ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಸ್ವಂತ ನಾಡಲ್ಲಿ ಇರುವೆಗೂ ದೇವಾಲಯ!

ನವೀನ್ ಕುಮಾರ್ ಜಿ.
Published 18 ಫೆಬ್ರುವರಿ 2024, 0:11 IST
Last Updated 18 ಫೆಬ್ರುವರಿ 2024, 0:11 IST
ಅಕ್ಷರ ಗಾತ್ರ

ಇರುವೆಗಳು ನಿರುಪದ್ರವಿ ಜೀವಿಗಳಾದರೂ ಮನೆಗಳಲ್ಲಿ ಅವುಗಳ ಕಾಟ ವಿಪರೀತವಾದರೆ ಸಾಮಾನ್ಯವಾಗಿ ನಾವೆಲ್ಲ ರಾಸಾಯನಿಕಗಳನ್ನೋ, ಕೀಟನಾಶಕಗಳನ್ನೋ ಸಿಂಪಡಿಸುತ್ತೇವೆ. ಆದರೆ ಕೇರಳದ ಕಣ್ಣೂರಿನ ಪ್ರದೇಶವೊಂದರ ಜನರು ಮಾತ್ರ ದೇವರ ಮೊರೆ ಹೋಗುತ್ತಾರೆ. ಅದು ಅಂತಿಂಥ ದೇವರದ್ದಲ್ಲ ಸಾಕ್ಷಾತ್ ಇರುವೆ ದೇವರದ್ದು.

ಹೌದು, ಕಣ್ಣೂರಿನ ತೋಟ್ಟಡ ಎಂಬಲ್ಲಿ ಇರುವೆಗಳಿಗಾಗಿಯೇ ನಿರ್ಮಿಸಿರುವ ದೇವಾಲಯವಿದೆ. ಈ ದೇವಾಲಯವನ್ನು ‘ಉರುಂಬಚ್ಚನ್ ಗುರುಸ್ಥಾನಂ’ ಅಥವಾ ‘ಉರುಂಬಚ್ಚನ್ ಕೋಟ್ಟಂ’ ಎಂದು ಕರೆಯಲಾಗುತ್ತದೆ. ಮಲಯಾಳ ಭಾಷೆಯಲ್ಲಿ ‘ಉರುಂಬು' ಎಂದರೆ ಇರುವೆ, 'ಅಚ್ಚನ್' ಎಂದರೆ ತಂದೆ ಎಂದರ್ಥ. ಇಲ್ಲಿ ಯಾವುದೇ ವಿಗ್ರಹದ ಪ್ರತಿಷ್ಠಾಪನೆ ಇಲ್ಲ. ವೃತ್ತಾಕಾರದ ಅಡಿಪಾಯ ಮತ್ತು ಅದರ ಮೇಲೊಂದು ದೀಪ ಸ್ಥಾಪಿಸಲಾಗಿದೆ. ಇದುವೇ ಇರುವೆ ದೇವರ ದೇಗುಲ. ಪಕ್ಕದಲ್ಲೇ ಇರುವ ಮರದಲ್ಲಿ ಕೆಂಪಿರುವೆಗಳು ಗೂಡುಕಟ್ಟಿ ನೆಲೆಸಿವೆ.

ಕ್ಷುಲ್ಲಕ ಜೀವಿ ಎಂದು ಮನುಷ್ಯರು ಉಪೇಕ್ಷೆ ತೋರುವ ಇರುವೆಗಳ ಮುಂದೆಯೇ ಶಿರಬಾಗಿ ನಮಿಸುವ ಮೂಲಕ ನಮ್ಮೊಳಗಿನ ಅಹಂ ಅನ್ನು ಕಳೆಯುವ ಸಂಕೇತವಾಗಿಯೂ ಈ ದೇವಾಲಯವು ನೆಲೆ ನಿಂತಿದೆ.

ಆರಾಧನೆಯ ಮೂಲಕ ಇರುವೆಗಳ ಸಂರಕ್ಷಣೆಯ ಸಂಕಲ್ಪದಿಂದಲೂ ಹಿರಿಯರು ಈ ದೇವಾಲಯವನ್ನು ನಿರ್ಮಿಸುವ ಮೂಲಕ ಪರಿಸರ ರಕ್ಷಣೆಯ ಮಹತ್ವದ ಸಂದೇಶವನ್ನೂ ಸಾರಿದ್ದಾರೆ.

ಮನೆಗಳಲ್ಲಿ ಇರುವೆಗಳ ಕಾಟದಿಂದ ಬಸವಳಿಯುವವರು ಇಲ್ಲಿಗೆ ಬಂದು ತೆಂಗಿನಕಾಯಿ ಸಮರ್ಪಿಸುತ್ತಾರೆ. ಅರ್ಚಕರು ಆ ತೆಂಗಿನಕಾಯಿಯನ್ನು ಒಡೆದು ಅದರ ನೀರನ್ನು ಅಡಿಪಾಯದ ಮೇಲೆ ಸುರಿಯುತ್ತಾರೆ. ಹೀಗೆ ಮಾಡಿದರೆ ಇರುವೆಗಳ ಕಾಟ ತಪ್ಪುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಸಂಜೆ ವೇಳೆ ಮಾತ್ರ ಇಲ್ಲಿ ತೆಂಗಿನಕಾಯಿ ಒಡೆಯಲಾಗುತ್ತದೆ.

‘ತಿಂಗಳಿಗೊಮ್ಮೆ ಇಲ್ಲಿ ಪೂಜೆ ಮಾಡಿ ಇರುವೆಗಳಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ಬಳಿಕ ಪಕ್ಕದಲ್ಲೆ ಇರುವ ಉದಯ ಮಂಗಳ ಗಣಪತಿ ದೇವಾಲಯದಲ್ಲಿ ಪೂಜೆ ನಡೆಯುತ್ತದೆ. ಇರುವೆ ದೇವಾಲಯದಲ್ಲಿ ಪ್ರತಿದಿನ ದೀಪ ಬೆಳಗಿಸಲಾಗುತ್ತದೆ’ ಎನ್ನುತ್ತಾರೆ ಗಣಪತಿ ಕ್ಷೇತ್ರ ಸಮಿತಿಯ ಪದಾಧಿಕಾರಿ ವಿ. ಸದಾನಂದನ್.

‘ಮಂಡಲ ಋತುವಿನಲ್ಲಿ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈಗ ಪ್ರವಾಸಿಗರೂ ಬರುತ್ತಿದ್ದಾರೆ’ ಎಂದು ದೇವಾಲಯದ ಸ್ಥಾನಿಕರಾದ ಬಾಲನ್ ಹೇಳುತ್ತಾರೆ.

ಕಣ್ಣೂರಿನಿಂದ ತಲಶ್ಶೇರಿಗೆ ಹೋಗುವ ದಾರಿಯಲ್ಲಿ ಎಂಟು ಕಿಲೊಮೀಟರ್‌ ಸಾಗಿದರೆ ಈ ದೇವಾಲಯವನ್ನು ತಲುಪಬಹುದಾಗಿದೆ. 

ಈ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ ಎಂದು ನಂಬಲಾಗಿದೆ. ಈಗಿನ ಇರುವೆ ದೇವಾಲಯದ ಜಾಗದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಲಾಗಿತ್ತು. ಮರುದಿನ ಬಂದು ನೋಡಿದಾಗ ಅಡಿಗಲ್ಲು ಹಾಕಿದ ಜಾಗದಲ್ಲಿ ಇರುವೆಗಳ ಗೂಡು ಪ್ರತ್ಯಕ್ಷವಾಗಿತ್ತು ಮತ್ತು ಅಡಿಗಲ್ಲು ಅಲ್ಪ ದೂರಕ್ಕೆ ಜರುಗಿತ್ತು. ಈ ಕಾರಣಕ್ಕೆ ಇಲ್ಲಿ ಇರುವೆಗಳ ದೇವಾಲಯ ಮತ್ತು ಪಕ್ಕದಲ್ಲಿ ಗಣಪತಿ ದೇವಾಲಯ ನಿರ್ಮಿಸಲಾಗಿದೆ ಎಂಬುದು ಐತಿಹ್ಯ.

ಐತಿಹ್ಯಗಳು ಏನೇ ಇದ್ದರೂ ಇದೊಂದು ಪ್ರಕೃತಿ ಆರಾಧನೆಯ ಕ್ಷೇತ್ರವಾಗಿ ಗಮನ ಸೆಳೆಯುತ್ತಿದೆ ಮತ್ತು ಭಕ್ತರನ್ನು ಆಕರ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT