ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆ ನುಡಿ ಸಹಜವಾಗಿರಲಿ

Published 29 ಮೇ 2023, 23:32 IST
Last Updated 29 ಮೇ 2023, 23:32 IST
ಅಕ್ಷರ ಗಾತ್ರ

ಪ್ರಪಂಚ ನಮ್ಮ ಕಣ್ಣೆದುರಿಗಿದೆ; ಅದನ್ನು ಪ್ರತಿಕ್ಷಣವೂ ಒಂದಲ್ಲ ಒಂದು ರೀತಿಯಿಂದ ಅನುಭವಿಸುತ್ತಲೇ ಇರುತ್ತೇವೆ. ಆದರೆ ಪ್ರಪಂಚವನ್ನು ಅದಿರುವ ಹಾಗೆಯೇ ವಿವರಿಸಿ ಎಂದಾಗ ನಾವೇನು ಮಾಡುತ್ತೇವೆ? ಅದನ್ನು ನಾವು ‘ಕಂಡಂತೆ’ ವಿವರಿಸಿ ಅದಿರುವುದೇ ಹಾಗೆ, ಅದೇ ಸತ್ಯ, ಅದು ಎಲ್ಲರಿಗೂ ಹೀಗೆ ಕಾಣುವುದೇ ಸಹಜ, ಬೇರೆ ರೀತಿ ಕಾಣುವುದೇ ಅಸಹಜ ಎನ್ನುವ ತೀರ್ಪನ್ನು ಕೊಡುತ್ತೇವೆ. ನನ್ನ ಕಣ್ಣೆದುರಿಗೆ ಒಂದು ಉರುಟಾದ ವಸ್ತುವಿದ್ದರೆ ಅದರ ಒಂದು ಮುಖ ಮಾತ್ರ ನನಗೆ ಕಾಣಿಸುತ್ತದೆ, ಮತ್ತೊಂದು ಮುಖ ಕಾಣಿಸುವುದಿಲ್ಲ. ಆದರೂ ಆ ವಸ್ತುವಿನ ಬಗ್ಗೆ ಮಾತನಾಡುವಾಗ ಅದರ ಕಾಣದ ಮುಖವನ್ನೂ ಮನಸ್ಸಿನಲ್ಲೇ ಊಹಿಸಿಕೊಂಡು, ಆ ವಸ್ತುವಿನ ಸಂಪೂರ್ಣ ಸತ್ಯ ಗೊತ್ತಿರುವಂತೆ ಮಾತನಾಡತೊಡಗುತ್ತೇವೆ.

ನನಗೆ ಏನು ಕಾಣುತ್ತಿದೆಯೋ, ಹೇಗೆ ಕಾಣುತ್ತಿದೆಯೋ ಅದಕ್ಕೆ ನನ್ನ ಪೂರ್ವಗ್ರಹಿಕೆಗಳ, ಊಹೆಗಳ, ಪರಿಕಲ್ಪನೆಗಳ, ರಾಗ-ದ್ವೇಷಗಳ ಲೇಪವಿಲ್ಲದೆ ಕಾಣಬಹುದಾದರೆ, ಅನುಭವಿಸಬಹುದಾದರೆ, ಮಾತನಾಡಬಹುದಾದರೆ ಆಗ ಮಾತ್ರ ಅದು ಸಹಜ ನಡೆ–ನುಡಿ ಎನಿಸಿಕೊಳ್ಳುತ್ತದೆ. ಹೀಗೆ ಪ್ರಪಂಚವನ್ನು ಕಾಣುವುದು ಸುಲಭವಲ್ಲವೇ ಅಲ್ಲ. ಬುದ್ಧಿ ಬಂದ ಕೂಡಲೇ, ಮಾತು ಕಲಿತ ತಕ್ಷಣವೇ ನಾವು ಪ್ರಪಂಚವನ್ನು ಒಂದು ಬಗೆಯ ಗ್ರಹಿಕೆಯ ಚೌಕಟ್ಟಿನಲ್ಲಿಯೇ, ಒಂದು ಕೋನದಿಂದಲೇ ನೋಡುವುದನ್ನು ಅಭ್ಯಾಸಮಾಡಿಕೊಳ್ಳುತ್ತೇವೆ; ಅದು ಅನಿವಾರ್ಯವೂ ಹೌದು; ಹಾಗಿಲ್ಲದೆ ಪ್ರಪಂಚವನ್ನು ‘ಕಾಣುವುದೇ’ ಸಾಧ್ಯವಾಗುವುದಿಲ್ಲ.

ಆದರೆ ಹೊಸ ಜೀವನಾನುಭವಗಳ ನೆಲೆಯಿಂದ, ಕಲಿಕೆಯಿಂದ, ಬೇರೆ ಬಗೆಯಲ್ಲಿ ಬದುಕನ್ನು ಕಾಣುವ ಜನರ ಒಡನಾಟದಿಂದ ನಾವು ಪ್ರಪಂಚವನ್ನು ‘ಕಾಣುವ’ ರೀತಿಯನ್ನು ಬದಲಾಯಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಎಲ್ಲ ದೃಷ್ಟಿಕೋನಗಳೂ ಸಾಪೇಕ್ಷವೇ ಹೌದು. ಯಾವುದೇ ಚೌಕಟ್ಟಿರದ, ಕೋನವಿರದ ದೃಷ್ಟಿಯೇ ಸಾಧ್ಯವಿಲ್ಲ ಎನ್ನುವುದೂ ಅರ್ಥವಾಗುತ್ತದೆ. ಆಗ ನಾವು ಪ್ರಪಂಚವನ್ನು ಕಾಣುತ್ತಿರುವುದು ಕೇವಲ ನಮ್ಮ ಕಣ್ಣಿನಿಂದಷ್ಟೇ; ಅದೇ ಪರಮಸತ್ಯವಲ್ಲ ಎನ್ನುವ ಅರಿವು ನಮ್ಮ ಸಹಜ/ ಅಸಹಜಗಳ ಗ್ರಹಿಕೆಯನ್ನು ಬುಡಮೇಲಾಗಿಸುತ್ತದೆ. ಉದಾಹರಣೆಗೆ, ಕೆಲವು ಪದ್ಧತಿಗಳು, ಜೀವನಕ್ರಮ ಕೆಲವು ಸಮುದಾಯಗಳಿಗೆ ಸಹಜವಾಗಿರುತ್ತದೆ; ಹೊರಗಿನವರಿಗೆ ಅದು ಅಸಹಜವಾಗಿ ಕಾಣುತ್ತದೆ.

‘ನಾನು’, ‘ವಿಶ್ವವ್ಯವಸ್ಥೆ’, ‘ಅನ್ಯರು’ ಎನ್ನುವ ಮೂರು ಕೋನಗಳಿರುವ ಒಂದು ತ್ರಿಕೋಣವನ್ನು ಕಲ್ಪಿಸಿಕೊಂಡರೆ ಒಂದೊಂದು ಕೋನದಿಂದಲೂ ಮಿಕ್ಕ ಎರಡು ಕೋನಗಳು ಹೇಗೆ ಕಾಣುತ್ತಿವೆ ಎನ್ನುವುದರ ಒಟ್ಟು ಮೊತ್ತವನ್ನೇ ನಮ್ಮ ‘ಜೀವನದೃಷ್ಟಿ’ ಎನ್ನಬಹುದು. ನಮ್ಮ ಜೀವನದೃಷ್ಟಿಯೇ ನಮಗೆ ಯಾವುದು ಸಹಜ ಯಾವುದು ಅಸಹಜ ಎನ್ನುವುದನ್ನು ನಿರ್ದೇಶಿಸುತ್ತದೆ. ಉದಾಹರಣೆಗೆ, ಪ್ರಪಂಚದ ಎಲ್ಲರೂ ಒಂದಲ್ಲಾ ಒಂದು ರೀತಿಯಿಂದ ಬಾಧಿತರೇ ಹೌದು ಅಂದುಕೊಂಡಾಗ ಎಲ್ಲರ ಬಗ್ಗೆಯೂ ಸಹಾನುಭೂತಿಯುಂಟಾಗುತ್ತದೆ. ಯಾರನ್ನೇ ಆಗಲಿ ಸೌಜನ್ಯದಿಂದ ಮಾತಾಡಿಸುವ ಮನಸ್ಸಾಗುತ್ತದೆ; ಯಾರನ್ನಾದರೂ ಅನವಶ್ಯಕವಾಗಿ ಟೀಕಿಸುವುದು, ಚುಚ್ಚುಮಾತು, ವ್ಯಂಗ್ಯವಾಡುವುದೂ ಅಸಹಜವಾಗಿ ಕಾಣತೊಡಗುತ್ತದೆ. ಇದೆಲ್ಲದರ ಹಿನ್ನೆಲೆಯಲ್ಲಿ ನೋಡಿದಾಗ ಸಹಜವಾಗಿರುವುದು ಎಂದರೆ ‘ನನ್ನಂತೆ ನಾನಿರುವುದು’, ಇತರರಂತೆ ಆಗಬೇಕೆಂಬ ಕನಸನ್ನು ಕೈಬಿಟ್ಟು, ಇತರರನ್ನು ಸುಮ್ಮನೆ ಕಣ್ಣುಮುಚ್ಚಿಕೊಂಡು ಅನುಸರಿಸುವುದನ್ನು ತೊರೆದು, ಅಧಿಕೃತವಾದ ‘ನಾನು’ (authentic me) ಆಗುವುದು, ನನ್ನ ಜೀವನದೃಷ್ಟಿಯನ್ನು ಪಕ್ವಗೊಳಿಸಿಕೊಳ್ಳುವುದು; ಅದಕ್ಕೇ ಬದ್ಧವಾಗಿ ನಡೆದುಕೊಳ್ಳುವುದು ಎಂದರ್ಥ.

ಸಹಜ-ಅಸಹಜಗಳ ಈ ಸಂಕೀರ್ಣ ಸ್ವರೂಪವನ್ನು ಒಪ್ಪಿಕೊಂಡೇ ಬದುಕಿನಲ್ಲಿ ಸಹಜತೆಯನ್ನು ಸಾಧ್ಯವಾದಷ್ಟು ರೂಢಿಸಿಕೊಳ್ಳುವುದು ನಮ್ಮ ಮಾನಸಿಕ ಶಾಂತಿ, ನೆಮ್ಮದಿ, ಸಾಮಾಜಿಕ ಸ್ವಾಸ್ಥ್ಯಕ್ಕೂ ಪೂರಕವೇ ಹೌದು. ಸಹಜವಾಗಿರುವುದು ಎಷ್ಟು ಆರಾಮದಾಯಕ, ಅದು ನಮ್ಮನ್ನು ಎಷ್ಟು ನಿರಾಳವಾಗಿಸುತ್ತದೆ, ಹೇಗೆ ನಮ್ಮನ್ನು ಹಗುರಗೊಳಿಸುತ್ತದೆ ಎನ್ನುವುದರ ಅನುಭವವನ್ನು ಒಮ್ಮೆ ಮನಸ್ಸಿಗೆ ತಂದುಕೊಳ್ಳುವುದು ಸಹಜವಾಗಿರುವುದು ಯಾಕಷ್ಟು ಮುಖ್ಯ ಎನ್ನುವುದನ್ನು ತಿಳಿಸಿಕೊಡುತ್ತದೆ. ಗಟ್ಟಿ ನೆಲದ ಮೇಲೆ ದೇಹದ ಯಾವುದೇ ಭಾಗದಲ್ಲಿ ಬಿಗುವಿರದಂತೆ ಕುಳಿತು ಸರಾಗವಾಗಿ ಉಸಿರಾಡುತ್ತಾ, ನಮ್ಮ ಇಂದ್ರಿಯಗಳಿಗೆ, ದೇಹಕ್ಕೆ ‘ಇಲ್ಲಿ’, ‘ಈ ಕ್ಷಣ’ ಯಾವ ಅನುಭವ ಒದಗುತ್ತಿದೆಯೋ ಅದನ್ನು ಯಾವ ಬೇಕು ಬೇಡಗಳ ಹಂಗಿರದೆ ಮನಸಾರೆ ಅನುಭವಿಸುತ್ತಾ, ಮನಸ್ಸಿನಲ್ಲೇಳುವ ಆಲೋಚನಾ ತರಂಗಗಳಿಗೂ ನಮಗೂ ಸಂಬಂಧವೇ ಇಲ್ಲದಂತೆ ‘ಸುಮ್ಮನೆ ಇರುವುದರ’ ಆನಂದಾನುಭವವೇ ಸಹಜವಾಗಿರುವುದರ ನಿಜಾನುಭವ. ಇಂತಹ ಸೌಖ್ಯ ಯಾರಿಗೆ ಬೇಕಿಲ್ಲ ಹೇಳಿ? ಸಹಜವಾಗಿರುವುದರ ಅತ್ಯುತ್ತಮ ಮಾನದಂಡವೆಂದರೆ ಅದು ನಮ್ಮ ಉಸಿರಾಟವೇ ಹೌದು. ಯಾವ ನಡೆ, ನುಡಿ ನಮ್ಮನ್ನು ಸರಾಗವಾಗಿ ಉಸಿರಾಡುವ ಕಡೆಗೆ ಕೊಂಡೊಯ್ಯುತ್ತದೆಯೋ, ಯಾವುದು ನಮ್ಮ ದೇಹದಲ್ಲಿ ಶಾಂತಿಯನ್ನು, ಸೌಖ್ಯವನ್ನು ಉಂಟುಮಾಡುತ್ತದೆಯೋ, ಆಲೋಚನೆಗಳ ನಿಯಂತ್ರಣವನ್ನು ಸಡಿಲಗೊಳಿಸುತ್ತದೆಯೋ ಅದೇ ಸಹಜ. ಇಂತಹ ‘ಸಹಜ’ದ ಕಡೆಗೆ ನಮ್ಮನ್ನು ಕರೆದೊಯ್ಯುವ ನಡೆ ನುಡಿ ಹೀಗಿರುತ್ತದೆ:

1. ನಾವು ಸಮಯಸ್ಫೂರ್ತಿಯಿಂದ ವರ್ತಿಸಿದಾಗ ನಮ್ಮ ನಡೆ–ನುಡಿ ಸಹಜವಾಗಿರುತ್ತದೆ. ಎಲ್ಲಿ, ಹೇಗೆ, ಯಾರ ಜೊತೆ, ಎಷ್ಟು ಎನ್ನುವುದು ಆ ಕ್ಷಣಕ್ಕೆ ಹೊಳೆಯಬೇಕಾದರೆ ನಮ್ಮ ಆಲೋಚನೆಗಳಲ್ಲಿ, ಪೂರ್ವಗ್ರಹಗಳಲ್ಲಿ ಕಳೆದುಹೋಗದೇ ವಾಸ್ತವದಲ್ಲಿ ಉಪಸ್ಥಿತರಾಗಿರಬೇಕಾಗುತ್ತದೆ.

2. ನಾವು ಹೇಗಿದ್ದೀವೋ ಹಾಗೆ ಒಪ್ಪಿಕೊಂಡು ಯಾವ ಮುಖವಾಡಗಳಿಲ್ಲದೆ ನಮ್ಮನ್ನು ನಾವು ಪ್ರಪಂಚಕ್ಕೆ ತೋರ್ಪಡಿಸಿಕೊಳ್ಳುವ ಆತ್ಮವಿಶ್ವಾಸ ಮತ್ತು ಎಲ್ಲೂ ನಮ್ಮನ್ನೇ ಅತಿಯಾಗಿ ತೆರೆದಿಟ್ಟುಕೊಂಡು ಎಲ್ಲರ ಗಮನದ ಕೇಂದ್ರಬಿಂದುವಾಗದಿರುವ ವಿವೇಕ ನಮ್ಮನ್ನು ಸೌಖ್ಯವಾಗಿಡುತ್ತದೆ.

3. ಪ್ರಕೃತಿ, ಸಮಾಜ, ಕುಟುಂಬ ಎಲ್ಲವೂ ಒಂದು ವ್ಯವಸ್ಥೆ; ಅವೆಲ್ಲದಕ್ಕೂ ಅದರದೇ ರೀತಿ, ನೀತಿ, ಮಿತಿಗಳಿರುತ್ತವೆ ಎಂಬುದನ್ನರಿಯದೆ ಎಲ್ಲವೂ ನಮ್ಮ ಮೂಗಿನ ನೇರಕ್ಕೇ ನಡೆಯಬೇಕೆನ್ನುವ ಆಗ್ರಹ ಸಹಜ ಸಂತೋಷವನ್ನು ಕಿತ್ತುಕೊಳ್ಳುತ್ತದೆ.

4. ಪ್ರಪಂಚ ನಮ್ಮನ್ನು ಹೇಗೆ ನೋಡುತ್ತದೆ ಎನ್ನುವುದರ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡು, ಎಲ್ಲರೂ ನಮ್ಮನ್ನು ನೋಡುವ ಬಗೆಯನ್ನು ನಮ್ಮ ಅನುಕೂಲಕ್ಕಾಗಿ ತಿದ್ದುವುದು, ಮಾರ್ಪಡಿಸುವುದು ನಮ್ಮನ್ನು ಅಸಹಜಗೊಳಿಸುತ್ತದೆ.

5. ನಮ್ಮದೇನಾದರೂ ತಪ್ಪಿದ್ದು ಇತರರ ಮುಂದೆ ಅದು ನಮ್ಮ ಅರಿವಿಗೆ ಬಂದ ಕೂಡಲೇ ಅದನ್ನು ಹೇಗಾದರೂ ‘ಸರಿ’ ಎಂದು ಎಲ್ಲರನ್ನೂ ಒಪ್ಪಿಸುವ ಪ್ರಯತ್ನವನ್ನು ಕೈಬಿಟ್ಟು ‘ಹೌದು, ಇದು ತಪ್ಪಾಯ್ತು’ ಎಂದು ಆತ್ಮನಿಂದನೆಮಾಡಿಕೊಳ್ಳದೆ ಒಪ್ಪಿಕೊಳ್ಳುವುದು ಸಹಜದ ರೀತಿಯೇ ಹೌದು.

6. ನಮ್ಮ ಬೇಕು ಬೇಡಗಳನ್ನು ಮುಕ್ತವಾಗಿ ಹೇಳಿಕೊಳ್ಳದೆ, ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರೇ ಅರಿತು ಅದಕ್ಕೆ ಸ್ಪಂದಿಸಬೇಕೆಂದು ಅಪೇಕ್ಷಿಸುವುದು, ಹಾಗಾಗದಿದ್ದಾಗ ವಿಷಮಯ ನಡೆ ನುಡಿಯ ಮೂಲಕ ಅಸಹನೆ ತೋರಿಸುವುದು ಸಹಜವಲ್ಲ.

ಎಲ್ಲರ ಜೊತೆ ಬೆರೆತು ಒಂದಾಗುವುದೇ ಸಹಜವಾಗಿರುವುದರ ಶ್ರೇಷ್ಠ ಮಾದರಿ. ನಮ್ಮನ್ನು ಎಲ್ಲರಿಗಿಂತ ಮೇಲ್ಮಟ್ಟದಲ್ಲಿಟ್ಟುಕೊಳ್ಳುವಷ್ಟು ಶ್ರೇಷ್ಠರೂ ನಾವಲ್ಲ, ಎಲ್ಲರಿಂದ ದೂರವುಳಿದು ಬಿಡುವಷ್ಟು ದೂಷಿತರೂ ಅಲ್ಲ ಎನ್ನುವುದನ್ನು ಅರ್ಥಮಾಡಿಕೊಂಡಾಗ ಸಹಜದ ಸೂತ್ರವೊಂದು ಕೈಗೆಟಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT