ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಎಚ್. ನಾಯಕ - ಘನತೆವೆತ್ತ ಮೇಷ್ಟ್ರು, ಲೇಖಕ, ನಾಗರಿಕ

Published 4 ಜೂನ್ 2023, 0:02 IST
Last Updated 4 ಜೂನ್ 2023, 0:02 IST
ಅಕ್ಷರ ಗಾತ್ರ

ವಿಮರ್ಶಕ ಜಿ.ಎಚ್. ನಾಯಕರು ಇತ್ತೀಚೆಗಷ್ಟೆ ಅಗಲಿದರು. ತರಗತಿಯಲ್ಲಿ ಅವರ ಪಾಠ ಕೇಳಿದ ಹಾಗೂ ಅವರನ್ನು ಸಾಹಿತ್ಯಿಕವಾಗಿಯೂ ಅವರನ್ನು ಓದಿಕೊಂಡ ವಿದ್ಯಾರ್ಥಿಯೇ ಕಟೆದ ವ್ಯಕ್ತಿಚಿತ್ರ ಇಲ್ಲಿದೆ.

ನಾನು ಕನ್ನಡ ಎಂ.ಎ. ಓದಲು ಮೈಸೂರಿನ ಮಾನಸಗಂಗೋತ್ರಿಗೆ ಹೋಗಲು ಇದ್ದ ಪ್ರಮುಖ ಆಕರ್ಷಣೆಗಳಲ್ಲಿ, ಪ್ರಭುಶಂಕರ, ಪುಣೇಕರ, ಚನ್ನಯ್ಯ, ಜಿ.ಎಚ್.ನಾಯಕ ಮೊದಲಾದ ಪ್ರಸಿದ್ಧ ವಿದ್ವಾಂಸರ ಬಳಿಕ ಕಲಿಯಬಹುದು ಎಂಬುದೂ ಒಂದು. ನಾಯಕರದು ಆಗ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರು ತೆಗೆದುಕೊಂಡ ಮೊದಲ ತರಗತಿ ನೆನಪಾಗುತ್ತಿದೆ. ಗೌರವರ್ಣದ ಎತ್ತರದಾಳು. ನಲವತ್ತೈದು ದಾಟಿದ ಪ್ರಾಯ. ಎಣ್ಣೆಹಾಕಿ ಹಿಂದಕ್ಕೆ ಬಾಚಿದ ತಲೆಕೂದಲು. ಹೊಳೆವ ಕಂಗಳು. ಚಂದದ ದಂತಪಂಕ್ತಿ ಕಾಣಿಸುವ ಹಾಸ. ರಸಪ್ರಸಂಗ ಹೇಳುತ್ತ ಸ್ವತಃ ಕೆಂಪಗಾಗುವ ಮುಖ. ತಮ್ಮ ಆಳ್ತನ, ಪಾಠ, ವೈಚಾರಿಕತೆ, ಹಾಸ್ಯಪ್ರಜ್ಞೆ, ವಿಶ್ವಾಸಪೂರ್ವಕ ಗುಣಗಳಿಂದ ಅವರು ನಮ್ಮ ಹೀರೊ ಆಗಿಬಿಟ್ಟರು.

ನಾಯಕರು ನಮಗೆ ಮೊದಲ ವರ್ಷ ಟಿ.ಎಸ್.ಎಲಿಯಟ್‌ನ ‘ಟ್ರೆಡಿಶನ್ ಆ್ಯಂಡ್‌ ಇಂಡಿವಿಜ್ಯುವಲ್ ಟೆಲೆಂಟ್’ ಪ್ರಬಂಧವನ್ನೂ ಎರಡನೇ ವರ್ಷ ಕಾರಂತರ ಕಾದಂಬರಿಗಳನ್ನೂ ಹೇಳಿದರು. ಎಲಿಯಟ್, ಅವರಿಗೆ ಪ್ರಿಯ ಚಿಂತಕನಾಗಿದ್ದ. ಲೇಖಕರಿಗೆ ಸಾಹಿತ್ಯ ಪರಂಪರೆಯಲ್ಲಿರುವ ಸತ್ವವು ಆನುವಂಶಿಕವಾಗಿ ಬರುವುದಿಲ್ಲವೆಂದೂ, ಶ್ರಮ-ಶ್ರದ್ಧೆಗಳಿಂದ ಅನುಸಂಧಾನಿಸುತ್ತ ಅದನ್ನು ಗಳಿಸಿಕೊಳ್ಳಬೇಕೆಂದೂ, ಬಳಿಕ ಅದು ವ್ಯಕ್ತಿಪ್ರತಿಭೆಯ ಕುಲುಮೆಯಲ್ಲಿ ಮರುಸೃಷ್ಟಿಗೊಂಡು ಹೊಸತನ್ನು ಸೃಷ್ಟಿಸುತ್ತದೆಯೆಂದೂ ಆತ ಪ್ರತಿಪಾದಿಸುತ್ತಾನೆ. ನಾಯಕರು ಎಲಿಯಟ್‌ನ ಪ್ರತಿಸಾಲನ್ನೂ ಓದುತ್ತ, ಅಲ್ಲಿರುವ ಸಾಹಿತ್ಯತತ್ವವನ್ನು ಪಂಪ, ಬೇಂದ್ರೆ, ಅಡಿಗರ ನಿದರ್ಶನಗಳ ಮೂಲಕ ವಿಶ್ಲೇಷಿಸುತ್ತ, ಕರ್ನಾಟಕದ ವಿದ್ಯಮಾನಗಳನ್ನು ಲಗತ್ತಿಸುತ್ತ ಪಾಠ ಮಾಡಿದರು. ಅವರ ಉಪನ್ಯಾಸವು ಹಲಸಿನ ಹಣ್ಣನ್ನು ಹುಶಾರಾಗಿ ಕೊಯ್ದು ತೊಳೆತೆಗೆದು ತಿನ್ನಿಸುವಂತಿತ್ತು. ಕೆಲವೊಮ್ಮೆ ರಭಸವಿಲ್ಲದೆ ಗುಡ್ಡಗಳ ನಡುವೆ ವಿರಾಮಭಾವದಲ್ಲಿ ಹರಿದು ಕಡಲನ್ನು ಕೂಡುವ ಅಘನಾಶಿನಿ ಹೊಳೆಯಂತೆ. ಅವರ ವ್ಯಕ್ತಿತ್ವಕ್ಕಾಗ ಇನ್ನೊಂದು ಪ್ರಭಾವಳಿಯಿತ್ತು. ಅದು, ಯೂನಿವರ್ಸಿಟಿ ರಾಜಕಾರಣದಲ್ಲಿ, ಜಾತಿ ಮತ್ತು ವಶೀಲಿಯ ಮೂಲಕ ಮೇಲೇರುವ ಒಳಮಾರ್ಗವನ್ನು ತೊರೆದು, ದಿಟ್ಟನಿಲುವುಗಳ ಮೂಲಕ ಅಧಿಕಾರಸ್ಥರನ್ನು ಎದುರುಹಾಕಿಕೊಂಡು, ನ್ಯಾಯವಾಗಿ ಸಿಗಬೇಕಾದ ಬಡ್ತಿಗಳನ್ನು ಕಳೆದುಕೊಂಡು, ವಿದ್ಯಾರ್ಥಿಗಳಿಗೆ ಪ್ರಿಯ ಪ್ರಾಧ್ಯಾಪಕನಾಗುವ ಅಪೂರ್ವ ಮಾದರಿ ನಿರ್ಮಿಸಿದ್ದು.

ನಾಯಕರು ಸಾಹಿತ್ಯ ಕೃತಿ ಮತ್ತು ತತ್ವಗಳ ಬಗ್ಗೆ ಚರ್ಚಿಸಿದರೂ, ಅವರ ವಿಮರ್ಶೆಯು ಸಮಾಜ ಮತ್ತು ಬಾಳನ್ನು ಕುರಿತ ಅವರ ಲೋಕದೃಷ್ಟಿಯ ಭಾಗವಾಗಿ ಹೊರಳಿಕೆ ಪಡೆಯುತ್ತಿತ್ತು. ಸಾಹಿತ್ಯ ಪಾಠದ ಜತೆಯಲ್ಲಿ ಮನಸ್ಸನ್ನು ರೂಪಿಸಲು ಸಾಹಿತ್ಯ ಅಧ್ಯಾಪಕರಿಗೆ ಸಿಗುವ ಈ ವಿಶೇಷ ಸವಲತ್ತನ್ನು ಅವರು ಚೆನ್ನಾಗಿ ಬಳಸಿಕೊಂಡು, ವಿದ್ಯಾರ್ಥಿಗಳ ಸಾಹಿತ್ಯಿಕ ಮತ್ತು ಸಾಮಾಜಿಕ ಸಂವೇದನೆಯನ್ನು ರೂಪುಗೊಳಿಸುತ್ತಿದ್ದರು. ವೈಚಾರಿಕತೆ ವಿಷಯದಲ್ಲಿ ವಜ್ರದ ಕಠಿಣತೆಯನ್ನೂ ಮನುಷ್ಯ ಸಂಬಂಧಗಳ ವಿಷಯದಲ್ಲಿ ಕುಸುಮದ ಮೃದುತ್ವವನ್ನೂ ಅವರ ವ್ಯಕ್ತಿತ್ವ ಒಳಗೊಂಡಿತ್ತು. ಅವರು ರೂಪಿಸಿದ ‘ವಿನಯ’ದ ಪರಿಕಲ್ಪನೆಯಲ್ಲಿ ಈ ಎರಡು ಆಯಾಮಗಳು ಮಿಳಿತವಾಗಿವೆ. ಎಲಿಯಟ್‌ನ ಚಿಂತನೆಯಲ್ಲಿರುವ ವೈಯಕ್ತಿಕತೆ, ನವ್ಯದವರಿಗೆ ಪ್ರಿಯವಾದ ಮೌಲ್ಯಾದರ್ಶ. ನಾಯಕರು (ತೇಜಸ್ವಿ ಕೂಡ) ವ್ಯಕ್ತಿಯ ಸ್ವಾತಂತ್ರ್ಯದ ಮತ್ತು ಸೃಜನಶೀಲ ಸೀಮೋಲ್ಲಂಘನೆಯ ಈ ಪ್ರಶ್ನೆಯನ್ನು, ಸಮಾಜವನ್ನು ಪ್ರಭಾವಿಸುವ ಬೌದ್ಧಿಕ ಹೊಣೆಗಾರಿಕೆಯನ್ನಾಗಿ ವಿಸ್ತರಣೆ ಮಾಡಿದರು. ಸಾಹಿತ್ಯವನ್ನು ಪೂರ್ವಗ್ರಹ ಮತ್ತು ಮಮಕಾರಗಳಿಲ್ಲದೆ ಮುಖಾಮುಖಿಯಾಗುವ ವಿಧಾನ ಕಲಿಸುವ ಹೊತ್ತಲ್ಲೇ, ಲೋಕವನ್ನು ನಿಷ್ಠುರ ವಿಮರ್ಶನ ಪ್ರಜ್ಞೆಯಿಂದ ನೋಡಬೇಕು ಮತ್ತು ವೈಯಕ್ತಿಕವಾಗಿ ಪ್ರಾಮಾಣಿಕವಾಗಿ ಬದುಕಬೇಕು ಎಂದು ನಾಯಕರು ವಿವರಿಸುತ್ತಿದ್ದರು. ಅವರ ಸಾಹಿತ್ಯಬೋಧೆ, ತತ್ವಚಿಂತನೆ, ಸಮಾಜಮುಖಿ ಆಕ್ಟಿವಿಸಂ ಮತ್ತು ವೈಯಕ್ತಿಕ ಬದುಕಿನ ನಡುವೆ ಜೈವಿಕ ಸಂಬಂಧವಿತ್ತು. ಅವರ ವ್ಯಕ್ತಿತ್ವವನ್ನು ವೈಚಾರಿಕ ಮಾನವತಾವಾದ, ಜಾತ್ಯತೀತತೆ, ಸೃಜನಶೀಲ ಕಲಾಸಂವೇದನೆ, ವಿಮರ್ಶನ ನಿಷ್ಠುರತೆಗಳ ಸಂಗಮವೆನ್ನಬಹುದು. ಈ ಅರ್ಥದಲ್ಲಿ ಅವರೊಬ್ಬ ಸಂವಿಧಾನವಾದಿ. ಹೀಗಾಗಿಯೇ ಅವರಿಗೆ ಅಡಿಗ-ಅನಂತಮೂರ್ತಿಯವರ ಗಾಢಪ್ರಭಾವದಿಂದ ಬಿಡಿಸಿಕೊಂಡು, ಬಾಳಿನ ಎರಡನೇ ಹಂತದಲ್ಲಿ ಅಂಬೇಡ್ಕರ್ ಮತ್ತು ದಲಿತ ಚಳುವಳಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು.

ನಾಯಕರು ಅಧ್ಯಾಪಕರಾಗಿ, ವಿಮರ್ಶಕರಾಗಿ ಸಾಹಿತ್ಯದ ಗಂಭೀರ ಓದುಗರಾಗಿದ್ದರು. ಅವರ ಶಿಷ್ಯರಾಗಿ ನಾವು ಅವರ ಕೃತಿನಿಷ್ಠ ವಿಮರ್ಶೆಯ ಮಾದರಿಯಿಂದ ಗಾಢವಾಗಿ ಪ್ರಭಾವಿತವಾದೆವು. ಆದರೆ ಜಿ.ರಾಜಶೇಖರ- ಡಿ.ಆರ್.ನಾಗರಾಜ್ ಅವರ ವಿಮರ್ಶೆಯ ರುಚಿ ಹತ್ತಿದ ಬಳಿಕ, ಅವರ ವಿಮರ್ಶೆಯಲ್ಲಿದ್ದ ಆಸಕ್ತಿ ಕ್ಷೀಣಿಸಿತು. ಅದು ‘ನಿಷ್ಪಕ್ಷಪಾತವಾದ ಸಮತೋಲನದ ಮೌಲ್ಯಮಾಪನ ಪ್ರಜ್ಞೆಯ ಅತಿಯೆಚ್ಚರದಲ್ಲಿ, ಸಾಹಿತ್ಯದ ಖುಷಿಯನ್ನು ಮತ್ತು ಸಾಮಾಜಿಕ ರಾಜಕೀಯ ಚಿಂತನೆಯ ಆಯಾಮವನ್ನು ಅದು ಕಡಿಮೆಗೊಳಿಸಿಕೊಂಡಿದೆ; ಪಂಪ, ರನ್ನ, ಬೇಂದ್ರೆ, ಕಾರಂತ, ಅಡಿಗ, ತೇಜಸ್ವಿ, ಅನಂತಮೂರ್ತಿ ಮೊದಲಾದ ಕೆಲವೇ ಲೇಖಕರತ್ತ ಸುಳಿದಾಡುತ್ತಿದೆ; ಅಭಿಜಾತವಾದಿ ಪ್ರಜ್ಞೆಯಿಂದ ಹುಟ್ಟಿದ ಎಲಿಯಟ್‌ನ ಮೇಜರ್-ಮೈನರ್ ಎಂಬ ಎದುರಾಳಿ ಪರಿಕಲ್ಪನೆಗಳ ಮೂಲಕ, ಕನ್ನಡದ ವಿಶಾಲ ವಾ಼ಙ್ಮಯ ಸೃಷ್ಟಿಸಿರುವ ಮಂಟೆಸ್ವಾಮಿ ಕಾವ್ಯದಿಂದ ಹಿಡಿದು ದೇವಚಂದ್ರನ ‘ರಾಜಾವಾಳಿ ಕಥಾಸಾರ’ದಂತಹ ಸಾಂಸ್ಕೃತಿಕ ಪಠ್ಯಗಳನ್ನು ವಿವರಿಸುವುದಕ್ಕೆ ಸಾಧ್ಯವಿಲ್ಲ’ ಎಂದು ಅನಿಸತೊಡಗಿತು. ನಾಸ್ತಿಕವಾದಿ ಪಾಶ್ಚಿಮಾತ್ಯ ವೈಚಾರಿಕತೆಯಿಂದ ರೂಪುಗೊಂಡ ಚೌಕಟ್ಟುಗಳಿಗೆ ಸಿಗದೆ ಕೆಲವು ಸಾಂಸ್ಕೃತಿಕ ಲೋಕಗಳು ಹೊರಗುಳಿದುಬಿಡುತ್ತವೆ. ಮಹಾ ವೈಚಾರಿಕರಾದ ಕುವೆಂಪು, ಲಂಕೇಶ್, ದೇವನೂರು, ತೇಜಸ್ವಿ ಈ ಕೊರತೆಯನ್ನು ತಮ್ಮ ಕಲಾಕೃತಿಗಳ ಮೂಲಕ ದಾಟಿದರು. ವಿಮರ್ಶೆ ವಿಚಾರ ಪ್ರಕಾರಗಳಲ್ಲಷ್ಟೆ ಕೆಲಸ ಮಾಡುವವರಿಗೆ ಈ ದಾಟುವ ಅವಕಾಶ ಹೆಚ್ಚು ಸಿಗುವುದಿಲ್ಲ.

ನಾಯಕರ ಸಾರ್ವಜನಿಕ ವ್ಯಕ್ತಿತ್ವವು ಅವರ ಸಾಹಿತ್ಯ ವಿಮರ್ಶೆಯಲ್ಲಿ ಇರುವುದಕ್ಕಿಂತ ಹೆಚ್ಚು ಬಹುಮುಖಿಯಾಗಿತ್ತು. ಅವರೊಬ್ಬ ಕನ್ನಡ ಹೋರಾಟಗಾರರಾಗಿದ್ದರು (ಗೋಕಾಕ ಚಳವಳಿಯಲ್ಲಿ ನಾವೆಲ್ಲ ಒಂದು ದಿನ ಬಯಲು ಸೆರೆಮನೆಯಲ್ಲಿದ್ದೆವು); ವಿಚಾರವಾದಿ ಚಳವಳಿಯ ಪ್ರಮುಖ ಚಿಂತಕರಾಗಿದ್ದರು; ಎಷ್ಟೇ ಆಪ್ತರಿದ್ದರೂ ವೈಭವದ ಸಂಪ್ರದಾಯಸ್ಥ ವರದಕ್ಷಿಣೆಯ ಮದುವೆಗಳಿಗೆ ಹೋಗುತ್ತಿರಲಿಲ್ಲ; ತಬ್ಬಲಿಗಳನ್ನು ಸಾಮಾಜಿಕ ಹಿಂಸೆಯಿಂದ ರಕ್ಷಿಸುವ ಮೈಸೂರಿನ ‘ಒಡನಾಡಿ’ ಸಂಸ್ಥೆ ಜತೆಗೆ ಅವರಿಗೆ ಲಗತ್ತಿತ್ತು; ‘ದ್ವೇಷಬಿಟ್ಟು ದೇಶಕಟ್ಟು’ ಹಾಗೂ ದಲಿತ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು.

ಕುವೆಂಪು ಸಾಹಿತ್ಯದ ಮೇಲೆ ನಿಷ್ಠುರ ವಿಮರ್ಶೆ ಮಾಡಿದ್ದಕ್ಕೆ ಅವರನ್ನು ಕುವೆಂಪು ವಿರೋಧಿ ಮತ್ತು ಅಡಿಗರ ಬಣದವರು ಎನ್ನಲಾಗಿತ್ತು. ಆದರೆ ಕುವೆಂಪು ಅವರ ನಿರಂಕುಶಮತಿಯಂತಹ ವೈಚಾರಿಕ ಮೌಲ್ಯಗಳನ್ನು ಬದುಕಿದವರಲ್ಲಿ ನಾಯಕರು ಒಬ್ಬರಾಗಿದ್ದರು. ಕಳೆದ ಅರ್ಧಶತಮಾನದಲ್ಲಿ ನಾಗರಿಕ ಸಮಾಜ ರೂಪಿಸಲು ಮತ್ತು ಮೈಸೂರಿನ ಸಾಂಸ್ಕೃತಿಕ ಹದುಳ ಕಾಪಾಡಲು ನಡೆದ ಬಹುತೇಕ ಸಭೆ/ಧರಣಿ/ಮುಷ್ಕರಗಳಲ್ಲಿ ಅವರ ಹಾಜರಾತಿ ಇರುತ್ತಿತ್ತು. ಅವರ ಮನೆಯಂತೂ ಅನುಭವ ಮಂಟಪದಂತೆ ಸಮಾಲೋಚನ ಸಭೆಯ ವೇದಿಕೆಯಾಗಿತ್ತು. ಅವರೆಲ್ಲ ಸಾರ್ವಜನಿಕ ಚಟುವಟಿಕೆಗಳಲ್ಲಿ ಮಡದಿ ಮೀರಾ ಜತೆಯಲ್ಲಿದ್ದರು.

ಮೈಸೂರಿಗೆ ಹೋದಾಗಲೆಲ್ಲ ನನ್ನಿಷ್ಟದ ಮನೆ ‘ಪ್ರೀತಿ’ಗೆ ಹೋಗುತ್ತಿದ್ದೆ. ಅಲ್ಲಿಗೆ ಹೋಗುವುದು ಎಂದರೆ ನಾಯಕರ ಹರಟೆಯನ್ನೂ ಮೀರಕ್ಕ ತಯಾರಿಸುತ್ತಿದ್ದ ಉತ್ತರ ಕನ್ನಡ ಶೈಲಿಯ ಮೀನೂಟವನ್ನೂ ಸವಿವ ಅವಕಾಶವೂ ಆಗಿತ್ತು. ಊಟವಾದ ಬಳಿಕ ಮೂಡುಬಂದರೆ, ಮೇಷ್ಟರು ಬೇಂದ್ರೆಯವರ ಕವನಗಳನ್ನು ಹಾಡುವರು. ಯಾರದ್ದೊ ಕಾಲೆಳೆಯುತ್ತ ತಮಾಷೆಯ ಪ್ರಸಂಗ ಹೇಳುವರು. ನಾನೊಮ್ಮೆ ಅವರ ಸುದೀರ್ಘ ಸಂದರ್ಶನ ಮಾಡಿದೆ. ಅವರು ಅದರ ಕರಡನ್ನು ತಿದ್ದಿ ಒಂದೊಂದು ಪದವನ್ನು ಆಭರಣದಲ್ಲಿ ಹರಳನ್ನು ಕೂರಿಸಲು ಚಿನಿವಾರ ತೋರುವ ಎಚ್ಚರದಂತೆ ತಿದ್ದಿಕೊಟ್ಟರು. ಖಚಿತತೆಗೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳವುದುಂಟೇ? ನನಗೆ ಸೋಜಿಗ. ಅವರು ಮಹತ್ವಾಕಾಂಕ್ಷೆಯಿಂದ ಬರೆದ ಆತ್ಮಕಥೆ ‘ಬಾಳು’ ಚಾರಿತ್ರಿಕವಾಗಿ ಮಹತ್ವದ್ದಾಗಿದೆ. ತನ್ನ ಖಾಚಿತ್ಯದ ಹಂಬಲದಿಂದ ದಾಖಲಾತಿಯಾಗಿದೆ. ಆದರೆ ಬಾಳನ್ನು ಹಿಂತಿರುಗಿ ಲಹರಿಯಲ್ಲಿ ನೋಡುವಾಗ ಹುಟ್ಟುವ ಕಲ್ಪನಾವಿಲಾಸ ವಿನೋದಪ್ರಜ್ಞೆಗಳನ್ನು ತಪ್ಪಿಸಿಕೊಂಡು ಬಡವಾಗಿದೆ ಅನಿಸುತ್ತದೆ. ನವರತ್ನ ರಾಮರಾಯರ ‘ಕೆಲವು ನೆನಪುಗಳು’ ಜತೆಯಲ್ಲಿಟ್ಟು ನೋಡಿದರೆ ಈ ಅಂಶ ಹೊಳೆಯುತ್ತದೆ.

ಕೆಲವು ತಿಂಗಳ ಹಿಂದೆ ಗುರುಗಳನ್ನು ಕಾಣಲು ಬಾನು ಜತೆ ಹೋದೆ. ಹೋಗಬಾರದಿತ್ತು ಅನಿಸಿತು. ಒಂದು ಕಾಲಕ್ಕೆ ಸ್ಫುರದ್ರೂಪಿಯಾಗಿದ್ದ ನಾಯಕರು ಸೊರಗಿ ಬತ್ತಿಯಾಗಿದ್ದರು. ಮೀರಕ್ಕ ಕೂಡ ಸೊರಗಿದ್ದರು. ಹಿಂದಿನ ಕಳೆಯಿರಲಿಲ್ಲ. ಸ್ಮೃತಿ ನಷ್ಟವಾಗಿತ್ತು. ನಾಯಕರ ಮಗಳು ಕೀರ್ತಿ ‘ಅಪ್ಪ ರಹಮತ್ ಬಂದಿದ್ದಾರೆ’ ಎಂದರು. ‘ರಾಮತ್ ಬಂದಿದಾರಾ? ನಾನೇನು ಮಾಡಬೇಕು?’ ಎಂದು ಅವಸರದಲ್ಲೆಂಬಂತೆ ತೊದಲುತ್ತ ಹಾಲಿಗೆ ಬಂದು ಕೂತರು. ಇದ್ದಷ್ಟೂ ಹೊತ್ತು ಅವರು ನನ್ನ ಮುಖ ನೋಡಲೇ ಇಲ್ಲ. ಒಳಗೆ ಜೀವ ಧಗಧಗಿಸುತ್ತಿದೆ ಎಂಬಂತೆ, ಮುನಿಸಿಕೊಂಡ ಮಗುವಿನಂತೆ, ಎದುರುಗೋಡೆಯ ಯಾವುದೊ ಬಿಂದುವಿನತ್ತ ದುರದುರನೆ ದಿಟ್ಟಿಸುತ್ತ ಕೂತರು. ಹೋಗಿ ಬರುತ್ತೇನೆಂದು ಕೈಮುಗಿದರೂ ಸ್ಪಂದನೆಯಿಲ್ಲ. ಮೇಲೆ ಕಡಲಂತೆ ಶಾಂತವಾಗಿ ಕಂಡರೂ ಆಳದಲ್ಲಿ ತಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿಲ್ಲ ಎಂಬ ನೋವಿನ ಕಹಿ, ಸುಪ್ತಪ್ರಜ್ಞೆಯಲ್ಲಿ ಹೊಯ್ದಾಡುತ್ತ ಉಳಿದುಬಿಟ್ಟಿತೇ? ಹಾಲಿನ ಒಂದು ಮೂಲೆಯ ಸೋಫಾದಲ್ಲಿ ಅವರು ಯಾವಾಗಲೂ ದೇಹವನ್ನು ಚೆಲ್ಲಿಕೊಂಡಂತೆ ಕೂರುತ್ತಿದ್ದರು. ಅದಕ್ಕೆ ಸಮೀಪವಾಗಿ ಇನ್ನೊಂದು ಮೂಲೆಯಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ನನ್ನಂತಹ ಸಾವಿರಾರು ಜನ ಕೂತು ಅವರನ್ನು ಕೇಳಿಸಿಕೊಳ್ಳುತ್ತಿದ್ದೆವು. ಈ ಜಾಗದಲ್ಲಿ ಎಷ್ಟೊಂದು ಚರ್ಚೆ ಹರಟೆ ಹಾಡು ಹಾಸ್ಯಪ್ರಸಂಗಗಳು ಜರುಗಿದವು! ಈಗ ಅದೇ ಜಾಗದಲ್ಲಿ ಕೂತು ಪಟ ತೆಗೆಸಿಕೊಂಡೆವು. ಅದು ಹಗಲಿನ ಚಂದಿರನಂತೆ ಬಸವಳಿದಿದೆ.

ಒಂಬತ್ತು ದಶಮಾನ ತನ್ನ ದುಡಿಮೆ ಬದ್ಧತೆ ಪ್ರಾಮಾಣಿಕತೆಗಳಿಂದ ಪಾಠಮಾಡಿದ ಮೇಷ್ಟ್ರು, ಬರೆದ ಲೇಖಕ, ಬದುಕಿದ ಸಂಸಾರಿ, ಚಳವಳಿಗಳಲ್ಲಿ ಭಾಗವಹಿಸಿದ ಸಾರ್ವಜನಿಕ ವ್ಯಕ್ತಿ, ಹಲವರ ಬಾಳಿಗೆ ನೈತಿಕ ಬೆಂಬಲ ಒದಗಿಸಿದ ‘ನಿಜದನಿ’ (1935-2023) ಕಣ್ಮರೆಯಾದಂತಾಗಿದೆ. ‘ನಿಜದನಿ’ ಅವರ ಪುಸ್ತಕದ ಹೆಸರೂ ಹೌದು. ಸುದ್ದಿತಿಳಿದು, ದುಗುಡದಿಂದ ಕೃತಜ್ಞತೆಯಿಂದ ಅವರ ‘ವಿನಯ ವಿಮರ್ಶೆ’ ಎಂಬ ಪುಟ್ಟಲೇಖನ ಓದಿದೆ. ಅದು ತನ್ನ ಬರೆಹ ಮತ್ತು ಬದುಕು ಹೇಗಿರಬೇಕೆಂದು ವ್ಯಕ್ತಿಯೊಬ್ಬ ರಚಿಸಿಕೊಂಡ ಸಂವಿಧಾನದಂತೆ; ಕಲಾಸಂವೇದನೆ ಪ್ರಜಾಪ್ರಭುತ್ವವಾದಿ ವಿಚಾರವಾದಿ ಜಾತ್ಯತೀತ ಮೌಲ್ಯಗಳ ಪ್ರಣಾಳಿಕೆಯಂತೆ; ನಡೆ-ನುಡಿಗಳ ನಡುವೆ ಬಿರುಕಾಗದಂತೆ ಬದುಕಲು ಬಹಳ ಬೆಲೆತೆತ್ತಿರುವ ಆದರ್ಶವಾದಿಯ ಉಯಿಲಿನಂತೆ ತೋರಿತು.

ಜಿ.ಎಚ್.ನಾಯಕ
ಜಿ.ಎಚ್.ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT