ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನಹಣ್ಣು: ಅಹಾ! ಧಾರವಾಡ ಆಲ್ಫಾನ್ಸೊ

Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ಒಪ್ಪವಾಗಿ ಜೋಡಿಸಿದ್ದ ಆಕರ್ಷಕ ಬಾಕ್ಸ್‌ಗಳ ಮೇಲೆ ‘ಧಾರವಾಡ ಆಲ್ಫಾನ್ಸೊ’ ಹಣ್ಣಿನ ಚಿತ್ರ ಮನಸೆಳೆಯುತ್ತಿತ್ತು. ಅದು ಖರೇ, ‘ಧಾರವಾಡ ಆಲ್ಫಾನ್ಸೊ’ ಹೌದೋ, ಅಲ್ಲವೋ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲು ಬಾಕ್ಸ್‌ ಮೇಲಿದ್ದ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದೆ. ಮಾವು ಬೆಳೆಗಾರನ ಹೆಸರು, ಮೊಬೈಲ್‌ ನಂಬರ್‌, ತೋಟದ ಹೆಸರು, ಮಾವಿನಮರಗಳ ಸಂಖ್ಯೆ ಹಾಗೂ ತೋಟದ ಲೊಕೇಷನ್‌ ಲಿಂಕ್‌ಗಳಿದ್ದ ವಿವರಗಳು ತೆರೆದುಕೊಂಡವು. ಕುತೂಹಲಕ್ಕಾಗಿ ಧಾರವಾಡ ಸಮೀಪವೇ ಇರುವ ಕಲಕೇರಿಯ ಪ್ರಮೋದ್‌ ಗಾಂವಕರ ಅವರ ತೋಟಕ್ಕೆ ಹೋದೆ. ಅಲ್ಲಿ ಕೆಲಸಗಾರರು ಮಾವಿನಕಾಯಿ ಕಟಾವು ಮಾಡಿ ಕ್ರೇಟ್‌ಗಳಲ್ಲಿ ತುಂಬಿಕೊಂಡು ಭತ್ತದ ಹುಲ್ಲಿನಲ್ಲಿ ಇಟ್ಟು ಹಣ್ಣಾಗಿಸಿ ಮಾರಾಟಕ್ಕೆ ಒಯ್ಯುವುದರಲ್ಲಿ ನಿರತರಾಗಿದ್ದರು. ಕೆಲವು ಗ್ರಾಹಕರು ತೋಟಕ್ಕೆ ಬಂದು ಮಾವು ಖರೀದಿಸುತ್ತಿದ್ದರು. ತೇಗೂರು, ನರೇಂದ್ರ ಸಹಿತ ವಿವಿಧ ಗ್ರಾಮಗಳ ಬೆಳೆಗಾರರು ತೋಟದಿಂದ ತಾಜಾ ಹಣ್ಣು ತಂದು ರಸ್ತೆಬದಿಗಳಲ್ಲಿ (ಬೆಳಗಾವಿ ಕಡೆ ಸಾಗುವ ಮಾರ್ಗ) ಮಾರಾಟ ಮಾಡುತ್ತಿದ್ದರು. ವಾಹನಗಳಲ್ಲಿ ಸಾಗುವ ಬಹಳಷ್ಟು ಮಂದಿ ಹಣ್ಣನ್ನು ಖರೀದಿಸುತ್ತಿದ್ದರು.

ಆಲ್ಫಾನ್ಸೊ ಮಾವಿನಹಣ್ಣು ಧಾರವಾಡದ ವೈಶಿಷ್ಟ್ಯ. ಬಂಗಾರ ಬಣ್ಣದ ಈ ಹಣ್ಣು ತುಂಬಾ ಸಿಹಿ. ಸುವಾಸನೆ, ಮೃದು ಮತ್ತು ಕಡುಕೇಸರಿ ಬಣ್ಣದ ತಿರುಳು, ವಾಟೆಯಲ್ಲಿ ನಾರುನಾರು ಇಲ್ಲದಿರುವುದು ವಿಶೇಷ. ಆಲ್ಫಾನ್ಸೊ ಸೀಕರಣೆ (ಮಾವಿನಹಣ್ಣಿನ ರಸಾಯನ) ಬಲು ಸ್ವಾದಿಷ್ಟ. ಏಪ್ರಿಲ್‌, ಮೇ ತಿಂಗಳು ಈ ಹಣ್ಣಿನ ಘಮಲಿನ ಸಮಯ. ಈ ತಿಂಗಳುಗಳಲ್ಲಿ ಬರುವ ಹಬ್ಬಗಳಲ್ಲಿ (ಯುಗಾದಿ, ಬಸವ ಜಯಂತಿ) ಹೋಳಿಗೆ–ಆಲ್ಫಾನ್ಸೊ ಸೀಕರಣೆ ಸವಿಯುವುದು ವಾಡಿಕೆ. ಧಾರವಾಡ ಭಾಗದ ಮಣ್ಣು, ನೀರು, ಹವೆ, ಗಾಳಿ, ವಾತಾವರಣ ಆಲ್ಫಾನ್ಸೊ ಹಣ್ಣಿನ ಸೊಗಡಿನ ಸೂತ್ರ.

ಪ್ರಮೋದ ಗಾಂವಕರ ಅವರ ತೋಟದ ಮನೆಯಲ್ಲಿ ಕಾರ್ಮಿಕರು ಆಲ್ಫಾನ್ಸೊ ಹಣ್ಣುಗಳನ್ನು ಬಾಕ್ಸ್‌ಗಳಿಗೆ ತುಂಬುತ್ತಿರುವುದು   ಚಿತ್ರಗಳು: ಬಿ.ಎಂ.ಕೇದಾರನಾಥ
ಪ್ರಮೋದ ಗಾಂವಕರ ಅವರ ತೋಟದ ಮನೆಯಲ್ಲಿ ಕಾರ್ಮಿಕರು ಆಲ್ಫಾನ್ಸೊ ಹಣ್ಣುಗಳನ್ನು ಬಾಕ್ಸ್‌ಗಳಿಗೆ ತುಂಬುತ್ತಿರುವುದು   ಚಿತ್ರಗಳು: ಬಿ.ಎಂ.ಕೇದಾರನಾಥ

ಅರೆ ಮಲೆನಾಡಿನ ಕಲಕೇರಿ, ತೇಗೂರು, ಕೆಲಗೇರಿ ತಡಸಿನಕೊಪ್ಪ ಸುತ್ತಲಿನ ಮಾವಿನತೋಟಗಳಲ್ಲಿ ಮಾವು ಕಟಾವು, ಸಾಗಣೆ, ಮಾರಾಟ ಬಿರುಸಾಗಿದೆ. ಹಾವೇರಿ, ಬೆಳಗಾವಿ ಜಿಲ್ಲೆಯ ಹಲವೆಡೆ ಈ ತಳಿಯ ಮಾವು ಬೆಳೆಯಲಾಗುತ್ತದೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 8,400 ಹೆಕ್ಟೇರ್‌ ಪ್ರದೇಶದಲ್ಲಿ ಈ ತಳಿಯ ಮಾವಿನಮರಗಳು ಇವೆ. ಈ ವರ್ಷ ಸುಮಾರು 16 ಸಾವಿರ ಟನ್‌ ಫಸಲನ್ನು ನಿರೀಕ್ಷಿಸಲಾಗಿದೆ.

‘ಮಹಾರಾಷ್ಟ್ರದ ರತ್ನಗಿರಿ ಭಾಗ ಮತ್ತು ಕರ್ನಾಟಕ ಧಾರವಾಡ ಭಾಗದ ಆಲ್ಫಾನ್ಸೊ ಮಾವಿನಹಣ್ಣು ಅತ್ಯಂತ ರುಚಿಕರ ಎಂದು ದೇಶದಲ್ಲಿ ಖ್ಯಾತಿ ಪಡೆದಿವೆ’ ಎಂದು ಧಾರವಾಡ ಜಿಲ್ಲೆಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ್‌ ಹೇಳುತ್ತಾರೆ.

ಮಾವು ಬೆಳೆಗಾರರ ಸಂಘ

ಧಾರವಾಡ ಜಿಲ್ಲೆಯ ಬೆಳೆಗಾರರು ‘ಮಾವು ಬೆಳೆಗಾರರ ಸಂಘ’ ರಚಿಸಿಕೊಂಡಿದ್ದಾರೆ. ಮಾವಿನತೋಟದಿಂದ ಆಲ್ಫಾನ್ಸೊ ಮಾವಿನಹಣ್ಣನ್ನು ತಾವೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಸಂಘದಲ್ಲಿ ಸುಮಾರು 300 ಬೆಳೆಗಾರರು ಸದಸ್ಯರಾಗಿದ್ದಾರೆ. ರಾಸಾಯನಿಕ ಬಳಸದೆ ಹಣ್ಣು ಮಾಡಿದ ಉತ್ತಮ ಗುಣಮಟ್ಟದ ಸ್ವಾದಿಷ್ಟ
ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವುದು ಸಂಘದ ಉದ್ದೇಶ. ಮಾವು ಮೇಳ ಆಯೋಜಿಸಿ ಗ್ರಾಹಕರನ್ನು ನೇರವಾಗಿ ತಲುಪುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಈ ಹಣ್ಣು ಅಮೆರಿಕ, ಇಂಗ್ಲೆಂಡ್‌, ದುಬೈಗೂ ರವಾನೆಯಾಗುತ್ತದೆ.

ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಸಮೀಪ ಹೆದ್ದಾರಿ ಪಕ್ಕದಲ್ಲಿ ರೈತ ಮಹಿಳೆಯೊಬ್ಬರಿಗೆ ಗ್ರಾಹಕರೊಬ್ಬರು ಆಲ್ಫೊನ್ಸೊ ಮಾವಿನ ಹಣ್ಣು ಖರೀದಿಸುತ್ತಿರುವುದು 
ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಸಮೀಪ ಹೆದ್ದಾರಿ ಪಕ್ಕದಲ್ಲಿ ರೈತ ಮಹಿಳೆಯೊಬ್ಬರಿಗೆ ಗ್ರಾಹಕರೊಬ್ಬರು ಆಲ್ಫೊನ್ಸೊ ಮಾವಿನ ಹಣ್ಣು ಖರೀದಿಸುತ್ತಿರುವುದು 

‘ಧಾರವಾಡ ಭಾಗದಲ್ಲಿ ಉಷ್ಣಾಂಶ 30 ರಿಂದ 36 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಆರ್ದ್ರತೆ ಶೇಕಡ 60 ರಿಂದ 70 ಇರುತ್ತದೆ. ಈ ಭಾಗದ ಅರೆ ಮಲೆನಾಡು ಸೀಮೆಯ ಮಣ್ಣು, ನೀರು, ಹವೆ ಆಲ್ಫಾನ್ಸೊ ತಳಿ ಬೆಳೆಯಲು ಪೂರಕವಾಗಿದೆ’ ಎಂದು ಧಾರವಾಡದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಜ್ಞಾನೇಶ್ವರ ಬಿ.ಗೋಪಾಲಿ ಹೇಳುತ್ತಾರೆ.

‘ಬಹುತೇಕ ಸಾವಯವ ಪದ್ಧತಿಯಲ್ಲೇ ಮಾವು ಬೆಳೆಯುತ್ತೇವೆ. ಸಾವಯವ ವಿಧಾನದಲ್ಲೇ ಹಣ್ಣು ಮಾಡಿ ಮಾರಾಟ ಮಾಡುತ್ತೇವೆ. ಆಲ್ಫಾನ್ಸೊ ಹಣ್ಣಿನ ಎರಡೂವರೆಯಿಂದ ಮೂರು ಕೆ.ಜಿ ಬಾಕ್ಸ್‌ಗೆ ₹300 ರಿಂದ 500 ರವರೆಗೆ ದರ ಇದೆ. ಒಂದು ಬಾಕ್ಸ್‌ನಲ್ಲಿ 12 ರಿಂದ 14 ಹಣ್ಣಗಳು ಇರುತ್ತವೆ’ ಎಂದು ಕಲಕೇರಿಯ ಮಾವು ಬೆಳೆಗಾರ ಪ್ರಮೋದ್‌ ಗಾಂವಕರ ಹೇಳುತ್ತಾರೆ.

ಧಾರವಾಡ ಭಾಗದ ಆಲ್ಪಾನ್ಸೊ ಹಣ್ಣು ಜೇನಿನಷ್ಟು ಸಿಹಿ ಬಾಯಿಗಿಟ್ಟರೆ ಕರುಗುತ್ತದೆ. ಈ ಮಾವಿನಹಣ್ಣಿನ ಸೀಕರಣೆ ಚೆನ್ನಾಗಿರುತ್ತದೆ. ಇದನ್ನು ಬಳಸಿ ತಯಾರಿಸುವ ಸೀಕರಣೆಗೆ ಸಕ್ಕರೆ ಬೆರೆಸುವ ಅಗತ್ಯವೇ ಇಲ್ಲ. ಈ ಹಣ್ಣು ಬಲು ಮಧುರ. ಪ್ರತಿವರ್ಷ ಬೇಸಿಗೆ ರಜೆಗೆ ತವರೂರು ಧಾರವಾಡಕ್ಕೆ ಬಂದು ಬೆಂಗಳೂರಿಗೆ ವಾಪಸಾಗುವಾಗ ಹಣ್ಣು ಒಯ್ಯುತ್ತೇನೆ.
–ರೇಷ್ಮಾ ಪಾಟೀಲ, ಸಾಫ್ಟ್‌ವೇರ್‌ ಎಂಜಿನಿಯರ್‌
ಧಾರವಾಡ ತಾಲ್ಲೂಕಿನ ಕಲಕೇರಿಯ ಮಾವಿನ ತೋಟದಲ್ಲಿ ಕಟಾವು ಮಾಡಿದ ಮಾವಿನಕಾಯಿಗಳನ್ನು ಕ್ರೇಟ್‌ಗಳಿಗೆ ತುಂಬಿಸುತ್ತಿರುವುದು 
ಧಾರವಾಡ ತಾಲ್ಲೂಕಿನ ಕಲಕೇರಿಯ ಮಾವಿನ ತೋಟದಲ್ಲಿ ಕಟಾವು ಮಾಡಿದ ಮಾವಿನಕಾಯಿಗಳನ್ನು ಕ್ರೇಟ್‌ಗಳಿಗೆ ತುಂಬಿಸುತ್ತಿರುವುದು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT