ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ: ಸರ್ವಾಂತರ್ಯಾಮಿ ‘ಡೀಪ್‌ಫೇಕ್‌’

ಉದಯ ಶಂಕರ ಪುರಾಣಿಕ
Published 18 ನವೆಂಬರ್ 2023, 23:29 IST
Last Updated 18 ನವೆಂಬರ್ 2023, 23:29 IST
ಅಕ್ಷರ ಗಾತ್ರ

ಈಗ ಬಹಳ ಚರ್ಚೆಯಲ್ಲಿರುವ ವಿಷಯ ‘ಡೀಪ್‌ಫೇಕ್‌’. ಒಂದು ಅಂದಾಜಿನ ಪ್ರಕಾರ ಇಂಟರ್‌ನೆಟ್‌ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಡೀಪ್‌ಫೇಕ್‌ಗಳು ವೈರಲ್‌ ಆಗಿವೆ. ಹಾಗಾದರೆ, ಏನಿದು ಡೀಪ್‌ಫೇಕ್‌? ‘ಡೀಪ್‌ ಲರ್ನಿಂಗ್‌’ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಸೃಷ್ಟಿಸಿದ ಫೇಕ್‌ ಅಥವಾ ನಕಲಿ ಪಠ್ಯ, ದಾಖಲೆ, ಫೋಟೊ, ಆಡಿಯೊ, ವಿಡಿಯೊ ಮತ್ತು ಮಲ್ಟಿಮೀಡಿಯಾಗಳನ್ನು ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ಈ ಮೊದಲು ಕೂಡ ಫೋಟೊ, ವಿಡಿಯೊಗಳನ್ನು ತಿರುಚುವ ಪ್ರಯತ್ನಗಳು ನಡೆದಿದ್ದವು. ಆದರೆ, 1997ರಲ್ಲಿ ಬಳಕೆಗೆ ಬಂದ ವಿಡಿಯೊ ರೀರೈಟ್‌ ಹೆಸರಿನ ತಂತ್ರಾಂಶದ ಬಳಕೆಯಿಂದ ಫೋಟೊ, ವಿಡಿಯೊಗಳನ್ನು ಮಾರ್ಫ್‌ ಮಾಡುವ ಕೆಲಸಕ್ಕೆ ಹೊಸ ಆಯಾಮ ದೊರೆಯಿತು. ಈಗ ‘ಡೀಪ್‌ ಲರ್ನಿಂಗ್‌’ ತಂತ್ರಜ್ಞಾನದ ಜೊತೆಯಲ್ಲಿ ಇತರೆ
ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ಬಳಸಿಕೊಂಡು, ಅಸಲಿ ವಿಡಿಯೊಗಳಿಗಿಂತ ಹೆಚ್ಚು ನೈಜವಾಗಿ ಕಾಣುವಂತಹ ವಿಡಿಯೊಗಳನ್ನು ಸೃಷ್ಟಿಸಲಾಗುತ್ತಿದೆ.

ಮನೋರಂಜನೆಗಾಗಿ ಫೋಟೊ, ವಿಡಿಯೊಗಳನ್ನು ಮಾರ್ಪಾಡು ಮಾಡಲು ಹಲವು ಆ್ಯಪ್‌ಗಳು, ಜಾಲತಾಣಗಳು ದೊರೆಯುತ್ತಿವೆ. ಆದರೆ, ‘ಡೀಪ್‌ಫೇಕ್‌’ ಬಳಸಿಕೊಂಡು ನಡೆಸುತ್ತಿರುವ ಅಪರಾಧಗಳು ಹೆಚ್ಚಾಗುತ್ತಿವೆ. ವಿಶ್ವದಾದಂತ್ಯ ಕೋಟ್ಯಂತರ ಡಾಲರ್‌ ಹಣ ಕದಿಯಲಾಗುತ್ತಿದೆ ಮತ್ತು ಅನೇಕರ ಚಾರಿತ್ರ್ಯವಧೆ ಮಾಡಲಾಗುತ್ತಿದೆ.

ಸೆಲಿಬ್ರಿಟಿಗಳನ್ನು ಮಾತ್ರವಲ್ಲ, ಜನಸಾಮಾನ್ಯರನ್ನು ಕೂಡ ಡೀಪ್‌ಫೇಕ್‌ ಕಾಡುತ್ತಿದೆ. ಉದಾಹರಣೆಗೆ, ‘ನಿಮ್ಮ ಖಾಸಗಿ ಫೋಟೊ, ವಿಡಿಯೊ ನಮ್ಮ ಹತ್ತಿರವಿದೆ. ನಾವು ಕೇಳಿದಷ್ಟು ಹಣ ಕೊಡದಿದ್ದರೆ ಅವುಗಳನ್ನು ಸಾರ್ವಜನಿಕರಿಗೆ ದೊರೆಯುವಂತೆ ಮಾಡುತ್ತೇವೆ’ ಎಂದು ಬ್ಲಾಕ್‌ಮೇಲ್‌ ಮಾಡುವ ಅಪರಾಧಿಗಳಿದ್ದಾರೆ. ಅಪರಿಚಿತರಿಗೆ ನಿಮ್ಮ ಖಾಸಗಿ ವಿಡಿಯೊ, ಫೋಟೊ ಹೇಗೆ ದೊರೆಯಿತು ಎನ್ನುವುದು ನಿಮ್ಮ ಪ್ರಶ್ನೆ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಂಚಿಕೊಳ್ಳುವ ವೈಯಕ್ತಿಕ ಫೋಟೊಗಳನ್ನು ಪಡೆದುಕೊಂಡು, ಡೀಪ್‌ಫೇಕ್‌ ಫೋಟೊ, ವಿಡಿಯೊಗಳನ್ನು ಅಪರಾಧಿಗಳು ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಮುಂಜಾಗೃತಾ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಫೋಟೊ, ವಿಡಿಯೊಗಳನ್ನು ನಿಮ್ಮ ಸ್ನೇಹಿತರಿಗೆ ಮಾತ್ರ ಲಭ್ಯವಾಗುವಂತೆ ಹಂಚಿಕೊಳ್ಳುವುದು ಸೂಕ್ತ.

ಶಾಂತಿ ಕದಡಲು ಬಳಕೆ

ನಾವು ಮಾತನಾಡಿರುವಂತೆ ನೈಜವಾಗಿರುವ ಡೀಪ್‌ಫೇಕ್‌ ಆಡಿಯೊಗಳನ್ನು ಕೂಡ ಅಪರಾಧಿಗಳು ಸೃಷ್ಟಿಸುತ್ತಿದ್ದಾರೆ. ಕುಟುಂಬ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ಕರೆ ಮಾಡಿ, ಡೀಪ್‌ಫೇಕ್‌ ಆಡಿಯೊ ಮೂಲಕ ತಮಗೆ ತುರ್ತಾಗಿ ಹಣ ಬೇಕಾಗಿದೆ ಎಂದು ಕೇಳುವುದು, ಹಣ ಪಡೆದು ವಂಚಿಸುವ ಕೆಲಸವನ್ನು ಕೆಲವು ಅಪರಾಧಿಗಳು ಮಾಡುತ್ತಿದ್ದಾರೆ. ಇದೇ ರೀತಿ, ‘ಡೀಪ್‌ಫೇಕ್‌ ವಿಡಿಯೊ ಮತ್ತು ಅಡಿಯೊ’ ಎರಡನ್ನೂ ಬಳಸಿಕೊಂಡು, ಸ್ನೇಹಿತರಿಗೆ ವಿಡಿಯೊ ಕಾಲ್‌ ಮಾಡುವುದು ಮತ್ತು ಅವರಿಂದ ಹಣ ಪಡೆದು ವಂಚಿಸುವ ಪ್ರಕರಣಗಳೂ ಹೆಚ್ಚಾಗುತ್ತಿವೆ.

ಸಮಾಜದಲ್ಲಿ ಅಶಾಂತಿ, ಹಿಂಸಾಚಾರ ಮತ್ತು ಕೋಮು ಗಲಭೆ ಸೃಷ್ಟಿಸಲು ಭಯೋತ್ಪಾದಕರು ಡೀಪ್‌ಫೇಕ್‌ ಸುದ್ದಿ, ಫೋಟೊ, ಆಡಿಯೊ ಮತ್ತು ವಿಡಿಯೊಗಳನ್ನು ಸೃಷ್ಟಿಸಿ, ಅತ್ಯಂತ ಕಡಿಮೆ ಸಮಯದಲ್ಲಿ ವೈರಲ್‌ ಆಗುವಂತೆ ಮಾಡುತ್ತಿದ್ದಾರೆ. ಹೀಗಾಗಿ, ವೈರಲ್‌ ಆಗುವ ಯಾವುದೇ ಸುದ್ದಿ, ಆಡಿಯೊ–ವಿಡಿಯೊ–ಫೋಟೊಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಸೂಕ್ತ.

ಮಾನವ ಕಳ್ಳಸಾಗಣೆ, ಅಪರಾಧಿಗಳು ಬೇರೆ ದೇಶಗಳಿಗೆ ಪರಾರಿಯಾಗುವುದು, ಮಾದಕ ಮತ್ತು ನಿಷೇಧಿತ ವಸ್ತುಗಳ ಮಾರಾಟ ಮೊದಲಾದ ಕೃತ್ಯಗಳಿಗೆ ಅಗತ್ಯವಾದ ಪಾಸ್‌ಪೋರ್ಟ್‌ ಮೊದಲಾದ ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಲು ಕೂಡ ಡೀಪ್‌ಫೇಕ್‌ ಬಳಸಲಾಗುತ್ತಿದೆ. ಹೀಗಾಗಿ ನಮ್ಮ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌, ಆಧಾರ್‌, ಪ್ಯಾನ್‌, ವೋಟರ್‌ ಐಡಿ ಮೊದಲಾದ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಮತ್ತು ಒಂದು ವೇಳೆ ಅವುಗಳ ಕಳವಾದರೆ, ಈ ಕುರಿತು ತಕ್ಷಣ ಪೋಲಿಸರಲ್ಲಿ ದೂರು ದಾಖಲಿಸಬೇಕು.

ಯುದ್ಧದಿಂದ ಅಪಾರ ಪ್ರಮಾಣದ ಸಾವು, ನೋವು ಮತ್ತು ಆಸ್ತಿಪಾಸ್ತಿನಷ್ಟವಾಗುತ್ತದೆ. ಆದರೆ ಯುದ್ಧದಲ್ಲಿ ಕೂಡ ತಮಗೆ ಅನುಕೂಲವಾಗುವಂತೆ ಡೀಪ್‌ಫೇಕ್‌ಗಳನ್ನು ಅಪರಾಧಿಗಳು ಬಳಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಉಕ್ರೇನ್‌ನಲ್ಲಿ ನಡೆದಿರುವ ಯುದ್ಧದಲ್ಲಿ ಉಕ್ರೇನ್‌ ಅಥವಾ ರಷ್ಯಾ ವಿಜಯ ಸಾಧಿಸುತ್ತಿದೆ, ಸಾವಿರಾರು ಸಂಖ್ಯೆಯಲ್ಲಿ ಸೈನಿಕರು ಶರಣಾಗುತ್ತಿದ್ದಾರೆ ಎಂದು ಬಿಂಬಿಸುವಂತಹ ಸಾವಿರಾರು ಫೇಕ್‌ ಸುದ್ದಿಗಳು, ವಿಡಿಯೊಗಳನ್ನು ಸೃಷ್ಟಿಸಿ ವೈರಲ್‌ ಮಾಡಲಾಗುತ್ತಿದೆ.

ಪತ್ತೆಗೆ ವಿಧಿವಿಜ್ಞಾನ ತಂತ್ರಜ್ಞಾನ

ಆಧುನಿಕ ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಸೃಷ್ಟಿಸುವ ಡೀಪ್‌ಫೇಕ್‌ಗಳನ್ನು ಪತ್ತೆ ಮಾಡಲು ಮತ್ತು ಇಂತಹ ಡೀಪ್‌ಫೇಕ್‌ ಸೃಷ್ಟಿಸಿದವರು–ವೈರಲ್‌ ಮಾಡಿದವರನ್ನು ಪತ್ತೆ ಮಾಡಲು ಭಾರತವೂ ಸೇರಿ ಹಲವು ದೇಶಗಳಲ್ಲಿ ಅತ್ಯಾಧುನಿಕ ಸೈಬರ್‌ ವಿಧಿವಿಜ್ಞಾನ ತಂತ್ರಜ್ಞಾನ ಬಳಸಲಾಗುತ್ತಿದೆ. ಇಂತಹ ಅಪರಾಧಿಗಳು ಯಾವುದೇ ದೇಶದಲ್ಲಿದ್ದರೂ ಪತ್ತೆ ಮಾಡಿ, ಬಂಧಿಸಿ, ನ್ಯಾಯಾಲಯದ ಮೂಲಕ ಶಿಕ್ಷೆಯಾಗುವಂತೆ ಮಾಡುವ ಕೆಲಸ ನಿರಂತರವಾಗಿ ನಡೆದಿದೆ.

ಯಾವುದು ಡೀಪ್‌ಫೇಕ್‌ ಎಂದು ಜನಸಾಮಾನ್ಯರು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತಹ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಹಲವು ತಂತ್ರಜ್ಞಾನ ಸಂಸ್ಥೆಗಳು ಮುಂದಾಗಿವೆ. ಈ ಸೌಲಭ್ಯಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರದೆ, ಕನ್ನಡ ಭಾಷೆ ಹಾಗೂ ಇತರೆ ಭಾಷೆಗಳಲ್ಲಿಯೂ ಜನಸಾಮಾನ್ಯರಿಗೆ ದೊರೆಯಬೇಕು. ಆಗ ಡೀಪ್‌ಫೇಕ್‌ ವಿರುದ್ಧ ಹೋರಾಟದಲ್ಲಿ ಜನಸಾಮಾನ್ಯರಿಗೂ ಕೈಜೋಡಿಸಲು ಸಾಧ್ಯವಾಗುತ್ತದೆ. ಜನಸಾಮಾನ್ಯರಲ್ಲಿ ಡೀಪ್‌ಫೇಕ್‌ನಂತಹ ಗಂಭೀರ ಸ್ವರೂಪದ ಸೈಬರ್‌ ಅಪರಾಧ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮತ್ತು ಸೈಬರ್‌ ಪೋಲಿಸರು ಮಾಡಬೇಕಾಗಿದೆ.

ಡೀಪ್‌ಫೇಕ್‌ ಅಪರಾಧಗಳು ಅದರಲ್ಲೂ ವಿಶೇಷವಾಗಿ ದೇಶದ ಭದ್ರತೆಗೆ ಮಾರಕವಾಗುವಂತೆ ಡೀಪ್‌ಫೇಕ್‌ ಬಳಸುತ್ತಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕಾನೂನು ಮತ್ತು ವಿಶೇಷ ನ್ಯಾಯಾಲಯಗಳ ಸ್ಥಾಪನೆಯಾದರೆ, ಹೆಚ್ಚು ಜನ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಸಾಧ್ಯವಿದೆ. ಡೀಪ್‌ ಲರ್ನಿಂಗ್‌ ಬಹೂಪಯೋಗಿ ತಂತ್ರಜ್ಞಾನವಾಗಿದೆ. ದುರದೃಷ್ಟವಶಾತ್‌ ಅದನ್ನು ದುರ್ಬಳಕೆ ಮಾಡಿಕೊಂಡು ಡೀಪ್‌ಫೇಕ್‌ ಸೃಷ್ಟಿಸಲಾಗುತ್ತಿದೆ.  

ದೊಡ್ಡವರೂ ಟಾರ್ಗೆಟ್

ಪ್ರಸಿದ್ಧ ಕಂಪನಿಯೊಂದರ ಸಿಇಒ, ಲೈವ್‌ ವಿಡಿಯೊದ ಮೂಲಕ ತಮ್ಮ ಸಂಸ್ಥೆಯ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಮತ್ತು ಗ್ರಾಹಕರು ಬೇರೆ ಕಂಪನಿಗಳ ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಕಂಪನಿಗೆ ಕೋಟ್ಯಂತರ ಡಾಲರ್‌ ನಷ್ಟವಾಗಿದೆ ಮತ್ತು ನೈತಿಕ ಹೊಣೆ ಹೊತ್ತು ತಾನು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಘೋಷಿಸಿದರು. ಒಂದು ಕಡೆ ಈ ವಿಡಿಯೊ ವೈರಲ್‌ ಆಗುತ್ತಿದ್ದರೆ, ಮತ್ತೊಂದು ಕಡೆ ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಷೇರು ಮೌಲ್ಯ ದೊಡ್ಡ ಕುಸಿತ ಕಂಡಿತು. ಕಂಪನಿಯ ಸಿಇಒ ಅವರ ಡೀಪ್‌ಫೇಕ್‌ ವಿಡಿಯೊ ಸೃಷ್ಟಿಸಿ, ವೈರಲ್‌ ಮಾಡಿದ ಅಪರಾಧಿಗಳು, ಕಂಪನಿಗೆ ಮತ್ತು ಷೇರುದಾರರಿಗೆ ದೊಡ್ಡ ಪ್ರಮಾಣದ ನಷ್ಟವನ್ನುಂಟು ಮಾಡಿದ್ದರು. ಈ ರೀತಿ, ವಿಡಿಯೊ ಮತ್ತು ಆಡಿಯೊ ಲೈವ್‌ಗಳಲ್ಲಿ ಕೂಡ ಡೀಪ್‌ಫೇಕ್‌ ಬಳಸಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ಗಣ್ಯರು ಮತ್ತು ಉದ್ಯಮಿಗಳಿಗೆ ಮುಜುಗರ ಮತ್ತು ಸಂಕಷ್ಟ ತಂದಿಡುತ್ತಿರುವ ಅಪರಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮುಂಬರುವ ಅಮೆರಿಕ ಅಧ್ಯಕ್ಷರ ಚುನಾವಣೆ ಸಮಯದಲ್ಲಿ ಅಭ್ಯರ್ಥಿ ಅಥವಾ ಪಕ್ಷದ ಪರ ಮತ್ತು ವಿರುದ್ಧವಾಗಿ ಜನಾಭಿಪ್ರಾಯ ಸೃಷ್ಟಿಸಲು ದೊಡ್ಡ ಪ್ರಮಾಣದಲ್ಲಿ ಡೀಪ್‌ಫೇಕ್‌ ಬಳಸುವ ಸಾಧ್ಯತೆ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಲೇಖಕರು ಅಂತರರಾಷ್ಟ್ರೀಯ ಸೈಬರ್‌ ಸುರಕ್ಷತೆ ತಜ್ಞ

ದೊಡ್ಡವರೂ ಟಾರ್ಗೆಟ್
ಪ್ರಸಿದ್ಧ ಕಂಪನಿಯೊಂದರ ಸಿಇಒ ಲೈವ್‌ ವಿಡಿಯೊದ ಮೂಲಕ ತಮ್ಮ ಸಂಸ್ಥೆಯ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಮತ್ತು ಗ್ರಾಹಕರು ಬೇರೆ ಕಂಪನಿಗಳ ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಕಂಪನಿಗೆ ಕೋಟ್ಯಂತರ ಡಾಲರ್‌ ನಷ್ಟವಾಗಿದೆ ಮತ್ತು ನೈತಿಕ ಹೊಣೆ ಹೊತ್ತು ತಾನು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಘೋಷಿಸಿದರು. ಒಂದು ಕಡೆ ಈ ವಿಡಿಯೊ ವೈರಲ್‌ ಆಗುತ್ತಿದ್ದರೆ ಮತ್ತೊಂದು ಕಡೆ ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಷೇರು ಮೌಲ್ಯ ದೊಡ್ಡ ಕುಸಿತ ಕಂಡಿತು. ಕಂಪನಿಯ ಸಿಇಒ ಅವರ ಡೀಪ್‌ಫೇಕ್‌ ವಿಡಿಯೊ ಸೃಷ್ಟಿಸಿ ವೈರಲ್‌ ಮಾಡಿದ ಅಪರಾಧಿಗಳು ಕಂಪನಿಗೆ ಮತ್ತು ಷೇರುದಾರರಿಗೆ ದೊಡ್ಡ ಪ್ರಮಾಣದ ನಷ್ಟವನ್ನುಂಟು ಮಾಡಿದ್ದರು. ಈ ರೀತಿ ವಿಡಿಯೊ ಮತ್ತು ಆಡಿಯೊ ಲೈವ್‌ಗಳಲ್ಲಿ ಕೂಡ ಡೀಪ್‌ಫೇಕ್‌ ಬಳಸಿ ರಾಜಕಾರಣಿಗಳು ಹಿರಿಯ ಅಧಿಕಾರಿಗಳು ಗಣ್ಯರು ಮತ್ತು ಉದ್ಯಮಿಗಳಿಗೆ ಮುಜುಗರ ಮತ್ತು ಸಂಕಷ್ಟ ತಂದಿಡುತ್ತಿರುವ ಅಪರಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮುಂಬರುವ ಅಮೆರಿಕ ಅಧ್ಯಕ್ಷರ ಚುನಾವಣೆ ಸಮಯದಲ್ಲಿ ಅಭ್ಯರ್ಥಿ ಅಥವಾ ಪಕ್ಷದ ಪರ ಮತ್ತು ವಿರುದ್ಧವಾಗಿ ಜನಾಭಿಪ್ರಾಯ ಸೃಷ್ಟಿಸಲು ದೊಡ್ಡ ಪ್ರಮಾಣದಲ್ಲಿ ಡೀಪ್‌ಫೇಕ್‌ ಬಳಸುವ ಸಾಧ್ಯತೆ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT