ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಈಟಿಯಿಂದ ತಿವಿಯದಿರಿ

Last Updated 7 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಮಾತಿನ ಶಕ್ತಿ: ‘ಮಾತೇ ಮುತ್ತು’, ಹಾಗೆಯೇ ‘ಮಾತೇ ಮೃತ್ಯು’ ಕೂಡ. ಮಾತಿನ ಮಹಿಮೆಯನ್ನು ತಿಳಿಯಲು ಈ ಎರಡು ಮಾತುಗಳು ಸಾಕು. ಕಟ್ಟುವ ಹಾಗೂ ಕೆಡಹುವ ಕೆಲಸಗಳು ಮಾತಿನಿಂದಲೇ ಆಗುತ್ತವೆ. ಮನಸ್ಸು ಮುದುಡಿ ಹೋಗಿರುವಾಗ, ಯಾವುದೋ ಕಾರಣಕ್ಕೆ ವ್ಯಕ್ತಿ ಎದೆಗುಂದಿರುವಾಗ, ಸೋತು ಸುಣ್ಣವಾಗಿ ಕುಗ್ಗಿಹೋಗಿರುವಾಗ ಅವರ ಪ್ರೀತಿಪಾತ್ರರು, ಹಿತೈಷಿಗಳು ಆಡುವ ಒಂದೇ ಒಂದು ಒಳ್ಳೆಯ ಮಾತು ಸಾಕು, ಅವನನ್ನು ಪುನಶ್ಚೇತನಗೊಳ್ಳಲು. ಅಂಥ ಮಾತಿನಿಂದ ನಷ್ಟವಾದ ಧೈರ್ಯ, ಹುಮ್ಮಸ್ಸುಗಳನ್ನು ಮರಳಿ ಪಡೆಯುತ್ತಾರೆ.

ಆದರೆ ಅಂತಹ ವ್ಯಕ್ತಿಗಳೊಂದಿಗೆ ನಕಾರಾತ್ಮಕ ಮಾತುಗಳನ್ನಾಡಿದರೆ ಅವರು ಇನ್ನಷ್ಟು ಕುಗ್ಗಿಹೋಗುತ್ತಾರೆ. ಹೌದು, ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಬಳಸಲ್ಪಟ್ಟ ಮಾತು ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಉತ್ತಮವಾದ ಮಾತು ಮನಸ್ಸಿನ ಗಾಯವನ್ನು ಗುಣಪಡಿಸುತ್ತದೆ. ಆ ಸಮಯದಲ್ಲಿ ಆಡಿದ ಮಾತು ದುಷ್ಪರಿಣಾಮವನ್ನುಂಟುಮಾಡುತ್ತದೆ.

ಮಾತಿಗೂ ವ್ಯಕ್ತಿತ್ವಕ್ಕೂ ಸಂಬಂಧವಿದೆ: ಮನುಷ್ಯನ ಆತ್ಮವಿಶ್ವಾಸಕ್ಕೂ ಮಾತಿಗೂ ವಿವಿಧ ಆಯಾಮಗಳ ಸಂಬಂಧವಿದೆ. ಒಬ್ಬ ವ್ಯಕ್ತಿಯ ಸೌಂದರ್ಯ ಹಾಗೂ ದೈಹಿಕ ಗುಣಲಕ್ಷಣಗಳನ್ನು ಕುರಿತು ಬಾಲ್ಯದಲ್ಲಿ ಯಾರಾದರೂ ನಕಾರಾತ್ಮಕವಾಗಿ ಕಮೆಂಟ್ ಮಾಡಿದರೆ, ಕೀಟಲೆ ಮಾಡಿ ಅವಮಾನಿಸಿದರೆ ಆ ವ್ಯಕ್ತಿ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾನೆ. ಅದರಿಂದಾಗಿ ಅವನ ಆತ್ಮವಿಶ್ವಾಸ ಕುಗ್ಗುತ್ತದೆ. ಆತ್ಮವಿಶ್ವಾಸದ ಕೊರತೆಯಿಂದ ಮುಂದೆ ಅವನು ನಾಯಕತ್ವ ಗುಣ ರೂಪಿಸಿಕೊಳ್ಳಲು ಅಶಕ್ತನಾಗುತ್ತಾನೆ, ಜನರನ್ನು ಎದುರಿಸಲು, ಇತರರೊಂದಿಗೆ ಬೆರೆಯಲು ಹಿಂಜರಿಯುತ್ತಾನೆ. ಬದುಕಿನಲ್ಲಿ ಹಲವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಲು ಇದು ಕಾರಣವಾಗುತ್ತದೆ.

ಒಬ್ಬ ವ್ಯಕ್ತಿಯ ಮಾತಿನಶೈಲಿ ಅವನ ವ್ಯಕ್ತಿತ್ವವನ್ನು ಬಯಲು ಮಾಡುತ್ತದೆ. ‘ಮಾತು ಮನಸ್ಸಿನ ಕನ್ನಡಿ’. ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಮೋಸಗಾರನೋ ಆಶಾವಾದಿಯೋ ನಿರಾಶಾವಾದಿಯೋ ಉತ್ಸಾಹಿಯೋ ಆಲಸಿಯೋ – ಎಲ್ಲವೂ ಅವನ ಮಾತಿನಿಂದಲೇ ಬಯಲಾಗುತ್ತದೆ.

ಮಾತಲ್ಲಿ ಜಾಗರೂಕತೆಯಿರಲಿ: ನಾವು ತಮಾಷೆಗೆ ಆಡಿದ ಮಾತು ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನೇ ಮುದುಡಿಸುತ್ತದೆಂದಾದರೆ, ನಮ್ಮ ಮಾತುಗಳಲ್ಲಿ ನಾವೆಷ್ಟು ಜಾಗರೂಕರಾಗಿರಬೇಕು! ಉತ್ತಮ ಮಾತುಗಳನ್ನಾಡಿದರೆ ವ್ಯಕ್ತಿಗೆ ಎಷ್ಟೋ ಹೆಚ್ಚು ಪ್ರೋತ್ಸಾಹ ದೊರೆತಂತಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ, ಅವನು ಜೀವನದಲ್ಲಿ ಯಶಸ್ಸು ಪಡೆಯುತ್ತಾನೆ. ಕೆಲವರ ಮಾತುಗಳು ಯಾವತ್ತೂ ಮೊನಚಾಗಿರುತ್ತವೆ. ಆ ಚೂಪುತನ ಹೃದಯಕ್ಕೆ ನೇರವಾಗಿ ಚುಚ್ಚಿಬಿಡುತ್ತದೆ. ತೀವ್ರ ನೋವನ್ನು ಉಂಟುಮಾಡುತ್ತದೆ. ಕೆಲವರ ಮಾತುಗಳು ವ್ಯಂಗ್ಯವಾಗಿರುತ್ತವೆ. ಕೆಲವರ ಮಾತು ಜಗಳಕ್ಕೆ ಆಹ್ವಾನ ನೀಡುವಂತಿರುತ್ತದೆ. ನಮ್ಮ ಮಾತಿನ ಶೈಲಿಯನ್ನು ತಿಳಿದುಕೊಂಡು ಅಗತ್ಯವಿದ್ದರೆ ಮಾರ್ಪಾಡುಗಳನ್ನು ಮಾಡಿಕೊಳ್ಳೋಣ.

ಇತರರ ಮಾತಿಗೆ ನಮ್ಮ ಪ್ರತಿಕ್ರಿಯೆ ಹೀಗಿರಲಿ: ಬೇರೆಯವರ ಮಾತುಗಳನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಅವರ ಮಾತಿನ ಬಾಣಗಳನ್ನು ತಡೆಯಲು ನಮ್ಮಲ್ಲಿ ದೃಢತೆಯೆಂಬ ಗುರಾಣಿಯಿರಬೇಕು.

ನಮ್ಮ ಮಾತುಗಳು ಯಾವತ್ತೂ ನೇರವೂ ಸ್ಪಷ್ಟವೂ ಆಗಿರಬೇಕು. ಒಮ್ಮೆ ಆಡಿದ ಮಾತನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಯೋಚಿಸಿ ಮಾತನಾಡುವುದು ಒಳಿತು. ದ್ವಂದ್ವಾರ್ಥ ಪ್ರಯೋಗಗಳನ್ನು, ಅಶ್ಲೀಲದ ಮಾತುಗಳನ್ನು ದೂರವಿಡೋಣ. ಇತರರ ಧೈರ್ಯ ಕುಂದಿಸದೆಯೇ ಧೈರ್ಯ ತುಂಬಿಸುವ, ಭರವಸೆ, ಸಂತೋಷ ತುಂಬಿಸುವ ಮಾತುಗಳನ್ನಾಡೋಣ. ಕೇಳುವವರಿಗೆ ಹಿತಕರವಾಗುವ ಮಾತುಗಳು ನಮ್ಮದಾಗಿರಲು ಪ್ರಯತ್ನಿಸೋಣ. ಮಾತಿನ ಕಾರಣದಿಂದ ಗೋಡೆಗಳೇಳದಂತೆ, ಮಾತಿನಿಂದ ಪ್ರೀತಿಯ ಸೇತುವೆಯನ್ನು ಕಟ್ಟೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT