ಪಂದ್ಯ ರದ್ದುಗೊಳಿಸಿ: ಪಹಲ್ಗಾಮ್ ಸಂತ್ರಸ್ತೆ ಮನವಿ
ಲಖನೌ: ‘ದುಬೈನಲ್ಲಿ ನಡೆಯುತ್ತಿರುವ ಭಾರತ– ಪಾಕಿಸ್ತಾನ ಪಂದ್ಯವನ್ನು ಬಿಸಿಸಿಐ ಕೂಡಲೇ ರದ್ದುಗೊಳಿಸಬೇಕು. ಜನರು ಕೂಡ ಪಂದ್ಯವನ್ನು ಬಹಿಷ್ಕರಿಸಿ ವೀಕ್ಷಿಸಬಾರದು’ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತೆ ಆಗ್ರಹಿಸಿದ್ದಾರೆ. ಪಹಲ್ಗಾಮ್‌ನ ಭಯೋತ್ಪಾದಕರ ದಾಳಿಯಲ್ಲಿ ಕಾನ್ಪುರ ಮೂಲದ ಉದ್ಯಮಿ ಶುಭಂ ದ್ವಿವೇದಿ ಕೂಡ ಮೃತಪಟ್ಟಿದ್ದರು. ‘ಪಂದ್ಯ ಆಯೋಜಿಸುವ ಮೂಲಕ ಪಹಲ್ಗಾಮ್ ಹುತಾತ್ಮರಿಗೆ ಅಗೌರವ ತೋರಿದಂತಾಗಿದೆ’ ಎಂದು ಶುಭಂ ಪತ್ನಿ ಆಶಾನ್ಯ ದ್ವಿವೇದಿ ಕಿಡಿಕಾರಿದ್ದಾರೆ. ‘ಸಂತ್ರಸ್ತ ಕುಟುಂಬಗಳ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಜನರೇ ಪಂದ್ಯವನ್ನು ಬಹಿಷ್ಕರಿಸಿ ಪಂದ್ಯ ನೋಡಬಾರದು. ಕ್ರೀಡಾಂಗಣಕ್ಕೂ ತೆರಳಬಾರದು’ ಎಂದು ಈ ವೇಳೆ ಆಗ್ರಹಿಸಿದ್ದಾರೆ.