ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಲೋಕದ ಒಳ ಹೊರಗೆ' ನಾಟಕ: ವರ್ತಮಾನಕ್ಕೆ ಒಗ್ಗಿಸಿದ ಪ್ರಯೋಗ

Published 2 ಸೆಪ್ಟೆಂಬರ್ 2023, 23:30 IST
Last Updated 2 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಸರಿಯಾಗಿ ನೂರು ವರ್ಷಗಳ ಹಿಂದೆ ಪ್ರಕಟವಾಗಿದ್ದ ರವೀಂದ್ರನಾಥ ಟ್ಯಾಗೋರ್‌ ಅವರ ಕಾದಂಬರಿ ‘ಘರೆ ಬೈರೆ’ (1923) ಆಧರಿಸಿದ ನಾಟಕವನ್ನು 50ರ ಸಂಭ್ರಮದಲ್ಲಿರುವ ‘ರಂಗಸಂಪದ’ ರಂಗದ ಮೇಲೆ ತಂದಿದೆ. ‘ಬೀಸು’ ಎಂದೇ ಪರಿಚಿತರಿರುವ ಬಿ. ಸುರೇಶ್‌ ನಿರ್ದೇಶನದ ‘ಲೋಕದ ಒಳ ಹೊರಗೆ’ ಇತ್ತೀಚೆಗಷ್ಟೆ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿತು. ರಂಗಭೂಮಿಯ ಹಲವು ಸಾಧ್ಯತೆಗಳನ್ನು ಯಶಸ್ವಿಯಾಗಿ ದುಡಿಸಿಕೊಂಡಿರುವ ಈ ನಾಟಕವು ಸಮಕಾಲೀನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹುಡುಕಾಟ. 

ರಂಗಭೂಮಿಯಲ್ಲಿನ ಪ್ರದರ್ಶನವನ್ನು ಸಮಕಾಲೀನಗೊಳಿಸುವ ಪ್ರಯತ್ನ ನಡೆದಾಗಲೆಲ್ಲ ಢಾಳಾಗಿ ಎದ್ದುಕಾಣುವಂತೆ/ಘೋಷಣೆಗಳ ಮೂಲಕ ಅಥವಾ ತಮ್ಮ ಅಜೆಂಡಾಗಳನ್ನು ‘ಹಿಡನ್‌’ ಆಗಿರಿಸದೇ ವಾಚ್ಯಗೊಳಿಸಲಾಗುತ್ತದೆ. ಈ ನಾಟಕದ ನಿರ್ದೇಶಕರಿಗೆ ಒಂದು ರಾಜಕೀಯ ನಿಲುವು ಖಂಡಿತವಾಗಿಯೂ ಇದೆ. ಅದು ಒಟ್ಟಾರೆ ನಾಟಕವನ್ನು ಕಟ್ಟುವ ಕ್ರಿಯೆಯಲ್ಲಿ ಅಡ್ಡಿಯಾಗಿಲ್ಲ. ಅಂದರೆ ನಿರ್ದೇಶಕರು ತಮ್ಮ ಅಜೆಂಡಾವನ್ನು ಹೇರುವ ಪ್ರಯತ್ನ ನಡೆಸದೇ ಇರುವುದರಿಂದ ನಾಟಕ ‘ಕಲಾಕೃತಿ’ಯಾಗಿದೆ.

ಸುರೇಶ್‌ ಅವರ ನಾಟಕದ ಪಾತ್ರಗಳು ‘ಕಪ್ಪು-ಬಿಳುಪು’ ಶೇಡ್‌ನಲ್ಲಿ ದಾಖಲಾಗಿಲ್ಲ. ಹಲವು ಬಣ್ಣದ ಛಾಯೆಗಳನ್ನು ದಾಖಲಿಸಲು ಯತ್ನಿಸಿದ್ದಾರೆ. ನಾಯಕಿ ಶಾರದೆಯು ಉಟ್ಟ ಸೀರೆಯ ಬಣ್ಣಗಳು ಅವಳ ಒಳತೋಟಿ-ಹುಡುಕಾಟವನ್ನು ಹೇಳುತ್ತವೆ. ನೀಲಿ-ಹಳದಿಯಾಗುವ, ಹಳದಿ ಕೆಂಪಾಗುವ ಹಾಗೆಯೇ ಕೆಂಪು-ಬಿಳಿಯಾಗುವ ರೀತಿಯಲ್ಲಿ ಗೋಚರವಾಗುವ ಹೊರ ಜಗತ್ತು. ಮತ್ತೊಂದು ಅನುಭವಕ್ಕೆ ದಕ್ಕುವ ಆದರೆ ಆಡಲಾಗದ ಒಳಲೋಕ. ಎರಡನ್ನೂ ರಂಗದ ಮೇಲೆ ಮಾತ್ರವಲ್ಲ, ಯಾವುದೇ ಕಲಾಕೃತಿಯಲ್ಲಿ ತರುವುದು ಸವಾಲಿನ ಕಷ್ಟದ ಕೆಲಸವೇ. ಅದನ್ನು ಇಷ್ಟವಾಗುವ ಹಾಗೆ ಕಟ್ಟಿರುವುದು ವಿಶೇಷ.

ನಾಟಕದೊಳಗಿನ ಕತೆ 1905ರಲ್ಲಿ ಬ್ರಿಟಿಷ್‌ ಸರ್ಕಾರವು ಧರ್ಮದ ಆಧಾರದ ಮೇಲೆ ಬಂಗಾಳದ ವಿಭಜನೆ ಮಾಡಿದ ನಂತರದ ದಿನಗಳದ್ದು. ಸಹಜವಾಗಿಯೇ ‘ಧರ್ಮ’ ಮತ್ತು ಅದು ತರುವ ಸಂಕಟ ಕೂಡ ಇದೆ.

ವಿಲಾಯತಿಯಿಂದ ಮರಳಿದ ಸುಶಿಕ್ಷಿತ ಶ್ರೀಮಂತ ಪತಿ ಸಿದ್ಧಾರ್ಥನಿಗೆ ತನ್ನ ಪತ್ನಿ ಶಾರದೆ ಕೇವಲ ಮನೆಯೊಳಗೆ ಇದ್ದರೆ ಸಾಲದು, ಹೊರಗಿನ ಲೋಕವನ್ನೂ ಅರಿಯಬೇಕು ಎಂಬ ಆಸೆ-ಹಂಬಲ. ಅದಕ್ಕೆ ಪೂರಕವಾದ ಚಟುವಟಿಕೆಗಳಿಗೆ ಅನುವು ಮಾಡಿ ಕೊಡುತ್ತಾನೆ. ಉದಾಹರಣೆಗೆ ಇಂಗ್ಲಿಷ್‌ ಕಲಿಯುವುದು ಮತ್ತು ಪಾಶ್ಚಾತ್ಯ ಸಂಸ್ಕೃತಿ ಅರಿಯುವುದು ಇತ್ಯಾದಿ. ಎಲ್ಲ ಸರಿಯಾಗಿರುತ್ತದೆ. ಎಲ್ಲವೂ ಸರಿಯಿದ್ದರೆ ನಾಟಕ ಹೇಗಾಗುತ್ತದೆ? ಚದುರಂಗರ ‘ಉಯ್ಯಾಲೆ’ಯಲ್ಲಿ ಆದಹಾಗೆ ಗೆಳೆಯನ ಪ್ರವೇಶ. ತುಂಬಿದ ಮನೆಯೊಳಗೆ ನಾಗರ ಹೊಕ್ಕಂತೆ. ‘ಉಯ್ಯಾಲೆ’ಯಲ್ಲಿ ಒಳಗಿನ ಲೋಕದ ಹುಡುಕಾಟ ಮಾತ್ರ ಇದ್ದರೆ ‘ಲೋಕದ ಒಳಹೊರಗೆ’ಯಲ್ಲಿ ಶೀರ್ಷಿಕೆಯೇ ಸೂಚಿಸುವಂತೆ ಒಳ-ಹೊರಗಿನ ಲೋಕಗಳೆರಡೂ ಮುಖಾಮುಖಿ ಆಗುತ್ತವೆ. ಇಂದ್ರಜಿತ್‌  ಪ್ರೇಕ್ಷಕರತ್ತ ಬೆನ್ನು ಮಾಡಿ ನಿಂತು ಕೈಗಳನ್ನು ತನ್ನ ಬೆನ್ನಲ್ಲಿಯೇ ಆಡಿಸುವ ಮೈಮಾತು (ದೇಹಭಾಷೆ) ಸೂಚ್ಯವೂ ಸೂಕ್ತವೂ ಆಗಿದೆ. 

ಸದ್ಯದ ವರ್ತಮಾನ ಮತ್ತು ರಾಜಕಾರಣ-ಬದುಕುಗಳನ್ನು ‘ಕತೆ’ಯ ಮೂಲಕ ಕಟ್ಟುವ ಕ್ರಿಯೆ ಕಾಣಿಸುತ್ತದೆ. ಹಾಗಾಗಿಯೇ ಏಕಕಾಲಕ್ಕೆ ‘ಭೂತ’ದ ಕತೆಯೊಂದು ವರ್ತಮಾನಕ್ಕೆ ಮುಖಾಮುಖಿ ಆಗುತ್ತದೆ. ಸ್ವದೇಶಿ ಚಳವಳಿಯಲ್ಲಿ ಸಕ್ರಿಯವಾಗಿದ್ದ ಇಂದ್ರಜಿತ್‌ನ ಆಗಮನ ಮನೆಯನ್ನು ಮಾತ್ರವಲ್ಲ ನಗರ/ಪ್ರದೇಶವನ್ನೇ ಪ್ರಕ್ಷುಬ್ಧಗೊಳಿಸುತ್ತದೆ. ಕತೆಗೆ ಹಲವು ಆಯಾಮ ಮತ್ತು ಶೇಡ್‌ಗಳನ್ನು ಕೊಡಲು-ಕಲ್ಪಿಸಲು ಸಾಧ್ಯವಾಗಿರುವುದೇ ಈ ಪ್ರದರ್ಶನದ ವಿಶೇಷ.

ಉರಿಯುವ ಬೆಂಕಿಯ ರೂಪಕವನ್ನು ಸುರೇಶ್‌ ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಅದು ಹರಡುವ ಜ್ವಾಲೆಗಳು ಸುಡುವುದು ಕೂಡ ಮನೆಯ ಒಳ ಹಾಗೂ ಹೊರಗನ್ನು. ಮೂರು ಬಾರಿ ‘ಬೆಂಕಿ’ ಕಾಣಿಸಿಕೊಳ್ಳುತ್ತದೆ. ಆದರೆ, ಅದರ ಕಿಚ್ಚು ನಾಟಕದುದ್ದಕ್ಕೂ ಇದೆ. ರಂಗಕ್ರಿಯೆಯಾಗಿ ಕಾಣಿಸುವ ಪ್ರಕ್ರಿಯೆ ಪ್ರೇಕ್ಷಕ ಇದನ್ನೇ ಗಮನಿಸಬೇಕು ಎನ್ನುವ ರೀತಿಯಲ್ಲಿದೆ. ಈ ಹೇರಿಕೆಯ ವಾಚ್ಯ ಹೊರತುಪಡಿಸಿದರೆ ಇಡೀ ಪ್ರಯೋಗ ಯಶಸ್ವಿ. ವಾಚ್ಯ ಕೂಡ ಮಿತಿ ಮೀರಿಲ್ಲವಷ್ಟೆ.

ಇಂದ್ರಜಿತ್ ಮನೆಯೊಳಗೆ ಮಾತ್ರವಲ್ಲ ಶಾರದೆಯ ಮನದೊಳಗೂ ಇದ್ದಾನೆ. ಹೌದು, ಇಂದ್ರನು ಅಹಲ್ಯೆಯ ಬದುಕಿನಲ್ಲಿ ಪ್ರವೇಶಿಸಿದಂತೆ. ಹೀಗಾಗಿಯೇ ಈ ಹಂತದಲ್ಲಿ ‘ಇಂದ್ರ’ ಎಂಬ ಪದ ಬಳಸಲಾಗಿದೆ. ಅತಿಥಿಯನ್ನು ಹೊರಹಾಕಲಾಗದ ಪತಿ ಸಿದ್ಧ ಅರ್ಥಗಳ ಸಿದ್ಧಾರ್ಥ ‘ಬಿಡುಗಡೆ’ಯ ಮಾತನ್ನೂ ಆಡುತ್ತಾನೆ. ಸ್ಟೇಜ್‌ ಮೇಲೆ ನಾಟಕವನ್ನು ಕಟ್ಟಿದ-ತೋರಿಸಿದ ಕ್ರಮ ಚೆನ್ನಾಗಿದೆ. ಮನೆಯ ಮೂರು ಭಾಗಗಳು. ಬೆಡ್‌ರೂಮ್‌ ಎಂದು ಹೇಳಲಾಗುವ ಒಳಗಿನ ಕೋಣೆ, ಅತಿಥಿಗಳು ಕೂರುವ ಡ್ರಾಯಿಂಗ್‌ ರೂಮ್‌ ಮತ್ತು ಸಿದ್ಧಾರ್ಥನ ಹೊರ ಚಟುವಟಿಕೆಗಳ ಮತ್ತೊಂದು ಕೋಣೆ. ಇವು ಮೂರಲ್ಲದೆ ಪಾತ್ರಗಳು ತಮ್ಮ ಒಳತೋಟಿಯ ಸ್ವಗತಗಳನ್ನು ಹೇಳುವುದಕ್ಕೆ ಬಳಸಿರುವ ಮೂರು ಪುಟ್ಟ ಸ್ಟ್ಯಾಂಡ್‌ಗಳು. ರಂಗದ ವಿಭಜನೆ ಹಾಗೂ ಬೆಳಕಿನ ವಿನ್ಯಾಸ ಗಮನ ಸೆಳೆಯುತ್ತದೆ. ರಂಗಪರಿಕರ ಹಾಗೂ ವಸ್ತ್ರವಿನ್ಯಾಸಗಳು 20ನೇ ಶತಮಾನದ ಬಂಗಾಳಿ ಲೋಕವನ್ನು ಅನಾವರಣ ಮಾಡುತ್ತವೆ.

‘ಮಾತು’ ಕತೆಯಾಗಿಸುವ-ಕಾವ್ಯವಾಗಿಸುವ ಗುಣ ಟ್ಯಾಗೋರರಿಗೆ ಇದೆ ಎಂದು ಗೊತ್ತು. ಅದನ್ನು ಸುರೇಶ್‌ ಕನ್ನಡೀಕರಿಸಿದ್ದಾರೆ. ಸೃಜನಶೀಲ ಸ್ವಾತಂತ್ರ್ಯವನ್ನೂ ಸುರೇಶ್ ತೆಗೆದುಕೊಂಡಿದ್ದಾರೆ. ಅದು ಪಾತ್ರಗಳಿಗೆ ಇಟ್ಟಿರುವ ಹೆಸರು ಹಾಗೂ ‘ಗಾಂಧೀಜಿ’ಯ ಬಳಕೆ. ಅದು ಔಚಿತ್ಯಪೂರ್ಣವಾಗಿವೆ. ವರ್ತಮಾನವನ್ನು ವಾಚ್ಯಗೊಳಿಸದೇ ಕಟ್ಟಿದ ಕಾವ್ಯಾತ್ಮಕ ಪ್ರಯತ್ನ ‘ಜಗತ್ತಿನ ಒಳಹೊರಗೆ’.

‘ರಂಗಸಂಪದ’ಕ್ಕೆ 50

‘ರಂಗಸಂಪದ’ ತಂಡ 50 ವಸಂತಗಳನ್ನು ಕೂಡ ಪೂರೈಸಿದೆ. ಆ ಸಂದರ್ಭಕ್ಕೆ ಬಿ. ಸುರೇಶ್ ನಿರ್ದೇಶನದ ನಾಟಕ ಅರ್ಥ ದಕ್ಕಿಸಿಕೊಟ್ಟಿತು. ಆರ್. ನಾಗೇಶ್, ಜೆ. ಲೋಕೇಶ್, ಸುಬ್ರಹ್ಮಣ್ಯಂ, ಎಂ.ಸಿ. ಆನಂದ, ಹರಿಕೃಷ್ಣ ಮತ್ತು ಕೇಶವರಾವ್ ಮೊದಲು ಕಟ್ಟಿದ ತಂಡ ‘ರಂಗಸಂಪದ’. ಆಮೇಲೆ ಅದನ್ನು ಮುನ್ನಡೆಸಿದವರಲ್ಲಿ ಚಡ್ಡಿ ನಾಗೇಶ್, ಚಂದ್ರಕಾಂತ, ಶಿವಲಿಂಗ ಪ್ರಸಾದ್, ಚನ್ನಕೇಶವಮೂರ್ತಿ ಅವರೂ ಇದ್ದಾರೆ. ‘ಯಯಾತಿ’, ‘ಕದಡಿದ ನೀರು’, ‘ಏವಂ ಇಂದ್ರಜಿತ್’, ‘ಚೋಮ’, ‘ಸಂಗ್ಯಾ ಬಾಳ್ಯಾ’ ತಂಡವು ನಿರ್ಮಿಸಿದ ಪ್ರಮುಖ ನಾಟಕಗಳು. ಕಾರ್ಯಾಗಾರಗಳು, ನಾಟಕ ರಚನಾ ಸ್ಪರ್ಧೆಗಳನ್ನು ನಡೆಸುವ ಮೂಲಕವೂ ರಂಗಭೂಮಿಗೆ ಈ ತಂಡವು ಕಾಣ್ಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT