ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾವಿ ತೇಜಸ್ವಿ ಲೋಕದಲ್ಲಿ ಸುತ್ತಾಟ...

ಎಚ್ ಎಸ್ ನವೀನ ಕುಮಾರ್ ಹೊಸದುರ್ಗ
Published 4 ಫೆಬ್ರುವರಿ 2024, 0:22 IST
Last Updated 4 ಫೆಬ್ರುವರಿ 2024, 0:22 IST
ಅಕ್ಷರ ಗಾತ್ರ
ಕೊಟ್ಟಿಗೆಹಾರದಲ್ಲಿರುವ ‘ತೇಜಸ್ವಿ ಲೋಕ’ ಹೆಸರಾಂತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬಹುಮುಖ ಪ್ರತಿಭೆ, ವ್ಯಕ್ತಿತ್ವವನ್ನು ಸೊಗಸಾಗಿ ಅನಾವರಣಗೊಳಿಸಿದೆ. ಇದು ಯುವಜನಾಂಗ, ವಿದ್ಯಾರ್ಥಿಗಳು ಮತ್ತು ಸಾಹಿತ್ಯ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

ಚಾರ್ಮಾಡಿ ಘಾಟಿಯ ಮೂಲಕ ಕರಾವಳಿಯತ್ತ ಕುಟುಂಬ ಸಮೇತ ಹೊರಟಿದ್ದ ನಾನು, ಮೂಡಿಗೆರೆ ಪ್ರವೇಶಿಸುತ್ತಿದ್ದ ಹಾಗೆ ಎಂದಿನಂತೆ ತೇಜಸ್ವಿಯವರ ನೆನಪು ಮಾಡಿಕೊಳ್ಳಲು ಶುರು ಮಾಡಿದೆ. ಮೂಡಿಗೆರೆ ದಾಟಿ ಕೊಟ್ಟಿಗೆಹಾರಕ್ಕೆ ಬರುತ್ತಿದ್ದಂತೆ ರಸ್ತೆಯ ಪಕ್ಕದಲ್ಲೇ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ’ ಎಂಬ ಫಲಕ ಹೊತ್ತ ಮಲೆನಾಡ ಚೌಕಿಮನೆ ಕಟ್ಟಡ ನಮ್ಮನ್ನು ಸೆಳೆಯಿತು. ಆಗ ತೇಜಸ್ವಿ ಗುಂಗಿನಲ್ಲೇ ಇದ್ದ ನನಗೆ ಆದ ಆನಂದ ಅಷ್ಟಿಷ್ಟಲ್ಲ. ತಕ್ಷಣ ನಮ್ಮ ಕಾರು, ತೆರೆದಿದ್ದ ಗೇಟಿನ ಒಳಹೊಕ್ಕಿತು. ಆಗ ನಮ್ಮನ್ನು ಸ್ವಾಗತಿಸಿದ್ದು ಹೋಳಾದ ಕಾಫಿ ಬೀಜದ ಕಲಾಕೃತಿಯ ಹಿಂದಿದ್ದ ‘ತೇಜಸ್ವಿ ಲೋಕ’ ಎಂಬ ಬೋರ್ಡ್.

ಕುತೂಹಲದಿಂದ ಕಟ್ಟಡದ ಒಳಹೊಕ್ಕಾಗ ಅಲ್ಲಿದ್ದ ‘ಆಧುನಿಕ ಕನ್ನಡದ ಮಾಯಾವಿ’ ಎಂಬ ಪೋಸ್ಟರ್‌ನಲ್ಲಿ ತೇಜಸ್ವಿಯವರ ಚಿತ್ರದ ಜೊತೆಗೆ ಕಂಪ್ಯೂಟರ್ ಹಾಗೂ ಪುಸ್ತಕಗಳೆರಡೂ ಕಣ್ಣಿಗೆ ಬಿದ್ದವು. ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ ಅವರು ಅಪರೂಪದ ‘ತೇಜಸ್ವಿ ಓದಿನ ಮನೆ’ಗೆ ಕರೆದೊಯ್ದರು. ಹೊರಗೆ ಸುತ್ತುವರಿದ ಹಸಿರುಗಿರಿಶೃಂಗಗಳು ಗಾಜಿನಗೋಡೆಗಳಿಂದ ಕಾಣಿಸುತ್ತಿದ್ದವು. ಒಳಗಿರುವ ಕಪಾಟಿನಲ್ಲಿ ಈ ಗಿರಿಶೃಂಗದ ತುಂಬೆಲ್ಲಾ ಓಡಾಡಿ ಅದರ ವಿಶಿಷ್ಟ ಅನುಭವ ಕಥಾನಕಗಳನ್ನು ತನ್ನದೇ ವಿಶಿಷ್ಟ ಶೈಲಿಯಿಂದ ತೇಜಸ್ವಿಯವರು ದಾಖಲಿಸಿರುವ ಎಲ್ಲಾ ಪುಸ್ತಕಗಳು ತುಂಬಿಕೊಂಡಿದ್ದವು. ಅದರಲ್ಲಿ ‘ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್’ ಪುಸ್ತಕಗಳನ್ನು ಕೈಗೆತ್ತಿಕೊಂಡು, ಅದರ ಒಂದುಪುಟವನ್ನು ಮಡದಿ, ಮಕ್ಕಳಿಗೆ ಓದಿ ಹೇಳಿದಾಗ ಏನೋ ಆನಂದ!

ಚಾರ್ಮಾಡಿ ಘಾಟಿಯ ಸಹ್ಯಾದ್ರಿಕಾಡಿನ ಅಗಮ್ಯತೆಯ ಒಳಗೆ ಪ್ರವೇಶಿಸುವಾಗ ಈ ಹಸಿರು ಸಿರಿಗೆ ಹೊಸ್ತಿಲಿನಂತಿರುವ ಕೊಟ್ಟಿಗೆಹಾರದ 2 ಎಕರೆ 20 ಗುಂಟೆ ಜಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ರೂಪುಗೊಂಡಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ‘ತೇಜಸ್ವಿ ಲೋಕ’ ಪೂಚಂತೇಯವರ ಬಹುಮುಖಿ ವ್ಯಕ್ತಿತ್ವವನ್ನು ವಿಶಿಷ್ಟವಾಗಿ ಅನಾವರಣಗೊಳಿಸುತ್ತದೆ.

‘ಓದಿನ ಕೊಠಡಿ’ಯಲ್ಲಿ ಕುಳಿತರೆ ತೆರೆದುಕೊಳ್ಳುವ ತೇಜಸ್ವಿಯವರ ಪುಸ್ತಕಲೋಕ

‘ಓದಿನ ಕೊಠಡಿ’ಯಲ್ಲಿ ಕುಳಿತರೆ ತೆರೆದುಕೊಳ್ಳುವ ತೇಜಸ್ವಿಯವರ ಪುಸ್ತಕಲೋಕ

‘ಓದಿನ ಕೊಠಡಿ’ಯಲ್ಲಿ ಕುಳಿತು ತೇಜಸ್ವಿಯವರ ಕರ್ವಾಲೋ, ಚಿದಂಬರ ರಹಸ್ಯ, ಪರಿಸರದ ಕಥೆಗಳು, ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್, ಕಿರಗೂರಿನ ಗಯ್ಯಾಳಿಗಳು, ಜುಗಾರಿ ಕ್ರಾಸ್, ಮಾಯಾಲೋಕ ಮುಂತಾದ ಅದ್ಭುತ ಪುಸ್ತಕಗಳ ಪುಟಗಳನ್ನು ತಿರುವಿ ಹಾಕುತ್ತಿದ್ದರೆ, ತೇಜಸ್ವಿ ಲೋಕದಲ್ಲಿ ಸಣ್ಣ ಸುತ್ತನ್ನು ಹಾಕಿಬಂದ ಅನುಭವವಾಗುತ್ತದೆ. ಪ್ರತಿಷ್ಠಾನದ ಚೌಕಿಮನೆಯಲ್ಲಿ ಅಡ್ಡಾಡುತ್ತಾ, ಅಲ್ಲಿ ತೇಜಸ್ವಿಯವರು ತೆಗೆದ ಮ್ಯಾಗ್ ಪೈ ರಾಬಿನ್, ಗ್ರೀನ್ ಬಾರ್ಬೆಟ್ ಮುಂತಾದ ಹಕ್ಕಿಗಳ ಅದ್ಭುತ ಛಾಯಾಚಿತ್ರಗಳನ್ನು ವೀಕ್ಷಿಸಿದರೆ, ಅವರ ವ್ಯಕ್ತಿತ್ವದ ಅಗಾಧತೆಯ ಕಿರುಪರಿಚಯ ಖಂಡಿತ ಆಗುತ್ತದೆ. ಜೊತೆಗೆ ಇಲ್ಲಿನ ಗೋಡೆಗಳಲ್ಲಿ ಹಚ್ಚಲಾಗಿರುವ ಅವರ ಪುಸ್ತಕಗಳ ಚಿತ್ರಗಳು, ಅವರ ‘ಹಕ್ಕಿಪುಕ್ಕ’ ಪುಸ್ತಕದಲ್ಲಿನ ನಮ್ಮ ನಾಡಿನ ಖಗಲೋಕದ ಪರಿಚಯಾತ್ಮಕ ಪುಟಗಳು ನಮ್ಮನ್ನು ಮತ್ತೆ ಮತ್ತೆ ತೇಜಸ್ವಿ ಪ್ರಪಂಚಕ್ಕೆ ಕರೆದೊಯ್ಯುತ್ತವೆ. ಓದಿನ ಕೊಠಡಿಯ ಗೋಡೆಗಳಲ್ಲಿ ತೂಗು ಹಾಕಿರುವ ಅವರ ಚಿಂತನೆಯ ಫಲಕಗಳಲ್ಲಿ ‘ಇಷ್ಟೆಲ್ಲಾ ಸಂಪರ್ಕ ಸಾಧನಗಳಲ್ಲಿ ಕ್ರಾಂತಿಯಾಗಿದ್ದರೂ ಅನುಭವ, ಆಲೋಚನೆ, ವಿಚಾರ ವಿಷಯಗಳ ಸಂವಹನ ಮತ್ತು ಹಸ್ತಾಂತರಕ್ಕೆ ಅತ್ಯಂತ ಅಗ್ಗದ ಮತ್ತು ಕ್ಷಿಪ್ರ ವಾಹಕಗಳೆಂದರೆ ಇಂದಿಗೂ ಪುಸ್ತಕಗಳೇ’ ಎಂಬುದು ಗಮನ ಸೆಳೆಯಿತು. ಇದು ನಮ್ಮ ಬದುಕಲ್ಲಿ ಪುಸ್ತಕಗಳ ಹಾಗೂ ಇಂದು ನಮ್ಮಿಂದ ದೂರಾಗುತ್ತಿರುವ ಓದಿನ ಸಂಸ್ಕೃತಿಯ ಮಹತ್ವವನ್ನು ಸಾರಿ ಹೇಳುತ್ತದೆ. ಇಂದಿನ ಪೀಳಿಗೆಗೆ ಪುಸ್ತಕ ಸಂಸ್ಕೃತಿಯ ಪರಿಚಯ ಮಾಡಿಕೊಡಲು ಇಂತಹ ಕಡೆಗೆ ಖಂಡಿತಾ ಕರೆದೊಯ್ಯಬೇಕು.

ಇಲ್ಲಿ ಮಾರಾಟಕ್ಕಿರುವ ತೇಜಸ್ವಿ, ಕುವೆಂಪುರವರ ಕೆಲ ಪುಸ್ತಕಗಳನ್ನು ಖರೀದಿಸಿ, ಆಧುನಿಕ ಮಾಯಾವಿಯ ಇನ್ನಷ್ಟು ಸವಿನೆನಪುಗಳ ಮೂಟೆ ಹೊತ್ತು ‘ತೇಜಸ್ವಿ ಲೋಕ’ದಿಂದ ಹೊರಟೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT