ಅಮೆರಿಕದ ಬ್ಯಾಂಕೊಂದರ ಐ.ಟಿ ವಲಯದಲ್ಲಿ ಉನ್ನತ ಹುದ್ದೆಯಲ್ಲಿರುವ ಮೋಹಿತ್, ಕೆಲಸದಲ್ಲಿ ಮನಸ್ಸಿಲ್ಲದೆ ಮಧ್ಯಾಹ್ನ ಕಳೆಯುತ್ತಲೇ ಆಫೀಸಿನೆದುರು ಹಡ್ಸನ್ ನದಿ ತಟದ ಚಾರಣಪಥದಲ್ಲಿ ಕಲ್ಲುಬೆಂಚೊಂದರ ಮೇಲೆ ಸ್ಟಾರ್ ಬಕ್ಸ್ ಕಾಫಿ ಹೀರುತ್ತ ಕುಳಿತುಬಿಟ್ಟಿದ್ದ. ಹಡ್ಸನ್ ನದಿಯ ಸಮಕ್ಷಮದಲ್ಲಿ ಮೋಹಿತ್ ಎಂದಿಗೂ ಇಷ್ಟೊಂದು ಅನ್ಯಮನಸ್ಕನಾಗಿದ್ದಿಲ್ಲ.

ಪ್ರತಿದಿನ ಆಫೀಸಿಗೆ ಬಂದವನೊಮ್ಮೆ ಕೆಲವೊಂದು ಅಂತರ್ಜಾಲ ವಿಳಾಸಗಳ ಒಳಹೊಕ್ಕ ನಂತರವೇ ಕೆಲಸಕ್ಕೆ ತೊಡಗುತ್ತಿದ್ದ. ಅಂತರ್ಜಾಲದಲ್ಲಿ ಪ್ರತಿಯೊಂದು ಪುಟಕ್ಕೂ ಒಂದೊಂದು ವಿಳಾಸ. ಅನುದಿನದ ಭೇಟಿಗೆ ಅನುಕೂಲವಾಗುವಂತೆ ಕೆಲ ಪುಟಗಳ ವಿಳಾಸಗಳನ್ನು ತನ್ನ ಮೆಚ್ಚಿನದೆಂದು ಗುರುತುಹಚ್ಚಿದ್ದ.

ಮೂರು ವಾರಗಳ ಹಿಂದೆ ನ್ಯೂಯಾರ್ಕಿನ ದಿನಪತ್ರಿಕೆಯೊಂದರ ಅಂತರ್ಜಾಲ ಪ್ರತಿಯಲ್ಲಿ ಅವನೋದಿದ ಸುದ್ದಿ ತನ್ನ ಬದುಕಿನ ನಿಶ್ಚಿತ ಧ್ಯೇಯಗಳನ್ನೇ ಕಲಕಿದಂತಾಗಿತ್ತು. ಆ ಸುದ್ದಿ ಓದಿದ ಮೊದಲಿಗೆ ದಿಗ್ಭ್ರಮೆಯಾಗಿತ್ತು. ನಂತರ ವಿಷಾದ, ವಿಮರ್ಶೆ, ಕೊನೆಗೆ ಕೆಲಹೊತ್ತು ಪ್ರಶ್ನೆಗಳ ಧಾರಣಕ್ಕೆ ಅನುವಾಗುವಂತೆ ತನ್ನೊಳಗನ್ನು ಖಾಲಿ ಮಾಡಿಕೊಳ್ಳುವವನಂತೆ ಎರಡು ದಿವಸ ಮಂಕಾಗಿದ್ದ.

ಅದು ಅವನೇ ಹೌದೋ ಅಲ್ಲವೋ ಎಂಬ ಅನುಮಾನ. ಹೌದು, ಅವನೇ... ತನ್ನ ಇಂಜಿನಿಯರಿಂಗ್ ಸಹಪಾಠಿ ಸಂಗಮೇಶ್ ಹಿರೇಮಠ್. ಅದೇ ದುಂಡು ಮುಖ. ಫ್ರೆಂಚ್ ಗಡ್ಡ. ಕಣ್ಣುಗಳಲ್ಲಿ ಅದೇ ಹೊಳಪು. ಅವನ ಸಾಮರ್ಥ್ಯದ ಬಗ್ಗೆ ಅನುಮಾನವಿಲ್ಲ.

ಆದರೆ ಇಂಥದ್ದೊಂದು ಸಾಹಸಕ್ಕೆ ಕೈ ಹಾಕುತ್ತಾನೆಂದು ಮೋಹಿತ್ ಕನಸಿನಲ್ಲೂ ಊಹಿಸಿರಲಿಲ್ಲ. ಹೌದು, ಬಾಗಲುಕೋಟೆಯ ಸಂಗಮೇಶ್ ಹಿರೇಮಠ್ ಅಮೆರಿಕದ ನಂಬರ್ ಒನ್ ಬ್ಯಾಂಕಿನ ಅತಿದೊಡ್ಡ ಸಾಫ್ಟ್ವೇರನ್ನು ಸಂಪೂರ್ಣ ನಿಷ್ಕ್ರಿಯವಾಗುವಂತೆ ಹ್ಯಾಕ್ ಮಾಡಿದ್ದ!

ಅನಿಶ್ಚಿತ ಭ್ರಮಣದಲ್ಲೂ ಅವಿಚ್ಛಿನ್ನವಾದ ಮನೋವಿನ್ಯಾಸ ಅವನದು. ಅದರದೇ ಯಾವುದೋ ಒಂದು ಕೀಲಿಬಿಂದುವಿಗೆ ಬೆರಳು ವಿರಮಿಸುತ್ತಲೇ ಸೋಕಿರಬೇಕು. ಅದೇ ಅರಿವಿರದೆ ಪರದೆಯೊಂದನ್ನು ಪುಳಕ್ಕನೆ ಅರಳಿಸಿರಬೇಕು.

ಸಂಗಮೇಶ್ ಹಿರೇಮಠ್ ಬೆರಗಾಗಿ ದಾರಿ ತಪ್ಪಿರಬೇಕು. ಮೋಹಿತ್ನ ಮನಸ್ಸು- ಬದುಕಿನ ಜಾಲದಲ್ಲಿ ಇಲ್ಲದ ವಿಳಾಸಗಳ ಪುಟಗಳಿಗೆ ಲಗ್ಗೆ ಇಡುತ್ತ ಎತ್ತೆತ್ತಲೋ ತುಡಿಯುತ್ತ ಹೋಯಿತು.

ಎಲ್ಲ ತರ್ಕ ವಿಮರ್ಶೆಗಳ ನಂತರ ಅವನಲ್ಲಿ ತಳೆದ ಅಂತಿಮ ನಿಶ್ಚಯ- ಸಂಗಮೇಶ್ ಹಿರೇಮಠ್ ದಾರಿ ತಪ್ಪಿದನೋ ಅಥವಾ ತಪ್ಪಿನ ದಾರಿ ಹಿಡಿದನೋ... ಎರಡರಲ್ಲಿ ಒಂದು ನಿಜವಿರಲೇಬೇಕು. ಅಥವಾ ಇವೆರಡೂ ನಿಜವಿರಲಾರದೇನೋ?... ಆದರೆ ಹಿರೇಮಠ್ನನ್ನು ಮಾತ್ರ ಕಳೆದುಕೊಳ್ಳಬಾರದು.

ಕಾಲೇಜಿನಲ್ಲಿ ನಾರ್ತ್ ಇಂಡಿಯನ್ಗಳೇ ತುಂಬಿಕೊಂಡಿರುವ, ಅವರ ಅನುಕರಣೆಯಲ್ಲಿ ಬೆಂಗಳೂರಿನವರೂ `ಯೋ..ಯೋ..~ ಹುಡುಗರಂತಾಡುವ ವಾತಾವರಣದಲ್ಲಿ ಬಾಗಲುಕೋಟೆಯ ಸಂಗಮೇಶ್ ಹಿರೇಮಠ್ನ ಪ್ರತಿಭೆ ಸ್ಫೋಟಗೊಂಡಿದ್ದು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕ್ಲಾಸಿನಲ್ಲಿ.

ಬಿಳಿಯ ಬೋರ್ಡಿನ ಮೇಲೆ ಹಸಿರು ಬಣ್ಣದ ಅಕ್ಷರಗಳಲ್ಲಿ ಗಣಿತದ ಸೂತ್ರವೊಂದಕ್ಕೆ ಕಂಪ್ಯೂಟರ್ ಲೆಕ್ಚರರ್ ಪ್ರೋಗ್ರಾಮ್ ಬರೆದಾಗ, ಅದೇಕೆ ಅಷ್ಟು ಕ್ಲಿಷ್ಟಗೊಳಿಸಿದ್ದೀರಿ ಎಂದು, ಒಂದು ಪುಟದ ಪ್ರೋಗ್ರಾಮನ್ನು ಆರೇ ಸಾಲಿಗೆ ಇಳಿಸಿ ಸರಳಗೊಳಿಸಿದ್ದ. ಅದನ್ನು ಕಂಡ ಕ್ಲಾಸಿನ `ಗೀಕ್~ ಹುಡುಗರೆಲ್ಲ ದಂಗಾಗಿ ಹೋಗಿದ್ದರು. ಇಂಥದ್ದೊಂದು ವಿಧಾನವಿದೆ ಎನ್ನುವುದೂ ಅವರಿಗೆಲ್ಲ ಆವರೆಗೆ ತಿಳಿದಿರಲಿಲ್ಲ.

ಹಿರೇಮಠ್ ಈಸ್ `ಫಂಡೂ...~ ಅಂತ ಎಲ್ಲರೂ ತಮ್ಮತಮ್ಮಲ್ಲೇ ಮಾತಾಡಿಕೊಂಡರು.
ಹಿರೇಮಠ್ ಬಾಗಲಕೋಟೆಯವನು, ಹಾಸ್ಟೆಲಿನಲ್ಲಿದ್ದಾನೆ ಎನ್ನುವುದು ಬಿಟ್ಟರೆ ಉಳಿದ ಯಾವ ವಿವರಗಳನ್ನೂ ಕಾಲೇಜಿನ ಸಹಪಾಠಿಗಳಿಗೆ ತಿಳಿಯುವ ಆಸಕ್ತಿಯಿರಲಿಲ್ಲ.

ಅವನ ತಂದೆ ಕೃಷಿಕರಿರಬೇಕು, ಅಷ್ಟೇನು ಅನುಕೂಲಸ್ಥರಲ್ಲ ಎನ್ನುವುದನ್ನು ಹಿರೇಮಠ್ ಯಾರಲ್ಲೂ ಹೇಳದಿದ್ದರೂ, ಯಾರಿಂದಲೂ ತಿಳಿಯದಿದ್ದರೂ, ಅವರವರೇ ಅಂದುಕೊಂಡು ನಂಬಿಬಿಟ್ಟಿದ್ದರು.

ನಡು ಎತ್ತರ, ಸಾಧಾರಣ ರೂಪು, ಅಸಾಧಾರಣ ಕಂಪ್ಯೂಟರ್ ಕೌಶಲ, ಹುಲುಸಾದ ಮೈಕಟ್ಟು... ಹುಡುಗಿಯರು ಅವನಲ್ಲಿ ಆಕರ್ಷಿತರಾಗುವ ಎಲ್ಲ ಸಾಧ್ಯತೆಯಿದ್ದರೂ, ಅವನು ಒಡನಾಟಕ್ಕೇ ಸಿಗುತ್ತಿರಲಿಲ್ಲ. ಎಲ್ಲ ಗುಂಪಿನವರೊಂದಿಗೆ ಬೆರೆಯುತ್ತಿದ್ದರೂ, ಯಾರೊಂದಿಗೂ ಬೌಲಿಂಗ್, ಗೋ ಕಾರ್ಟಿಂಗ್, ಸಿನಿಮಾ, ಪಬ್ ಅಂತ ಸುತ್ತಿದವನಲ್ಲ.

ಹುಡುಗಿಯರಿಗಂತೂ ಕ್ಲಾಸಿನ ಕೊನೆಯ ಬೆಂಚಿನಲ್ಲಿ ಕುಳಿತಿರುವುದರ ಹೊರತಾಗಿ ಅವನ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರುವುದು ಕಾಲೇಜು ಹೊರಗಿನ ಬೇಕರಿ ಎದುರು ಮೋಹಿತ್ ಜೊತೆಯಲ್ಲಿ ನಿಂತು ಸಿಗರೇಟು ಸೇದುತ್ತಿರುವ ದೃಶ್ಯದಲ್ಲಿ ಮಾತ್ರ. ಅವನ ಹಾಸ್ಟೆಲ್ ರೂಮಿನ ತುಂಬ ಕಂಪ್ಯೂಟರಿಗೆ ಸಂಬಂಧಿಸಿದ ಮ್ಯಾಗಜೀನ್ಗಳು, ಸೀಡಿಗಳು ತುಂಬಿಕೊಂಡಿರುತಿದ್ದವು.

ಸದಾ ಅಸ್ತವ್ಯಸ್ಯ ಅವಸ್ಥೆಯಲ್ಲೇ ಇರುತ್ತಿದ್ದ ಅವನ ರೂಮಿನಲ್ಲಿ, ಹೊರ ಮುಚ್ಚಿಕೆಯಿಲ್ಲದೆ ಕಂಪ್ಯೂಟರು ಸದಾ ದಿಗಂಬರಾವಸ್ಥೆಯಲ್ಲೇ ಇರುತ್ತಿತ್ತು. ಕರುಳು ಬಗೆದಂತೆ ಅದರ ವಯರುಗಳು ಕಾರಿಕೊಂಡಿರುತ್ತಿದ್ದವು.

ಅದರ ಬಿಡಿ ಭಾಗಗಳನ್ನು ಬದಲಾಯಿಸುತ್ತಿರುವುದು, ಒಂದು ಕಂಪ್ಯೂಟರಿಂದ ಮತ್ತೊಂದಕ್ಕೆ ಪ್ರೊಸೆಸರ್ಗಳನ್ನು ಅದಲುಬದಲು ಮಾಡುವುದು, ಹೊಸ ಸಾಫ್ಟ್ವೇರುಗಳನ್ನು ತುಂಬಿಕೊಳ್ಳುವುದು, ಹಿರೇಮಠ್ ಏನಾದರೊಂದು ಕಿತಾಪತಿ ಮಾಡುತ್ತಲೇ ಇರುತ್ತಿದ್ದ.

ಅವನ ರೂಮಿಗೆ ಹೋದಾಗೆಲ್ಲ ಮೋಹಿತ್ಗೆ ಏನಾದರೊಂದು ಹೊಸ ವಿಷಯ ತಿಳಿಯುತ್ತಿತ್ತು. ಒಮ್ಮೆ, ಕಂಪ್ಯೂಟರಿನಲ್ಲಿ ಕಾರ್ ರೇಸ್ ಆಡುತ್ತಿರುವಾಗ, ಮಿಕ್ಕೆಲ್ಲ ಕಾರುಗಳು ರೇಸಿಗೆ ಬಿದ್ದು ಓಡುತ್ತಿದ್ದರೆ, ಹಿರೇಮಠ್ ತನ್ನ ಕಾರನ್ನು ರಸ್ತೆ ಬಿಟ್ಟು ಎಲ್ಲೆಲ್ಲೋ ಒಯ್ಯುತ್ತಿದ್ದ.

`ಡ್ಯೂಡ್! ಎಲ್ಲಿ ಹೋಗ್ತಿದ್ಯೋ?~ ಅಂತ ಕೇಳಿದರೆ, `ಹೇ ಖಾಲಿ ರಸ್ತೆ ಮ್ಯಾಲೆ ಹೋಗೋದ್ರಲ್ ಏನ್ ಮಜ ಅದೋ... ಈ ಹಾದಿನಾಗ್ ಏನೇನೆಲ್ಲ ನೋಡ್ಕೋತ್ ಹೋಗ್ಬೌದು...~ ಎಂದು, ಅರಮನೆ, ಮರಳುಗಾಡು, ಪಾರ್ಕು, ಅಂತ ಏನೆಲ್ಲ ಸುತ್ತಾಡಿ, ಅಲ್ಲಲ್ಲಿ ಪಲ್ಟಿ ಹೊಡೆಸಿ, ಕೊನೆಗೆ ಕಾರನ್ನು ಸಮುದ್ರಕ್ಕೆ ಹಾರಿಸಿಬಿಟ್ಟಿದ್ದ! ಕಾರ್ ರೇಸನ್ನು ಹೀಗೆ ಆಡಿದ ಇನ್ನೊಬ್ಬರನ್ನು ಮೋಹಿತ್ ಎಂದೂ ನೋಡಿಲ್ಲ.

ಹಿರೇಮಠ್ `ಗೀಕ್~ ಎನ್ನುವ ವಿಷಯ ಎಲ್ಲರಿಗೂ ತಿಳಿದಿದ್ದರೂ, ಯಾರಿಗೂ ಗೊತ್ತಿರದ ಅವನದೊಂದು ಕರಾಮತ್ತು ಮೋಹಿತ್ಗೆ ಮಾತ್ರ ತಿಳಿದಿತ್ತು. ಕಾಲೇಜಿನ ಕಂಪ್ಯೂಟರ್ ಲ್ಯಾಬಿನ ನೆಟ್ವರ್ಕನ್ನೇ ಹಿರೇಮಠ್ ಸ್ಥಗಿತಗೊಳಿಸಿದ್ದ. ಅದರ ನಿರ್ವಾಹಕರಿಗೇ ಕಾಲೇಜಿನ ನೆಟ್ವರ್ಕ್ ಯಾಕೆ ಕೆಲಸ ಮಾಡುತ್ತಿಲ್ಲ, ಎಲ್ಲಿ ತಪ್ಪಾಗಿರಬಹುದು ಎನ್ನುವುದೂ ಅರ್ಥವಾಗಲಿಲ್ಲ.

ಕೊನೆಗೇ ಅವನೇ ಅವರೊಡನೆ ಕುಳಿತು ಏನಾಗಿದೆಯೆಂದು ಪತ್ತೆ ಹಚ್ಚುವ ನಾಟಕ ಮಾಡಿ ಸರಿ ಮಾಡಿದ್ದ. ಯಾರ ಬಳಿಯೂ ಹೇಳಬಾರದೆಂದು ಮೋಹಿತ್ ಒಬ್ಬನ ಹತ್ತಿರ ಮಾತ್ರ ಈ ವಿಷಯ ಬಾಯಿಬಿಟ್ಟಿದ್ದ.

ಮೋಹಿತ್ ಕೂಡ ಕಾಲೇಜಿನ ಜೊತೆಜೊತೆಯಲ್ಲೆ ಪ್ರೈವೇಟ್ ಕೋರ್ಸುಗಳನ್ನು ಸೇರಿ `ಗೀಕ್~ ಎನಿಸಿಕೊಂಡಿದ್ದ. ಅವನ ಇಂಗ್ಲೀಷು ಉಚ್ಚರಣೆಗೆ, ಹಸಿರು ಕಂಗಳಿಗೆ, ಕಂಪ್ಯೂಟರಿನ ಹೈ-ಫಂಡೂ ತಿಳುವಳಿಕೆಗೆ, ತಿರುಗಾಟದ ಮೋಜಿನ ಯೋಜನೆಗಳಿಗೆ, ಮಾತಿನಲ್ಲಿ ಪಲ್ಲವಿಸುವ ರೀತಿಗೆ ಹುಡುಗಿಯರೆಲ್ಲ ಮರುಳಾಗುತ್ತಿದ್ದರು.

ಹಿರೇಮಠ್ ತನ್ನ ಪಾಡಿಗೆ ತಾನಿರುತ್ತಿದ್ದರಿಂದ ಮೋಹಿತ್ಗೆ ಅವನ ಬಗ್ಗೆ ಅಸೂಯೆಯಾಗಲೀ, ಅವನಲ್ಲಿ ಸ್ಪರ್ಧೆಯಾಗಲೀ ಇರಲಿಲ್ಲ. ಕ್ಯಾಂಪಸ್ ಸೆಲೆಕ್ಷನ್ನಿನಲ್ಲಿ ಮೋಹಿತ್ ಮತ್ತು ಸಂಗಮೇಶ್ ಹಿರೇಮಠ್ ಇಬ್ಬರೂ ಒಂದೇ ಕಂಪನಿಗೆ ಸೆಲೆಕ್ಟ್ ಆದರು.

ಕೆಲಸಕ್ಕೆ ಸೇರಿದ ಮೇಲೆ ಸಂಗಮೇಶ್ ಹಿರೇಮಠ್, ಅಮೆರಿಕದ ಕ್ಲೈಂಟ್ಸ್ ಕೃಪೆಯಿಂದ `ಸ್ಯಾಂಗಿ~ ಆಗಿ, ಕನ್ನಡ ನಾಮಪದಗಳ ಪಟ್ಟಿಗೊಂದು ಕೊಡುಗೆಯಾದ. ಮೋಹಿತ್ ಮೂರು ವರ್ಷದಲ್ಲಿ ಎರಡು ಕಂಪನಿ ಬದಲಿಸಿ, ಕೊನೆಗೆ ಅಮೆರಿಕದ ನೌಕರಿ ಗಳಸಿ, ಅಲ್ಲೂ ಮೂರು ಕಂಪನಿ ಬದಲಿಸಿ, ನಂತರ ಬ್ಯಾಂಕೊಂದರ ಉನ್ನತ ಹುದ್ದೆಯಲ್ಲಿ ಸ್ಥಿರನಾದ.

ಹಿಂದೆ ಫುಡ್ಕೋರ್ಟಿನ ಕಾರಿಡಾರ್ ತುಂಬ ಜನರ ಓಡಾಟ. ಎದುರು ಹಡ್ಸನ್ ನದಿ ಬಂಗಾರದ ಝರಿಯಂತೆ ಮಿರುಗುತ್ತಲೂ ಪ್ರಶಾಂತವಾಗಿತ್ತು. ಪಾರಿವಾಳಗಳ ಗುಂಪು ಅತ್ತಿಂದಿತ್ತ ಕದಲುತ್ತಲೇ ಇತ್ತು.

ನದಿಯೆದುರಿನ ದಿಗಂತದಗಲ ವ್ಯಾಪಿಸಿ ಎತ್ತರೆತ್ತರಕೆ ಒತ್ತೊತ್ತಿ ನಿಂತಿರುವ ನ್ಯೂಯಾರ್ಕಿನ ಕಟ್ಟಡಗಳ ನೆತ್ತಿ ಗಗನದ ಕಿಬ್ಬೊಟ್ಟೆಯಲಿ ಮಿಡುಕುತ್ತಿದ್ದರೆ, ಅದರ ಪಾದಗಳು ನದಿಯಲ್ಲಿ ಅದ್ದಿಕೊಂಡಂತೆ ಇದ್ದವು. ಬೇಸಿಗೆಯಾದ್ದರಿಂದ ಸಂಜೆಯ ಪಾಳಿ ತಡವಿತ್ತು. ಗಂಟೆ ಐದೂವರೆಯಾದರೂ ಅದಷ್ಟೇ ನಡುಮಧ್ಯಾಹ್ನ ದಾಟಿದಂತಿತ್ತು.

ತರುಣಿಯೊಬ್ಬಳು ತೋಳು, ಎದೆ, ಸೊಂಟ, ತೊಡೆಗಳನ್ನು ಬಿಸಿಲ ಜಳಕಕ್ಕೆ ತೆರೆದು, ಐ-ಪಾಡಿನ ಸಂಗೀತದಲಿ ಲೀನವಾಗಿ ಜಾಗ್ ಮಾಡುತ್ತ ಮೋಹಿತ್ ಕುಳಿತಿದ್ದ ಬೆಂಚಿನ ಹಿಂದೆ ಹಾದುಹೋದಳು. ಮೋಹಿತನಿಗೆ ಎಲ್ಲವೂ ನಿನ್ನೆ ಮೊನ್ನೆ ನಡೆದ ಹಾಗನ್ನಿಸುತ್ತಿತ್ತು. ತಾನು ನ್ಯೂಜೆರ್ಸಿಯಲ್ಲೇ ನೆಲೆಸಿ ಏಳು ವರ್ಷವಾಗುತ್ತಾ ಬಂತು. ಹುದ್ದೆಯಲ್ಲಿ ಹೈ ಪ್ರೊಫೈಲ್. ಎರಡು ಮಕ್ಕಳಾದವು.

ಹಿರೇಮಠ್ ಕೂಡ ನ್ಯೂಯಾರ್ಕಿನ ಆಫೀಸಿಗೆ ಬಂದು ಹತ್ತಿರತ್ತಿರ ನಾಲ್ಕು ವರ್ಷವಾಗಿರಬೇಕು. ನ್ಯೂಜೆರ್ಸಿಯ ಜರ್ನಲ್ ಸ್ಕ್ವೇರಿನಿಂದ ಗ್ರೋವ್ ಸ್ಟ್ರೀಟಿನಲ್ಲಿರುವ ತನ್ನ ಮನೆಗೆ ಎಷ್ಟೋ ಸಲ ವೀಕೆಂಡಿನಲ್ಲಿ ಬಂದಿದ್ದಾನೆ. ಆಕಾಶ್, ಬಾಲ, ಎಲ್ಲರೂ ಒಟ್ಟಿಗೆ ರಾತ್ರಿಯಿಡೀ ಗುಂಡು ಹಾಕುತ್ತ ಇಸ್ಪೀಟು ಆಡುತ್ತ ಕಳೆದಿದ್ದೇವೆ. ಆಗಾಗ ಟ್ರೈನಿನ್ಲ್ಲಲೂ ಸಿಗುತ್ತಿರುತ್ತಾನೆ.

ಎಲ್ಲೂ ಇದರ ಸುಳಿವೇ ಸಿಗಲಿಲ್ಲವಲ್ಲ! ಕಿಂಚಿತ್ತೂ ಅನುಮಾನ ಬರದಂತೆ ಈ ಹ್ಯಾಕಿಂಗ್ ಯೋಜನೆಯನ್ನು ಹೇಗೆ ತನ್ನೊಳಗೆ ಮುಚ್ಚಿಟ್ಟುಕೊಂಡಿದ್ದ? ಈಗ ಹಿಂದಿರುಗಿ ನೋಡಿದರೆ ಹೌದಲ್ಲ! ಅವನೆಷ್ಟು ಬದಲಾಗಿದ್ದಾನೆ! ವಿಭೂತಿ ಹಚ್ಚಿಕೊಳ್ಳುವುದನ್ನು ಬಿಟ್ಟಿದ್ದಾನೆ.

ಫ್ರೆಂಚ್ ಗಡ್ಡ ಸಂಭಾಳಿಸುತ್ತಿದ್ದಾನೆ. ಉಡುಗೆಯಲ್ಲಷ್ಟೇ ಅಲ್ಲದೆ ಇಂಗ್ಲೀಷಿನ್ಲ್ಲಲೂ ಸುಧಾರಿಸಿದ್ದಾನೆ. ಅವನ ಇಂಗ್ಲೀಷು ಸುಧಾರಿಸಿದ್ದು ಬಹುಶಃ ಕ್ಯಾರಲ್ ಸಹವಾಸದಿಂದಲೇ ಇರಬೇಕು ಎಂದುಕೊಂಡು ಮೋಹಿತ್, ಖಾಲಿಯಾದ ಕಾಫಿ ಕಪ್ಪನ್ನು ಪಕ್ಕದಲ್ಲಿದ್ದ ಕಸದಬುಟ್ಟಿಗೆ ಹಾಕಿ ಬಂದು ಅದೇ ಕಲ್ಲುಬೆಂಚಿನ ಮೇಲೆ ನದಿ ನೋಡುತ್ತ ಕುಳಿತ.

ಬಿಗಿ ನಿಲುವಿನ ಭರ ನಡಿಗೆಯ ಕ್ಯಾರಲ್ನ ಧಿಮಾಕು ತನ್ನ ತೆಕ್ಕೆಯಲ್ಲಿ ಹೀಗೆ ಬಳುಕುತ್ತಿರುವಾಗೆಲ್ಲ ಇವಳನ್ನೆಷ್ಟು ತಪ್ಪಾಗಿ ತಿಳಿದಿದ್ದೆ ಎಂದು ಸ್ಯಾಂಗಿ ಖೇದಿಸಿದ್ದಿದೆ. ನ್ಯೂಯಾರ್ಕಿನ ಮಿಡ್ಟೌನಿನ ಸೆವೆನ್ತ್ ಅವೆನ್ಯೂನಲ್ಲಿರುವ ಆಫೀಸಿನ ಮೂವತ್ತೈದನೇ ಮಹಡಿಯಲ್ಲಿ ಕುಳಿತು ಕೆಲಸ ನಿರ್ವಹಿಸುವ ಹಲವಾರು ಪ್ರಾಜೆಕ್ಟಿನವರು ಈ ಬ್ರಿಟಿಷ್ ಚೆಲುವೆಯನ್ನು ಬಯಸಿದ್ದಿದೆ. ಅಂಥವಳು ನನ್ನ ತೆಕ್ಕೆಯಲ್ಲಿ ಎನ್ನುವುದನ್ನು ನೆನೆದೇ ಸ್ಯಾಂಗಿ ಹುರುಪುಗೊಂಡಿದ್ದಿದೆ.

ಆಫೀಸಿಗೆ ಬಂದ ಹೊಸತರಲ್ಲಿ, ಕ್ಯಾರಲ್ ಸ್ಯಾಂಗಿಯ ಹಿಂದೆಯೇ ಕುಳಿತಿದ್ದರೂ ಹಾಯ್ ಬೈ ಕೂಡ ಇರಲಿಲ್ಲ. ಕಾರಿಡಾರುಗಳಲ್ಲಿ ಎದುರು ಸಿಕ್ಕಾಗಲೂ ನಗದಿರುವ ಧಿಮಾಕು. ನಿಮ್ಮನ್ನು ಆಳಿದವರು ನಾವೆಂಬ ಅಹಂ ಇರಲಿಕ್ಕೂ ಸಾಕು ಎಂದುಕೊಂಡಿದ್ದ. ಆದರೆ ಒಂದೇ ಪ್ರಾಜೆಕ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡಲು ಆರಂಭಿಸಿದ ಮೇಲೆ ಕ್ರಮೇಣ ಅರ್ಥವಾಗತೊಡಗಿದಳು, ಹತ್ತಿರಾಗತೊಡಗಿದಳು.

ಮ್ಯಾನೇಜರ್ ಹಾರ್ವಿ ಸ್ಯಾಂಗಿ ಮತ್ತು ಕ್ಯಾರಲ್ ಇಬ್ಬರನನ್ನೇ ಕರೆದು ಹೇಳಿದ್ದ- `ಬ್ಯಾಂಕಿನ ಅಷ್ಟೂ ಗ್ರಾಹಕರ ವಿವರಗಳು ನನಗೆ ಬೇಕು. ನಾವು ನಮ್ಮ ಗ್ರಾಹಕರ ವಿವರಗಳು ಬಹಳ ಗೋಪ್ಯವೆಂದು ಹೇಳಿಕೊಳ್ಳುತ್ತಿದ್ದೇವೆ. ಅದು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎನ್ನುವುದನ್ನು ಪರೀಕ್ಷಿಸಬೇಕು. ಅದಕ್ಕೆ ನೀವು ಆ ಸಾಫ್ಟ್ವೇರನ್ನು ಟೆಸ್ಟ್ ಮಾಡಬೇಕು.

ಎಲ್ಲ ವಿಧದಿಂದಲೂ ಗ್ರಾಹಕರ ಮಾಹಿತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡು. ಆಗ, ಏನಾದರೂ ದೋಷಗಳು ಕಂಡುಬಂದರೆ ಸರಿಮಾಡಬಹುದು. ಮತ್ತು ಇದು ಬಹಳ ಗೋಪ್ಯವಾಗಿ ನಡೆಯಬೇಕು. ನಾವು ಮೂವರಿಗಲ್ಲದೆ ಮತ್ಯಾರಿಗೂ ತಿಳಿಯಕೂಡದು~ ಎಂದು ಈಗಿರುವ ಕೆಲಸಗಳ ಜೊತೆಯಲ್ಲಿ ಹೊಸ ಕೆಲಸ ವಹಿಸಿದ್ದ.

ಕ್ಯಾರಲ್ ಅಫೀಸಿನಲ್ಲಿ ಇರುವಷ್ಟು ಹೊತ್ತು ತನ್ನದೇ ಕೆಲಸಗಳಲ್ಲಿ ಬಿಸಿಯಾಗಿದ್ದೇನೆಂದು ಹೇಳಿ, ಸಂಜೆ ಐದರ ನಂತರ ಆಫೀಸಿನಲ್ಲಿ ಯಾರೂ ಇಲ್ಲದಿರುವಾಗ ಅಥವ ಆಫೀಸಿನ ಹತ್ತಿರ ಇನ್ನಿಬ್ಬರು ಹುಡುಗಿಯರೊಂದಿಗೆ ಉಳಿದುಕೊಂಡಿರುವ ತನ್ನ ಅಪಾರ್ಟ್ಮೆಂಟಿಗೆ ಸ್ಯಾಂಗಿಯನ್ನು ಕರೆದೊಯ್ದು, ಹೊಸ ಪ್ರಾಜೆಕ್ಟಿನ ಕುರಿತು ಚರ್ಚಿಸುತ್ತಿದ್ದಳು.

ಗ್ರಾಹಕರ ವಿವರಗಳೆಲ್ಲ ಯಾವ್ಯಾವ ಕಡೆ ಶೇಖರಿಸಿಡಲಾಗುತ್ತದೆ? ಅದನ್ನು ಬಳಸುವ ಸಾಫ್ಟ್ವೇರುಗಳು ಯಾವುವು? ಅದನ್ನು ಪ್ರವೇಶಿಸಲು ಇರುವ ದಾರಿಗಳೇನು? ಆ ಸಾಫ್ಟ್ವೇರಿನ ಕೋಡ್ ಎಲ್ಲಿಯಾದರು ಸಿಗಬಹುದೇ? ಎಂದೆಲ್ಲ ಯೋಚಿಸತೊಡಗಿದರು.

ಮೊದಲಿಗೆ ವಾರಕ್ಕೆರಡು ದಿನಕ್ಕೆ ನಿಗದಿಯಾಗಿದ್ದ ಈ ಕೆಲಸ ಕೊನೆಗೆ ದಿನವೂ ನಡೆಯಲು ಶುರುವಾಯಿತು. ಇದರ ನಡುವೆಯೇ ಕ್ಯಾರಲ್ ಮತ್ತು ಸ್ಯಾಂಗಿಯ ನಡುವೆ ಅಫೇರ್ ಹುಟ್ಟಿಕೊಂಡಿತು.

ವೀಕೆಂಡುಗಳಲ್ಲಿ ಕ್ಯಾರಲ್ ಜೊತೆ ಸುಖಿಸಿದ ನಂತರ, ಅವಳು ನಿದ್ರಿಸುವಾಗ, ಸ್ಯಾಂಗಿ ಲ್ಯಾಪ್ಟಾಪ್ ತೆರೆದು ಕೆಲಸದಲ್ಲಿ ತೊಡಗುತ್ತಿದ್ದ. ತನಗೇ ಅರಿವಿಲ್ಲದಂತೆ ಒಂದರಿಂದ ಮತ್ತೊಂದಕ್ಕೆ ಹಾರುತ್ತ, ಏನೇನೋ ಜಾಲಾಡುತ್ತ, ಬದಲಾಯಿಸುತ್ತ, ಅರಿವಿನ ಸರಸರ ಹರಿವಿಗೆ ತಕ್ಕಂತೆ ಬೆರಳುಗಳು ತಮ್ಮ ಪಾಡಿಗೆ ತಾವು ಕೀಬೋರ್ಡಿನ ಮೇಲೆ ಟಪಟಪನೆ ಕುಣಿದಾಡುತ್ತಿರುವಂತೆ ಸ್ಯಾಂಗಿ ಮುಳುಗಿರುತ್ತಿದ್ದ.

ಅವನ ಈ ತನ್ಮಯತೆ ಕಂಡು ಕ್ಯಾರಲ್ಗೆ ಅಶ್ಚರ್ಯವಾಗುತ್ತಿತ್ತು. ಅವನ ಕಣ್ಣುಗಳ ಚುರುಕಿಗೆ ಮಾರುಹೋಗಿದ್ದಳು. ಕೆಲವೊಮ್ಮೆ ಅವನು ಏನು ನಡೆಸುತ್ತಿದ್ದಾನೆ ಎನ್ನುವುದನ್ನೂ ಅವಳಿಂದ ತಿಳಿಯಲು ಕಷ್ಟವಾಗುತ್ತಿತ್ತು.

ಅವನು ನಮಗೆ ವಹಿಸಿದ ಕೆಲಸದ್ಲ್ಲಲೇ ತೊಡಗಿದ್ದಾನೋ ಅಥವಾ ಬೇರೇನೋ ಯೋಜನೆಯಲ್ಲಿದ್ದಾನೋ ಎನ್ನುವ ಅನುಮಾನವೂ ಬರುತ್ತಿತ್ತು. ಅಂಜನ ಹಾಕಿ ನೋಡುವವರಂತೆ, ಕಾಣುತ್ತಿರುವ ಈ ಕಂಪ್ಯೂಟರಿನ ಪರದೆಯ ಹಿಂದೆ ಅವನ ಸುಪ್ತ ಅರಿವಿಗೆ ಮತ್ತೆನೋ ಗೋಚರವಾಗುತ್ತಿರುವಂತೆ ಅನಿಸುತ್ತಿತ್ತು.

ಎಷ್ಟೋ ಸಲ ಅವನ ಆಲೋಚನಾ ಸರಣಿಗೆ ಮಿಡಿಯಲು ಸಾಧ್ಯವಾಗದೆ, ಅವನ ಅರಿವಿನ ರಭಸಕ್ಕೆ ಸರಿಸಾಟಿಯಾಗಿ ತನ್ನ ಅರಿವನ್ನು ಹರಿಸಲಾಗದೆ ಕಂಗಾಲಾಗಿ ಸೋಲುತ್ತಿದ್ದಳು.
ಆ ಶುಕ್ರವಾರ ಸಂಜೆ ತನ್ನ ಅದೇ ಸೋಲಿನ ಬೆರಗಿನಲ್ಲಿ ಕ್ಯಾರಲ್ ಕೇಳಿದಳು- `ಇವೆಲ್ಲ ನಿನಗೆ ಹೇಗೆ ಗೊತ್ತು ಸ್ಯಾಂಗಿ? ಹೇಗೆ ಸಾಧ್ಯ?~.

ಸ್ಯಾಂಗಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಇಂಥದ್ದೊಂದು ಪ್ರಶ್ನೆಯನ್ನು ಸ್ವತಃ ಅವನೇ ಕೇಳಿಕೊಂಡಿರಲಿಲ್ಲ. ತನ್ನ ನೆತ್ತಿಗೆ ಎದೆ ಒತ್ತುವಂತೆ ಭುಜ ಬಳಸಿ ನಿಂತಿದ್ದ ಕ್ಯಾರಲ್ನತ್ತ ಹೊರಳಿದ. ಮಿದುವಾದ ಸಣ್ಣ ಎದೆಗೆ ಗಲ್ಲ ಒತ್ತಿ ಅವಳ ಕಂಗಳಲ್ಲಿ ಮುಳುಗಿದ. ತನ್ನನ್ನು ತಾನೇ ಪ್ರಶ್ನಿಸಿಕೊಂಡ.

ಅಂತರ್ಜಾಲದ ಪ್ರತಿ ಪುಟಕ್ಕೂ ಒಂದೊಂದು ವಿಳಾಸವಿದೆ, ಒಂದೊಂದು ಗುರುತಿದೆ. ಕಂಪ್ಯೂಟರಿನ ಪ್ರತಿಯೊಂದು ಹಾರ್ಡ್ವೇರಿಗೆ, ಸಾಫ್ಟ್ವೇರಿಗೆ, ಅದರಲ್ಲಿ ಶೇಖರಗೊಂಡ ಹನಿಹನಿ ಮಾಹಿತಿಗೆ....ಈ ಮುಕ್ಕಾಲಡಿ ಉದ್ದದ ಪೆಟ್ಟಿಗೆಯಲ್ಲಿ ಕಾಣುವ ಕಾಣದಿರುವ ಪ್ರತಿಯೊಂದು ವೈಖರಿಯ ಅಸ್ತಿತ್ವಕ್ಕೂ ಒಂದೊಂದು ಗುರುತಿದೆ.

ಆದರೆ ಅದರೊಳಗಿನ ತನ್ನ ಅರಿವಿನ ವಿಹಾರಕ್ಕೆ ಯಾವ ಗುರುತು? ವಿಹಾರವೆಂದರೆ- ಅದು ಹೆಜ್ಜೆ ಅಲ್ಲ, ಅದು ದಾರಿಯೂ ಅಲ್ಲ. ಅದೊಂದು ಏಕಾಂತ ಬಿಂದುವಿನಿಂದ ದಬ್ಬಿಸಿಕೊಂಡರೆ ಹಬ್ಬಿಕೊಳ್ಳುವ ಅನಂತಾಕಾಶ. ಹಾಗಿರುವಾಗ, ಹೆಜ್ಜೆಗುರುತು ಮೂಡಬೇಕು ತಾನೆ ಹೇಗೆ? ಆದರೂ ಪಯಣವಿದೆ. ರಹದಾರಿಗಳಿಂದ ಹೊರತಾದ ಮತ್ತೊಂದಿದೆ.

ಅದು ಅಲ್ಲಗಳದ್ದೇ ಜಗತ್ತು. ಹಣವಲ್ಲ, ಕೀರ್ತಿಯಲ್ಲ, ಸ್ವಾರ್ಥವಲ್ಲ, ಕ್ಯಾರಲ್ ನಿನಗೆ ಹೇಗೆ ಹೇಳುವುದು?... ಅದು ನಿನ್ನೊಂದಿಗೆ ಈಗಷ್ಟೇ ಅನುಭವಿಸಿದ ಭೋಗವಲ್ಲ, ಅದು ಧ್ಯಾನವೂ ಅಲ್ಲ, ತಿಳಿದಿಲ್ಲ ಅಂತಲ್ಲ... ಆದರೂ ವಿವರಿಸಲು ಸಾಧ್ಯವಾಗುತ್ತಿಲ್ಲ... `ಗೊತ್ತಿಲ್ಲ ಕ್ಯಾರಲ್. ಗೊತ್ತಾಗುತ್ತಾ ಹೋಗುತ್ತೆ ಅಷ್ಟೆ. It just occurs to me ಅದನ್ನ ಕಲಿಸೋಕ್ಕಾಗೊಲ್ಲ.

Not every journey has a route map~ ಎಂದು ಜಂಗೇರಿಸಿ ನಗುತ್ತ ಹೇಳಿದ. ಕ್ಯಾರಲ್ ತನ್ನಿಂದ ಇದು ಎಂದಿಗಾದರೂ ಸಾಧ್ಯವಾ ಎಂದು ಕೇಳಿಕೊಂಡಳು. ಅವನನ್ನು ಚುಂಬಿಸಿ ಮಂಚದ ಮೇಲೆ ಒರಗಿ ತನ್ನ ಲ್ಯಾಪ್ಟಾಪ್ ತೆರೆದಳು. ಅದಾಗಿ ಕೆಲವೇ ಘಳಿಗೆಯಲ್ಲಿ ಸ್ಯಾಂಗಿ ಆ ಸಾಫ್ಟ್ವೇರಿನ ಒಳಪ್ರವೇಶಿಸುವುದರಲ್ಲಿ ಯಶಸ್ವಿಯಾದ.

ಅದೇ ಭಾನುವಾರ, ಮಿಥುನದಲಿ ಮುಳುಗೆದ್ದು, ನಡುರಾತ್ರಿ ಎರಡು ಗಂಟೆಗೆ ತನ್ನ ಲ್ಯಾಪ್ಟಾಪಿನಲ್ಲಿ ಆಫೀಸಿನ ನೆಟ್ವರ್ಕಿಗೆ ಕನೆಕ್ಟ್ ಆಗಿ ಅದೇ ಸಾಫ್ಟ್ವೇರಿನ ಒಳಹೊಕ್ಕು ಜಾಲಾಡುತ್ತ ಕುಳಿತಿದ್ದ ಸ್ಯಾಂಗಿ. ಪಕ್ಕದಲ್ಲಿ ಕ್ಯಾರಲ್ ಮಂಚದ ಮೇಲೆ ಬೋರಲು ಮಲಗಿದ್ದಳು.

ಸ್ಯಾಂಗಿ ಆ ಸಾಫ್ಟ್ವೇರಿನ ಪ್ರೋಗ್ರಾಮನ್ನು ವಿಶ್ಲೇಷಿಸಿಸುತ್ತ ಬ್ಯಾಂಕಿನ ಗ್ರಾಹಕರ ವಿವರಗಳನ್ನು ಪಡೆಯುವ ತುಣುಕಿಗಾಗಿ ಹುಡುಕಾಡಿದ. ಆ ಪ್ರೋಗ್ರಾಮಿನ ಉದ್ದಗಳ ಕಣ್ಣಾಡಿಸುತ್ತ ಆಡಿಸುತ್ತ ಅವನು ಒಂದು ಕ್ಷಣ ತಟಸ್ಥನಾದ. ಅವನ ಕಣ್ಣುಗಳು ಅದೇನೋ ಸಾಕ್ಷಾತ್ಕಾರವಾದಂತೆ ಅರಳಿಕೊಂಡವು.

ಮೈಯ ಕಣಕಣದಲ್ಲೂ ಅದುಮಿಡಲಾಗದಂಥ ಉತ್ಸಾಹ. ಅವನ ಹುಡುಕಾಟ ಈಗ ಮತ್ತೊಂದೇ ದಿಕ್ಕಿನತ್ತ ವಾಲಿಕೊಂಡಿತು. ಬ್ಯಾಂಕಿನ ಇಡಿಯ ಜಾಲವನ್ನೇ ತಡಕಾಡುತ್ತ ಕುಳಿತವನಿಗೆ ಅದೇ ಹೊಸತೊಂದು ಸುರಂಗವನ್ನು ತೆರೆದು ತೋರಿಸಿತ್ತು. ಅದಾಗಿಯೇ ದಾರಿ ತಪ್ಪಿಸಿತ್ತು. ಅವನನ್ನು ಕೆಣಕುತ್ತ ಒಳ ಕರೆದಿತ್ತು. ಕ್ಯಾರಲ್ ಮಲಗಿಯೇ ಇದ್ದಳು. ಅವನಿಗೆ ಸುತ್ತಲಿನ ಪ್ರಪಂಚದ ಅರಿವೇ ಇರಲಿಲ್ಲ.

ಒಂದು ಕ್ಷಣ... ಒಂದೇ ಕ್ಷಣ ಅವನ ಮನಸ್ಸು ಆತುಕೊಂಡಿತು. ತಾನು ಹೊರಟಿದ್ದು ಎಲ್ಲಿಗೋ, ಬಂದು ತಲುಪಿದ್ದು ಎಲ್ಲಿಗೋ. ತಾನೀಗ ಸಂಪೂರ್ಣ ಹಿಡಿತ ಸಾಧಿಸಿದ್ದೇನೆ. ಈ ಜಾಲದೊಳಗೆ ಹೊಕ್ಕು ತಾನೀಗ ಏನು ಬೇಕಾದರು ಮಾಡಬಹುದು ಎನ್ನುವ ಸಣ್ಣ ಸುಳಿಯೊಂದು ಅವನ ಮೆದುಳಿನಲ್ಲಿ ತಿರುಗಿ ಮಾಯವಾಯಿತು...

ಮರುದಿವಸ, ಸೋಮವಾರ ಬೆಳಗ್ಗೆ ಒಂಬತ್ತರಿಂದ ಹತ್ತು ಗಂಟೆಯವರೆಗೆ ಇಡಿಯ ಅಮೆರಿಕದಲ್ಲಿ ಯಾರಿಗೂ ಬ್ಯಾಂಕಿನ ವ್ಯವಹಾರ ನಡೆಸಲು ಆಗದಂತೆ ಇಡಿಯ ನೆಟ್ವರ್ಕ್ ಜಾಲ ಸ್ತಬ್ಧಗೊಂಡಿತ್ತು. ಯಾವುದೇ ಪುಟಕ್ಕೆ ಜಿಗಿದರೂ ದೊಡ್ಡ ಅಕ್ಷರಗಳಲ್ಲಿ, `ಕಾಯಕವೇ ಕೈಲಾಸ~ ಎನ್ನುವ ಕನ್ನಡ ಲಿಪಿ! ಅಮೆರಿಕದ ಎಲ್ಲ ಆಫೀಸುಗಳಲ್ಲೂ ಹಾಹಾಕಾರವೆದ್ದಿತು.

ಫೋನುಗಳು ರಿಂಗಿಸುತ್ತಲೇ ಇದ್ದವು. ಹತ್ತು ಗಂಟೆಯಿಂದ ಎಲ್ಲವೂ ಸಲೀಸಾಗಿ ಮೊದಲಿನಂತೆ ಕಾರ್ಯ ನಿರ್ವಹಿಸತೊಡಗಿದವು. ಅದಾಗಿ ಎರಡೇ ದಿನಕ್ಕೆ ಇದು ಸ್ಯಾಂಗಿಯ ಲ್ಯಾಪ್ಟಾಪಿನಿಂದಾದ ಅನಾಹುತ ಎನ್ನುವುದನ್ನು ತಜ್ಞರ ಸಹಾಯದಿಂದ ಕಂಡುಹಿಡಿದ ಅಮೆರಿಕದ ಪೋಲಿಸರು ಅವನನ್ನು ಬಂಧಿಸಿದರು.

ಇದ್ದಕ್ಕಿದ್ದಂತೆ ಸಣ್ಣಗೆ ಮಳೆ ಹನಿಸಲಾರಂಭಿಸಿತು. ಜನರೆಲ್ಲ ಎಕ್ಸ್ಚೇಂಜ್ ಪ್ಲೇಸಿನ ಆಫೀಸಿನಿಂದ ಹೊರಟು ಪಾತ್ ಸ್ಟೇಶನ್ನಿನತ್ತ ತೆರಳುತ್ತಿದ್ದರು. ಕೆಂಪು, ನೀಲಿ, ಹಳದಿ, ಕಪ್ಪು ಬಣ್ಣದ ದೊಡ್ಡ ದೊಡ್ಡ ಕೊಡೆಗಳು ಅರಳಿಕೊಂಡವು.

ಬೀಸುತ್ತಿದ್ದ ಗಾಳಿ ಮತ್ತಷ್ಟು ಜೋರಾಗಿ, ಒಂದಿಬ್ಬರು ಹೆಂಗಸರ ಕೊಡೆಗಳು ಮಗುಚಿಕೊಂಡವು. ಒಂದೆರಡು ಸಣ್ಣ ಕೊಡೆಗಳು ಹಿಡಿತದಿಂದ ಜಾರಿ ರಸ್ತೆ ಬದಿಯಲ್ಲಿ ಗೋಲಿಯಂತೆ ಜಾರಿ ದೂರ ಸರಿದವು.

ಮೋಹಿತ್ನ ಬ್ಯಾಗು ಆಫೀಸಿನಲ್ಲೇ ಇತ್ತು. ಮತ್ತೆ ಅಫೀಸಿಗೆ ಹೋಗಿ ಬರುವ ಮನಸ್ಸಾಗಲಿಲ್ಲ. ನದಿಯೆದುರೇ ಕುಳಿತುಕೊಂಡ. ಬರುವಂತೆ ತೋರಿತು ಅಷ್ಟೇ, ಮಳೆ ಬರಲಿಲ್ಲ. ಬರೀ ಗಾಳಿ. ಗಂಟೆ ಆರೂವರೆಯಾಗುತ್ತ ಬಂದಿತ್ತು. ಸ್ಯಾಂಗಿ ಬರುತ್ತಾನೋ ಇಲ್ಲವೋ ಎಂದು ಅನುಮಾನಿಸಿದ. ಫೋನು ರಿಂಗಾಯಿತು.

`ಸ್ಯಾಂಗಿ ಹಿರೇಮಠ್~ ಎನ್ನುವ ಹೆಸರು ಬೆಳಕಿನೊಂದಿಗೆ ಫಳಫಳಿಸುತ್ತಿತ್ತು. ಎದ್ದು ತಿರುಗಿ ನೋಡಿದ. ಸ್ಯಾಂಗಿ ದೂರದಿಂದ ಸ್ಟೇಷನ್ನಿನಿಂದ ಹೊರ ಬರುತ್ತಿರುವುದು ಕಾಣಿಸಿತು. ಫೋನ್ ಎತ್ತಿ, ಹಿಂದೆ ನೋಡಲು ಹೇಳಿ, ಅವನ ದೃಷ್ಟಿ ಹಾಯುತ್ತಲೇ ಕೈಯೆತ್ತಿ ತುಟಿ ಬಿರಿಯದೆ ನಕ್ಕ.

ಒಂದು ಮದಿರೆಯ ರಾತ್ರಿ, `ಡ್ಯೂಡ್!...ಬರೀ ದುಡ್ಡಿನಾಸೆಗೆ ಕಂಪನಿಯಿಂದ ಕಂಪನಿಗೆ ಹಾರುವ ವ್ಯಭಿಚಾರಿ ನೀನು...~ ಎಂದು ಸ್ಯಾಂಗಿ ಮಾತಿನ ಮಧ್ಯೆ ಲಘುವಾಗಿ ಹೇಳಿದ್ದು, ಮೋಹಿತ್ನನ್ನು ಮತ್ತೊಮ್ಮೆ ಕಟುವಾಗಿ ನಾಟಿತು. ತಾನೂ ಕಾಲೇಜಿನಲ್ಲಿ `ಗೀಕ್~ ಎನಿಸಿಕೊಂಡವನು. ಕಂಪ್ಯೂಟರಿನ ಬಗ್ಗೆ ಹುಚ್ಚು ಸೆಳೆತವಿಟ್ಟುಕೊಂಡಿರುವವನು ಅಂತ ಹೆಸರಾದವನು.

ತನ್ನಂತೆ ಎಷ್ಟೊಂದು ಜನ ಟೆಕ್ಕಿಗಳಿದ್ದರು ಕಾಲೇಜಿನಲ್ಲಿ. ಈವತ್ತು ಅವರೆಲ್ಲ ಬೇರೆ ಬೇರೆ ದೇಶಗಳಲ್ಲಿ ಯಶಸ್ವಿ ಟೆಕ್ಕೀ ಎನಿಸಿಕೊಂಡಿದ್ದಾರೆ. ಆದರೆ, ಇವನಂತೆ ಯಾರೊಬ್ಬನೂ ಆಗಲಿಲ್ಲವಲ್ಲ.

ಇವನೊಬ್ಬ ಹೇಗೆ ಈ ನದಿಯ ಹರಿವಿನಿಂದ ತಪ್ಪಿಸಿಕೊಂಡ? ಅದು ಹೇಗೆ ಸಿದ್ಧಿಸಿಕೊಂಡ? ಇಲ್ಲ, ನನಗಿನ್ನು ಇವನಂತೆ ಆಗಲು ಸಾಧ್ಯವಿಲ್ಲ. ಆ ಹಂತದಿಂದ ನಾನು ಎಂದೋ ಜಾರಿಕೊಂಡಿದ್ದೇನೆ. ಆ ಮಜಲನ್ನು ನಾನು ಕಳೆದುಕೊಂಡಿದ್ದೇನೆ.

ಇವನನ್ನು ಕಳೆದುಕೊಳ್ಳಬಾರದು. ಮಾರ್ಕ್ ಕೂಡ ಅದನ್ನೇ ಹೇಳುತ್ತಿದ್ದ. ಬೆಸ್ಟ್ ಲಾಯರ್ಸ್ ಇಡೋಣ... ಹೇಗಾದರೂ ಮಾಡಿ ಇವನನ್ನು ಬಿಡಿಸಿಕೊಂಡು ಬರಬೇಕು. ಇವನನ್ನು ಬಿಡಬಾರದು ಎಂದು ಮೋಹಿತ್ ಮನಸ್ಸನ್ನು ದೃಢಮಾಡಿಕೊಂಡ.

ಹಾಯ್ ವಿನಿಮಯಿಸಿಕೊಂಡ ಮೇಲೆ ಹಿರೇಮಠ್ ಮತ್ತು ಮೋಹಿತ್ ಅದೇ ಕಲ್ಲುಬೆಂಚಿನ ಮೇಲೆ ಕುಳಿತರು. ಹೇಗಿದ್ದೀ ಅಂತ ಕೇಳಿದ್ದಕ್ಕೆ ಹಿರೇಮಠ್ `ನಾಟ್ ಬ್ಯಾಡ್~ ಅಂತಷ್ಟೇ ಹೇಳಿ ಸಿಗರೇಟು ಹಚ್ಚಿಕೊಂಡು ಹಡ್ಸನ್ ನದಿ ನೋಡುತ್ತಾ ಕುಳಿತುಬಿಟ್ಟ.

ಮಾತಾಡುವುದಕ್ಕೆ ಏನೂ ಇಲ್ಲ ಎನ್ನುವಂತೆ. ದೂರದಲ್ಲಿ ನದಿಯ ಮೇಲೆ ಫೆರ್ರಿಯೊಂದು ಸಾಗುತ್ತಿತ್ತು. ಕತ್ತಲು ಆವರಿಸುತ್ತಿದ್ದಂತೆ ನ್ಯೂಯಾರ್ಕಿನ ಕಟ್ಟಡಗಳ ಬೆಳಕು ಝಗಮಗಿಸತೊಡಗಿದವು. ಹಿರೇಮಠ್ನಿಂದ ಯಾವುದೇ ಸ್ಪಂದನವಿಲ್ಲದ ಕಾರಣ, `ಮುಂದೆ ಏನು ಮಾಡಬೇಕು ಅಂತಿದ್ಯಾ?~ ಅಂತ ಮೋಹಿತ್ ಮಾತಿಗೆ ತೊಡಗಿದ.

`ಗೊತ್ತಿಲ್ಲ. ನಿನಗೇ ಎಲ್ಲ ತಿಳಿದದೆ. ಇದೆಲ್ಲ ಹಾರ್ವಿಯದೇ ಸಂಚು ಅಂತ ಗೊತ್ತಾಗದೆ. ಅಂಥದ್ದೊಂದು ಪ್ರಾಜೆಕ್ಟು ಇರಲೇ ಇಲ್ವಂತೆ. ಗ್ರಾಹಕರ ಮಾಹಿತಿ ಪಡೆಯುವುದು ಹಾರ್ವಿಗೆ ದೊಡ್ಡದೊಂದು ಮೋಸದ ಜಾಲ ಹೆಣೆಯುವುದಕ್ಕೆ ಮೊದಲಿನ ಸಣ್ಣ ನೂಲು ಅಷ್ಟೇ.

ಯಾವಾಗಲೋ ಒಮ್ಮೆ ನನ್ನೊಡನೆ ಚ್ಯಾಟ್ ಮಾಡುವಾಗ ಇದರ ಬಗ್ಗೆ ಸೂಕ್ಷ್ಮವಾಗಿ ಮಾತಾಡಿದ್ದ. ಅದರ ಆಧಾರದಲ್ಲೇ ಅವನನ್ನು ಹಿಡಿದು ವಿಚಾರಣೆ ನಡೆಸ್ತಾ ಇದ್ದಾರೆ. ಕ್ಯಾರಲ್ ಕೂಡ ಸೇರಿದ್ದಾಳೆ ಅನ್ನೋ ಅನುಮಾನ ಇದೆ. ಅವಳು ಫೋನ್ ಮಾಡಿ ತನ್ನದೇನೂ ತಪ್ಪಿಲ್ಲ, ತನಗೂ ಹಾರ್ವಿಯ ಈ ಮೋಸದ ಯೋಜನೆ ತಿಳಿದಿರಲಿಲ್ಲ ಅನ್ನುತ್ತಾಳೆ.

ನನಗೆ ನಂಬಿಕೆ ಇಲ್ಲ ಮೋಹಿತ್. ನನಗೆ ನಂಬಿಕೆ ಇಲ್ಲ...~ ಎಂದು, ಅರೆಗಳಿಗೆ ಮೌನದ ನಂತರ, `ಗೊತ್ತಿಲ್ಲ... ನಿನ್ನ ಲಾಯರ್ ಇದರಿಂದ ನನ್ನ ಬಚಾವ್ ಮಾಡಿಸಿದ್ರೆ ಊರಿಗೆ ವಾಪಸ್ ಹೋಗ್ಬೇಕು ಅಂತಿದೀನಿ~ ಎಂದ. `ವಾಟ್ ನಾನ್ಸೆನ್ಸ್. ವಾಪಸ್ ಹೋಗಿ ಏನ್ ಮಾಡ್ತೀಯಾ?... ಮೊನ್ನೆ ನ್ಯೂಸ್ ನೋಡಿದ್ಯಾ?

ಹೊಸದಾಗಿ ಬಂತಲ್ಲ ಹೈ-ಟೆಕ್ ಫೋನ್... ಅದನ್ನ ಉಪಯೋಗಿಸಬೇಕೆಂದರೆ ತಾವು ಕೊಡುವ ಫೋನ್ ಸರ್ವೀಸ್ ಬಳಸಿದರೆ ಮಾತ್ರ ಸಾಧ್ಯ ಅಂತ ಪ್ರಪಂಚವೆಲ್ಲ ಸಾರಿದರಲ್ಲ... ಒಂದೇ ವಾರ, ಒಂದೇ ವಾರಕ್ಕೆ ಅಮೆರಿಕದ ಹದಿನಾರು ವರ್ಷದ ಹುಡುಗ ಅದನ್ನು ಹ್ಯಾಕ್ ಮಾಡಿದ್ದಾನೆ. ತನ್ನ ಬ್ಲಾಗಿನಲ್ಲಿ ಅದರ ವಿವರಗಳನ್ನೆಲ್ಲ ಬಿಚ್ಚಿಟ್ಟಿದ್ದಾನೆ. And mind you, its not a crime. ಆ ಕಂಪನಿಯವರು ಅವನನ್ನು ಏನೂ ಮಾಡೊಕ್ಕಾಗೊಲ್ಲ.

ಅಂಥ ಸಾಮರ್ಥ್ಯ ಅಂಥ ಪ್ಯಾಶನ್ ಇರೋರು ನಮ್ಮಲ್ಲಿ ಯಾರಿದ್ದಾರೆ ಸ್ಯಾಂಗಿ? ಹಣದಾಸೆಗೆ ಕಂಪನಿಯಿಂದ ಕಂಪನಿಗೆ ಹಾರುತ್ತಿರಬೇಕು, ತಾವೂ ಒಂದು ಕಂಪನಿಯ ಮಾಲೀಕರಾಗಬೇಕು, ಸಾವಿರಾರು ಮಂದಿ ತಮ್ಮ ಕೈ ಕೆಳಗೆ ಕೆಲಸ ಮಾಡಬೇಕು, ಸಾವಿರಾರು ಕೋಟಿ ಆಸ್ತಿ ಮಾಡಬೇಕು, ಅದರಲ್ಲೊಂದಿಷ್ಟು ದಾನ ಧರ್ಮ ಮಾಡಿ ಉದಾರಿಗಳೆಂದು ಹೆಸರು ಮಾಡಬೇಕು... ಇಷ್ಟೇ ತಾನೇ ನಮ್ಮ ದೇಶದ ಸಾಫ್ಟ್ವೇರ್ ಪರಿಣತರ ಕನಸುಗಳು?... ನೀನು ಹೇಳಿದ್ದು ನಿಜ ಕಣೋ .

ನಾನೊಬ್ಬ ವ್ಯಭಿಚಾರಿ. ಆದರೆ, ನೀನು? ನಿನಗಿದು ನಿಜವಾದ ಪ್ಯಾಶನ್. ಈ ಕೇಸಿನಿಂದ ನಿನ್ನ ಬಿಡಿಸಿಕೊಳ್ಳೋದು ಕಷ್ಟ ಆಗೊಲ್ಲ ಅಂತಿದ್ದಾರೆ. ಮಾರ್ಕ್ ಕೂಡ ಅದನ್ನೇ ಹೇಳಿದ. ಮೋಟಿವ್ ಏನೂ ಇಲ್ವಲ್ಲ. ಅದೂ ಅಲ್ಲದೆ ಈಗ ಹಾರ್ವಿ ಕೂಡ ಸಿಕ್ಕಿ ಹಾಕಿಕೊಂಡಿದ್ದಾನೆ. ನೀನು ವಾಪಸ್ ಹೋಗೋ ವಿಚಾರ ಬಿಟ್ಟುಬಿಡು~.

ಮೋಹಿತ್ ಬಹಳ ಜಾಗರೂಕತೆಯಿಂದ ಮಾತಾಡಿದ. ಅವನನ್ನು ಹೇಗಾದರು ಮಾಡಿ ಉಳಿಸಿಕೋ, ಅವನ ಕೇಸನ್ನ ನಾವೇ ನಡೆಸ್ತಿರೋದ್ರಿಂದ ಅವನಿಗೂ ಬೇರೆ ದಾರಿ ಇಲ್ಲ. ಆದರೂ ಅವನಿಗೆ ಬಲವಂತ ಮಾಡಿದ ಹಾಗಿರಬಾರದು ಅಂತ ಮಾರ್ಕ್ ಹೇಳಿದ್ದ.

ಸಿಗರೇಟಿನ ಧೂಮ ಹಡ್ಸನ್ ನದಿಯ ಮೈ ಮೇಲಿನ ಹವೆಯಲ್ಲಿ ಲೀನವಾಗುತ್ತಿತ್ತು. ಹಿರೇಮಠ್ ದೂರದಲ್ಲಿದ್ದ ಫೆರ್ರಿಯನ್ನೇ ನೋಡುತ್ತಿದ್ದ. `ಗೊತ್ತಿಲ್ಲ. ಏನ್ ಮಾಡೋದು ಅಂತ ಯೋಚ್ನೆ ಮಾಡಿಲ್ಲ~ ಎಂದ.

`ನಾನು ನಿನಗೊಂದು ಕೆಲಸ ಕೊಡ್ತೀನಿ. ನಿನ್ನ ಪ್ಯಾಶನ್ಗೆ ತಕ್ಕಂಥ ಕೆಲಸ. ನಾನು, ಮಾರ್ಕ್, ಇನ್ನಿಬ್ಬರು ಸೇರಿ ಒಂದು ಕಂಪನಿ ತೆರೆಯಬೇಕು ಅಂದುಕೊಂಡಿದ್ದೇವೆ. ನಿನ್ನಂಥ ನಿಜವಾದ ಅನುರಕ್ತಿ ಇರುವವರಿಗೆ.

ಬೇರೆ ಬೇರೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಅವರ ಅತಿಮುಖ್ಯ ಸಾಫ್ಟ್ವೇರುಗಳನ್ನ, ಪ್ರಾಡಕ್ಟುಗಳನ್ನ, ನೆಟ್ವರ್ಕುಗಳನ್ನ ಭೇದಿಸುವುದು, ಅದನ್ನು ಹ್ಯಾಕ್ ಮಾಡುವುದೇ ಕೆಲಸ. Ethical hacking. ಅದರಿಂದ ಆ ಕಂಪನಿಯವರಿಗೆ ತಮ್ಮ ಉತ್ಪನ್ನಗಳ ನ್ಯೂನತೆ ತಿಳಿಯುತ್ತೆ. ಇನ್ನಷ್ಟು ಸುರಕ್ಷೆ ಮಾಡಿಕೊಳ್ಳುತ್ತಾರೆ.

ನೀನು ನಮ್ಮ ಜೊತೆ ಸೇರು~ ಎಂದು ತನ್ನ ಕಾತರವನ್ನು ತೋರಿಕೊಳ್ಳದೆ ಹಿರೇಮಠ್ನ ಪ್ರತಿಕ್ರಿಯೆಗೆ ಕಾದ. ಹಿರೇಮಠ್ ತುಟಿಯ ತುದಿಗೆ ಸುಡುತ್ತ ಬಂದ ಸಿಗರೇಟನ್ನು ಬಹಳ ಉಪೇಕ್ಷೆಯಲ್ಲಿ ನೋಡಿ, ಕಾಲಡಿ ಹೊಸಕಿ ಹಾಕಿದ.

ಹೊಗೆ ಉಗುಳಿ ಅದನ್ನು ಸ್ಪರ್ಶಿಸುವಂತೆ ಆಕಾಶದಲ್ಲಿ ಬೆರಳಾಡಿಸಿ ಕಿರಿದಾಗಿ ನಕ್ಕ. ಮೋಹಿತ್ಗೆ ಗೊಂದಲವಾಯಿತು. `ಈ ಗದ್ಲ ಎಲ್ಲ ಮುಗೀಲಿ....~ ಎಂದು, ಹಿರೇಮಠ್ ಮತ್ತೊಂದು ಸಿಗರೇಟು ಹಚ್ಚಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.