ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಲೇಖನ | ಇದೋ... ಹೊಸ ಸಂಸತ್‌ ಭವನ
ಲೇಖನ | ಇದೋ... ಹೊಸ ಸಂಸತ್‌ ಭವನ
Published 7 ಅಕ್ಟೋಬರ್ 2023, 23:38 IST
Last Updated 7 ಅಕ್ಟೋಬರ್ 2023, 23:38 IST
ಅಕ್ಷರ ಗಾತ್ರ

ರಾಷ್ಟ್ರ ರಾಜಧಾನಿಯಲ್ಲಿ ಅತ್ಯಲ್ಪ ಸಮಯದಲ್ಲೇ ತಲೆಎತ್ತಿ ನಿಂತಿರುವ ‘ಮಾತಿನ ಮನೆ’ ಈಗ ನೋಡುಗರ ಕಣ್ಮನ ಸೆಳೆಯುತ್ತಿದೆ. ಇದು ಕೃತಕ ಬುದ್ಧಿಮತ್ತೆಯ ಅತ್ಯಾಧುನಿಕ ತಂತ್ರಜ್ಞಾನವನ್ನೂ ಹೊಂದಿರಲಿದ್ದು, ಭೂಕಂಪಕ್ಕೂ ಜಗ್ಗುವುದಿಲ್ಲ. ವಿಪಕ್ಷಗಳಿಂದ ‘ಮೋದಿ ಮಲ್ಟಿಪ್ಲೆಕ್ಸ್‌’ ಎಂದು ಟೀಕೆ ಎದುರಿಸಿದ ಹೊಸ ಸಂಸತ್‌ ಭವನದ ನೋಟವಿದು.

ಪ್ರಜಾಪ್ರಭುತ್ವದ ದೇಗುಲವಾದ ಹೊಸ ಸಂಸತ್‌ ಭವನವು ಪರಂಪರೆಯೊಂದಿಗೆ ಆಧುನಿಕತೆಯನ್ನು ಮೇಳೈಸಿಕೊಂಡಿದೆ. ಈ ಐತಿಹಾಸಿಕ ಕಟ್ಟಡ ದೇಶದ ಮೂಲೆಮೂಲೆಯ ಐತಿಹಾಸಿಕ ವಾಸ್ತುಶಿಲ್ಪಗಳ ಸಮ್ಮಿಲನವಾಗಿದೆ. ಸುಮಾರು 27 ವರ್ಷಗಳಿಂದ ಹಲವು ಅಡೆತಡೆಗಳನ್ನು ಎದುರಿಸಿ ಶೈತ್ಯಾಗಾರಕ್ಕೆ ಸೇರಿದ್ದ ‘ಮಹಿಳೆ ಮೀಸಲಾತಿ ಮಸೂದೆ’ ಅಂಗೀಕಾರ ಪಡೆದಿದ್ದು ಇದೇ ಭವನದಲ್ಲಿ.

ಅಂದಹಾಗೆ, ಈ ಐತಿಹಾಸಿಕ ಹಾಗೂ ವಿಶಾಲ ಭವನ ನಿರ್ಮಾಣಕ್ಕೆ ತೆಗೆದುಕೊಂಡಿದ್ದು ಎರಡು ವರ್ಷ ಏಳು ತಿಂಗಳಷ್ಟೇ. ಹಾಗೆಂದು, ಈ ಭವನದ ನಿರ್ಮಾಣವು ವಿವಾದಗಳಿಂದೇನು ಮುಕ್ತವಾಗಿರಲಿಲ್ಲ. ಹಲವು ಅಡ್ಡಿ ಆತಂಕಗಳು ಹಾಗೂ ಕಾನೂನು ತೊಡಕುಗಳ ನಡುವೆಯೇ ಈ ಭವನ ತಲೆಎತ್ತಿದ್ದು, ಸಂಸತ್ ವಿಶೇಷ ಅಧಿವೇಶನಕ್ಕೂ ಸಾಕ್ಷಿಯಾಗಿದೆ. ಆದರೆ, ಭವನದ ಎಲ್ಲ ಕಾಮಗಾರಿಗಳು ಹಾಗೂ ತಾಂತ್ರಿಕ ಕೆಲಸಗಳು ಮುಗಿಯಲು ಇನ್ನೂ ಆರು ತಿಂಗಳುಗಳು ಬೇಕು. 

ಈ ಕಟ್ಟಡವನ್ನು ಸುಮಾರು 150 ವರ್ಷಗಳಿಗಿಂತ ಹೆಚ್ಚು  ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಮೂರು ಮುಖ್ಯ ದ್ವಾರಗಳಿಗೆ ‘ಜ್ಞಾನ ದ್ವಾರ’, ‘ಶಕ್ತಿ ದ್ವಾರ’ ಮತ್ತು ‘ಕರ್ಮ ದ್ವಾರ’ ಎಂದು ಹೆಸರಿಸಲಾಗಿದೆ. ಇದರಲ್ಲಿ ವಿಐಪಿಗಳು, ಸಂಸದರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳನ್ನು ವ್ಯವಸ್ಥೆ ಮಾಡಲಾಗಿದೆ. ಐತಿಹಾಸಿಕ ಮಹತ್ವದ್ದು ಎಂದು ಹೇಳಲಾದ ‘ಸೆಂಗೋಲ್‌ (ಅಧಿಕಾರ ದಂಡ)’ ಸಹ ಹೊಸ ಭವನದಲ್ಲಿ ವಿರಾಜಮಾನವಾಗಿದೆ. ಇದು ಐದು ಅಡ್ಡಿ ಎತ್ತರವಿದ್ದು, ತುದಿಯಲ್ಲಿ ಚಿಕ್ಕ ನಂದಿ ವಿಗ್ರಹ ಇದೆ. ಲೋಕಸಭಾ ಸ್ಪೀಕರ್‌ ಅವರ ಪೀಠದ ಸಮೀಪ ಈ ‘ಸೆಂಗೋಲ್‌’ ಅನ್ನು ಪ್ರತಿಷ್ಠಾಪಿಸಲಾಗಿದೆ. ಈ ಸೆಂಗೋಲ್‌ ಅನ್ನು ತಿರುವಾವದುತ್ತುರೈ ಅಧೀನಮ್‌ನ ಕುಮಾರಸ್ವಾಮಿ ತಂಬಿರನ್‌ ಅವರು ಜವಾಹರಲಾಲ್‌ ನೆಹರೂ ಅವರಿಗೆ ನೀಡಿದ್ದರು.

ಈ ಭವನದ ನಿರ್ಮಾಣಕ್ಕಾಗಿ ದೇಶದ ವಿವಿಧ ಸ್ಥಳಗಳಿಂದ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ತೇಗದ ಮರವನ್ನು ನಾಗ್ಪುರದಿಂದ ತಂದಿದ್ದರೆ, ಕೆಂಪು ಮತ್ತು ಬಿಳಿ ಮರಳುಗಲ್ಲು ರಾಜಸ್ಥಾನದ ಸರ್ಮಥುರಾದಿಂದ ಬಂದಿದೆ (ದೆಹಲಿಯ ಕೆಂಪು ಕೋಟೆಯ ಮರಳುಗಲ್ಲುಗಳನ್ನು ಕೂಡ ಇಲ್ಲಿಂದಲೇ ಪಡೆಯಲಾಗಿದೆ). ಕೇಶರಿಯಾ ಹಸಿರು ಕಲ್ಲನ್ನು ಉದಯಪುರದಿಂದ, ಕೆಂಪು ಗ್ರಾನೈಟ್ ಅನ್ನು ಅಜ್ಮೀರ್‌ನ ಲಾಖಾದಿಂದ ಸಂಗ್ರಹಿಸಲಾಗಿದೆ. ಬಿಳಿ ಅಮೃತಶಿಲೆಯನ್ನು ರಾಜಸ್ಥಾನದ ಅಂಬಾಜಿಯಿಂದ ತರಿಸಲಾಗಿದೆ. ಸಂಸತ್‌ ಭವನದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಫಾಲ್ಸ್ ಸೀಲಿಂಗ್‌ಗಾಗಿ ಬಳಸಲಾದ ಉಕ್ಕಿನ ರಚನೆಗಳು ದಮನ್ ಮತ್ತು ದಿಯುನಿಂದ ಬಂದಿವೆ. ಕಲ್ಲಿನ ಜಾಲರಿ ಕೆಲಸದಲ್ಲಿ ಇರುವುದು ರಾಜಸ್ಥಾನದ ರಾಜನಗರ ಮತ್ತು ಉತ್ತರಪ್ರದೇಶದ ನೋಯ್ಡಾದವರ ಕೌಶಲ. ಕಾಂಕ್ರೀಟ್ ಮಿಶ್ರಣದಲ್ಲಿ ಬಳಸಲಾಗಿರುವ  ಮರಳು ಅಥವಾ ಎಂ-ಸ್ಯಾಂಡ್ ಬಂದಿರುವುದು ಹರಿಯಾಣದ ಚರ್ಖಿ ದಾದ್ರಿಯಿಂದ. ಇದರಲ್ಲಿ ಬಳಕೆಯಾಗಿರುವ ಕಾರ್ಪೆಟ್‌ಗಳನ್ನು ಉತ್ತರಪ್ರದೇಶದಿಂದ ತರಿಸಲಾಗಿದೆ. ಒಂದರ್ಥದಲ್ಲಿ ದೇಶದ ಪ್ರಜಾಪ್ರಭುತ್ವದ ಅತಿ ದೊಡ್ಡ ದೇಗುಲವನ್ನು ನಿರ್ಮಿಸಲು ಇಡೀ ದೇಶವೇ ಒಂದಾದಂತಾಗಿದೆ. ಇದು ‘ಏಕ ಭಾರತ್‌ ಶ್ರೇಷ್ಠ ಭಾರತ್’ ಪರಿಕಲ್ಪನೆಗೆ ಉತ್ತಮ ಉದಾಹರಣೆ ಎಂಬಂತಿದೆ.

ಹೊಸ ಸಂಸತ್‌ ಕಟ್ಟಡದಲ್ಲಿರುವ ಕಲಾಕೃತಿಗಳು ವೇದಗಳ ಕಾಲದಿಂದ ಪ್ರಸ್ತುತ ದಿನದವರೆಗಿನ ಭಾರತದ ಪ್ರಜಾಪ್ರಭುತ್ವದ ಪರಂಪರೆಯ ಕಥೆಗಳನ್ನು ಸಾರುತ್ತವೆ. ನೂತನ ಸಂಸತ್‌ ಭವನದ ಕಟ್ಟಡದ ಪ್ರವೇಶದಲ್ಲಿ ಮಹಾತ್ಮ ಗಾಂಧಿ, ಚಾಣಕ್ಯ, ಸರ್ದಾರ್‌ ವಲ್ಲಭಬಾಯಿ ಪಟೇಲ್‌, ಅಂಬೇಡ್ಕರ್‌ ಹಾಗೂ ಕೊನಾರ್ಕ್‌ನ ಸೂರ್ಯ ದೇವಾಲಯದ ಸೂರ್ಯನ ರಥದ ದೊಡ್ಡ ಕಂಚಿನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಚಿತ್ರಕಲೆ, ಲೋಹದಿಂದ ಮಾಡಿದ ಭಿತ್ತಿಪತ್ರಗಳು ಸೇರಿದಂತೆ 5 ಸಾವಿರಕ್ಕೂ ಅಧಿಕ ಕಲಾಕೃತಿಗಳು ಭವನದಲ್ಲಿವೆ. ‘ಭವನ ಸುಂದರಿ’ಯ ಸೌಂದರ್ಯವು ನೋಡುಗರ ಮಂತ್ರಮುಗ್ಧಗೊಳಿಸುವಂತಿದೆ. 

ಹೊಸ ಹಾಗೂ ಹಳೆಯ ಸಂಸತ್‌ ಭವನ 
ಹೊಸ ಹಾಗೂ ಹಳೆಯ ಸಂಸತ್‌ ಭವನ 

ಹಳೆಯ ಕಟ್ಟಡದಲ್ಲಿದ್ದ ಸೆಂಟ್ರಲ್ ಹಾಲ್ ಅನ್ನು ಹೊಸ ಕಟ್ಟಡದಲ್ಲಿ ಕೈಬಿಡಲಾಗಿದೆ. ಬದಲಿಗೆ, ದೇಶದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಭವ್ಯವಾದ ‘ಸಂವಿಧಾನ ಸಭಾಂಗಣ (ಕಾನ್‌ಸ್ಟಿಟ್ಯೂಷನ್‌ ಹಾಲ್‌) ನಿರ್ಮಾಣವಾಗಿದೆ. ಸೆಂಟ್ರಲ್ ಹಾಲ್ ಬದಲಿಗೆ ಸಂಸದರ ಲಾಂಜ್ ಬಂದಿದೆ. ಅಸ್ತಿತ್ವದಲ್ಲಿರುವ ಸಂಸತ್ತಿನ ಗ್ರಂಥಾಲಯ ಕಟ್ಟಡದ ಹೊರತಾಗಿ, ಹೊಸ ಕಟ್ಟಡವು ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶಗಳ ಜೊತೆಗೆ ಗ್ರಂಥಾಲಯವನ್ನು ಹೊಂದಿದೆ. ಇಲ್ಲಿ ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಯನ್ನು ಸಾರುವ ಸರಣಿ ಪ್ರದರ್ಶನವಿದೆ. ಇದು ಹಿಂದೂ ಸಂಪ್ರದಾಯದಲ್ಲಿ ಪ್ರಾರ್ಥನೆಗೆ ಬಳಸುವ ‘ಶ್ರೀ ಯಂತ್ರ’ದಿಂದ ಪ್ರೇರಣೆ ಪಡೆದಿದೆ. ಇದರೊಂದಿಗೆ ಈ ಹಾಲ್‌ಗೆ ಆಧುನಿಕ ಸ್ಪರ್ಶವನ್ನೂ ನೀಡಲಾಗಿದೆ. ಭೂಮಿಯ ಪರಿಭ್ರಮಣವನ್ನು ತೋರಿಸುವ ಫೂಕೊನ ಲೋಲಕವನ್ನು ಹಾಗೂ ಡಿಜಿಟಲ್ ಸಂವಿಧಾನವನ್ನು ಇಲ್ಲಿ ಪ್ರದರ್ಶಿಸಲಾಗಿದೆ.   

ಲೋಕಸಭೆಯ ಸಭಾಂಗಣ ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸದಲ್ಲಿದೆ. ರಾಜ್ಯಸಭೆಯ ಸಭಾಂಗಣ ರಾಷ್ಟ್ರೀಯ ಹೂವು ಕಮಲದ ಪರಿಕಲ್ಪನೆಯಲ್ಲಿದೆ. ಕಟ್ಟಡವು ಭಾರತೀಯ ಸಾಂಸ್ಕೃತಿಕ ವೈವಿಧ್ಯದ ಪ್ರತೀಕವಾಗಿದೆ. ನಾಲ್ಕು ಅಂತಸ್ತು ಹಾಗೂ ಮೂರು ಬಾಗಿಲುಗಳನ್ನು ಹೊಂದಿರುವ ಪ್ರಜಾತಂತ್ರದ ಹೊಸ ದೇಗುಲವು ಭೂಕಂಪದ ಯಾವ ಪರಿಣಾಮಗಳೂ ಬೀರದಂತಹ ಸದೃಢ ನಿರ್ಮಾಣ. ಇದೊಂದು ಅಭೇದ್ಯ ಕೋಟೆಯಂತಿದೆ.  

ನೂತನ ಭವನದಲ್ಲಿ 1,700 ಕಿಟಕಿಗಳು ಹಾಗೂ ಬಾಗಿಲುಗಳಿವೆ. ಸಂಸತ್‌ ಭವನದ ಕಾರಿಡಾರ್‌ 3.5 ಕಿ.ಮೀ.ನಷ್ಟು ಇದೆ. ಭವನದ ನಿರ್ಮಾಣ ಕಾಮಗಾರಿಗೆ 60 ಸಾವಿರ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಅವರ ಸಂಚಿತ ಕೆಲಸದ ಅವಧಿಯು ಬರೋಬ್ಬರಿ 23 ಲಕ್ಷ ಕೆಲಸದ ದಿನಗಳು. 

ಕೃತಕ ಬುದ್ಧಿಮತ್ತೆ ಬಳಕೆಯನ್ನು ಭವನದ ಹಲವು ಭಾಗಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಯಾವುದೇ ರಾಜ್ಯದ ಸಂಸದರು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿದರೂ, ಎಲ್ಲ ಸಂಸದರಿಗೆ ಅರ್ಥಪಡಿಸುವ ವ್ಯವಸ್ಥೆಯು ಇರಲಿದೆ. ಸಂಸದರ ಮಾತುಗಳು ಮಿಕ್ಕವರಿಗೆ ಅವರು ಬಲ್ಲ ಭಾಷೆಗಳಲ್ಲೇ ಭಾಷಾಂತರ ಡಿಸ್‌ಪ್ಲೇ ಮೂಲಕ ತಲುಪುತ್ತಾ ಇರುತ್ತದೆ. ಇಂಗ್ಲಿಷ್‌, ಹಿಂದಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಗೊತ್ತಿಲ್ಲದ ಸಂಸದರು ಇನ್ನು ಮುಂದೆ ಹಿಂಜರಿಕೆ ಪಡಬೇಕಿಲ್ಲ.  

ಸನಿಹದಲ್ಲಿ ಎರಡು ಭವನಗಳು 
ಸನಿಹದಲ್ಲಿ ಎರಡು ಭವನಗಳು 
ಕಟ್ಟಡದ ಇತಿಹಾಸ:
ಹಳೆಯ ಸಂಸತ್‌ ಕಟ್ಟಡ 100 ವರ್ಷಗಳಷ್ಟು ಪುರಾತನವಾದುದು. ಇದು ವಸಾಹತುಶಾಹಿ ಯುಗದ ಕಟ್ಟಡ. ಸಂಸತ್‌ ಸದಸ್ಯರು ಮತ್ತು ಸಿಬ್ಬಂದಿಗೆ ಸ್ಥಳಾವಕಾಶದ ಕೊರತೆ ಎದುರಾಗಿತ್ತು. ಅಲ್ಲದೆ, ಕಟ್ಟಡದ ಸ್ಥಿರತೆಯ ಬಗ್ಗೆ ಕೂಡ ಪ್ರಶ್ನೆ ಎದ್ದಿತ್ತು. ಸಾಕಷ್ಟು ಸಲ ದುರಸ್ತಿ, ಪುನರ್‌ ನಿರ್ಮಾಣ, ಸುಣ್ಣ–ಬಣ್ಣ ಎಲ್ಲವನ್ನೂ ಕಂಡಿತ್ತು. ಅದು ಭೂಕಂಪ–ನಿರೋಧಕವಲ್ಲದ ಕಟ್ಟಡವಾಗಿದ್ದು, ಅದರಲ್ಲಿ ಯಾವುದೇ ಮಾರ್ಪಾಡು ಮಾಡುವುದು ಅದರ ರಚನಾತ್ಮಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಂಡಂತಾಗುತ್ತಿತ್ತು. ಆದ್ದರಿಂದ 2010ರ ಆರಂಭದಲ್ಲಿ ಹೊಸ ಕಟ್ಟಡ ನಿರ್ಮಾಣದ ವಿಷಯ ಪ್ರಸ್ತಾಪವಾಗಿತ್ತು. 2012ರಲ್ಲಿ ಅಂದಿನ ಸ್ಪೀಕರ್ ಮೀರಾ ಕುಮಾರ್‌ ಅವರು ಅಸ್ತಿತ್ವದಲ್ಲಿರುವ ಸಂಕೀರ್ಣವನ್ನು ಬದಲಿಸುವ ಪರ್ಯಾಯ ಆಯ್ಕೆಗಳ ಅನ್ವೇಷಣೆಗೆ ಸಮಿತಿಯೊಂದನ್ನು ರಚಿಸಿದರು. ಅದರ ಪರಿಣಾಮವಾಗಿ ಇಂದು ವ್ಯವಸ್ಥಿತ ಹಾಗೂ ವಿಶಾಲವಾದ ನೂತನ ಕಟ್ಟಡ ತಲೆಎತ್ತಿದೆ. ಇನ್ನೊಂದೆಡೆ, ಭಾರತದ ರಾಷ್ಟ್ರೀಯ ಪರಂಪರೆಯ ಸಂಕೇತವಾಗಿ ಹಳೆಯ ಕಟ್ಟಡವನ್ನು ಸಂರಕ್ಷಿಸಲು ಕೂಡ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಕಟ್ಟಡದ ವಾಸ್ತುಶಿಲ್ಪ:
1927ರಲ್ಲಿ ನಿರ್ಮಾಣಗೊಂಡಿದ್ದ ಹಿಂದಿನ ಸಂಸತ್ತಿನ ಕಟ್ಟಡವು ಮಿಟಾವೊಲಿಯಲ್ಲಿರುವ ಹಿಂದೂ ಯೋಗಿನಿ ದೇವಾಲಯದಿಂದ ಹೆಚ್ಚು ಪ್ರಭಾವಿತವಾಗಿತ್ತು. ಇದನ್ನು 1912 ಮತ್ತು 1913ರ ನಡುವೆ ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ್ದರು. ಈ ಕಟ್ಟಡ 1927ರಲ್ಲಿ ಪೂರ್ಣಗೊಂಡಿತ್ತು.
ಸನಿಹದಲ್ಲಿ ಎರಡು ಸಂಸತ್‌ ಭವನಗಳು 
ಸನಿಹದಲ್ಲಿ ಎರಡು ಸಂಸತ್‌ ಭವನಗಳು 

ಹೊಸ ಸಂಕೀರ್ಣವು ಷಡ್ಭುಜಾಕೃತಿಯ ಆಕಾರದಲ್ಲಿದೆ ಮತ್ತು ಹಳೆಯ ಕಟ್ಟಡದ ಸನಿಹದಲ್ಲಿಯೇ ಹೊಸ ಭವನ ಇದೆ. ಹಿಂದಿನ ವೃತ್ತಾಕಾರದ ಕಟ್ಟಡಕ್ಕೆ ಹೋಲಿಸಿದರೆ ಇದು ಗಾತ್ರದಲ್ಲಿ ಸಾಕಷ್ಟು ದೊಡ್ಡದಾಗಿದೆ. ಹಳೆಯ ಭವನ 24,291 ಚದರ ಮೀಟರ್ ಇದ್ದರೆ, ಹೊಸ ಭವನ 64,500 ಚದರ ಮೀಟರ್ ಇದೆ. ಹಳೆಯ ಕಟ್ಟಡದಲ್ಲಿ ಲೋಕಸಭೆಯಲ್ಲಿ ಸದಸ್ಯರ ಆಸನ ಸಾಮರ್ಥ್ಯ 543 ಹಾಗೂ ರಾಜ್ಯಸಭೆಯಲ್ಲಿ 250 ಇದ್ದರೆ, ನೂತನ ಭವನದಲ್ಲಿ ಲೋಕಸಭೆಯಲ್ಲಿ 888 ಆಸನಗಳು ಹಾಗೂ ರಾಜ್ಯಸಭೆಯಲ್ಲಿ 384 ಆಸನಗಳು ಇವೆ.

ಸಂಸತ್‌ ಭವನದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ವಿಶ್ವಪ್ರಸಿದ್ಧ ಹಂಪಿ ಸ್ಮಾರಕದ ಚಿತ್ರಗಳು ಕಂಗೊಳಿಸಲಿವೆ. ದೇಶದ ಇತಿಹಾಸ, ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸುವ ದೇಶದ ಪ್ರಮುಖ ಸ್ಮಾರಕಗಳು, ಕಟ್ಟಡಗಳ 3ಡಿ ಛಾಯಾಚಿತ್ರಗಳನ್ನು ಅಲ್ಲಿ ಅಳವಡಿಸಲಾಗುತ್ತದೆ. ವಸ್ತುಸಂಗ್ರಹಾಲಯದಲ್ಲಿ 12ನೇ ಶತಮಾನದ ‘ಅನುಭವ ಮಂಟಪ’ದ ಮಾದರಿಯೂ ಬರಲಿದೆ. ಈ ವಸ್ತುಸಂಗ್ರಹಾಲಯದಲ್ಲಿ ಎಲ್ಲ ರಾಜ್ಯಗಳ ಸಾಂಸ್ಕೃತಿಕ ಹಿರಿಮೆ ಗರಿಮೆಗಳನ್ನು ಪ್ರದರ್ಶಿಸಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT