ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಗಾರು ಜೀವ ಸಂಕುಲದ ಸಂಭ್ರಮ

ಶಶಿಕಾಂತ್ ಹೆಚ್. ಮಜಗಿ
Published 18 ಆಗಸ್ಟ್ 2024, 0:03 IST
Last Updated 18 ಆಗಸ್ಟ್ 2024, 0:03 IST
ಅಕ್ಷರ ಗಾತ್ರ

ಈ ಭೂಮಿ ಅಗಣಿತ ಜೀವಿಗಳ ಆಗರ, ಆಶ್ರಯ ತಾಣ. ಈಗಾಗಲೇ ಗುರುತಿಸಿದ ಲಕ್ಷಾಂತರ ಜೀವರಾಶಿಗಳು ಇವೆ. ಇನ್ನು 60ರಿಂದ 80 ಲಕ್ಷ ಗುರುತಿಸದೆ ಉಳಿದ ಜೀವರಾಶಿಗಳು ಇವೆ ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ಜೀವಿಗಳೂ ತಮ್ಮ ಬದುಕಿಗೆ, ಜೀವನ ಚಕ್ರಕ್ಕೆ ಅವಶ್ಯಕತೆಯಂತೆ ಆವಾಸಸ್ಥಾನಗಳನ್ನು ಹುಡುಕಿಕೊಂಡು ಹೊಂದಿಕೊಂಡಿರುತ್ತವೆ.

ಬದಲಾಗುತ್ತಿರುವ ಋತುಚಕ್ರಗಳಿಗೆ ಅನುಗುಣವಾಗಿ ಸಸ್ಯಗಳು ಪ್ರಾಣಿಗಳು ಪಕ್ಷಿಗಳು ಕೀಟಗಳು ಉಭಯವಾಸಿಗಳು ಸರೀಸೃಪಗಳು ಸಸ್ತನಿಗಳ ಸಂಕುಲ ತಮ್ಮ ಚಟುವಟಿಕೆಗಳನ್ನು ನಡೆಸುತ್ತವೆ. ಬೇಸಿಗೆ ಮುಗಿದು ಮಳೆಗಾಲ ಬರಲು ಎಲ್ಲವೂ ಕಾಯುತ್ತಿರುತ್ತವೆ. ಮಳೆಯೊಂದಿಗೆ ನಮ್ಮ ಕೃಷಿ ಚಟುವಟಿಕೆಗಳೂ ಚುರುಕುಗೊಳ್ಳುತ್ತವೆ. ಹೀಗಾಗಿ ನಮ್ಮ ಜೀವನ ಕ್ರಮ ಮಳೆಯನ್ನು  ಅವಲಂಬಿಸಿದೆ. ಆದ್ದರಿಂದಲೇ ಮಳೆ ಬಂತೆಂದು ಸಂತೋಷ ಪಡುತ್ತೇವೆ. ಹಾಗೆಯೇ ಪ್ರಾಣಿ ಪಕ್ಷಿಗಳು ಸಸ್ಯಗಳೂ ಇದರಿಂದ ಹೊರತಾಗಿಲ್ಲ. ಅವು ಯಾವುದೇ ಕೃಷಿ, ಕೈಗಾರಿಕೆ ಚಟುವಟಿಕೆಗಳನ್ನು ನಡೆಸದೇ ಇದ್ದರೂ ಮಳೆಗಾಲ ಅವುಗಳಿಗೆ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಕಾಲ.

ಹಕ್ಕಿಗಳ ಕಲರವ, ಬೀಜ ಮೊಳಕೆಯೊಡೆಯುವುದು, ಹೂಗಳು ಅರಳುವುದು, ಎಲ್ಲಾ ಕಡೆ ಸಸ್ಯಗಳೂ ಗಿಡ ಮರಗಳೂ ಚಿಗುರೊಡೆಯುವುದು ಸೃಷ್ಟಿಯ ಸಹಜ ಪ್ರಕ್ರಿಯೆ. ಅಸಂಖ್ಯಾತ ಜೀವಿಗಳೂ ತಮ್ಮ ಅಡಗು ಇಲ್ಲವೇ ಆಶ್ರಯತಾಣಗಳಿಂದ, ಗೂಡುಗಳಿಂದ ಹೊರಬರುತ್ತವೆ. ಹಕ್ಕಿಗಳಿಗೆ, ಇತರೆ ಜೀವಿಗಳಿಗೆ ತಮ್ಮ ಮರಿಗಳಿಗೆ ಹುಳುಗಳನ್ನು, ಕೀಟಗಳನ್ನು ಮತ್ತು ಲಾರ್ವಾಗಳನ್ನು ಒದಗಿಸಲು, ಗೂಡು ಕಟ್ಟಲು, ಮರಿಹಾಕಲು, ಮರಿಗಳಿಗೆ ಪೋಷಣೆ ಮಾಡಲು ಇದು ಸೂಕ್ತ ಕಾಲ. ಸಕಲ ಜೀವರಾಶಿಗಳೂ ತಮ್ಮ ನಂಟನ್ನು ನೀರಿನೊಂದಿಗೆ ಬೆಸೆದುಕೊಂಡಿವೆ.

ರೆಡ್‌ ವೆಲ್ವೆಟ್‌ ಮೈಟ್‌ 
ರೆಡ್‌ ವೆಲ್ವೆಟ್‌ ಮೈಟ್‌ 

ತಮ್ಮ ಜೀವನಕ್ರಮದ ಭಾಗವಾಗಿ ನವಿಲುಗಳು ನರ್ತಿಸುತ್ತವೆ, ಮಿಂಚುಹುಳುಗಳು ಬೆಳಕು ಚೆಲ್ಲುತ್ತವೆ. ಕಪ್ಪೆಗಳು ಒಟಗುಟ್ಟುತ್ತವೆ. ಸಸ್ಯಗಳು ಗಿಡಮರಗಳು ನವಚೈತನ್ಯದೊಂದಿಗೆ ಚಿಗುರೊಡೆಯುತ್ತವೆ. ಬಾಯಾರಿದ ನೆಲ ನೀರನ್ನು ಕುಡಿದು ಒದ್ದೆಯಾಗಿ ತನ್ನ ಘಮಲನ್ನು ಬೀರಿ ಧನ್ಯವಾದ ತಿಳಿಸುತ್ತದೆ. ಭೂಮಿ ಮದುವಣಗಿತ್ತಿಯಂತೆ ಹೊಸ ಹೂಗಳಿಂದ, ಚಿಗುರುಗಳಿಂದ, ಹಸಿರಿನಿಂದ, ಜಲಧಾರೆಗಳಿಂದ ಶೃಂಗಾರಗೊಂಡು ನಳನಳಿಸುತ್ತದೆ. ಈ ಅಪರಿಮಿತ ಸವಿಯನ್ನು, ಸೊಬಗನ್ನು ಸವಿಯಲು ಕ್ರಿಮಿಕೀಟಗಳಿಂದ ಹಿಡಿದು ಸಸ್ತನಿಗಳವರೆಗೂ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುತ್ತವೆ. ಅದರಲ್ಲೂ ಕೆಲವು ಪಕ್ಷಿಗಳು, ಉದಾಹರಣೆಗೆ ಬುಲ್ ಬುಲ್, ಕುಕ್ಕೂ, ರಾಬಿನ್, ಬಾರ್‌ಬೆಟ್ಸ್, ಸ್ಪ್ಯಾರೋ, ಬ್ಯಾಬರ‍್ಸ್, ಬಯಾ ವಿರ‍್ಸ ಮಳೆಗಾಲಕ್ಕೂ ಮುಂಚೆ ಮೊಟ್ಟೆ ಇಡುತ್ತವೆ. ಸರಿಯಾಗಿ ಮಳೆಗಾಲಕ್ಕೆ ಮರಿ ಹೊರಬಂದು, ಅದಕ್ಕೆ ಬೇಕಾದ ಆಹಾರ, ನೀರು ಇತರೆ ಅಗತ್ಯ ಪೋಷಕಾಂಶಗಳು ಹೇರಳವಾಗಿ ದೊರೆಯುತ್ತವೆ.

ಮಲಬಾರ್ ಪಿಟ್ ವೈಪರ್, ಪರ್ಪಲ್‌ ಫ್ರಾಗ್, ಹ್ಯಾಮರ್ ಹೆಡ್ಡೆಡ್ ಹುಳು, ಸಿಕಾಡಸ್, ಟ್ರೀ ಹಾಪರ್, ಮಲಬಾರ್ ಗ್ಲೆಂಡಿಂಗ್ ಫ್ರಾಗ್, ಟೈಗರ್ ಬೀಟಲ್ಸ್, ಪೈಡ್ ಕುಕ್ಕೊ, ಫ್ಯಾನ್ ಥ್ರೋಟೆಡ್ ಲಿಝರ್ಡ್‌, ಇಂಡಿಯನ್ ಬುಲ್‌ ಫ್ರಾಗ್, ರೆಡ್ ವೆಲ್ವೆಟ್‌ ಮೈಟ್ಸ್ ಮುಂತಾದ ಜೀವಿಗಳೂ ಮಳೆಗಾಲಕ್ಕಾಗಿ ಕಾತುರದಿಂದ ಕಾಯುತ್ತಿರುತ್ತವೆ ಮತ್ತು ಸಂಭ್ರಮಿಸುತ್ತವೆ.

ಜೀರುಂಡೆ
ಜೀರುಂಡೆ

ಚಿಟ್ಟೆ, ಸೊಳ್ಳೆ, ಇರುವೆ, ಗೆದ್ದಲು, ಮಿಡತೆ, ಡ್ಯಾಮಸೆಲ್ ಹುಳು, ಜೀರುಂಡೆ, ಪರದೆ ರೆಕ್ಕೆಯ ಜೀರುಂಡೆ (Net winged beetles) ಜೇಡ ಕೂಡ ಮಳೆಗಾಲದ ಆಗಮನಕ್ಕೆ ಹಾತೊರೆಯುತ್ತವೆ. ಜೀವಿಗಳು ತಮ್ಮ ಬಲಿಷ್ಟ ಸಂತತಿಯನ್ನು ಹೆಚ್ಚಿಸಲು ಸಂತಾನೋತ್ಪತ್ತಿ ಮತ್ತು ಮರಿ ಹಾಕುವ ಸಮಯಕ್ಕೆ ಮರಿಗಳಿಗೆ ಬೇಕಾಗುವ ಅವಶ್ಯ ಪೋಷಕಾಂಶ, ಗುಣಮಟ್ಟದ ಆಹಾರ ಮಳೆಗಾಲದಲ್ಲಿಯೇ ಲಭ್ಯವಿರುತ್ತದೆ. ಸಸ್ತನಿಗಳಲ್ಲಿ ಹಾಲುಣಿಸುವ ಪ್ರಕ್ರಿಯೆಯಲ್ಲಿ ಅಧಿಕಶಕ್ತಿಯು ವ್ಯಯವಾಗುವುದರಿಂದ ಮಳೆಗಾಲದಲ್ಲಿ ಸೂಕ್ತ ಹಾಗೂ ಹೆಚ್ಚಾಗಿ ಆಹಾರ ಬೇಕಾಗುತ್ತದೆ. ಮಳೆಗಾಲದಲ್ಲಿ ಆಹಾರ ನಿರಾತಂಕವಾಗಿ ಮತ್ತು ನಿರಂತರವಾಗಿ ಲಭ್ಯವಿರುತ್ತದೆ. ಆದ್ದರಿಂದ ಈ ಕಾಲ ಸಂತಾನೊತ್ಪತ್ತಿಯ ಪರ್ವಕಾಲ. ಸಂತಾನೋತ್ಪತ್ತಿಯು ಬದುಕಿನ ಗಮ್ಯ ಪಯಣ ಕೂಡ ಹಾಗೂ ಬದುಕಿನ ಉದ್ದೇಶವೂ ಹೌದು.

ಪರದೆ ರೆಕ್ಕೆಯ ಜೀರುಂಡೆಗಳು ಗುಂಪುಗುಂಪಾಗಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುತ್ತವೆ. ಕೆಲವು ಸಲ ಎರಡರಿಂದ ಆರರವರೆಗೂ ಜೊತೆಯಾಗಿ ಸೇರುವ ಪರದೆ ರೆಕ್ಕೆಯ ಜೀರುಂಡೆಗಳನ್ನು ನೋಡಬಹುದು. ಅವು ಮಕರಂದ ಸೂಸುವ ಸಸ್ಯಗಳಲ್ಲಿ ಹೆಚ್ಚಾಗಿ, ಅದರಲ್ಲೂ ಮಳೆಗಾಲದಲ್ಲಿ ಮಾತ್ರ ಸಂತಾನವನ್ನು ವೃದ್ಧಿಪಡಿಸುತ್ತವೆ. ಈ ಸದಾವಕಾಶ ಬರೀ ಸಣ್ಣ ಪ್ರಾಣಿಗಳಷ್ಟೇ ಸೀಮಿತವಲ್ಲ, ಬಹುಮುಖ್ಯವಾಗಿ ಸಸ್ತನಿಗಳಲ್ಲಿ ಜಿರಾಫೆಗಳು, ಆಫ್ರಿಕಾದ ಆನೆಗಳು, ರಿಸ್ಸೆಸ್ ಕೋತಿಗಳು, ತೋಳಗಳು ಸಮಶೀತೋಷ್ಣವಲಯದಲ್ಲಿ ಮಳೆಗಾಲದಲ್ಲಿಯೇ ಹೆಚ್ಚು ಸಕ್ರಿಯವಾಗಿರುತ್ತವೆ. ಮನುಷ್ಯರು ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಪೂರಕವಾಗಿ ಹಲವಾರು ಅಧ್ಯಯನಗಳು ಪುಷ್ಟಿ ನೀಡುತ್ತವೆ. 

ಹಾರ್ನ್‌ಡ್‌ ಟ್ರೀಹಾಪರ್‌ 
ಹಾರ್ನ್‌ಡ್‌ ಟ್ರೀಹಾಪರ್‌ 

ಪರ್ಪಲ್‌ ಫ್ರಾಗ್ ಪಶ್ಚಿಮಘಟ್ಟಗಳಿಗೆ ಸೀಮಿತಗೊಂಡ ಕಪ್ಪೆ. ಮಳೆಗಾಲ ಪ್ರಾರಂಭದ ದಿನಗಳಲ್ಲಿ ವಾರ್ಷಿಕ ಒಂದೇ ಬಾರಿ ಮೊಟ್ಟೆ ಇಡಲು ಬರುತ್ತದೆ. ಆ ಕೆಲವು ಗಂಟೆಗಳು ಅತ್ಯಂತ ನಿರ್ಣಾಯಕ. ಅಷ್ಟೇ ಸಮಯದಲ್ಲಿಯೂ ಏಡಿಗಳಿಗೆ ಹಾಗೂ ಸರೀಸೃಪಗಳಿಗೆ ಆಹಾರವಾಗುವ ಎಲ್ಲಾ ಸಾಧ್ಯತೆಗಳಿರುತ್ತವೆ. ಹಾಗಾಗಿಯೇ ಇವುಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡ ಕಾರಣ IUCN ಪಟ್ಟಿಯಲ್ಲಿ ಇವುಗಳು Threatened ಪಟ್ಟಿಯಲ್ಲಿದೆ.

ರೆಡ್ ವೆಲ್ವೆಟ್‌ ಮೈಟ್ಸ್ ಸಾಮಾನ್ಯವಾಗಿ ತಣ್ಣನೆಯ ಕತ್ತಲು ಪ್ರದೇಶದಲ್ಲಿ ವಾಸಿಸುತ್ತವೆ. ಆದರೆ ಮಳೆಗಾಲದಲ್ಲಿ ಮಾತ್ರ ಸಂಗಾತಿಯನ್ನು ಪಡೆಯಲು ಸಂತಾನೋತ್ಪತ್ತಿಯನ್ನು ನಡೆಸಲು ಹೊರಬರುತ್ತವೆ. ಇಲ್ಲಿ ಕುತೂಹಲಕರ ಸಂಗತಿಯೊಂದಿದೆ. ಗಂಡು ಗೂಡನ್ನು ಕಟ್ಟಲು ಸ್ಥಳ ಪರಿಶೀಲನೆ ನಡೆಸುತ್ತದೆ. ಇದನ್ನು ಕೆಲವು ವಿಜ್ಞಾನಿಗಳು ಪ್ರೀತಿಯ ಗೂಡು (Love nest) ಎಂದು ಕರೆಯುತ್ತಾರೆ. ನಂತರ ಹೆಣ್ಣಿನ ಖಾಸಗಿ ಕೋಣೆಯನ್ನು (Boudoir) ಸಿದ್ಧಪಡಿಸುತ್ತದೆ. ಮರದ ತೊಗಟೆ, ಟೊಂಗೆ, ಎಲೆಗಳು ಮತ್ತು ವಿಶೇಷವಾಗಿ ವೀರ್ಯಗಳಿಂದ ಕೋಣೆಯನ್ನು ಅಲಂಕರಿಸುತ್ತದೆ. ನಂತರ ಹೆಣ್ಣಿನ ಆಗಮನಕ್ಕಾಗಿ ಕಾತುರದಿಂದ ಗಂಡು ಕಾಯುತ್ತದೆ. ಯಾವುದಾದರೂ ಹೆಣ್ಣು ಆಸಕ್ತಿ ತೋರಿ ಕೋಣೆಯ ಬಾಗಿಲಲ್ಲಿ ಬಂದು ನಿಂತಾಗ ಗಂಡಿನ ಖುಷಿಗೆ ಪಾರವೇ ಇಲ್ಲ. ಅದು ತನ್ನ ಕಾಲುಗಳನ್ನು ಅಲ್ಲಾಡಿಸುತ್ತ, ಮೈಯನ್ನು ಅತ್ತ ಇತ್ತ ಓಲಾಡಿಸುತ್ತ ಕುಣಿಯುತ್ತದೆ. ಇದನ್ನು ಕಂಡು ಹೆಣ್ಣು ಕೂಡ ಸ್ಪಂದಿಸಿ ಗಂಡಿನ ಕುಣಿತ ಮುಗಿದ ನಂತರ ಕೋಣೆಯನ್ನು ಪ್ರವೇಶಿಸುತ್ತದೆ. ಕೋಣೆಯಲ್ಲಿ ಅಲಂಕರಿಸಿ ಇಡಲಾದ ವೀರ್ಯದ ಉಂಡೆಗಳನ್ನು ತನ್ನ ಅಂಡಾಶಯಗಳೊಂದಿಗೆ ಮಿಲನಗೊಳಿಸಿದ ನಂತರ ಅಂಡಾಶಯಗಳು ಫಲಿತಗೊಳ್ಳುತ್ತವೆ. ನಂತರ ಕೆಲವೇ ನಿಮಿಷಗಳಲ್ಲಿ ತನ್ನ ಖಾಸಗಿ ಕೋಣೆಯನ್ನು ತೊರೆಯುತ್ತದೆ. ಇದು ಸಂತತಿ ಮುಂದುವರೆಸುವ ಗಮ್ಯ ಪಯಣ. ಹಾಗೆಂದ ಮಾತ್ರಕ್ಕೆ ಇಲ್ಲಿ ಗಂಡುಗಳ ಮಧ್ಯೆ ಪೈಪೋಟಿ ಇಲ್ಲವೆಂದೇನಿಲ್ಲ. ಕೆಲವೊಮ್ಮೆ ಬಲಿಷ್ಠ ಗಂಡು ಬೇರೆ ಗಂಡು ಸಿದ್ಧಪಡಿಸಿದ ಖಾಸಗಿ ಕೋಣೆಯನ್ನು ಬಲವಂತದಿಂದ ತನ್ನದ್ದಾಗಿಸಿಕೊಂಡು ತನ್ನ ವೀರ್ಯದ ಉಂಡೆಗಳನ್ನು ಅಲಂಕರಿಸುತ್ತದೆ. ಈ ಪೈಪೋಟಿ ಕೂಡ ಪ್ರಾಣಿಗಳಲ್ಲಿ ಸಹಜ ಕ್ರಿಯೆ. ತನ್ನ ಅಸ್ತಿತ್ವಕ್ಕೆ ಹೋರಾಟ ಮಾಡುತ್ತವೆ ಮತ್ತು ಬಲಿಷ್ಠವಾದವು ಮಾತ್ರ ಬದುಕುಳಿಯುತ್ತವೆ.

ಮುಂಗಾರು ಮಳೆ ಸಕಲ ಜೀವರಾಶಿಗೂ ಜೀವನೋತ್ಸಾಹ ತುಂಬುತ್ತದೆ. ಇದಕ್ಕಾಗಿಯೇ ಈ ಮೋಹಕ ಮಳೆಗಾಗಿ ಪ್ರಾಣಿ ಪಕ್ಷಿ ಸಸ್ಯ ಸಂಕುಲ ಮತ್ತು ಮನುಷ್ಯರು ಕಾತರಿಸುವುದು, ಕನವರಿಸುವುದು...! 

ಪರ್ಪಲ್‌ ಫ್ರಾಗ್
ಪರ್ಪಲ್‌ ಫ್ರಾಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT