ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಳೆದ ವಾರ ಮುಕ್ತಾಯವಾಯಿತು. ಎಂಟು ದಿನಗಳ ಚಿತ್ರೋತ್ಸವದಲ್ಲಿ 81 ದೇಶಗಳ 240 ಸಿನಿಮಾಗಳು ಪ್ರದರ್ಶನವಾದವು. ದಿನಕ್ಕೆ ನಾಲ್ಕೈದು ಸಿನಿಮಾಗಳನ್ನು ನೋಡಿ ಚಿತ್ರೋತ್ಸವದ ಗುಣಮಟ್ಟದ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಸಿನಿಮಾಗಳಲ್ಲಿ ವೈವಿಧ್ಯತೆ ಇತ್ತು. ಆಯಾ ಕಾಲ, ದೇಶಗಳ ಜನ ಜೀವನದ ಸೂಕ್ಷ್ಮಗಳಿದ್ದವು ಎಂದಷ್ಟೇ ಹೇಳಲು ಸಾಧ್ಯ. ನಿಬ್ಬೆರಗಾಗಿಸುವ ಸಿನಿಮಾ ಒಂದೂ ಇರಲಿಲ್ಲ.

ಸಿನಿಮಾ ನಿರ್ಮಾಣದಲ್ಲಿ ಬಳಕೆಯಾಗುವ ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ಕೃತಕ ಬುದ್ಧಿಮತ್ತೆ ಇತ್ಯಾದಿಗಳನ್ನು ಬಳಸಿಕೊಂಡು ಏಳೆಂಟು ದಶಕಗಳ ಹಿಂದಿನ ಸಂದರ್ಭಗಳನ್ನು ಈ ಕಾಲದ್ದು ಎಂಬಂತೆ ಕಟ್ಟಿಕೊಡುವುದು ಈಗ ಸುಲಭವಾಗಿದೆ.

ಸಮಕಾಲೀನ ವಿದ್ಯಮಾನಗಳಿಗೆ 2025ರ ಸಿನಿಮಾಗಳು ಸ್ಪಂದಿಸಿದವೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಹಲವು ದೇಶಗಳಲ್ಲಿ ಪ್ರಾಕೃತಿಕ ವೈಪರೀತ್ಯಗಳು ಸಂಭವಿಸಿದವು. ವಿಕ್ಷಿಪ್ತ ಮನಸ್ಥಿತಿಯ ರಾಜಕೀಯ ನಾಯಕರ ತಿಕ್ಕಲುತನದ ನಿರ್ಧಾರಗಳಿಂದ ಯುದ್ಧ, ಆರ್ಥಿಕ ಪಲ್ಲಟಗಳ ಜತೆಗೆ ಕೋಮುವಾದ, ಜನಾಂಗೀಯ ದ್ವೇಷ ಹೆಚ್ಚಾದವು. ಜನಜೀವನ ದುರ್ಭರವಾಯಿತು. ಈ ಕಟು ವಾಸ್ತವಗಳಿಗೆ ಸಿನಿಮಾಗಳು ಸ್ಪಂದಿಸುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡವರಿಗೆ ನಿರಾಸೆಯಾಯಿತು.

ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ನಿರ್ದೇಶನದತ್ತ ಮಹಿಳೆಯರ ಒಲವು ಹೆಚ್ಚಾಗಿದೆ. ಈ ವರ್ಷ ಸ್ಪರ್ಧಾ ವಿಭಾಗದಲ್ಲಿ ಇದ್ದ ಹದಿನೈದು ಸಿನಿಮಾಗಳಲ್ಲಿ ಏಳನ್ನು ನಿರ್ದೇಶಿಸಿದವರು ಮಹಿಳೆಯರು. ಚಿತ್ರೋತ್ಸವದ 50 ಸಿನಿಮಾಗಳನ್ನು ನಿರ್ದೇಶಿಸಿದ್ದು ಮಹಿಳೆಯರೇ. ಕಾಲ, ದೇಶಗಳನ್ನು ಮೀರಿದ ಮಹಿಳೆಯರ ವೈಯಕ್ತಿಕ ಮತ್ತು ಸಮುದಾಯದ ತಲ್ಲಣಗಳನ್ನು ಸಿನಿಮಾ ಚೌಕಟ್ಟಿನಲ್ಲಿ ಹೇಳುವ ಅವರ ಬದ್ಧತೆ ಮೆಚ್ಚುವಂಥದ್ದು. ವಿಶ್ವದೆಲ್ಲಡೆ ನಿತ್ಯ ನಡೆಯುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು, ಲಿಂಗ ತಾರತಮ್ಯ ಇನ್ನಿತರ ಸಮಸ್ಯೆಗಳನ್ನು ಸಿನಿಮಾ ಚೌಕಟ್ಟಿಗೆ ಪಳಗಿಸಿ ಹೇಳುವ ಕಸುಬುದಾರಿಕೆ ಜತೆಗೆ ತಮ್ಮದೇ ಆದೇ ಅಭಿವ್ಯಕ್ತಿ ಕ್ರಮವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ನಿರ್ದೇಶಕಿಯರು ಹೆಚ್ಚೆಚ್ಚು ಯಶಸ್ವಿ ಆಗುತ್ತಿದ್ದಾರೆ.

‘ಸ್ಕಿನ್ ಆಫ್ ಯೂತ್’ಗೆ ಸ್ವರ್ಣ ಮಯೂರ ಫಲಕ

ಸ್ಪರ್ಧಾ ವಿಭಾಗದಲ್ಲಿ 15 ಸಿನಿಮಾಗಳಿದ್ದವು. ₹40 ಲಕ್ಷ ನಗದು ಪುರಸ್ಕಾರದ ಜತೆಗೆ ಸ್ವರ್ಣ ಮಯೂರ ಫಲಕವನ್ನು ಪಡೆದುಕೊಂಡಿದ್ದು ಜಪಾನ್ ದೇಶದ ‘ಸ್ಕಿನ್ ಆಫ್ ಯೂತ್’ ಸಿನಿಮಾ. ಆಶಿಯೇಗ್ ಮೇಫೇರ್ ಚಿತ್ರದ ನಿರ್ದೇಶಕಿ. 90ರ ಕಾಲಘಟ್ಟದ ಈ ಚಿತ್ರದ ನಾಯಕಿ ಸ್ಯಾನ್. ಅವಳು ಲಿಂಗತ್ವ ಅಲ್ಪಸಂಖ್ಯಾತೆ, ಲೈಂಗಿಕ ಕಾರ್ಯಕರ್ತೆ. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಹೆಣ್ಣಾಗುವ ಆಸೆ ಇಟ್ಟುಕೊಂಡವಳು. ಬಾಕ್ಸರ್ ಒಬ್ಬನಲ್ಲಿ ಅವಳು ಅನುರಕ್ತೆ. ಅವನು ಮತ್ತೊಬ್ಬಳಲ್ಲೂ ಆಸಕ್ತ. ಈ ಮೂವರ ನಡುವಣ ಬದುಕಿನ ಏರಿಳಿತಗಳನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಚಿತ್ರದಲ್ಲಿದೆ. ಈ ಸಿನಿಮಾಕ್ಕೆ ಮೊದಲ ಪುರಸ್ಕಾರ ಸಿಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಜಗತ್ತಿನ ಮಹಿಳೆಯರು ಎದುರಿಸುವ ಪ್ರಮುಖ ಸಮಸ್ಯೆ ಎಂದರೆ ಅವರ ಮೇಲೆ ನಿರಂತರವಾಗಿ ನಡೆಯುವ ಲೈಂಗಿಕ ಹಲ್ಲೆ. ಇದು ಎಲ್ಲ ದೇಶ, ಕಾಲಗಳಲ್ಲೂ ಸಂಭವಿಸುವಂಥದ್ದು.

ಅತ್ಯಾಚಾರಿ ಅಪ್ಪನ ವಿರುದ್ಧ ನ್ಯಾಯಾಧೀಶರಿಗೆ ದೂರು ಕೊಡುವ ಬಾಲಕಿಯ ಧೈರ್ಯ ಮತ್ತು ದಿಟ್ಟತನವನ್ನು ಕಟ್ಟಿಕೊಡುವ ಜರ್ಮನಿಯ ಸಿನಿಮಾ ‘ಕಾರ್ಲಾ’. 1962 ರಲ್ಲಿ ಮ್ಯೂನಿಕ್ ನಗರದಲ್ಲಿ ನಡೆದ ನೈಜ ಘಟನೆ ಆಧರಿಸಿದ್ದು. ಕ್ರಿಸ್ಟಿನಾ ಟೂರ್ನಾಟ್ಜ್ಸೆ ಇದರ ನಿರ್ದೇಶಕಿ. ಇದು ಅವರ ಚೊಚ್ಚಲ ಸಿನಿಮಾ.

12 ವರ್ಷದ ಕಾರ್ಲಾ, ಮಹಿಳೆಯರ ಸಾಂತ್ವನ ಕೇಂದ್ರದಲ್ಲಿ ಇದ್ದುಕೊಂಡೇ ತನಗಾದ ಅನ್ಯಾಯವನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡುವ ಪ್ರಯತ್ನದಲ್ಲಿ ಯಶಸ್ವಿಯಾಗುವುದು ಸಿನಿಮಾದ ಕಥೆ. ಸರಿಯಾದ ಸಾಕ್ಷಿಗಳಿಲ್ಲ ಎಂಬ ಕಾರಣಕ್ಕೆ ತಳ್ಳಿಹಾಕುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳಂತೆ ತನ್ನದೂ ಆಗಲು ಬಿಡದೆ ತಾರ್ಕಿಕ ಅಂತ್ಯಕ್ಕೆ ಒಯ್ಯುವ ಬಾಲಕಿಯ ದಿಟ್ಟತನ ಚಿತ್ರದ ಉದ್ದಕ್ಕೂ ಎದ್ದು ಕಾಣುತ್ತದೆ. 60 ವರ್ಷದ ಹಿಂದಿನ ಪ್ರಕರಣವನ್ನು ಈ ಕಾಲದ ಹೊಸ ಪ್ರಕರಣ ಎಂಬಂತೆ ನಿರ್ದೇಶಕಿ ಕಟ್ಟಿಕೊಟ್ಟಿದ್ದಾರೆ.

ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗುವ 15 ವರ್ಷದ ಎಮ್ಮಾಳ ಆತಂಕದ ಬದುಕು ಮತ್ತು ಸಮಾಜವನ್ನು ಎದುರಿಸುವ ಅವಳ ದಿಟ್ಟತನವನ್ನು ಕಟ್ಟಿಕೊಡುವ ಇನ್ನೊಂದು ಸಿನಿಮಾ ಬೆಲ್ಜಿಯಂ ದೇಶ ‘ಸೈಲೆಂಟ್ ರೆಬೆಲಿಯನ್’. 2ನೇ ಮಹಾಯುದ್ಧ ಕಾಲದ ಘಟನೆ ಆಧರಿಸಿದ್ದು. ಮಾರಿಯಾ ಎಲ್ಸಾ ಗುಲಾಡೊ ಇದರ ನಿರ್ದೇಶಕಿ. ಗರ್ಭಿಣಿ ಎಮ್ಮಾ ಮತ್ತೊಬ್ಬನನ್ನು ಮದುವೆಯಾಗುತ್ತಾಳೆ. ಸಮಾಜದ ಉಪೇಕ್ಷೆ ಮತ್ತು ಗಂಡನ ಅತಿಯಾದ ಕಾಮಾಸಕ್ತಿ ಮತ್ತು ಕಿರುಕುಳಗಳಿಂದ ಬೇಸತ್ತ ಅವಳು ವಿಚ್ಛೇದನ ಪಡೆದು ಆರ್ಥಿಕ ಸ್ವಾವಲಂಬಿಯಾಗುವುದನ್ನು ಹೇಳುತ್ತದೆ. ಸಿನಿಮಾದ ನಾಯಕಿ ಈ ಕಾಲದ ಸಂತ್ರಸ್ತೆಯರಿಗೆ ಮಾದರಿ.

ಈಜಿಪ್ಟ್ನ ‘ಹ್ಯಾಪಿ ಬರ್ತ್ ಡೇ’ ಮನೆಗೆಲಸದ ತೋಹಾ ಎಂಬ ಎಂಟು ವರ್ಷದ ಬಾಲಕಿಯ ಸೂಕ್ಷ್ಮ ಮನಸ್ಥಿತಿಯನ್ನು ಕಟ್ಟಿಕೊಡುವ ಸಿನಿಮಾ. ತೋಹಾ ತಾನು ಕೆಲಸ ಮಾಡುತ್ತಿದ್ದ ಮನೆಯ ಸದಸ್ಯೆ ಎಂಬಂತೆ ಸಹಜವಾಗಿ ಒಡನಾಡುವ ಚುರುಕು ಹುಡುಗಿ. ತನ್ನದೇ ವಯಸ್ಸಿನ ಮನೆಯ ಯಜಮಾನಿಯ ಮಗಳ ಹುಟ್ಟುಹಬ್ಬದ ಸಿದ್ಧತೆಯಲ್ಲಿ ತೊಡಗುತ್ತಾಳೆ. ಸಂಜೆ ಪಾರ್ಟಿ ಆರಂಭವಾಗುವ ಹೊತ್ತಿಗೆ ಯಜಮಾನಿ, ತೋಹಾಳನ್ನು ಅವಳ ತಾಯಿಯ ಅನಾರೋಗ್ಯದ ಬಗ್ಗೆ ಸುಳ್ಳು ಹೇಳಿ ಮನೆಯಿಂದ ಹೊರಕ್ಕೆ ಕಳಿಸುತ್ತಾಳೆ. ಆದರೂ ಪಾರ್ಟಿ ನಡೆಯುತ್ತಿರುವಾಗ ತೋಹಾ ಮನೆಗೆ ಬರುತ್ತಾಳೆ. ಶ್ರೀಮಂತ ಅತಿಥಿಗಳ ನಡುವೆ ಬಡ ಹುಡುಗಿ ತೋಹಾ ಕಾಣಿಸಿಕೊಳ್ಳಬಾರದೆಂದು ಯಜಮಾನಿ ಅವಳನ್ನು ಮತ್ತೆ ಮನೆಯಿಂದ ಹೊರ ಹಾಕುತ್ತಾಳೆ. ಬಡತನದ ಕಾರಣಕ್ಕೆ ಉಪೇಕ್ಷೆಗೆ ಒಳಗಾದೆ ಎಂಬ ವಾಸ್ತವ ತೋಹಾಳಿಗೆ ಅರ್ಥವಾಗುತ್ತದೆ. ಬಡವರ ಮಕ್ಕಳ ಅಸಹಾಯಕತೆಯನ್ನು ಸೂಕ್ಷ್ಮವಾಗಿ ಹೇಳುವ ಈ ಸಿನಿಮಾ ಹಲವು ಭಾವನಾತ್ಮಕ ಸನ್ನಿವೇಶಗಳಿಂದ ಗಮನ ಸೆಳೆಯುತ್ತದೆ.

ಅಪ್ಪ ಮತ್ತು ಇಬ್ಬರು ವಯಸ್ಕ ಹೆಣ್ಣು ಮಕ್ಕಳ ನಡುವಿನ ಭಾವನಾತ್ಮಕ ಸಂಬಂಧಗಳನ್ನು ನವಿರಾಗಿ ನಿರೂಪಿಸುವ ‘ಸೆಂಟಿಮೆಂಟಲ್ ವ್ಯಾಲ್ಯು’, 2018ರಲ್ಲಿ ಚಿಲಿ ದೇಶದಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯರ ಫೆಮಿನಿಸ್ಟ್ ಚಳವಳಿಯನ್ನು ನಾಟಕೀಯವಾಗಿ ಕಟ್ಟಿಕೊಡುವ ‘ವೇವ್’, ಮಧ್ಯವಯಸ್ಸಿನ ಹೆಣ್ಣಿನ ತಾಯ್ತನದ ನಿರೀಕ್ಷೆ, ಹಂಬಲಗಳನ್ನು ಕಟ್ಟಿಕೊಡುವ ಆಸ್ಟ್ರೇಲಿಯಾದ ‘ಮದರ್ಸ್ ಬೇಬಿ’, ಸ್ಥಿರಚಿತ್ರಗಳ ಮೂಲಕವೇ ಅರಬ್ ದೇಶಗಳ ಮಹಿಳೆಯರ ಕಟ್ಟುಪಾಡಿನ ಹಲವು ಆಯಾಮಗಳನ್ನು ಹೇಳುವ ‘ದಿ ವಿಷುಯಲ್ ಫೆಮಿನಿಸ್ಟ್ ಮ್ಯಾನಿಫೆಸ್ಟೊ’ ಗಮನ ಸೆಳೆದ ನಿರ್ದೇಶಕಿಯರ ಸಿನಿಮಾಗಳು.

ಮುಂಬರುವ ವರ್ಷಗಳಲ್ಲಿ ನಿರ್ದೇಶಕಿಯರ ಸಿನಿಮಾಗಳ ಸಂಖ್ಯೆ ಹೆಚ್ಚಾಗುವ ಮತ್ತು ಮಹಿಳೆಯರ ಸಮಸ್ಯೆಗಳನ್ನು ಇನ್ನಷ್ಟು ಪರಿಣಾಮಕಾರಿ ನಿರೂಪಿಸುವ ಸಿನಿಮಾಗಳು ನಿರ್ಮಾಣವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಎನ್ಎಫ್ಡಿಸಿ ಹಿಂದಿನ ವರ್ಷಗಳ ಲೋಪಗಳನ್ನು ಸರಿಪಡಿಸಿಕೊಂಡು ಚಿತ್ರೋತ್ಸವವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದು ಈ ವರ್ಷದ ವಿಶೇಷ.

ಆಪ್ತವಾದ ಎರಡು ಸಿನಿಮಾಗಳು

ಸ್ಪರ್ಧಾ ವಿಭಾಗದ ಸಿನಿಮಾಗಳ ಪೈಕಿ ಹೆಚ್ಚು ಆಪ್ತವಾದವು ನೈಜೀರಿಯಾ ದೇಶದ ‘ಮೈ ಫಾದರ್ ಶಾಡೊ’ ಮತ್ತು ಇರಾಕ್ನ ‘ಸಾಂಗ್ಸ್ ಆಫ್ ಅದಾಮ್’.

ಅಕಿನೋಲ ಡೇವಿಯೆಸ್ ಜೂನಿಯರ್, ಮೈ ಫಾದರ್ ಶಾಡೊದ ನಿರ್ದೇಶಕರು. ಇದು ಕಾನ್ ಚಿತ್ರೋತ್ಸವಕ್ಕೆ ಪ್ರವೇಶ ಪಡೆದ ಮೊದಲ ನೈಜೀರಿಯಾ ಸಿನಿಮಾ. ಅಕಿನೋಲ ಡೇವಿಯೆಸ್ ನೈಜೀರಿಯಾದ ಬಡತನ, ದೇಶದ ಸಾಂಸ್ಕೃತಿಕ ಪರಂಪರೆಗಳನ್ನು ಸಿನಿಮಾಗಳ ಮೂಲಕ ಹೇಳುವುದರಲ್ಲಿ ಆಸಕ್ತರು.

1993ರ ನೈಜೀರಿಯಾ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ನಿರೀಕ್ಷೆ ಇಟ್ಟುಕೊಂಡ ಫೊಲಾರಿಯನ್ ಎಂಬ ನಡುವಯಸ್ಸಿನ ಆ್ಯಕ್ಟಿವಿಸ್ಟ್, ಹೆಂಡತಿ, ಮಕ್ಕಳಿಂದ ದೂರ ಇದ್ದವನು. ಚುನಾವಣೆಯ ಫಲಿತಾಂಶದ ದಿನ ತನ್ನ ಇಬ್ಬರು ಮಕ್ಕಳೊಂದಿಗೆ ರಾಜಧಾನಿ ಲೊಗೊಸ್ನಲ್ಲಿ ಒಂದು ದಿನವಿಡೀ ಕಳೆಯುವ ಹಿನ್ನೆಲೆಯಲ್ಲಿ ದೇಶದ ರಾಜಕಾರಣ, ನಿರುದ್ಯೋಗ, ಮಿಲಿಟರಿ ಆಡಳಿತ ದಬ್ಬಾಳಿಕೆಗಳನ್ನು ಅನಾವರಣಗೊಳಿಸುತ್ತದೆ.

ಇರಾಕ್ನ ಸಾಂಗ್ ಆಫ್ ಅದಾಮ್ 1943ರ ಕಾಲಘಟ್ಟದ ಕಥೆ. ಕಥೆಯ ಆಶಯ ಅಸಹಜ ಅನ್ನಿಸಿದರೂ, ನಿರ್ದೇಶಕ ಒದಯ್ ರಶೀದ್ ಬದಲಾಗುತ್ತಲೇ ಇರುವ ಜನ ಜೀವನ ಮತ್ತು ಸಾಮಾಜಿಕ, ರಾಜಕೀಯ ಸಂದರ್ಭಗಳನ್ನು ಹೇಳಲು ಬಳಸಿಕೊಂಡಿದ್ದಾರೆ.

ತನ್ನ ಅಜ್ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಹನ್ನೆರಡು ವರ್ಷದ ಬಾಲಕ ಅದಾಮ್ ಹೆಣಕ್ಕೆ ಸ್ನಾನ ಮಾಡಿಸುವುದನ್ನು ನೋಡುತ್ತಾನೆ. ದೊಡ್ಡವನಾಗದೆ ಉಳಿದು ಬಿಡಲು ನಿರ್ಧರಿಸುತ್ತಾನೆ. ಅದಾಮ್ನ ಅಪ್ಪ ಅವನನ್ನು ಮನೆಯೊಂದರಲ್ಲಿ ಪ್ರತ್ಯೇಕವಾಗಿ ಇರಿಸುತ್ತಾನೆ. ಬೆಳವಣಿಗೆ ಕಾಣದ ಅದಾಮ್ನನ್ನು ಊರ ಜನ ಶಾಪಗ್ರಸ್ಥ ಎಂದು ಭಾವಿಸುತ್ತಾರೆ. ಕೆಲವು ವರ್ಷಗಳ ನಂತರ ಅದಾಮ್ ಮನೆಯಿಂದ ಹೊರ ಬಂದಾಗ ಅವನ ಗೆಳೆಯರು, ಕುಟುಂಬ ಸದಸ್ಯರು ಬೆಳೆದು ದೊಡ್ಡವರಾಗಿರುತ್ತಾರೆ. ಊರು ಬದಲಾಗಿರುತ್ತದೆ. ಸುತ್ತಲಿನ ಪರಿಸರ ಮತ್ತು ದೇಶದಲ್ಲಿ ಅನೇಕ ಬೆಳವಣಿಗೆಗಳಾಗಿರುತ್ತವೆ. ಅದಾಮ್ನ ಗೆಳೆಯ, ತಮ್ಮ ಕ್ರಮೇಣ ಮುದುಕರೂ ಆಗುತ್ತಾರೆ. ದೇಶದಲ್ಲಿ ಐಸಿಸ್ ಉಗ್ರರ ಚಟುವಟಿಕೆಗಳು ಆರಂಭವಾಗಿರುವುದನ್ನು ಅದಾಮ್ ಗಮನಿಸುತ್ತಾನೆ. ಎಲ್ಲವೂ ಬದಲಾದರೂ ಸಂಪ್ರದಾಯ, ಆಚರಣೆಗಳು ಹಾಗೇ ಇರುತ್ತವೆ ಎಂಬುದನ್ನು ಈ ಸಿನಿಮಾ ನಾಟಕೀಯವಾಗಿ ಹೇಳುತ್ತದೆ.

ಸ್ಪರ್ಧೆಯಲ್ಲಿದ್ದ ತಮಿಳಿನ ‘ಅಮರನ್’, ಮರಾಠಿಯ ‘ಗೊಂಢಾಲ್’ ಹಾಗೂ ಪನೋರಮಾ ವಿಭಾಗದ ಭಾರತೀಯ ಸಿನಿಮಾಗಳಲ್ಲಿ ವೈವಿಧ್ಯತೆ ಇತ್ತು. ಕನ್ನಡದ ‘ಸು ಫ್ರಮ್ ಸೋ’, ‘ವನ್ಯ’, ತುಳು ಭಾಷೆಯ ‘ಇಂಬು’ ಮತ್ತು ಮಧ್ಯ ಭಾರತದ ಸಾಂಪ್ರದಾಯಿಕ ಬ್ರಾಜ್ ಭಾಷೆಯ ‘ವಿಮುಕ್ತ್’ ಸಿನಿಮಾಗಳೂ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.