ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ರೀಚಾರ್ಜ್ ಮಾಡುವಾಗ ಎಚ್ಚರ!.

Last Updated 3 ಆಗಸ್ಟ್ 2018, 12:47 IST
ಅಕ್ಷರ ಗಾತ್ರ

ಆಟವಾಡುವ ಸಣ್ಣ ಪುಟ್ಟ ಮಕ್ಕಳಲ್ಲೂ ಕೈಗೊಂದು ಮೊಬೈಲನ್ನು ಕೊಡುವ ಅತ್ಯಂತ ಕೆಟ್ಟ ಶೋಕಿ ಹಲವರಲ್ಲಿದೆ. ಇನ್ನು ಯುವ ಜನರ ಕೈಗಳಲ್ಲಂತೂ ಮೊಬೈಲ್ ಅನಿವಾರ್ಯ ಎನ್ನುವಂತಾಗಿದೆ.

ಮೊಬೈಲ್ ಇದೆ ಎಂದ ಮೇಲೆ ಅದಕ್ಕೆ ರೀಚಾರ್ಜ್ ಮಾಡುವುದು ಕೂಡ ಸಮಾನ್ಯ. ಎಷ್ಟೆಲ್ಲಾ ಡಿಜಿಟಲೈಸೇಷನ್ ಬಗೆಗೆ ನಾವು ಮಾತನಾಡುತ್ತಿದ್ದರೂ ಆನ್‍ಲೈನ್‍ನಲ್ಲಿಯೇ ನೇರವಾಗಿ ನಾವು ರೀಚಾರ್ಜ್ ಮಾಡಿಕೊಳ್ಳಬಹುದಾದ ನೂರಾರು ಅವಕಾಶಗಳು ದೊರೆಯುತ್ತಿದ್ದರೂ ಅದನ್ನು ಎಲ್ಲರೂ ಬಳಸಿಕೊಳ್ಳುತ್ತಿಲ್ಲ .

ಗ್ರಾಮೀಣ ಭಾಗಗಳಲ್ಲಿನ ಬಹುತೇಕ ಜನರು ಸೇರಿದಂತೆ ನಗರ ಪ್ರದೇಶದಲ್ಲೂ ಹಲವರು ಈ ಹೊತ್ತಿಗೂ ಮೊಬೈಲ್ ಅಂಗಡಿಗಳಲ್ಲಿ ನಂಬರ್ ಕೊಟ್ಟು ರೀಚಾರ್ಜ್ ಮಾಡುವುದು ಮಾಮೂಲಿ. ಆದರೆ ಹೀಗೆ ರೀಚಾರ್ಜ್ ಮಾಡುವಾಗ ಎಚ್ಚರಿಕೆ ವಹಿಸುವುದನ್ನು ಹಲವರು ಮರೆಯುತ್ತಿರುವುದು ಸರಿಯಲ್ಲ.

ಒಂದು ಘಟನೆ ಕೇಳಿ. ಕಾಲೇಜು ಓದುತ್ತಿದ್ದ ಹುಡುಗಿಯೊಬ್ಬಳ ಮೊಬೈಲ್‍ಗೆ ಅದೊಂದು ದಿನ ಪದೇ ಪದೇ ಎನ್ನುವಂತೆ ಮೂರು ನಂಬರುಗಳಿಂದ ಅನಾಮಿಕ ಕರೆಗಳು ಸಂದೇಶಗಳು ಬರಲಾರಂಭಿಸಿದ್ದವು. ಅಪರಿಚಿತ ಗಂಡು ಧ್ವನಿಗಳು ನೀನಂದ್ರೆ ಇಷ್ಟ ನಿನ್ನ ಜೊತೆ ಮಾತಾಡ್ಬೇಕು ಹಾಗೆ ಹೀಗೆ ಅಂತೆಲ್ಲಾ ಸಂದೇಶ ತೇಲಿಬಿಡುತ್ತಿದ್ದಂತೆ ಹುಡುಗಿ ಸಿಕ್ಕಾಪಟ್ಟೆ ಹೆದರಿಕೊಂಡು ಖಿನ್ನತೆಗೆ ಒಳಗಾಗಿದ್ದಳು. ಅವಳು ತನ್ನ ಖಾಸಾ ಸ್ನೇಹಿತೆಯರನ್ನು ಬಿಟ್ಟು ಬೇರಾರಿಗೂ ತನ್ನ ನಂಬರನ್ನು ನೀಡಿರಲಿಲ್ಲ.

ಮನೆಯವರು ವಿಚಾರಿಸಿದಾಗ ಹಿಂದಿನ ವಾರ ತನ್ನ ಮನೆಗೆ ಹತ್ತಿರದಲ್ಲಿದ್ದ ಮೊಬೈಲ್ ಅಂಗಡಿಯಲ್ಲಿ ರೀಚಾರ್ಜ್ ಮಾಡಿಸುವಾಗ ನಂಬರ್‌ ಇತರರಿಗೆ ಲಭ್ಯವಾದುದು ಗೊತ್ತಾಯಿತು.

ಇದು ಯಾವುದೋ ಒಂದೂರಿನ ಅಥವಾ ಒಂದು ಹುಡುಗಿಯ ಕತೆ ಮಾತ್ರವಲ್ಲ. ಪ್ರತೀ ಊರುಗಳಲ್ಲೂ ಇಂತಹ ಕಿರಾತಕರು ಇದ್ದೇ ಇರುತ್ತಾರೆ. ನಮ್ಮದೊಂದು ನಿರ್ಲಕ್ಷ್ಯ ನಮ್ಮದೇ ಮಕ್ಕಳ ಬದುಕನ್ನು ಹಾಳುಮಾಡಬಲ್ಲುದು ಎನ್ನುವುದು ನೆನಪಿರಲಿ. ಎಲ್ಲಾ ಹುಡುಗಿಯರು ಆ ಹುಡುಗಿಯ ಹಾಗೆ ಖಿನ್ನತೆಗೆ ಹೋಗುವವರಲ್ಲ. ಅದೆಷ್ಟೋ ಹೆಣ್ಣುಮಕ್ಕಳು ಇಂತಹ ಅನಾಮಿಕ ಮೊಬೈಲ್ ಕರೆಗಳಿಗೆ ಹರೆಯದ ಕಡು ಆಕರ್ಷಣೆಯಿಂದ ಜೋತುಬಿದ್ದು ಪ್ರೀತಿ ಪ್ರೇಮ ಮೋಜು ಅಂದುಕೊಂಡು ತಮ್ಮ ಇಡೀ ಬದುಕನ್ನೇ ಹಾಳುಮಾಡಿಕೊಂಡ ಉದಾಹರಣೆಗಳೂ ಇವೆ.

ಹಲವು ವಿದ್ಯಾಲಯಗಳಲ್ಲಿ ಮೊಬೈಲ್ ನಿಷೇಧ ಇದೆ. ತಪ್ಪಿದರೆ ಸಹಸ್ರಾರು ರೂಪಾಯಿಗಳ ದಂಡ ವಿಧಿಸುವ ನಿಯಮವೂ ಇದೆ. ಆದರೆ ಮೊಬೈಲ್ ಬಿಟ್ಟಿರಲಾಗದ ಕೆಲವು ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜುಗಳ ಹತ್ತಿರದ ಅಂಗಡಿಗಳಲ್ಲಿ ಮೊಬೈಲ್ ಇಟ್ಟು ಹೋಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಹಲವು ಅಂಗಡಿಗಳಲ್ಲಿ ಇದಕ್ಕೆ ಹತ್ತು ಇಪ್ಪತ್ತು ರೂಪಾಯಿಗಳ ಬಾಡಿಗೆಯನ್ನು ಕೂಡ ಪಡೆದುಕೊಳ್ಳಲಾಗುತ್ತದೆ. ಹೀಗೆ ಮೊಬೈಲ್ ಇಡುವುದು ಹಲವು ವಿದ್ಯಾರ್ಥಿಗಳ ಪ್ರತೀದಿನದ ಅಭ್ಯಾಸ ಆಗಿರುವುದರಿಂದ ಕೆಲವರ ಪಾಸ್‍ವರ್ಡ್, ಲಾಕ್ ಪ್ಯಾಟರ್ನ್‌ಗಳು ಕೂಡ ಅಂಗಡಿಯವರಿಗೆ ತಿಳಿದಿರುತ್ತದೆ. ಇದನ್ನೇ ಉಪಯೋಗಿಸಿಕೊಂಡು ಹುಡುಗಿಯರಿಗೆ ಕಿರುಕುಳ ನೀಡುವವರಿದ್ದಾರೆ. ಫೋಟೋಗಳನ್ನು ಕದಿಯುವವರಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಎಷ್ಟೋ ಮನೆಗಳ ನೆಮ್ಮದಿ ಹಾಳಾಗಿದ್ದೂ ಇದೆ. ಪ್ರತೀದಿನ ನಮ್ಮ ನಡುವೆಯೇ ನಡೆಯುತ್ತಿರುವ ಇಂತಹ ಪ್ರಕರಣಗಳನ್ನು ನಾವೆಲ್ಲರೂ ಎಚ್ಚರಿಕೆಯ ಘಂಟೆಯಾಗಿ ಗಮನಿಸಬೇಕಿದೆ.

ಹುಡುಗಿಯರು ಮೊಬೈಲ್ ಅಂಗಡಿಗಳಲ್ಲಿ ರೀಚಾರ್ಜ್ ಮಾಡಿಸಿಕೊಳ್ಳುವಾಗ ಅದು ಅವರದ್ದೇ ನಂಬರ್ ಎಂದು ಖಚಿತ ಪಡಿಸಿಕೊಂಡು ಮತ್ತೆ ಕರೆ ಮಾಡಿ ರೀಚಾರ್ಜ್ ಆಯ್ತಾ ಎಂದು ಸಂಭಾಷಣೆ ಶುರುಮಾಡುವ ಫ್ಯಾಷನ್ನೂ ಇದೆ. ಹೀಗೆ ಹುಡುಗಿಯರನ್ನು ತಮ್ಮ ಬಲೆಗೆ ಕೆಡವಿಕೊಳ್ಳುವವರೂ ಇದ್ದಾರೆ. ನಮ್ಮದೇ ಆಧಾರ್ ಗುರುತನ್ನು ಬಳಸಿಕೊಂಡು (ಸರಿ ಎಂಟ್ರಿ ಆಗಿಲ್ಲ ಎಂದು ಎರಡು ಸಲ ಬೆರಳಚ್ಚು ಸ್ಕ್ಯಾನ್ ಮಾಡಿಸಿಕೊಂಡು ) ಹೊಸ ಸಿಮ್ ಉಪಯೋಗಿಸಿ ಅದನ್ನು ಕೆಟ್ಟ ಕೆಲಸಕ್ಕೆ ಬಳಸುವವರೂ ಇದ್ದಾರೆ. ಹಾಗಂತ ಎಲ್ಲಾ ಅಂಗಡಿಯವರನ್ನು ಅನುಮಾನದಿಂದ ನೋಡುವುದು ಕೂಡ ತಪ್ಪು. ಆದರೆ ಎಷ್ಟೇ ಪರಿಚಿತರ ಅಂಗಡಿಗಳಾದರೂ ಕೂಡ ಅಲ್ಲಿರುವ ಉಳಿದ ಜನರ ಚಲನ ವಲನಗಳ ಬಗೆಗೆ ಒಂದು ಕಣ್ಣಿಡಬೇಕು.

ಅದೇನೇ ಇದ್ದರೂ ವಿಶೇಷವಾಗಿ ಶಾಲಾ ಕಾಲೇಜು ಹುಡುಗಿಯರೂ ಸೇರಿದಂತೆ ಪ್ರತಿಯೊಬ್ಬರೂ ಕೂಡ ತಾವು ರೀಚಾರ್ಜ್ ಮಾಡಿಸಿಕೊಳ್ಳುವಾಗ ಮತ್ತು ನಮ್ಮ ವೈಯಕ್ತಿಕ ಮೊಬೈಲುಗಳನ್ನು ಅನವಶ್ಯಕವಾಗಿ ಬೇರೆಯವರ ಅಂಗಡಿಗಳಲ್ಲಿ ಕೊಟ್ಟು ಹೋಗುವಾಗ (ರಿಪೇರಿ ಮಾಡುವಾಗಲೂ ಕೂಡ) ಕನಿಷ್ಠ ಮುಂಜಾಗ್ರತೆಯನ್ನು ವಹಿಸಲೇಬೇಕಿದೆ. ಜಗತ್ತಿನಲ್ಲಿ ಎಲ್ಲರೂ ಕೆಟ್ಟವರಲ್ಲ. ಆದರೆ ಕೆಟ್ಟುಹೋಗಲು ಹೆಚ್ಚು ಸಮಯ ಬೇಕಿಲ್ಲ ಎನ್ನುವುದು ಸತ್ಯ. ಹಾಗಾಗಿ ನಮ್ಮ ಎಚ್ಚರ ನಮಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT