ಪು.ತಿ.ನರಸಿಂಹಾಚಾರ್(ಪುತಿನ) ಅವರು ಇಪ್ಪತ್ತಕ್ಕೂ ಹೆಚ್ಚು ಗೀತರೂಪಕಗಳ ಮೂಲಕ ಮನೆಮಾತಾದವರು. ಅವರ ‘ಹರಿಣಾಭಿಸರಣ’ ರಂಗ ಸಾಧ್ಯತೆಯ ಹೊಸ ಆಯಾಮವಾಗಿ ಈಚೆಗೆ ಪ್ರಸ್ತುತಗೊಂಡಿತು. ಬೆಂಗಳೂರಿನ ‘ಯಕ್ಷ ಸಿಂಚನ ಟ್ರಸ್ಟಿ’ನವರು ಪುತಿನ ಅವರ 120ನೇ ಜನ್ಮದಿನದ ಅಂಗವಾಗಿ ಸೇವಾ ಸದನದಲ್ಲಿ ಈ ಕೃತಿಯನ್ನು ಯಕ್ಷಗಾನ ರೂಪದಲ್ಲಿ ಪ್ರದರ್ಶಿಸುವ ಮೂಲಕ ಹವ್ಯಾಸಿಗಳಿಗೊಂದು ಮಾದರಿಯಾದರು.

ರಾಮಾಯಣ ಪುತಿನ ಅವರ ನಿತ್ಯ ಪಾರಾಯಣದ ಮಹಾಕಾವ್ಯ. ಅಲ್ಲಿನ ಮಾನವ ಜೀವದ ಸೆಲೆಗಳನ್ನು ಆಯ್ದು ಗೀತರೂಪಕಗಳನ್ನು ರಚಿಸಿರುವುದು ಅವರ ಹೆಗ್ಗಳಿಕೆ. ಹರಿಣಾಭಿಸರಣದಲ್ಲಿ ಕವಿಯ ಆಶಯಕ್ಕೆ ಭಂಗಬಾರದಂತೆ, ಯಕ್ಷಗಾನದ ಚೌಕಟ್ಟಿಗೆ ಊನವಾಗದಂತೆ ಎಚ್ಚರಿಕೆಯ ನಡೆಯನ್ನು ನಡೆಯುವ ಮೂಲಕ ಯಕ್ಷ ಸಿಂಚನದವರು ಸಾರ್ಥಕತೆ ಮೆರೆದರು. ಗುರು ಕೃಷ್ಣಮೂರ್ತಿ ತುಂಗರ ನಿರ್ದೇಶನದಲ್ಲಿ ನಡೆದ ಪ್ರದರ್ಶನದಲ್ಲಿ ಸೀತೆಯ ಭಾವಾಭಿವ್ಯಕ್ತಿಗೆ ಹೆಚ್ಚಿನ ಅವಕಾಶವಿದೆ. ಅದನ್ನು ಬಳಸಿಕೊಂಡ ಕುಮಾರಿ ಪೂಜಾ ಪದ್ಯಗಳಲ್ಲಿ ಅಡಗಿದ್ದ ಭಾವನೆಗಳನ್ನು ತಮ್ಮ ಆಂಗಿಕ, ವಾಚಿಕ, ಕುಣಿತ, ಮಣಿತಗಳಲ್ಲೆಲ್ಲಾ ಸಮರ್ಥವಾಗಿ ಅಭಿವ್ಯಕ್ತಿಸಿದರು. ಭಾಗವತರಾದ ಕುಮಾರಿ ಚಿತ್ಕಲಾ ತುಂಗರ ಹಾಡುಗಾರಿಕೆಯ ‘ಅಗೋ ನೋಡು ಎಂಥ ಹರಿಣ ಬಾ ಬೇಗ ಬಾ ಬೇಗ ಬಾ ಬೇಗ ಬಾ ರಮಣ’ ಎಂಬುದಕ್ಕೆ, ರಾಮನಲ್ಲಿ ಹೇಳಿಕೊಳ್ಳುವ ವಿಸ್ಮಯ, ತೋಡಿಕೊಳ್ಳುವ ಅಭಿಪ್ಸೆ, ಪಡೆಯಬೇಕೆಂಬ ಆಗ್ರಹಗಳನ್ನೆಲ್ಲ ಸಶಕ್ತವಾಗಿ ರಂಗದಲ್ಲಿ ಮೂಡಿಸಿದರು. ಜಿಂಕೆಯಾಗಿ ಕುಮಾರಿ ಕವಿತಳ ನರ್ತನ ಮನೋಹರವಾಗಿತ್ತು.

ಕೇದಗೆಮಂದಲೆ ವೇಷದಲ್ಲಿದ್ದ ರಾಮನ ಪಾತ್ರಧಾರಿ ಮನೋಜ್ ಭಟ್ ರಾಕ್ಷಸರ ಮಾಯೆಯ ಅರಿವಿದ್ದು, ಲಕ್ಷ್ಮಣನ ಎಚ್ಚರಿಕೆಯ ನಡುವೆಯೂ ಹೆಂಡತಿಯ ಮೇಲಿನ ಪ್ರೀತಿಯಿಂದ ಆಸೆ ಪೂರೈಸಲು ಹರಿಣದೆಡೆಗೆ ಅಭಿಸರಣ ಮಾಡುತ್ತಾನೆ. ಲಕ್ಷ್ಮಣನಾಗಿದ್ದ ಕೃಷ್ಣಮೂರ್ತಿ ತುಂಗ ಹಾಗೂ ಸೀತೆಯಾಗಿದ್ದ ಪೂಜಾರ ನಡುವಿನ ಸಂವಾದ ಸ್ವಲ್ಪ ದೀರ್ಘವಾದರೂ ತಾತ್ವಿಕ ವಿಚಾರಗಳಿಂದ ಕೂಡಿತ್ತು. ತುಂಗರು ಲಕ್ಷ್ಮಣನ ದ್ವಂದ್ವವನ್ನು ಅಸಹಾಯಕತೆಯನ್ನು, ಅಣ್ಣನ ಆಜ್ಞೆ ಮೀರಿದ್ದಕಾದ ನೋವನ್ನ ಸಶಕ್ತವಾಗಿ ಕುಣಿತ, ಮಾತುಗಳಲ್ಲಿ ಬಿಂಬಿಸಿದ್ದಾರೆ. ಖಳನಾಯಕ ಪಾತ್ರಗಳಲ್ಲಿ ಹೆಸರು ಮಾಡಿರುವ ರವಿ ಮಡೋಡಿಯವರು ರಾವಣನಾಗಿ ಪ್ರವೇಶಿಸಿದ ಪರಿ, ರಂಗದಲ್ಲಿ ತೋರಿದ ಪೌರುಷದ ಅಭಿವ್ಯಕ್ತಿ, ಮಿಂಚಿದ ಶೃಂಗಾರದ ತೋರಿಕೆ, ಋಷಿಯಾಗಿ ನಯವಂಚಕ ನಡೆಗಳೆಲ್ಲ ಪ್ರದರ್ಶನ ಕಳೆಗಟ್ಟಲು ಕಾರಣವಾದವು. ಸೀತೆಯನ್ನು ಕದ್ದೊಯ್ಯವಾಗ ಜಟಾಯುವಾಗಿ ಪ್ರವೇಶಿಸಿದ ರಾಘವೇಂದ್ರ ಐತಾಳರ ವೇಷಗಾರಿಕೆ ಬಹು ಆಕರ್ಷಕವಾಗಿತ್ತು.

ಪುತಿನ ಅವರು ದುರುಳತನದ ಕೊನೆಯೇ ಜಗಕೆ ಮಂಗಲ ಎಂಬುದನ್ನು ಕೊನೆಯ ಹರಕೆಯ ನುಡಿಯಲ್ಲಿ ಸೂಚಿಸಿದ್ದಾರೆ. ಚಿತ್ಕಲಾ ತುಂಗರ ಭಾಗವತಿಕೆಗೆ ಸಂಪತ್ ಆಚಾರ್ಯ ಅವರ ಮದ್ದಲೆ, ಮನೋಜ್ ಅವರ ಚಂಡೆಯ ಸಹಕಾರ ಸಮತೋಲನವಾಗಿತ್ತು. ವಿಭಿನ್ನ ಭಾವ ತರಂಗಗಳುಳ್ಳ ‘ಹರಿಣಾಭಿಸರಣ’, ರಾಮನ ಪ್ರೀತಿ, ಲಕ್ಷ್ಮಣನ ದ್ವಂದ್ವ, ಸೀತೆಯ ಮೋಹ, ಹರಿಣದ ಮೋಸ, ರಾವಣನ ಕ್ರೌರ್ಯ, ಜಟಾಯುವಿನ ಅಸಹಾಯಕತೆಯಿಂದ ಕೂಡಿದ್ದು ಯಕ್ಷ ಸಿಂಚನದ ಕಲಾವಿದರು ಬಹು ಸಮರ್ಥವಾಗಿ ರಂಗದಲ್ಲಿ ಮೂಡಿಸುವ ಮೂಲಕ ಪುತಿನ ಅವರಿಗೆ ನಮನ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.