ಇದೇ ಮಂಗಳವಾರ, ಡಿಸೆಂಬರ್ 16ರಂದು, ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಗಾಯಗೊಂಡಿದ್ದ ಒಂದು ವಲಸಿಗ ಸೀಗಲ್ ಪಕ್ಷಿ ಕಾಣಿಸಿಕೊಂಡಿತ್ತು. ಈ ಹಕ್ಕಿ ಅನಿರೀಕ್ಷಿತವಾಗಿ ಭದ್ರತಾ ವಿಚಾರಗಳ ಚರ್ಚೆಗೆ ಕೇಂದ್ರ ಬಿಂದುವಾಗಿತ್ತು. ಗಾಯಗೊಂಡಿದ್ದ ಪಕ್ಷಿ ಯಾವುದೋ ಸಾಮಾನ್ಯ ಸೀಗಲ್ ಆಗಿರಲಿಲ್ಲ. ಬದಲಿಗೆ, ಅದರ ದೇಹದಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಉಪಕರಣವನ್ನು ಅಳವಡಿಸಲಾಗಿತ್ತು. ಇದಕ್ಕೊಂದು ಸಣ್ಣ ಸೌರ ಫಲಕವನ್ನೂ, ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಗೆ ಸಂಬಂಧಿಸಿದ ಇಮೇಲ್ ವಿಳಾಸವನ್ನೂ ಜೋಡಿಸಲಾಗಿತ್ತು. ಭಾರತದ ಅತ್ಯಂತ ಮುಖ್ಯವಾದ ನೌಕಾ ನೆಲೆಗಳನ್ನು ಹೊಂದಿರುವ, ಕರಾವಳಿ ನಗರವಾದ ಕಾರವಾರಕ್ಕೆ ಈ ಬೆಳವಣಿಗೆ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿ, ಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕಿತ್ತು.

ಮೊದಲನೆಯದಾಗಿ, ಕಾರವಾರದಲ್ಲಿ ನಡೆದಿದ್ದೇನು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳೋಣ. ಕರಾವಳಿ ಮರೈನ್ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದ ಈ ಹಕ್ಕಿಯನ್ನು ಗಮನಿಸಿ, ತಕ್ಷಣವೇ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಅಧಿಕಾರಿಗಳು ಅದನ್ನು ಪರಿಶೀಲಿಸಿದಾಗ, ಪಕ್ಷಿಯ ದೇಹದಲ್ಲಿ ಒಂದು ಆಧುನಿಕ ಉಪಕರಣವನ್ನು ಅಳವಡಿಸಿದ್ದು, ಅದು ಸೌರ ಬೆಳಕಿನ ಸಹಾಯದಿಂದ ಪಕ್ಷಿಯ ಚಲನವಲನಗಳನ್ನು ತಿಳಿಯಲು ನೆರವಾಗುತ್ತಿರುವುದು ಗಮನಕ್ಕೆ ಬಂತು. ಅದರೊಡನೆ, ಈ ಉಪಕರಣದ ಮೇಲೆ ಅದು ಯಾರಿಗಾದರೂ ಸಿಕ್ಕಿದರೆ, ಒಂದು ನಿರ್ದಿಷ್ಟ ಇಮೇಲ್ ಐಡಿಗೆ ಮಾಹಿತಿ ಒದಗಿಸುವಂತೆ ಮನವಿ ಮಾಡಿರುವ ಸೂಚನೆ ನಮೂದಾಗಿತ್ತು. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ವೈಜ್ಞಾನಿಕ ಸಂಶೋಧನೆಯಂತೆ ಕಂಡುಬಂದಿತ್ತು. ಏಕೆಂದರೆ, ಜಗತ್ತಿನಾದ್ಯಂತ ವಿಜ್ಞಾನಿಗಳು ಜಿಪಿಎಸ್ ಟ್ರ್ಯಾಕರ್ಗಳನ್ನು ಬಳಸಿಕೊಂಡು, ವಲಸೆ ಹಕ್ಕಿಗಳು ಹೇಗೆ ಖಂಡಗಳನ್ನು ದಾಟಿ, ಸಾವಿರಾರು ಕಿಲೋಮೀಟರ್ ಪ್ರಯಾಣ ಬೆಳೆಸುತ್ತವೆ, ಅವುಗಳ ಹಾರಾಟ ವಿಧಾನ ಏನು ಎನ್ನುವುದರ ಅಧ್ಯಯನ ಮಾಡುತ್ತಾರೆ. ಇದು ವಲಸೆ ಹಕ್ಕಿಗಳ ಆವಾಸ ಸ್ಥಾನಗಳನ್ನು ಉಳಿಸಲು ನೆರವಾಗುತ್ತದೆ.

ಪಕ್ಷಿಗಳ ವಲಸೆಯ ಅಧ್ಯಯನ ನಿಜಕ್ಕೂ ಮುಖ್ಯವಾದದ್ದು. ಇಂತಹ ಅಧ್ಯಯನಗಳು ನಮಗೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗಿ, ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ರಕ್ಷಿಸಲು ಮತ್ತು ಪರಿಸರ ಸಮತೋಲನ ಕಾಪಾಡಲು ನೆರವಾಗುತ್ತವೆ.

ವಲಸೆಗಾರ ಸೀಗಲ್ಗಳು ಅಸಾಧಾರಣ ದೂರವನ್ನು ಕ್ರಮಿಸುತ್ತವೆ. ಇವುಗಳ ಅಧ್ಯಯನ ನಡೆಸುವುದರಿಂದ ಹವಾಮಾನ ಮಾದರಿಗಳು, ಸಮುದ್ರದ ಪ್ರವಾಹಗಳು, ಹವಾಮಾನ ಬದಲಾವಣೆಯಂತಹ ಮಹತ್ವದ ವಿಚಾರಗಳ ಕುರಿತು ಮಾಹಿತಿ ಲಭಿಸುತ್ತದೆ. ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ತಾನು ಪರಿಸರ ಅಧ್ಯಯನದ ಕುರಿತು ಗಮನ ಹರಿಸಿರುವುದಾಗಿ ಹೇಳಿಕೊಂಡಿದ್ದು, ಆದ್ದರಿಂದ ಅದು ಇಂತಹ ಅಧ್ಯಯನ ನಡೆಸಿರುವ ಸಾಧ್ಯತೆಗಳಿವೆ.

ಆದರೆ, ಈ ಹಕ್ಕಿ ಈಗ ಪತ್ತೆಯಾಗಿರುವ ಪ್ರದೇಶವೇ ಎಲ್ಲವನ್ನೂ ಸಂಕೀರ್ಣಗೊಳಿಸಿದೆ. ಕಾರವಾರ ಹತ್ತರಲ್ಲಿ ಹನ್ನೊಂದು ಎನ್ನುವಂತಹ ಕರಾವಳಿ ಪಟ್ಟಣವಲ್ಲ. ಇದು ಭಾರತದ ಅತಿದೊಡ್ಡ ನೌಕಾನೆಲೆಯಾದ, ನಮ್ಮ ದೇಶದ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಕಾರ್ಯತಂತ್ರದ ಮಹತ್ವ ಹೊಂದಿರುವ ಐಎನ್ಎಸ್ ಕದಂಬವನ್ನು ಹೊಂದಿದೆ. ಈ ನೌಕಾನೆಲೆ ಭಾರತದ ಪರಮಾಣು ಜಲಾಂತರ್ಗಾಮಿಗಳು (ಸಬ್ಮರೀನ್), ಆಧುನಿಕ ಯುದ್ಧನೌಕೆಗಳು, ಮತ್ತು ರಹಸ್ಯ ಮಿಲಿಟರಿ ಕಾರ್ಯಾಚರಣೆಗಳ ತಾಣ. ಐಎನ್ಎಸ್ ಕದಂಬ ನೌಕಾನೆಲೆಯ ಯಥಾವತ್ತಾದ ವಿನ್ಯಾಸಗಳು, ಹಡಗು – ನೌಕೆಗಳ ಚಲನವಲನ, ಗಸ್ತು ವ್ಯವಸ್ಥೆ, ಸುರಕ್ಷತಾ ಕ್ರಮಗಳು ಎಲ್ಲವನ್ನೂ ಬಹಳ ರಹಸ್ಯವಾಗಿ ನಿರ್ವಹಿಸಲಾಗುತ್ತಿದೆ. ಇಂತಹ ಸೂಕ್ಷ್ಮ ಸ್ಥಳಗಳ ಬಳಿ ಯಾವುದೇ ಕಣ್ಗಾವಲು ನಡೆಸುವುದಾಗಲಿ, ಅಥವಾ ಮಾಹಿತಿ ಕಲೆಹಾಕುವುದಾಗಲಿ ಮಾಡಿದರೆ, ಅದನ್ನು ತಕ್ಷಣವೇ ಭದ್ರತಾ ಸಮಸ್ಯೆಯಾಗಿ ಪರಿಗಣಿಸಲಾಗುತ್ತದೆ. ಮೇಲ್ನೋಟಕ್ಕೆ ಅದೆಷ್ಟೇ ಅಮಾಯಕ ಘಟನೆಯಂತೆ ಕಂಡರೂ ಅದನ್ನು ಗಂಭೀರವಾಗಿ ತನಿಖೆ ಮಾಡಲಾಗುತ್ತದೆ.

ಪ್ರಸ್ತುತ ಬೆಳವಣಿಗೆ ಗೊಂದಲ ಉಂಟುಮಾಡುವುದು ಇಲ್ಲಿ. ಹಕ್ಕಿಯ ದೇಹದಲ್ಲಿ ಅಳವಡಿಸಿರುವ ಜಿಪಿಎಸ್ ಟ್ರ್ಯಾಕರ್ ನಿಜಕ್ಕೂ ಪರಿಸರ ಸಂಬಂಧಿ ಅಧ್ಯಯನದ ಭಾಗವೇ ಆಗಿರಬಹುದು. ಆದರೆ, ಇದೇ ತಂತ್ರಜ್ಞಾನವನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ ಎನ್ನಲಾಗದು. ಇಂತಹ ಜಿಪಿಎಸ್ ಟ್ರ್ಯಾಕರ್ಗಳು ನಿರಂತರವಾಗಿ ಸ್ಥಾನದ ಮಾಹಿತಿಯನ್ನು ದಾಖಲಿಸುತ್ತವೆ. ಒಂದು ವೇಳೆ ಈ ರೀತಿ ಗಮನಿಸಲ್ಪಡುತ್ತಿರುವ ಪಕ್ಷಿ ಏನಾದರೂ ನಿಯಮಿತವಾಗಿ ನೌಕಾನೆಲೆಯ ಮೇಲೆ ಅಥವಾ ಸನಿಹದಲ್ಲಿ ಹಾರಾಟ ನಡೆಸಿದರೆ, ಆ ಮಾಹಿತಿಗಳು ಆ ಪ್ರದೇಶದ ಪರಿಸ್ಥಿತಿಗಳನ್ನು, ಹಾರಾಟ ನಿರ್ಬಂಧ ಪ್ರದೇಶಗಳನ್ನು, ಮತ್ತು ಭದ್ರತಾ ಗಸ್ತು ಸಮಯಗಳು ಅಥವಾ ನೌಕಾಪಡೆಯ ಹಡಗುಗಳ ಇಲೆಕ್ಟ್ರೋಮ್ಯಾಗ್ನೆಟಿಕ್ ಸಂಕೇತಗಳನ್ನೂ ಒದಗಿಸುವ ಸಾಧ್ಯತೆಗಳಿವೆ. ಆಧುನಿಕ ಯುದ್ಧಗಳು ಮತ್ತು ಮಾಹಿತಿ ಸಂಗ್ರಹಣೆ ಯಾವಾಗಲೂ ಬೇಹುಗಾರರನ್ನು ಬಳಸಿ ನಡೆಸುವ ಕಾರ್ಯಾಚರಣೆಗಳೇ ಆಗಿರುವುದಿಲ್ಲ. ಕೆಲವೊಂದು ಬಾರಿ ಇದು ಮೇಲ್ನೋಟಕ್ಕೆ ನಿರಪಯುಕ್ತವಾಗಿ ಕಾಣುವ ಪರಿಸರ ಸಂಬಂಧಿತ ಮಾಹಿತಿಗಳನ್ನೇ ಜಾಗರೂಕವಾಗಿ ಅವಲೋಕಿಸಿ ವಿಶ್ಲೇಷಿಸಿದಾಗ ಕಾರ್ಯತಂತ್ರದ ಮಾಹಿತಿಗಳನ್ನು ಒದಗಿಸಿಬಿಡುತ್ತವೆ.

ಈ ವಿಚಾರದ ಕುರಿತು ನಾವು ಆತಂಕಕ್ಕೆ ಒಳಗಾಗಬೇಕೇ? ಪ್ರಾಮಾಣಿಕವಾಗಿ ಉತ್ತರಿಸಬೇಕೆಂದರೆ, ನಾವು ಗಾಬರಿಗೊಳ್ಳಬೇಕಿಲ್ಲ. ಆದರೆ, ನಾವು ನಿಜಕ್ಕೂ ಜಾಗರೂಕರಾಗಿರಲೇಬೇಕು. ಉತ್ತರ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಇದೊಂದು ಕಾನೂನುಬದ್ಧ ಸಂಶೋಧನೆಯ ಭಾಗವೂ ಆಗಿರಬಹುದು ಎಂದು ಹೇಳಿದ್ದಾರೆ. ವಿಜ್ಞಾನಿಗಳು ಪ್ರಕೃತಿಯ ಕುರಿತು ಅಧ್ಯಯನ ನಡೆಸುವಾಗ ಗಡಿಗಳ ಕುರಿತು ಆಲೋಚಿಸುವುದಿಲ್ಲ, ಭೇದವೆಣಿಸುವುದಿಲ್ಲ. ಆದರೆ, ಇಂತಹ ಘಟನೆಗಳು ನಡೆದಾಗ ಅದರ ನ್ಯಾಯಸಮ್ಮತತೆಯನ್ನು ಖಾತ್ರಿಪಡಿಸುವುದು ಅವಶ್ಯಕ. ಪೊಲೀಸರು ಉಪಕರಣದಲ್ಲಿ ನಮೂದಿಸಲಾಗಿದ್ದ ಇಮೇಲ್ ವಿಳಾಸದ ಮೂಲಕ ಈಗ ಚೈನೀಸ್ ಅಕಾಡೆಮಿಯನ್ನು ಸಂಪರ್ಕಿಸಿ, ಅವರು ನಡೆಸುತ್ತಿದ್ದ ಸಂಶೋಧನೆಯ ಮೂಲ ಉದ್ದೇಶ, ಅದರ ಪ್ರಯೋಜನಗಳು ಮತ್ತು ಈ ನಿರ್ದಿಷ್ಟ ಮಾರ್ಗವನ್ನೇ ಆರಿಸಲು ಕಾರಣವೇನು ಎಂದು ತಿಳಿಯಲು ಪ್ರಯತ್ನ ನಡೆಸುತ್ತಿದ್ದಾರೆ.

ಭಾರತ ಮತ್ತು ಚೀನಾಗಳ ನಡುವೆ ಇರುವ ಭದ್ರತಾ ಬಿಕ್ಕಟ್ಟುಗಳ ನಡುವೆ ವೈಜ್ಞಾನಿಕ ಸಹಕಾರವನ್ನು ಸಮತೋಲನಗೊಳಿಸುವುದು ಹೇಗೆ ಎನ್ನುವುದು ಈಗ ದೊಡ್ಡ ಸವಾಲಾಗಿದೆ. ನಾವು ಪ್ರತಿಯೊಂದು ಪರಿಸರ ಸಂಬಂಧಿ ಸಂಶೋಧನಾ ಯೋಜನೆಗಳನ್ನು ಅನುಮಾನದ ದೃಷ್ಟಿಯಿಂದಲೇ ನೋಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ನೈಜ ವೈಜ್ಞಾನಿಕ ಪ್ರಗತಿಗೂ ಅಡ್ಡಿ ಉಂಟಾದೀತು. ಅದೇ ರೀತಿ, ನಾವು ಭದ್ರತಾ ವಿಚಾರಗಳನ್ನೂ ಕಡೆಗಣಿಸಿ, ಭದ್ರತೆಯ ಕುರಿತು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ನೌಕಾನೆಲೆಗಳಂತಹ ಸೂಕ್ಷ್ಮ ಪ್ರದೇಶಗಳ ಭದ್ರತೆ ಇನ್ನಷ್ಟು ಮುಖ್ಯವಾಗಿರುತ್ತದೆ. ಬಹುಶಃ ಭದ್ರತಾ ಸಂಸ್ಥೆಗಳು ಮತ್ತು ವನ್ಯಜೀವಿ ಸಂಶೋಧಕರ ನಡುವೆ ಉತ್ತಮ ಸಹಯೋಗ ಸ್ಥಾಪಿಸುವುದು ಈ ನಿಟ್ಟಿನಲ್ಲಿ ನೆರವಾಗಬಹುದೇನೋ. ಇನ್ನು ಕಾರ್ಯತಂತ್ರದ ಸ್ಥಳಗಳಲ್ಲಿ ಟ್ರ್ಯಾಕಿಂಗ್ ಉಪಕರಣಗಳ ಬಳಕೆಯ ಕುರಿತಂತೆ ಸ್ಪಷ್ಟ ಶಿಷ್ಟಾಚಾರಗಳು, ನಿಯಮಗಳು ಜಾರಿಗೆ ಬರಬೇಕಿದೆ. ಅದರೊಡನೆ, ಅಂತರರಾಷ್ಟ್ರೀಯ ಮಟ್ಟದ ಸಂಶೋಧನೆಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾರದರ್ಶಕ ಒಪ್ಪಂದಗಳ ಅಗತ್ಯವಿದೆ.

ಸದ್ಯದ ಮಟ್ಟಿಗೆ ಸೀಗಲ್ ಅರಣ್ಯ ಇಲಾಖೆಯ ಕೈಯಲ್ಲಿದ್ದು, ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದೆ. ಘಟನೆಯ ಕುರಿತ ತನಿಖೆ ಮುಂದುವರಿದಿದ್ದು, ಅಧಿಕಾರಿಗಳು ಎಲ್ಲ ಆಯಾಮದಿಂದಲೂ ವಿಚಾರಣೆ ನಡೆಸುತ್ತಿದ್ದಾರೆ. ಅಂತಿಮವಾಗಿ ಇದು ಒಂದು ಸಹಜ ಸಂಶೋಧನೆಯ ಭಾಗವಾಗಿದ್ದರೂ, ಅಥವಾ ಹೆಚ್ಚಿನ ವಿಚಾರಣೆ ನಡೆಸಬೇಕಾದ ಏನೋ ಘಟನೆಯಾಗಿದ್ದರೂ, ಒಂದು ವಿಷಯವಂತೂ ಸ್ಪಷ್ಟವಾಗಿದೆ. ಇಂದಿನ ಜಗತ್ತಿನಲ್ಲಿ, ಒಂದು ಸಣ್ಣ ಉಪಕರಣವನ್ನು ಹೊತ್ತು ಹಾರುವ ಹಕ್ಕಿಯೂ ರಾಷ್ಟ್ರೀಯ ಭದ್ರತೆ, ವೈಜ್ಞಾನಿಕ ಪಾರದರ್ಶಕತೆ ಮತ್ತು ಸಹಕಾರ ಹಾಗೂ ಎಚ್ಚರಿಕೆಯ ನಡುವಿನ ಗೆರೆಯ ಕುರಿತು ಗಂಭೀರ ಚರ್ಚೆಗಳಿಗೆ ಹಾದಿ ಮಾಡಿಕೊಡಬಲ್ಲದು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.