಿ ಬಣ್ಣಿಸಿದರು. ಅವರ ಬಹುಪಾಲು ಭಾಷಣ ಪರಿಸರ ವಿವರಣೆಗೇ ಮೀಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿದ್ದಾಪುರದ ಟಿ.ಎಂ.ಎಸ್.ನ ಅಧ್ಯಕ್ಷರಾದ ಆರ್.ಎಂ.ಹೆಗಡೆ, ಬಾಳೆಸರ ಅವರು “ನಾನೇನೂ ಕಲಾವಿದನಲ್ಲ; ಆದರೆ ಕಲೆಗಳಲ್ಲಿ ಆಸಕ್ತಿಯುಳ್ಳವ. ಯಕ್ಷಗಾನ ಒಂದು ಶಾಸ್ತ್ರೀಯ ಜಾನಪದ ಕಲೆ; ಅದು ನಮ್ಮ ನೆಲದ ಅಭಿಜಾತ ಕಲೆ” ಅನ್ನುತ್ತಾ ಕೆರೆಮನೆ ಕುಟುಂಬಕ್ಕೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಕೆರೆಮನೆ ಶಂಭು ಹೆಗಡೆಯವರು ಆಟಕ್ಕೆ ಅನುಕೂಲವಾಗುವ ಮತ್ತು ಭರತನಾಟ್ಯ ಶಾಸ್ತ್ರದಲ್ಲಿ ಹೇಳಿದ ಅರ್ಧಚಂದ್ರಾಕೃತಿಯ ರಂಗಮಂಟಪವನ್ನು ಜಾರಿಗೆ ತಂದರು. ಅಷ್ಟೇ ಅಲ್ಲ. ಯಕ್ಷಗಾನ ಬಯಲಾಟಕ್ಕೆ ಕಾಲಮಿತಿಯನ್ನೂ ತಂದು ಇತರರಿಗೆ ಮಾದರಿಯೂ ಆದರು” ಎಂದು ಇಡಗುಂಜಿ ಮೇಳದ ಹಿರಿಮೆಯನ್ನು ಕೊಂಡಾಡಿದರು. ಮತ್ತೊಬ್ಬ ಅತಿಥಿ ಅರ್ಥಧಾರಿ, ಚಿಂತಕ, ಲೇಖಕ ವಿದ್ವಾನ್ ಗ.ನಾ.ಭಟ್ಟ, ಮೈಸೂರು ಅವರು ಕೆರೆಮನೆ ಶಿವಾನಂದ ಹೆಗಡೆಯವರು ಅನುಷ್ಠಾನಕ್ಕೆ ತಂದ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಇಡೀ ಕರ್ನಾಟಕಕ್ಕೆ ಅಷ್ಟೇ ಅಲ್ಲ, ಇಡೀ ಭಾರತಕ್ಕೇ ಮಾದರಿಯಾದುದು. ಇದರ ಹಿಂದೆ ಕಠಿಣ ಪರಿಶ್ರಮವಿದೆ. ಯಾವುದೇ ಜಾತಿ ಬೆಂಬಲವಿಲ್ಲದೆ, ಮಠಮಾನ್ಯಗಳ ಆಶ್ರಯವೂ ಇಲ್ಲದೆ, ಸರಕಾರದಿಂದ ಸಿಗುವ ಅತ್ಯಲ್ಪ ಆರ್ಥಿಕ ನೆರವಿನಿಂದ ಹಾಗೂ ಕಲಾಭಿಮಾನಿಗಳು, ಕಲಾಪೋಷಕರು ನೀಡುವ ಧನ ಸಹಾಯದಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜರುಗುವ ಈ ನಾಟ್ಯೋತ್ಸವ ಇಡೀ ಭಾರತಕ್ಕೇ ಹೆಮ್ಮೆ ತರುವ ಸಂಗತಿ. ಇದರ ಅಚ್ಚುಕಟ್ಟುತನ, ಶಿಸ್ತು, ಒಪ್ಪ, ಓರಣ, ಸಮಯಪಾಲನೆ. ಊಟೋಪಚಾರ ಎಲ್ಲವೂ ಮನ ಸೆಳೆಯುವಂತಿವೆ; ಮನಸ್ಸನ್ನು ಅರಳಿಸುವಂತಿವೆ; ಮುದಕೊಡುವಂತಿವೆ. ಅದಕ್ಕಾಗಿ ಸಮಯ ಹೊಂದಿಸಿಕೊಳ್ಳುವ ಶಿವಾನಂದ ಹೆಗಡೆ ಮತ್ತು ಅವರ ಸಿಬ್ಬಂದಿ ನಿಜಕ್ಕೂ ಅಭಿನಂದನಾರ್ಹರು ಎಂದು ನಾಟ್ಯೋತ್ಸವ ಸಮಿತಿಯ ಶಿಸ್ತು ಹೊಣೆಗಾರಿಕೆಯನ್ನು ಪ್ರಶಂಸಸಿದರು.

ಶಿವಾನಂದ ಹೆಗಡೆಯವರು ಒಬ್ಬ ಯಕ್ಷಗಾನ ಕಲಾವಿದನಾಗಿ, ನಿರ್ದೇಶಕನಾಗಿ ಯಕ್ಷಗಾನದ ಆಹಾರ್ಯ ವಿಚಾರದಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಗುಣವಂತೆ ಯಕ್ಷಾಂಗಣದಲ್ಲಿ ಯಕ್ಷಗಾನ ವಾತಾವರಣ ನಿರ್ಮಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದು. ಇಡೀ ಉತ್ತರ ಕನ್ನಡ ಜಿಲ್ಲೆಯೇ ಅಚ್ಚರಿ ಪಡುವಂತೆ ಯಕ್ಷಗಾನಕ್ಕಾಗಿಯೇ ರಂಗಮಂದಿರವೊಂದನ್ನು ನಿರ್ಮಿಸಿದ ಕೀರ್ತಿ ಕೆರೆಮನೆ ಶಂಭು ಹೆಗಡೆ ಮತ್ತು ಅವರ ಮಗ ಶಿವಾನಂದ ಹೆಗಡೆಯವರಿಗೆ ಸಲ್ಲಬೇಕು. 90 ವರ್ಷ ಇತಿಹಾಸವುಳ್ಳ ಯಕ್ಷಗಾನ ಮನೆತನವೊಂದು ಇನ್ನೂ ತನ್ನ ಜೀವಂತಿಕೆಯನ್ನು ಸ್ಫುಟಗೊಳಿಸುತ್ತಿರುವುದು, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಯಕ್ಷಗಾನ ಪ್ರದರ್ಶಿಸುತ್ತಿರುವುದು, ಒಂದೇ ಸೂರಿನಡಿಯಲ್ಲಿ ಹಲವು ಕಲಾಪ್ರಕಾರಗಳನ್ನು ಪ್ರತ್ಯಕ್ಷಗೊಳಿಸುತ್ತಿರುವುದು ಇಡೀ ಯಕ್ಷಗಾನ ಪ್ರಪಂಚಕ್ಕೇ ಒಂದು ಹೆಮ್ಮೆಯ ಸಂಗತಿಯಾಗಿದೆ; ನಾಡಿನ ಕೀರ್ತಿಯ ಪತಾಕೆಯೂ ಆಗಿದೆ” ಎಂದರು.

ಕೊನೆಗೆ ಅಧ್ಯಕ್ಷ ಭಾಷಣದಲ್ಲಿ ಬಿ.ಎನ್.ವಾಸರೆ ಅವರು “ಹಿಂದೆ ಕಲಾಪೋಷಣೆಗೆ ರಾಜಾಶ್ರಯವಿತ್ತು. ಇಂದು ನಾವು ಕಲೆಯನ್ನು ಉಳಿಸಿಕೊಳ್ಳುವುದಕ್ಕೆ ಸರಕಾರವನ್ನು ಅವಲಂಬಿಸಬೇಕಿದೆ. ಆದರೆ ಅವರಿಂದ ಹಣ ಪಡೆಯುವುದಕ್ಕೆ ಅವರನ್ನು ಓಲೈಸುವ ಸಂದರ್ಭವಿದೆ. ಯಕ್ಷಗಾನಕ್ಕೆ ಉತ್ತರ ಕನ್ನಡ ಜಿಲ್ಲೆಯವರ ಕೊಡುಗೆ ಅಪಾರವಾದುದು” ಎಂದು ಹೇಳಿದರು.

ಸಭಾಕಾರ್ಯಕ್ರಮದ ಅನಂತರ ಹೈದರಾಬಾದ್‌ನ ಅಮೃತಾಸಿಂಗ್ ಅವರಿಂದ ‘ಕೂಚುಪುಡಿ’ ನೃತ್ಯ ನಡೆಯಿತು. ಸುಮಾರು ಒಂದೂಕಾಲು ಗಂಟೆ ಏಕಾಕಿನಿಯಾಗಿ ನೃತ್ಯ ಪ್ರದರ್ಶಿಸಿದ ಅವರು ದಿಟಕ್ಕೂ ಅವರೊಬ್ಬ ಅದ್ಭುತ ಅಭಿನೇತ್ರಿ ಅನ್ನುವುದನ್ನು ಸಾಬೀತುಪಡಿಸಿದರು. ಅನಂತರ ರಾಷ್ಟ್ರೀಯ ಪುರಸ್ಕೃತ ಗರ್ತಿಕೆರೆ ರಾಘಣ್ಣ ಅವರು ತಮ್ಮ ಮಗಳು ಮತ್ತು ಮೊಮ್ಮಗಳೊಡನೆ ಸುಗಮ ಸಂಗೀತವನ್ನು ನಡೆಸಿಕೊಟ್ಟರು. ಕನ್ನಡದ ಕೆಲವು ಖ್ಯಾತ ಕವಿಗಳ ಹಾಡುಗಳನ್ನು ಎತ್ತಿಕೊಂಡು, ಅವಕ್ಕೆ ರಾಗಸಂಯೋಜನೆ ಮಾಡಿ ಮನೋಜ್ಞವಾಗಿ ಹಾಡಿದ್ದು ಜನಕ್ಕೆ ಖುಷಿ ನೀಡಿತು. ಅದಾದ ನಂತರ ಬೆಂಗಳೂರಿನ ಸೋನಾಲಿಕಾ ತಂಡದವರಿಂದ ‘ಓಡಿಸ್ಸಿ’ ನೃತ್ಯ ಸಾಂಗಗೊಂಡಿತು. ತುಂಬಾ ರೋಚಕವಾಗಿ ಅಭಿನಯಿಸಿದ ಅವರು ಪ್ರೇಕ್ಷಕರ ಕಣ್ಮನಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದರು.

ಕಾರ್ಯಕ್ರಮದಲ್ಲಿ ಪ್ರೇಕ್ಷಕರು
ಕಾರ್ಯಕ್ರಮದಲ್ಲಿ ಪ್ರೇಕ್ಷಕರು

20-03-2024...

ರಾಷ್ಟ್ರೀಯ ನಾಟ್ಯೋತ್ಸವದ ಕೊನೆಯ ದಿನ 20-03-2024ರಂದು ಕಲಾಸಂಘಟಕ ಶುಂಠಿ ಸತ್ಯನಾರಾಯಣ ಭಟ್ಟ, ಸಾಗರ, ಹಂಪಿ ಯೂನಿವರ್ಸಿಟಿಯ ಪ್ರಾಧ್ಯಾಪಕ, ಜಾನಪದತಜ್ಞ ಡಾ. ಮೋಹನ್ ಕುಂಟಾರ್ ಮತ್ತು ‘ಕಣಿಪುರ’ ಯಕ್ಷಗಾನ ಪತ್ರಿಕೆಯ ಸಂಪಾದಕ ನಾರಾಯಣ ಚಂಬಲ್ತಿಮಾರ್ ಅವರಿಗೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿ ಸನ್ಮಾನವನ್ನು ಹಮ್ಮಿಕೊಂಡಿತ್ತು.
ಮೊದಲಿಗೆ ಮಾತನಾಡಿದ ಶುಂಠಿ ಸತ್ಯನಾರಾಯಣ ಭಟ್ಟರು “ನಾನೇನೂ ಯಕ್ಷಗಾನದಲ್ಲಿ ಸಾಧನೆ ಮಾಡಿದವನಲ್ಲ; ಆದರೆ ಸಂಘಟನೆ ಮಾಡಿದ್ದೇನೆ; ಬಚ್ಚಗಾರು ಮೇಳದ ವ್ಯವಸ್ಥಾಪಕನಾಗಿ ಮೇಳ ನಡೆಸಿದ್ದೇನೆ; ಗುಣವಂತೆಯ ಈ ಯಕ್ಷಾಂಗಣವನ್ನು ನಾನಿನ್ನೂ ನೋಡಿರಲಿಲ್ಲ. ನನಗೊಂದು ಸನ್ಮಾನವನ್ನು ಏರ್ಪಡಿಸಿ ಶಿವಾನಂದ ಹೆಗಡೆಯವರು ಇಲ್ಲಿಗೆ ಬರುವಂತೆ ಮಾಡಿದ್ದಾರೆ. ಈ ಪರಿಸರ ನೋಡಿ ನನಗೆ ತುಂಬಾ ಸಂತೋಷವಾಗಿದೆ; ಸನ್ಮಾನದಿಂದಲೂ ನನಗೆ ತೃಪ್ತಿಯಾಗಿದೆ ಎಂದು ತಮ್ಮ ಅಂತರಂಗದ ಅಳಲನ್ನು ಪ್ರಾಮಾಣಿಕವಾಗಿ ನಿವೇದಿಸಿಕೊಂಡರು.

ಎರಡನೆಯವರಾಗಿ ಮಾತನಾಡಿದ ಡಾ. ಮೋಹನ್ ಕುಂಟಾರ್ ಅವರು ಶಂಭು ಹೆಗಡೆ ಅವರು ಯಕ್ಷಗಾನದ ಒಂದು ಮಿಥ್; ಯಕ್ಷಗಾನಕ್ಕೊಂದು ಮಾರ್ಗ, ಪರಂಪರೆ ಹಾಕಿಕೊಟ್ಟವರು; ಅದನ್ನು ಶಿವಾನಂದ ಹೆಗಡೆಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಾನು ಎಷ್ಟೋ ವರ್ಷಗಳ ಹಿಂದೆ ನೋಡಿದ ಶಂಭು ಹೆಗಡೆಯವರ ಹರಿಶ್ಚಂದ್ರ ಪಾತ್ರ ನನ್ನಲ್ಲಿ ಇನ್ನೂ ಒಂದು ಪ್ರತಿಮೆಯಾಗಿ ಉಳಿದಿದೆ. ಅವರ ಪಾತ್ರಗಳಲ್ಲಿ ಬೇರೆ ಬೇರೆ ಕಲಾಪ್ರಕಾರಗಳ ಅಭಿವ್ಯಕ್ತಿಯನ್ನು ಕಾಣುತ್ತಿದ್ದೆವು. ಒಬ್ಬ ಪರಿಪೂರ್ಣ ಕಲಾವಿದನಾಗುವುದಕ್ಕೆ ಭಾವನೆಗಳು ಬೇಕು; ಮಾನವೀಯ ಸಂವೇದನೆಗಳು ಬೇಕು. ಇವೆಲ್ಲವನ್ನೂ ಶಂಭು ಹೆಗಡೆ ಹೊಂದಿದ್ದರು. ಆದರೆ ಇಂದೇನಾಗಿದೆ? ಶಂಭು ಹೆಗಡೆಯಂತಹ ಒಬ್ಬ ಮೇರು ಕಲಾವಿದನನ್ನು ಕಾಣುವುದು ಕಷ್ಟವಾಗಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಹಾವಳಿಗಳಿಂದ ನಾವು ಎಲ್ಲ ಸಂವೇದನೆಗಳನ್ನೂ ಕಳೆದುಕೊಂಡಿದ್ದೇವೆ” ಎಂದರು.

ಕೊನೆಯದಾಗಿ ಮಾತನಾಡಿದ ಚಂಬಲ್ತಿಮಾರ್ ಅವರು “ಇಂದು ತಮ್ಮನ್ನು ತಾವು ಕಾಣಿಸಿಕೊಳ್ಳುವುದಕ್ಕೆ ಬೇಕಾದಷ್ಟು ಮೇಳಗಳಿವೆ. ಆದರೆ ಅನ್ಯ ಕಲೆಗಳನ್ನು ಪ್ರದರ್ಶಿಸುವುದಕ್ಕೆ ಯಾವ ಮೇಳವೂ ಇಲ್ಲ. ಅದಿದ್ದರೆ ಇಡಗುಂಜಿ ಮೇಳ ಒಂದೇ. ಈ ದೃಷ್ಟಿಯಲ್ಲಿ ಈ ಮೇಳದ ಸಾಧನೆ, ಚಟುವಟಿಕೆ, ಕಲಾಸೇವೆ ಅನನ್ಯ, ಅಪೂರ್ವ. ಶಿವಾನಂದ ಹೆಗಡೆ ಹಮ್ಮಿಕೊಂಡಿರುವ ಮತ್ತು ಸತತವಾಗಿ ಕಳೆದ ಹದಿನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಕಾರ್ಯಕ್ರಮ ದಿಟಕ್ಕೂ ಅರಿವಿನ ಹಬ್ಬವಾಗಿದೆ. ಶಂಭು ಹೆಗಡೆಯವರ ಕಲ್ಪನೆಯ ಬೀಜ, ಮೌಲ್ಯಗಳ ಬೀಜ ಇಂದು ಶಿವಾನಂದ ಹೆಗಡೆಯವರ ಕರ್ತೃತ್ವ ಶಕ್ತಿಯಲ್ಲಿ, ಸೃಜನಶೀಲತೆಯ ಹಾಸು-ಬೀಸಿನಲ್ಲಿ ಗಿಡವಾಗಿ, ಮರವಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ಯಕ್ಷಗಾನದ ಹಲವು ಯೋಜನೆಗಳ ಫಲ-ಪುಷ್ಪಗಳು ನಾಡಿನ ಜನೆತೆಗೆ ಸಿಗುತ್ತಿರುವುದು ನಾಡಿನ ಪುಣ್ಯ ಎಂದು ಹೇಳುತ್ತಾ ಕೆರೆಮನೆ ಮೇಳದ ಹೆಗ್ಗಳಿಕೆಯನ್ನು ಸಾದರಪಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಅವರು “ನಾನು ಇಡಗುಂಜಿ ಮೇಳದ ಅನೇಕ ಆಟಗಳನ್ನು ನೋಡಿದ್ದೇನೆ. ಸನಾತನ ಸಂಸ್ಕೃತಿಯನ್ನು ಉಳಿಸುವಲ್ಲಿ, ಹರಡುವುದರಲ್ಲಿ ಕೆರೆಮನೆ ಮೇಳಕ್ಕೆ ತನ್ನದೇ ಆದ ಇತಿಹಾಸವಿದೆ. ಬೇರೆ ಯಾವ ಮೇಳದವರೂ ಮಾಡದ ಕೆಲಸವನ್ನು ಅದು ಮಾಡಿದೆ. ಪೌರಾಣಿಕ ಪ್ರಸಂಗವನ್ನೇ ಎತ್ತಿ ಆಡಿದೆ. ಈ ನೆಲೆಯಲ್ಲೇ ಅದು ಸನಾತನ ಸಂಸ್ಕೃತಿಯನ್ನು ಕಾಪಾಡಿದೆ ಎಂದು ಹೇಳುತ್ತಾ ಕೆರೆಮನೆ ಮೇಳದ ವೈಶಿಷ್ಟ್ಯವನ್ನು ಬಿಚ್ಚಿಟ್ಟರು.
ಮತ್ತೊಬ್ಬ ಅತಿಥಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಧರ ಹೆಗಡೆಯವರು “ಯಕ್ಷಗಾನದಿಂದ ತಾನೇನು ಪಡೆದಿದ್ದೇನೆ ಮತ್ತು ತಾನೇನು ಯಕ್ಷಗಾನಕ್ಕೆ ಕೊಟ್ಟಿದ್ದೇನೆ ಅನ್ನುವುದರ ಬಗ್ಗೆಯೇ ಕೇಂದ್ರೀಕರಿಸಿ ಮಾತನಾಡಿದ ಅವರು ಪ್ರಾತ್ಯಕ್ಷಿಕೆ, ರಂಗಪ್ರಯೋಗ, ಪ್ರದರ್ಶನ ಮೊದಲಾದವುಗಳ ಮೂಲಕ ಯಕ್ಷಗಾನವನ್ನು ಉಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಇನ್ನೊಬ್ಬ ಅತಿಥಿ ಸ್ಥಳೀಯ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಗಣಪಯ್ಯ ಗೌಡರು “ನಾವು ಯಕ್ಷಗಾನ ಮಾಡುತ್ತಿರುವುದು ಲಾಭಕ್ಕಾಗಿ ಅಲ್ಲ. ಇದರಿಂದ ಪ್ರಚಾರ ಆಗುತ್ತದೆ; ನಮಗೆ ಸಂತೋಷ ಆಗುತ್ತದೆ. ಅದಕ್ಕಾಗಿ ಯಕ್ಷಗಾನ ಆಡಿಸುತ್ತೇವೆ. ತಂದೆ ಮಾಡಿದ್ದನ್ನು ಇಂದಿನ ಮಕ್ಕಳು ಮಾಡುವುದಿಲ್ಲ. ಆದರೆ ಶಿವಾನಂದ ಹೆಗಡೆಯವರು ತಂದೆಯವರು ಮಾಡಿದ್ದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇವರು ನಮ್ಮೆಲ್ಲರ ಅಭಿಮಾನದ ವ್ಯಕ್ತಿ ಎಂದು ಹೇಳುತ್ತಾ ತಮ್ಮ ಮತ್ತು ತಮ್ಮ ಊರಿನ ಅಭಿಮಾನವನ್ನು ವ್ಯಕ್ತಪಡಿಸಿದರು.

ಅಂದಿನ ಸಭಾಧ್ಯಕ್ಷತೆಯನು ವಹಿಸಿದ್ದ ಖ್ಯಾತ ಸಾಹಿತಿ, ಕಲಾಪೋಷಕ ಮೈಸೂರಿನ ಜಿ.ಎಸ್. ಭಟ್ಟರು “ಇದೊಂದು ಅಪರೂಪದ ಕಾರ್ಯಕ್ರಮ. ಕಳೆದ ಐದು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ ರಂಗಾಯಣದ ಬಹುರೂಪಿಗೆ ಸರಕಾರ ದೊಡ್ಡ ಪ್ರಮಾಣದಲ್ಲೇ ಆರ್ಥಿಕ ನೆರವನ್ನು ನೀಡುತ್ತದೆ. ಕೆರೆಮನೆ ಮೇಳದ ರಾಷ್ಟ್ರೀಯ ನಾಟ್ಯೋತ್ಸವಕ್ಕೆ ಸರಕಾರ ಕನಿಷ್ಠ ₹ 25 ಲಕ್ಷಗಳ ಸಹಾಯವನ್ನಾದರೂ ನೀಡಬಹುದಿತ್ತು. ಅದನ್ನೂ ನೀಡುತ್ತಿಲ್ಲ. ಹಾಗೆ ಸಹಾಯ ನೀಡಬೇಕೆಂದು ನಾನು ಸರಕಾರವನ್ನು ಕೇಳಿಕೊಳ್ಳುತ್ತೇನೆ. ಯಕ್ಷಗಾನ ಅಕಾಡೆಮಿ ಉತ್ತರ ಕನ್ನಡ ಜಿಲ್ಲೆಯ ಯಾರನ್ನೂ ಸೇರಿಸಿಕೊಂಡಿಲ್ಲ. ಇದೊಂದು ಪಕ್ಷಪಾತ ಧೋರಣೆ. ಇಂಥಾದ್ದು ಆಗಬಾರದಿತ್ತು. ವಚನ ಸಾಹಿತ್ಯವನ್ನು ಅಭಿವೃದ್ಧಿ ಪಡಿಸಲು ಸರಕಾರ ವಿಶ್ವ ವಿದ್ಯಾಲಯವನ್ನು ಸ್ಥಾಪಿಸುತ್ತದೆ. ಆದರೆ ಯಕ್ಷಗಾನದಂತಹ ಬಹುದೊಡ್ಡ ಕಲಾಪ್ರಕಾರವನ್ನು ಬೆಳೆಸಲು, ಸಂರಕ್ಷಿಸಲು ಯಾಕೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಬಾರದು? ಇದನ್ನು ಕುರಿತು ನಾನು ಆಗ್ರಹಪಡಿಸುತ್ತೇನೆ ಎಂದು ಸಾತ್ವಿಕ ಆಕ್ರೋಶವನ್ನು ವ್ಯಕ್ತಪಡಿಸಿದರು.

ಜಿ.ಎಸ್.ಭಟ್ಟರ ಅಧ್ಯಕ್ಷ ಭಾಷಣಕ್ಕೆ ಪ್ರತಿಕ್ರಿಯಿಸುತ್ತಾ ವಂದನಾರ್ಪಣೆ ಸಲ್ಲಿಸಿದ ಶಿವಾನಂದ ಹೆಗಡೆಯವರು “ಉಪ್ಪಿನ ನೆಂಟಸ್ತಿಕೆ ಕುಡಿಯುವ ನೀರಿಗೆ ಬರ” ಅನ್ನುವಂತೆ ಯಕ್ಷಗಾನಕ್ಕೆ ವಿಶ್ವವಿದ್ಯಾಲಯ ಇರಲಿ ‘ಒಂದು ಯಕ್ಷಗುರುಕುಲವನ್ನು ನಡೆಸುವುದಕ್ಕೂ ಸರಕಾರದಿಂದ ಯಾವ ಅನುದಾನವೂ ಸಿಗುತ್ತಿಲ್ಲ; ಬೆಂಬಲವೂ ಇಲ್ಲ. ನಮ್ಮ ವ್ಯಥೆಯ ಕಥೆಯನ್ನು ಹೇಳಿ ಏನೂ ಪ್ರಯೋಜನವಿಲ್ಲ. ಸಿನಿಮಾಗಳಿಗೆ ಸಬ್ಸಿಡಿ ನೀಡುತ್ತಾರೆ. ಆದರೆ ನಮಗೆ, ಯಕ್ಷಗಾನದವರಿಗೆ ಏನನ್ನೂ ಕೊಡುವುದಿಲ್ಲ; ಸಾಲ ಕೊಡುವವರೂ ಇಲ್ಲ. ಅಂತಹ ದಯನೀಯ ಸ್ಥಿತಿ ನಮ್ಮದು. ನಮ್ಮ ಸುಖ-ದುಃಖ ಸರಕಾರಕ್ಕೆ ಅರ್ಥವಾಗಬೇಕು. ಅದು ಆಗುವುದು ಎಂದೋ? ಎಂದು ತಮ್ಮ ಅಳನ್ನು ತೋಡಿಕೊಂಡರು.

ಸರಕಾರದ ಅವೆಷ್ಟೋ ಉತ್ಸವಗಳು ಇಂದು ಕಣ್ಮರೆಯಾಗಿವೆ. ಆದರೆ 90 ವರ್ಷಗಳ ಇತಿಹಾಸವುಳ್ಳ ನಮ್ಮ ಇಡಗುಂಜಿ ಮೇಳ ಸರಕಾರ ನೀಡುವ ಅತ್ಯಲ್ಪ ಆರ್ಥಿಕ ನೆರವಿನಿಂದ ಮತ್ತು ಕಲಾಭಿಮಾನಿಗಳು ನೀಡುವ ದೇಣಿಗೆ ಮತ್ತು ಅವರ ಇತರ ಸಹಾಯಗಳಿಂದ ಇಂದಿಗೂ ಪ್ರದರ್ಶನ ನೀಡುತ್ತಿದ್ದು, ಕಳೆದ 14 ವರ್ಷಗಳಿಂದ ರಾಷ್ಟ್ರೀಯ ನಾಟ್ಯೋತ್ಸವವನ್ನೂ ನಡೆಸಿಕೊಂಡು ಬಂದಿದ್ದೇವೆ. ಇದರ ಸಾಫಲ್ಯ ವೈಫಲ್ಯ ನಿಮಗೆ ಸೇರಿದ್ದು ಎಂದು ತಮ್ಮ ಸಂಸ್ಥೆಯ ಏಳು-ಬೀಳುಗಳನ್ನು ಆತ್ಮೀಯವಾಗಿ ತೋಡಿಕೊಂಡರು. ತಮಗೆ ಸಹಾಯ ಮಾಡಿದ ಎಲ್ಲರನ್ನೂ ನೆನೆಯುತ್ತಾ ಅವರು ಮಾಡಿದ ಅಂದಿನ ವಂದನಾರ್ಪಣೆ ಹೃದಯಸ್ಪರ್ಶಿಯಾಗಿತ್ತು.

ಅನಂತರ ಹೈದರಾಬಾದ್‌ನ ಮುಕ್ತಿಶ್ರೀ ಮತ್ತು ಅವರ ತಂಡದವರಿಂದ ‘ಕಥಕ್ ನೃತ್ಯ’ ಮತ್ತು ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡದವರಿಂದ ‘ಶರಸೇತು ಬಂಧ’ ಬಯಕಲಾಟ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT