ಮಹಾರಾಷ್ಟ್ರದ ಪುಣೆ ನಗರದಲ್ಲಿ ಸುತ್ತಾಡುವಾಗ ಆಗಾ ಖಾನ್ ಅರಮನೆ ಕಂಡಿತು. ಅದರ ಹೊರನೋಟಕ್ಕೆ ಮರುಳಾದ ನಾನು, ಕುತೂಹಲಕ್ಕೆ ಅಲ್ಲಿ ಇದ್ದವರನ್ನು ವಿಚಾರಿಸಿದೆ. ಅದು ಬ್ರಿಟಿಷರ ಆಳ್ವಿಕೆಯಲ್ಲಿ ಸೆರೆಮನೆ ಕೂಡ ಆಗಿತ್ತು ಎನ್ನುವುದು ಗೊತ್ತಾಯಿತು! ಅರಮನೆ ಯಾರಿಗಾಗಿ ಸೆರೆಮನೆ ಆಯಿತು ಎನ್ನುವ ಪ್ರಶ್ನೆಗೆ ‘ಮಹಾತ್ಮಗಾಂಧಿ’ ಎನ್ನುವ ಉತ್ತರ ಸಿಕ್ಕಿತು. ಈ ಕಾರಣಕ್ಕಾಗಿ ಆಗಾ ಖಾನ್ ಅರಮನೆ ಇತಿಹಾಸದ ಪುಟಗಳನ್ನು ಸೇರಿದೆ. ಆ ಪುಟಗಳಲ್ಲಿ ಗಾಂಧೀಜಿಯ ದೀರ್ಘಾವಧಿ ಉಪವಾಸವೂ ಇದೆ. ‘ಕ್ವಿಟ್ ಇಂಡಿಯಾ’ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ ಫ್ಯಾಸಿಸ್ಟ್‌ಶಕ್ತಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಬ್ರಿಟಿಷರ ಆಪಾದನೆಗೆ ಮನನೊಂದು ಗಾಂಧೀಜಿ ಉಪವಾಸ ಕೈಗೊಂಡಿದ್ದರು. ಅವರು ಇಲ್ಲಿ 21 ತಿಂಗಳು ಸೆರೆಯಲ್ಲಿರುತ್ತಾರೆ.
‘ಕ್ವಿಟ್ ಇಂಡಿಯಾ’ ಚಳವಳಿಯ ಘೋಷಣೆ ಆಗುತ್ತದೆ. ಇದಕ್ಕೆ ಮುಖ್ಯ ಕಾರಣ ಎರಡನೆಯ ಮಹಾಯುದ್ಧದ ಸ್ಥಿತಿಗತಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ನ ಸಮಾಜವಾದಿಗಳ ಒತ್ತಾಸೆ. ಯುದ್ಧ ಶುರುವಿಗೆ ಫ್ಯಾಸಿಸ್ಟ್ ಶಕ್ತಿಗಳಾದ ಜರ್ಮನಿ ಹಾಗೂ ಜಪಾನ್ ದೇಶಗಳ ಉಪಟಳವನ್ನು ಮೆಟ್ಟಲು ಬ್ರಿಟನ್, ಅಮೆರಿಕದ ನೆರವು ಕೇಳುತ್ತದೆ. ಅದಕ್ಕೆ ಉತ್ತರವಾಗಿ ಸ್ವಾತಂತ್ರ್ಯ ಬಯಸುತ್ತಿದ್ದ ಭಾರತದಂತಹ ದೇಶಗಳಿಗೆ ಸಾರ್ವಭೌಮತ್ವದ ಹಕ್ಕುಗಳನ್ನು ಮಾನ್ಯ ಮಾಡುವುದಾದರೆ ತಾನು ಸಿದ್ಧ ಎಂದು ಅಮೆರಿಕ ತಿಳಿಸುತ್ತದೆ. ಈ ವಿಚಾರಗಳಿಗೆ ಪೂರಕವಾಗಿ ಎರಡೂ ರಾಷ್ಟ್ರಗಳ ನಡುವೆ ಐತಿಹಾಸಿಕ ‘ಅಟ್ಲಾಂಟಿಕ್ ಒಪ್ಪಂದ’ ಏರ್ಪಟ್ಟು, ಅದರನ್ವಯ ಭಾರತಕ್ಕೆ ಬಂದಿದ್ದ ಸಂಧಾನಕಾರ ಸ್ಟಾಫರ್ಡ್ ಕ್ರಿಪ್ಸ್, ರಾಷ್ಟ್ರೀಯ ಕಾಂಗ್ರೆಸ್ ಯುದ್ಧದಲ್ಲಿ ಸಹಕರಿಸಿದರೆ ಭಾರತಕ್ಕೆ ಇತರ ಸಂಸ್ಥಾನಗಳು ಸೇರಿಕೊಳ್ಳುವ ಆಯ್ಕೆಯನ್ನು ಆಯಾ ಸಂಸ್ಥಾನಗಳಿಗೆ ನೀಡಲಾಗುತ್ತದೆ ಎಂದು ಹೇಳುತ್ತಾರೆ.
ಕ್ರಿಪ್ಸ್‌ನ ಕರಾಳ ಸಂಧಾನ ಹಾಗೂ ವಿಶ್ವ ರಾಜಕಾರಣದ ಅನಿರೀಕ್ಷಿತ ತಿರುವುಗಳು ರಾಷ್ಟ್ರೀಯ ಕಾಂಗ್ರೆಸಿನಲ್ಲಿ ದಿಗಿಲು ಹುಟ್ಟಿಸುತ್ತವೆ. ಆಗ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ ವಿರುದ್ಧ ‘ಭಾರತ ಬಿಟ್ಟು ತೊಲಗಿ’ ಎಂಬ ಅಂತಿಮ ಚಳವಳಿಯನ್ನು ಹೂಡಲು ನಿರ್ಧರಿಸುತ್ತದೆ. ಗಾಂಧಿ ಕ್ರಿಪ್ಸ್ ಗೆ “ಒಡೆದು ಚೂರುಚೂರಾದ ಹುಸಿ ಭಾರತ ನಮಗೆ ಬೇಡ, ಈಗಲೇ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ; ನಾವೇ ನಮ್ಮ ಸವಾಲುಗಳನ್ನು ಬಗೆಹರಿಸಿಕೊಳ್ಳುತ್ತೇವೆ” ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಮಾತುಕತೆ ಮುರಿದು ಬೀಳುತ್ತದೆ. ಆಗಸ್ಟ್ 8, 1942 ರಂದು ರಾಷ್ಟ್ರೀಯ ಕಾಂಗ್ರೆಸ್ ‘ಕ್ವಿಟ್ ಇಂಡಿಯಾ’ ಚಳವಳಿಗೆ ಕರೆ ಕೊಡುತ್ತದೆ. ‘ಮಾಡು ಇಲ್ಲವೇ ಮಡಿ’ ಕ್ರಾಂತಿಘೋಷ ದೇಶದೆಲ್ಲೆಡೆ ಅನುರಣಿಸುತ್ತದೆ. ಉಗ್ರಗೊಂಡ ಬ್ರಿಟಿಷರು, ಗಾಂಧೀಜಿಯನ್ನು ಚಳವಳಿ ಪ್ರಾರಂಭವಾಗುವ ಮುನ್ನವೇ ಬಂಧಿಸುತ್ತಾರೆ. ಅಲ್ಲದೆ, ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖರನ್ನೂ ವಿವಿಧ ಸೆರೆಮನೆಗಳಿಗೆ ತಳ್ಳುತ್ತಾರೆ. ಆಗಸ್ಟ್ 9 ರಂದೇ ಗಾಂಧೀಜಿ ಪರಿವಾರವನ್ನು ಪಾಳು ಬಿದ್ದಿದ್ದ ‘ಆಗಾ ಖಾನ್ ಅರಮನೆ’ಯನ್ನು ಸೆರಮನೆಯನ್ನಾಗಿಸಿ ಅದರಲ್ಲಿ ಬಂಧಿಸಿಡುತ್ತಾರೆ.
ಗಾಂಧೀಜಿಯೊಂದಿಗೆ ಪತ್ನಿ ಕಸ್ತೂರ ಬಾ, ಸರೋಜಿನಿ ನಾಯ್ಡು, ಮಹದೇವ ದೇಸಾಯಿ, ಮೀರಾಬೆನ್ ಹಾಗೂ ಸಹಾಯಕ ಪ್ಯಾರೆಲಾಲ್ ಇರುತ್ತಾರೆ. ಸೆರೆಗೆ ಹಾಕಿದ ಐದೇ ದಿನಗಳಲ್ಲಿ (ಆಗಸ್ಟ್ 15 ರಂದು) ಗಾಂಧೀಜಿಯ ಆಪ್ತ ಮಹದೇವ ದೇಸಾಯಿ ನಿಧನರಾಗುತ್ತಾರೆ. ಹೊರಗಡೆಯ ಹಿಂಸಾಚಾರದ ಹೊಣೆಯನ್ನು ಗಾಂಧೀಜಿ ಮೇಲೆ ಹೇರಲು ಸರ್ಕಾರ ವಾಮಮಾರ್ಗ ಹಿಡಿದು, ಅಹಿಂಸ ತತ್ವಕ್ಕೆ ಕಳಂಕ ತರಲು ಪ್ರಯತ್ನಿಸುತ್ತದೆ. ಇದು ಗಾಂಧೀಜಿಯನ್ನು ಖಿನ್ನಗೊಳಿಸಿ 21 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ನಾಂದಿಯಾಗುತ್ತದೆ. ಉಪವಾಸದಲ್ಲಿ ಎರಡು ಬಾರಿ ಗಾಂಧೀಜಿ ಸಾವಿನ ಬಾಗಿಲನ್ನು ತಟ್ಟಿದ್ದರೂ, ಕಸ್ತೂರ ಬಾ ಹಾಗೂ ಮೀರಾಬೆನ್ ಅವರ ಆರೈಕೆಯಿಂದ ಪಾರಾಗುತ್ತಾರೆ. ಸೆರೆಯ ಏಕತಾನತೆ ಹಾಗೂ ವಯೋಸಹಜ ಅನಾರೋಗ್ಯ ಹೋರಾಟಗಾರರನ್ನು ತುಂಬಾ ಕಾಡುತ್ತವೆ. ಈ ಕಾರಣಗಳಿಂದ ಬಂಧನಕ್ಕೊಳಗಾದ ಏಳನೇ ತಿಂಗಳಿನಲ್ಲಿ ಸರೋಜಿನಿ ನಾಯ್ಡು ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಮೀರಾಬೆನ್ ಹಾಗೂ ಕಸ್ತೂರ ಬಾ ಅವರ ಆರೋಗ್ಯವೂ ಕ್ಷೀಣಗೊಳ್ಳುತ್ತದೆ. ಆದರೆ, ಪ್ರಧಾನಿ ಚರ್ಚಿಲ್ ಅವರ ಹಠಮಾರಿತನದಿಂದಾಗಿ ನೆರವು ನೀಡಲಾಗದೆ ವೈಸರಾಯ್ ವೇವೆಲ್ ಅಸಹಾಯಕರಾಗುತ್ತಾರೆ. ಮುಂದೆ ಕಸ್ತೂರ ಬಾ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು ಗಾಂಧೀಜಿಯ ತೊಡೆ ಮೇಲೆ ವಿರಮಿಸುತ್ತಿರುವಾಗಲೇ ಕೊನೆಯುಸಿರೆಳೆಯುತ್ತಾರೆ. ಒಂದರ ಹಿಂದೆ ಬಂದೆರಗುವ ಆತ್ಮೀಯರ ಸಾವು ಅವರನ್ನು ಖಿನ್ನತೆಗೆ ದೂಡುತ್ತದೆ. ಆರೋಗ್ಯವೂ ಕ್ಷೀಣಿಸುತ್ತದೆ. ವೈದ್ಯರ ಸಲಹೆಯಿಂದಾಗಿ ಮೇ 6, 1944 ರಂದು ಚರ್ಚಿಲ್ ವಿರೋಧವನ್ನು ಲೆಕ್ಕಿಸದೆ ವೈಸರಾಯ್ ವೇವೆಲ್ ಗಾಂಧಿಯನ್ನು ಬಿಡುಗಡೆಗೊಳಿಸುತ್ತಾನೆ.
ಆಗಾ ಖಾನ್ ಅರಮನೆ
ಭಾರತೀಯ ಪುರಾತತ್ವ ಇಲಾಖೆ ಸುಪರ್ದಿಯಲ್ಲಿರುವ ಅರಮನೆಯನ್ನು ಆಗಾ ಖಾನ್ 1892 ರಲ್ಲಿ ಕಟ್ಟಿಸಿದರು. ಖಾನ್ ಕುಟುಂಬವು ಜನಾನುರಾಗಿಯೂ, ಸಮಾಜಮುಖಿಯೂ ಆಗಿತ್ತು. ಆಗ ಪುಣೆಯ ಸುತ್ತಮುತ್ತ ಭೀಕರ ಬರಗಾಲವಿತ್ತು. ಜನ ಹಸಿವೆಯಿಂದ ತತ್ತರಿಸುತ್ತಿರುತ್ತಾರೆ. ನೊಂದವರಿಗೆ ಕೆಲಸ ಕೊಡುವ ಸಲುವಾಗಿ ಅರಮನೆಯನ್ನು ಕಟ್ಟಿಸಲು ಖಾನ್ ಮುಂದಾಗುತ್ತಾರೆ. ಇದನ್ನು ಕಟ್ಟಲು ಐದು ವರ್ಷಗಳಲ್ಲಿ ₹ 12 ಲಕ್ಷಗಳನ್ನು ವ್ಯಯಿಸಲಾಗುತ್ತದೆ.
ಈಗ ಅರಮನೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಭಾರತ ಸರ್ಕಾರ ಘೋಷಿಸಿದೆ. ಈ ಘೋಷಣೆಯ ಹಿಂದೆಯೂ ಜನರ ಹೋರಾಟದ ದೊಡ್ದ ಕಥೆಯೇ ಇದೆ. ನಿರ್ವಹಣೆ ಇಲ್ಲದೆ ಶಿಥಿಲಗೊಂಡಿರುವ ಅರಮನೆಯನ್ನು ಸರ್ಕಾರ ನಿರ್ವಹಣೆ ಮಾಡಬೇಕು ಎಂದು 1999 ರಲ್ಲಿ ಪುಣೆಯ ನಾಗರಿಕರು ಆಮರಣ ಉಪವಾಸವನ್ನು ಕೈಗೊಳ್ಳಬೇಕಾಗುತ್ತದೆ. ಈ ಹೋರಾಟದ ನಂತರ ಕಟ್ಟಡ ತಕ್ಕ ಮಟ್ಟಿಗೆ ಸುಸ್ಥಿತಿಗೆ ಬಂದಿದೆ. ನಯನ ಮನೋಹರವಾಗಿರುವ ಅರಮನೆಯೊಳಗಡೆ ವಿವಿಧ ಹಾಲ್‌ಗಳಲ್ಲಿ ಗಾಂಧೀಜಿ ದಂಪತಿ ನಿತ್ಯವೂ ಬಳಸುತ್ತಿದ್ದ ವಸ್ತುಗಳನ್ನು ಪೇರಿಸಿಡಲಾಗಿದೆ. ತೀವ್ರ ಉಬ್ಬಸವನ್ನು ಕಡಿಮೆಗೊಳಿಸಲು ಕಸ್ತೂರ ಬಾ ತಮ್ಮ ಎದೆಗೊತ್ತಿಕೊಂಡು ಮಲಗುತ್ತಿದ್ದ ಮೇಜೂ ಇದೆ. ಚರಿತ್ರೆ ಗೊತ್ತಿರುವ ಯಾರಿಗಾದರೂ ಅದನ್ನು ನೋಡಿದಾಗ ನೋವಾಗದೆ ಇರದು. ಕಲಬುರಗಿಯವರಾದ ಹೆಸರಾಂತ ಕಲಾವಿದ ಎಸ್.ಎಂ. ಪಂಡಿತರು, ಗಾಂಧಿಯ ತೊಡೆ ಮೇಲೆ ತಲೆಯಿಟ್ಟು ಮಲಗಿರುವಾಗ ಕಸ್ತೂರ ಬಾ ಅವರ ಪ್ರಾಣಪಕ್ಷಿ ಹಾರಿಹೋದಾಗಿನ ಕ್ಷಣದ ತೈಲಚಿತ್ರವು ಕಣ್ಣುಗಳನ್ನು ತೇವ ಮಾಡದಿರದು. ಅರಮನೆಯ ವಿಶಾಲ ಪ್ರದೇಶದಲ್ಲಿ ಉದ್ಯಾನವನ, ಗ್ರಂಥಾಲಯ, ಖಾದಿ ಮಳಿಗೆ ಹಾಗೂ ಗುಡಿ ಕೈಗಾರಿಕೆಗಳ ತರಬೇತಿ ಕೇಂದ್ರವಿದೆ. ಹಸಿರಿನ ಪ್ರಶಾಂತತೆಯಲ್ಲಿ ಗಾಂಧೀಜಿ, ಕಸ್ತೂರ ಬಾ ಹಾಗೂ ಮಹದೇವ ದೇಸಾಯಿ ಅವರು ಚಿತಾಭಸ್ಮದ ಸ್ಮಾರಕಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.