ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜರತ್‌ ಹಾಜಿಪೀರ್ ಮಹಾತ್ಮರ ಉರುಸ್‌

Last Updated 9 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ಪುರಾತನವಾದ ದರ್ಗಾ ಎಂದರೆ ಅದು ಹಜರತ್‌ ಹಾಜಿಪೀರ್ ದರ್ಗಾ. ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ಈ ದರ್ಗಾ ಕಲಘಟಗಿಯ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಸಿದ್ಧಿ ಪಡೆದಿದೆ. ಜಾತಿ ಧರ್ಮಗಳ ಭೇದ-ಭಾವವಿಲ್ಲದೇ ಸರ್ವಧರ್ಮೀಯರು ಈ ಉರುಸ್‌ನಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ಪ್ರತಿ ವರ್ಷ ಯುಗಾದಿಯ 10 ದಿನಗಳ ನಂತರ ಇಲ್ಲಿನ ಉರುಸ್‌ ನಡೆಯುತ್ತದೆ. ಈ ಬಾರಿ ಏಪ್ರಿಲ್‌ 11ರಿಂದ ಆರಂಭಗೊಂಡು 18ರವರೆಗೆ ನಡೆಯಲಿದೆ.

ಮಿಶ್ರಿಕೋಟಿ ಗ್ರಾಮದ ಹೊರವಲಯದಲ್ಲಿರುವ ಹಜರತ್‌ ಹಾಜಿಪೀರ್ ದರ್ಗಾ ಮುಂಚೆ ಯಾವುದೇ ರೀತಿಯ ಕಟ್ಟಡದ ವ್ಯವಸ್ಥೆ ಇಲ್ಲದೆ, ಅರಳಿ ಮರದ ಕೆಳಗೆ ಎರಡು ಮುಖ್ಯ ಸಮಾಧಿಗಳು (ಮಜ್ಜರ್) ಅಕ್ಕಪಕ್ಕದಲ್ಲಿವೆ. ಈ ಸಮಾಧಿಗಳ ಹೆಸರು ಹಾಜಿ ಮತ್ತು ಮಲಂಗ್. ಮತ್ತೊಂದು ಸಮಾಧಿ ಇವುಗಳಿಂದ ಕೊಂಚ ದೂರದಲ್ಲಿದೆ. ಇವರಲ್ಲಿ ಸೇವೆ ಸಲ್ಲಿಸಿದ ಮಿಶ್ರಿಕೋಟಿಯ ಪೂರ್ವಜರ ಸಮಾಧಿಯಾಗಿದೆ ಎನ್ನುತ್ತಾರೆ ಮುಜಾವರ ಹುಸೇನ್‌ಸಾಬ್‌ ಬಾನಿ.

ಅದೇ ರೀತಿ ದರ್ಗಾದ ಎದುರಿನಲ್ಲಿ ಇನ್ನೂ ಎರಡು ಸಮಾಧಿಗಳು ಇವೆ. ಮೊದಲ ಇರುವ ಸಮಾಧಿಯಲ್ಲಿ ಜಿಂದೇ–ಶಾ–ವಲಿ ಮತ್ತೊಂದು ಮದರ್–ಶಾ–ವಲಿ ಇವುಗಳು ಸಹ ಬೇವಿನ ಮರದ ನೆರಳಿನಲ್ಲಿ ಇವೆ. ಇವುಗಳಿಗೆ ಕಟ್ಟಡ ವ್ಯವಸ್ಥೆ ಇಲ್ಲ. ಸದಾ ಹಸಿರಾಗಿರುವ ಅರಳಿ ಮರದ ಕೆಳಗೆ ಇರುವ ಪವಾಡ ಪುರುಷರ ದರ್ಗಾದ ಸುತ್ತಲೂ ಕಾಂಪೌಂಡ್‌ ಮೇಲೆ ಕಬ್ಬಿಣದ ಜಾಲರಿಗಳನ್ನು ಅಳವಡಿಸಲಾಗಿದೆ. ಒಳಾಂಗಣದಲ್ಲಿ ನೆಲಕ್ಕೆ ಕಲ್ಲುಗಳನ್ನು ಹಾಕಲಾಗಿದೆ.

ಬಯಲಿನಲ್ಲಿರುವ ದರ್ಗಾಕ್ಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರು ಪ್ರತಿ ಗುರುವಾರ ಬಂದು ಮಕ್ತುಂಸಕ್ಕರೆ, ಪುಟಾಣಿ ಸಕ್ಕರೆ ಅರ್ಪಿಸುತ್ತಾರೆ. ಇನ್ನೊಂದು ವಿಶೇಷ ಅಂದರೆ ಈ ದರ್ಗಾದಲ್ಲಿ ತೆಂಗಿನಕಾಯಿ ಒಡೆದು ನೈವೇದ್ಯ ಮಾಡಿಕೊಂಡು ಹೋಗುತ್ತಾರೆ. ಇಲ್ಲಿಗೆ ಬರುವ ಜನ ಇಲ್ಲಿಯೇ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಬಂದು ಅಡುಗೆ ತಯಾರಿಸಿ ಬಂಧು ಮಿತ್ರರೊಡನೆ ಸೇವಿಸುತ್ತಾರೆ.

ಊರಿನ ಸಮಸ್ತ ಬಂದು ಬಾಂಧವರು ಸೇರಿ ಈ ಉರುಸಿನ ಉಸ್ತುವಾರಿ ನಡೆಸುವುದರಿಂದ ಅವರಿಗೆ ಅನುಕೂಲವಾದಷ್ಟು ಸಹಾಯವನ್ನು ಮಾಡುತ್ತಾರೆ. ಅಕ್ಕಿ, ಬೇಳೆಕಾಳುಗಳು, ತರಕಾರಿಗಳನ್ನು ಬೆಳೆದ ರೈತರು, ವ್ಯಾಪಾರಸ್ಥರು ಹಾಗೂ ಜನರು ನೀಡುತ್ತಾರೆ. ಅದರಿಂದ ಆಹಾರ ಪದಾರ್ಥ ತಯಾರಿಸಿ ಬಂದ ಜನರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. ಕಳೆದ ವರ್ಷ ಜನರು ನೀಡಿದ 770 ಕ್ವಿಂಟಲ್‌ ಅಕ್ಕಿಯಿಂದ ಅನ್ನಸಂತರ್ಪಣೆ ಮಾಡಲಾಗಿತ್ತು ಎಂದು ಅಬ್ದುಲ್‌ಸಾಬ್‌ ತಿಳಿಸಿದರು.

ಏಪ್ರಿಲ್‌ 11ರಂದು ಸಂಜೆ 5 ಗಂಟೆಗೆ ಝೇಂಡಾ ಏರಿಸುವ ಕಾರ್ಯಕ್ರಮ ನಡೆಯುವುದು. 15ರಂದು ರಾತ್ರಿ 11.45ಕ್ಕೆ ಊರಿನ ಪ್ರಮುಖ ಬೀದಿಗಳಲ್ಲಿ ಗಂಧ ಮತ್ತು ಗಲೀಫ್ ಮೆರವಣಿಗೆ ಸಂಚರಿಸುವುದು. 16ರಂದು ಬೆಳಿಗ್ಗೆ 6 ಗಂಟೆಗೆ ಗಲೀಫ್ ಹಾಕುವುದು, ಮುಗಿದ ನಂತರ ಉರುಸ್‌ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ 5ಗಂಟೆಗೆ ಕುಸ್ತಿ ಪಂದ್ಯಗಳು ಆರಂಭಗೊಂಡು ಮೂರು ದಿನಗಳವರೆಗೆ ನಡೆಯುತ್ತವೆ.

ದರ್ಗಾ ಇತಿಹಾಸ
ಹಾಜಿಪೀರ್‌ ಬಾಬಾರಿಗೆ ಹಾಜಿಅಲಿ ಮತ್ತು ಹಾಜಿಮಲಂಗ್ ಎಂಬ ಇಬ್ಬರು ತಮ್ಮಂದಿರು ಮತ್ತು ಒಬ್ಬಳು ಸಹೋದರಿ ಫಾತೀಮಾ. ಹಾಜಿಪೀರ್ ನೆಲೆಸಿರುವ ಮೂಲ ಸ್ಥಳ ಗುಜರಾತ್ ರಾಜ್ಯದ ಕಛ್‌. ಅಲ್ಲಿಂದ ಸಂಚಾರಕ್ಕೆ ಬಂದ ಹಾಜಿಪೀರ್ ದೇವಮಾನವರು ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮಕ್ಕೆ ಬಂದು ಕೆಲದಿನಗಳವರೆಗೆ ಇಲ್ಲಿ ನೆಲೆಸಿ ಹಲವಾರು ಪವಾಡಗಳನ್ನು ಮಾಡಿ, ನಂತರ ಇಲ್ಲಿ ಅರಳಿ ಮರವನ್ನು ನೆಟ್ಟು ಮರಳಿ ಕಛ್‌ ಪ್ರದೇಶಕ್ಕೆ ಹೋಗಿ ಅಲ್ಲಿಯೇ ನೆಲ್ಲೆ ನಿಂತರು ಎಂಬ ಪ್ರತೀತಿ ಇದೆ ಎಂದು ಮುಜಾವರ ಅಬ್ದುಲ್‌ಸಾಬ್‌ ಬಾನಿ ‘ಪ್ರಜಾವಾಣಿ ಮೆಟ್ರೊ’ಗೆ ತಿಳಿಸಿದರು.

ಬಾಬಾ ನೆಟ್ಟ ಅರಳಿ ಮರ
ಹಾಜಿಪೀರ್‌ ಬಾಬಾ ನೆಟ್ಟ ಅರಳಿ ಮರ ಇದ್ದು, ಆ ಅರಳಿ ಮರದ ಎಲೆಗಳಲ್ಲಿ ಪ್ರಸಾದವನ್ನು ಸ್ವೀಕರಿಸಿದರೆ ಕಷ್ಟಗಳು ದೂರ ಆಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆ. ಹಿಂದೂಗಳು ಹಾಜಿಪೀರ್ ಅಜ್ಜ ಎಂದು ಪೂಜಿಸಿದರೆ, ಇಸ್ಲಾಂ ಧರ್ಮದ ಜನರು ಹಾಜಿಪೀರ್ ಬಾಬಾ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ.

ಹಿಂದೂ ಮುಸ್ಲಿಂ ಕೂಡಿ ಪ್ರತಿವರ್ಷ ಉರುಸ್‌ ಆಚರಣೆ ಮಾಡುತ್ತೇವೆ. ಹರಕೆಯನ್ನು ತೀರಿಸಲು ನಾನಾ ಪ್ರದೇಶದಿಂದ ಆಗಮಿಸಿದ ಜನರು ಉರುಸ್‌ನಲ್ಲಿ ಪಾಲ್ಗೊಳ್ಳುತ್ತಾರೆ.
-ಹುಸೇನ್‌ಸಾಬ ಬಾನಿ, ಮುಜಾವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT